Monday, 1 October 2012

ಗಾಂಧಿ ಬಾಣದ ನೆನಪು

ಗಾಂಧೀ ಜಯಂತಿಯ  ದಿನದಂದು ಗಾಂಧೀಜಿ ನನ್ನಲ್ಲಿ ಬೀರಿದ ಪ್ರಭಾವವನ್ನು ನೆನಪಿಸಿಕೊಳ್ಳುತ್ತಿದ್ದೇನೆ.
  ಕೆಳಗಿನ ಕವನ ನನ್ನ ಸಾಹಿತ್ಯ ರಚನೆಯ ಮೊದಲ ಕವಿತೆ. ನಾನು ಬರೆಯಬಲ್ಲೇ, ನನ್ನಲ್ಲೂ ಒಬ್ಬ ಕವಿ  ಇದ್ದಾನೆ ಎಂಬುದನ್ನು ಮೊದಲ ಬಾರಿಗೆ  ವ್ಯಕ್ತವಾಗಿದ್ದು ಕವನದ ಮೂಲಕ. ಇದಕ್ಕೆ ಮೂಲ ಪ್ರೇರಣೇಯೇ ಮಹಾತ್ಮಾ ಗಾಂಧೀಜಿ. ಮೊದಲ ಬಾರಿಗೆ ನಾನು ಕವನ ಬರೆದಿದ್ದು ಒಂಬತ್ತನೇ ಕ್ಲಾಸ್ನಲ್ಲಿದ್ದಾಗ. ಅಕ್ಷೋಬರ್ 2. 1999 ರಂದು ಶಾಲೆಯ ಗಾಂಧೀ ಜಯಂತಿ ಆಚರಣೆ ಬಗ್ಗೆ  ಹಾಗು ಗಾಂಧೀಜಿ ಬಗ್ಗೆ ಏನು ಮಾತನಾಡಬೇಕೆಂದು ಚಿಂತಿಸುತ್ತಾ ಮಲಗಿದ್ದ ನನಗೆ ರಾತ್ರಿ ಇಡೀ ನಿದ್ದೇ ಬರಲೇ ಇಲ್ಲ.  ಅಮ್ಮನಿಗೆ ಎಚ್ಚರ ಮಾಡದಂತೆ, ಮುಂಜಾನೆ ನಾಲ್ಕು ಘಂಟೆಗೆ ಎದ್ದು ಚಿಮಣಿ ದೀಪ ಹಚ್ಚಿಕೊಂಡು ಮನಸ್ಸಿನ ಪೂರ ಆವರಿಸಿಕೊಂಡಿದ್ದ ಗಾಂಧೀಜಯ ಬಗ್ಗೆ ಕೆಲವು ಸಾಲುಗಳನ್ನು ಅರ್ಧ ಗಂಟೆಯಲ್ಲಿ ಬರೆದುಬಿಟ್ಟೆ.  ಹೀಗೆ ನಾ ಬರೆದ ಸಾಲುಗಳು ಕವನದ ರೂಪ ಪಡೆದುಕೊಂಡಿದ್ದವು. ಹೋ.. ಇದು ಕವಿತೆಯಾಯಿತಲ್ಲ..! ನಾನು ಕವನ ಬರೆಯಬಲ್ಲೆ ಅಂತ ನನಗೆ ಅನಿಸಲಿಕ್ಕೆ ಶುರುವಾಯಿತು. ಗಾಂಧೀಜಿ ಬಗ್ಗೆ ಬರೆದ ಕವನದ ಸಾಲುಗಳನ್ನು ನಾನು ಹಾಗೆ ಇಟ್ಟುಕೊಂಡೆ. ಮತ್ತೇ ಮತ್ತೇ ಓದಿದೆ. ಕವನವನ್ನು ಯಾರಿಗೂ ತೋರಿಸಲೇ ಇಲ್ಲ. ಹೇಳಲೇ ಇಲ್ಲ. ಕನ್ನಡ ಟೀಚರ್ ಗೀತಾ ಮೇಡಂ ಗೆ ತೋರಿಸಬೇಕೆಂದು ಅಂದುಕೊಂಡರೂ ಧೈರ್ಯ ಸಾಲಲಿಲ್ಲ. ಸುಮ್ಮನಾದೆ. ಗಾಂಧೀಜಿ ನನ್ನ ಜೀವನದಲ್ಲಿ ಮಾಡಿದ ಮೋಡಿ ಇಂದಿಗೂ ಸದಾ ದೊಡ್ಡ ನೆನಪು. 1999 ರಂದು ಬರೆದ ಕವನ ಇಂದಿಗೂ ಅಪ್ ಡೇಟ್ ಆಗಿದೆ ಅಂತ ಅನಿಸುತ್ತಿದೆ. ಕವನಕ್ಕೆ ಹಾಗೂ ನನ್ನ ಮೊದಲ ಕಾವ್ಯನಾಮ ಚಗಶ್ರೀ (ಚಕ್ರಸಾಲಿ ಗದಿಗೆಪ್ಪ ಶ್ರೀಧರ) ಅಂತ ಇಟ್ಟುಕೊಂಡಿದ್ದೆ. ತೀನಶ್ರೀ, ಬಿಎಂಶ್ರೀ ರಿಂದ ಪ್ರೇರಣೆ . ಅವರಂತೆ ನಾನಾಗಬೇಕು ಅನ್ನುವ ಎಳೆಯ  ಹಂಬಲ ಅಂದು. 
ಗಾಂಧೀಜಿಯನ್ನು ಜೀವನದುದ್ದಕ್ಕೂ ಸದಾ ಕಾಡುತ್ತಾರೆ ನನ್ನ ಮೊದಲ  ಕವನದ ಮೂಲಕ.  ಗಾಂಧೀಜಿಯ ಪ್ರಭಾವ ನನಗೆ ಬರವಣಿಗೆ, ಸಾಹಿತ್ಯದ  ಕಡೆ ಆಸಕ್ತಿ ಒಂಬತ್ತನೇ ಕ್ಲಾಸ್ನಲ್ಲಿರುವಾಗಲೇ  ಬರುವಂತೆ ಮಾಡಿತ್ತು. ಗಾಂಧೀಜಿ ನೀನು ದಿನ ಮಾತ್ರ ನೆನಪಾಗೋಲ್ಲ.  ಸದಾ ನೀನು ನಮ್ಮನ್ನು ಆವರಿಸುತ್ತಿದ್ದೀಯೆ. ಪ್ರತಿದಿನ ನಿನ್ನನ್ನು ನೋಟುಗಳ ಮೂಲಕ ನೋಡುತ್ತಿದ್ದೇವೆ. ಹಣವನ್ನು ಕೊಡುವಾಗ, ತೆಗೆದುಕೊಳ್ಳುವಾಗ, ಹಣವನ್ನು ಕಳೆದುಕೊಂಡಾಗ, ನೀನು ಮಾತ್ರ ನೋಟಿನಲ್ಲಿ ಸದಾ ನಗುತ್ತಿರುತ್ತೀಯೆ. ನೀನು ಸದಾ ಚಲಾವಣೆಯಲ್ಲಿರುತ್ತೇಯೆ. ದಿನ ಕೇವಲ ನೆಪ ಮಾತ್ರ.
ಗಾಂಧಿ ಬಾಣ      
ಸ್ವಾತಂತ್ರ್ಯ ಪೂರ್ವದಲಿ ತೊಳಲಾಡುತ್ತಿದ್ದೇವು
ದಬ್ಬಾಳಿಕೆ ಮತ್ತು ಗಲಭೆ
ಸಿಗಬಾರದೇ ನಮಗೆ ದಾರಿದ್ರ್ಯದ ವಿಮೋಚನೆ
ಮೊರೆ ಕೇಳಿತೆನೋ  ವಿಧಾತನಿಗೆ
ತಿರುಗಿ ಬಿಟ್ಟ ನಮಗೊಂದು ಸ್ವಾತಂತ್ರ್ಯವೆಂಬ
ಅಲೆಯ  ಬಾಣ, ಅದರ ಜೊತೆಗೂ
ಬಿಟ್ಟನೂ ಒಂದು ಬಾಣ..
ಅದುವೇ ಗಾಂಧಿ ಬಾಣ.

ಗಾಂಧಿ ಬಾಣ ಬಂದು ಬಿಡ್ತು
ಸತ್ಯ ಅಹಿಂಸೆ ತಂದು ಬಿಟ್ತು
ನಾಡಿಗೆಲ್ಲಾ ಸುಖ ಶಾಂತಿ ತಂತು(ತಂದಿತು)
ನಮಗೆಲ್ಲಾ ಸುಗ್ಗಿಯ ಸುಖ ತಂದಿತು.

ನೀವು ನಮ್ಮ ಮೋಹನದಾಸ
ನಾನು ಮಾತ್ರ ನಿಮ್ಮ ಪಾದದಾಸ
ನಿಮ್ಮ ಅಪ್ಪ ಕರಮ ಚಂದ
ದೇಶ ಕರೆಯಿತು ನಿಮ್ಮನ್ನು ಮಹಾತ್ಮ ಎಂದು.

ನೀ ಜಗಕೇ ಬರುವಾಗ ನೀ ಅಳುತಲಿದ್ದೆ.
ನಾವ್ ನಗುತಲಿದ್ದೇವು.
ನೀ ಜಗವ ಬಿಡುವಾಗ ನಾವ್
ಅಳುತ್ತಲಿದ್ದೇವು. ನೀ ನಗುತ್ತಿದ್ದೆ.
ನಿನ್ನ ನಗು ಮುಖ ಇಂದಿಗೂ ಶಾಲೆಯ ಚಿತ್ರಪಟದಲ್ಲಿದೆ.
 ನಿನ್ನ ಸ್ವರೂಪ ಕೇಳಿ ನಲಿದೆ
ನಿನ್ನ ಧ್ಯಾನ ಮಾಡಿ ಕುಣಿದೆ
ನಿನ್ನ ತಪಸ್ಸಿಗೆ ಮಣಿದ ಬೊಮ್ಮ
ಕೊಟ್ಟೇ ಬಿಟ್ಟ ನಮಗೆ ಸ್ವಾತಂತ್ರ್ಯ ವರ.

ನಿನ್ನ ಮಹಿಮೆ ಸೇವೆಯನು ಅರಿಯದೇ
ನಿನ್ನ ನಿಸ್ವಾರ್ಥ ಸಾಧನೆಯನು ಅರಿಯದೇ
ಪಾಪಿಗಳ ಲೋಕದಲ್ಲಿ ಹುಟ್ಟಿದ ನಾವು
ನೀಡಿದೇವು ನಿನಗೆ ಸಾವಿನ ಮನೆ..

(ಬರೆದ ಕ್ಷಣ: ಅಕ್ಟೋಬರ್ 2.1999 ಮುಂಜಾನೆ 4 ಘಂಟೆ, ಬನವಾಸಿ, ಕಾಮನಗಲ್ಲಿ)

No comments:

Post a Comment