ಅವಳ ಕಣ್ಣುಗಳು ನನ್ನನ್ನು
ಬಿಗಿಯಾಗಿ ಅಪ್ಪಿಕೊಂಡಿದ್ದವು.
ಬಿಡಿಸಿಕೊಳ್ಳಬೇಕು ಅಂತ ಅಂದುಕೊಂಡರೂ,
ಅದ್ಯಾಕೋ.. ಮನಸ್ಸಾಗುತ್ತಿಲ್ಲ.
ಗೊತ್ತಿಲ್ಲ.. ಹೀಗ್ಯಾಕೆ ಆಗುತ್ತಿದೆ ಅಂತ.
ಅವಳ ಕಣ್ಣುಗಳನ್ನು ಮತ್ತೆ ನೋಡಿದೆ.
ಅಪ್ಪಿಕೊಂಡಿದ್ದವು. ಬೇಡ, ಈ ಅಪ್ಪುಗೆ ಸಾಕೆಂದೆ.
ಕೇಳಲಿಲ್ಲ. ಬೇಡಿದೆ. ಹೂ... ಅನ್ನಲಿಲ್ಲ.
ಬಿಟ್ಟುಬಿಡು ಅಂತ ಜೋರಾಗಿ ಕಿರುಚಿದೆ.
ಆ ಕಣ್ಣುಗಳು ಆಗಲೇ ನನ್ನ ದೇಹ ಸೇರಿದ್ದವು.
ಒಳಗಡೆ ಕಣ್ಣುಬಿಟ್ಟು ನನ್ನೊಳಗೆ ಏನನ್ನೋ ಹುಡುಕುತ್ತಿದ್ದವು..
ಈ ಕಣ್ಣುಗಳಿಗೆ ಜಾಗವಿದೆಯಾ ಅಂತ ಕೇಳುತ್ತಿದ್ದವು.
ಮೋಹದ ಬಲೆಯ ಪಾಷಾಣ
ಹೊಟ್ಟೆಯಲ್ಲಿ ಅಡಗುತಿಹುದು, ಆಕಳಿಸಿ ನೋಡುತಿಹುದು.
ಆಸೆಯ ಬಲವೋ, ಪ್ರೀತಿಯ ತೊಳಲಾಟವೋ
ಹೆಣ್ಣುಗಂಡಿನ ಸೃಷ್ಟಿಯ ವೈಚಿತ್ರ್ಯವೋ..!
ಈ ಅನುಭವದ ಅಂಗಾರಕವೋ..?
ಕಾಡುತಿಹುದು, ಬೇಡುತಿಹುದು.
ಅಬ್ಬಬ್ಬಾ...! ಬಿಡಲಾರೆ ಅನ್ನುತಿಹುದು.