Monday 1 October 2012

ಗಾಂಧಿ ಬಾಣದ ನೆನಪು

ಗಾಂಧೀ ಜಯಂತಿಯ  ದಿನದಂದು ಗಾಂಧೀಜಿ ನನ್ನಲ್ಲಿ ಬೀರಿದ ಪ್ರಭಾವವನ್ನು ನೆನಪಿಸಿಕೊಳ್ಳುತ್ತಿದ್ದೇನೆ.
  ಕೆಳಗಿನ ಕವನ ನನ್ನ ಸಾಹಿತ್ಯ ರಚನೆಯ ಮೊದಲ ಕವಿತೆ. ನಾನು ಬರೆಯಬಲ್ಲೇ, ನನ್ನಲ್ಲೂ ಒಬ್ಬ ಕವಿ  ಇದ್ದಾನೆ ಎಂಬುದನ್ನು ಮೊದಲ ಬಾರಿಗೆ  ವ್ಯಕ್ತವಾಗಿದ್ದು ಕವನದ ಮೂಲಕ. ಇದಕ್ಕೆ ಮೂಲ ಪ್ರೇರಣೇಯೇ ಮಹಾತ್ಮಾ ಗಾಂಧೀಜಿ. ಮೊದಲ ಬಾರಿಗೆ ನಾನು ಕವನ ಬರೆದಿದ್ದು ಒಂಬತ್ತನೇ ಕ್ಲಾಸ್ನಲ್ಲಿದ್ದಾಗ. ಅಕ್ಷೋಬರ್ 2. 1999 ರಂದು ಶಾಲೆಯ ಗಾಂಧೀ ಜಯಂತಿ ಆಚರಣೆ ಬಗ್ಗೆ  ಹಾಗು ಗಾಂಧೀಜಿ ಬಗ್ಗೆ ಏನು ಮಾತನಾಡಬೇಕೆಂದು ಚಿಂತಿಸುತ್ತಾ ಮಲಗಿದ್ದ ನನಗೆ ರಾತ್ರಿ ಇಡೀ ನಿದ್ದೇ ಬರಲೇ ಇಲ್ಲ.  ಅಮ್ಮನಿಗೆ ಎಚ್ಚರ ಮಾಡದಂತೆ, ಮುಂಜಾನೆ ನಾಲ್ಕು ಘಂಟೆಗೆ ಎದ್ದು ಚಿಮಣಿ ದೀಪ ಹಚ್ಚಿಕೊಂಡು ಮನಸ್ಸಿನ ಪೂರ ಆವರಿಸಿಕೊಂಡಿದ್ದ ಗಾಂಧೀಜಯ ಬಗ್ಗೆ ಕೆಲವು ಸಾಲುಗಳನ್ನು ಅರ್ಧ ಗಂಟೆಯಲ್ಲಿ ಬರೆದುಬಿಟ್ಟೆ.  ಹೀಗೆ ನಾ ಬರೆದ ಸಾಲುಗಳು ಕವನದ ರೂಪ ಪಡೆದುಕೊಂಡಿದ್ದವು. ಹೋ.. ಇದು ಕವಿತೆಯಾಯಿತಲ್ಲ..! ನಾನು ಕವನ ಬರೆಯಬಲ್ಲೆ ಅಂತ ನನಗೆ ಅನಿಸಲಿಕ್ಕೆ ಶುರುವಾಯಿತು. ಗಾಂಧೀಜಿ ಬಗ್ಗೆ ಬರೆದ ಕವನದ ಸಾಲುಗಳನ್ನು ನಾನು ಹಾಗೆ ಇಟ್ಟುಕೊಂಡೆ. ಮತ್ತೇ ಮತ್ತೇ ಓದಿದೆ. ಕವನವನ್ನು ಯಾರಿಗೂ ತೋರಿಸಲೇ ಇಲ್ಲ. ಹೇಳಲೇ ಇಲ್ಲ. ಕನ್ನಡ ಟೀಚರ್ ಗೀತಾ ಮೇಡಂ ಗೆ ತೋರಿಸಬೇಕೆಂದು ಅಂದುಕೊಂಡರೂ ಧೈರ್ಯ ಸಾಲಲಿಲ್ಲ. ಸುಮ್ಮನಾದೆ. ಗಾಂಧೀಜಿ ನನ್ನ ಜೀವನದಲ್ಲಿ ಮಾಡಿದ ಮೋಡಿ ಇಂದಿಗೂ ಸದಾ ದೊಡ್ಡ ನೆನಪು. 1999 ರಂದು ಬರೆದ ಕವನ ಇಂದಿಗೂ ಅಪ್ ಡೇಟ್ ಆಗಿದೆ ಅಂತ ಅನಿಸುತ್ತಿದೆ. ಕವನಕ್ಕೆ ಹಾಗೂ ನನ್ನ ಮೊದಲ ಕಾವ್ಯನಾಮ ಚಗಶ್ರೀ (ಚಕ್ರಸಾಲಿ ಗದಿಗೆಪ್ಪ ಶ್ರೀಧರ) ಅಂತ ಇಟ್ಟುಕೊಂಡಿದ್ದೆ. ತೀನಶ್ರೀ, ಬಿಎಂಶ್ರೀ ರಿಂದ ಪ್ರೇರಣೆ . ಅವರಂತೆ ನಾನಾಗಬೇಕು ಅನ್ನುವ ಎಳೆಯ  ಹಂಬಲ ಅಂದು. 
ಗಾಂಧೀಜಿಯನ್ನು ಜೀವನದುದ್ದಕ್ಕೂ ಸದಾ ಕಾಡುತ್ತಾರೆ ನನ್ನ ಮೊದಲ  ಕವನದ ಮೂಲಕ.  ಗಾಂಧೀಜಿಯ ಪ್ರಭಾವ ನನಗೆ ಬರವಣಿಗೆ, ಸಾಹಿತ್ಯದ  ಕಡೆ ಆಸಕ್ತಿ ಒಂಬತ್ತನೇ ಕ್ಲಾಸ್ನಲ್ಲಿರುವಾಗಲೇ  ಬರುವಂತೆ ಮಾಡಿತ್ತು. ಗಾಂಧೀಜಿ ನೀನು ದಿನ ಮಾತ್ರ ನೆನಪಾಗೋಲ್ಲ.  ಸದಾ ನೀನು ನಮ್ಮನ್ನು ಆವರಿಸುತ್ತಿದ್ದೀಯೆ. ಪ್ರತಿದಿನ ನಿನ್ನನ್ನು ನೋಟುಗಳ ಮೂಲಕ ನೋಡುತ್ತಿದ್ದೇವೆ. ಹಣವನ್ನು ಕೊಡುವಾಗ, ತೆಗೆದುಕೊಳ್ಳುವಾಗ, ಹಣವನ್ನು ಕಳೆದುಕೊಂಡಾಗ, ನೀನು ಮಾತ್ರ ನೋಟಿನಲ್ಲಿ ಸದಾ ನಗುತ್ತಿರುತ್ತೀಯೆ. ನೀನು ಸದಾ ಚಲಾವಣೆಯಲ್ಲಿರುತ್ತೇಯೆ. ದಿನ ಕೇವಲ ನೆಪ ಮಾತ್ರ.
ಗಾಂಧಿ ಬಾಣ      
ಸ್ವಾತಂತ್ರ್ಯ ಪೂರ್ವದಲಿ ತೊಳಲಾಡುತ್ತಿದ್ದೇವು
ದಬ್ಬಾಳಿಕೆ ಮತ್ತು ಗಲಭೆ
ಸಿಗಬಾರದೇ ನಮಗೆ ದಾರಿದ್ರ್ಯದ ವಿಮೋಚನೆ
ಮೊರೆ ಕೇಳಿತೆನೋ  ವಿಧಾತನಿಗೆ
ತಿರುಗಿ ಬಿಟ್ಟ ನಮಗೊಂದು ಸ್ವಾತಂತ್ರ್ಯವೆಂಬ
ಅಲೆಯ  ಬಾಣ, ಅದರ ಜೊತೆಗೂ
ಬಿಟ್ಟನೂ ಒಂದು ಬಾಣ..
ಅದುವೇ ಗಾಂಧಿ ಬಾಣ.

ಗಾಂಧಿ ಬಾಣ ಬಂದು ಬಿಡ್ತು
ಸತ್ಯ ಅಹಿಂಸೆ ತಂದು ಬಿಟ್ತು
ನಾಡಿಗೆಲ್ಲಾ ಸುಖ ಶಾಂತಿ ತಂತು(ತಂದಿತು)
ನಮಗೆಲ್ಲಾ ಸುಗ್ಗಿಯ ಸುಖ ತಂದಿತು.

ನೀವು ನಮ್ಮ ಮೋಹನದಾಸ
ನಾನು ಮಾತ್ರ ನಿಮ್ಮ ಪಾದದಾಸ
ನಿಮ್ಮ ಅಪ್ಪ ಕರಮ ಚಂದ
ದೇಶ ಕರೆಯಿತು ನಿಮ್ಮನ್ನು ಮಹಾತ್ಮ ಎಂದು.

ನೀ ಜಗಕೇ ಬರುವಾಗ ನೀ ಅಳುತಲಿದ್ದೆ.
ನಾವ್ ನಗುತಲಿದ್ದೇವು.
ನೀ ಜಗವ ಬಿಡುವಾಗ ನಾವ್
ಅಳುತ್ತಲಿದ್ದೇವು. ನೀ ನಗುತ್ತಿದ್ದೆ.
ನಿನ್ನ ನಗು ಮುಖ ಇಂದಿಗೂ ಶಾಲೆಯ ಚಿತ್ರಪಟದಲ್ಲಿದೆ.
 ನಿನ್ನ ಸ್ವರೂಪ ಕೇಳಿ ನಲಿದೆ
ನಿನ್ನ ಧ್ಯಾನ ಮಾಡಿ ಕುಣಿದೆ
ನಿನ್ನ ತಪಸ್ಸಿಗೆ ಮಣಿದ ಬೊಮ್ಮ
ಕೊಟ್ಟೇ ಬಿಟ್ಟ ನಮಗೆ ಸ್ವಾತಂತ್ರ್ಯ ವರ.

ನಿನ್ನ ಮಹಿಮೆ ಸೇವೆಯನು ಅರಿಯದೇ
ನಿನ್ನ ನಿಸ್ವಾರ್ಥ ಸಾಧನೆಯನು ಅರಿಯದೇ
ಪಾಪಿಗಳ ಲೋಕದಲ್ಲಿ ಹುಟ್ಟಿದ ನಾವು
ನೀಡಿದೇವು ನಿನಗೆ ಸಾವಿನ ಮನೆ..

(ಬರೆದ ಕ್ಷಣ: ಅಕ್ಟೋಬರ್ 2.1999 ಮುಂಜಾನೆ 4 ಘಂಟೆ, ಬನವಾಸಿ, ಕಾಮನಗಲ್ಲಿ)

ಸುದೀಪ್ ನೆನಪುಗಳು


ಸುದೀಪ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾಶಾಲಿ ಪ್ರಬುದ್ಧ ನಟ. 'ಸ್ಪರ್ಶ' ಚಿತ್ರದಿಂದ 'ಬಚ್ಚನ್' ಚಿತ್ರದವರೆಗೆ ಸುದೀಪ್ ಸಿನಿ ಪಯಣ ಒಂದು ಅಚ್ಚರಿ ಬೆಳವಣಿಗೆಯ ನೋಟವೇ ಸರಿ. ಪ್ರತಿ ಚಿತ್ರದಲ್ಲೂ ಸುದೀಪ್ ನಟನಾ ಕೌಶಲ್ಯ ಅದ್ಭುತ, ಅನನ್ಯ. 'ಈಗ' ಚಿತ್ರದ ಯಶಸ್ಸು, ಅಮಿತಾಭ್ ಬಚ್ಚನ್ ಜೊತೆಗಿನ 'ರಣ' ಚಿತ್ರದಲ್ಲಿನ ಅಭಿನಯ ಇವತ್ತು ತೆಲುಗು, ತಮಿಳು, ಹಿಂದಿ ಅಷ್ಟೇ ಏಕೆ ದಕ್ಷಿಣ ಭಾರತದ ಗಮನವನ್ನೇ ಸೆಳೆದಿರುವ ಏಕೈಕ ಅದ್ವಿತೀಯ ನಟ. ಸುದೀಪ್ 'ವರ್ಕ್ ಡೆಡಿಕೇಷನ್' ಎಲ್ಲದರ ಯಶಸ್ಸು, ಕೀರ್ತಿಯ ಮೂಲಮಂತ್ರ. ನಟ, ನಿರ್ದೇಶಕ, ನಿರ್ಮಾಪಕನಾಗಿಯೂ ದಿಟ್ಟ ಹೆಜ್ಜೆ ಇಟ್ಟವರು ಸುದೀಪ್. ಮೂಲತಃ ಶಿವಮೊಗ್ಗದ ಹುಡುಗನಿಗೆ ಎತ್ತರದ ಸುಂದರ ನೀಳಕಾಯದಷ್ಟೇ ವಿಶಾಲ ಸ್ನೇಹ ಜಗತ್ತು, ಅಪಾರ ಅಭಿಮಾನಿ ಬಳಗವಿದೆ. ಹಾಗಂತ ಸಿಕ್ಕಸಿಕ್ಕವರನ್ನೆಲ್ಲಾ ತನ್ನ ಸ್ನೇಹ ಲೋಕದೊಳಗೆ ಬಿಟ್ಟುಕೊಳ್ಳುವಂಥ ಜಾಯಮಾನ ಸುದೀಪನದ್ದಲ್ಲ. ಬಿಚ್ಚು ಮನಸ್ಸಿನ ಖಂಡ-ತುಂಡ ಮಾತು. ತನ್ನಗೆ ಸರಿ ಅನ್ನಿಸಿದ್ದನ್ನು ಮಾಡಿಯೇ ತೀರುವ ಛಲಬಿಡದ ತ್ರಿವಿಕ್ರಮ. ಇಂಥ ಸುದೀಪ್ಗೂ ಕಿರುತೆರೆಗೂ ಏನು ನಂಟು ಅಂತೀರಾ? ಸಿನಿಮಾ ಬದುಕಿನ ಪ್ರಾರಂಭದ ಮೂರು ಸಿನಿಮಾಗಳು ಸೋತಾಗ ಸುದೀಪ್ ಒಂದು ವರ್ಷ ಕಾಲ ಸಿನಿಮಾಗೆ ಗ್ಯಾಪ್ ಕೊಟ್ಟು ಕಿರುತೆರೆಯತ್ತ ಮುಖ ಮಾಡಿದ್ದು ಉಂಟು. 'ಪ್ರೇಮದ ಕಾದಂಬರಿ' ಸೀರಿಯಲ್ನಲ್ಲಿ ಅಭಿನಯಿಸಿ ಹೆಸರು ಮಾಡಿದವರು ಎಂಬುದು ಬಹುಶಃ ಬಹುತೇಕ ಮಂದಿಗೆ ಗೊತ್ತಿಲ್ಲ. ಸೀರಿಯಲ್ನಲ್ಲಿ ಕೆಲಸ ಮಾಡಿದ ದಿನಗಳ ನೆನಪುಗಳನ್ನು ಹಂಚಿಕೊಂಡಿದ್ದರು.
ಹೈದರಾಬಾದ್ನಲ್ಲಿ ಮೊದಲು ಟೀವಿ ನೋಡಿದ್ದು
ಮೂಲತಃ ನಾವು ಶಿವಮೊಗ್ಗದಿಂದ ಬೆಂಗಳೂರಿಗೆ ಬಂದವರು. ಟೀವಿ ಅನ್ನೋದನ್ನ ನಾನು ಮೊದಲು ನೋಡಿದ್ದೇ ಹೈದರಾಬಾದ್ನಲ್ಲಿ. ಟೀವಿ ಆಗಷ್ಟೇ ಇನ್ನೂ ಎಂಟ್ರಿ ಕೊಟ್ಟಿತ್ತು. ನಾನಾವಾಗ ಎರಡನೇ ಕ್ಲಾಸೋ, ಮೂರನೇ ಕ್ಲಾಸ್ನಲ್ಲಿ ಓದ್ತಿದ್ದೆ. ನಮ್ಮ ಅಮ್ಮನ ಅಣ್ಣ ರತ್ನಾಕರ ರಾವ್ ಅನ್ನೋರು ಹೈದರಾಬಾದಿನಲ್ಲಿ ಇದ್ರು. ನಾವು ರಜೆ ಬಂದಾಗ ಅವರ ಮನೆಗೆ ಹೋಗಿದ್ವಿ. ಅವರ ಮನೆಯಲ್ಲಿ ಬ್ಲಾಕ್ ಆ್ಯಂಡ್ ವೈಟ್ ಟೀವಿ ಇತ್ತು. ಟೀವಿ ಅಂದ್ರೆ ಏನು ಅಂತ  ನೋಡಿದ್ದೆ ಅದೇ ಮೊದಲು. ಕಪ್ಪು ಬಿಳುಪಿನ ಟೀವಿಯಲ್ಲಿ ಏನ್ ಬರುತ್ತೇ ಅಂತ ನೋಡೋಕೆ ಮಧ್ಯಾಹ್ನವೇ ಕುಳಿತುಕೊಂಡುಬಿಟ್ಟಿದ್ದೆ. ನೋಡಿದ್ರೆ ಸಾಯಂಕಾಲ ಆರು ಗಂಟೆ ಮೇಲೆ ಶುರುವಾಗುತ್ತೆ ಅಂತ ಹೇಳೋಕೆ ಶುರುಮಾಡಿದ್ರು. ಆವಾಗಿದ್ದುದು ಒಂದೇ, ಅದು ದೂರದರ್ಶನ ಮಾತ್ರ. ಮಧ್ಯಾಹ್ನದಿಂದ ಕಾದು ಕಾದು ಅಂತೂ ಕೊನೆಗೆ ಟೀವಿಯಲ್ಲಿ ಏನೋ ಬರಲಿಕ್ಕೆ ಶುರುವಾಯ್ತು. ಸುಮ್ಮನೇ ಟೀವಿ ನೋಡೋದು, ಅದರಲ್ಲಿ ಏನ್ ಬರುತ್ತೋ, ಇಲ್ವೋ ಗೊತ್ತಿಲ್ಲಚಿಕ್ಕವಯಸ್ಸಿನಲ್ಲಿ ಟೀವಿ ನಮಗೆ, ಅದೇನೋ ಕುತೂಹಲ ಹುಟ್ಟಿಸಿತ್ತು. ಏನೋ ಇದ್ರಲ್ಲಿ ಇದೆ. ನಾನು ಫಸ್ಟ್ ಟೀವಿಯಲ್ಲಿ ನೋಡಿದ್ದು `ರಾಮುಡು ಭೀಮುಡು' ಎಂಬ ತೆಲಗು ಸಿನಿಮಾ. ಭಾಷೆ ಅಂತೂ ಚೂರು ಅರ್ಥವಾಗ್ತಾ ಇರಲಿಲ್ಲ. ಆದ್ರೂ ಇಡೀ ಸಿನಿಮಾವನ್ನ ತುಂಬಾ ಆಸೆಪಟ್ಟು ನೋಡಿದ್ದೆ. ಸಿನಿಮಾ ಆದ ಮೇಲೆ ಯಾವುದೋ ಶಹನಾಯಿ ಕಾರ್ಯಕ್ರಮ ಬಂತು, ಭರತನಾಟ್ಯಂ ಹಾಕಿದ್ರು. ಟೀವಿ ನೋಡಿದ ಮೊದಲ ದಿನ ಯಾವ ಕಾರ್ಯಕ್ರಮಾನೂ ಬಿಡಲಿಲ್ಲ. ಎಲ್ಲಾ ಕಾರ್ಯಕ್ರಮಾನೂ ನೋಡಿದ್ದೆ. ಹೈದರಾಬಾದ್ನಲ್ಲಿ ಮೂರು ದಿನ ಇದ್ದೆ, ಮೂರು ದಿನವೂ ಟೀವಿ ನೋಡೋದೇ ದೊಡ್ಡ ಕೆಲಸವಾಗಿಬಿಟ್ಟಿತ್ತು. ಇದುವರೆಗೂ ಘಟನೆಯನ್ನು ಮರೆಯಲಿಕ್ಕೆ ಸಾಧ್ಯವೇ ಇಲ್ಲ. ಸಿನಿಮಾ ನೋಡೋಕೆ ಚಿತ್ರಮಂದಿರಕ್ಕೆ ಹೋಗದೆ, ಮನೆಯಲ್ಲಿ ಕುಳಿತು ಸಿನಿಮಾ ನೋಡಬಹುದಲ್ಲ ಅನ್ನುವ ಸುಂದರ ಆಕರ್ಷಣೆ ಅಷ್ಟೇ.
ಮನೆಗೆ ಕಲರ್ ಟೀವಿ ಬಂದಾಗ!
ನಮ್ಮ ಮನೆಗೆ ಟೀವಿ ಬಂದದ್ದು ತುಂಬಾ ಲೇಟು ಅಂತಾನೇ ಹೇಳ್ಬೋದು. ನಾನಾವಾಗ ಏಳನೇ ಕ್ಲಾಸ್ ಇದ್ದೆ. ಅದು ಸೋನಿ ಕಲರ್ ಟಿಲಿವಿಷನ್. ಆವಾಗಿನ ಕಾಲದಲ್ಲೇ ಇಂಪೋಟೆಂಟ್ ಟೀವಿ ಮನೇಲಿ ಇತ್ತು. ಈಗಲೂ ಟೀವಿ ಮನೇಲಿ ಇದೆ. ಜೋಪಾನವಾಗಿ ಮನೆಯಲ್ಲಿ ಎತ್ತಿಟ್ಟಿದ್ದೀವಿ. ಮನೆಯಲ್ಲಿ ವಿಸಿಆರ್ ಇತ್ತು. ಆಗ ಟೀವಿ ಹುಚ್ಚು ಎಷ್ಟು ಇತ್ತು ಅಂದ್ರೆ, ಟೀವಿ ಫುಲ್ ಹಾಳಾಗಿ, ಅದರ ಟ್ಯೂಬ್ ಹಾಳಾಗಿದ್ರೂ ಸಹ ಹೇಗೋ ಸುಧಾರಿಸಿಕೊಂಡು ನೋಡ್ತಿದ್ವಿ. ಮನೆಯಲ್ಲಿ ಟೀವಿಗಂತಲೇ ಒಂದು ಗೂಡು ಇತ್ತು. ಚಿಕ್ಕವನಾಗಿದ್ದಾಗ ನಮ್ಮನೇ ವಿಲ್ಸನ್ಗಾರ್ಡನ್ನಲ್ಲಿತ್ತು. ತುಂಬಾ ಚಿಕ್ಕ ಮನೆ. ನನಗೆ ತುಂಬಾ ಇಷ್ಟ ಆಗ್ತಿದ್ದ ಟೀವಿ ಕಾರ್ಯಕ್ರಮಗಳೆಂದ್ರೆ ಕಾರ್ಟೂನ್  ಸ್ಪೈಡರ್ಮ್ಯಾನ್ ಮತ್ತು ಚಿತ್ರಮಂಜರಿ. ಆವಾಗೆಲ್ಲಾ ಸಿನಿಮಾ ಥಿಯೇಟರ್ಗೆ ಕರೆದುಕೊಂಡು ಹೋಗೋದೆ ಅಪರೂಪವಾಗಿದ್ದಾಗ, ಚಿತ್ರಮಂಜರಿಯಲ್ಲಿ ಬರ್ತಿದ್ದ ಕನ್ನಡ ಹಾಡುಗಳನ್ನು ನೋಡಿ ತುಂಬಾ ಖುಷಿ ಪಡ್ತಾ ಇದ್ವಿ. ಟೀವಿ ಅಂದ್ರೆ ಬಾಲ್ಯದಲ್ಲಿ ನೆನಪಾಗೋದು ಇನ್ನೊಂದು ಅಂದ್ರೆ ಕ್ರಿಕೆಟ್...! ಚಿಕ್ಕವನಾಗಿದ್ದಾಗ ನನಗೆ ಕ್ರಿಕೆಟ್ ಹುಚ್ಚು ತುಂಬಾ ಇತ್ತು. ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದಾಗ, ಬೆಳಗ್ಗೆ ಎರಡೂವರೆಗೆ ಟೀವಿಯಲ್ಲಿ ಮ್ಯಾಚು ಶುರುವಾಗ್ತಿತ್ತುಅಷ್ಟು ಗಂಟೆಗೇನೇ ಎದ್ದು ಕಂಬಳಿ ಗಿಂಬಳಿ ಹೊತ್ಕೊಂಡು ಕಾದು, ಅಪ್ಪ-ಅಮ್ಮನಿಗೆ ಗೊತ್ತಾದ್ರೆ ಬೈತಾರೆ ಅಂತೆಲ್ಲಾ ಅನ್ಕೊಂಡು, ವಾಲ್ಯೂಮ್ ಕಡಿಮೆ ಮಾಡಿಕೊಂಡು ಕ್ರಿಕೆಟ್ ಮ್ಯಾಚ್ ನೋಡ್ತಿದ್ವಿ. ಮನೆ ಬೇರೆ ಚಿಕ್ಕದಾಗಿದ್ದುದರಿಂದ ಅಪ್ಪಮ್ಮನಿಗೆ ಡಿಸ್ಟರ್ಬ್  ಮಾಡೋಕೆ ಇಷ್ಟಪಡ್ತಿರಲಿಲ್ಲ. ಇವತ್ತಿಗೆ ಬಾಲ್ಯದ ಎಲ್ಲ ಕ್ಷಣಗಳನ್ನು ನೆನಪಿಸಿಕೊಂಡರೆ ತುಂಬಾ ಖುಷಿಯಾಗುತ್ತೆ. ತುಂಬಾ ಒಳ್ಳೆಯ ನೆನಪುಗಳು ಅವು.
ಈಗಿನ ಮಕ್ಕಳಲ್ಲಿ ಕುತೂಹಲ ಕಾಣ್ತಾ ಇಲ್ಲ
ನನ್ನ ಪ್ರಕಾರ ನಾವು ಟೀವಿಯನ್ನು ಮೊದಲು ನೋಡಿದಾಗ, ನಮಗಿದ್ದ ಕುತೂಹಲ, ಸಂತೋಷ ಈಗಿನ ಜನರೇಷನ್ನ ಮಕ್ಕಳಲ್ಲಿ ಇರುತ್ತೇ ಅಂತ ಹೇಳೋದು ತುಂಬಾ ಕಷ್ಟ. ಇಂದು ಮನರಂಜನಾ ಮಾಧ್ಯಮ ತುಂಬಾ ಬೆಳೆದುಬಿಟ್ಟಿದೆ. ಮಕ್ಕಳ ಮನರಂಜನೆಗೆ, ಅವರ ಟೈಂಪಾಸ್ಗೆ ಏನು ಬೇಕು, ಏನು ಬೇಡ ಎಲ್ಲವೂ ಅವರ ಕೈತುದಿಯಲ್ಲಿ ಸಿಗೋದ್ರಿಂದ ಅವರಲ್ಲಿ ಟೀವಿ ಬಗೆಗಿನ ಕುತೂಹಲ, ಕಾಳಜಿ, ಸಂತೋಷ ಇಂದು ಕಾಣುತ್ತಿಲ್ಲ. ಮುಂದಿನ ಜನರೇಷನ್ನನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ, ಇದರ ಮೌಲ್ಯ ಮಕ್ಕಳ ಮನಸ್ಸಿನಲ್ಲಿ ತುಂಬಾ ಕಡಿಮೆಯಾಗಬಹುದು ಅಂತ ನನಗೆ ಅನಿಸುತ್ತೆ. ಯಾಕಂದ್ರೆ ಟೆಕ್ನಾಲಜಿ ಎಷ್ಟು ಚೆನ್ನಾಗಿ ಬೆಳೆದಿದೆ ಅಂದ್ರೆ ಟೀವಿ ಈಗ ತಟ್ಟೇ ಸೈಜಿಗೆ ಬಂದುಬಿಟ್ಟಿದೆ. ಮೊದಲೆಲ್ಲಾ ಮನೆಕಟ್ಟೋವಾಗ ಟೀವಿಗೆ ಅಂತಲೇ ಒಂದು ಕಂಪಾರ್ಟ್  ಕಟ್ತಿದ್ರು. ಗೂಡು ಮಾಡ್ತಿದ್ರು. ಟೀವಿಯನ್ನು ನೋಡಬೇಕು ಅಂದ್ರೆ ಎಲ್ಲರೂ ಅಲ್ಲಿಗೆ ಬಂದು ಟೀವಿ ಇದ್ದಲ್ಲಿ ನೋಡಿಕೊಂಡು ಹೋಗ್ತಿದ್ರು. ಆದರೆ ಈಗ ಟೀವಿಯನ್ನು ಒಳ್ಳೆ ಫೋಟೋ ತರಹ ಎಲ್ಲಿ ಬೇಕಾದ್ರೂ ಸಿಗಿಸಿಕೊಂಡು ನೋಡೋ ಪರಿಸ್ಥಿತಿ ಬಂದುಬಿಟ್ಟಿದೆ. ಈಗ ಮುಂದೆ ಅಲ್ಲಿಂದ ಇನ್ನೆಲ್ಲಿ ಪ್ರಮೋಷನ್ ಸಿಕ್ಕು ಸೇರುತ್ತೋ ಅದು... ಟೀವಿ ಮನೆಗೆ ಫ್ಯಾಷನ್ ತರಹ ಆಗಿಬಿಟ್ಟಿದೆ
ಕ್ರಿಯೇಟಿವಿಟಿ ಸಾಯ್ತಾ ಇದೆ
ಆಗ ಟೀವಿ ಅನ್ನೋದು ಮನೆಯಲ್ಲಿನ ಒಂದು ಪ್ರಾಪರ್ಟಿ ತರಹ ಆಗಿಬಿಟ್ಟಿತ್ತು. ಮನೆ ಮೇಲೊಂದು ಆಂಟೆನಾ ಇದ್ರೆ, ಹೋ... ಇವ್ರು ಅನುಕೂಲಸ್ಥರು ಅಂತ ಮಾತಾಡಿಕೊಳ್ತಿದ್ರು. ಹಾಗಿತ್ತು ಆಗಿನ ಕಾಲ. ನನ್ನ ಬಾಲ್ಯದ ದಿನಗಳಲ್ಲಿ ಈಗಲೂ ಗುರುವಾರ ಬರ್ತಿದ್ದ ಚಿತ್ರಮಂಜರಿ, ಚಿತ್ರಹಾರ್, ಭಾನುವಾರ ಆದ್ರೆ ಮಹಾಭಾರತ, ರಾಮಾಯಣ, ಮಧ್ಯಾಹ್ನ ಟೈಮಲ್ಲಿ ಸ್ಪೈಡರ್ಮ್ಯಾನ್ ಪೋಗ್ರಾಂ, ಸಾಯಂಕಾಲ ಸಿನಿಮಾ, ಆವಾಗೆಲ್ಲಾ ಮನರಂಜನೆಗೆ ಇಷ್ಟೇ ಟೀವಿ ಸರಕಾಗಿತ್ತು. ಇಷ್ಟಕ್ಕೆ ಜನ ವಾರಾನುಗಟ್ಟಲೇ ಕಾಯ್ತಿದ್ರು. ಭಾನುವಾರ ಆದ್ರೆ ಇಡೀ ಕೇರಿ, ಕೇರಿ ರೋಡ್ಗಳೆಲ್ಲಾ ಬಿಕೋ ಅಂತಿದ್ದವು. ಈಗ ಅದೆಲ್ಲಾ ಏನೂ ಇಲ್ಲ. ಚಾನೆಲ್ ಇಲ್ಲಾ ಅಂದ್ರೆ, ಇನ್ನೊಂದು ಚಾನೆಲ್... ಸ್ಥಿತಿಗತಿ ಬರೀ ಟೀವಿಗೆ ಮಾತ್ರ ಬಂದಿದೆ ಅಂತ ಹೇಳಿದ್ರೆ ತಪ್ಪಾಗುತ್ತೇ, ಈಗ ಸಿನಿಮಾ ಕೂಡ ಇದೇ ದಾರಿಯಲ್ಲಿದೆ. ಪ್ರತಿಯೊಂದು ತನ್ನದೇ ಆದ ಐಡೆಂಟಿಟಿಯನ್ನು ಕಳೆದುಕೊಳ್ತಾ ಇವೆ. ಕ್ರಿಯೇಟಿವಿಟಿ ಅನ್ನುವುದು ಪ್ರತಿಯೊಂದರಲ್ಲೂ ತನ್ನ ಅಸ್ತಿತ್ವವನ್ನು ಕಳೆದುಕೊಳ್ತಾ ಇದೆ. ಇದಕ್ಕೆಲ್ಲಾ ಜವಾಬ್ದಾರಿಯನ್ನು ನಾವೇ ಹೊರಬೇಕಾಗುತ್ತೆ.
ಟೀವಿ ಬಣ್ಣದ ಕನಸುಗಳನ್ನು ಕಟ್ಟಿಕೊಡಲಿಲ್ಲ
ನಿಜಹೇಳಬೇಕಂದ್ರೆ ನನ್ನ ಬಣ್ಣದ ಬದುಕಿಗೆ ಟೀವಿ ಹೇಳಿಕೊಳ್ಳುವಂತಹ ಪರಿಣಾಮ ಬೀರಿಲ್ಲ. ಆಗೆಲ್ಲಾ ಮನೆ ಪರಿಸ್ಥಿತಿ, ಅಪ್ಪ-ಅಮ್ಮ ನೀಡಿದ ಸಂಸ್ಕಾರ ತುಂಬಾ ಕಟ್ಟುನಿಟ್ಟಾಗಿತ್ತು. ಚೆನ್ನಾಗಿ ಓದಬೇಕು, ಶಾಲೆಗೆ ಬಂಕು ಮಾಡಬಾರದು, ಟೀಚರ್ ಕೊಟ್ಟ ಹೋಮ್ ವರ್ಕ್ ಮಾಡಬೇಕು. ಚೆನ್ನಾಗಿ ಊಟ ಮಾಡಬೇಕು, ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಏಳಬೇಕು. ಭಾನುವಾರ ಮಾತ್ರ ಸಿನಿಮಾ ನೋಡಬೇಕು, ದಿನ ಮಾತ್ರ ಮನೆಯಲ್ಲಿ ನಾನ್ವೆಜ್ ಮಾಡ್ಬೇಕು ತರಹದ ಕಟ್ಟುಪಾಡಿನಲ್ಲಿ ಬೆಳೆದಿದ್ದ ನನಗೆ ಟೀವಿ ಅನ್ನೋದು ಕೇವಲ ಕುತೂಹಲವನ್ನು ಹುಟ್ಟಿಸುವ ವಸ್ತು ಆಗಿತ್ತೇ ವಿನಃ ಅದು ನನ್ನ ಜೀವನಕ್ಕೆ ಕನಸುಗಳನ್ನು ಕಟ್ಟಿಕೊಡಲೇ ಇಲ್ಲಮುಖ್ಯವಾಗಿ ನಾವು ಬೆಳೆದಿರುವ ವಾತಾವರಣ, ಮನೆ ಪರಿಸ್ಥಿತಿ, ನಮಗೆ ಸಿಕ್ಕ ಅವಕಾಶ, ಅಪ್ಪ-ಅಮ್ಮನ ಮಾರ್ಗದರ್ಶನ ನಿಜಕ್ಕೂ ತುಂಬಾನೇ ಪರಿಣಾಮ ಬೀರಿರಬಹುದು. ಆಗ ಟೀವಿಯಲ್ಲಿ ಬರುತ್ತಿದ್ದ ಮಹಾಭಾರತ, ರಾಮಾಯಣ ನಿಜಕ್ಕೂ ನಮ್ಮ ಸಂಸ್ಕೃತಿ ಏನು? ನಮ್ಮ ಹಿನ್ನೆಲೆ ಏನು? ಪೌರಾಣಿಕ ಕಥೆಯಲ್ಲಿ ಹೀಗೂ ಆಗಿತ್ತಾ ತರಹದ ಅನೇಕ ಸಾಂಗತ್ಯಗಳಿಗೆ ಎರಡು ಸೀರಿಯಲ್ಗಳು ನಮ್ಮ ಜೀವನದ ಮೇಲೆ ತುಂಬಾನೇ ಪ್ರಭಾವ ಬೀರಿದ್ವು ಅಂತ ಹೇಳಬಹುದು. ತರಹದ ಸೀರಿಯಲ್ಗಳು ಎರಡು-ಮೂರು ವರ್ಷ ಸತತವಾಗಿ ಬರ್ತಿದ್ರೂ ಅದೇ ಕುತೂಹಲದಲ್ಲಿ ನಾವು ಅದನ್ನೆಲ್ಲಾ ನೋಡ್ತಾ ಇದ್ವಿ.
`ಪ್ರೇಮದ ಕಾದಂಬರಿ' ನಾನು ನಟಿಸಿದ ಮೊದಲ ಸೀರಿಯಲ್
ಸಿನಿಮಾ ಜೀವನದ ಆರಂಭದಲ್ಲಿ ನನ್ನ ಮೊದಲ ಮೂರು ಸಿನಿಮಾಗಳು ಅಷ್ಟಾಗಿ ಕ್ಲಿಕ್ ಆಗಲೇ ಇಲ್ಲ. `ಬ್ರಹ'್ಮ, ` ಕುಸುಮ ಬಾಲೆ' ಸಿನಿಮಾಗಳು  ಕಂಪ್ಲೀಟ್ ಆಗಲೇ ಇಲ್ಲ. ತಾಯವ್ವ ಕೂಡ ಸಕ್ಸಸ್ ತಂದುಕೊಡಲೇ ಇಲ್ಲ. ಆಗ ಸಿನಿಮಾ ಫೀಲ್ಡನ್ನು ಒಂದು ವರ್ಷ ಬಿಟ್ಟುಬಿಟ್ಟಿದ್ದೆ. ನಾನು ತರಹ ಮಾಡಿಕೊಂಡ್ರೆ ಅಲ್ಲ, ಬೇರೆ ತರಹ ಎಂಟ್ರಿ ಕೊಡಬೇಕು ಅಂತ ಅಂದುಕೊಂಡು, ಸುಧಾಕರ್ ಭಂಡಾರಿ ನಿರ್ದೇ ಶನದ `ಪ್ರೇಮದ ಕಾದಂಬರಿ' ಅನ್ನುವ ಸೀರಿಯಲ್ನಲ್ಲಿ ಆ್ಯಕ್ಟ್ ಮಾಡಿದೆ. ಸೀರಿಯಲ್ನಲ್ಲಿ ನಾನು, ಸಂಗೀತಾ ಮತ್ತು ವಾಣಿಶ್ರೀಯವರ ಜೊತೆ ನಟಿಸಿದ್ದೆ. ಸಂಗೀತಾ ಮತ್ತು ವಾಣಿಶ್ರೀಗೆ ಆಗ ಕಿರುತೆರೆಯಲ್ಲಿ ತುಂಬಾ ಒಳ್ಳೆಯ ಹೆಸರು ಇತ್ತು. ಆಗ ಯಾವ ಸೀರಿಯಲ್ ನೋಡಿದ್ರೂ ಅವರೇ ತುಂಬಿಕೊಂಡಿದ್ರು. ನನ್ನ ಮೊದಲ ಸೀರಿಯಲ್ `ಪ್ರೇಮದ ಕಾದಂಬರಿ' ಮೂಲಕವೇ ನನಗೆ ಒಳ್ಳೆಯ ಹೆಸರು ಬಂತು. ಸೀರಿಯಲ್ನಲ್ಲಿ ಆಕ್ಟ್ ಮಾಡೋವಾಗಿನ ಒಂದು ಘಟನೆಯನ್ನು ನೆನಪಿಸಿಕೊಳ್ಳೋದಾದ್ರೆ, ಒಂದೊಂದ್ಸಲ 8-9 ಶೀಟ್ನಷ್ಟು ಡೈಲಾಗ್ ಪೇಪರ್ಸ್ ಕೊಡೋರು. ಸಂಗೀತಾ ಇವರೆಲ್ಲಾ ಪಟಪಟನೇ ಡೈಲಾಗ್ಗಳನ್ನು ಹೇಳಿಬಿಡ್ತಿದ್ರು. ನನಗೆ ಅಷ್ಟು ಫಾಸ್ಟಾಗಿ ಡೈಲಾಗ್ ಹೇಳೋಕೂ ಬರ್ತಿರಲಿಲ್ಲ. ಅದ್ರಲ್ಲಿ ಆರಂಭದಲ್ಲಿ ನಾನು ಹೊಸಬನಾಗಿದ್ದೆ. ನಾವು  ಒಟ್ಟಾರೆ ಸೀರಿಯಲ್ನಲ್ಲಿ ಕೆಲಸ ಮಾಡಿದ್ದ ವಾತಾವರಣ ತುಂಬಾ ಚೆನ್ನಾಗಿತ್ತು. ಸುಧಾಕರ ಭಂಡಾರಿ ಅನ್ನೋರು ನನಗೆ ತುಂಬಾನೇ ಸಪೋರ್ಟ್  ಮಾಡಿದ್ರು.  13 ಎಪಿಸೋಡ್ಗಳಲ್ಲಿ ನಾನು ಅಭಿನಯಿಸಿದ್ದೆ. ನಾನು ಯಾರಂದ್ರೆ ಏನು ಅಂತ ಗೊತ್ತಿರದ ಸಮಯದಲ್ಲಿ ಕೂಡ ಸೀರಿಯಲ್ ನನ್ನನ್ನು ಗುರುತಿಸುವಂತೆ ಮಾಡಿತು. ಒಮ್ಮೆ ಕೊಲ್ಲೂರಿಗೆ ಹೋದಾಗ ಅಲ್ಲಿ ನನ್ನನ್ನು ನೋಡಿ ನೀವು ಸೀರಿಯಲ್ನಲ್ಲಿ ಅಭಿನಯಿಸ್ತಿರಲ್ವಾ ಅಂತ ಕೇಳಿದರು. ನನಗೆ ಆಶ್ಚರ್ಯ, ಏನಪ್ಪಾ ಟೀವಿ ಎಷ್ಟೊಂದು ಪಾಪುಲರ್ ಆಗಿದೆಯಲ್ಲಾ ಅಂತ ಅನಿಸಿತು. ನಿಜಕ್ಕೂ ನನ್ನ ಮೊದಲ ಸೀರಿಯಲ್ ನನಗೆ ಅಪಾರ ನೆನಪುಗಳನ್ನು ತಂದಿಟ್ಟಿದೆ. ಇದಾದ ಮೇಲೆ ಸ್ವಲ್ಪ ಹೆಸರು ಬಂದ ಮೇಲೆ ಮತ್ತೆ ಸಿನಿಮಾಕ್ಕೆ ಎಂಟ್ರಿ ಆಗಲಿಕ್ಕೆ ಅವಕಾಶ ಸಿಕ್ಕಿತು. ಆಮೇಲೆ ಸಿನಿಮಾದಲ್ಲಿ ಹಂತಹಂತವಾಗಿ ಬೆಳೆಯಲಿಕ್ಕೆ ತುಂಬಾ ಸಹಾಯ ಮಾಡಿತು.
ಸುವರ್ಣ ವಾಹಿನಿಯಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದು...
ನನಗೆ ಯಾವುದು ತುಂಬಾ ಆಕರ್ಷಿಸಿತ್ತೋ, ಅದರ ಕಡೆ ಒಂದು ಕೈನೋಡೇ ಬಿಡುವ ಅನ್ನುವ ಸ್ವಭಾವ ನನ್ನದು. ನಾನು ಟೀವಿಗೆ ಹೋಗೋ ನಿರ್ಧಾರ ತೆಗೆದುಕೊಂಡಾಗ, ನೀವು ಈಗಿರೋ ಘಟ್ಟದಲ್ಲಿ ಟೀವಿ ಕಡೆ ಹೋಗಬೇಡಿ ಅಂತ ನನಗೆ ಬಹಳಷ್ಟು ಜನ ಹೇಳಿದ್ರು, ನನಗೆ ಸಿನಿಮಾ ಮತ್ತು ಟೀವಿಯಲ್ಲಿ ಅಂತಹ ದೊಡ್ಡ ವ್ಯತ್ಯಾಸ ಕಾಣಲೇ ಇಲ್ಲ. ಪ್ಯಾಟೇ ಹುಡ್ಗೀರು ಹಳ್ಳಿಗೆ ಬಂದ್ರು ರಿಯಾಲಿಟಿ ಶೋಗೆ ಜಡ್ಜ್ ಆಗಿ ಬರೋ ಕಾರಣ ಕೂಡ ಸಿಂಪಲ್ ಆಗಿತ್ತು. ನನಗೆ ಒಂದು ಸಿನಿಮಾದ ಮೊನೋಪಾಲಿ ಸಿಸ್ಟೆಂನಿಂದ ಸಣ್ಣ ಬದಲಾವಣೆ ಬೇಕಿತ್ತು. ಶೂಟಿಂಗ್ ಬೇರೆ ನಮ್ಮ ಶಿವಮೊಗ್ಗದಲ್ಲೇ ನಡೀತಾ ಇದ್ದುದರಿಂದ ನನಗೂ ಒಂದೊಳ್ಳೆಯ ಅನುಭವ. ರಿಯಾಲಿಟೀ ಶೋ ನಡೀತಾ ಇದ್ದ ಶಿವಮೊಗ್ಗದಲ್ಲೇ ನನ್ನ ತೋಟ ಇದೆ. ಶೂಟಿಂಗ್ ಮುಗಿಸಿಕೊಂಡು ಸೀದಾ ನಮ್ಮ ತೋಟಕ್ಕೆ ಹೋಗಿ ಇದ್ದು ಬಿಡ್ತಿದ್ದೆ. ಪ್ರತಿ ಶನಿವಾರ, ಭಾನುವಾರ ಶೂಟಿಂಗ್ ನಡಿಯೋದು, ನನಗೂ ವೀಕೆಂಡ್ನಲ್ಲಿ ಶಿವಮೊಗ್ಗಕ್ಕೆ ಹೋಗಿ ಶೂಟಿಂಗ್ನಲ್ಲಿ ಭಾಗವಹಿಸಿ ಹಾಗೆಯೇ ನಮ್ಮ ತೋಟದಲ್ಲಿ ಕಾಲ ಕಳಿಯೋಕೆ ಸಾಧ್ಯವಾಗ್ತಿತ್ತು. ಅದೇ ಟೈಮಲ್ಲಿ ನಾನು 'ವೀರಪರಂಪರೆ' ಸಿನಿಮಾ ಮಾಡ್ತಾ ಇದ್ದೆ. ಅದು ಗೋಕಾಕ್ನಲ್ಲಿ ಶೂಟಿಂಗ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ವಿಕೆಂಡ್ ಮತ್ತೆ ಶಿವಮೊಗ್ಗಕ್ಕೆ ಬರ್ಬೇಕಾಗಿತ್ತು. ಒಟ್ಟಾರೆ ಸುಮಾರು ಐನೂರರಿಂದ ಆರುನೂರು ಕಿಲೋಮೀಟರ್ ಪ್ರಯಾಣ ಮಾಡಿ ಶೂಟಿಂಗ್ನಲ್ಲಿ ಭಾಗವಹಿಸ್ತಾ ಇದ್ದೆ. ತುಂಬಾ ಪ್ರಯಾಣ, ಪ್ರಯಾಸ ಆದರೂ ಅದರಲ್ಲಿ ಏನೋ ಒಂತರ ಆಕರ್ಷಣೆ ಇತ್ತು. ಒಟ್ಟಾರೆಯಾಗಿ ಸುವರ್ಣ ವಾಹಿನಿಯ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದು ನನಗೆ ತುಂಬಾ ಖುಷಿ ಕೊಟ್ಟಿತ್ತು.
ಸಿನಿಮಾದಷ್ಟೇ ಟೀವಿ ಕೂಡ ಬೆಳೀತಾ ಇದೆ
ಟೆಲಿವಿಷನ್ ಬಗ್ಗೆ ನನಗೆ ತುಂಬಾ ಗೌರವವಿದೆ. ಸಿನಿಮಾದಲ್ಲಿಯೂ ಕೂಡ ಅಷ್ಟು ಪ್ರತಿಭೆಗಳಿಗೆ ಅವಕಾಶ ಕೊಡೋಕೆ ಆಗಲ್ಲ, ಆದರೆ ಟೀವಿ ಅಷ್ಟು ಪ್ರತಿಭೆಗಳಿಗೆ ಒಂದು ವೇದಿಕೆಯನ್ನು ಸೃಷ್ಟಿ ಮಾಡಿಕೊಡುತ್ತದೆ. ನಾನು ಆವಾಗವಾಗ ಟೀವಿಯನ್ನು ನೋಡ್ತಾ ಇರ್ತೀನಿ, ಎಷ್ಟೊಂದು ಒಳ್ಳೆಯ ಪ್ರತಿಭೆಗಳು ಅಲ್ಲಿವೆ. ಕೆಲವರನ್ನು ಗುರುತಿಸಿ ಅವಕಾಶ ನೀಡಿದ್ದು ಕೂಡ ಉಂಟು. ಟೀವಿಯಲ್ಲಿ ಮಿಂಚುತ್ತಿರುವ ಪ್ರತಿಭೆಗಳೆಲ್ಲಾ ಸಿನಿಮಾದಲ್ಲಿ ಒಂದಲ್ಲ ಒಂದು ದಿನ ಮಿಂಚಬೇಕು ಅಂತ ಟ್ರೈ ಮಾಡ್ತಾನೇ ಇರ್ತಾರೆ. ಸಿನಿಮಾಕ್ಕೆ ಬರಲಿಕ್ಕೆ ಟೀವಿ ಒಂದೊಳ್ಳೆಯ ಬುನಾದಿಯನ್ನು ಹಾಕಿಕೊಡುತ್ತೆ. ಸಿನಿಮಾದಲ್ಲಿ ಸೋತವರಿಗೆ ಟೀವಿ ಒಳ್ಳೆಯ ಜೀವನ ಕೊಟ್ಟಿದೆ. ಸಾವಿರಾರು ತಂತ್ರಜ್ಞರು, ಕಲಾವಿದರು ಇಂದಿಗೂ ಟೀವಿಯನ್ನೇ ನಂಬಿಕೊಂಡು ಬದುಕ್ತಾ ಇದ್ದಾರೆ. ತಮ್ಮದೇ ಸ್ವಂತ ನೆಲೆ ಮಾಡಿಕೊಂಡಿದ್ದಾರೆ, ತಮ್ಮದೇ ಸ್ಟುಡಿಯೋಗಳನ್ನು ಮಾಡಿಕೊಂಡಿದ್ದಾರೆ. ತಮ್ಮದೇ ಅಸೋಸಿಯೇಷನ್ ಮಾಡಿಕೊಂಡು ಹತ್ತು ಹಲವು ಸೌಲಭ್ಯಗಳನ್ನು ಪಡೆದುಕೊಳ್ತಾ ಇದ್ದಾರೆ. ಇನ್ನೊಂದು ದೃಷ್ಟಿಯಲ್ಲಿ ನೋಡೋದಾದ್ರೆ, ಸೀರಿಯಲ್ ಮಾಡಿಕೊಂಡು ಇರೋ ಕಲಾವಿದರು, ಸಿನಿಮಾ ಕಲಾವಿದರಿಗಿಂತ ತುಂಬಾ ಪಾಪುಲರ್ ಆಗಿದಾರೆ. ಅವರಿಗೆ ಸಿನಿಮಾದ ಹೀರೋಗಳಿರುವಂತೆ ದೊಡ್ಡ ಫ್ಯಾನ್ಸ್ ಕ್ಲಬ್ಗಳು ಇರದೇ ಇರಬಹುದು, ಆದರೆ ಅವರಿಗೂ ನಮ್ಮಷ್ಟೇ ಜನಪ್ರಿಯತೆ ಇದೆ. ಇಂದು ಕೆಲವು ಸೀರಿಯಲ್ಗಳನ್ನು ಮನೆಯಲ್ಲಿನ ಹೆಂಗಸರು ತಪ್ಪದೇ ನೋಡೋರಿದ್ದಾರೆ. ಹೀಗೆ ಕೆಲವು ಸೀರಿಯಲ್ಗಳು, ಕಾರ್ಯಕ್ರಮಗಳನ್ನು ಲಕ್ಷ ಲಕ್ಷ ಜನ ನೋಡ್ತಿರ್ತಾರೆ. ಇದನ್ನೆಲ್ಲಾ ನೋಡಿದ್ರೆ ಸಿನಿಮಾಗಿಂತ ಒಂದು ಹಂತದಲ್ಲಿ ಟೀವಿಯವರು ಮುಂದೆ ನಿಂತುಬಿಡ್ತಾರೆ.
ಎಲ್ಲಿಯೂ ಹೋಗಿಲ್ಲ, ಜೆ.ಪಿ. ನಗರದಲ್ಲೇ ಇದ್ದೀನಿ!
ಇಂದು ಬಹಳಷ್ಟು ಜನ, ಮಾಧ್ಯಮದವರು ಸುದೀಪ್ `ಈಗ' ಫಿಲಂ ಹಿಟ್ ಆದಮೇಲೆ ಹೈದರಾಬಾದ್ಗೆ ಶಿಫ್ಟ್ ಆಗಿದಾರೆ, ಬಾಂಬೆಯಲ್ಲಿ ಇದಾರೆ, ಅವ್ರು ಯಾರಿಗೂ ಕೈಸಿಗೊಲ್ಲ, ಬೇರೆ ಭಾಷೆಗಳ ಸಿನಿಮಾ ಒಪ್ಪಿಕೊಂಡಿದ್ದಾರೆ. ತರಹ ಬೇರೆ ಬೇರೆ ರೀತಿಯಲ್ಲಿ ಮಾತನಾಡಿದ್ದುಂಟು. ಇದರ ಬಗ್ಗೆ ಒಂದು ಮಾತು ಹೇಳೋದಾದ್ರೆ, ಇದುವರೆಗಿನ ನನ್ನ ಎಲ್ಲ ಸಿನಿಮಾಗಳ ಯಶಸ್ಸಿನಿಂದ ನಾನೇನು ಉಬ್ಬಿಹೋಗಿಲ್ಲ. ನನಗೆ ಕೊಟ್ಟ ಯಾವುದೇ ಪಾತ್ರ ಆಗಲಿ, ಅದನ್ನು ನಿಷ್ಠೆಯಿಂದ, ಜೀವ ತುಂಬಿ ನಿರ್ವಹಿಸುವುದು ನನ್ನ ಕೆಲಸ ಅಷ್ಟೇ. ಅದು ಯಾವುದೇ ಭಾಷೆಯ ಸಿನಿಮಾ ಆದರೂ ತೊಂದರೆಯಿಲ್ಲ. `ಈಗ' ಸಿನಿಮಾ ಎಲ್ಲೆಡೆ ಹಿಟ್ ಆಗಿದೆ. ಹಾಗಂತ ನಾನು ಇನ್ಮುಂದೆ ಅಲ್ಲಿಗೆ ಹೋಗ್ತೀನಿ, ಕಡೆ ಶಿಫ್ಟ್ ಆಗ್ತೀನಿ ಅನ್ನೋದರಲ್ಲೇ ಅರ್ಥವೇ ಇಲ್ಲ. ಇಂದಿಗೂ ಇದೇ ಬೆಂಗಳೂರಿನಲ್ಲೇ, ಜೆ.ಪಿ.ನಗರದ ನಮ್ಮ ಮನೆಯಲ್ಲೇ ನಾನು ಇರೋದು.
ಇಂದಿಗೂ ಅದೇ ಸ್ನೇಹಿತರು
ಇಂದು ನಾನು ಹಿಂದಿ, ತೆಲುಗು, ತಮಿಳು ಚಿತ್ರರಂಗ, ಸಿಸಿಎಲ್ ಕ್ರಿಕೆಟ್ ಮ್ಯಾಚು ಹೀಗೆ ಎಲ್ಲೆಡೆ ನಾನು ಸಕ್ರಿಯನಾಗಿ ಭಾಗವಹಿಸುತ್ತಿದ್ದೇನೆ. ಬೇರೆ ಭಾಷೆಯ ಫಿಲಂ ಸ್ಟಾರ್ಸ್, ಡೈರೆಕ್ಟರ್ಸ್ ತುಂಬಾ ಪರಿಚಯವಾಗ್ತಾ ಇದಾರೆ. ಹೀಗೆ ಪರಿಚಯವಾದವರು ಕೆಲವರು ಒಳ್ಳೆಯ ಸ್ನೇಹಿತರಾಗಿದ್ದಾರೆ. ಹಾಗಂತ ಹೊಸ ಹೊಸ ಸ್ನೇಹಿತರು ಸಿಗುತ್ತಿದ್ದಾರೆ ಅಂತ ಹೇಳ್ಬಿಟ್ಟು ನನ್ನ ಹಳೆಯ ಸ್ನೇಹಿತರನ್ನು ಮರೆತಿಲ್ಲ. ಇಂದಿಗೂ ಆತ್ಮೀಯ ಸ್ನೇಹಿತರು ಮನೆಗೆ ಬರ್ತಾರೆ. ಅದೇ ಆತ್ಮೀಯತೆ, ಸ್ನೇಹ ಎಲ್ಲರ ಜೊತೆ ಹಾಗೆಯೇ ಇದೆ.
ಒಳ್ಳೆಯ ಕಥೆ 'ಬಚ್ಚನ್'ನಲ್ಲಿದೆ
ಫಸ್ಟ್ ಟೈಮ್ ಶಶಾಂಕ್ ಜೊತೆ ಕೆಲಸ ಮಾಡ್ತಾ ಇದೀನಿ, ತುಂಬಾ ಒಳ್ಳೆಯ ಕಥೆ ಮಾಡಿದ್ದಾನೆ. ಈಗಾಗಲೇ 30 ದಿನಗಳ ಶೂಟಿಂಗ್ ಮುಗಿದಿದೆ. ಇನ್ನು ಸ್ವಲ್ಪ ಬ್ಯಾಲನ್ಸ್ ಇದೆ. ಚಿತ್ರದ ಬಗ್ಗೆ ತುಂಬಾ ತುಂಬಾ ನಿರೀಕ್ಷೆ ಇದೆ. ಉದಯ ಮೆಹ್ತಾ ನಿರ್ಮಾಪಕರು ತುಂಬಾ ಸಪೋರ್ಟಿವ್ ಆಗಿದ್ದಾರೆಮುಂದಿನ ಸಿನಿಮಾಗಳ ಬಗ್ಗೆ ನಾನು ಎಂದೂ ಪ್ಲಾನು ಮಾಡೋಲ್ಲ. ಸದ್ಯ 'ಬಚ್ಚನ್' ಒಪ್ಪಿಕೊಂಡಿದ್ದೀನಿ. ಇದು ಮುಗಿದ ಮೇಲೆ ಬೇರೆ ಸಿನಿಮಾ ಕಡೆ ಯೋಚನೆ ಮಾಡ್ತೀನಿ. ಒಂದೇ ಟೈಮಲ್ಲಿ ಎರಡೂ ಮೂರು ಸಿನಿಮಾ ಕಡೆ ಯೋಚನೆ ಮಾಡುವ ಹಾಗೂ ಭವಿಷ್ಯದ ಬಗ್ಗೆ ಕಾಲ್ಕುಲೇಟರ್ ಇಟ್ಟುಕೊಂಡು ಲೆಕ್ಕ ಮಾಡುವ ಜಾಯಮಾನ ನನ್ನದಲ್ಲ. ಪ್ರೆಸೆಂಟ್ ಆಗಿರೋ ವಿಷಯಗಳಿಗೆ ತುಂಬಾ ಮಹತ್ವ ಕೊಡ್ತೀನಿ.
ತಂದೆ ತಾಯಿಯೇ ನಿಜಕ್ಕೂ ದೊಡ್ಡ ಪ್ರೇರಣೆ
ನಿಜಕ್ಕೂ ದೇವರು ಇದ್ದಾನೋ, ಇಲ್ಲವೋ ನಂಗೊತ್ತಿಲ್ಲ. ಆದರೆ ಕೆಲವೊಂದು ವಿಷಯಗಳಲ್ಲಿ ನಾನು ಅದರ ತರ್ಕಕ್ಕೆ ಹೋಗುವುದಿಲ್ಲ. ನನ್ನ ಕಣ್ಣಿಗೆ ನನ್ನ ತಂದೆತಾಯಿಯೇ ದೊಡ್ಡ ದೇವರು. ನಮ್ಮ ತಂದೆಯ ಜೀವನವೇ ದೊಡ್ಡ ಪಾಠ. ಶಿವಮೊಗ್ಗದಂತಹ ನಗರದಿಂದ ಬೆಂಗಳೂರಿಗೆ ಬಂದು ಹಂತಹಂತವಾಗಿ ಬೆಳೆದು ಇಂದು ಬೆಂಗಳೂರಿನ ಬೆಸ್ಟ್ ಬ್ಯುಸಿಮೆನ್ಗಳಲ್ಲಿ ಒಬ್ಬರಾಗಿದ್ದಾರೆ. ತುಂಬಾ ಶ್ರಮಜೀವಿ. ಬಾಲ್ಯದಲ್ಲಿ ಎಲ್ಲ ಕಷ್ಟಗಳನ್ನು ನೋಡಿದ್ದೇನೆ. ಹೀಗಿದ್ದರೂ ನಮ್ಮ ತಂದೆ ಒಳ್ಳೆಯ ಶಿಕ್ಷಣ, ಸಂಸ್ಕಾರವನ್ನು ನೀಡಿದ್ದಾರೆ. ಅದೇ ನನ್ನನ್ನು ಇಲ್ಲಿವರೆಗೆ ತಂದು ನಿಲ್ಲಿಸಿದೆ.
ಸಿನಿಮಾಕ್ಕೆ ಟೀವಿ ತುಂಬಾ ಪೂರಕ
ಇಂದು ಸಿನಿಮಾ ಜಗತ್ತಿಗೆ, ಟೀವಿ ಎಲ್ಲ ರೀತಿಯಿಂದಲೂ ಸಹಾಯಕವಾಗುತ್ತಿದೆ. ಸಿನಿಮಾ ಉದ್ಯಮದಲ್ಲಿ ಕೋಟಿಗಟ್ಟಲೇ ಹಣವನ್ನು ಹೂಡಿಕೆ ಮಾಡಲಾಗುತ್ತಿದೆ. ಹಾಗಾಗಿ ಸಿನಿಮಾಗಳ ಪ್ರಮೋಷನ್ಗೆ ಟೀವಿ ಎಲ್ಲ ರೀತಿಯಿಂದಲೂ ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ. ಅದು ಚಿತ್ರದ ಪ್ರಚಾರವಾಗಿರಬಹುದು, ಸಿನಿಮಾದ ಸುದ್ದಿ ಬಿತ್ತರವಾಗಿರಬಹುದು, ಮಾರುಕಟ್ಟೆಯ ವ್ಯಾಪ್ತಿಯನ್ನು ಅರ್ಥಮಾಡಿಕೊಂಡು ಸಿನಿಮಾ ಪ್ರಮೋಷನ್ಗೆ ಸಹಾಯ  ಮಾಡುವುದರ ಜೊತೆಗೆ ನೇರವಾಗಿ ಜನರ ಬಳಿಗೆ ಸಾಗಲು ಟೀವಿಯಿಂದ ಮಾತ್ರ ಸಾಧ್ಯವಾಗುತ್ತಿದೆ.
ಅಭಿಮಾನಿಗಳಿಗೆ ನಿಮ್ಮ ಸಂದೇಶ?
ಅಭಿಮಾನಿಗಳಿಗೆ ನಾನು ಏನು ಹೇಳಬೇಕು ಅಂತ ಅಂದುಕೊಂಡಿದ್ದೆನೋ, ಅದನ್ನೆಲ್ಲಾ ನನ್ನ ಚಿತ್ರಗಳ ಮೂಲಕ ಹೇಳಲಿಕ್ಕೆ ಪ್ರಯತ್ನಪಟ್ಟಿದ್ದೀನಿ, ಹಾಗೆಯೇ ಇದನ್ನೇ ಮುಂದುವರೆಸಿಕೊಂಡು ಹೋಗಲಿಕ್ಕೆ ಪ್ರಯತ್ನಿಸುತ್ತೇನೆ ಅಷ್ಟೇ. `ಈಗ' ಅನ್ನುವ ತೆಲಗು ಸಿನಿಮಾ ಕನ್ನಡದಲ್ಲಿ ಬಂದಿಲ್ಲ ಅನ್ನೋದೊಂದು ಬಿಟ್ರೆ, ಭಾಷೆ ಗೊತ್ತಿಲ್ಲದಿದ್ದರೂ ನನಗೋಸ್ಕರ ಥಿಯೇಟರ್ ಹುಡುಕಿಕೊಂಡು ಹೋಗಿ ತಮಿಳು, ತೆಲುಗಿನಲ್ಲಿ ಸಿನಿಮಾವನ್ನ ನೋಡಿದ್ರಲ್ಲ ನಮ್ಮ ಅಭಿಮಾನಿಗಳು, ಅವ್ರಿಗೆ ನಿಜವಾಗ್ಲೂ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಕಡಿಮೆಯೇ! ಇದುವರೆಗೂ ಯಾವ ಹೀರೋಗೂ ತರಹ ಮಾಡಿದ್ದು ಕಡಿಮೆಯೇ ಅಂತ ಹೇಳ್ಬೋದು. ಅದು ನಮ್ ಮೇಲೇ ಇಟ್ಟಿರುವ ಪ್ರೀತಿ ಅಂತಹದ್ದು. ನನಗೋಸ್ಕರ ನಮ್ಮ ಅಭಿಮಾನಿಗಳು ಮಾಡಿದ್ದಾರೆ. ಅವರ ಪ್ರೀತಿಯನ್ನು ಹಾಗೆ ಮುಂದುವರೆಸಿಕೊಂಡು ಹೋಗ್ತಿನಿ, ಅದು ಒಳ್ಳೊಳ್ಳೆಯ ಸಿನಿಮಾಗಳ ಮೂಲಕ