Friday 17 May 2013

`ಬಡವರಿಂದ ಕಿತ್ತು ಬಡವರಿಗೆ ಕೊಡುವುದರಲ್ಲಿ ಏನು ನ್ಯಾಯವಿದೆ? '





 ಇತ್ತೀಚೆಗೆ ಬಿಎಮ್ ಟಿಸಿ ಸಂಸ್ಥೆಯವರು ಏಕಾ ಏಕೀ ಬಸ್ ಪಾಸ್ ದರವನ್ನು 100 ರೂಪಾಯಿ ಹೆಚ್ಚಗೆ ಮಾಡಿದರು.ಸಂಸ್ಥೆಯ ಅಧಿಕಾರಿಗಳು ತೆಗೆದುಕೊಂಡು ಈ ನಿರ್ಧಾರ ಜನಸಾಮಾನ್ಯರ ಮೇಲೆ ಎಷ್ಟು ಪರಿಣಾಮ ಬೀರಿದೆ ಅನ್ನುವುದು  ಸರ್ಕಾರಕ್ಕೆ ಮನವರಿಕೆಯಾಗುತ್ತಿಲ್ಲ. ಪ್ರತಿದಿನ ಆಗಾಗ ದಿನದ ಬಸ್ ಪಾಸ್ ಕೊಳ್ಳುವವರು,ತಿಂಗಳ ಪಾಸ್ ಹೊಂದಿದವರು ಕಂಡಕ್ಟರ್ / ಡ್ರೈವರ್ ಗಳ ಜೊತೆ ಕಿತ್ತಾಡುವುದನ್ನು ನೋಡಬಹುದು. ಜನರು, ಅಧಿಕಾರಿಗಳು, ಸರ್ಕಾರದ ಮೇಲಿನ ಸಿಟ್ಟನ್ನು ಕಂಡಕ್ಟರ್ ಗಳ ಮೇಲೇ ಅವರನ್ನು ಬಯ್ಯುವ ಮೂಲಕ ತೀರಿಸಿಕೊಂಡರೆ, ಕಂಡಕ್ಟರ್/ ಡ್ರೈವರ್ ಗಳೂ ಕೂಡ ಅಧಿಕಾರಿಗಳ ಮೇಲಿನ ಸಿಟ್ಟನ್ನು ಜನರ ಮೇಲೆ ತೋರಿಸುತ್ತಾರೆ. ಇದು ಪ್ರತಿದಿನ ಬಿಎಮ್ ಟಿಸಿ ಬಸ್ ಗಳಲ್ಲಿ ನಡೆಯುವ ನಿತ್ಯ ರಗಳೆಯಾಗಿದೆ. ಇದು ಮೇಲೆ ಕುಳಿತಿರುವ ಸರ್ಕಾರ ಹಾಗೂ ಅಧಿಕಾರಿಗಳಿಗೆ ಮುಟ್ಟುತ್ತಿಲ್ಲ.ಅಷ್ಟಕ್ಕೂ ಸಾರಿಗೆ ಅಧಿಕಾರಿಗಳು ದರ ಏರಿಕೆಗೆ ನೀಡಿರುವ ಕಾರಣವಾದರೂ ಎಂತಹದ್ದು.ಕೆಲವು ಖಾಸಗಿ ಪೆಟ್ರೋಲಿಯಂ ಕಂಪನಿಗಳು ಹಾಗೂ  ಕೇಂದ್ರ ಸರ್ಕಾರವು ರಾಜ್ಯ ಸರ್ಕಾರವು ರಾಜ್ಯ ಸರ್ಕಾರಕ್ಕೆ ನೀಡುತ್ತಿದ್ದ ರಿಯಾಯತಿ ದರದ ಡಿಸೇಲ್ ಸಿಗದೇ ಕಾರಣ,ಖಾಸಗಿ ಬಂಕ್ ಗಳಿಂದ ಡಿಸೇಲ್  ಪಡೆಯುತ್ತಿದ್ದೇವೆ, ಇದರಿಂದ ಸಂಸ್ಥೆಗೆ ಹೆಚ್ಚಿನ ನಷ್ಟವಾಗುತ್ತಿದೆ ಅನ್ನುವುದು ಅವರ ವಾದ.ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿತ್ತು.ಈಗ ಕೇಂದ್ರದಲ್ಲಿ ಕಾಂಗ್ರೇಸ್  ಸರ್ಕಾರವಿದೆ.ಕರ್ನಾಟಕದಲ್ಲಿನ ಬಸ್ ದರ ಏರಿಕೆಯ ಪರಿಸ್ಥಿತಿಗೆ ಈ ಹಿಂದೆ  ಕೇಂದ್ರ ಸರ್ಕಾರ ಕಾರಣವಾಗಿತ್ತು. ಈಗ ಮತ್ತೇ ಕರ್ನಾಟಕದಲ್ಲಿ  ಕಾಂಗ್ರೇಸ್ ಸರ್ಕಾರ ಬಂದಿದೆ. ಜನಸಾಮಾನ್ಯರಿಗೆ ದಿನನಿತ್ಯದ ಹೊರೆಯಾಗಿರುವ ಬಸ್ ದರವನ್ನು ಕಡಿಮೆ ಮಾಡಲು ಇಂದಿನ ಸರ್ಕಾರವು ಕ್ರಮ ತೆಗೆದುಕೊಳ್ಳಬೇಕು.ಕಳೆದ 4-5 ವರ್ಷಗಳಿಂದ ಬಸ್ ದರ ಮಾತ್ರ ಹನುಮಂತನ ಬಾಲ ಬೆಳೆದ ಹಾಗೆ ಬೆಳೆಯುತ್ತಲೇ ಇದೆ.ಈ ಹಿಂದಿನ ಸರ್ಕಾರದವರು, ಸಚಿವರು ದೋಚಿಕೊಂಡು ಹೋಗಿದ್ದ ನಷ್ಟವನ್ನು ತುಂಬಿಕೊಳ್ಳಲು ಜನರಿಂದ ಈ ರೀತಿ ಹಣವನ್ನು ದರ ಎರಿಕೆಯ ಮುಖಾಂತರ ಪಡೆದುಕೊಳ್ಳುವುದರಲ್ಲಿ ಯಾವ ನ್ಯಾಯವಿದೆ.ತಿಂಗಳಿಗೆ 5000 ರೂಪಾಯಿ ಸಂಬಳ ಪಡೆಯುವ ಅನೇಕ ಜನರು ಖಾಸಗಿ ಹಾಗೂ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲಾ ಬಸ್ ಪಾಸ್ ನಲ್ಲೇ ಓಡಾಡುತ್ತಿದ್ದಾರೆ. ತಿಂಗಳ ಸಂಬಳದಲ್ಲಿ ಇಷ್ಟು ಹಣ ಬರೀ ಬಸ್ ಪ್ರಯಾಣಕ್ಕೆ ಆತ ನೀಡುವ ಪರಿಸ್ಥಿತಿ ಯಾದರೆ, ಆತ ಇನ್ನುಳಿದ ಸಂಸಾರ ಖರ್ಚು ವೆಚ್ಚಗಳಿಗೆ ಬೇರೆ ರೀತಿಯ ಮಾರ್ಗಗಳಿಗೆ ಇಳಿಯುವುದಿಲ್ಲವೇ? ಸಿಗುವ ಸಂಬಳ ಖರ್ಚಿಗೆ ಸಾಕಾಗುವುದಿಲ್ಲ ಅಂತ ಆತ ಭ್ರಷ್ಟಾಚಾರ ಮಾಡುವುದಿಲ್ಲವೇ? ಈ ಹಿಂದೆ ಲಂಚ, ಹಣ ದುರುಪಯೋಗ ಮಾಡಿಕೊಂಡ  ಆರೋಪಗಳಲ್ಲಿ ಸಿಕ್ಕಿಹಾಕಿಕೊಂಡ ಮಧ್ಯಮ ವರ್ಗದ ಸರ್ಕಾರಿ ಕೆಲಸದವರು ನೀಡಿದ ಕಾರಣ ಇಷ್ಟೇ. `ಇವರು ಕೊಡುವ ಸಂಬಳದಲ್ಲಿ ಬಸ್ ಪಾಸ್, ಮನೆ ಖರ್ಚು,ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ ಎಲ್ಲವನ್ನು ಮಾಡಲಾದಿತೇ? ಎಲ್ಲವುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ? ಹೀಗಾದರೆ ಬೆಂಗಳೂರಿನಂತಹ ನಗರದಲ್ಲಿ ಜೀವನ ನಡೆಸಬಹುದೇ? ಅದಕ್ಕಾಗಿ ಲಂಚ ಪಡೆಯುತ್ತೇವೆ' ಅಂತ ಹೇಳುವ ಅವರ ಮಾತಿನಲ್ಲಿ ಸತ್ಯವಿದೆ ಅನ್ನುವುದಾದರೂ, ಮಾಡಿದ ತಪ್ಪು ಮಾತ್ರ ತಪ್ಪೇ! ಈ ತಪ್ಪಿಗೆ ಸರ್ಕಾರವೇ ಪರೋಕ್ಷ ಕಾರಣವಾಗಿದೆ.ಮಾಮೂಲಿ ಜನರ ಭ್ರಷ್ಟಾಚಾರದ ಮೂಲಕ್ಕೆ,ಸಚಿವರು ಹಾಗೂ ಅಧಿಕಾರಿಗಳ ಬಕಾಸುರ ಗುಣ ಸ್ವಭಾವವೇ ಪ್ರಮುಖ ಕಾರಣ. ಕೇವಲ 5 ವರ್ಷದ ಹಿಂದೆ  ತಿಂಗಳ ಪಾಸಿನ ದರ 400ಯಷ್ಟಿತ್ತು. ಈಗ ಅದು ಸಾವಿರ ಮುಟ್ಟುತ್ತಿದೆ.5 ವರ್ಷದ ಹಿಂದೆ ಆ ವ್ಯಕ್ತಿ ಏಷ್ಟು ಸಂಬಳ ಪಡೆಯುತ್ತಿದ್ದೇನೋ ಅದಕ್ಕಿಂತ ಸ್ವಲ್ಪ ಜಾಸ್ತಿ ಹಣ ಪಡೆಯುತ್ತಿರಬಹುದಷ್ಟೇ. ಸರ್ಕಾರಗಳು , ಖಾಸಗಿ ಕಂಪನಿಗಳ ಮೇಲೆ ಅನಗತ್ಯ ತೆರಿಗೆಗಳನ್ನು ಹಾಕಿ ವಸೂಲು ಮಾಡುತ್ತದೆ.ಅದಕ್ಕೆ ಪ್ರತಿಯಾಗಿ ಕಂಪನಿಗಳು 5000 ಸಂಬಳ ಪಡೆಯುವ ವ್ತಕ್ತಿಯಿಂದಲೇ ತಿಂಗಳ ಹಣದಲ್ಲಿ ಕಟ್ ಮಾಡಿಕೊಂಡು ಉಳಿದ ಹಣವನ್ನು ನೀಡುತ್ತವೆ. ಈ ರೀತಿಯ ಶೋಷಣೆ ಎಲ್ಲ ಮೂಲೆಯಲ್ಲೂ ಆಗುತ್ತಿದೆ. ಬೀದಿಯಲ್ಲಿ ತರಕಾರಿ ಮಾರುವವ ಪೋಲಿಸರಿಗೆ ದಿನಕ್ಕೆ ಇಷ್ಟು ಹಣ ಕೊಡಲೇಬೇಕಾದ ಪರಿಸ್ಥಿತಿ ಇದ್ದುದರಿಂದ,ಆತ ತನ್ನ ಹೊಟ್ಟೆಪಾಡಿಗಾಗಿ ಅಲ್ಲಿಯೂ ಬರುವ ಗಿರಾಕಿಗಳಿಗೆ ಮೋಸ ಮಾಡಲು ಪ್ರಯತ್ನಿಸುತ್ತಾನೆ.ಇದೊಂಥರ ಆಹಾರ ಸರಪಳಿಯ ಹಾಗೆ ನಮ್ಮ ಸಮಾಜವನ್ನು ಸುತ್ತುವರೆದಿದೆ.

ಇನ್ನು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಅಹಿಂದ ಜನರಿಗೆ ಬಂಪರ್ ಕೊಡುಗೆಯನ್ನು ಘೋಷಿಸಿದರು.ಒಂದು ರೂಪಾಯಿಯಗೆ ಅಕ್ಕಿಯನ್ನು ಬಡವರಿಗೆ ಕೊಡುವುದಾಗಿ ಹೇಳಿರುವುದು ಕೂಡ ಯೋಚನೆ ಮಾಡಬೇಕಾಗಿದೆ.   ಹಳ್ಳಿಗಳಲ್ಲಿ 5-6 ಎಕರೆ ಜಮೀನು ಇದ್ದುಕೊಂಡು ಒಳ್ಳೆಯ ಬೆಳೆ ತೆಗೆಯುವ ರೈತರೇ ಬಿಪಿಎಲ್ /ಎಪಿಎಲ್ ಕಾರ್ಡ್ಗಳನ್ನು ಹೊಂದಿದ್ದಾರೆ.ಇವರೂ ಕೂಡ ಸೊಸೈಟಿಯಿಂದ ತಾವು ಬಡವರು ಎಂದೇಳಿಕೊಂಡು ಅಕ್ಕಿ ಪಡೆಯುತ್ತಿದ್ದಾರೆ. ಸಿಗುವವರಿಗೆ ಸಿಗದ ಅಕ್ಕಿ ಇನ್ನೇಲ್ಲೋ ಸೇರುತ್ತಿದೆ.ಬಡವರಿಗೆ ಅಕ್ಕಿಗಾಗಿ ವರ್ಷಕ್ಕೆ 4500 ಕೋಟಿ ಇದಕ್ಕಾಗಿ ಸರ್ಕಾರ ಖರ್ಚು ಮಾಡುವ ಮೊದಲು, ಇದರಲ್ಲಿ ಸ್ವಲ್ಪ ಭಾಗವನ್ನು ಬೋಗಸ್ ಕಾರ್ಡ್ ಗಳ ತೆಗೆದುಹಾಕಲು ಖರ್ಚು ಮಾಡಿದರೆ ಒಳ್ಳೆಯದು. ಇಲ್ಲವಾದರೆ, ಪ್ರತಿ ಹಳ್ಳಿಗಳ, ನಗರಗಳಿಗೆ ಮನೆಗಳಿಗೆ ಭೇಟಿ ಮಾಡಿ ಯೋಗ್ಯ ಜನರನ್ನು ಗುರುತಿಸಿ ಅಂಥವರಿಗೆ ಸೌಲಭ್ಯವನ್ನು ನೀಡಿದರೆ ಒಳ್ಳೆಯದು. ಇಲ್ಲವಾದರೆ ಕೊಂಡ ಅಕ್ಕಿಯನ್ನು ಹೊಟೆಲ್ ಗೋ,ಅಂಗಡಿಗಳಿಗೆ ಮಾರಿಕೊಳ್ಳುವ ಜನರು ನಮ್ಮಲ್ಲಿ ಕಡಿಮೆಯೇನಿಲ್ಲ. ನಿರೂದ್ಯೋಗಿಗಳಿಗೆ 500 ರೂಪಾಯಿ ಭತ್ಯೆ, 30 ಕೇಜಿ ಕೊಡುವ ಯೋಜನೆಗಳೆಲ್ಲಾ ಜನರನ್ನು ದಂಡಪಿಂಡಗಳು ಮಾಡುವ ಯೋಜನೆಗಳಷ್ಟೇ. ಅಹಿಂದ ಜನರಿಗೆ ನೀಡಿರುವ ಬಂಪರ್ ಪ್ಯಾಕೇಜ್ ಗಳೆಲ್ಲಾ ಸಾಮಾನ್ಯ ಜನರಾದಂತಹ ನಮ್ಮಿಂದ ಕಿತ್ತು ಅವರಿಗೆ ನೀಡಿದರೆ ಅದು ಅಭಿವೃದ್ಧಿಯ ಪಥವೆಂದು ಹೇಳಬಹುದೇ?