Saturday, 26 May 2012

ಜಿ.ವಿ ಅಯ್ಯರ್ ಹೇಳುತ್ತಿದ್ದ ಮುತ್ತಿನಂತ ಮಾತು...!

ಗಣಪತಿ ವೆಂಕಟರಾಮ ಅಯ್ಯರ್ ಅಲಿಯಾಸ್ ಜಿ.ವಿ.ಅಯ್ಯ ರ್ ರವರನ್ನು ಕನ್ನಡ ಚಿತ್ರರಂಗದ ಭೀಷ್ಮ ಅಂತ ಎಲ್ಲರೂ ಕರೆಯುತ್ತಿದ್ದರು. ಅವರು ಇದ್ದದೂ ಕೂಡ ಹಾಗೆಯೇ. ಆಗಿನ ಕಾಲದಲ್ಲಿ ಕನ್ನಡ ಚಿತ್ರರಂಗವೇ ಮದ್ರಾಸ್ನಲ್ಲಿ ಇದ್ದಾಗ, ಕನ್ನಡ ಚಿತ್ರಗಳನ್ನು ಹೆಚ್ಚೆಚ್ಚು ನಿರ್ಮಾಣ ಮಾಡುವಲ್ಲಿ ಅವಿರತವಾಗಿ ದುಡಿದವರು. ಮದ್ರಾಸ್ನಲ್ಲಿ ಕರ್ನಾಟಕ ಕಲಾವಿದರನ್ನೆಲ್ಲಾ  ಒಂದೆಡೆ ಸಂಘಟಿತರಾಗುವಂತೆ ಮಾಡಿದವರು. ಡಬ್ಬಿಂಗ್ ವಿರುದ್ಧ ದೊಡ್ಡ ಹೋರಾಟ ಮಾಡಿದವರು. ಹೀಗೆ ಜಿವಿ ಅಯ್ಯರ್ ಕನ್ನಡ ಚಿತ್ರರಂಗದ ದಂತಕತೆಯಾಗಿ ಸದಾ ನಮಗೆ ಕಾಣುತ್ತಾರೆ.
ಇಂತಹ ಜಿವಿ ಅಯ್ಯರ್  1969ರಲ್ಲಿ `ಚೌಕದದೀಪ' ಅನ್ನುವ ಸಿನಿಮಾವನ್ನು ನಿರ್ಮಾಣ ಮಾಡುವುದರ ಜೊತೆಗೆ ನಿರ್ದೇಶನ ಕೂಡ ಮಾಡಿದ್ದರು. ದುರದೃಷ್ಟವಶಾತ್ ಅವರ ನಿರ್ಮಾಣದ ಸಿನಿಮಾ ಸಂಪೂರ್ಣ ನೆಲಕಚ್ಚಿತು. ಸಿನಿಮಾ ಅಯ್ಯ ರ್ ರವರನ್ನು  ಸಂಪೂರ್ಣವಾಗಿ ಬೀದಿಗೆ ತಂದು ನಿಲ್ಲಿಸಿತು. ಅವರ ಹತ್ತಿರ ಹಣ, ಆಸ್ತಿ ಎಲ್ಲವೂ ಬರಿದಾಗಿತ್ತು. ಅಯ್ಯರ್ ಸ್ಥಾನದಲ್ಲಿ ಬೇರೆ ಯಾರೇ ಇದ್ದರೂ, ವಯಸ್ಸಿನಲ್ಲಿ ಮತ್ತೆ ಸಿನಿಮಾ ಕಡೆ ಮುಖ ಮಾಡದೇ ಬೇರೆ ಯಾವುದೋ ಜೀವನದ ಕಡೆ ಮುಖ ಮಾಡುತ್ತಿದ್ದರು.  ಆದರೆ ಜಿವಿ ಅಯ್ಯರ್ ಹಾಗೆ ಮಾಡಲಿಲ್ಲ. ತಾವು ಸೋತು, ಮನೆ ಮಠ ಕಳೆದುಕೊಂಡರೂ ಆತ್ಮಸ್ಥೈರ್ಯ ಕಳೆದುಕೊಳ್ಳದೇ ಇಡೀ ಭಾರತ ಚಿತ್ರರಂಗವೇ ಹೆಮ್ಮೆಪಡುವಂತಹ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿದರು.
1969ರಲ್ಲಿ ಚೌಕದೀಪ ಸಿನಿಮಾದ ನಂತರ ಅವರನ್ನು ಭೇಟಿ ಮಾಡಲು ಮದ್ರಾಸ್ನಲ್ಲಿದ್ದ ಅವರ ಸಣ್ಣ ಮನೆಗೆ ಚಿತ್ರರಂಗದವರು ಆಗಾಗ ಹೋಗುತ್ತಿದ್ದರಂತೆ. ಅಯ್ಯರ್ ಮನೆಯಲ್ಲಿದ್ದ ಕುಡಿಯುವ ನಲ್ಲಿಗೆ ಯಾವಾಗಲೂ ಬಟ್ಟೆಯನ್ನು ಕಟ್ಟುತ್ತಿದ್ದರಂತೆ. ಆಗ ಮದ್ರಾಸ್ನಲ್ಲಿ ಶುದ್ಧವಾದ ನೀರಿಗೆ ಅಭಾವ ಇತ್ತಂತೆ. ಕೆಲವು ಬಾರಿ ಕೊಳಕು ನೀರು ಕೂಡ ನಲ್ಲಿಯ ಮೂಲಕ ಬರುತ್ತಿತ್ತಂತೆ. ಅಂತಹ ಮನೆಯಲ್ಲಿ ಅಯ್ಯರ್ ವಾಸಿಸುತ್ತಿದ್ದರು. ಮನೆಗೆ ಬಂದವರಿಗೆ ತಿನ್ನಲು ಕಡಲೆಕಾಯಿ ಬಿಟ್ಟರೆ ಬೇರೆ ಏನು ಸಿಗುತ್ತಿರಲಿಲ್ಲ. ಕಡಲೆಕಾಯಿಯನ್ನು ಎಲ್ಲರಿಗೂ ನೀಡಿ ಹಂಚಿ ತಿನ್ನುತ್ತಿದ್ದರಂತೆ. ಊಟಕ್ಕೆ ಕಷ್ಟಪಡುವಂತಹ ಸಂದರ್ಭದಲ್ಲೂ ಕೂಡ ಅಯ್ಯರ್ ಸಿನಿಮಾದ ಬಗ್ಗೆ ಚಿಂತಿಸುತ್ತಿದ್ದರಂತೆ. ಹೊಸ ಹೊಸ ಕಥೆಗಳನ್ನು ರೆಡಿಮಾಡುತ್ತಿದ್ದರಂತೆ. ತಮಗೆ ವಯಸ್ಸಾಗುತ್ತಿದೆ ಅಂತ ಎಂದೂ ಅವರು ಅಂದುಕೊಳ್ಳುತ್ತಿರಲಿಲ್ಲ. ಎಲ್ಲರೂ ವಯಸ್ಸಾದಂತೆ ಸಿನಿಮಾದಿಂದ ರಿಟೈರ್ಮೆಂಟ್ ತೆಗೆದುಕೊಂಡರೆ ಅಯ್ಯರ್ ಮಾತ್ರ ವಯಸ್ಸಾದಂತೆ ಹೆಚ್ಚೆಚ್ಚು ಸಿನಿಮಾ ನಿರ್ಮಾಣ ದಲ್ಲಿ ತೊಡಗಿಕೊಂಡದ್ದು ಮಾತ್ರ ವಿಶೇಷತೆ. ಅಯ್ಯರ್ರವರಿಗೆ ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ಒಳ್ಳೆಯ ಹಿಡಿತ ಇತ್ತು. ಹಾಗಾಗಿ ಸಂಸ್ಕೃತ ಭಾಷೆಯಲ್ಲಿ ಯಾಕೆ ಸಿನಿಮಾ ಮಾಡಬಾರದು ಅಂತ ಅಂದುಕೊಂಡು, 1983ರಲ್ಲಿ ದೇಶದಲ್ಲೇ ಮೊದಲಬಾರಿಗೆ ಸಂಸ್ಕೃತ ಭಾಷೆಯಲ್ಲಿ ಆದಿ ಶಂಕರಾಚಾರ್ಯರ ಮೇಲೆ ಸಿನಿಮಾ ಮಾಡಿದರು. ಅದಕ್ಕೂ ಮೊದಲು ಸಂಗೀತ ಪ್ರಧಾನವಾದ `ಹಂಸಗೀತೆ' ಸಿನಿಮಾದ ಮೂಲಕ ಬಾಂಬೆಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ `ಅನಂತ್ ನಾಗರಕಟ್ಟೆ' ಎಂಬ ಹುಡುಗನನ್ನು `ಅನಂತನಾಗ್' ಎಂಬ ಹೆಸರಿನ  ಮೂಲಕ ಕನ್ನಡಕ್ಕೆ ಪರಿಚಯಿಸಿದರು. ಮುಂದೆ ಕನ್ನಡ ಚಿತ್ರರಂಗದಲ್ಲಿ ಅನಂತನಾಗ್ ಅದ್ಭುತ ಕಲಾವಿದರಾಗಿ ಬೆಳೆದಿರುವುದು,ಉಳಿದುಕೊಂಡಿರುವುದು ದಾಖಲೆ.
`ಆದಿ ಶಂಕರಾಚಾರ್ಯ' ನಮ್ಮ ದೇಶದಲ್ಲಿ ಸಂಸ್ಕೃತ ಭಾಷೆಯಲ್ಲಿ ನಿರ್ಮಾಣವಾದ ಮೊದಲ ಸಿನಿಮಾ. ಇದರ ನಿರ್ದೇಶಕರು ಜಿವಿ ಅಯ್ಯರ್ ಎಂಬ ಕನ್ನಡಿಗ. ಆದಿ ಶಂಕರಾಚಾರ್ಯ ಸಿನಿಮಾಕ್ಕೆ ರಾಷ್ಟ್ರ ಮಟ್ಟದಲ್ಲಿ `ಅತ್ಯುತ್ತಮ ಸಿನಿಮಾ', `ಅತ್ಯುತ್ತಮ ಚಿತ್ರಕಥೆ' ಹಾಗೂ `ಅತ್ಯುತ್ತಮ ಛಾಯಾಗ್ರಹಣ' ಮೂರು ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದ್ದವು.   ಇಂದಿಗೂ `ಆದಿ ಶಂಕರಾಚಾರ್ಯಸಿನಿಮಾವನ್ನು ಭಾರತೀಯ ಚಿತ್ರರಂಗದಲ್ಲಿ ಮಾಸ್ಟರ್ ಪೀಸ್ ಅಂತ ಕರೆಯಲಗುತ್ತದೆ. ಸಿನಿಮಾ ಅಯ್ಯರ್ ಜೀವನದಲ್ಲಿ ಏಷ್ಟು ಪರಿಣಾಮ ಬೀರಿತು ಅಂದರೆ ಸಿನಿಮಾದ ನಂತರ ಅಯ್ಯರ್ ತಮ್ಮ ಕಾಲಿಗೆ ಚಪ್ಪಲಿ ಹಾಕುವುದಿಲ್ಲ ಅಂತ ನಿರ್ಧಾರ  ತೆಗೆದುಕೊಂಡರು. ಕೊನೆವರೆಗೂ ಅವರು ಪಾದಕ್ಕೆ ಚಪ್ಪಲಿ ಇಲ್ಲದೇ ಓಡಾಡಿದರು. ಅಂತಹ ಮಹಾನ್ ತೇಜಸ್ವಿ ಜಿವಿ ಅಯ್ಯರ್.

`ಆದಿ ಶಂಕರಾಚಾರ್ಯ' ಸಿನಿಮಾ ನಂತರ ಜಿವಿ ಅಯ್ಯರ್ ರವರ ಸಿನಿಮಾ ಹಸಿವು ವಯಸ್ಸಾದಂತೆ ಇನ್ನು ಹೆಚ್ಚಾಗುತ್ತಲೇ ಹೋಯಿತು. ನಂತರ ಕನ್ನಡದಲ್ಲಿ `ಮಧ್ವಾಚಾರ್ಯ' ಹಾಗೂ ತಮಿಳಿನಲ್ಲಿ `ರಾಮಾನುಜಾರ್ಯ' ಸಿನಿಮಾಗಳನ್ನು ನಿರ್ದೇಶನ ಮಾಡಿದರು. 1993ರಲ್ಲಿ ಅಯ್ಯರ್ ಮತ್ತೊಮ್ಮೆ ಸಾರ್ವಕಾಲಿಕ ಎನ್ನುವ `ಭಗವದ್ಗೀತಾ' ಎನ್ನುವ ಸಿನಿಮಾವನ್ನು ಸಂಸ್ಕೃತ ಭಾಷೆಯಲ್ಲಿ ನಿರ್ದೇಶನ ಮಾಡಿದರು. ಸಿನಿಮಾಕ್ಕೆ `ಅತ್ಯುತ್ತಮ ಸಿನಿಮಾ' ಅನ್ನುವ ರಾಷ್ಟ್ರ ಪ್ರಶಸ್ತಿ ಲಭಿಸಿತು. ಸಿನಿಮಾ ಬೊಗಾಟಾ ಫಿಲಂ ಫೆಸ್ಟಿವಲ್ನಲ್ಲಿ  ಪ್ರದರ್ಶನ ಕೂಡ ಆಯಿತು. ದೇವನಾಗಿರಿ ಲಿಪಿ ಸಂಸ್ಕೃತ ಭಾಷೆಗೆ ಸಿನಿಮಾ ಭಾಷೆಯ ಮೂಲಕ ಅಯ್ಯರ್ ನೀಡಿದ ಕೊಡುಗೆಗಳು `ಆದಿ ಶಂಕರಾಚಾರ್ಯ', `ಭಗವದ್ಗೀತಾ' ಎಂಬ ಎರಡು ಸಿನಿಮಾಗಳು.
ಅಯ್ಯರ್ ಕೇವಲ ಹಿರಿತೆರೆಯಲ್ಲಿ ಮಾತ್ರ ಗುರುತಿಸಿಕೊಳ್ಳದೇ ಹಿಂದಿಯಲ್ಲಿ ಪೌರಾಣಿಕ ಕಥೆಗಳನ್ನು ಟೀವಿ ಪರದೆಗೆ ತರುವ ಸಾಹಸಕ್ಕೆ  ಕೈ ಹಾಕಿದ್ದ ರಮಾನಂದ ಸಾಗರ್ರಂತಯೇ ಹೊಯ್ಸಳರ ಕಾಲದಲ್ಲಿ ರಾಜಾ ವೈಷ್ಣವನನ್ನು ಮದುವೆಯಾಗಿದ್ದ ನಾಟ್ಯರಾಣಿ ಶಾಕುಂತಲೆಯನ್ನು ಇತಿಹಾಸವನ್ನು ಆಧರಿಸಿ `ನಾಟ್ಯರಾಣಿ ಶಾಕುಂತಲೆ' ಅನ್ನುವ  ಟೀವಿ ಸೀರಿಯಲನ್ನು ನಿರ್ದೇಶನ ಮಾಡಿದ್ದರು.

ಕನ್ನಡ ಕಿರುತೆರೆ ಪ್ರಯೋಗದ ನಂತರ, ಅನಾರೋಗ್ಯ ಹಾಗೂ ವಯಸ್ದಾದಂತೆ ದೈಹಿಕ ಶಕ್ತಿ ಕುಗ್ಗುತ್ತಾ ಹೋದರೂ ಇನ್ನೊಂದು ಚರಿತ್ರಾಹಕ ದಾಖಲೆ ಸೇರುವಂತಹ ಹಿಂದಿ ಸಿನಿಮಾವನ್ನು ಅಯ್ಯರ್ ನಿರ್ದೇಶನ ಮಾಡುತ್ತಾರೆ. ಸಿನಿಮಾದಲ್ಲಿ ಬಾಲಿವುಡ್ ಘಟಾನುಘಟಿ ನಟರುಗಳಾದ ಮಿಥುನ್ ಚಕ್ರವರ್ತಿ, ಹೇಮಾಮಾಲಿನಿ, ಸರ್ವಧಮನ ಬೆನರ್ಜಿಯಂತಹ ಕಲಾವಿದರು ಅಭಿನಯಿಸಿದ್ದರು. ಸಿನಿಮಾಕ್ಕೆ `ಸ್ವಾಮಿ ವಿವೇಕಾನಂದ' ಅಂತ ಹೆಸರಿಡಲಾಗಿತ್ತು. ಸ್ವಾಮಿ ವಿವೇಕಾನಂದರ ಜೀವನಚರಿತ್ರೆಯನ್ನು ಸಿನಿಮಾಕ್ಕೆ ಅಳವಡಿಸಿದ ಕೀರ್ತಿ ಜಿವಿ ಅಯ್ಯರ್ಗೆ ಸೇರುತ್ತದೆ. ಸಿನಿಮಾದಲ್ಲಿ ಜನಪ್ರಿಯ ಕಲಾವಿದರೂ ಇದ್ದರೂ ಕಮರ್ಷಿಯಲ್ ಆಗಿ ಸಕ್ಸಸ್ ಆಗಲಿಲ್ಲ. ಇದು ಅಯ್ಯರ್ಗೆ ಸ್ವಲ್ಪ ಹೊಡೆತ ನೀಡಿತ್ತು. ಅಯ್ಯರ್ ಸಿನಿಮಾ ಮಾಡಿದಾಗ ಸುಮಾರು 80 ವರ್ಷದ ಮೇಲೆ ಆಗಿತ್ತು.  ಅಯ್ಯರ್ರವರಿಗೆ ಇನ್ನು ದೊಡ್ಡ ಕನಸಿತ್ತು, ಇನ್ನು ಸಿನಿಮಾ ಮಾಡುವ ಹಂಬಲ ಇತ್ತು. ತಮ್ಮ 87ನೇ ವಯಸ್ಸಿನಲ್ಲೇ ಅವರು ಹಿಂದು ಪೌರಾಣಿಕ ಕಥೆಯಾದ  ರಾಮಾಯಣವನ್ನು ಸಿನಿಮಾ ಮಾಡಲಿಕ್ಕೆ ಓಡಾಡುತ್ತಿದ್ದರು. ಚಿತ್ರದ ಆರಂಭದ ಹಂತಗಳನ್ನು ಆಗಲೇ ಮುಗಿಸಿಬಿಟ್ಟಿದ್ದರು. ಚಿತ್ರದ ಪೋಸ್ಟರ್ಗಳನ್ನು ಬಿಡಲಾಗಿತ್ತು.  ಸಂಜಯ್ ದತ್ನನ್ನು ರಾವಣನ ಪಾತ್ರಕ್ಕೆ ಅಯ್ಯರ್ ಒಪ್ಪಿಸಿದ್ದರು. ದುರದೃಷ್ಟವಶಾತ್ ಸಿನಿಮಾವನ್ನು ಮಾಡುವ ಮುಂಚೆಯೇ  ಅನಿರೀಕ್ಷಿತವಾಗಿ ತೀರಿಕೊಂಡರು. ಅವರ ದೇಹಕ್ಕೆ  ವಿಶ್ರಾಂತಿ ಬೇಕಿದ್ದರೂ, ಮನಸ್ಸಿಗೆ ಮಾತ್ರ ಇನ್ನು ಅಪಾರ ಹಸಿವು ಇತ್ತು. ಡಿಸೆಂಬರ್ 21, 2003 ರಂದು ತಮ್ಮ 87ನೇ ವಯಸ್ಸಿನಲ್ಲಿ  ತೀರಿಕೊಂಡರು. ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಹೊರವಲಯ ಕೆಂಗೇರಿ ಸಮೀಪದ ದೊಡ್ಡ ಆಲದ ಮರದ ಹತ್ತಿರ ಇರುವ ತಮ್ಮದೇ ಸ್ವಂತ ಸ್ಥಳ `ಭಾರದ್ವಾಜ ಆಶ್ರಮ'ದಲ್ಲಿ ನೆರವೇರಿಸಲಾಯಿತು.

ಅಯ್ಯರ್ ಹಿಂದಿನ ರಹಸ್ಯ..!

ತಮ್ಮ ದೇಹಕ್ಕೆ ಅಷ್ಟು ವಯಸ್ಸಾದರೂ ಅಯ್ಯರ್ ಯಾಕೆ ಸಿನಿಮಾ ಮಾಡೋದನ್ನು ನಿಲ್ಲಿಸಲಿಲ್ಲ. ಅಂತಹ ಶಕ್ತಿ ಅವರಲ್ಲಿ ಏನಿತ್ತು. `ಚೌಕದೀಪ' ಸಿನಿಮಾ ಅವರಿಗೆ ತುತ್ತು ಅನ್ನಕ್ಕೂ ಕಷ್ಟಪಡುವಂತೆ ಮಾಡಿದರೂ, ಸಿನಿಮಾ ಮಾಡುವುದನ್ನು ಮಾತ್ರ ಬಿಡುವುದಿಲ್ಲ ಅಂತ ಯಾಕೆ ಜಿವಿ ಅಯ್ಯರ್  ಹಠ ಸಾಧಿಸಿದರು. ಅವರ ಜೀವನದ ನಿಲುವು ಏನಿತ್ತು. ಅಲ್ಲಿವರೆಗೆ ಅವರು ಜೀವನದಲ್ಲಿ ಪಾಲಿಸಿಕೊಂಡು ಬಂದಿದ್ದ ಶಕ್ತಿಯಾದರೂ ಏಂತಹದ್ದು ಅನ್ನುವ ಕುತೂಹಲ ಖಂಡಿತ ಎಲ್ಲರಲ್ಲೂ ಇದ್ದೇ ಇರುತ್ತದೆ. ಇದೆಲ್ಲಕ್ಕೂ ಒಂದು ಸಣ್ಣ ಘಟನೆಯನ್ನು ಇಲ್ಲಿ ಸ್ಮರಿಸಬಹುದು. ಅಯ್ಯರ್ ಸಿನಿಮಾ ನಿರ್ದೇಶನ ದಲ್ಲಿ ತೊಡಗಿಕೊಂಡಿದ್ದಾಗ ಸೆಟ್ನಲ್ಲಿದ್ದ ಕೆಲವರು ಬೆಳಗಿನ ಶೂಟಿಂಗ್ ಮುಗಿದು ಮಧ್ಯಾಹ್ನ ಆದರೆ ಸಾಕು ಎಲ್ಲರೂ ಊಟ.. ಊಟ.. ಅಂತ ತಡಪಡಿಸುತ್ತಿದ್ದರಂತೆ. ಇದರಲ್ಲಿ ಇವರಿಗೆ ಅಸಿಸ್ಟಂಟಾಗಿದ್ದ ಸುಂದರ್ ರಾಜ್ ಕೂಡ ಸೇರಿದ್ದರು. ಆದರೆ ಅಯ್ಯರ್ ಮಾತ್ರ ಊಟಕ್ಕೆ ಬ್ರೇಕ್ ಕೊಟ್ಟ ಸಮಯದಲ್ಲೂ ಕೂಡ ಮುಂದೇನು ಮಾಡಬೇಕು ಅಂತ ಯೋಚಿಸುತ್ತಾ ಕುಳಿತುಕೊಳ್ಳುತ್ತಿದ್ದರು. ಸೆಟ್ನಲ್ಲಿದ್ದ ಹುಡುಗರೆಲ್ಲಾ ಊಟಕ್ಕಾಗಿ ಗಡಿಬಿಡಿ, ಅವಸರ ಮಾಡೋದನ್ನು ಕಂಡ ಅಯ್ಯರ್ರವರು,  ಆಗ ಊಟಕ್ಕಾಗಿ ಓಡುತ್ತಿದ್ದ ಸುಂದರ್ ರಾಜ್ನನ್ನು ಕರೆದು ಒಂದು ಮಾತು ಹೇಳುತ್ತಾರೆ. `ನೋಡೋ ಸುಂದ್ರ.. ಊಂಡವನು ಬೇಗ ಸಾಯ್ತಾನೆ ಕಣೋ..! ಹಸಿದವನೇ ಕಣೋ ಕೊನೆವರೆಗೂ ಇರ್ತಾನೆ, ಅವನೇ ಕಣೋ ನಿಜವಾಗ್ಲೂ ಸಾಧನೆ ಮಾಡೋದು' ಅಯ್ಯರ್ ರವರ   ಎರಡು ಮುತ್ತಿನಂತ ಮಾತುಗಳನ್ನು ಇಟ್ಟುಕೊಂಡು ನಾವು ಒಂದು ಪುಸ್ತಕ ಬರೆಯಬಹುದು. ಅಯ್ಯರ್ ಬದುಕು ಹಾಗೂ ಸಾಧನೆಯನ್ನು ಕೇವಲ ಎರಡು ಮಾತಿನಲ್ಲಿ ವರ್ಣಿಸಬಹುದು. `ಯಾರಿಗೆ ಏನನ್ನಾದರೂ ಸಾಧಿಸಬೇಕೆಂಬ ಹಸಿವು ಇರುತ್ತೋ ಆತನೇ ನಿಜವಾಗಿಯೂ ಸಾಧನೆ ಮಾಡೋದು'. ಮಾತು ಖಂಡಿತ ಅಯ್ಯರ್ ಜೀವನಕ್ಕೆ ನೂರಕ್ಕೆ ನೂರರಷ್ಟು ಹೊಂದಿತ್ತು. ಅವರ ಸಿನಿಮಾ ಹಸಿವು ಸಾಯುವವರೆಗೂ ಇತ್ತು. ಅದೇ ಅವರನ್ನು ಇಡೀ ಭಾರತೀಯ ಚಿತ್ರರಂಗದಲ್ಲಿ ಅವರಿಗೆ ವಿಶಿಷ್ಟವಾದ ಸ್ಥಾನವನ್ನು ನೀಡಿದೆ. ಹಾಗಾಗಿಯೇ ಅವರನ್ನು ಕನ್ನಡ ಚಿತ್ರರಂಗದ ಭೀಷ್ಮ ಅಂತ ಕರೆಯುವುದು. ಬಿರುದಿಗೆ ಅನ್ವರ್ಥಕವಾಗುವಂತೆ ಅಯ್ಯರ್ ಬದುಕಿದ್ದರು .
ಗುಬ್ಬಿವೀರಣ್ಣನವರ  ನಾಟಕತಂಡದಲ್ಲಿ ತಮ್ಮ ಎಂಟನೇವಯಸ್ಸಿನಿಂದಲೇ ಗುರುತಿಸಿಕೊಂಡ ಅಯ್ಯರ್ ನಂತರ ಸಿನಿಮಾ ನಟನೆಯತ್ತ ವಾಲಿ `ರಾಧಾರಮಣ', `ಮಹಾಕವಿಕಾಳಿದಾಸ', `ಸೋದರಿ', `ಹೇಮಾವತಿ', `ಹರಿಭಕ್ತ  ಮತ್ತು `ಬೇಡರಕಣ್ಣಪ್ಪ' ಇನ್ನು ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದರು. ಒಟ್ಟಾರೆ ಬಣ್ಣದ ಬದುಕು ಹಾಗೂ ಕಲಾಸೇವೆಯಲ್ಲಿ  80 ವರ್ಷಗಳನ್ನು ಕಳೆದಿರುವ ಅಯ್ಯರ್ ಸಿನಿಮಾದ ಜೀವನದ  ಒಂದು ಪಕ್ಷಿ ನೋಟ.

ನಟರಾಗಿ ಅಯ್ಯರ್ ಅಭಿನಯಿಸಿದ ಮುಖ್ಯಚಿತ್ರಗಳು 
ಬೇಡರ ಕಣ್ಣಪ್ಪ(1954), ಭಕ್ತ ಮಲ್ಲಿಕಾರ್ಜುನ  (1955), ಸದಾರಮೆ(1956).ರಣಧೀರ ಕಂಠೀರವ (1960), ಕಣ್ತೆರೆದು ನೋಡು (1961), ವಂಶವೃಕ್ಷ (1971), ಹೇಮಾವತಿ (1977)
ಅಯ್ಯರ್ ನಿರ್ದೇಶಿಸಿದ ಚಲನಚಿತ್ರಗಳು
ಸಂಸ್ಕೃತ
  • ಆದಿ ಶಂಕರಾಚಾರ್ಯ (೧೯೮೩), ಭಗವದ್ಗೀತಾ (೧೯೯೩),
ತಮಿಳು
ರಾಮಾನುಜಾಚಾರ್ಯ (೧೯೮೯)
ಹಿಂದಿ
  • ಆಖ್ರೀ ಗೀತ್ (೧೯೭೫)

ಜಿವಿ ಅಯ್ಯರ್ ನಿರ್ಮಾಣದ ಕನ್ನಡ ಚಲನಚಿತ್ರಗಳು
ಜಿವಿ ಅಯ್ಯರ್ ಸಾಹಿತ್ಯದಲ್ಲಿನ ಪ್ರಮುಖ ಚಿತ್ರಗೀತೆಗಳು

§  ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ,
§  ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ,
§  ಬಾ ತಾಯೆ ಭಾರತಿಯೇ