Sunday, 9 December 2012

ಅಂತೂ ನನ್ನ ಮೊದಲ ಪುಸ್ತಕ ಬಿಡುಗಡೆಗೆ ಸಿದ್ದವಾಯಿತು


ಸ್ನೇಹಿತರಿಗೆ,

ಕಳೆದ 4-5 ವರ್ಷಗಳಿಂದ `ಫಕೀರ' ಅನ್ನುವ ಪದನಾಮದಿಂದ ಲೇಖನ, ಸಂದರ್ಶನ, ಕಥೆ, ಕಾವ್ಯಗಳನ್ನು ನಾನು ಬರೆಯುತ್ತಿರುವೆ. ನನ್ನ ಬ್ಲಾಗ್ನ ಹೆಸರು ಕೂಡ `ಫಕೀರನ ಕನಸುಗಳು'. ನಾನು ಹೆಚ್ಚು ಕವನಗಳನ್ನು ಬರೆದಿದ್ದರೂ, ಮೂಲತಃ ನಾನೊಬ್ಬ ಕಥೆಗಾರ. ಕಥೆಗಳನ್ನು ಹೆಣೆಯುವುದು ಅಂದರೆ ನನಗೆ ಬಲು ಇಷ್ಟ. ಈಗ ನಾನು ಹೇಳಬೇಕಾದ ವಿಷಯವೇನಂದರೆ, ಕಳೆದ ನಾಲ್ಕು ವರ್ಷಗಳಲ್ಲಿ ನಾ ಬರೆದ ಅನೇಕ ಕಥೆಗಳಲ್ಲಿ `ಬೆಸ್ಟ್' ಅಂತ ಕರೆಸಿಕೊಳ್ಳುವ 9 ಕಥೆಗಳನ್ನು ಆಯ್ಕೆ ಮಾಡಿ 'ಅಮ್ಮನ ಆಟೋಗ್ರಾಫ್' ಎಂಬ ಹೆಸರಿನ ಕಥಾಸಂಕಲನವನ್ನು ನಮ್ಮ ಸಂಸ್ಥೆಯಾಗಿರುವ ಪಂಚಮಿ ಮಾಧ್ಯಮ ಪ್ರಕಾಶನ ಬಳಗ ಪುಸ್ತಕರೂಪದಲ್ಲಿ ತರುತ್ತಿದೆ.



`ಅಮ್ಮನ ಆಟೋಗ್ರಾಫ್' ಅನ್ನುವುದು ಕೂಡ 9 ಕಥೆಗಳಲ್ಲಿನ ಒಂದು ಕಥೆಯ ಹೆಸರು. ಅದನ್ನೆ ಪುಸ್ತಕಕ್ಕೆ ಹೆಸರಿಡಲಾಗಿದೆ. ಪುಸ್ತಕದಲ್ಲಿನ 9 ಕಥೆಗಳಲ್ಲಿ ಎರಡೋ ಮೂರೋ ಕಥೆಗಳು ಮಾತ್ರ ಪ್ರಕಟವಾಗಿವೆ. ಹೆಚ್ಚಿನವು ಅಪ್ರಕಟಿತ ಕಥೆಗಳೇ. ಮುಖ್ಯವಾಗಿ ನನ್ನ ಮೊದಲ ಕಥಾಸಂಕಲನಕ್ಕೆ ಕೇಂದ್ರ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ `ವೀರಭದ್ರ' ಎಂಬ ಕನ್ನಡದ ಹಿರಿಯ ಕಥೆಗಾರರು ನನ್ನ ಎಲ್ಲ ಕಥೆಗಳನ್ನು ಓದಿ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಅದೇ ರೀತಿ ಖ್ಯಾತ ಕಾದಂಬರಿಗಾರ್ತಿ  ತ್ರಿವೇಣಿಯವರ ಪತಿಯವರಾದ ಲೇಖಕರು, ನಾಟಕಕಾರ ಪ್ರೋ ಎಸ್.ಎನ್. ಶಂಕರ್ ತೀರಿಕೊಂಡು ಆಗಲೇ ಎರಡು ತಿಂಗಳಾದವುಅವರು ತೀರಿಕೊಳ್ಳುವ ಮುಂಚೆ ನನ್ನ ಕಥೆಗಳನ್ನು ಓದಿ ಅವರು ಕೂಡ ತಮ್ಮ ಮಾತುಗಳನ್ನು ಪುಸ್ತಕಕ್ಕೆ ಬರೆದುಕೊಟ್ಟಿದ್ದಾರೆ. ನನ್ನ ಆತ್ಮೀಯರಾಗಿರುವ ಪತ್ರಕರ್ತ ಹಾಗೂ ಲೇಖಕರಾಗಿರುವ ಕಗ್ಗೆರೆ ಪ್ರಕಾಶ್ ಅವರ ಅಭಿಮಾನ ಪೂರ್ವಕ ವಿಮರ್ಷೆ ಯಿಂದ ಕೂಡಿದ ನನ್ನ ಮೊದಲ ಪುಸ್ತಕ, ಇದೇ ತಿಂಗಳು ಮೈಸೂರಿನಲ್ಲಿ ಬಿಡುಗಡೆಯಾಗಲಿದೆ. ಮೊದಲ ಪುಸ್ತಕಕ್ಕೆ ಹಿರಿಯ ಸಾಹಿತಿಗಳಿಂದ ಸಿಕ್ಕಿದ ಪ್ರೋತ್ಸಾಹ ನನ್ನ ಸೌಭಾಗ್ಯವೇ ಸರಿ. ಪುಸ್ತಕದ ಮುಖಪುಟವನ್ನು ಚೆನ್ನಾಗಿ ಡಿಸೈನ್ ಮಾಡಿಕೊಟ್ಟವರು ಸ್ನೇಹಿತರಾಗಿರುವ ಆದರ್ಶ ಹಾಗೂ ಪ್ರಶಾಂತ್ ವಿಟ್ಲಸಹಕರಿಸಿದವರು ಅನೇಕರು, ಎಲ್ಲರನ್ನೂ ಪುಸ್ತಕದ ನನ್ನ ಮಾತಿನಲ್ಲಿ ನೆನಪಿಸಿಕೊಂಡಿದ್ದೇನೆ.

ಮುಖಪುಟದಲ್ಲಿ ನನ್ನ ಕಥಾಸಂಕಲನಕ್ಕೆ ಬರೆದ ಹಿರಿಯರ ಮಾತುಗಳು ರೀತಿಯಾಗಿವೆ.

1.                  ಪ್ರಸಿದ್ದ ಕಥೆಗಾರ ವೀರಭದ್ರ ಮಾತುಗಳು
ಸಾವಿರಾರು ವರ್ಷಗಳಿಂದ ಪ್ರತಿಭಾವಂತ ಮನಸ್ಸುಗಳು-ಇಡೀ ಮಾನವ ಕುಲಕ್ಕೆ ಒಳಿತನ್ನು ಬಯಸಿ ಕೃತಿ ರಚಿಸಿದ್ದಾರೆ. ಚಿತ್ರಕಲೆಯ ಮೂಲಕ, ನರ್ತನ ನಾಟಕದ ಮೂಲಕ, ನಾನಾ ಕಲೆಗಳ ಮೂಲಕ. `ಮನುಷ್ಯ ಜಾತಿ ತಾನೊಂದೆ ವಲಂ', `ಜನ ಬದುಕಲೆಂದು' ಕವಿ-ಕಲಾವಿದರು ಇಂದಿಗೂ, ಮುಂದೆಯೂ ಕೂಡ ಕಾಯಕದಲ್ಲಿ ಅನೇಕ ಜನ ನಿರತರಾಗಿದ್ದಾರೆ. ಅಸಂಖ್ಯಾತ ಯುವಕರು ಕಾಯಕದಲ್ಲಿ ತಲ್ಲೀನರಾಗಿದ್ದಾರೆ. ಲಕ್ಷೊಪಲಕ್ಷ ನಕ್ಷತ್ರಗಳಂತೆ ತಮ್ಮ ತಮ್ಮ ಶಕ್ತಿಗನುಗುಣವಾಗಿ ಬೆಳಕನ್ನು ಚಿಮ್ಮುತ್ತಿದ್ದಾರೆ. ಇಂದು ಕನ್ನಡದಲ್ಲಿ ಅಸಂಖ್ಯಾತ ಲೇಖಕರು ತಮ್ಮ ಶಕ್ತ್ಯಾನುಸಾರ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಯುವ ಸಾಹಿತಿಗಳ ಪ್ರವಾಹದಲ್ಲಿ ಶ್ರೀಧರ ಬನವಾಸಿ-'ಫಕೀರ' ಎಂಬ ಕಾವ್ಯನಾಮದಲ್ಲಿ `ಅಮ್ಮನ ಆಟೋಗ್ರಾಫ್' ಕಥಾ ಸಂಕಲನದಿಂದ ಗಮನಾರ್ಹ ಯುವ ಕಥೆಗಾರರೆನಿಸಿದ್ದಾರೆ. ಆಯ್ದುಕೊಂಡ ಕಥೆಗಳಲ್ಲಿ ಕೆಲವು ವಿಷಯಗಳು ಕನ್ನಡಕ್ಕೆ ಹೊಸದು. ವಿಶೇಷವಾಗಿ ಹಿಜಡಾ ಹಾಗೂ ಲಾರಿ ಡ್ರೈವರ್ಗಳು, ಕ್ಲೀನರ್ಗಳ ಕಥೆಯಂತೂ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಇನ್ನು ಕೆಲವು ಕಥೆಗಳನ್ನು ನಾಟಕರಂಗ ಹಾಗೂ ದೃಶ್ಯ ಮಾಧ್ಯಮಕ್ಕೆ ಅಳವಡಿಸುವಂತಿವೆ. ಒಬ್ಬ ಅನುಭವಿ ಕಥೆಗಾರನಲ್ಲಿ ಇರುವ ಶಕ್ತಿಯನ್ನು ಯುವ ಬರಹಗಾರ ಫಕೀರನ ಕಥೆಗಳಲ್ಲಿ ಕಾಣಬಹುದು. ಫಕೀರ (ಶ್ರೀಧರ ಬನವಾಸಿ) ಸಮರ್ಥ ಕಥೆಗಾರ. ಭವಿಷ್ಯದಲ್ಲಿ, ಶ್ರೇಷ್ಠ ಲೇಖಕ ಇವರಲ್ಲಿ ಅಂತರ್ಗತವಾಗಿದ್ದಾನೆ, ಆತ ಬಹಿರ್ಗತವಾಗಿ ಶ್ರೇಷ್ಠ ಲೇಖಕರ ಸಾಲಿನಲ್ಲಿ ಸೇರುತ್ತಾನೆ.
-ವೀರಭದ್ರ
ಕಥೆಗಾರರು

ಜನಪ್ರಿಯ ಕಾದಂಬರಿಗಾರ್ತಿ  ತ್ರಿವೇಣಿಯವರ ಪತಿ ಪ್ರೊ. ಎಸ್. ಎನ್. ಶಂಕರ್ ಹೇಳಿದ ಮಾತುಗಳು

 'ಅಮ್ಮನ ಆಟೋಗ್ರಾಫ್' ಕಥಾ ಸಂಕಲನವನ್ನು ಬರೆದ ಫಕೀರ ಒಳ್ಳೆಯ ಗುಣಮಟ್ಟದ, ಪ್ರತಿ ಕಥೆಯು ವಿಭಿನ್ನ ಅನುಭವವನ್ನು ನೀಡುವ ಕಥೆಗಳನ್ನು ರಚಿಸಿದ್ದಾನೆ. ಅದರಲ್ಲೂ ಇಂದಿನ ಯುವ ಸಾಹಿತಿಗಳು ಸಾಕಷ್ಟು ಅಧ್ಯಯನ, ಬರವಣಿಗೆ ಮಾಡಿಕೊಂಡಾಗ ಮಾತ್ರ ಒಳ್ಳೆಯ ಸಾಹಿತ್ಯ ಹುಟ್ಟಲು ಸಾಧ್ಯವಾಗುತ್ತದೆ. ನಿಟ್ಟಿನಲ್ಲಿ 'ಫಕೀರ' ಅಂಕಿತನಾಮದ ಶ್ರೀಧರ ಬನವಾಸಿ, ಸಂಕಲನಕ್ಕೂ ಮುಂಚೆ ಒಳ್ಳೆಯ ಸಾಹಿತ್ಯಕ ಅಧ್ಯಯನ ಮಾಡಿಕೊಂಡಿರುವುದು ಕಥೆಗಳನ್ನು ಓದಿದ ಮೇಲೆ ನಮಗೆ ಮನದಟ್ಟಾಗುತ್ತದೆ. ಫಕೀರನ ಕಥೆಗಳನ್ನು ನಾನು ಸೂಕ್ಷ್ಮವಾಗಿ ನೋಡಿದಾಗ, ಆತನ ಬೆಳೆದ ಪರಿಸರ ಆತನ ಕಥೆಗಳಲ್ಲಿ ಪ್ರಮುಖವಾಗಿ ಎದ್ದು ಕಾಣುತ್ತದೆ. ಆತನ ಕಥೆಗಳಲ್ಲಿ ಬೇರೆ ಕಥೆಗಾರರ ಯಾರ ನೆರಳು ಕಾಣುವುದಿಲ್ಲ, ತನ್ನದೇ ಕಲ್ಪನೆಗಳ ಮೂಲಕ ಕಥೆಗಳನ್ನು ಕಟ್ಟುವ ರೀತಿ ಮೆಚ್ಚುಗೆಯಾಗುತ್ತದೆ. ಮುಖ್ಯವಾಗಿ ಆತನ ಊರು ಬನವಾಸಿಯ ಕಲ್ಪನೆಯು ನಮ್ಮಲ್ಲಿ ಹೊಸ ಅನುಭವವನ್ನು ತಂದುಕೊಡುತ್ತದೆ. ಯಾವುದೇ ಸಾಹಿತಿಗೆ ಆತನ ಬೆಳೆದ ವಾತಾವರಣ, ಪ್ರತಿದಿನ ಕಾಣುವ ಪಾತ್ರಗಳು ಆತನ ಬರವಣಿಗೆಯಲ್ಲಿ ಆತನಿಗೆ ಅರಿವಿಲ್ಲದೆ ಬಂದು ಕೂತುಬಿಡುತ್ತದೆ. ಮೂಲಕ ಬರೆಯುವನಿಗೆ ಹೊಸಚೈತನ್ಯವನ್ನು ತಂದುಕೊಡುತ್ತದೆ. ಒಂದು ಪ್ರೇರಣೆ ಈತನಿಗೂ ಆಗಿರಬಹುದು. 'ಅಮ್ಮನ ಆಟೋಗ್ರಾಫ್' ಕಥಾ ಸಂಕಲನ ಜನಮಾನಸದಲ್ಲಿ ಸದಾ ಉಳಿಯಲಿದೆ. ಭರವಸೆಯ ಯುವ ಕಥೆಗಾರ ಫಕೀರನಿಗೆ ಕನ್ನಡ ಸಾಹಿತ್ಯ ವಲಯದಲ್ಲಿ ಬೆಳೆಯಲಿಕ್ಕೆ ಬಹಳಷ್ಟು ಅವಕಾಶವಿದೆ. ಒಳ್ಳೆಯ ಸಾಹಿತ್ಯವನ್ನು ಬರೆಯುವ ಮೂಲಕ ಓದುಗರನ್ನು ಪಡೆದುಕೊಳ್ಳಲಿ ಎಂಬುದು ನಮ್ಮ ಹಾರೈಕೆ.
-ಪ್ರೊ. ಎಸ್. ಎನ್. ಶಂಕರ್
ಲೇಖಕರು-ನಾಟಕಕಾರರು

ನನ್ನ ಸ್ನೇಹಿತರಾದ  ಪತ್ರಕರ್ತ ಕಗ್ಗೆರೆ ಪ್ರಕಾಶ್  ಪುಸ್ತಕದ ಬಗ್ಗೆ  ಬರೆದಿದ್ದು
ಮಾಧ್ಯಮ ವೃತ್ತಿಜೀವನದ ಹೊರತಾಗಿ ಕಥೆ, ಕವನ ಹಾಗೂ ಬರವಣಿಗೆಯಲ್ಲಿ ಶ್ರೀಧರ ಬನವಾಸಿ (ಫಕೀರ), ಸಾಹಿತ್ಯಕ ಚಟುವಟಿಕೆಯ ಕ್ಷೇತ್ರದಲ್ಲಿ ವಿಭಿನ್ನವಾಗಿ ನಿಲ್ಲಲಿದ್ದಾರೆ ಅನ್ನುವುದಕ್ಕೆ ಕಥಾ ಸಂಕಲನ ಸಾಕ್ಷಿಯಾಗುತ್ತದೆ. ಶ್ರೀಧರ ಬನವಾಸಿ ಹಾಗೂ ನಾನು ಕಳೆದ ಎರಡು ವರ್ಷಗಳಿಂದ ಪತ್ರಕರ್ತರಾಗಿ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಈತ ತುಂಬಾ ವಿಶಿಷ್ಟ ಬರಹಗಾರ ಅನ್ನುವುದರಲ್ಲಿ ಸಂದೇಹವೇನಿಲ್ಲ. ಫಕೀರನ ಸಂಕಲನದಲ್ಲಿ ಬರೆದಿರುವ ಎಲ್ಲಾ ಕಥೆಗಳೂ ಒಂದಿಲ್ಲ ಒಂದು ಕಾರಣಕ್ಕೆ ನಮಗೆ ತುಂಬಾ ಇಷ್ಟವಾಗುತ್ತವೆ. ಮನಸ್ಸಿಗೆ ತುಂಬ ಹತ್ತಿರವೆನಿಸುತ್ತವೆ. ಸಂಕಲನದ 'ಅಮ್ಮನ ಆಟೋಗ್ರಾಫ್' ಕಥೆಯೊಂದನ್ನೇ ಓದಿದಾಗ, ತಾಯಿಯ ಬಗ್ಗೆ ಏನೆಲ್ಲ ಹೇಳಬೇಕೋ ಅಂಥದ್ದೆಲ್ಲ ಸಮಗ್ರತೆ ಕಥೆಯಲ್ಲಿ ಅಡಗಿದೆ. ನೀವು ಕಥೆಯನ್ನು ಓದಿದ ಮೇಲೆ 'ತಾಯಿ' ಅನ್ನುವ ಭಾವನಾತ್ಮಕ ಸಂಬಂಧದಿಂದ ಹಾಗೂ ಪಾಪಪ್ರಜ್ಞೆಯಿಂದ ಹೊರಬರಲು ಸಾಧ್ಯವೇ ಇಲ್ಲ. ಕ್ಷಣ ಕತ್ತಲೆಯ ಭಯ',  'ಕಾಮನಗಲ್ಲಿಯ ಹುಡುಗರು', 'ಪೋಸ್ಟ್ ಮಾರ್ಟಂ', 'ಸಾಬರ ಹುಡುಗಿ', 'ಸೌದಾಮಿನಿ ಅಪಾರ್ಟ್ ಮೆಂಟ್', 'ಯಕ್ಷಪ್ರಶ್ನೆ', 'ಊರು ಮತ್ತು ದೇವರು' ಕಥೆಗಳು ನಿಮ್ಮನ್ನು ಬೇರೆಯದೇ ಜಗತ್ತಿಗೆ ಕೊಂಡೊಯ್ಯುವ ಶಕ್ತಿ-ಸಾಮಥ್ರ್ಯಗಳನ್ನು ಹೊಂದಿವೆ.
-ಕಗ್ಗೆರೆ ಪ್ರಕಾಶ್, ಲೇಖಕ-ಪತ್ರಕರ್ತ