ಇತ್ತೀಚಿನ ದಿನಗಳಲ್ಲಿ ನಾನು ಓದಿದ ಹಾಗೂ ನನ್ನನ್ನು ಓದಿಸಿಕೊಂಡ ಪುಸ್ತಕ 'ದೇವರುಗಳ ರಾಜ್ಯದಲ್ಲಿ. 1983ರಲ್ಲಿ ಪ್ರಥಮ ಮುದ್ರಣ ಕಂಡ ಈ ಪುಸ್ತಕ ನನಗೆ ಸಿಕ್ಕಿದ್ದು ನನ್ನ ಅದೃಷ್ಟವೇ ಸರಿ. ಪುಸ್ತಕ ತುಂಬಾ ಹಳತಾಗಿತ್ತು. ಪೇಜುಗಳು ಕಿತ್ತುಕೊಂಡಿದ್ದವು. ಕೆಲವು ಹಾಳೆಗಳನ್ನು ಹುಳಗಳು ತಿಂದುಬಿಟ್ಟಿದ್ದವು. ಗಮ್ಟೇಪ್ ಹಾಕಿಕೊಂಡು ಪುಸ್ತಕವನ್ನು ಸುಮ್ಮನೇ ಕಣ್ಣಾಡಿಸಲು ಅಂತ
ಆ ಪುಸ್ತಕ ಹಿಡಿದುಕೊಂಡೆ. ನಿಂತುಕೊಂಡು ಕಣ್ಣಾಡಿಸುತ್ತಿದ್ದ ಆ ಪುಸ್ತಕ ನನ್ನನ್ನು ಕೂತು ಓದುವಂತೆ ಮಾಡಿಬಿಟ್ಟಿತು. ಅದ್ಭುತ ಕಥೆಗಳು. ಎಲ್ಲವೂ ಮಂಗಳೂರು, ದಕ್ಷಿಣ ಕನ್ನಡದ ಮುಸ್ಲಿ ಸಮುದಾಯದ ಚಿತ್ರಣವನ್ನು ತೆರೆದಿಡುತ್ತದೆ. ಬರೆದ ಲೇಖಕರ ಹೆಸರು ಬೋಳುವಾರು ಮಹಮದ್ ಕುಇಂ.
ಬೋಳುವಾರು ಮಹಮದ್ ಕುಇಂ ಕನ್ನಡದ ಹೆಸರಾಂತ ಲೇಖಕ, ಕಥೆಗಾರ. ಮೂಲತಃ ಕರಾವಳಿ ಮೂಲದ ಅದ್ಭುತ ಕಥನಗಾರ. ಸಿಂಡಿಕೇಟ್ ಬ್ಯಾಂಕ್ನಲ್ಲಿ ಚೀಫ್ ಮ್ಯಾನೇಜರ್ ಆಗಿ (ಪಬ್ಲಿಸಿಟಿ) ಕೆಲಸ ಮಾಡುತ್ತಿದ್ದಾರೆ. `ಪಾಪು ಗಾಂಧಿ, ಗಾಂಧಿ ಬಾಪು ಆದ ಕಥೆ' ಮಕ್ಕಳ ಸಾಹಿತ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.
ಮಂಗಳೂರು ಸೀಮೆಯ ಮುಸ್ಲಿಂ, ಬ್ಯಾರೀ ಭಾಷಿಕರ ಮುಸ್ಲಿಂ ವರ್ಗದ ಚಿತ್ರಣ, ಅವರ ಆಚಾರ, ವಿಚಾರ, ಮಾತು ಸಂಪ್ರದಾಯ ಎಲ್ಲವನ್ನೂ ಬಲುಸುಂದರವಾಗಿ ಕಟ್ಟಿಕೊಡುತ್ತಾರೆ. ನನಗೆ ಅವರ ಕಥೆಗಳಲ್ಲಿ ಇಷ್ಟವಾದದ್ದು ಇದೆ. ಕಥೆಗಳನ್ನು ಓದುತ್ತಾ ಹೋದಂತೆ ಮುಸ್ಲಿಂ ಆವರಣಕ್ಕೆ ನಮ್ಮನ್ನು ಕೊಂಡೊಯ್ದು ಮಸೀದಿ, ನಮಾಜು, ಕುರಾನ್, ಮುಲ್ಲಾಗಳ ಮಾತುಗಳು, ಮುಸ್ಲಿಂ ಗಂಡಸರ ಬಹುಪತ್ವಿತ್ವ, ತಲಾಖ್, ಇಲ್ಲಿಯವರೆಗೆ ನಾವು ಕೇಳಿದ ರಾಮ,ಶ್ಯಾಮ ರಂತಹ ಹಿಂದು ಹೆಸರುಗಳನ್ನು ಬಿಟ್ಟು ಮುಸ್ಲಿಂ ಪಾತ್ರಧಾರಿಗಳನ್ನು ನಮಗೆ ಪರಿಚಯಿಸುವ ಬಗೆ ಬಲು ಇಷ್ಟವಾಗುತ್ತದೆ. `ದೇವರುಗಳ ರಾಜ್ಯದಲ್ಲಿ ಕೃತಿಯ ಎಲ್ಲ ಕಥೆಗಳು ನನಗೆ ಇಷ್ಟವಾದವು. ಕಥೆಗಳ ಆರಂಭದಲ್ಲಿ ಜಿ.ರಾಜಶೇಖರ್ ಅವರ ಪ್ರಾಸ್ತಾವಿಕ ಮಾತುಗಳು ಅರ್ಥಗರ್ಭಿತವಾಗಿವೆ.
ಪುಸ್ತಕದಲ್ಲಿನ `ಗುಟ್ಟೊಂದು ಹೇಳುವೆ' ಎಂಬ ಕಥೆಯಲ್ಲಿ ಒಂದು ಮಾತುಕತೆ ಹೀಗೆ ಬರುತ್ತದೆ
"ನಮ್ಮ ಶಾಸ್ತ್ರದಲ್ಲಿ ಉಂಟಂತೆ ಸೂಳೆಗಾರಿಕೆ ಮಾಡಿದವರನ್ನು ಕಲ್ಲಿನಿಂದ ಹೊಡೆದು ಕೊಲ್ಬೇಕು ಅಂತ. ನೋಡುವ ಯಾರಿಗೆ ಯಾರು ಬಿಸಾಡ್ತಾರೆ ಅಂತ"
ರಹೀಮನಿಗೆ ಖಾದರ್ ಏನು ಹೇಳುತ್ತಿದ್ದಾನೆಂದೇ ಅರ್ಥವಾಗುವುದಿಲ್ಲ. "ನಮ್ಮ ಊರಿನಲ್ಲಿ ಸೂಳೆಯರು ಇಲ್ಲ, ಅಲ್ವಾ?" ಎಂದು ಕೇಳಿದ.
ಖಾದರ್ ರಹೀಮನನ್ನು ನೇರವಾಗಿ ದಿಟ್ಟಿಸುತ್ತಾ ಹೇಳಿದ
"ಊರೊಳಗೆ ಹೆಂಗಸ್ರು ಮಾತ್ರ ಇದ್ದರೆ ಸೂಳೆಗಾರಿಕೆ ಇರಲಿಕ್ಕಿಲ್ಲ "
ರಹೀಮ ಕಣ್ಣು ಪಿಳಿಪಿಳಿ ಮಾಡಿದ.
ಕಥೆಯಲ್ಲಿನ ಒಂದೊಂದು ಮಾತುಕತೆಗಳು ವಿಶೇಷತೆಗಳಾಗಿ ಸಾಗುತ್ತವೆ.
ಅವರಿಗೆ ``ಪಾಪು ಗಾಂಧಿ, ಗಾಂಧಿ ಬಾಪು ಆದ ಕಥೆ''ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಡೆಕ್ಕನ್-ಹೆರಾಲ್ಡ್ ಪತ್ರಿಕೆಯವರೊಂದಿಗೆ ನಡೆದ ಸಂದರ್ಶನ:
ಸಂದರ್ಶನದಲ್ಲಿ ಮುಖ್ಯವಾಗಿ ದೇಶದಲ್ಲಿರುವ ಅಲ್ಪ ಸಂಖ್ಯಾತರ ಬಗೆಗಿನ ಕೆಲವು ಸೂಕ್ಷ್ಮ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಹಾಗೆ ಸುಮ್ಮನೇ ಕಣ್ಣಾಡಿಸಿ. http://www.deccanherald.com/content/112860/its-sad-muslim-has-prove.html