Sunday, 3 February 2013

ಕನ್ನಡ ಕಿರುತೆರೆಯ ಜನಪ್ರಿಯ ನಟ ಅನಂತವೇಲು ಅವರ ಬದುಕಿನ ಅನುಭವ



ಕಿರುತೆರೆಯ ಅಜ್ಜ, ತಂದೆ, ಮಾವ ಹೀಗೆ ಎಲ್ಲ ರೀತಿಯ ಸಾಮಾಜಿಕ, ಪೌರಾಣಿಕ ಪಾತ್ರಗಳನ್ನು ಮಾಡಿ ಸೈ ಎನ್ನಿಸಿಕೊಂಡವರು ಹಿರಿಯ ರಂಗಭೂಮಿ ನಟ, ಸಿನಿಮಾ ಕಲಾವಿದ ಅನಂತವೇಲು. ಬಾಲ್ಯದಲ್ಲಿ ಕಡುಬಡತನವನ್ನೇ ಉಂಡು, ಹೇಗೋ ಎಸ್ಎಸ್ಎಲ್ಸಿ ಮುಗಿಸಿ ಮಿಲ್ಟ್ರಿ ಸೇರಿ ಹತ್ತು ವರ್ಷ ಸೇವೆ ಮಾಡಿ ಬಂದವರು. 17 ವರ್ಷ ಎಚ್ಎಂಟಿ ನೌಕರರಾಗಿ ದುಡಿದು, ಜೊತೆಜೊತೆಗೇ ನಾಟಕ ಮಾಡುತ್ತಾ, 80ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದವರು. ಹಾಗೆಯೇ 20 ವರ್ಷಗಳಿಂದ ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರ ಮಾಡುತ್ತಾ, 30 ಸಾವಿರ ಎಪಿಸೋಡ್ಗಳಲ್ಲಿ ನಟಿಸಿದ್ದಾರೆ ಎಂದರೆ ಸಾಧಾರಣ ವಿಚಾರವಲ್ಲ. ಕಾರಣಕ್ಕೆ ಇವರೊಬ್ಬ ಕನ್ನಡದ ಕಲಾಭೀಷ್ಮ. ಇಂಥ ಪ್ರಬುದ್ಧ ನಟನ ಜೊತೆ 'ತಂಗಾಳಿ' ಸೀರಿಯಲ್ನ ಶೂಟಿಂಗ್ ಸ್ಪಾಟ್ನಲ್ಲೇ ಮಾತುಕತೆಗೆ ಇಳಿದಾಗ...

ಮೂಲತಃ ನಮ್ಮ ಊರು ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ಸಮೀಪದ ಅಗಲಿಯ. ಇಲ್ಲೇ ನಾನು ಹುಟ್ಟಿದ್ದು. ತಂದೆ ಶ್ರೀನಿವಾಸ ಅಯ್ಯಂಗಾರ್, ತಾಯಿ ಲಕ್ಷ್ಮಮ್ಮಾಳ್. ನಮ್ಮದು ತೀರಾ ಬಡತನದ ಕುಟುಂಬ. ತಂದೆ ವಿಲೇಜ್ ಅಕೌಂಟೆಂಟ್ ಆಗಿದ್ದರು. ಹಾಗಾಗಿ ಹಾಸನ, ಚಿಕ್ಕೋಡಿ ಹೀಗೆ ಊರೂರು ಸುತ್ತೋದೇ ನಮ್ಮ ಪಾಡಾಗಿತ್ತು. ನಮ್ಮ ತಂದೆ-ತಾಯಿಗೆ 12 ಜನ ಮಕ್ಕಳು. ಪೈಕಿ ಮಿಲ್ಟ್ರಿಯಲ್ಲಿದ್ದ ಅಣ್ಣ ರಂಗರಾಜು, ಚಾಮರಾಜನಗರದಲ್ಲಿ ಎಲ್ಐಸಿ ಆಫೀಸರ್ ಆಗಿರುವ ತಮ್ಮ ಶ್ರೀಧರ್, ನಾನು ಮಾತ್ರ ಉಳಿದದ್ದು. ಮಿಕ್ಕವರೆಲ್ಲ ಆಗಿನ ಕಾಲರಾ, ಪ್ಲೇಗು ಇನ್ನಿತರೆ ಕಾಯಿಲೆಗಳು ಬಂದಾಗ ಚಿಕಿತ್ಸೆ ಕೊಡಿಸಲಾರದೆ ಸತ್ತು ಹೋಗುತ್ತಿದ್ದರು. ಹೀಗಾಗಿ ನಾನು ಎಷ್ಟನೆಯವನು ಎಂಬುದು ನನಗೂ ಗೊತ್ತಿಲ್ಲ. ಶಾಲಾ ದಾಖಲಾತಿ ಪ್ರಕಾರ ನನ್ನ ಜನ್ಮ ದಿನಾಂಕ 2 ಮೇ 1953.
ನಾನು ಕುರಿದೊಡ್ಡಿಯಲ್ಲಿ ಹುಟ್ಟಿದ್ದು ಅಂತ ಅಮ್ಮ ಹೇಳುತ್ತಿದ್ದಳು. 7ನೇ ತರಗತಿಯವರೆಗೆ ನನ್ನ ವಿದ್ಯಾಭ್ಯಾಸ ಹಾಸನದಲ್ಲೇ ನಡೆಯಿತು. ಆಮೇಲೆ ಮಿಲ್ಟ್ರಿ ಸೇರುವ ಆಸೆಯಿಂದ ಬೆಂಗಳೂರಿನ ಅಣ್ಣನ ಮನೆಗೆ ಬಂದೆ. ಭೂಸೇನೆಯ ಸಾಹಸ ಕಾರ್ಯಗಳು ನನಗೆ ತುಂಬಾ ಇಷ್ಟವಾಗಿದ್ದವು. 1965 ಇಂಡಿಯಾ-ಪಾಕಿಸ್ತಾನ್ ಯುದ್ಧದ ದೃಶ್ಯಗಳನ್ನು ಸಿನಿಮಾ ಥಿಯೇಟರ್ನಲ್ಲಿ ನೋಡಿದ್ದು, ನನ್ನಲ್ಲಿ ಸೈನಿಕನಾಗುವ ಅಗಾಧ ಆಸೆಯನ್ನು ತುಂಬುವಂತೆ ಮಾಡಿತು. ಹೀಗೆ ಸೈನಿಕ ಆಗಬೇಕು ಎಂಬ ಹಂಬಲವನ್ನು ಬಾಲ್ಯದಲ್ಲೇ ಹೊತ್ತಿದ್ದೆ. ಆದರೆ, ವಯಸ್ಸಿಗೆ ನಾನು ಮಿಲ್ಟ್ರಿ ಸೇರಲು ಆಗಲಿಲ್ಲ. ಮತ್ತೆ ವಿದ್ಯಾಭ್ಯಾಸ ಮುಂದುವರಿಸಿದೆ. ಮಲ್ಲೇಶ್ವರಂನಲ್ಲಿ ನನ್ನ ಚಿಕ್ಕಪ್ಪನ ಮನೆಯಲ್ಲಿ ಉಳಿದುಕೊಂಡಿದ್ದೆ. ಮನೆಯಲ್ಲಿ ತುಂಬಾ ಕಷ್ಟ ಇದ್ದುದರಿಂದ ದುಡಿಯಲೇಬೇಕಾದ ಅನಿವಾರ್ಯತೆ ಇತ್ತು. ಅದಕ್ಕಾಗಿ ಎರಡು ಕೆಲಸಗಳನ್ನು ಹಿಡಿದುಕೊಂಡಿದ್ದೆ. ಬೆಳಗ್ಗೆ ಹಳೆ ಸೈಕಲ್ ಹಿಡಿದು ಹೊರಟರೆ 250 ಮನೆಗೆ ಪೇಪರ್ ಹಾಕುತ್ತಿದ್ದೆ. ಸಂಜೆ ಹೊತ್ತು ಒಂದು ಅಂಗಡಿ ಕೆಲಸಕ್ಕೆ ಹೋಗುತ್ತಿದ್ದೆ. ಎರಡೂ ಕಡೆಯಿಂದ ತಿಂಗಳಿಗೆ 45 ರೂಪಾಯಿ ಸಿಗುತ್ತಿತ್ತು. ಇದರಿಂದಲೇ ನಾನು ಎಸ್ಎಸ್ಎಲ್ಸಿವರೆಗೆ ಓದಿಕೊಂಡೆ.

ಉದರ ನಿಮಿತ್ತಂ ಬಹುಕೃತ ವೇಷಂ
ಎಸ್ಎಸ್ಎಲ್ಸಿ ಆದ ಬಳಿಕ ಮಿಲ್ಟ್ರಿ ಸೇರಿಕೊಂಡೆ. ಮೊದಲಿಗೆ ಜಬ್ಬಲ್ಪುರ, ಆಮೇಲೆ ಜಮ್ಮು-ಕಾಶ್ಮೀರದಲ್ಲಿ ಕೆಲಸ ಮಾಡಿದೆ. ಆಗ 12+3=15 ವರ್ಷ ಸೇವೆ ಮಾಡಲೇಬೇಕಿತ್ತು. ಮಧ್ಯೆ ಓಡಿಬಂದರೆ ಹಿಡಿದುಕೊಂಡು ಶಿಕ್ಷೆ ಕೂಡ ಕೊಡುತ್ತಿದ್ದರು. ಹಾಗೆ ಬರಲೇಬೇಕು ಅಂತ ತೀರ್ಮಾನ ಮಾಡಿದರೆ, ಅದಕ್ಕೆ ತಕ್ಕ ಸಮಜಾಯಿಷಿ ಕೊಡಬೇಕಿತ್ತು. ಅದೆಲ್ಲ ಪರಿಶೀಲನೆ ಆಗಿ ಅನುಮತಿ ಮೇರೆಗೆ ಮಾತ್ರ ಮಿಲ್ಟ್ರಿಯಿಂದ ನಿಗದಿತ ಅವಧಿಗೆ ಮುಂಚೆ ಬರಬಹುದಿತ್ತು. ನಾನು ಹೀಗೆ ಮನೆಯ ಪರಿಸ್ಥಿತಿಯ ಇಕ್ಕಟ್ಟಿಗೆ ಸಿಲುಕಿ 10 ವರ್ಷಕ್ಕೆ ಹುಟ್ಟುರಾದ ಹಾಸನಕ್ಕೆ ವಾಪಸ್ ಬಂದುಬಿಟ್ಟೆ. ಬಂದ ಮೇಲೆ ಏನಾದರೂ ಜೀವನಕ್ಕೆ ಕೆಲಸ ಮಾಡಲೇಬೇಕಿತ್ತು. ಬದುಕಿಗಾಗಿ ಹತ್ತಾರು ಕೆಲಸಗಳನ್ನು ಮಾಡಿದೆ. ಪ್ರಿಂಟಿಂಗ್ ಪ್ರೆಸ್ ಇಟ್ಟುಕೊಂಡಿದ್ದೆ, ಕೊನೆಗೂ ಅದು ಕೂಡ ಕೈ ಹತ್ತಲಿಲ್ಲ. ಹೀಗೆ ಆದರೆ ಜೀವನ ನಡೆಸುವುದು ತುಂಬಾ ಕಷ್ಟ ಅಂತ ತಿಳಿದು ಮೈಕೋದಲ್ಲಿ ಕೆಲಸಕ್ಕೆ ಸೇರಿಕೊಂಡೆ. ಮೈಕೋದಲ್ಲಿ ಒಂದುವರೆ ವರ್ಷ ಮಾತ್ರ ಕೆಲಸ ಮಾಡಿದೆ. ಬಳಿಕ ಇದನ್ನೂ ಬಿಟ್ಟು ಎಚ್ಎಂಟಿಗೆ ಸೇರಿದೆ. ಇಲ್ಲೇ ನಾನು ಸುಮಾರು 17 ವರ್ಷಗಳ ಸುದೀರ್ಘವಾಗಿ ಸೆಕ್ಯುರಿಟಿ ಆಫೀಸರ್ ಆಗಿ ಕೆಲಸ ಮಾಡಿದ್ದು. 1983ರಲ್ಲಿ ರೋಹಿಣಿ ಜೊತೆ ನನ್ನ ಮದುವೆಯಾಯಿತು. ಬದುಕೇ ನನಗೆ ದೊಡ್ಡ ಪಾಠ ಶಾಲೆಯಾಗಿತ್ತು. ಜೀವನಕ್ಕಾಗಿ ನಾನಾ ತರಹದ ಕೆಲಸಗಳನ್ನು ಮಾಡಿದ್ದೇನೆ. ಈಗ ಹಳೆಯದನ್ನೆಲ್ಲಾ ನೆನಪಿಸಿಕೊಂಡರೆ ಅದೆಲ್ಲಾ ಒಂದು ಕನಸಿನಂತೆ ಕಣ್ಣಿಗೆ ಕಟ್ಟುತ್ತದೆ


ಸಿನಿಮಾ ಪ್ರವೇಶ
1987ರಲ್ಲಿ ನನಗೆ ಸಿನಿಮಾಕ್ಕೆ ಕರೆ ಬಂತು. 'ಚಕ್ರವರ್ತಿ ' ನನ್ನ ಮೊದಲ ಸಿನಿಮಾ. ಇದಕ್ಕೂ ಮುಂಚೆ ನಾನು ಬಾಲ್ಯದಿಂದಲೇ ರಂಗಭೂಮಿಯ ಹುಚ್ಚು ಇತ್ತು. ಶಾಲೆಯ ದಿನಗಳಲ್ಲೇ ನಾಟಕ ಮಾಡುತ್ತಿದ್ದೆ. ಬಳಿಕ ಸಕ್ರೀಯವಾಗಿ ಕನ್ನಡ ರಂಗಭೂಮಿಗೆ ಸೇರ್ಪಡೆಯಾದೆ. ನೂರಾರು ನಾಟಕಗಳಲ್ಲಿ ಅಭಿನಯಿಸಿದೆ. ಇದೆಲ್ಲವೂ ನನಗೆ ಸಿನಿಮಾ ಅಭಿನಯಕ್ಕೆ ನೆರವಾಯಿತು. ಸಿನಿಮಾ ಹುಚ್ಚು ತುಂಬಾ ಇತ್ತು. ಸಿನಿಮಾ ಅವಕಾಶ ಕೋರಿ, ಪತ್ರ ಬರೆದು ನನ್ನ ಫೋಟೋವನ್ನು ನಿರ್ಮಾಪಕರು, ನಿರ್ದೇಶಕರಿಗೆ ಕಳುಹಿಸಿಕೊಡುತ್ತಿದ್ದೆ. ಅದ್ಯಾವುದು ವರ್ಕಔಟ್ ಆಗಲೇ ಇಲ್ಲ. ರಂಗಕರ್ಮಿ ನಾರಾಯಣಸ್ವಾಮಿಗಳಿಗೆ ಡಿ. ರಾಜೇಂದ್ರಬಾಬು ಸ್ನೇಹಿತರು. ಇವರ ಮೂಲಕ ನನಗೆ ಸಿನಿಮಾ ಪ್ರವೇಶ ಆಯ್ತು. ಸುಮಾರು 89 ಚಿತ್ರಗಳಲ್ಲಿ ಅಭಿನಯಿಸಿರುವೆ. ಸಿನಿಮಾದಲ್ಲಿ ಪೋಷಕ ಕಲಾವಿದರಿಗೆ ಕಿಮ್ಮತ್ತೇ ಇರಲಿಲ್ಲ. ಸಂಪೂರ್ಣ ಪ್ರತಿಭೆಯನ್ನು ಅಭಿವ್ಯಕ್ತಿಸಲು ಅವಕಾಶವನ್ನೂ ಕೊಡುತ್ತಿರಲಿಲ್ಲ. ಬರೀ ಹೀರೋ-ಹೀರೋಯಿನ್ ವೈಭವೀಕರಿಸುತ್ತಾರೆ. ಇಲ್ಲಿ ಕಥೆ-ಪಾತ್ರಗಳೇ ಹೀರೋ ಆಗದೆ ಇರೋದೆ ಇದಕ್ಕೆ ಕಾರಣ. ಹಿಂದಿನ ಸಿನಿಮಾಗಳಲ್ಲಿ ಪೋಷಕ ಕಲಾವಿದರಿಗೆ ಉತ್ತಮ ಅವಕಾಶ ಇತ್ತು. ಅವರು ಮೂರ್ಕಾಲ್ಕು ಸೀನ್ ಬಂದರೂ ಜನರು ಗುರುತಿಸುವ ಮಟ್ಟಿಗೆ ಪಾತ್ರ ಇತ್ತು. ಆದರೆ, ನನಗೆ ಸಿನಿಮಾದಲ್ಲಿ ಸಿಕ್ಕ ಪಾತ್ರಗಳು ನಿಜಕ್ಕೂ ತೃಪ್ತಿ ಕೊಟ್ಟಿಲ್ಲ. ಮತ್ತೆ ಸಿನಿಮಾ ಮಾಡಲೇಬಾರದು ಎಂಬಷ್ಟರಮಟ್ಟಿಗೆ ಬೇಸರ ತಂದಿರುವುದು ಕೂಡ ಉಂಟು. ಈಗ ಒಳ್ಳೆಯ ಅವಕಾಶಗಳು ಬರುತ್ತಿವೆ, ಆದರೆ ಸೀರಿಯಲ್ ಬಿಟ್ಟು ಸಿನಿಮಾ ಮಾಡಲಿಕ್ಕೆ ಆಗುತ್ತಿಲ್ಲ.

ನನ್ನ ಸೀರಿಯಲ್ ಜಗತ್ತು
1991-92ರಲ್ಲಿ ನಾನು ಅಭಿನಯಿಸಿದ ಮೊದಲ ಸೀರಿಯಲ್ 'ಪ್ರತಿಬಿಂಬ'. ಇದರ ನಂತರ  ತುಂಬಾ ಹೆಸರು ತಂದುಕೊಟ್ಟ ಧಾರಾವಾಹಿ ಅಂದರೆ 'ಕಾವ್ಯಾಂಜಲಿ'. ಭಾರತದಲ್ಲೇ ಮೊದಲ ಬಾರಿಗೆ 2000 ಎಪಿಸೋಡ್ ದಾಟಿರುವ 'ಮಾಂಗಲ್ಯ' ಅಂತೂ ಇಡೀ ಕರ್ನಾಟಕದಲ್ಲಿ ಮನೆಮನೆಯ ಮಾತಾಗಿದೆ. ಇದರಲ್ಲಿ ಹುಟ್ಟಿನಿಂದ ಸಾಯುವತನಕದ ಎಲ್ಲ ವೈವಿಧ್ಯಮಯ ಪಾತ್ರಗಳನ್ನು ಮಾಡಿದ್ದೇನೆ. ಜನರು ನನ್ನನ್ನು  ಇವತ್ತಿಗೂ 'ನಮಸ್ಕಾರ ನಾರಣಪ್ಪನವರೇ' ಅಂತ ಕರೆಯುತ್ತಾರೆ. ಇಂಥ ಜನರ ಪ್ರೀತಿ ವಿಶ್ವಾಸಕ್ಕಿಂತ ಇನ್ನೇನು ಬೇಕು. ಮತ್ತೆ 'ಮಾಯಾಮೃಗ', 'ಬಣ್ಣದ ಬುಗುರಿ', 'ಅಭಿಮಾನ', 'ಬಾಂಧವ್ಯ', 'ಕಾವ್ಯಾಂಜಲಿ', 'ಬದುಕು', 'ರಾಧಾ', 'ಸುಕನ್ಯಾ', 'ಸಂಜೀವಿನಿ', 'ಗುಪ್ತಗಾಮಿನಿ', 'ಅಣ್ಣ ಬಸವಣ್ಣ', 'ವೆಂಕಟೇಶ ಮಹಿಮೆ' 'ಸೀತೆ', 'ತಂಗಾಳಿ', 'ವಸುದೈವ ಕುಟುಂಬ', 'ಮಹಾಭಾರತ' ಹೀಗೆ ನೂರಾರು ಧಾರಾವಾಹಿಗಳಲ್ಲಿ ನಟಿಸಿರುವೆ. ಇದುವರೆಗೆ ಹತ್ತು ಸಾವಿರಕ್ಕೂ ಹೆಚ್ಚು ಎಪಿಸೋಡ್ಗಳಲ್ಲಿ ಅಭಿನಯಿಸಿರುವ ಹೆಮ್ಮೆ ನನ್ನದು. ಈಗಲೂ ಆಕಾಶವಾಣಿ, ರಂಗಭೂಮಿ ಚಟುವಟಿಕೆಗಳಲ್ಲಿ ಭಾಗವಹಿಸಲು ಕರೆಗಳು ಬರುತ್ತಿವೆ. ಆದರೆ, ಸೀರಿಯಲ್ ಬ್ಯುಸಿಯಲ್ಲೇ ನಾನು ಇರುವುದರಿಂದ ಸಾಧ್ಯವಾಗುತ್ತಿಲ್ಲ.
ದೂರದರ್ಶನದಲ್ಲಿ ಪ್ರಸಾರವಾದ 'ಗಂಗೋತ್ರಿ' ಸೀರಿಯಲ್ನ ನನ್ನ ಪಾತ್ರವೂ ಅದ್ಭುತವಾಗಿತ್ತು. ಇದರಿಂದಲೂ ನನಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ತಂದೆ-ತಾಯಿ, ಹೆಣ್ಣು ಮಕ್ಕಳ ಬಾಂಧವ್ಯ, ನಿಜಕ್ಕೂ ಇದೊಂದು ಮನಮಿಡಿಯುವಂತಹ ಸೆಂಟಿಮೆಂಟ್ ಕಥೆ. ಈಗ ಬರುತ್ತಿರುವ 'ವಸುದೈವ ಕುಟುಂಬ' ಕೂಡ ನಮ್ಮ ಸಂಸ್ಕೃತಿಯನ್ನು ಉಳಿಸಿಬೆಳೆಸುವ ನಿಟ್ಟಿನಲ್ಲಿ ಬರುತ್ತಿರುವ ಅಪರೂಪದ ಸೀರಿಯಲ್. ಹಾಗೆ ನೋಡಿದರೆ, ಇವತ್ತಿನ ಎಲ್ಲ ಧಾರಾವಾಹಿಗಳು ಒಂದೊಂದು ಕಾರಣಕ್ಕೆ ಇಷ್ಟವಾಗುತ್ತವೆ. ಮನೆಯವರನ್ನು ಒಂದೆಡೆ ಕೂಡಿಸಿ ನೋಡುವ ಶಕ್ತಿ ಸೀರಿಯಲ್ಗಳಿಗೆ ಇವೆ. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಕೌಟುಂಬಿಕ ಹೀಗೆ ಜನಮೆಚ್ಚುಗೆ ಪಡೆಯುತ್ತಿವೆ. ಈಗ ನಾನು ದಶರಥ ಮಾಡಿ ಭೀಷ್ಮನ ಪಾತ್ರ ಮಾಡುತ್ತಿರುವ 'ಮಹಾಭಾರತ' ಪೌರಾಣಿಕ ಧಾರಾವಾಹಿಯನ್ನು ನಿರ್ಮಿಸುತ್ತಿರುವವರು ಬಾಂಬೆಯವರು. ಅವರು ಕನ್ನಡಕ್ಕೆ ಬಂದು ಎಂಥ ಅದ್ಭುತವಾದ ಸೆಟ್ ಹಾಕಿ ಸೀರಿಯಲ್ ಮಾಡುತ್ತಿದ್ದಾರೆ ಎಂದರೆ ನಮ್ಮ ಧಾರಾವಾಹಿಗಳ ಬಗ್ಗೆ ನಿಜಕ್ಕೂ ಹೆಮ್ಮೆ ಆಗುತ್ತದೆ.     

ಅಮ್ಮ ಇಂದಿಗೂ ಕಾಡುತ್ತಿದ್ದಾಳೆ
ಇಲ್ಲಿಯವರೆಗಿನ ನನ್ನ ಜೀವನವನ್ನು ಒಮ್ಮೆ  ತಿರುಗಿ ನೋಡಿದಾಗ ನನಗೆ ಅಮ್ಮ ಬಿಟ್ರೆ ಬೇರೆ ಯಾರೂ ನೆನಪಾಗೋದೇ ಇಲ್ಲ. ತುಂಬಾ ದೊಡ್ಡ ಮನಸ್ಸಿನ ಕಷ್ಟಜೀವಿ ಆಕೆ. ನಮಗೋಸ್ಕರ, ಮಕ್ಕಳಿಗೋಸ್ಕರ ತುಂಬಾ ಕಷ್ಟಪಟ್ಟಿದ್ದಳು. ಅಂತಹ ಮಹಾತಾಯಿ ಈಗ ನಮ್ಮೊಂದಿಗೆ ಇಲ್ಲಇಂದು ನಾನು ಕಲಾ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿರಬಹುದು, ಹಣ ಮಾಡಿರಬಹುದು. ಆದರೆ ನನ್ನ ಯಶಸ್ಸಿನ ಜೀವನವನ್ನು ನನ್ನ ಅಮ್ಮ ನೋಡಲಿಲ್ಲವಲ್ಲ ಅನ್ನುವ ಕೊರಗು ಇಂದಿಗೂ ಕ್ಷಣಕ್ಷಣಕ್ಕೂ ಕಾಡುತ್ತಿದೆ. ಒಂದು ಬಾರಿ ನನ್ನನ್ನು ಟೀವಿಯಲ್ಲಿ ನೋಡಿದ್ದರೆ, ಒಂದು ಬಾರಿ ಅಮ್ಮನನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದರೆ ಅನ್ನಿಸಿ ಮನಸ್ಸು ಚಡಪಡಿಸುತ್ತದೆ. ಬರೀ ಕಷ್ಟದಲ್ಲಿದ್ದ ಅನಂತವೇಲುವನ್ನು ನೋಡಿದ್ದಳೇ ವಿನಹ ಯಶಸ್ಸಿನ ಅನಂತವೇಲುವನ್ನು ಒಮ್ಮೆಯಾದರೂ ಆಕೆ ನೋಡಿಕೊಂಡು ಹೋಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಂತ ಎಷ್ಟೋ ಸಾರಿ ಅಂದುಕೊಂಡಿರುವೆ. ಆದರೆ ನನ್ನ ಆಲೋಚನೆಗಳೆಲ್ಲ ಬರೀ ಕನಸಾಗಿಬಿಟ್ಟವಲ್ಲ ಅಂತ ನೋವು ಕಾಡಿದ್ದುಂಟು. ನಿಜವಾಗಿಯೂ ತಂದೆ-ತಾಯಿಗಿಂತ ದೊಡ್ಡ ದೇವರು ಪ್ರಪಂಚದಲ್ಲಿ ಇಲ್ಲವೇ ಇಲ್ಲ. ಯಾರು ತಂದೆ-ತಾಯಿಯ ಸೇವೆಯನ್ನು ಮಾಡುತ್ತಾನೋ, ಖಂಡಿತ ಆತ ಜೀವನದಲ್ಲಿ ಬಹುದೊಡ್ಡದನ್ನು ಸಾಧಿಸುತ್ತಾನೆ. ಶಕ್ತಿ ನಮ್ಮನ್ನು ರಕ್ಷಣೆಯಾಗಿ  ಕಾಪಾಡುತ್ತೆ. ತಾಯಿ ಇದ್ದಾಗ ನಮಗ್ಯಾರಿಗೂ ಅವರ ಬೆಲೆ ಅರಿವಾಗೋದಿಲ್ಲ. ನಮ್ಮನ್ನು ಹೊತ್ತು, ಹೆತ್ತು ಸಾಕಿ ಸಲುಹಿದ ಮಹಾತಾಯಿಯನ್ನು ಪ್ರತಿಯೊಬ್ಬರು ಚೆನ್ನಾಗಿ ನೋಡಿಕೊಳ್ಳಬೇಕು. ಬದುಕಿನ ತರಹದ ಘಟನೆಗಳೇ ನಮ್ಮನ್ನು ತುಂಬಾ ಎತ್ತರಕ್ಕೆ ಬೆಳೆಸುತ್ತವೆ. ಮನಸ್ಸಿಗೆ ಹತ್ತಿರವಾದ ಇಂತಹ ಸಂಗತಿಗಳೇ ಧಾರಾವಾಹಿಗೆ ದೊಡ್ಡ ಜೀವಾಳವಾಗಿಬಿಡುತ್ತವೆ. ಜನರನ್ನು ನೋಡುವಂತೆ ಮಾಡುತ್ತವೆ. ಎಷ್ಟೋ ಜನ ನಾ ಮಾಡಿದ ಧಾರಾವಾಹಿ ಪಾತ್ರಗಳನ್ನು ಮೆಚ್ಚಿ ನಿಮ್ಮಂತಹ ತಂದೆ ನಮಗೆ ಸಿಗಲಿಲ್ಲವಲ್ಲ... ನಮ್ಮ ತಂದೆ ನಿಮ್ಮ ತರಹವೇ ಇದ್ರು, ಅವರನ್ನು ನಿಮ್ಮ ಪಾತ್ರದ ಮೂಲಕ ನೋಡುತ್ತಿದ್ದೇವೆ, ಮುಂದಿನ ಜನ್ಮದಲ್ಲದಾದರೂ ನಿಮ್ಮಂತಹ ತಂದೆ ಸಿಗಲಿ ಅಂತ ದೇವರಲ್ಲಿ ಸದಾ ಬೇಡಿಕೊಳ್ಳುತ್ತೇವೆ. ಹೀಗೆ ನೂರಾರು ಅಭಿಮಾನಿಗಳು ನಾನು ಮಾಡುತ್ತಿರುವ ಪಾತ್ರಗಳ ಬಗ್ಗೆ ಹೇಳ್ತಾನೇ ಇರುತ್ತಾರೆ. ಇದನ್ನೆಲ್ಲ ನೋಡಿದಾಗ ಜನರಿಗೆ ಕಾಡುವ ಜವಾಬ್ದಾರಿಯುತ ಪಾತ್ರಗಳನ್ನು ಮಾಡಿದ ದೊಡ್ಡ ತೃಪ್ತಿ ನನಗಿದೆ.

ಜೀವನದ ಆದರ್ಶ ವ್ಯಕ್ತಿಗಳು
ನಾನೊಬ್ಬ ಕಲಾವಿದನಾಗಿ ಡಾ. ರಾಜ್ಕುಮಾರ್ ಅವರನ್ನು ತುಂಬಾ ಆರಾಧಿಸುತ್ತೇನೆ. ಅವರ ವ್ಯಕ್ತಿತ್ವ, ಸರಳತೆ ಇಂದಿಗೂ ನನ್ನನ್ನು ಕಾಡುತ್ತೆ. ದೈಹಿಕವಾಗಿ ಅವ್ರು ನಮ್ಮ ಜೊತೆ ಇಲ್ಲದಿದ್ದರೂ, ಅವರ ಆದರ್ಶಗಳು ಇಂದಿಗೂ ಪ್ರಸ್ತುತ. ಅದೇ ರೀತಿ ನಾನು ತುಂಬಾ ಇಷ್ಟಪಡುವ ವ್ಯಕ್ತಿಗಳಲ್ಲಿ ಲಾಲ್ಬಹದ್ದೂರ್ ಶಾಸ್ತ್ರಿ, ಸರ್ ಎಂ. ವಿಶ್ವೇಶ್ವರಯ್ಯ, ಅಟಲ್ಬಿಹಾರಿ ವಾಜಪೇಯಿ ಪ್ರಮುಖರು. ನಾನು ಇವರ ಜೀವನ ಚರಿತ್ರೆಯನ್ನು ಓದಿದ್ದೇನೆ. ಹಣವೇ ಸರ್ವಸ್ವ ಅನ್ನುವ ಸಮಯದಲ್ಲಿ ಭೂಮಿಯ ಮೇಲೆ ತರಹದ ವ್ಯಕ್ತಿಗಳು ನಿಜವಾಗಿಯೂ ಬಾಳಿ ಬದುಕಿದ್ದಾರಾ ಅಂತ ಅನ್ನಿಸುವುದುಂಟು. ನನ್ನ ಆದರ್ಶದ ಮೂರು ವ್ಯಕ್ತಿಗಳು ಹಣ ಮಾಡಿದವರಲ್ಲ. ನಿಯತ್ತು, ಶ್ರದ್ಧೆಯನ್ನು ಜೀವನದಲ್ಲಿ ಅಡವಳಿಸಿಕೊಂಡವರು. ಸಾವಿರಾರು ಕೋಟಿಗಟ್ಟಲೇ ಆಸ್ತಿ ಮಾಡಿದವರಲ್ಲ. ಇಂದಿಗೂ ಅವರನ್ನು ನಾವು ನೆನಪಿಸಿಕೊಳ್ಳುತ್ತೇವೆ. ಅಂದರೆ ಹಣದಿಂದ ಸಾಧಿಸದ್ದನ್ನು ಅವರೆಲ್ಲ ತಮ್ಮತಮ್ಮ ವ್ಯಕ್ತಿತ್ವ ಹಾಗೂ ಬದುಕಿನಿಂದ ಲೋಕಕ್ಕೆ ಮಾರ್ಗದರ್ಶಿಯಾಗಿದ್ದಾರೆ.

ಆರೋಗ್ಯವಂತ ಮನಸ್ಸು ನನ್ನದು
ಪ್ರತಿಯೊಬ್ಬ ಕಲಾವಿದನೂ ಅವರವರ ಪಾತ್ರಕ್ಕೆ ಒಳ್ಳೆಯ ನ್ಯಾಯ ಒದಗಿಸಲೇಬೇಕಾಗುತ್ತದೆ. ಹಾಗಾಗಿ ಕಲಾವಿದನ ಮನಸ್ಸು ಮತ್ತು ಆರೋಗ್ಯ ಯಾವಾಗಲೂ ಚೆನ್ನಾಗಿರಲೇಬೇಕು. ನಿಟ್ಟಿನಲ್ಲಿ ನನ್ನ ಆರೋಗ್ಯದ ಕಡೆ ಅಪಾರ ಕಾಳಜಿ ವಹಿಸುತ್ತೇನೆ. ರಾತ್ರಿ ಮಲಗುವುದು ಎಷ್ಟೇ ತಡವಾದರೂ ಬೆಳಗ್ಗೆ ನಾಲ್ಕೂವರೆಗೆ ಎದ್ದುಬಿಡುತ್ತೇನೆ. ಮುಂಜಾನೆ ಸುಮಾರು ಐದಾರು ಕಿಲೋಮೀಟರ್ ನಡೆಯುತ್ತೇನೆ. ವ್ಯಾಯಾಮ ಮಾಡುತ್ತೇನೆ. ದೇವರ ಪೂಜೆ ಇಲ್ಲದೇ ಮನೆಬಿಟ್ಟು ಹೊರಡುವುದೇ ಇಲ್ಲ. ಮುಂಜಾನೆ ಇವೆಲ್ಲಾ ನಾನು ಮಾಡುತ್ತಾ ಶೂಟಿಂಗ್ನಲ್ಲಿ ಭಾಗಿಯಾಗುವುದರಿಂದ ಏನೋ ಒಂಥರ ಶಕ್ತಿ ನನ್ನ ದೇಹ ಹಾಗೂ ಮನಸ್ಸಿನಲ್ಲಿ ಅಡಗಿರುತ್ತೆ. ಡಾಕ್ಟ್ರ ಹತ್ತಿರ ಹೋಗೋದಿಲ್ಲ. ಯಾವುದೇ ಟೆಸ್ಟ್ ಮಾಡಿಸೋದಿಲ್ಲ. ನನ್ನ ಆರೋಗ್ಯವನ್ನು ನಾನೇ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಜೀವನದಲ್ಲಿ ಯಾವಾಗಲೂ ಪಾಸಿಟಿವ್ ಥಿಕಿಂಗ್ ಇರಲೇಬೇಕು. ಯಾವಾಗ ಋಣಾತ್ಮಕ ಚಿಂತನೆಯಲ್ಲಿ ನಾವು ತೊಡಗಿಸಿಕೊಂಡ್ರೆ, ಮಾನಸಿಕ ಸ್ವಾಸ್ಥ್ಯ ಖಂಡಿತ ಹಾಳಾಗುತ್ತೆ. ಹಾಗಾಗಿ ಮನಸ್ಸನ್ನು ಸದಾ ಖುಷಿಖುಷಿಯಾಗಿ, ಸತ್ಚಿಂತನೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಖಂಡಿತ ನಾವು ಮಾನಸಿಕವಾಗಿ ಬೆಳೆಯಲಿಕ್ಕೆ, ಸಾಧನೆ ಮಾಡಲಿಕ್ಕೆ ಸಾಧ್ಯ.

ನಮ್ಮದು ಸುಂದರ ಸರಳ ಕುಟುಂಬ
ನಮ್ಮದು ತುಂಬಾ ಚಿಕ್ಕ ಕುಟುಂಬ. ಹೆಂಡತಿ ರೋಹಿಣಿ ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇನ್ನೇನು ಕೆಲವೇ ವರ್ಷಗಳಲ್ಲಿ ಆಕೆಯೂ ನಿವೃತ್ತಿ ಆಗುತ್ತಿದ್ದಾಳೆ. ನನ್ನ ಕೆಲಸಕ್ಕೆ ಮೊದಲಿನಿಂದಲೂ ಬೆಂಬಲವಾಗಿ ನಿಂತಿದ್ದಾಳೆ. ಒಬ್ಬಳೆ ಮಗಳು. ಆಕೆಗೂ ಮದುವೆಯಾಗಿ ಗಂಡನ ಮನೆಯಲ್ಲಿ ಸುಖವಾಗಿದ್ದಾಳೆ. ಮೊಮ್ಮಗ ಹುಟ್ಟಿದ್ದಾನೆ. ಗಂಡನಾಗಿ, ತಂದೆಯಾಗಿ, ಅಜ್ಜನಾಗಿ ಒಟ್ಟಾರೆಯಾಗಿ ಕುಟುಂಬ ಜೀವನದ ಸಂಪೂರ್ಣ ಸಂತೃಪ್ತಿ ಸಿಕ್ಕಿದೆ. ಹೀಗಿದ್ದರೂ  ಎಷ್ಟೋ ಬಾರಿ ನನ್ನ ಬ್ಯುಸಿ ಶೂಟಿಂಗ್ ಹಾಗೂ ಕೆಲಸದ ಒತ್ತಡದ ನಡುವೆ ಮನೆಯ ಕಾರ್ಯಕ್ರಮ, ಕುಟುಂಬದವರ ಜೊತೆ ಬೆರೆಯಲಿಕ್ಕೆ ಸಮಯ ಸಿಗುವುದಿಲ್ಲವಲ್ಲ ಅನ್ನುವ ನೋವು ಕೂಡ ಇದೆ.

ಹೊಸ ಕಲಾವಿದರಲ್ಲಿ ಶ್ರದ್ಧೆ-ಭಕ್ತಿ ಮುಖ್ಯ
ಇಂದು ಬಹಳಷ್ಟು ಹೊಸಹೊಸ ಕಲಾವಿದರು, ತಂತ್ರಜ್ಞರು ಬಣ್ಣದ ಬದುಕನ್ನು ಅರಸಿ ಬರುತ್ತಿದ್ದಾರೆ. ನನ್ನ ಪ್ರಕಾರ ಮುಖ್ಯವಾಗಿ ಅವರಿಗೆ ತಾಳ್ಮೆ ಹಾಗೂ ಭಕ್ತಿ ಬೇಕು. ಇದರ ಜೊತೆಗೆ ಭಾಷೆಯಲ್ಲಿ ಪರಿಶುದ್ಧತೆ ಬೇಕು. ನಾವು ಹೇಗೆ ಅಕ್ಷರಗಳನ್ನು ನುಡಿಯುತ್ತೇವೆ ಅನ್ನುವುದು ಕೂಡ ಪ್ರಮುಖವಾಗಿರುತ್ತೆ. ಇವೆಲ್ಲಾ ಗುಣಗಳು ಇದ್ದಾಗ ಮಾತ್ರ ಅವರು ಕ್ಷೇತ್ರದಲ್ಲಿ ಬೆಳೆಯಲಿಕ್ಕೆ ಸಾಧ್ಯವಾಗುತ್ತೆ. ಇಪ್ಪತ್ತಕ್ಕೂ ಹೆಚ್ಚು ವರ್ಷದ ನನ್ನ ಕಿರುತೆರೆ ಜೀವನದಲ್ಲಿ ಇಂದಿಗೂ ನಾನು ಕಲಿಯುತ್ತಲೇ ಇದ್ದೇನೆ. ಪ್ರತಿ ದಿನ ಬಣ್ಣ ಹಚ್ಚುತ್ತೇನೆ. ತಿಂಗಳು ಪೂರ್ತಿ ಅಭಿನಯಿಸುತ್ತಲೇ ಇರುತ್ತೇನೆ. ನನಗೆ ಇದೇ ಕರ್ಮಭೂಮಿ, ಇದೇ ಧರ್ಮಕ್ಷೇತ್ರ. ಕಾಯಕವೇ ಕೈಲಾಸ ಅನ್ನುವ ದೊಡ್ಡ ಮಾತಿನಲ್ಲಿ ನಂಬಿಕೆ ಇಟ್ಟವನು. ಕಲಾವಿದರ ಬದುಕೇ ಹಾಗೆ. ಇದರಲ್ಲೇ ಸಾರ್ಥಕತೆಯನ್ನು ನಾನು ಕಂಡುಕೊಳ್ಳುತ್ತಿದ್ದೇನೆ. ಶಾಟ್ ಮುಗಿಸಿಕೊಂಡು ಬಂದ ಮೇಲೆ ನಾನು ಹೇಗೆ ಅಭಿನಯಿಸಿ ಬಂದೆ ಎಂಬುದನ್ನು ಒಮ್ಮೆ ಯೋಚಿಸುತ್ತೇನೆ. ಬೇರೆಯವರು ನನ್ನ ಅಭಿನಯಕ್ಕೆ ಚೆನ್ನಾಗಿ ಮಾಡಿದ್ದೀರಿ ಅಂತ ಅಭಿಪ್ರಾಯ ತಿಳಿಸಿದರೂ ಮನಸ್ಸಿನಲ್ಲಿ ನನ್ನ ನಟನೆಯ ಬಗ್ಗೆ ಒಂದು ಕ್ಯಾಲ್ಕುಲೇಷನ್ ಇದ್ದೇ ಇರುತ್ತೆ. ಚೆನ್ನಾಗಿ ಅಭಿನಯಿಸಿದ್ದರೆ ಎಲ್ಲೋ ಒಂದು ಕಡೆ ಸಣ್ಣ ತೃಪ್ತಿ. ಕೆಲವು ಬಾರಿ ನನಗೆ ತೃಪ್ತಿಯಾಗಿದ್ದರೆ, ಇನ್ನೊಮ್ಮೆ  ತಪ್ಪನ್ನು ಮಾಡದಂತೆ ನೋಡಿಕೊಳ್ಳುತ್ತೇನೆ. ಹೀಗೆ ಪ್ರತಿ ಹಂತದಲ್ಲೂ ನಾನು ಚೆನ್ನಾಗಿ ಬೆಳೆಯಲಿಕ್ಕೆ, ನಾನು ಮಾಡಿದ ಪಾತ್ರಕ್ಕೆ ಜೀವತುಂಬುವ ಕೆಲಸಕ್ಕೆ ಶ್ರಮವಹಿಸಿ ದುಡಿಯುತ್ತೇನೆ. ಹೀಗಾದಾಗ ಮಾತ್ರ ನಮ್ಮ ಪಾತ್ರದಲ್ಲಿ ನಾವು ಇನ್ನಷ್ಟು ಬೆಳೆಯಲಿಕ್ಕೆ, ಜನರಿಗೆ ತುಂಬಾ ಹತ್ತಿರವಾಗಲು ಸಾಧ್ಯ ಎಂಬುದು ನನ್ನ ಅಭಿಮತ.

ನನ್ನ ಸಿನಿಮಾ ಸಾಧನೆ ನಗಣ್ಯ
ಕೆಲವೊಂದು ಬಾರಿ ಇದುವರೆಗೂ ನಾನು ಮಾಡಿದ ಸಾಧನೆ ಎಲ್ಲೋ ಒಂದು ಕಡೆ ಸಪ್ಪೆ ಅನ್ನಿಸುತ್ತೆ. ಇನ್ನೂ ನಾನು ಸಾಧನೆ ಮಾಡಬೇಕಿತ್ತು. ಇನ್ನೂ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕಿತ್ತು. 80ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ, ಕಿರುತೆರೆ ನೀಡಿದ ಜೀವಂತಿಕೆಯನ್ನು ಸಿನಿಮಾ ನನಗೆ ನೀಡಲೇ ಇಲ್ಲ. ಕಿರುತೆರೆಯ ಪಾತ್ರಗಳಿಂದಲೇ ನನಗೆ ಒಳ್ಳೆಯ ಜನಪ್ರಿಯತೆ ಸಿಕ್ಕಿದೆ. ಇದರಿಂದ ಸಿನಿಮಾಗಳಿಂದಲೂ ಅಪಾರ ಅವಕಾಶ ಬರುತ್ತಿದೆ. ಆದರೆ ಸಿನಿಮಾಗಳಲ್ಲಿ ಪಾತ್ರ ಮಾಡಲು ಮೊದಲಿನಂತೆ ಸಮಯ ನನಗೆ ಸಿಗುತ್ತಿಲ್ಲ. ಸದ್ಯ ಸಂಪೂರ್ಣವಾಗಿ ಕಿರುತೆರೆಗೆ ನನನ್ನು ತೊಡಿಗಿಸಿ ಕೊಂಡಿದ್ದೇನೆ. ಮುವತ್ತು ದಿನವೂ ನನಗೆ ಬಿಡುವು ಇಲ್ಲ. ಕಾಯಕದಲ್ಲೆ ನಾನು ದೇವರನ್ನು ಕಾಣುತ್ತಿದ್ದೇನೆ

ಮಗಳೂ ಕಲಾವಿದೆ
ನನ್ನ ಮಗಳು ಅರ್ಚನಾ ಅನಂತ್ ಕೂಡ ಅಭಿನಯ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿದ್ದಾಳೆ. ಇಂಟಿರಿಯರ್ ಡಿಸೈನಿಂಗ್ ಓದಿರುವ ಆಕೆಗೆ ನಾನು ಇದನ್ನೇ ಮಾಡು, ಹೀಗೆ ಓದು, ಇಲ್ಲೇ ಕೆಲಸ ಮಾಡು ಅಂತ ಬಲವಂತ ಮಾಡಿದವನಲ್ಲ. ಅವಳ ಇಚ್ಛೆ ಹೇಗಿದೆಯೋ ಹಾಗೆ ಓದಿಸಿದ್ದೇನೆ. ಮಗಳು ಕೂಡ ನನ್ನ ಹಾಗೆ ಕಲಾವಿದೆಯಾಗಿದ್ದಾಳೆ. ನಾನೇನು ಅಭಿನಯದ ತರಬೇತಿಯನ್ನು ನೀಡಿದವನಲ್ಲ. ಆದರೆ ನನ್ನನ್ನು ನೋಡಿ ಆಕೆ ಕಲಿತಿದ್ದುಂಟು. ಅವಳು ನಟಿಯಾಗುವೆ ಅಂದಾಗ ನಾನು ಹೇಳಿದ್ದಿಷ್ಟೇ. ವೃತ್ತಿಯನ್ನು ಬರೀ ಫ್ಯಾಷನ್ ಇಲ್ಲವೇ ಹವ್ಯಾಸ ಅಂತ ಅಂದುಕೊಂಡು ಮಾಡಬೇಡ. ಮಾಡುವುದಿದ್ದರೆ ತುಂಬಾ ಶ್ರದ್ದೆ, ಭಕ್ತಿ ಇಟ್ಟುಕೊಂಡು ಮಾಡು ಅಂತ ಸಲಹೆ ನೀಡಿದ್ದೆ. ಈಗಾಗಲೇ ಮಗಳು 'ಸೀತೆ', 'ಅರಸಿ', ಸದ್ಯ 'ಮಹಾಭಾರತ' ಸೀರಿಯಲ್ನಲ್ಲಿ ಕುಂತಿಯ ಪಾತ್ರವನ್ನು ಮಾಡುತ್ತಿದ್ದಾಳೆ. ಮೊನ್ನೆಯಷ್ಟೇ ಮೊಮ್ಮಗನಿಗೆ 'ಗಂಧರ್ವ' ಅಂತ ನಾಮಕರಣ ಮಾಡಿದ ಖುಷಿ, ಸಂಭ್ರಮ ನಮ್ಮದು.

ಅನಂತವೇಲು ನಿಜಕ್ಕೂ ಇವತ್ತಿನ ಯುವ ತಲೆಮಾರಿಗೆ ಆದರ್ಶ, ಮಾದರಿ ನಟ. ತನ್ನದೇ ಮಿಲ್ಟ್ರಿ ಶಿಸ್ತನ್ನು ಇವತ್ತಿಗೂ ರೂಢಿಸಿಕೊಂಡು ಬಂದಿರುವ ಇವರು ಕನ್ನಡದ ಕಿರುತೆರೆಯ ಅಶ್ವತ್ಥವೃಕ್ಷವೇ ಸರಿ. ಸಿನಿಮಾ ವಿಷಯಕ್ಕೆ ಬಂದಾಗ ಕೆ.ಎಸ್. ಅಶ್ವತ್ಥ್ ಅವರನ್ನು ಮಾತ್ರ ಅಶ್ವತ್ಥವೃಕ್ಷ ಅಂತ ಕರೆಯುತ್ತೇವೆ. ಏಕೆಂದರೆ, ಸಿನಿಮಾ ಕ್ಷೇತ್ರದಲ್ಲಿ ಅಶ್ವತ್ಥರು ಅಭಿನಯಿಸಿದ ವೈವಿಧ್ಯಮಯ ಪೋಷಕ ಪಾತ್ರಗಳನ್ನು ಮತ್ಯಾರು ಅಭಿನಯಿಸಿಲ್ಲ. ಹಾಗೆಯೇ ಕಿರುತೆರೆ ವಿಚಾರಕ್ಕೆ ಬಂದಾಗ ಅನಂತವೇಲು ಮಾಡಿದ ವಿಭಿನ್ನ, ವಿಶಿಷ್ಟ ನೂರಾರು ಪೋಷಕ ಪಾತ್ರಗಳನ್ನು ಮತ್ಯಾರೂ ಮಾಡಿಲ್ಲ. ಕಾರಣಕ್ಕೆ ಅನಂತವೇಲು ಕಿರುತೆರೆಯ ಅಶ್ವತ್ಥವೃಕ್ಷ, ಕಲಾ ಭೀಷ್ಮ ಅನ್ನುವ ಮಾತು ಅಕ್ಷರಶಃ ನಿಜ. ಬಹುಶಃ 'ಮಾಂಗಲ್ಯ' ಸೀರಿಯಲ್ ನೋಡಿದ ನಿಮಗೆ ಅಜ್ಜನಿಗೆ ಎಷ್ಟೊಂದು ವಯಸ್ಸಾಗಿದೆ ಅನ್ನಿಸಬಹುದು. ಆದರೆ, ನೀವು ಪ್ರತ್ಯಕ್ಷವಾಗಿ ನೋಡಿದರೆ, ಎಷ್ಟೊಂದು ಯಂಗ್ ಅಂಡ್ ಎನರ್ಜಿಟಿಕ್ ಆಗಿದ್ದಾರೆ ಅನ್ನಿಸದೇ ಇರದು. ಇನ್ನೇನು ಮುಂದಿನ ವರ್ಷಕ್ಕೆ ಇವರಿಗೆ ಅರವತ್ತು ವರ್ಷ ತುಂಬಲಿದೆ. ಇಂಥ ಮಹಾನ್ ಕಲಾವಿದ ಇನ್ನೂ ನೂರ್ಕಾಲ ಬಾಳಲಿ, ತಮ್ಮ ಅದ್ಭುತ ನಟನೆಯ ಮೂಲಕ ಪ್ರೇಕ್ಷಕರ ಹೃದಯ ಸಿಂಹಾಸನದಲ್ಲಿ ರಾರಾಜಿಸಲಿ ಎಂಬುದು ನಮ್ಮ ಹರಕೆ, ಆಶಯ