Wednesday 28 March 2012

ಹತ್ತು ದಾರಿಗಳು ಒಂದೆಡೆ ಸೇರಿದಾಗ... ಒಂದು ಊರು, ಹಲವು ವಿಶೇಷತೆ... ಬನವಾಸಿಯ ಮಹಿಮೆ ಕಂಡಿರಾ...?

Photo Couresy : Prashant Sangeetgar, Banavasi )

 `ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ  ಪುಟ್ಟುಪುದು ನಂದನದೋಳ್ ಬನವಾಸಿ ದೇಶದೊಳ್' ಅಂತ ಮಹಾಕವಿ ಪಂಪ ಬನವಾಸಿಯ ಸೌಂದರ್ಯ, ಶ್ರೇಷ್ಟತೆ ಹಾಗೂ ಮಹತ್ವವನ್ನು ಸಾರಿದ್ದು ಹೀಗೆ. ಬನವಾಸಿ ಎಂಬ ಹೆಸರು ಬರಲು ಕೂಡ ಮುಖ್ಯ ಕಾರಣ ಇಲ್ಲಿದ್ದ ದಟ್ಟವಾದ ಕಾಡು. ಬನ-ವನ, ಅರಣ್ಯದ ತಾತ್ಪರ್ಯವನ್ನು ಹೇಳುತ್ತದೆ. ಕನ್ನಡ ನಾಡನ್ನು ಗಂಧದ ನಾಡು ಅಂತ ಕರೆಯಲಿಕ್ಕೆ ಮುಖ್ಯ ಕಾರಣ ಶ್ರೀಗಂಧದ ಮರಗಳು ಹೆಚ್ಚಾಗಿ ಇಲ್ಲಿ ಬೆಳೆಯುವ ಹವಾಗುಣ ಕನ್ನಡ ನಾಡಿನಲ್ಲಿದೆ. ಒಂದು ಕಾಲದಲ್ಲಿ ಲಕ್ಷಾಂತರ ಗಂಧದ ಮರಗಳು ಬನವಾಸಿ ಸುತ್ತಮುತ್ತ ಇದ್ದವಂತೆ. ಬನವಾಸಿಯನ್ನು ಆಳಿದ ಪಲ್ಲವರು, ಕದಂಬರು, ಸೋದೆ ಅರಸರು ಇನ್ನು ಹಲವು ರಾಜಮನೆತನಗಳು ಆಳುತ್ತಿರುವ ಸಂದರ್ಭದಲ್ಲಿ ಬನವಾಸಿಯನ್ನು ವನವಾಸಿ, ಜಯಂತಿಪುರ, ವೈಜಯಂತಿಪುರ ಇನ್ನು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಬನವಾಸಿಯ ಸುತ್ತಮುತ್ತ ಇದ್ದ ಪ್ರಕೃತಿ ಸೌಂದರ್ಯ  ಅತ್ಯಂತ ರಮಣೀಯವಾದದ್ದು.


ಜೈನ ಮತ್ತು ಬೌದ್ಧಧರ್ಮ ಅಸ್ತಿತ್ವ ಬನವಾಸಿಯಲ್ಲಿ
ಕದಂಬರ ಕಾಲದಲ್ಲಿ ಬನವಾಸಿಯಲ್ಲಿ ಜೈನ ಹಾಗೂ ಬೌದ್ಧ ಮತಗಳ ಪ್ರಚಾರ ನಡೆಯುತ್ತಿತ್ತು.  `ಅಹಿಂಸಾ ಪರಮೋ ಧರ್ಮಃ' ಅನ್ನುತ್ತಾ ಸಾವಿರಾರು ಜೈನ ಸಂನ್ಯಾಸಿಗಳು ಬನವಾಸಿಗೆ ಸಾವಿರಾರು ವರ್ಷಗಳ ಹಿಂದೆಯೇ ಬಂದಿದ್ದರು. ಜೈನ ಹಾಗೂ ಬೌದ್ಧ ಧರ್ಮದ ಪ್ರಚಾರ ಹಾಗೂ ಅಭಿವೃದ್ಧಿಯ ನಿಟ್ಟಿನಲ್ಲಿ ಬನವಾಸಿ ತವರುಮನೆಯಾಗಿತ್ತು. ಜೈನ ಧರ್ಮದ ಪ್ರಚಾರ ಆಗುತ್ತಿತ್ತು ಅನ್ನುವುದಕ್ಕೆ ಇಂದಿಗೂ ಬನವಾಸಿಯಲ್ಲಿ ಪುರಾತನ ಜೈನ ಬಸದಿ ಕಾಣಸಿಗುತ್ತದೆ. ಚೈನಾ ದೇಶದ ಯಾತ್ರಿಕ ಹ್ಯೂಯನ್ ತ್ಸಾಂಗ್ (ಕ್ರಿ. 630-644)ರಲ್ಲಿ ಭಾರತಕ್ಕೆ ಭೇಟಿ ಇಟ್ಟ ಸಂದರ್ಭದಲ್ಲಿ ಆತ ಕೊಂಕಣಪುರಕ್ಕೆ ಭೇಟಿಕೊಟ್ಟಿದ್ದ. ಬನವಾಸಿಯನ್ನು ಕೊಂಕಣಪುರ ಅಂತಲೂ ಕರೆಯಲಾಗುತ್ತಿತ್ತು. ಆತ ತನ್ನ ಬನವಾಸಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ತಾನು ನೂರಾರು ಸಂನ್ಯಾಸಿಗಳು, 10000ಕ್ಕೂ ಹೆಚ್ಚು ಬೌದ್ಧ ಭಿಕ್ಷುಗಳು, ಪೂಜಾರಿಗಳನ್ನು ನೋಡಿದ್ದಾಗಿ  ಹೇಳಿಕೊಂಡಿದ್ದಾನೆ. ಸಾಮ್ರಾಟ್ ಅಶೋಕ್ ಬೌದ್ಧ ಬಿಕ್ಷುಗಳನ್ನು ಬನವಾಸಿಗೆ ಕಳುಹಿಸಿದ್ದನಂತೆ. ಬನವಾಸಿಯಲ್ಲಿದ್ದ ಆಳೆತ್ತರ ಬುದ್ದನ ಮೂರ್ತಿಯು ಪವಾಡಗಳನ್ನು ಸೃಷ್ಟಿಸುತ್ತಿತ್ತು ಅಂತ ತನ್ನ ಭೇಟಿಯಲ್ಲಿ ಹೇಳಿಕೊಂಡಿದ್ದಾನೆ. ಕಾಲಕ್ರಮೇಣ ರಾಜಮನೆತನಗಳ ಆಳ್ವಿಕೆಯ ನಂತರ ಬೌದ್ಧ ಹಾಗೂ ಜೈನ ಧರ್ಮಕ್ಕೆ ಅಷ್ಟೋಂದು ಪ್ರಾಮುಖ್ಯತೆ ಸಿಗದೇ ಇದ್ದುದರಿಂದ ಆಯಾ ಧರ್ಮಗಳ ಸಂನ್ಯಾಸಿಗಳು ವಲಸೆ ಹೋದರು. ಬೌದ್ಧ ಧರ್ಮದವರು ಕಾಣುವುದಿಲ್ಲ ಇಂದಿಗೂ ಹತ್ತಾರು ಜೈನ ಕುಟುಂಬಗಳು ಬನವಾಸಿಯ ಮಹಾವೀರ ಮಾರ್ಗದಲ್ಲಿ ವಾಸಿಸುತ್ತಿದ್ದಾರೆ.

ಬನವಾಸಿಗೆ ಗುಡಿಗಾರರು ಬಂದದ್ದು ಹೀಗೆ



ಚೀನಾ ಯಾತ್ರಿಕ ಹ್ಯೂಯನ್ ತ್ಸಾಂಗ್ ತನ್ನ ಬನವಾಸಿ ಭೇಟಿಯಲ್ಲಿ ಮುಖ್ಯವಾಗಿ ತಾನು ನೋಡಿದ ಗುಡಿಗಾರರನ್ನು ಕಂಡು ವಿಸ್ಮಿತನಾಗಿದ್ದ. ಬನವಾಸಿಯಲ್ಲಿದ್ದ ಸಾವಿರಾರು ಗುಡಿಗಾರರ ಕುಸುರಿ ಕೆಲಸ, ಅವರು ಗಂಧದ ಮರದ ತುಂಡಿನಿಂದ ಬುದ್ಧನ ಬೊಂಬೆಗಳನ್ನು ಮಾಡುತ್ತಿದ್ದ ರೀತಿ ಅವನನ್ನು ಆಶ್ಚರ್ಯಚಕಿತನನ್ನಾಗಿಸಿತ್ತು. ಆಗಿನ ಸಮಯಲ್ಲಿ ಗಂಧದ ಮರಗಳು ಬನವಾಸಿಯ ಸುತ್ತಮುತ್ತ ದೊರೆಯುತ್ತಿದ್ದರಿಂದ ಗಂಧದ ಮರಗಳನ್ನು ಬಳಸಿಕೊಂಡು ವಿಶೇಷವಾಗಿ ಬುದ್ದ ಹಾಗೂ ಅನೇಕ ದೇವರುಗಳ ಬೊಂಬೆಗಳನ್ನು ಮಾಡುತ್ತಿದ್ದರಂತೆ. ಬೊಂಬೆಗಳನ್ನು ಮಾಡಲಿಕ್ಕೆ ಅಂತಲೇ ಅಂದಿನ ಕಾಲದಲ್ಲಿ ಸುಮಾರು ಸಾವಿರ ಗುಡಿಗಾರರು ಬನವಾಸಿಗೆ ಬಂದು ನೆಲೆಸಿದ್ದರು. ಬನವಾಸಿಯ ಗಂಧದ ಬೊಂಬೆಗಳಿಗೆ ಭಾರೀ ಬೇಡಿಕೆ ಇತ್ತು. ಗಂಧದ ಬೊಂಬೆಗಳ ಬೇಡಿಕೆ ಹಾಗೂ ಗಂಧದ ಮರಗಳ ನಾಶವಾದೊಡನೆ, ಗುಡಿಗಾರರು ಕೆಲಸವಿಲ್ಲದೇ ಕಂಗಾಲಾದರು. ಬನವಾಸಿಯನ್ನು ಬಿಟ್ಟು ಬೇರೆ ಕಡೆ ವಲಸೆ ಹೋದರು. ಬನವಾಸಿಯಲ್ಲಿ ಪ್ರಸ್ತುತ ಗುಡಿಗಾರರ ಹತ್ತು ಮನೆಗಳು ಕಾಣಬಹುದಷ್ಟೇ..! ಅವರೆಲ್ಲಾ ಸಂತೆಪೇಟೆಯ ಕೇರಿಯಲ್ಲಿ ವಾಸಿಸುತ್ತಿದ್ದಾರೆ. ಉಳಿದಂತೆ ಶಿರಸಿ, ಸೊರಬ, ಸಾಗರ, ಯಲ್ಲಾಪುರ ತುಂಬೆಲ್ಲಾ ಗುಡಿಗಾರರ ಸಂಖ್ಯೆ ಸಾವಿರ ಮುಟ್ಟುತ್ತದೆ. ಇಂದಿಗೂ ಕೂಡ ಅವರೆಲ್ಲಾ ತಮ್ಮ ವಂಶಪಾರಂಪರಿಕವಾಗಿ ಬಂದಂತಹ ಕಲೆಯಿಂದ ಗಂಧದ ತುಂಡುಗಳಿಂದ ಬೊಂಬೆಗಳನ್ನು ಮಾಡುತ್ತಾರೆ. ಗಂಧದ ಮಾಲೆಗಳನ್ನು ಹೆಣೆಯುತ್ತಾರೆ. ಬಾಸಿಂಗ ಕಟ್ಟುತ್ತಾರೆ. ಸೀಸನ್ಗೆ ತಕ್ಕ ಹಾಗೆ ಕರಕುಶಲ ಕೆಲಸ ಮಾಡುತ್ತಾರೆ. ಉತ್ತರ ಕನ್ನಡ ಹಾಗೂ ಶಿವಮೊಗ್ಗ  ಕಡೆಯ  ಗುಡಿಗಾರರೆಲ್ಲ ಇಂದಿಗೂ ಮೂಲ ವೃತ್ತಿಯನ್ನು ಇಂದಿಗೂ ಬಿಡದೇ, ಮರದ ಕರಕುಶಲ ಕುಸುರಿಯ ಕೆಲಸದೊಂದಿಗೆ, ಪ್ರತಿವರ್ಷ ಗಣೇಶಚತುರ್ಥಿಯಂದು ಮಣ್ಣಿನಿಂದ ಸಾವಿರಾರು ಮೂರ್ತಿಗಳನ್ನು ಮಾಡುತ್ತಿದ್ದಾರೆ. ಬನವಾಸಿಯಲ್ಲಿಯೂ ಕೂಡ ನೂರಾರು ವರ್ಷಗಳಿಂದ ಗಣೇಶ ಮೂತರ್ಿಗಳನ್ನು ಗುಡಿಗಾರರೇ  ಮಾಡುತ್ತಿದ್ದಾರೆ. ಗುಡಿಗಾರರನ್ನು ಹೊರತಾಗಿ ಕುಂಬಾರರು, ಕಬ್ಬೇರರು ಗಣೇಶನ ಮೂರ್ತಿಯನ್ನು ಮಾಡುತ್ತಿದ್ದರೂ, ಇವರೆಲ್ಲಾ ಗುಡಿಗಾರರಿಂದ ಕಲಿತು ಬಂದವರು. ಹಾಗಾಗಿ ಗುಡಿಗಾರರ ರಕ್ತದಲ್ಲೇ ಕಲೆಯ ಉಸಿರು ಇದೆ. ಇದು ಇಂದು ನಿನ್ನೆಯ ಕಥೆಯೆಲ್ಲ, ಸಾವಿರಾರು ವರ್ಷಗಳಿಂದ ಅವರ ತಲೆಮಾರಿನ ರಕ್ತದ ಮೂಲಕ ಹರಿದು ಬರುತ್ತಿದೆ. ಮುಂದೆ ಕೂಡ ಹರಿಯುತ್ತದೆ.

ಕನ್ನಡ ಬ್ರಾಹ್ಣಣರಷ್ಟೇ ಮರಾಠಿ ಬ್ರಾಹ್ಮಣರು...!



ಶ್ರೀಕ್ಷೇತ್ರ ಬನವಾಸಿ ವೈದಿಕ, ಸಾಂಸ್ಕೃತಿಕ, ವೇದಾಂತ-ಪುರಾಣ, ಪೌರೋಹಿತ್ಯ ಹೀಗೆ ಧಾಮರ್ಿಕ ಸಂಸ್ಕಾರದ ಪುಣ್ಯ ಕ್ಷೇತ್ರ. ಇದಕ್ಕೆ ಸಾಕ್ಷಿ ಶತಶತಮಾನಗಳಿಂದ ಇದರ ಆಚರಣೆ ಹಾಗೂ ಮುಂದುವರೆಸಿಕೊಂಡು ಹೋಗುತ್ತಿರುವವರು ಬನವಾಸಿಯ ಬ್ರಾಹ್ಮಣ ಸಮಾಜ. ದೇವಸ್ಥಾನದ ರಥಬೀದಿ ಹಾಗೂ ಕಾಮನಗಲ್ಲಿ, ತಗ್ಗಿನಕೇರಿಯಲ್ಲಿ ಸರಿಸುಮಾರು ಸುಮಾರು 50ಕ್ಕೂ ಹೆಚ್ಚು ಮನೆಗಳು ಒಂದೇ ಸಾಲಿನಲ್ಲಿ ಎದ್ದು ಕಾಣುತ್ತವೆಆಗಿನ ಕಾಲದಲ್ಲಿ ಕಟ್ಟಿದ ಭರ್ಜರಿ, ಗಟ್ಟಿಮುಟ್ಟಾದ ಮನೆಗಳನ್ನು ಇಂದಿಗೂ ಉಳಿಸಿಕೊಂಡು ಅದರಲ್ಲೇ ಬದುಕುತ್ತಿದ್ದಾರೆ. ನಮ್ಮ ಮಲೆನಾಡು ಪ್ರಾಂತ್ಯ ಅಂತ ಬಂದಾಗ ಬ್ರಾಹ್ಮಣ ಸಮಾಜದಲ್ಲಿನ ಹತ್ತಾರು ವರ್ಗಗಳಲ್ಲಿ `ಹವ್ಯಕ' ಪಂಗಡ ಪ್ರಮುಖವಾದುದು. ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಸಾಗರದಲ್ಲಿ ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ 5ಲಕ್ಷಕ್ಕೂ ಹವ್ಯಕ ಬ್ರಾಹ್ಮಣರು ಕಾಣಸಿಗುತ್ತಾರೆ. ಬನವಾಸಿಯಲ್ಲಿಯೂ ಕೂಡ ಹವ್ಯಕ ಬ್ರಾಹ್ಮಣರು ಇದ್ದಾರೆ. ಇದರ ಜೊತೆಗೆ ನೂರಾರು ವರ್ಷಗಳ ಹಿಂದೆ ಬನವಾಸಿಗೆ  ಮಹಾರಾಷ್ಟ್ರದಿಂದ ಬಂದಂತಹ ಬ್ರಾಹ್ಣಣರು ನೆಲೆನಿಂತಿದ್ದಾರೆಫಡಕೆ, ಬಾಪಟ್, ಖರೆ, ದೀಕ್ಷಿತ್ ವಿಳಾಸದ ಅನೇಕ ಬ್ರಾಹ್ಮಣ ಮನೆಗಳು ಇವೆ. ಮಹಾರಾಷ್ಟ್ರದಲ್ಲಿ ಎಲ್ಲೇ ಹೋದರೂ ಅಲ್ಲಿಯ ಮರಾಠಿ ಬ್ರಾಹ್ಮಣರಲ್ಲಿ ಸಾಮಾನ್ಯವಾಗಿ ತರಹದ ಅಡ್ಡಹೆಸರಿನ ಬ್ರಾಹ್ಮಣ ಕುಟುಂಬಗಳು ಸಾಮಾನ್ಯವಾಗಿ ಸಿಗುತ್ತದೆ. ಹೆಚ್ಚಿನವರು ಮನೆಯಲ್ಲಿ ಕನ್ನಡವನ್ನೇ ಮಾತನಾಡಿದರೂ ಅಪರೂಪಕ್ಕೊಮ್ಮೆ ಮರಾಠಿಯನ್ನು ಕೂಡ ಮಾತನಾಡುತ್ತಾರೆ. ಮರಾಠಿ ಭಾಷೆಯ ಎಳೆಯನ್ನು ತಮ್ಮ ಜೊತೆ ಇಂದಿಗೂ ಇಟ್ಟುಕೊಂಡಿದ್ದಾರೆ. ಇದು ಬನವಾಸಿಯ ಬ್ರಾಹ್ಮಣ ಸಮುದಾಯದ ಹಲವು ವಿಶೇಷತೆಗಳಲ್ಲಿ ಒಂದು ವಿಶೇಷತೆ ಅಷ್ಟೇ.

ದೇವರ ಸೇವೆಗೆ ಉಪ್ಪಾರರು...!





ಬನವಾಸಿಯಲ್ಲಿ ಮಾತಬರ ಮಧುಕೇಶ್ವರ ದೇವರು ಸುಮಾರು 2000 ವರುಷಗಳಿಂದ ನೆಲೆಸಿರುವುದರಿಂದ, ವೈದಿಕ ನೆಲೆಯ ಹಿನ್ನಲೆಯಲ್ಲಿ ಪೂಜೆ ಪುನಸ್ಕಾರ,ಹೋಮ ಹವನ, ಜಾತ್ರೆ, ದೇವರ ಸೇವೆ, ಪಲ್ಲಕ್ಕಿ, ರಥದ ಸೇವೆ ಹೀಗೆ ಇನ್ನು ದೇವರ ಕಾರ್ಯಗಳಲ್ಲಿ ಮೊದಲಿನಿಂದಲೂ ತೊಡಗಿಸಿಕೊಂಡವರು ಉಪ್ಪಾರರು. ಕರ್ನಾಟಕದಲ್ಲಿ ಇವರನ್ನು ಉಪ್ಪಾರರು ಎಂದು ಕರೆದರೆ, ಆಂಧ್ರದಲ್ಲಿ ಇದೇ ಮೂಲ ಹಿನ್ನಲೆಯಲ್ಲಿ ಬೆಳೆದ ಜನಾಂಗವನ್ನು ಬಲಜಿಗರು ಎಂದು ಕರೆಯುತ್ತಾರೆ. ಆದಿ ಕಾಲದಿಂದಲೂ ಮಧುಕೇಶ್ವರ ದೇವರ ಪಲ್ಲಕ್ಕಿ ಹೋರುವುದು, ದೇವರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು, ಹೂವು ಮಾರುವುದು ಇವುಗಳಲ್ಲಿ ಉಪ್ಪಾರರು ತೊಡಗಿಸಿಕೊಳ್ಳುತ್ತಾ ಬಂದಿದ್ದಾರೆ. ಸಂಪ್ರದಾಯ ಇಂದಿಗೂ ಇದೆ. ಮುಂದೆ ಕೂಡ ಇರುತ್ತೆ. ಬನವಾಸಿ ತೇರು ಕಟ್ಟುವ ಕಲೆಯನ್ನು ಚೆನ್ನಾಗಿ ಕಲಿತುಕೊಂಡಿರುವ `ಮಧುಕೇಶ್ವರ ಉಪ್ಪಾರ ಹಾಗೂ ಸೋದರರು' ಇಂದಿಗೂ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ದೇವಸ್ಥಾನದ ಕಡೆಯಿಂದ `ಗೌಡ' ಎನ್ನುವ ಪಟ್ಟ ಕೂಡ ಸಿಕ್ಕಿದೆ. ಕೆಲವರು ಇವರನ್ನು ತೇರು ಕಟ್ಟೋ ಗೌಡ್ರ ಮನೆಯವರು ಅಂತಲೇ ಕರೆಯುತ್ತಾರೆ.



ವ್ಯಾಪಾರ ವಹಿವಾಟಿನಲ್ಲಿ ಮರಾಠಿಗರದ್ದು ಎತ್ತಿದ ಕೈ





ಯಾವುದೇ ಊರು ಅಂದ ಮೇಲೆ ಅಲ್ಲಿ ವ್ಯಾಪಾರ ವಹಿವಾಟು ಇದ್ದದ್ದೇ. ಎಲ್ಲರಿಗೂ ವ್ಯಾಪಾರ ಒಲಿಯುವುದಿಲ್ಲ. ಒಲಿದವನಿಗೆ ಅವನು ಬಿಡುವವರೆಗೂ ವ್ಯಾಪಾರ ಅವನನ್ನು ಬಿಡುವುದಿಲ್ಲ. ಹೀಗೆ ಬನವಾಸಿಯಲ್ಲಿ ಬಟ್ಟೆ ವ್ಯಾಪಾರ, ಕಿರಾಣಿ ಅಂಗಡಿ, ಸ್ಟೇಷನರಿ, ಇನ್ನೂ ಹಲವು ಪ್ರಾವಿಜನಲ್ ಸ್ಟೋರ್ಗಳನ್ನು ಹೆಚ್ಚಾಗಿ ನಡೆಸುತ್ತಿರುವವರು ಚೌಧರಿ ಫ್ಯಾಮಿಲಿಗಳು, ಬೊಂಗಾಳೆ, ಮಾಳವದೆ ಹೆಸರಿನ ಅನೇಕ ಕುಟುಂಬಗಳು ತಲೆತಲಾಂತರಗಳಿಂದ ತಮ್ಮ ಕುಟುಂಬದ ವ್ಯಾಪಾರವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮುಂದೆಯೂ ಕೂಡ ನಡೆಸಿಕೊಂಡು ಹೋಗುತ್ತಾರೆ. ಏಕೆಂದರೆ ಬನವಾಸಿಯಲ್ಲಿ ಕುಟುಂಬದವರಿಗೆ ವ್ಯಾಪಾರ ಕಲೆ ಒಲಿದಿದೆ. ಇವರೆಲ್ಲಾ ಇಂದು ಅಪ್ಪಟ ಕನ್ನಡಿಗರಾಗಿದ್ದರೂ ಇವರ ಮೂಲ ಬಂದಿದ್ದು ಕೂಡ ಮಹಾರಾಷ್ಟ್ರದ ಮೂಲಕ. ಕನರ್ಾಟಕ ಹಾಗೂ ಮಹಾರಾಷ್ಟ್ರದ್ದು ಕೊಡು-ಕೊಳ್ಳುವ ಸಂಬಂಧ. ಮಹಾರಾಷ್ಟ್ರದಿಂದ ಏಷ್ಟು ಜನ ಕನ್ನಡ ದೇಶಕ್ಕೆ ವಲಸೆ ಬಂದಿದ್ದಾರೋ, ಅಷ್ಟೇ ಜನ ಕನ್ನಡದೇಶದಿಂದ ಮಹಾರಾಷ್ಟ್ರಕ್ಕೂ ಕೂಡ ಹೋಗಿದ್ದಾರೆ. ಇದು ನೂರಾರು ವರುಷಗಳಿಂದ ನಡೆದುಬಂದಿದೆ, ಮುಂದೆಯೂ ಕೂಡ ನಡೆಯುತ್ತದೆ. ಅಲ್ಲದೇ ಕನ್ನಡ ಹಾಗೂ ಮರಾಠಿಗರ ಆಚರಣೆ, ಸಂಸ್ಕೃತಿ, ಹಬ್ಬ ಹರಿದಿನ ಎಲ್ಲವೂ ಹೆಚ್ಚಿನಂಶ ಒಂದೇ ತರನಾಗಿದೆ. ಹಾಗಾಗಿ ಮರಾಠಿಗರಿಗೆ ಕರ್ನಾಟಕದಲ್ಲಿ, ಕನ್ನಡದವರಿಗೆ ಮಹಾರಾಷ್ಟ್ರದಲ್ಲಿ ಹೊಂದಿಕೊಳ್ಳಲು ಕಷ್ಟವಾಗುತ್ತಿಲ್ಲ. ಯಾರು ನೇರವಾಗಿ ಅಲ್ಲಿಂದ ಇಲ್ಲಿಗೆ ಬಂದವರಲ್ಲ. ಕೆಲವರು ಉತ್ತರ ಕರ್ನಾಟಕದ ಮೂಲಕ ಬಂದವರಾದರೆ, ಇನ್ನು ಕೆಲವರು ಮಲೆನಾಡು ಪ್ರಾಂತ್ಯದಿಂದ ಬಂದವರಾಗಿದ್ದಾರೆ. ನನ್ನ ಪ್ರಿಯ ಸ್ನೇಹಿತ ಅಮಿತ್ ಮಾಳವದೆಯವರ ತಾತ ತಿರುಕಪ್ಪ ಮಾಳವದೆ ಸಾಗರದಿಂದ ಬಂದವರು. ಇವರ ಕುಟುಂಬ ನಮ್ಮ ಬನವಾಸಿಯಲ್ಲೆ ಅತಿ ದೊಡ್ಡ ಫ್ಯಾಮಿಲಿ. ಒಂದೇ ಮನೆಯಲ್ಲಿ 35 ಕ್ಕೂ ಹೆಚ್ಚು ಜನ ಇರುವುದು ಇಂದಿಗೂ ಅವಿಭಕ್ತ ಫ್ಯಾಮಿಲಿಗೆ ದೊಡ್ಡ ಸಾಕ್ಷಿಯಾಗಿದೆ. ಇವರಲ್ಲಿ ಕೆಲವರು ವ್ಯಾಪಾರ, ಬಟ್ಟೆ ವ್ಯಾಪಾರ, ಟೇಲರಿಂಗ್ನಲ್ಲಿ ತೊಡಗಿದರೆ, ಉಳಿದವರು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ

ಕೃಷಿಯಲ್ಲಿ ಮುಸ್ಲಿಮರದ್ದೇ ಪ್ರಾಬಲ್ಯ




ಬನವಾಸಿ ಇಡೀ ಕರ್ನಾಟಕದಲ್ಲಿ ಒಂದು ಬೆಳೆಗೆ ಹೆಸರುವಾಸಿಯಾಗಿದೆ. ಅದು ಅನಾನಸ್..! ನಮ್ಮ ರಾಜ್ಯದಲ್ಲಿ ಅನಾನಸ್ ಬೆಳೆಯನ್ನು ಬನವಾಸಿ ಹಾಗೂ ಸುತ್ತಮುತ್ತ ಹಳ್ಳಿಗಳಲ್ಲಿ ಬೆಳೆಯುವಷ್ಟು ಯಾವ ಪ್ರಾಂತ್ಯದಲ್ಲಿಯೂ ಬೆಳೆಯುವುದಿಲ್ಲ. ಅನಾನಸ್ ಬೆಳೆಯುವುದು ಹಾಗೂ ಮಾರಾಟ ಮಾಡುವುದು, ಬನವಾಸಿಯಲ್ಲಿ ಒಂದು ದೊಡ್ಡ ಮಾರುಕಟ್ಟೆಯನ್ನೇ ಸೃಷ್ಟಿಸಿದೆ. ಇಂದಿಗೂ ಬನವಾಸಿಯಿಂದ ನೇರವಾಗಿ  ನೂರಾರು ಟನ್ ಅನಾನಸ್ ದೆಹಲಿ ಹಾಗೂ ಉತ್ತರ ಭಾರತದ ನಗರಗಳಿಗೆ ಸಪ್ಲೈ ಆಗುತ್ತಿದೆ. ದಕ್ಷಿಣ ಭಾರತದಲ್ಲೇ ಬನವಾಸಿ ಹಾಗೂ ಸುತ್ತಮುತ್ತ ಬೆಳೆಯುವ ಅನಾನಸ್ಗೆ ದೊಡ್ಡ ಹೆಸರು ಇದೆ. ಇಡೀ ಕರ್ನಾಟಕದಲ್ಲಿ ಅತಿ ಹೆಚ್ಚು ಅನಾನಸ್ ಬೆಳೆಯುವ ವ್ಯಕ್ತಿ ಕೂಡ ನಮ್ಮ ಬನವಾಸಿಯಲ್ಲಿದ್ದಾರೆ. ಅನಾನಸ್ ಅಂದರೆ ಮೊದಲು ನೆನಪಾಗುವುದೇ ವ್ಯಕ್ತಿ. ತಮ್ಮ ನೂರಾರು ಏಕರೆ ಜಮೀನಿನಲ್ಲಿ ಅತಿಹೆಚ್ಚು ಅನಾನಸ್ ಬೆಳೆಯುವ ಅಬ್ದುಲ್ ರವೂಫ್ ಅಲಿಯಾಸ್ ರೋಬ್ ಸಾಬ್ರು (ಎಲ್ಲರೂ ಕರೆಯುವ ಹಾಗೆ `ರೋಬ್ಸಾಬ್ರು) ಇಂದಿಗೂ ಬನವಾಸಿಯ ಹೆಸರನ್ನು ಎಲ್ಲೆಡೆ ನಿಲ್ಲುವಂತೆ ಮಾಡಿದ್ದಾರೆ. ತಾವು ಅನಾನಸ್ ಬೆಳೆಯುವುದರ ಜೊತೆಗೆ ಸಾವಿರಾರು ರೈತರಿಗೆ ಅನಾನಸ್ ಬೆಳೆಯುವಂತೆ ಪ್ರೇರೇಪಿಸಿದ ವ್ಯಕ್ತಿ. ಕೃಷಿಯಲ್ಲಿ ರೋಬ್ ಸಾಹೇಬರು ಮಾಡಿದ ಸಾಧನೆಯ ಬಗ್ಗೆ ಏಷ್ಟು ಬರೆದರೂ ಕಡಿಮೆಯೇ.  ಧಾರಾವಾಡ ಕೃಷಿ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವುದು ನಮ್ಮ ಏಷ್ಟು ಜನರಿಗೆ ತಿಳಿದಿದಿಯೋ  ಗೊತ್ತಿಲ್ಲ. ಆದರೆ ತಾವು ಮಾತ್ರ ಅಷ್ಟೆಲ್ಲಾ ಸಾಧನೆ ಮಾಡಿದ್ದರೂ ರೋಬ್ ಸಾಹೇಬರು ಮಾತ್ರ ತಮ್ಮ ಪಾಡಿಗೆ  ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರಂತೆ ಪ್ರಕೃತಿ ಪ್ರಿಯ. ಕೃಷಿಯಲ್ಲಿ ದೇವರನ್ನು ಕಂಡವರು. ದಾನಧರ್ಮದಲ್ಲಿ ಸದಾ ಮುಂದು. ಮುಸ್ಲೀಮರಾದರೂ `ಜಾತೀಯತೆ' ಎಂಬ ಅಡ್ಡಗೋಡೆಯನ್ನು ಎಂದಿಗೂ ಇಟ್ಟುಕೊಂಡವರಲ್ಲ. ದೇವರ ಕೆಲಸ ಅಂದಮೇಲೆ ಅದು ಅಲ್ಲಾನ ಸೇವೆ ಇರಲಿ, ಇಲ್ಲವೇ ಮಧುಕೇಶ್ವರನ ಸೇವೆ ಇರಲಿ, ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಸಹಾಯ ಮಾಡುತ್ತಾರೆ. ಊರ ಒಣರಾಜಕೀಯದಿಂದ ಸ್ವಲ್ಪ ದೂರ. ತಮ್ಮ ನೂರಾರು ಏಕರೆ ಜಮೀನಿನಲ್ಲಿ ಅಡಿಕೆ, ಬಾಳೆ, ವೆನಿಲ್ಲಾ, ಕಾಳು ಮೆಣಸು, ಸಾಂಬಾರ್ ಪದಾರ್ಥಗಳನ್ನು ಹೊಸ ಹೊಸ ರೀತಿಯಲ್ಲಿ ಬೆಳೆದು, ಕೃಷಿಯಲ್ಲಿ ಆಳವಾದ ಜ್ಞಾನವನ್ನು ಸಾಧಿಸಿದ್ದಾರೆ. ನನಗೆ ತಿಳಿದ ಪ್ರಕಾರ ಸುಮಾರು 10 ವರ್ಷಗಳ ಹಿಂದೆಯೇ ಅವರನ್ನು ದೂರದರ್ಶನ ಚಾನೆಲ್ನಲ್ಲಿ ಅವರ ಅನಾನಸ್ ಬೆಳೆಯ ಬಗ್ಗೆ ಸಂದರ್ಶನ ಮಾಡಿದ್ದರು. ಇಡೀ ಕನರ್ಾಟಕಕ್ಕೆ ಅನಾನಸ್ ಬೆಳೆಯನ್ನು ಹೇಗೆ ಬೆಳೆಯಬೇಕು, ಅದರ ಪಾಲನೆ ಪೋಷಣೆಯ ಬಗ್ಗೆ ತಿಳಿಸಿಕೊಟ್ಟಿದ್ದರು. ಅದರಂತೆ ಬನವಾಸಿಯ ಮುಸ್ಲಿಂಮರಲ್ಲಿ ಅತಿ ಹೆಚ್ಚಿನವರು ಕೃಷಿ, ಮೀನು-ಮಾಂಸ ಹಾಗೂ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಕೆಲಸದಲ್ಲಿ ಮುಂದಿದ್ದಾರೆ. ಅದರ ನಂತರ ಬನವಾಸಿಯ ಸುತ್ತಮುತ್ತ ಇರುವ ತಿಗಣಿ, ಭಾಸಿ, ನರೂರು, ಮದ್ರಳ್ಳಿ, ಕಪಗೇರಿ, ಅಂಡಗಿ, ಅಜ್ಜರಣಿ, ಗುಡ್ನಾಪುರ, ಕಂತ್ರಾಜಿ, ಜಡ್ಡಳ್ಳಿ, ಸಂಪಗೋಡು ಇನ್ನು ಹತ್ತು ಹಲವು ಹಳ್ಳಿಗಳಲ್ಲಿ ಅನಾನಸ್, ಬಾಳೆ, ಅಡಿಕೆ, ಭತ್ತ, ಶೇಂಗಾ, ಶುಂಠಿ, ಅರಿಶಣವನ್ನು ಹೆಚ್ಚಾಗಿ ಬೆಳೆಯುತ್ತಾರೆ.



ಗೋವಾ ಸೀಮೆಯಿಂದ ಬಂದ ಕೊಂಕಣಿ ಜನ




ಕದಂಬರ ಆಳ್ವಿಕೆ ದೂರದ ಗೋವಾ ತೀರದವರೆಗೆ ಹರಡಿತ್ತು ಎಂಬುದು ಇತಿಹಾಸದಿಂದ ನಮಗೆ ತಿಳಿದು ಬರುತ್ತದೆ. ಹೀಗೆ ಗೋವಾ ಪ್ರಾಂತ್ಯದ ಸುತ್ತಮುತ್ತ ಕೊಂಕಣಿ ಭಾಷೆಯ ಪ್ರಾದೇಶಿಕತ್ವದ ಪ್ರಾಬಲ್ಯ ಹೆಚ್ಚು. ಇದರ ಪ್ರಭಾವವನ್ನು ಇಂದಿಗೂ ಕಾರವಾರ ಜಿಲ್ಲೆಯ ಎಲ್ಲ ತಾಲೂಕುಗಳು, ವಿಶೇಷವಾಗಿ ನಮ್ಮ ಶಿರಸಿಯಲ್ಲಿ ಕೊಂಕಣಿ ಮಾತನಾಡುವವರು ಹೆಚ್ಚಿನವರು ಸಿಗುತ್ತಾರೆ. ನೀವು ಯಾವುದೇ ಬ್ಯಾಂಕ್ಗೆ ಹೋಗಿ ಅಲ್ಲಿ ಕೊಂಕಣಿಗರದ್ದೇ ಜಾಸ್ತಿ ಪ್ರಾಬಲ್ಯ. ಹಾಗಂತ ಇವರೇನು ಕನ್ನಡಿಗರು ಅಂತಲ್ಲ. ತಮ್ಮ ನಾಡನ್ನು ಬಿಟ್ಟು ನೂರಾರು ವರ್ಷಗಳಾದರೂ ಇಂದಿಗೂ ತಮ್ಮ ಮೂಲಬೇರನ್ನು ಇಂದಿಗೂ ಕಳಚಿಕೊಳ್ಳದ ಅಪ್ಪಟ `ಕೊಂಕಣಿ ಕನ್ನಡಿಗರು'. ವ್ಯಾಪಾರ, ಬ್ಯಾಂಕಿಂಗ್, ಹೋಟೇಲ್, ಚಿನ್ನದ ಕೆಲಸ, ಮಾರಾಟ ಇದರಲ್ಲಿ ಮಾತ್ರ ಇವರು ಅಪ್ಪಟ ಬುದ್ದಿವಂತರು. ಇಂತಹುದರಲ್ಲಿ ಬನವಾಸಿಯಲ್ಲಿ ಗೋವೆ ಸೀಮೆಯಿಂದ ಬಂದಂತಹ ಕೊಂಕಣಿಗರು ಕಾಣಸಿಗುತ್ತಾರೆ. ಹಾಗಂತ ಇವರು ಒಮ್ಮಿದೊಮ್ಮೆಲೆ ಗೋವಾ ಪ್ರಾಂತ್ಯದಿಂದ ನೇರವಾಗಿ ಹಾರಿಕೊಂಡು ಬನವಾಸಿಗೆ ಬಂದವರಲ್ಲ. ಅದು ಪ್ರಾಂತ್ಯ -ಪ್ರಾಂತ್ಯವನ್ನು ದಾಟಿ ನೂರಾರು ಕಾರಣಗಳು, ಸಂಸಾರ, ವ್ಯಾಪಾರ ವಹಿವಾಟು ಇನ್ನು ಹಲವು ಉದ್ದೇಶಗಳೊಂದಿಗೆ ಬನವಾಸಿಗೆ ಬಂದವರು. ಹೆಚ್ಚಿನವರ ಮನೆದೇವರು ಗೋವಾದಲ್ಲಿರುವ ಮಾಳಸಾದೇವಿ ಆಗಿದ್ದಾಳೆ. ಶೆಟ್ಟಿ, ಶೇಟ್, ಪಾಳ, ಕಾನಳ್ಳಿ ಇನ್ನು ಅನೇಕ ಅಡ್ಡ ಹೆಸರಿನ ಕೊಂಕಣಿ ಮನೆತನಗಳು ಬನವಾಸಿಯಲ್ಲಿವೆ. ಕಿರಾಣಿ ಅಂಗಡಿ, ಹೋಟೆಲ್, ಚಿನ್ನದ ಅಂಗಡಿ, ಭತ್ತದ ವ್ಯಾಪಾರಗಳಲ್ಲಿ ಹೆಚ್ಚಿನವರು ತೊಡಗಿಸಿಕೊಂಡಿದ್ದಾರೆ.



ಬನವಾಸಿಯಲ್ಲಿ ಉತ್ತರ ಕರ್ನಾಟಕದ ಲಿಂಗಾಯತರೇ ಹೆಚ್ಚು 



ಮುಳಗುಂದ, ಉಳಾಗಡ್ಡಿ, ದಾವಣಗೇರೆ, ಒಡೆಯರ್, ಕೆರೂಡಿ, ಉಗ್ರಾಣದ, ಗಾಣಿಗೇರ್, ಗೌಳಿ, ಪಾಟೀಲ್ ಹೀಗೆ ಇನ್ನು ಇತ್ಯಾದಿ ಇತ್ಯಾದಿ ಮನೆತನದ ಹೆಸರುಗಳನ್ನು ಹೊಂದಿರುವ ಲಿಂಗಾಯತ ಮನೆಗಳು ಬನವಾಸಿಯಲ್ಲಿ ಕಾಣಸಿಗುತ್ತಾರೆ. ಹೆಚ್ಚಿನ ಲಿಂಗಾಯತ ಮನೆಗಳು ಕೋಟೆ ಹೊರಗೆ ಅಂದರೆ ಸಂತೆಪೇಟೆ ಓಣಿಯಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ. ಇದರಲ್ಲಿ ಹೆಚ್ಚಿನ ಲಿಂಗಾಯತ ಕುಟುಂಬಗಳ ಮೂಲ ಬೇರುಗಳು ಉತ್ತರ ಕರ್ನಾಟಕ ಅದರಲ್ಲೂ ಬಯಲುಸೀಮೆ ಪ್ರಾಂತ್ಯಗಳಿಂದ ಬಂದಿರುವುದು ಮೇಲುನೋಟಕ್ಕೆ ಅವರರವರ ಮನೆತನ ಹೆಸರಿನಿಂದ ನೋಡಿದಾಗ ಎದ್ದು ಕಾಣುತ್ತದೆ. ಅದಲ್ಲದೇ ಇಂದಿಗೂ ಮನೆತನಗಳ ಹೆಚ್ಚಿನ ಸಂಬಂಧಿಕರು ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ-ಧಾರವಾಡ, ದಾವಣಗೇರೆ, ಹಂಸಭಾವಿ, ಇಂಡಿ ಇನ್ನು ಹಲವಾರು ಉತ್ತರಕರ್ನಾಟಕದಲ್ಲಿ ಊರುಗಳಲ್ಲಿ ಹರಿದು ಹಂಚಿಕೊಂಡಿದ್ದಾರೆ. ಹೆಣ್ಣುಗಂಡು ಸಂಬಂಧಗಳ ಕೂಡಿಕೆ ಎಲ್ಲವೂ ಇದೇ ಊರುಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಮನೆತನಗಳಲ್ಲಿ ಕೆಲವರು ಬೆಂಗಳೂರು, ಅಮೇರಿಕ ಸೇರಿದವರೂ ಕೂಡ ಇದ್ದಾರೆ. ಮನೆತನದವರಲ್ಲಿ ಭತ್ತದ ಮಿಲ್, ಕೃಷಿ, ಗ್ಯಾಸ್ ಎಜೆನ್ಸಿ, ಟ್ರಾನ್ಸ್ ಪೋರ್ಟ್ ಇನ್ನು ಹಲವು  ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ.



ತೆಲಗು ರೆಡ್ಡಿಗಳು ಬಂದದ್ದು

ಬನವಾಸಿಯಲ್ಲಿ ಸುಮಾರು ಹೇರ್ ಕಟ್ಟಿಂಗ್ ಆಂಡ್ ಡ್ರೆಸ್ಸರ್ಸ್ ಅಂಗಡಿಗಳು ಸುಮಾರು 5-6 ಇರಬಹುದು. ಅಂಗಡಿಗಳನ್ನು ರೆಡ್ಡಿಗಳು, ತೆಲಗರ್ ಎಂಬ ಅಡ್ಡ ಹೆಸರಿನ ಕುಟುಂಬಗಳು ನಡೆಸುತ್ತಿವೆ. ಇವರ ಮನೆಮಾತು ತೆಲುಗು. ಇದರಲ್ಲಿ ಕೆಲವರು ಅವರವರಿಗೆ ಸಂಬಂಧಿಕರಾಗಿದ್ದಾರೆ. ಇವರೂ ಎಲ್ಲಿಂದ ವಲಸೆ ಬಂದರು ಅನ್ನುವುದು ನನಗೆ ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ.



ಮರೆಯಲಾಗದು...
 ಇಂದಿಗೂ ಬನವಾಸಿಯ ಸುತ್ತಮುತ್ತ ದಟ್ಟವಾದ ಕಾಡು  ಅಂದಿನ ದಿನಗಳಲ್ಲಿದ್ದ ಕಾಡಿಗೆ ಸಾಕ್ಷಿಯಾಗುತ್ತದೆದಟ್ಟ ಕಾಡು ಅಂದ ಮೇಲೆ ಕ್ರೂರ ಪ್ರಾಣಿಗಳು ವಾಸಿಸುತ್ತಿದ್ದವು. ಬನವಾಸಿಯ ಕೆಲವು ಹಳೆತಲೆಗಳು ರಾತ್ರಿಯಾಯಿತು ಅಂದರೆ ಮನೆಬಿಟ್ಟು ಹೊರಬರದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಉಪ್ಪಾರ ಕೇರಿ, ಪಂಪಾವನ, ಕಡೆ ಕತ್ರಿ ಸರ್ಕಲ್ ದಾಟಿ ಹೋಗಲಿಕ್ಕೆ ಹೆದರುತ್ತಿದ್ದರು. ಹುಲಿ, ಚಿರತೆ, ಕಾಡುಹಂದಿಯಂತಹ ಕೆಟ್ಟ ಪ್ರಾಣಿಗಳು ಓಡಾಡುತ್ತಿದ್ದವು ಅಂತ ನೆನಪಿಸಿಕೊಳ್ಳುತ್ತಾರೆ. ಅಷ್ಟು ಸಮೃದ್ಧವಾದ ಕಾಡು ನಮ್ಮ ಬನವಾಸಿಯ ಸುತ್ತಮುತ್ತ ಇತ್ತು. ಅಂತಹ ವಿಶೇಷ ಪ್ರಾಣಿಪಕ್ಷಿಗಳು ಊರಲ್ಲಿ ಇದ್ದವು. ಕೆಲವು ತಿಂಗಳ ಹಿಂದೆ ನಾನು ಬನವಾಸಿಯಿಂದ ಸೊರಬಕ್ಕೆ ಬೈಕಿನಲ್ಲಿ ಹೋಗುತ್ತಿದ್ದಾಗ ನರೂರು ದಾಟಿ ಕೆರೆಕೊಪ್ಪ ಮುಟ್ಟಿಯಾಗಿತ್ತು. ಅಕ್ಕ ಪಕ್ಕ ದೊಡ್ಡ ಕಾಡು. ಹೋಗುತ್ತಿದ್ದ ನಮ್ಮ ಬೈಕಿಗೆ ಅಡ್ಡವಾಗಿ ಒಂದು ದೊಡ್ಡ ಕಡವೆ (ಸಾರಂಗ) ಓಡಿಹೋಯಿತು. ಅದರ ಹಿಂದೆ ಅದರ ಹಿಂಡು ಕೂಡ ಇತ್ತು. ರೂಟಲ್ಲಿ ಓಡಾಡುವವರು ಅನೇಕ ರೀತಿಯ ಪ್ರಾಣಿಗಳನ್ನು ನೋಡಿದವರಿದ್ದಾರೆ. ಆದರೆ ಮೊದಲಿನಿಂತೆ ಕಾಡುಪ್ರಾಣಿಗಳು ಕಾಣುವುದಿಲ್ಲ. ಅರಣ್ಯ ಬರಿದಾಗಿ ಸಾಗುವಳಿ ಜಮೀನಾಗಿದೆ. ಮರಗಳನ್ನು ಕಡಿದು ತಮ್ಮದೇ ಜಮಿನು ಮಾಡಿಕೊಂಡವರು ಏಷ್ಟು ಜನವೋ..! ಒಟ್ಟಿನಲ್ಲಿ ನಮ್ಮ ತಾತ, ಮುತ್ತಾತರ ಕಾಲದಲ್ಲಿದ್ದ ವೈಭವ ಈಗ ಕಿಂಚಿಷ್ಟು ಇಲ್ಲ. ಹುಡುಕುತ್ತಾ ಹೋದರೆ ಅದರ ಸಣ್ಣ ಕುರುಹುಗಳು ಸಿಗಬಹುದಷ್ಟೇ..

 ಏನಂತೀರಿ ಬನವಾಸಿಯ ವೀರಪುತ್ರರೇ..!



Photo Galary (Couresy : Prashant Sangeetgar, Banavasi )
ಸಾಲಂಕೃತ ಶ್ರೀ ಮಧುಕೇಶ್ವರ ದೇವರು
















ಸಿಎಮ್ ಸದಾನಂದ ಗೌಡರು ಬನವಾಸಿಗೆ ಭೇಟಿ ನೀಡಿದ ಸಂಧರ್ಭ


















ಬನವಾಸಿ ದೊಡ್ಡ ರಥದ ಗಾಲಿಗಳು















ದೇವರ ವೈದಿಕ ಕಾರ್ಯದ ಒಂದು ನೋಟ




























ಬನವಾಸಿ-ಸೊರಬ ರೋಡ್
















ದುರ್ಗಾ ಪರಮೇಶ್ವರಿ-ಪಂಪವನ