ಮುದಿಕೋಣ ಎನ್ನಿರಿ, ದೊಡ್ಡವನಾಗಿದ್ದೀಯಾ ಕತ್ತೆ
ಅಂತ ಉಗಿಯಿರಿ. ತೊಂದರೆಯಿಲ್ಲ.
ಇಂದಿಗೂ ಅಮ್ಮನ ಬಿಸಿ ಅಪ್ಪುಗೆ
ಬೇಕೆನಿಸುತ್ತದೆ.
ಅವಳ ಅಪ್ಪುಗೆಯಲಿ ಮತ್ತೆ ಮಗುವಾಗಿ ಕೂಸಾಗಿ
ಬಲಿತದೇಹವು ಮೆತ್ತನೆಯ ಮೌಂಸಮುದ್ದೆಯಾಗಲು
ಅಪ್ಪಿದರೂ ಬೇಡವೆನ್ನದ ಆಕೆಯಲ್ಲಿ
ಇಂದಿಗೂ ಬೆಟ್ಟದಷ್ಟು ಪ್ರೀತಿ ಇದೆ.
ಅದೇ ನಾನು ಮಗುವಿದ್ದಾಗ ಇದ್ದ ಪ್ರೀತಿ.
ಅಮ್ಮನ ಅಪ್ಪುಗೆಯಲಿ
ಕಾಡುವ ಬಾಲ್ಯದ ನೆನಪುಗಳು
ನೆರೆದ ಗಡ್ಡದ ಮುಖಕ್ಕೆ ಸಿಹಿಮುತ್ತನು ನೀಡುತಾ
ಸದ್ಯದ ಬದುಕಿನ ನೂರು ನೋವುಗಳಿಗೆ
ಕೋಟಿ ಸಾಂತ್ವನವ ಪಡೆಯುತಾ
ನುಗ್ಗುತ್ತಿದ್ದ ನಾನು ಮುನ್ನುಗ್ಗುತ್ತಿದ್ದೆ.
ಅಮ್ಮನ ಬಿಸಿ ಅಪ್ಪುಗೆಯಲ್ಲಿ ಕಳೆದಿದ್ದೆ.
ನಾ ಮರೆತಿದ್ದೆ.