ಟೀವಿ ಕೇವಲ ಮನರಂಜನೆಗೆ ಮಾತ್ರ ಅನ್ನುವ ಜಾಯಮಾನ ಹೋಗಿಬಿಟ್ಟಿದೆ. ಮನೆಯಲ್ಲೇ ಕೂತು ಟೀವಿ ನೋಡುತ್ತಾ ಶೇರು ವಹಿವಾಟು ನಡೆಸಿ ತಿಂಗಳಿಗೆ ಲಕ್ಷಾಂತರ ದುಡಿಯುವ ಕೈಗಳು ನಮಗೆ ಸಿಗುತ್ತವೆ. ಟೀವಿಯನ್ನು ನೋಡುತ್ತಾ ದುಡಿಯಬಹುದು, ಕೆಲಸ ಹುಡುಕಬಹುದು, ಹಣ ಮಾಡಬಹುದು, ಕಾಲೇಜ್ಗೆ ಹೋಗದೆ ಡಿಗ್ರಿ ಪಡೆಯಬಹುದು, ಅನ್ಯ ಭಾಷೆಗಳನ್ನು ಕಲಿಯಬಹುದು, ಹೊಸ ಹೊಸ ಊರು, ದೇಶ, ಪ್ರಾಣಿಪಕ್ಷಿ, ಊಟತಿಂಡಿ ಎಲ್ಲದರ ಬಗ್ಗೆಯೂ ಮಾಹಿತಿಯನ್ನು ತಿಳಿಯಬಹುದು, ಎಲ್ಲವೂ ನಾವು ಅಂದುಕೊಂಡಂತೆ ಟೀವಿಯನ್ನು ಚೆನ್ನಾಗಿ ಆರೋಗ್ಯಪೂರ್ಣವಾಗಿ ಬಳಸಿಕೊಂಡಾಗ ಮಾತ್ರ ಇವೆಲ್ಲಾ ಸಾಧ್ಯವಾಗುತ್ತೆ. ಇಲ್ಲವಾದರೆ ಟೀವಿ ಅನ್ನುವುದು ಮೂರ್ಖರ ಪೆಟ್ಟಿಗೆಯಂತೆ ಕಾಣುತ್ತದೆ. ಟೈಂಪಾಸ್ ಫ್ರೆಂಡ್ ಆಗುವುದರ ಜೊತೆಗೆ ನಿಮ್ಮನ್ನು ದೊಡ್ಡ ಸೋಮಾರಿಗಳನ್ನಾಗಿ ಮಾಡಿಬಿಡುತ್ತದೆ. ಮುಖ್ಯವಾಗಿ ವೀಕ್ಷಕರ ಅಭಿರುಚಿ ಇಲ್ಲಿ ಮುಖ್ಯವಾಗಿರುತ್ತದೆ. ಟೀವಿ ಇತಿಹಾಸವನ್ನು ಒಮ್ಮೆ ಕೆದಕಿದಾಗ ನಮಗೆ ಸಿಗುವುದು ಕೇವಲ ಮನರಂಜನೆ ಜೊತೆಗೆ ಸ್ವಲ್ಪ ಶಿಕ್ಷಣವನ್ನು ನೀಡುವ ಪದ್ಧತಿ. ಇದೇ ಟೀವಿ ಬೆಳೆಯಲಿಕ್ಕೆ ಮುಖ್ಯ ಬುನಾದಿಯನ್ನು ಹಾಕಿಕೊಟ್ಟಿದ್ದು. ಹೀಗೆ ಟೀವಿಯಲ್ಲಿ ಮನರಂಜನೆ ಜೊತೆಗೆ ಶಿಕ್ಷಣವನ್ನು ಕಾರ್ಯಕ್ರಮಗಳ ರೂಪದಲ್ಲಿ ನೀಡುವ ಮಾದರಿ ಪ್ರಾರಂಭವಾಗಿ ಸುಮಾರು 70 ವರ್ಷಗಳೇ ಕಳೆದಿವೆ. ಆರಂಭದಲ್ಲಿ ಜನರ ಮನರಂಜನೆಗೆ ಕೆಲವು ನೃತ್ಯ, ನಾಟಕ, ಸಂಗೀತ ಕಾರ್ಯಕ್ರಮಗಳ ಹೊರತಾಗಿ ಜನರನ್ನು ಮುಖ್ಯವಾಗಿ ಆಕರ್ಷಿಸಿದ್ದು ಕುಕರಿ ಶೋಗಳು. ಟೆಲಿವಿಷನ್ ಮಾಧ್ಯಮದಲ್ಲಿ 1940 ರಿಂದ 2012 ರವರೆಗೆ ಜನರ ಮನರಂಜನೆಗೆ ಏನೆಲ್ಲಾ ಮಾಡಲಿಕ್ಕೆ ಸಾಧ್ಯವಾಯಿತೋ ಅವೆಲ್ಲವನ್ನು ಸಾಧಿಸುತ್ತಾ ಬಂದಿದ್ದಾರೆ. ಕೆಲವುಗಳಲ್ಲಿ ಗೆದ್ದಿದ್ದಾರೆ, ಇನ್ನೂ ಅನೇಕವುಗಳಲ್ಲಿ ಸೋತಿದ್ದಾರೆ. ಜನರನ್ನು ಒಂದೆಡೆ ಹಿಡಿದು ಟೀವಿಯನ್ನು ನೋಡುವಂತೆ ಮಾಡಲು ಅನೇಕಾನೇಕ ಸಾಹಸಗಳು ನಡೆಯುತ್ತಲೇ ಬಂದಿವೆ. ಇಂದಿಗೂ ಇದರ ಪ್ರಯತ್ನವನ್ನು ವಾಹಿನಿಗಳು ಬಿಟ್ಟಿಲ್ಲ. ಜನರಿಗೆ ಇಷ್ಟವಾಗಿ ಗೆದ್ದವುಗಳಲ್ಲಿ ಪ್ರಮುಖವಾಗಿ ಮ್ಯೂಸಿಕ್ ರಿಯಾಲಿಟಿ ಶೋಸ್, ಗೇಮ್ ಶೋ, ಕ್ವಿಝ್ ಪ್ರೋಗ್ರಾಂಸ್, ಟಾಕ್ ಶೋಸ್, ಐಪಿಎಲ್, ಟ್ರಾವೆಲಿಂಗ್, ಕಾಟರ್ೂನ್ ನೆಟ್ವಕ್, ಮ್ಯೂಸಿಕ್ ಇವೆಂಟ್ಸ್, ಸೀರಿಯಲ್ಸ್ ಇನ್ನು ಹಲವಾರು ಕಾರ್ಯಕ್ರಮಗಳ ಮಾದರಿಗಳನ್ನು ಇಲ್ಲಿ ಹೆಸರಿಸಬಹುದು. ಹೀಗೆ ಗೆದ್ದವುಗಳಲ್ಲಿಯೂ ಕೂಡ ಜನರಿಗೆ ಆಸಕ್ತಿ ಹೋಗಿಬಿಟ್ಟಿದೆ. ಇವೆಲ್ಲವರ ನಡುವೆ ಅಂದಿನಿಂದ ಇಂದಿನವರೆಗೂ ಜನರ ಮನಸ್ಸನ್ನು ಗೆದ್ದಿರುವಂತಹ ಶೋಗಳೆಂದರೆ ಅದು ಕುಕರಿ ಶೋಗಳು ಮಾತ್ರ.
ಕುಕರಿ ಶೋಗಳು ಮೊದಲು ಪ್ರಾರಂಭವಾಗಿದ್ದೆ ರೇಡಿಯೋ ಸ್ಟೇಷನ್ಗಳ ಮೂಲಕ. ರೇಡಿಯೋ ಕೇಳುತ್ತಾ ಹೊಸ ಹೊಸ ರುಚಿಗಳನ್ನು ಕಲಿಯುವ ಪದ್ಧತಿ ಆರಂಭದಲ್ಲಿತ್ತು. ಆ ನಂತರ 1940ರ ಮಧ್ಯಭಾಗದಲ್ಲಿ ರೇಡಿಯೋದಿಂದ ಟೀವಿಗೆ ಕುಕರಿ ಶೋಗಳು ಜಂಪ್ ಆದವು. ಜನರು ಶೋವನ್ನು ಕೇಳುತ್ತಾ, ಜೊತೆಗೆ ಹೇಗೆ ಮಾಡುತ್ತಾರೆ ಅನ್ನುವುದನ್ನು ನೋಡುತ್ತಾ ಟೀವಿ ಎಂಬ ವಿಸ್ಮಯವನ್ನು ನೋಡಿ ಬೆಚ್ಚಿದ್ದರು. ಇದರ ಬೆಳವಣಿಗೆ ಹಂತಹಂತವಾಗಿ ಬೆಳೆಯುತ್ತಾ ಹೋಯಿತು. ಸದ್ಯ ಬ್ರಾಡ್ಕ್ಯಾಸ್ಟಿಂಗ್ ಉದ್ಯಮದ ದಾಖಲೆಗಳ ಪ್ರಕಾರ ಪ್ರತಿದಿನ 135ಕ್ಕೂ ಹೆಚ್ಚು ಕುಕರಿ ಶೋಗಳು ಸುಮಾರು 450ಕ್ಕೂ ಹೆಚ್ಚು ವಾಹಿನಿಗಳಲ್ಲಿ ಪ್ರಸಾರವಾಗುತ್ತಿವೆ. ಪ್ರತಿ ವಾಹಿನಿಯೂ ಕುಕರಿ ಶೋಗಳ ನಿರ್ಮಾಣಕ್ಕೆ ಆಸಕ್ತಿ ವಹಿಸುತ್ತದೆ. ಏಕೆಂದರೆ ಊಟ ತಿಂಡಿ ಕಾರ್ಯಕ್ರಮಗಳೆಂದರೆ ಮಿನಿಮಮ್ ಟಿಆರ್ಪಿ ಬಂದೇ ಬರುತ್ತದೆ, ಜಾಹೀರಾತುದಾರರು ಕೂಡ ತುಂಬಾ ಸುಲಭವಾಗಿ ಸಿಗುತ್ತಾರೆ ಅನ್ನುವ ನಂಬಿಕೆ ಎಲ್ಲ ವಾಹಿನಿಗಳಿಗಿದೆ. ಟ್ಯಾಮ್ (ಟೆಲಿವಿಷನ್ ಆಡಿಯನ್ಸ್ ಮೆಜರ್ಮೆಂಟ್) ನೀಡುವ ಮಾಹಿತಿ ಪ್ರಕಾರ ಪ್ರತಿ ಭಾರತೀಯ ಕನಿಷ್ಠ ಪಕ್ಷ 8 ನಿಮಿಷಗಳ ಕಾಲ ಕುಕರಿ ಶೋಗಳನ್ನು ಖಂಡಿತ ನೋಡುತ್ತಾನೆ ಅಂತ ಹೇಳಿದೆ. ಇದೆಲ್ಲಾ ಕುಕರಿ ಕಾರ್ಯಕ್ರಮಗಳ ಜನಪ್ರಿಯತೆ ಹಾಗೂ ಇವುಗಳು ಇನ್ನಷ್ಟು ಹೆಚ್ಚು ನಿರ್ಮಾಣವಾಗಲು ಸಹಾಯಕವಾಗಿದೆ.
ಅಮೆರಿಕ, ಜರ್ಮನ್, ಇಂಗ್ಲೆಂಡ್ನಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಟೆಲಿವಿಷನ್ ಕಾರ್ಯಕ್ರಮಗಳು 1946 ರಿಂದಲೇ ಪ್ರಾರಂಭವಾಗಿವೆ. ಆದರೆ ಭಾರತದಲ್ಲಿ ಟೀವಿ ಬೆಳವಣಿಗೆ ಆದದ್ದೇ 1990ರ ನಂತರ. ಮನರಂಜನಾ ಮಾಧ್ಯಮದ ಬೆಳವಣಿಗೆಯ ದೃಷ್ಟಿಯಲ್ಲಿ ನಮಗೂ ಅವರಿಗೂ ನಾಲ್ಕು ದಶಕಗಳ ವ್ಯತ್ಯಾಸ ಎದ್ದು ಕಾಣುತ್ತದೆ. ಅವರು ದೈತ್ಯವಾಗಿ ಬೆಳೆದು ತಮ್ಮದೇ ಮಾರುಕಟ್ಟೆಯನ್ನು ಸೃಷ್ಟಿ ಮಾಡಿಕೊಂಡ ಸಮಯದಲ್ಲಿ ನಾವಿನ್ನೂ ಅಂಬೆಗಾಲು ಇಡಲಿಕ್ಕೆ ಪ್ರಾರಂಭಿಸಿದ್ದೆವು.
ಜಗತ್ತಿನ ಎಲ್ಲ ವಾಹಿನಿಗಳಲ್ಲಿ ಕುಕರಿ ಶೋಗಳು ಇಷ್ಟು ಜನಪ್ರಿಯವಾಗಲು, ಜೊತೆಗೆ ಊಟಕ್ಕಂತಲೇ ಹತ್ತಾರು ವಾಹಿನಿಗಳು ಪ್ರಾರಂಭವಾಗಲು ಕಾರಣ, ನೂರರಲ್ಲಿ ಶೇ.70ರಷ್ಟು ಜನರು ಊಟದ ವಿಷಯದಲ್ಲಿ ತುಂಬಾ ಆಸಕ್ತಿ ವಹಿಸುತ್ತಿರುವುದು. ಇಂದಿನ ಜನರೇಷನ್ನವರು ಊಟದಲ್ಲಿ ವೈವಿಧ್ಯತೆ, ಶಿಸ್ತು, ಜೊತೆಗೆ ಗ್ಲ್ಯಾಮರ್ನ್ನು ನಿರೀಕ್ಷಿಸುತ್ತಿದ್ದಾರೆ. ಇದನ್ನು `ಪ್ರೆಸೆಂಟೆಷನ್' ಅಂತ ಸರಳವಾಗಿ ಹೇಳಬಹುದಷ್ಟೇ. ನಮ್ಮ ಜನರು ದಿನವೂ ಹೊಸ ಹೊಸ ರುಚಿಯ ತಿಂಡಿಗಳನ್ನು ತಿನ್ನುವುದು, ಹೊಸ ಹೊಸ ಅಡುಗೆಯನ್ನು ಕಲಿಯುವುದರಲ್ಲಿ ವಿಪರೀತ ಆಸಕ್ತಿ ವಹಿಸುತ್ತಿದ್ದಾರೆ. ಮನೆಯಲ್ಲಿ ಕುಳಿತ ಗೃಹಿಣಿಯರಿಗೆ ಟೀವಿ ನೋಡಿ ಹೊಸ ರುಚಿ ಮಾಡಿ ಸಂಜೆ ಬರುವ ಗಂಡ, ಮಕ್ಕಳಿಗೆ ತಿನ್ನಿಸುವುದು ಕೂಡ ದೊಡ್ಡ ಖುಷಿಯ ವಿಚಾರವಾಗಿದೆ.
ಜಗತ್ತಿನ ಸುಮಾರು 165ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಬ್ರಾಡ್ಕ್ಯಾಸ್ಟಿಂಗ್ ಉದ್ಯಮ ತುಂಬಾ ಆಳವಾಗಿ ತಲೆಯೂರಿ ನಿಂತಿದೆ. ಹಾಗಾಗಿ ಕೇಬಲ್ ಹಾಗೂ ಡಿಟಿಎಚ್ ಮೂಲಕ ಅತಿ ಹೆಚ್ಚು ಟೀವಿ ವೀಕ್ಷಕರನ್ನು ಸಾಧಿಸಿ ಆ ಮೂಲಕ ಜಾಹೀರಾತು ಉದ್ಯಮವನ್ನು ಪ್ರಬಲವಾಗಿ ಬೆಳೆಸಿ ಆದಾಯ ಮಾಡಿಕೊಳ್ಳುವುದು ಪ್ರತಿ ಬ್ರಾಡ್ಕ್ಯಾಸ್ಟಿಂಗ್ ಕಂಪನಿಗಳ ಮುಖ್ಯ ಗುರಿಯಾಗಿರುತ್ತದೆ. ಅದಕ್ಕೆ ಮುಖ್ಯವಾಗಿ ಆಯಾ ದೇಶದ ಜನರ ಆಸಕ್ತಿ, ಆಚಾರ, ವಿಚಾರ ಹಾಗೂ ಸಂಸ್ಕೃತಿಯನ್ನು ಅಧ್ಯಯನ ಮಾಡಲಾಗುತ್ತದೆ. ಇದು ಆಯಾ ದೇಶದ ವಾಹಿನಿಯ ಟೀವಿ ಕಂಟೆಂಟ್ನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಇದಕ್ಕೆ ನಮ್ಮ ದೇಶ ಭಾರತಕ್ಕಿಂತ ದೊಡ್ಡ ಉದಾಹರಣೆ ಬೇರೊಂದಿಲ್ಲ. ನಮ್ಮ ದೇಶದಲ್ಲಿ ಮುಖ್ಯವಾಗಿ ಇಲ್ಲಿನ ಸಂಪ್ರದಾಯ, ಸಂಸ್ಕೃತಿ ಹಾಗೂ ಆಹಾರಕ್ಕೆ ಮೊದಲ ಪ್ರಾಧಾನ್ಯತೆ ನೀಡಲಾಗುತ್ತದೆ. ಪ್ರತಿ ಕಿಲೋಮೀಟರ್ಗಳಂತೆ ನಮ್ಮ ದೇಶದ ಆಹಾರ, ಭಾಷೆ, ಆಚರಣೆ ವಿಭಿನ್ನವಾಗಿದೆ. ಮುಖ್ಯವಾಗಿ ನಮ್ಮ ದೇಶದ ಜನರು ತಿಂಡಿಪೋತರು. ಭಾರತೀಯರಿಗೆ ಊಟದ ವಿಷಯದಲ್ಲಿ ಅವರದ್ದೇ ಆದ ಶಿಸ್ತು ಹಾಗೂ ರುಚಿಯನ್ನು ನಿರೀಕ್ಷಿಸುತ್ತಾರೆ. ಕೇರಳದವನಿಗೆ ಕಾಶ್ಮೀರದ ಊಟ ರುಚಿಯಾಗದು, ಕನ್ನಡಿಗನಿಗೆ ಕೈರಾಳಿ ಮೆಸ್ನ ಊಟ ರುಚಿಸದೇ ಇರಬಹುದು. ನಮ್ಮ ಭಾರತೀಯರ ಊಟದಲ್ಲಿನ ಈ ತರಹದ ಹತ್ತು ಹಲವು ವಿಶೇಷತೆಗಳು ಟೀವಿ ಕಂಟೆಂಟ್ನ ಕುಕರಿ ಶೋಗಳಿಗೆ ಮುಖ್ಯ ಆಹಾರವಾಗಿಬಿಡುತ್ತದೆ. ಹೀಗಾಗಿ ಕುಕರಿ ಶೋಗಳಲ್ಲಿ ಅನೇಕ ವೈವಿಧ್ಯತೆಯನ್ನು ಕಾಣಬಹುದು. ಮೊದಲೆಲ್ಲಾ ಆಯಾ ವಲಯದ ಸಾಂಪ್ರದಾಯಿಕ ಅಡಿಗೆಗೆ ಹೆಚ್ಚು ಮಹತ್ವ ಕೊಡಲಾಗುತ್ತಿತ್ತು. ಆ ನಂತರ ಅಲ್ಲಿನ ಸಾಂಪ್ರದಾಯಿಕ ಅಡಿಗೆಗಳು ಬೇಸರ ಮೂಡಿಸುತ್ತಿವೆ ಅಂತ ಗೊತ್ತಾದಾಗ ಬೇರೆ ದೇಶದ ಆಹಾರ ವೈವಿಧ್ಯತೆಯನ್ನು ತೋರಿಸಲಾಯಿತು. ಇದರ ನಂತರ ಫಿಟ್ನೆಸ್ ಇಲ್ಲವೇ ಆರೋಗ್ಯವಂತ ದೇಹಕ್ಕೆ ಬೇಕಾದ ಅಡುಗೆಗಳನ್ನು ತಯಾರಿಸುವ ಬಗೆಯ ಕುರಿತು ಕಾರ್ಯಕ್ರಮಗಳನ್ನು ಮಾಡಲಾಯಿತು. ಈ ಫಾರ್ಮಟ್ ಕೂಡ ಬೇಸರ ಮೂಡಿಸಿದಾಗ ಊಟದ ಜೊತೆಗೆ ಊರು ಸುತ್ತುವ ಕಾರ್ಯಕ್ರಮಗಳಿಗೆ ಮಹತ್ವ ನೀಡಲಾಯಿತು. ಅನೇಕ ವಾಹಿನಿಗಳು ಫುಡ್ ಅಂಡ್ ಟ್ರಾವೆಲ್ ಫಾರ್ಮಟ್ಗೆ ಅಪ್ಪಿಕೊಂಡರು. ಇದರ ನಂತರ ಅಡುಗೆ ಮಾಡುವ ಬಾಣಸಿಗರ ಕುರಿತಾಗಿ ರಿಯಾಲಿಟಿ ಶೋಗಳನ್ನು ಮಾಡಲಾಯಿತು. ಹೀಗೆ 60 ವರ್ಷಗಳ ಕುಕರಿ ಶೋ ಇತಿಹಾಸದಲ್ಲಿ ಹತ್ತಾರು ಪ್ರಯೋಗಗಳನ್ನು ವಾಹಿನಿಗಳು ಮಾಡುತ್ತಲೇ ಬಂದಿದ್ದಾರೆ.
ಕುಕರಿ ಶೋಗಳ ಆರಂಭದ ಮೂಲವನ್ನು ಹುಡುಕಿದಾಗ ಟೀವಿ ಮೂಲಕ ಕುಕರಿ ಶೋಗಳನ್ನು ಅನೇಕರು ನಡೆಸಿಕೊಟ್ಟಿದ್ದಾರೆ. ಅನೇಕರು ಅದರಿಂದಲೇ ಜನಪ್ರಿಯರಾಗಿದ್ದಾರೆ. ಆಗಿನ ಬಹುಪಾಲು ಕುಕರಿ ಶೋಗಳು ಅಮೆರಿಕದ ಪಬ್ಲಿಕ್ ಟೆಲಿವಿಷನ್ ಸ್ಟೇಷನ್(ಪಿಬಿಎಸ್)ನಲ್ಲಿ ಪ್ರಸಾರವಾಗುತ್ತಿದ್ದವು.
ಈ ಕುಕರಿ ಶೋಗಳ ಬೆಳವಣಿಗೆಯಲ್ಲಿ ಪ್ರಮುಖವಾದವರನ್ನು ಈ ಮೂಲಕ ನೆನಪಿಸಿಕೊಳ್ಳಬಹುದು. ಟೀವಿ ಕಾಣಿಸಿಕೊಂಡ ಆರಂಭದಲ್ಲಿ ಜೇಮ್ಸ್ ಬಿಯರ್ಡ್ ನಡೆಸಿಕೊಡುತ್ತಿದ್ದ `ಐ ಲವ್ ಟು ಈಟ್' ಕಾರ್ಯಕ್ರಮವನ್ನು ಹೆಚ್ಚಿನವರು ನೋಡಲಿಲ್ಲ. ಇದು 1946ರಲ್ಲಿ ಪ್ರಸಾರವಾಗಿತ್ತು. ಆ ಸಮಯದಲ್ಲಿ ಅಮೆರಿಕದಲ್ಲಿ ಟೆಲಿವಿಷನ್ ಹೊಂದಿದವರ ಪ್ರಮಾಣ ಶೇ. 10ಕ್ಕಿಂತ ಕಡಿಮೆ ಇತ್ತು. ಆ ನಂತರ ಡಿಯಾನೆ ಲುಕ್ಯಾಸ್ ಎಂಬ ಮೊದಲ ಮಹಿಳೆ 1940 ರಿಂದ 1950 ರವರೆಗೆ `ಕ್ವೀನ್ಸ್ ಟೇಸ್ಟ್' ಅನ್ನುವ ಹೆಸರಿನಲ್ಲಿ ಕುಕರಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಳು. ಇದು ಕೂಡ ಪಿಬಿಎಸ್ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಆ ನಂತರ 1963 ರಿಂದ 1973 ರವರೆಗೆ ಜುಲೊಯಾ ಚೈಲ್ಡ್ ಎಂಬಾಕೆ `ದಿ ಫ್ರೆಂಚ್ ಚೆಫ್' ಹೆಸರಿನಲ್ಲಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಳು. ಗ್ರಾಹಮ್ ಕೇರ್ರ್ನ (1969-1971) `ದಿ ಗ್ಯಾಲೇಪಿಂಗ್ ಗೌರ್ಮೀತ್', ಕುಕರಿ ಶೋಗಳ ಮೂಲಕ ಸ್ವಲ್ಪ ಮನರಂಜನೆಯನ್ನು ಅಳವಡಿಸಿದ ಕೀತರ್ಿ ಜಸ್ಟೀನ್ ಈ ವಿಲ್ಸನ್ಗೆ (1970-1990) ಸೇರುತ್ತದೆ. ಫ್ರೆಂಚ್ ಚೆಫ್ ಫೈರೆ ಫ್ರಾನ್ಸಸ್ನ (1970) `60 ಮಿನೀಟ್ ಗೌರ್ಮೀತ್', ಲ್ಯಾರಿ ಫ್ಲೈ ಮತ್ತು ಕಾರ್ಲ ಜಾನ್ಸನ್ (1981), 1500 ಶೋಗಳನ್ನು ನಡೆಸಿಕೊಟ್ಟ ಚೀನಾದ ಚೆಫ್ ಮಾಸ್ಟೀನ್ ಯಾನ್ (1982), ಜೆಫ್ ಸ್ಮಿತ್ (1983-1997), ನ್ಯಾಥಲೀನ್ ಡಿಪ್ರೀ (1986), ಫೌಲ್ ಫೈಯರ್ಡಮನ್ (1996), ಪಬ್ಲಿಕ ಸ್ಟೇಷನ್ನ ಈ ಬಹುತೇಕ ಕುಕರಿ ಶೋಗಳು ಬೇರೆ ಬೇರೆ ಮಾದರಿಯಲ್ಲಿ ಹೊಸ ಹೊಸ ಅಡುಗೆಗಳನ್ನು ಪರಿಚಯಿಸಿದವು.
ಈ ನಂತರ ಇನ್ನು ಅನೇಕ ಕಾರ್ಯಕ್ರಮಗಳು ಜನರಿಗೆ ತುಂಬ ಇಷ್ಟವಾಗಿವೆ. ಅವುಗಳಲ್ಲಿ ಪ್ರಮುಖವಾಗಿ ದಿ ನೆಕೆಡ್ ಚೆಫ್ (1998), ಗುಡ್ ಏಟ್ (1999), ಟಾಪ್ ಚೆಫ್ (2006), 30 ಮಿನೀಟ್ ಮೀಲ್ (2001),
ಅಮೆರಿಕಾ ಟೆಸ್ಟ್ ಕಿಚನ್ (2001), ಪೌಲ್ಸ್ ದಿ ಕುಕಿಂಗ್ (2002), ಮೆಕ್ಸಿಕೋ: ಒನ್ ಪ್ಲೇಟ್ ಎಟ್ (2003), ಹೆಲ್ಸ್ ಕಿಚನ್ (2005), ದಿ ನೆಕ್ಸ್ಟ್ ಫುಡ್ ನೆಟ್ವರ್ಕ್ ಸ್ಟಾರ್ (2005), ಕಿಚನ್ ನೈಟ್ ಮೇರ್ಸ್ (2007), ಮ್ಯಾನ್ ವಸಸ್ ಫುಡ್ (2008), ದಿ ಬೆಸ್ಟ್ ಥಿಂಗ್ ಐ ಎವರ್ ಏಟ್ (2009), ಮಾಸ್ಟರ್ಚೆಫ್ (2010), ಫ್ಯೂಚರ್ ಫುಡ್ (2010) ಇನ್ನು ಹಲವಾರು ಶೋಗಳು ಪ್ರಸಾರವಾಗಿದ್ದವು. 1993ರಲ್ಲಿ ಫುಡ್ ನೆಟ್ವಕರ್್ ವಾಹಿನಿಯು ಪ್ರಸಾರವಾಗಿ ಹೆಚ್ಚಿನ ಕಾರ್ಯಕ್ರಮಗಳನ್ನು ನಿಮರ್ಾಣ ಮಾಡಿತ್ತು. ಬೇರೆ ಕಡೆ ಜನಪ್ರಿಯವಾದ ಕುಕರಿ ಶೋಗಳನ್ನು ಅನೇಕ ದೇಶಗಳಲ್ಲಿ ಅಲ್ಲಿನ ಸ್ಥಳೀಯ ವಾಹಿನಿಗಳು ಅವುಗಳನ್ನು ಬೇರೆ ರೀತಿಯಲ್ಲಿ ಪುನರ್ ನಿರ್ಮಾಣವಾದವು. ಉದಾಹರಣೆಗೆ ಮಾಸ್ಟರ್ಚೆಫ್ ಕಾರ್ಯಕ್ರಮವು ಅನೇಕ ರೂಪದಲ್ಲಿ ಅನೇಕ ದೇಶಗಳಲ್ಲಿ ಕಾಣಿಸಿಕೊಂಡಿತು.
ಭಾರತದಲ್ಲಿನ ಕುಕರಿ ಶೋ ಇತಿಹಾಸ
ನಮ್ಮ ದೇಶದಲ್ಲಿ ಕುಕರಿ ಶೋವನ್ನು ಪ್ರಾರಂಭಿಸಿದ ಕೀತರ್ಿ ಝೀ ವಾಹಿನಿಗೆ ಸಲ್ಲುತ್ತದೆ. ಸುಮಾರು 17 ವರ್ಷಗಳ ಹಿಂದೆ ಪ್ರಾರಂಭವಾಗಿದ್ದ `ಖಾನಾ ಖಾಝಾನಾ' ಕುಕರಿ ಶೋ ಸೀರಿಸ್ ಅಪಾರ ಜನಪ್ರಿಯತೆಯನ್ನು ಪಡೆದಿತ್ತು. ಈ ಕಾರ್ಯಕ್ರಮವನ್ನು ಸಂಜೀವ್ ಕಪೂರ್ ನಡೆಸಿಕೊಡುತ್ತಿದ್ದರು. ಸಂಜೀವ್ಕಪೂರ್ ಈ ಶೋ ಮೂಲಕ ಭಾರಿ ಹೆಸರನ್ನು ಮಾಡಿದ್ದರು. 15 ವರ್ಷಗಳ ಕಾಲ ನಿರಂತರವಾಗಿ ಟೀವಿಯಲ್ಲಿ ಕಾಣಿಸಿಕೊಂಡ ಕಪೂರ್ ಅನೇಕ ಸಾಹಸಗಳನ್ನು ಮಾಡಿದ್ದರು. ದೇಶದ ಪ್ರಮುಖ ನಗರಗಳಲ್ಲಿ ತಮ್ಮದೇ ರೆಸ್ಟೋರೆಂಟ್ಗಳನ್ನು ತೆರೆದರು. ಸ್ವಂತ ಫುಡ್ ಚಾನೆಲ್ ಶುರು ಮಾಡಲು ಕೈಹಾಕಿದರು. ತಮಗಿರುವ ಜನಪ್ರಿಯತೆ ಜೊತೆಗೆ ಟೀವಿ ಮಾಧ್ಯಮದಿಂದ ಬಂದ ಹಣದಿಂದ ಸಂಜೀವ್ ಕಪೂರ್ ಮಲೇಷಿಯನ್ ಆಸ್ಟ್ರೋ ಟೆಲಿವಿಷನ್ ಕಂಪನಿಯ ಜೊತೆ ಸೇರಿ `ಫುಡ್ ಫುಡ್' ಹೆಸರಿನ ವಾಹಿನಿಯನ್ನು ಪ್ರಾರಂಭಿಸಿದ್ದಾರೆ. ಅದೇ ರೀತಿ ಝೀ ವಾಹಿನಿಯು ಕೂಡ ಫುಡ್ ಪ್ರಿಯರಿಗಾಗಿ `ಝೀ ಖಾನಾ ಖಝಾನ' ಅನ್ನುವ ವಾಹಿನಿಯನ್ನು ಪ್ರಾರಂಭಿಸಿದೆ. ಇದರಲ್ಲಿ ದಿನದ 24 ಗಂಟೆಯೂ ಊಟ-ತಿಂಡಿ, ಪ್ರವಾಸ, ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಈ ವಾಹಿನಿಯಲ್ಲಿ ನಮ್ಮ ದೇಶದ ಆಹಾರ ವೈವಿಧ್ಯತೆಯ `ಖಾನ ಖಝಾನ' ಶೋ ಜೊತೆಗೆ ಬೇರೆ ದೇಶಗಳ ಆಹಾರ ತಯಾರಿಕೆ, ಜೊತೆಗೆ ಅಲ್ಲಿನ ಆಚಾರ ವಿಚಾರಗಳನ್ನು ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕುಕರಿ ಕಾರ್ಯಕ್ರಮಗಳ ಜನಪ್ರಿಯತೆಯನ್ನು ಬಳಸಿಕೊಂಡು ಸಾವಿರಾರು ವಿದೇಶಿ ತಿನಿಸುಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. ಮೊದಲೇ ಭಾರತೀಯರು ಊಟಕ್ಕಿಂತ ರೆಡಿಮೇಡ್ ತಿಂಡಿ ಹಾಗೂ ಸ್ನಾಕ್ಸ್ ಐಟೆಮ್ಗಳನ್ನು ತುಂಬಾ ಇಷ್ಪಪಡುವ ಜನಗಳು. ಹೀಗೆ ಟೈಂಪಾಸ್ಗೆ ತಿನ್ನಲು ಫೀಜಾ, ಕೆಎಫ್ಸಿ, ಕುರ್ಕುರಿ, ಚಿಪ್ಸ್ ಇನ್ನೂ ನೂರಾರು ವಿದೇಶಿ ಪ್ರಾಡಕ್ಟ್ಗಳು ಜನರ ಮನಗೆಲ್ಲಲು ಬೇರೆ ಬೇರೆ ರೀತಿಯಲ್ಲಿ ಮುನ್ನುಗ್ಗುತ್ತಿವೆ. ಇಲ್ಲಿಯ ಸ್ಥಳೀಯ ಫುಡ್ ಪ್ರಾಡಕ್ಟ್ ಕಂಪನಿಗಳನ್ನು ಕೊಂಡು ಆ ಮೂಲಕ ಅವರ ಪ್ರಾಡಕ್ಟ್ಗಳನ್ನು ತಮ್ಮ ಬಾಯಿಗೆ ತುರಿಸುವ ಪ್ರಯತ್ನಗಳು ಸದ್ಯ ಆಗುತ್ತಿವೆ. ಇಂತಹ ವಿದೇಶಿ ಕಂಪನಿಗಳೆಲ್ಲಾ ಕುಕರಿ ಶೋಗಳಿಗೆ ಮುಖ್ಯ ಸ್ಪಾನ್ಸರ್ಗಳಾಗಿ ತಮ್ಮ ಬಾಹುಬಲವನ್ನು ಹೆಚ್ಚಿಸಿಕೊಳ್ಳುತ್ತಿವೆ. ಜಂಕ್ಫುಡ್ಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನುವ ಸತ್ಯ ಅರಿವಿದ್ದರೂ, ಟೀವಿಯಲ್ಲಿ ದೊಡ್ಡ ದೊಡ್ಡ ಹೀರೋಗಳ ಮೂಲಕ ಇವುಗಳ ವೈಭವೀಕರಣ ಆಗುತ್ತಿರುವುದರಿಂದ ಈ ಜನರೇಷನ್ನ ಮಕ್ಕಳು, ಕಾಲೇಜು ಹುಡುಗ ಹುಡುಗಿಯರು ಜಂಕ್ಫುಡ್ಗಳ ದಾಸರಾಗುತ್ತಿದ್ದಾರೆ. ಆ ಮೂಲಕ ಜಂಕ್ಫುಡ್ಗಳು ನಮ್ಮ ದೇಹವನ್ನು ಸೇರಿ ಅನಾರೋಗ್ಯಕ್ಕೆ ದಾರಿಮಾಡಿಕೊಡುತ್ತಿವೆ. ನಮ್ಮವರಿಗೆ ನಮ್ಮ ನೆಲದ ಎಂಟಿಆರ್, ವಿಧ್ಯಾರ್ಥಿ ಭವನ, ಆನಂದ ಭವನ, ದಾವಣಗೆರೆ ಬೆಣ್ಣೆದೋಸೆ ಹೋಟೆಲ್ಗಳಿಗಿಂತ ಫಿಜಾ ಹಟ್, ಕೆಎಫ್ಸಿ ಕೌಂಟರ್ಗಳು ತುಂಬಾ ಪ್ರಿಯವಾಗುತ್ತಿವೆ. ಈ ರೀತಿಯ ಕೆಟ್ಟ ಬೆಳವಣಿಗೆಗಳು ಎಲ್ಲೋ ಒಂದು ಕಡೆ ಕುಕರಿ ಶೋಗಳ ಜನಪ್ರಿಯತೆಯಲ್ಲಿ ಆಗುತ್ತಿವೆ. ಇಷ್ಟು ವರ್ಷ ಆರೋಗ್ಯದಾಯಕ ಆಹಾರವನ್ನು ತೋರಿಸುತ್ತಾ ಬಂದಿದ್ದ ನಮ್ಮ ಟೀವಿ, ಈಗ ರಾಸಾಯನಿಕ ಹಾಗೂ ಜಂಕ್ಫುಡ್ಗಳ ತಯಾರಿಕೆಯನ್ನು ಹೇಳಿಕೊಡುತ್ತಿದೆ. ಇದು ನಿಮ್ಮ ನಮ್ಮ ಮನೆಯ ಟೀವಿಯಲ್ಲಿ ಆಗುತ್ತಿರುವ ದೊಡ್ಡ ದುರಂತ.
No comments:
Post a Comment