Friday, 10 February 2012

ಪಾವ್ ಬಜಿ +ಇಡ್ಲಿಸಾಂಬಾರ್+ಪೊಂಗಲ್ = ಫುಲ್ ಆಂಧ್ರಮೀಲ್ಸ್

ಸೌತ್ ರೌಂಡ್

ಸಲ್ಮಾನ್ ಖಾನ್-ಕರೀನಾ ಬಾಲಿವುಡ್ ನಂ.1
ಬಾಲಿವುಡ್ ಸಿನಿಮಾಗಳನ್ನು ಥಿಯೇಟರ್ಗೆ ಹೋಗಿ ನೋಡುವ ಪ್ರಮೇಯ ಹೋಗಿಬಿಟ್ಟಿದೆ. ಎರಡು ವಾರ ಕಾದರೆ ಅದೇ  ನಿಮ್ಮ ಮನೆಯ ಟೀವಿಗೆ ಬರುತ್ತದೆ. ಅದು ಹಿಟ್ ಆಗಲಿ, ಹಿಟ್ ಆಗದೇ ಇರಲಿ, ಒಟ್ಟಾರೆ ಬಾಲಿವುಡ್ ಸಿನಿಮಾಗಳು ನಿಮ್ಮ ಮನೆಯ ಖಾಯಂ ಸದಸ್ಯನಾಗಿಬಿಡುತ್ತವೆ. ಶಾರುಖ್, ಸಲ್ಮಾನ್, ರಣಬೀರ್, ಹೃತಿಕ್, ಅಮೀರ್ಖಾನ್ನಂತಹ ಇನ್ನು ಅನೇಕ ಬಾಲಿವುಡ್ ನಾಯಕ-ನಾಯಕಿಯರೆಲ್ಲಾ ಡೇಲಿ ಸೀರಿಯಲ್ಗಳ ನಟಿಯರಿಗಿಂತ ತುಂಬಾ ಹತ್ತಿರವಾಗುತ್ತಿದ್ದಾರೆ. ಈ ವರ್ಷದ ಬ್ಲಾಕ್ಬಸ್ಟರ್ ಸಿನಿಮಾಗಳಾದ  ಬಾಡಿಗಾರ್ಡ್ , ರಾ ಒನ್, ಜಿಂದಗಿ ನ ಮಲೇಗಿ ದುಬಾರಾ, ದೆಲ್ಲಿ ಬೆಲ್ಲಿ, ಮರ್ಡರ್-2, ರೆಡಿ, ಸಿಂಗಂ ಬಿಡುಗಡೆಯಾಗಿ 2-3 ವಾರದೊಳಗೆ ಟಿವಿಯಲ್ಲಿ ಕಾಣಿಸಿಕೊಂಡಿವೆ. ಹೀಗಿದ್ದರೂ ಬಾಲಿವುಡ್ ಸಿನಿಮಾಗಳ ಕಲೆಕ್ಷನ್ ರಿಪೋರ್ಟ್
 ಮಾತ್ರ ಎಂಥವರನ್ನೂ ಹುಬ್ಬೇರಿಸುತ್ತದೆ. ಇದುವರೆಗೆ ಹಿಟ್ ಆದಂತಹ ಟಾಪ್ ಟೆನ್ ಸಿನಿಮಾಗಳ ವಹಿವಾಟು 843.58 ಕೋಟಿ ರೂ.ಗಳು( 171.08 ಮಿಲಿಯನ್ ಯುಎಸ್ ಡಾಲರ್). ಇದು 2010 ಕ್ಕಿಂತಲೂ ಶೇ.14.76 ರಷ್ಟು ಜಾಸ್ತಿ (2010-735.07 ಕೋಟಿ ರೂ.ಗಳು) ಬಾಲಿವುಡ್ ಹೀರೋಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಸಲ್ಮಾನ್ನ ` ಬಾಡಿಗಾರ್ಡ್', ಆತನದೇ ಹಿಂದಿನ `ದಭಾಂಗ್' ಸಿನಿಮಾದ ದಾಖಲೆಯನ್ನು ಮುರಿದಿತ್ತು.  `ಬಾಡಿಗಾರ್ಡ್'
 ಬಿಡುಗಡೆಯಾದ ಮೊದಲ ವಾರದಲ್ಲಿ 109.47 ಕೋಟಿ ರೂ.ಗಳ ಕಲೆಕ್ಷನ್ ಮಾಡಿತ್ತು.  ಒಟ್ಟಾರೆ ` ಬಾಡಿಗಾರ್ಡ್ ' ಸುಮಾರು 141 ಕೋಟಿ ರೂ.ಗಳನ್ನು ಸಂಗ್ರಹಿಸಿ ನಂ.1 ಸ್ಥಾನದಲ್ಲಿ ನಿಂತಿದೆ. ಸಲ್ಮಾನ್ ಖಾನ್ನ ಹಿಟ್ ಆದ ಈ ಎರಡು ಚಿತ್ರಗಳು ತೆಲುಗು ಹಾಗೂ ಮಲಯಾಳಂ ಸಿನಿಮಾಗಳ ರಿಮೇಕ್ ಅನ್ನೋದು ವಿಶೇಷವಾದ ಸಂಗತಿ. ಈ ಹಿಂದಿನ `3 ಈಡಿಯಟ್ಸ್'
 ಸಿನಿಮಾದ ದಾಖಲೆಯನ್ನು ಸಲ್ಮಾನ್ ಖಾನ್ ಈ ವರ್ಷ ಬ್ರೇಕ್ ಮಾಡಿದರು.  ಅದೇ ರೀತಿ ಸಲ್ಮಾನ್ರ ಈ ವರ್ಷದ ಇನ್ನೊಂದು ಚಿತ್ರ `ರೆಡಿ' ಸುಮಾರು 122 ಕೋಟಿ ರೂಗಳನ್ನು ಸಂಗ್ರಹಿಸಿದೆ. ಸಲ್ಮಾನ್ಖಾನ್ಗೆ ಸರಿಸಾಟಿಯಾಗಿ ಶಾರುಖ್ಖಾನ್ನ `ರಾ ಓನ್' ಮೊದಲ ವಾರದಲ್ಲೇ 22.8 ಕೋಟಿ ರೂ. ಸಂಗ್ರಹಿಸಿತ್ತು. ಈ ವರ್ಷ 'ರಾ ಓನ್' ಶಾರುಖ್ನ ಮೊದಲ ಸಿನಿಮಾ ನೂರು ಕೋಟಿ ರೂ.ಗಳನ್ನು ಸಂಗ್ರಹಿಸಿದೆ.  `ರಾ ಓನ್' ವಹಿವಾಟು ಸುಮಾರು 115 ಕೋಟಿ ರೂ.ಗಳು. ಸಲ್ಮಾನ್ ನಂತರ ಶಾರುಖ್ಖಾನ್ ಎರಡನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಶಾರುಖ್-ಸಲ್ಮಾನ್ ಖಾನ್ರ ಸಿನಿಮಾಗಳಲ್ಲಿ ಮಿಂಚಿದ ನಾಯಕಿ ಕರೀನಾ ಕಪೂರ್. ಈಕೆ ಅಭಿನಯಿಸಿದ `ಬಾಡಿಗಾರ್ಡ್' ಹಾಗೂ `ರಾ ಓನ್' ಎರಡು ಸಿನಿಮಾಗಳು ನೂರು ಕೋಟಿಗಿಂತಲೂ ಹೆಚ್ಚು ಹಣವನ್ನು ಸಂಗ್ರಹಿಸಿವೆ. ಹಾಗಾಗಿ ಸಲ್ಮಾನ್ ಖಾನ್  ಕಾಲ್ಶೀಟ್ ಬೆಲೆ ಸರಿಸುಮಾರು 40 ಕೋಟಿ ಹಾಗೂ ಕರೀನಾ ಪ್ರತಿ ಸಿನಿಮಾಕ್ಕೆ 8 ಕೋಟಿ ರೂಗಳನ್ನು ಡಿಮ್ಯಾಂಡ್ ಮಾಡುತ್ತಿದ್ದಾರೆ ಅನ್ನುತ್ತದೆ ಬಾಲಿವುಡ್ನ ಒಂದು ಮೂಲ.


ತೆಲುಗು: ಪ್ರಿನ್ಸ್ ಮಹೇಶ ಬಾಬು ನಂ.1 

ಭಾರತದಲ್ಲಿ ಅತಿ ಹೆಚ್ಚು ಸಿನಿಮಾಗಳು ಹಾಗೂ ಬಾಕ್ಸಾಫೀಸ್ ಕಲೆಕ್ಷನ್ನಲ್ಲಿ ಬಾಲಿವುಡ್ಗೆ ಸೆಡ್ಡು ಹೊಡೆಯುವ ಉದ್ಯಮ ಅಂದರೆ ಅದು ಟಾಲಿವುಡ್. ತೆಲುಗು ಚಿತ್ರೋದ್ಯಮದಲ್ಲಿ ಹಿಟ್ ಫಿಲಂಸ್ಗಳನ್ನು ಕೊಟ್ಟ ಸುಮಾರು 30ಕ್ಕೂ ಹೆಚ್ಚು ನಾಯಕರು ಸಿಗುತ್ತಾರೆ. ಎಲ್ಲ ನಾಯಕ ನಟರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. 2011ರಲ್ಲಿ ಬಿಡುಗಡೆಯಾದ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೇವಲ 8 ಸಿನಿಮಾಗಳು ಮಾತ್ರ ಸೂಪರ್ಡ್ಯೂಪರ್ ಹಿಟ್ ಆಗಿ ಟಾಲಿವುಡ್ ಉದ್ಯಮ ಕೂಡ ಕನ್ನಡದಂತೇ ಇಕ್ಕಟ್ಟಿಗೆ ಸಿಲುಕಿದೆ.  `ದುಕುಡು', `ಶ್ರೀರಾಮ ರಾಜ್ಯಂ', `ಊಸರವಳ್ಳಿ, `ಮಿ.ಪರ್ಫೆಕ್ಟ್', `ಮಿರಪಾಕಾಯ', `100% ಲವ್, `ರಂಗಂ', `ಅಲಾ ಮೊದನೈದಿ'  ಸಿನಿಮಾಗಳು ದಾಖಲೆಯ ಗಳಿಕೆಯನ್ನು ಗಳಿಸಿವೆ. ಮಹೇಶಬಾಬು ಅಭಿನಯದ 'ದುಕುಡು' ಸುಮಾರು ನೂರು ಕೋಟಿಗಿಂತಲೂ ಹೆಚ್ಚು ಬಾಕ್ಸಾಫೀಸ್ ಹಣವನ್ನು ದೋಚಿ ಮೊದಲ ಸ್ಥಾನದಲ್ಲಿ ನಿಂತಿದೆ. ಮಹೇಶ್ ಬಾಬು ಚಾಲ್ತಿಯಲ್ಲಿದ್ದ ಉಳಿದ ಸೂಪರ್ಸ್ಟಾರ್ಗಳಾದ ರಾಮಚರಣತೇಜ, ಅಲ್ಲು ಅರ್ಜುನ್ , ಪವನ್ಕಲ್ಯಾಣ್, ರವಿತೇಜ, ಸಿದ್ಧಾರ್ಥ್, ಪ್ರಭಾಸ್, ಜ್ಯೂ.ಎನ್ಟಿಆರ್ ಇನ್ನು ಹಲವು ಸ್ಟಾರ್ಗಳನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿ ಕುಳಿತಿದ್ದಾನೆ. ಹಾಗಾಗಿ ಮಹೇಶ್ ಬಾಬು 2011ರ ವರ್ಷದ ನಾಯಕನಾಗಿ ಹೊರಹೊಮ್ಮಿದ್ದಾರೆ. ತೆಲುಗು ನಟರು ಅಲ್ಲಿಯ ಹಿರೋಗಳ ಜೊತೆಗೆ ಮಾತ್ರ ಸ್ಪರ್ಧಿಸದೇ ಬೇರೆ ಭಾಷೆಗಳಿಂದ ಡಬ್ ಆಗಿ ಬಂದಂತಹ ಬಾಲಿವುಡ್, ಕಾಲಿವುಡ್, ಹಾಲಿವುಡ್ ಸಿನಿಮಾಗಳ ನಾಯಕರೊಂದಿಗೂ ಕೂಡ  ಸ್ಪರ್ಧಿಸಬೇಕಾಗಿದೆ. ಅಜಿತ್, ಸೂರ್ಯ, ವಿಜಯ್, ಮಾಧವನ್, ವಿಕ್ರಮ್ ಇನ್ನು ಅನೇಕ ತಮಿಳಿನ ನಾಯಕರು ಕೂಡ ತೆಲುಗು ನಾಯಕರ ಸ್ಪಧರ್ಿಗಳಾಗಿದ್ದಾರೆ. ಸಿನಿಮಾಗಳ ಹೊರತಾಗಿ ಈ ವರ್ಷ ತೆಲುಗು ಉದ್ಯಮದ ಸ್ಟಾರ್ ಫ್ಯಾಮಿಲಿಗಳ ಮದುವೆಮನೆ ಸುದ್ದಿಯೇ ಜಾಸ್ತಿ ಪ್ರಚಾರವನ್ನು ತೆಗೆದುಕೊಂಡಿದೆ. ಈ ಬಾರಿ ಟಾಲಿವುಡ್ನಲ್ಲಿ ಅನೇಕ ಸ್ಟಾರ್ಗಳು ಸಪ್ತಪದಿ ತುಳಿದಿದ್ದಾರೆ. ಇತ್ತೀಚೆಗೆ ಮೆಗಾಸ್ಟಾರ್ ಚಿರಂಜೀವಿ ಮಗ ರಾಮಚರಣ್ತೇಜ ನಿಶ್ಚಿತಾರ್ಥದ ಹೊರತಾಗಿ ಅಲ್ಲು ಅರ್ಜುನ್, ಜ್ಯೂ.ಎನ್ಟಿಆರ್ ಗ್ರಹಸ್ಥಾಶ್ರಮ ತುಳಿದಿರುವುದೂ ವಿಶೇಷ.

ತಮಿಳು-ಅಜಿತ್ ನಂ.1

ಇಡೀ ಬಾಲಿವುಡ್ನವರಿಗೆ ಸೆಡ್ಡು ಹೊಡೆದು ಕೋಟಿಗಟ್ಟಲೇ ಹಣವನ್ನು ಸುರಿದು ಸಿನಿಮಾ ಮಾಡುವ ವ್ಯಕ್ತಿಗಳು ಕಾಲಿವುಡ್ನಲ್ಲಿ ಸಿಗುತ್ತಾರೆ. ಶಂಕರ್ ನಿರ್ದೇಶಿಸಿದ `ರೋಬೋಟ್ ಮುಂದೆ ಶಾರುಖ್ಖಾನ್ನ `ರಾ-ಓನ್ ಸಪ್ಪೆ ಅಂತ ಅನಿಸುತ್ತದೆ. ಅದೇ ತರಹ ಅನೇಕ ಪ್ರಯತ್ನಗಳು ತಮಿಳು ಸಿನಿಮಾ ಉದ್ಯಮದಲ್ಲಿ ಸಾಮಾನ್ಯವಾಗಿರುತ್ತದೆ. 2011ರಲ್ಲಿಯೂ ಕೂಡ ಬಹುಕೋಟಿ ವೆಚ್ಚದ ಅನೇಕ ಸಿನಿಮಾಗಳು ಬಂದಿವೆ. ಕೆಲವು ಗೆದ್ದಿವೆ, ಅನೇಕವು ಸೋತಿವೆ. ಬಿಡುಗಡೆಯಾದ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೇವಲ ಹತ್ತು ತಮಿಳು ಸಿನಿಮಾಗಳು ಮಾತ್ರ ಗೆದ್ದಿವೆ. ಅವುಗಳಲ್ಲಿ ಅನುಕ್ರಮವಾಗಿ `ಮಂಖಾತಾ', `7 ಏಳಾಂ ಅರಿವು', `ವೇಲಾಯುಧಂ', `ಮಾಯಕ್ಕಂ ಎನ್ನಾ', `ವೆಂಗೈ', `ಅವನ್ ಇವನ್, `ಮಾಪಿಳ್ಳೈ',`ದೈವ ತಿರುಮಗಲ್, `ಕೋ', `ವಾನಂ' ಪ್ರಮುಖವಾದವುಗಳು. ತಮಿಳಿನಲ್ಲಿ ಈ ವರ್ಷ ಕಮಲ್ಹಾಸನ್, ರಜನಿಕಾಂತ್ರಂತಹ ಮೇರು ಕಲಾವಿದರ ಯಾವ ಸಿನಿಮಾಗಳೂ ತೆರೆಗೆ ಬರಲೇ ಇಲ್ಲ. ಹಾಗಾಗಿ ಯಂಗ್ ಸೂಪರ್ಸ್ಟಾರ್ಗಳದ್ದೇ ದೊಡ್ಡ ಸ್ಟಾರ್ವಾರ್ಸ್. 2011ರ ಟಾಪ್ಟೆನ್ ಕಲಾವಿದರನ್ನು ಹೆಸರಿಸುವುದಾದರೆ ಮೊದಲ ಸ್ಥಾನದಲ್ಲಿ ಅಜಿತ್ ನಿಲ್ಲುತ್ತಾರೆ. ಕಳೆದ ವರ್ಷ ಹೇಳಹೆಸರಿಲ್ಲದಂತೆ ಇದ್ದ ಅಜಿತ್ಗೆ ಈ ವರ್ಷ ದೊಡ್ಡ ಸುಗ್ಗಿ. ಅಜಿತ್ `ಮಂಖಾತಾ' ಸಿನಿಮಾದ ಗಳಿಕೆ ಹಾಗೂ ಜನಪ್ರಿಯತೆಯ ಮೂಲಕ ನಂ1 ಪಟ್ಟ ಅಲಂಕರಿಸಿದ್ದಾನೆ. ಅದೇ ರೀತಿ ಎರಡನೇ ಸ್ಥಾನದಲ್ಲಿ ವಿಜಯ್ (ವೇಲಾಯುಧಂ), ಮೂರನೇ ಸ್ಥಾನದಲ್ಲಿ ಸೂರ್ಯ (7 ಏಳಾಂ ಅರಿವು) ನಿಂತಿದ್ದಾರೆ. 4. ವಿಕ್ರಮ್ (ದೈವ ತಿರುಮಗಲ್), 5. ಕಾರ್ತಿಕ್  (ಸಿರುತೈ) 6. ಧನುಶ್(ಮಾಯಕ್ಕಂ ಎನ್ನಾಂ, ವೆಂಗೈ, ಮಾಪಿಲ್ಲೈ) 7. ಸಿಂಬು(ವಾನಂ), 8.ವಿಶಾಲ್ಕೃಷ್ಣ (ಅವನ್ ಇವನ್) 9. ಆರ್ಯ (ಅವನ್ ಇವನ್),  10. ಜೀವ(ಕೋ). ಇದು ಕಾಲಿವುಡ್ ತಮಿಳು ನಾಯಕರ ಜಟಾಪಟಿಯಲ್ಲಿ ಗೆದ್ದವರ ಹೆಸರು. 2011ರಲ್ಲಿ ಅಜಿತ್ಗೆ ನಂ.1 ಪಟ್ಟ ದಕ್ಕಿರುವ  ಜೊತೆಗೆ ದೊಡ್ಡ ಬ್ರೇಕ್ ಕೊಟ್ಟ ವರ್ಷ. ಸಿನಿಮಾ ಹೊರತಾಗಿ ಧನುಷ್ ಹಾಡಿದ `ಕೊಲಾವರಿ' ಇಡೀ ರಾಷ್ಟ್ರದ ಗಮನವನ್ನು ಸೆಳೆದಿತ್ತು. ಗಾಯಕನಾಗುವ ದೊಡ್ಡ ಸೆಳೆಯನ್ನು ಆತನಿಗುಂಟು ಮಾಡಿದೆ.

ಮಲಯಾಳಂ: ಸಲೀಮ್ ಕುಮಾರ್ ನಂ.1
ಬಾಲಿವುಡ್ನ ಈ ವರ್ಷದ ಬ್ಲಾಕ್ಬಸ್ಟರ್ ಸಿನಿಮಾ ` ಬಾಡಿಗಾರ್ಡ್'ನ ಸಿನಿಮಾ ಮೂಲ ಹುಟ್ಟಿದ್ದು ಮಲಯಾಳಂನಲ್ಲಿ. ಸಲ್ಮಾನ್ ಮಾಡಿದ ಪಾತ್ರವನ್ನು ದಿಲೀಪ್ ಮೂಲ ಸಿನಿಮಾದಲ್ಲಿ ಅಭಿನಯಿಸಿದ್ದರು. ಭಾರತೀಯ ಸಿನಿಮಾದಲ್ಲಿ ಅದ್ಭುತವಾದ ಕಥೆಗಳು ಹುಟ್ಟುವುದೇ ಕೇರಳದಲ್ಲಿ ಅನ್ನುವ ಮಟ್ಟಿಗೆ ಮಾಲಿವುಡ್ ಬೆಳೆದು ನಿಂತಿದೆ. ಇದಕ್ಕೆ ಈ ವರ್ಷದ ತಾಜಾ ಉದಾಹರಣೆ ಸಲೀಮ್ ಕುಮಾರ್  ಅಭಿನಯದ `ಅದಮಿಂಟೈ ಮಗನ್ ಅಬು' ಎಂಬ ಮಲಯಾಳಂ ಚಿತ್ರ  ಭಾರತದಿಂದ ಪ್ರತಿಷ್ಠಿತ ಆಸ್ಕರ್ ವಿಭಾಗಕ್ಕೆ ನಾಮಕರಣವಾದ ಏಕೈಕ ಸಿನಿಮಾ. 2011 ಮಾಲಿವುಡ್ಗೆ ಹೇಳಿಕೊಳ್ಳುವಂತಹ ವರ್ಷವಲ್ಲ. ಈ ವರ್ಷದಲ್ಲಿ ಕೇವಲ ಐದು ಸಿನಿಮಾಗಳು ಮಾತ್ರ ಸೂಪರ್ಡ್ಯೂಪರ್ ಹಿಟ್ ಆಗಿವೆ. `ಪ್ರಣಯಂ', `ಅದಮಿಂಟೈ ಮಗನ್ ಅಬು', `ಉರುಮಿ', `ಟ್ರಾಫಿಕ್, `ಇಂಡಿಯನ್ ರೂಪಿ' ಪ್ರಮೂಖವಾದವು. ಮಾಲಿವುಡ್ ಸೂಪರ್ಸ್ಟಾರ್ಗಳಾದ ಮೋಹನ್ಲಾಲ್ರ ನಾಲ್ಕು ಸಿನಿಮಾಗಳು (`ಪ್ರಯಣಂ', ಕ್ರಿಸ್ಚಿಯನ್ ಬ್ರದರ್ಸ್' `ಚೈನಾ ಟೌನ್, `ಸ್ನೇಹವೀಡು') ಇದರಲ್ಲಿ `ಪ್ರಯಣಂ' ಮಾತ್ರ ಗೆದ್ದಿದೆ. ಮುಮ್ಮುಟ್ಟಿಯ ನಾಲ್ಕು ಸಿನಿಮಗಳು (`ಆಗಸ್ಟ್-15', `ಡಬಲ್ಸ್', `ದಿ ಟ್ರೇನ್, 'ಬಾಂಬೆ ಮಾಸ್ಟಬಲ್) ಸೋತಿವೆ. ಮುಮ್ಮಟ್ಟಿಗೆ ಈ ವರ್ಷ ಗೆಲುವಿಲ್ಲ.  ಒಂದು ಲೆಕ್ಕದಲ್ಲಿ ಪೃಥ್ವಿರಾಜ್ ಅಭಿನಯಿಸಿದ ನಾಲ್ಕು ಸಿನಿಮಾಗಳಲ್ಲಿ (`ಇಂಡಿಯನ್ ರೂಪಿ', `ಊರುಮಿ', `ಸಿಟಿ ಆಫ್ ಗಾಡ್, `ಮಾಣಿಕ್ಯ ಕಲ್ಲು) `ಇಂಡಿಯನ್ ರೂಪಿ' ಹಾಗೂ `ಉರುಮಿ' ಚಿತ್ರಗಳು ಮಾತ್ರ ಗೆದ್ದಿವೆ. ಜಯರಾಂ ಅಭಿನಯದ `ಸೀನಿಯರ್ಸ್' ಹಾಗೂ `ಚೈನಾಟೌನ್ ಈ ಎರಡು ಸಿನಿಮಾಗಳು ಸೋತಿವೆ. ದಿಲೀಪ್ ಈ ವರ್ಷ ಹೇಳಿಕೊಳ್ಳುವಂತಹದನ್ನ ನೀಡಲಿಲ್ಲ. 2011 ವರ್ಷದ ಮಾಲಿವುಡ್ನ ಹೀರೋ ಆಗಿ ಹುಡುಕುವುದಾದರೆ `ಪೃಥ್ವಿರಾಜ್ ಹಾಗೂ `ಸಲೀಂ ಕುಮಾರ್ ಇಬ್ಬರೂ ಗೆಲ್ಲುತ್ತಾರೆ. ಕಮರ್ಷಿಯಲ್ ಅಂಶದ ಮೂಲಕ ನೋಡಿದರೆ ಆ ಸ್ಥಾನ ಪೃಥ್ವಿರಾಜ್ಗೆ ಸಲ್ಲುತ್ತದೆ. ಆದರೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ವರ್ಷ ಸಲಿಂಕುಮಾರ್ ಶ್ರೇಷ್ಠ್ಟರಾಗಿ ಗುರುತಿಸಲ್ಪಡುತ್ತಾರೆ. ಮಾಲಿವುಡ್ಗೆ ರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರಪ್ರಶಸ್ತಿ ಪಡೆಯುವುದರ ಮೂಲಕ ಪೃಥ್ವಿರಾಜ್ ಗಿಂತ ಒಂದು ಹೆಜ್ಜೆ ಮುಂದೆ ಹೋಗುತ್ತಾರೆ. ಹಾಗಾಗಿ 2011ರ  ಮಾಲಿವುಡ್ ಸ್ಟಾರ್ ಆಗಿ ಸಲೀಂಕುಮಾರನ್ನು ಗುರುತಿಸಬಹುದು.