Monday, 13 August 2012

ಕಿರುತೆರೆಯ ಹನುಮಾನ್ `ದಾರಾ'ಸಿಂಗ್


(ದಾರಾಸಿಂಗ್ ನಮ್ಮನಗಲಿ ಆಗಲೇ ಒಂದು ತಿಂಗಳಾಯಿತು. ತಿಂಗಳ ನೆನಪಿನಲ್ಲಿ ದಾರಾಸಿಂಗ್ ಬಗ್ಗೆ ಸ್ವಲ್ಪ ಮಾಹಿತಿ ಆತನನ್ನು ನೆನಪಿಸಿಕೊಳ್ಳುತ್ತಾ...)

ದಾರಾಸಿಂಗ್ ಇಂದಿಗೂ ಭಾರತೀಯ ಚಿತ್ರರಂಗದಲ್ಲಿ ರಾಮಾಯಣ ಸೀರಿಯಲ್ ಮೂಲಕ ಕೋಟ್ಯಂತರ ಜನರ ಆರಾಧ್ಯದೈವವಾಗಿಬಿಟ್ಟಿದ್ದರು. ಹನುಮಂತನ ಪಾತ್ರಧಾರಿಯಾಗಿ, ತನ್ನ  ಆಜಾನುಬಾಹು ಆಳೆತ್ತರದ ಅಗಲ ದೇಹ ಹೊಂದಿದ್ದ ದಾರಾಸಿಂಗ್ ಟೀವಿ ಪ್ರೇಕ್ಷಕರ ಪಾಲಿಗೆ ನಿಜವಾಗಿಯೂ ಸಾಕ್ಷಾತ್ ಆಂಜನೇಯ ಸ್ವರೂಪವೇ ಆಗಿಬಿಟ್ಟಿದ್ದರು. ದಾರಾಸಿಂಗ್ ಒಬ್ಬ ಜಗದ್ವಿಖ್ಯಾತ ಕುಸ್ತಿಪಟುವಾಗಿ, ನಟನಾಗಿ, ನಿರ್ಮಾಪಕ, ನಿರ್ದೇಶಕ , ಸ್ಟುಡಿಯೋ ಮಾಲೀಕನಾಗಿ, ರಾಜಕೀಯ ಧುರೀಣನಾಗಿ ಜೀವನದ ಎಲ್ಲ ಸ್ತರಗಳಲ್ಲಿ ಅದ್ಭುತ ಸಾಧನೆ ಮಾಡಿ ಮಿಂಚಿರುವುದು ದಾರಾಸಿಂಗ್ ಬದುಕಿನ ದೊಡ್ಡ ವಿಶೇಷತೆ. ಹತ್ತು ಹಲವು ಸಾಂಗತ್ಯಗಳ ದಾರಾಸಿಂಗ್ ಇಂದು ಕೇವಲ ನೆನಪಷ್ಟೇ.



ಕಳೆದ ತಿಂಗಳಿನ ಜುಲೈ 12, 2012 ರಂದು ನಮ್ಮ ದೇಶದ ಸಿನಿಮಾ ಉದ್ಯಮದ `ಜೈ ಹನುಮಾನ್ ಕಣ್ಮರೆಯಾಗಿದ್ದುಅಪಾರ ನೋವನ್ನು ಎಡೆ ಮಾಡಿಕೊಟ್ಟಿತ್ತು. ದಾರಾಸಿಂಗ್ ಭಾರತೀಯ ಸಿನಿಮಾ ಹಾಗೂ ಕಿರುತೆರೆ ಉದ್ಯಮದ ದೊಡ್ಡ ಐಕನ್ ಅಂತ ಹೇಳಿದರೆ ತಪ್ಪಾಗಲಾರದು. ದಾರಾ ಸಿಂಗನ ನಿಧನಕ್ಕೆ ಇಡೀ ಭಾರತೀಯ ಸಿನಿಮಾ ಹಾಗೂ ಕಿರುತೆರೆ ಉದ್ಯಮವೇ ದೊಡ್ಡ ಸಂತಾಪವನ್ನು  ವ್ಯಕ್ತಪಡಿಸಿತ್ತುಬಾಲಿವುಡ್ ನಟ ಅಮಿತಾಭ್ ಬಚ್ಚನ್ ಟ್ವಿಟ್ಟರ್ನಲ್ಲಿ ದಾರಾಸಿಂಗ್ ಬಗ್ಗೆ ``Dara Singh as a great Indian and the finest human being’ ಅಂತ ಹೇಳಿದರೆ, ನಿರ್ದೇಶಕ ಮಹೇಶ್ ಭಟ್ ದಾರಾಸಿಂಗ್ ನನ್ನ ಬಾಲ್ಯದ ಹೀರೋ ಆಗಿದ್ದ ಅಂತ ನೆನಪಿಸಿಕೊಳ್ಳುತ್ತಾರೆ. ಅದೇ ಇನ್ನೊಬ್ಬ ನಟ ಮನೋಜ್ ಭಾಜಪೇಯಿ `ದಾರಾಸಿಂಗ್ ಸದೃಢ, ಆರೋಗ್ಯವಂತ ದೇಹದ ಚಿಹ್ನೆಯಾಗಿದ್ದರು' ಅಂತ ಹೇಳುತ್ತಾರೆ. ಹೀಗೆ ದಾರಾಸಿಂಗ್ರನ್ನು ಕಂಡಂತೆ ಒಬ್ಬೊಬ್ಬರು, ಒಂದೊಂದು ರೀತಿಯಲ್ಲಿ ವರ್ಣಿಸುತ್ತಾಹೋಗುತ್ತಾರೆ. ದಾರಾಸಿಂಗ್ ಬದುಕಿನ ಜೀವನವನ್ನು ನೋಡಿದಾಗ ಆತನಲ್ಲಿ ಭೀಮಸೇನನಂತಹ ಅದ್ಭುತವಾದ  ಪೈಲ್ವಾನನಿದ್ದ. ಕಲಾವಿದನಿದ್ದ, ನಿರ್ದೇಶಕನಿದ್ದ, ನಿರ್ಮಾಪಕನಿದ್ದ, ವ್ಯವಹಾರಸ್ಥನಿದ್ದ. ರಾಜಕೀಯ ಮುತ್ಸದ್ದಿಯಿದ್ದಹೀಗೆ 84 ವರ್ಷ ಬದುಕಿದ್ದ ದಾರಾಸಿಂಗ್ ತಮ್ಮ ಜೀವನದಲ್ಲಿ ಎಲ್ಲ ಸ್ತರಗಳನ್ನು ದಾಟಿ ಅಪಾರ ಯಶಸ್ಸು ಗಳಿಸಿದ್ದರು. ದಾರಾಸಿಂಗ್ ಜೀವನದ ಏಳುಬೀಳುಗಳ ಹಾದಿಯಲ್ಲಿ ಪಡೆದ ಯಶಸ್ಸು, ಸಾಧನೆ, ಅಭಿಮಾನಿಗಳು, ಸಿಕ್ಕ ಪ್ರಶಸ್ತಿಗಳು, ಒಬ್ಬ ಜನಪ್ರಿಯ ನಟನಿಗೆ ಏನೇನು ಸಿಗಬೇಕು ಅದೆಲ್ಲವನ್ನು ದಾರಾಸಿಂಗ್ ಪಡೆದಿದ್ದರು

ದಾರಾಸಿಂಗ್ ಬಯೋಡಾಟ

ಹುಟ್ಟಿದ ದಿನಾಂಕ: 19, ನವೆಂಬರ್1928
ಹುಟ್ಟಿದ ಸ್ಥಳ : ಧರ್ಮು ಚೌಕ್(ಅಮೃತಸರ-ಪಂಜಾಬ್)
1946-1983 (ಕುಸ್ತಿ ಪಟು), 1952-2012 (ನಟ), 2003-2009 (ರಾಜಕೀಯ)
ಜನಪ್ರಿಯ ಸಿನಿಮಾಗಳು: `ರುಸ್ತಂ ಬಾಗ್ದಾದ್', ಫೌಲಾದ್, ವೀರ್ ಭೀಮಸೇನ್, ಸಮ್ಸಾನ್, ಹರ್ಕಲ್ಸ್, ಟಾರ್ಝನ್, ಕಮ್ಸ್ ಟು ದೆಹಲಿ, ಸಿಕಂದರ್ ಆಜಾಮ್, ರಾಕಾ, ಬಾಕ್ಸರ್, ಢಾಕು ಮಂಗಲ್ ಸಿಂಗ್
ಕೊನೆಯ ಚಿತ್ರ: ಜಬ್ ವಿ ಮೆಟ್
ಟಿವಿ ಧಾರಾವಾಹಿಗಳು: ರಾಮಾಯಣ್, ಹದ್ ಕರ್ ದಿ, ಕ್ಯಾ ಹೋಗಾ ನಿಮ್ಮೋ ಕಾ


 ಹಲವು ಪ್ರಥಮಗಳ ಮೊದಲ `ದಾರ'

ಬಾಲ್ಯದಲ್ಲಿರುವಾಗಲೇ ಈತನ ಕಟುಮಸ್ತಾದ ದೇಹ, ಅಪ್ಪ ಅಮ್ಮನನ್ನೇ ಮೋಡಿ ಮಾಡಿತ್ತು. ದಾರಾಸಿಂಗ್ನ ಅಪ್ಪ ಈತನನ್ನು ಕುಸ್ತಿ ಕಲಿಯಲಿಕ್ಕೆ ತಮ್ಮ ಸ್ನೇಹಿತ ಪೈಲ್ವಾನರ ಹತ್ತಿರ ಸೇರಿಸಿದರು. ಗರಡಿ ಮನೆಯಲ್ಲಿ ಒಳ್ಳೆಯ ಕುಸ್ತಿ ಪಟುವಾಗಿ ಬೆಳೆದ ದಾರಾಸಿಂಗ್ ಕುಸ್ತಿ ಅಖಾಡಕ್ಕೆ ಇಳಿದೇ ಬಿಟ್ಟರು. ಆರಂಭದಲ್ಲಿ ಕುಸ್ತಿಯಲ್ಲಿ ಮಿಂಚಿದ ದಾರಾಸಿಂಗ್ ನಂತರ 1952ರಲ್ಲಿ ನಟನಾಗಿ ಪರಿಚಯವಾದರುದಾರಾ ಸಿಂಗ್ ಅಭಿನಯಿಸಿದ ಮೊದಲ ಚಿತ್ರ `ಸಂಗ್ದಿಲ್'. ದಾರಾಸಿಂಗ್ ಭಾರತೀಯ ಚಿತ್ರರಂಗದ ಮೊದಲ ಆಕ್ಷನ್ ಕಿಂಗ್. ಸಾಹಸಮಯ ಚಿತ್ರಗಳ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದ ದಾರಾಸಿಂಗ್ ಭಾರತೀಯ ಹೀರೋಗಳಲ್ಲಿ ಮೊದಲ ಬಾರಿ ತಮ್ಮ ದೇಹ ಪ್ರದರ್ಶನ ಮಾಡಿ, ಏಟ್ ಪ್ಯಾಕ್ ಆ್ಯಬ್ಸ್ ತನ್ನ ಚಿತ್ರದ ಮೂಲಕ ತೋರಿಸಿದ್ದು ಇಂದಿಗೂ ದಾಖಲೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಾರಾಸಿಂಗ್ಗೆ ಮೊದಲ ಬಾರಿ ಸ್ಟೋಟ್ಸ್   ಕೋಟಾದಡಿ ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು. ಹೀಗೆ ಒಬ್ಬ ಕುಸ್ತಿಪಟುವಾಗಿ, ನಟನಾಗಿ, ನಿರ್ಮಾಪಕ, ನಿರ್ದೇಶಕನಾಗಿ, ಸ್ಟುಡಿಯೋ ಮಾಲೀಕನಾಗಿ, ರಾಜಕೀಯ ಧುರೀಣನಾಗಿ ಜೀವನದಲ್ಲಿ ಎಲ್ಲ ಸ್ತರಗಳಲ್ಲೆ ಅದ್ಭುತ ಸಾಧನೆ ಮಾಡಿ ಮಿಂಚಿರುವುದು ದಾರಾಸಿಂಗ್ನ ವಿಶೇಷತೆಗಳಲ್ಲಿ ಒಂದು.

ದಾರಾ ಸಿನಿಮಾಗಳು

1952ರಲ್ಲಿ `ಸಂಗ್ದಿಲ್' ಸಿನಿಮಾದ ಮೂಲಕ ಪ್ರವೇಶ ಮಾಡಿ ಕುಸ್ತಿಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆಲ್ಲುತ್ತಾ, ಜಗತ್ತಿನಲ್ಲಿರೋ ಎಲ್ಲ ಪ್ರಸಿದ್ಧ ಕುಸ್ತಿಪಟುಗಳನ್ನು ಸೋಲಿಸಿ ದಾರಾಸಿಂಗ್ ಸೋಲಿಲ್ಲದ ಸರದಾರ ಅಂತ ಕರೆಸಿಕೊಂಡವರು. ದಾರಾಸಿಂಗ್ ಒಬ್ಬ ಕುಸ್ತಿಪಟುವಾಗಿದ್ದರಿಂದ ಆತನ ಕಟುಮಸ್ತಾದ ದೇಹ ಸಿನಿಮಾ ಉದ್ಯಮಕ್ಕೆ ಹೇಳಿ ಮಾಡಿಸಿದಂತಿತ್ತು. ದಾರಾ ಸಿಂಗ್ಗೆ ಹಿಂದಿ ಹಾಗೂ ಪಂಜಾಬಿ ಸಿನಿಮಾಗಳಲ್ಲಿ ಅವಕಾಶಗಳ ಸುರಿಮಳೆ ಆಯಿತು. 1960ರಿಂದ 1969ರವರೆಗೆ ಹಿಂದಿ ಚಿತ್ರರಂಗದಲ್ಲಿ, 1970-82 ರವರೆಗೆ  ಪಂಜಾಬಿ ಚಿತ್ರರಂಗದಲ್ಲಿ ಯಶಸ್ವಿ ನಟನಾಗಿ ಹೊರಹೊಮ್ಮಿದ್ದರು. ಒಟ್ಟಾರೆಯಾಗಿ 121 ಹಿಂದಿ ಸಿನಿಮಾಗಳು, 21 ಪಂಜಾಬಿ ಸಿನಿಮಾಗಳಲ್ಲಿ ದಾರಾಸಿಂಗ್ ಅಭಿನಯಿಸಿದ್ದರು. 70-80 ದಶಕದ ಪಂಜಾಬಿ ಸಿನಿಮಾಗಳಲ್ಲಿ ದಾರಾಸಿಂಗ್ನನ್ನು ಕಲ್ಪನೆಯಲ್ಟಿಟ್ಟುಕೊಂಡೇ ಸಿನಿಮಾ ಕಥೆಗಳನ್ನು ಮಾಡಲಾಗುತ್ತಿತ್ತು. ಆ್ಯಕ್ಷನ್ ಸಿನಿಮಾಗಳಲ್ಲಿ ಹೆಚ್ಚು ನಾಯಕನಾಗಿ ದಾರಾಸಿಂಗ್ ಮಿಂಚಿದ್ದರು. ದಾರಾ ಅಭಿನಯಿಸಿದ ಕೊನೆಯ ಚಿತ್ರ `ಜಬ್ ವಿ ಮೆಟ್'. ಹಿಂದಿ ಪಂಜಾಬಿ ಸಿನಿಮಾಗಳ ಹೊರತಾಗಿ ತೆಲಗು, ಮಲಯಾಳಂ ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದರು.
ಅಭಿನಯಿಸಿದ 144 ಸಿನಿಮಾಗಳಲ್ಲಿ 58 ಸಿನಿಮಾಗಳಲ್ಲಿ ದಾರಾಸಿಂಗ್ ನಾಯಕನಾಗಿ ಮಿಂಚಿದ್ದರು. 1970ರಲ್ಲಿ `ಮಮ್ತಾಜ್ ದುಖಿಯಾ ಸಬ್ ಸನ್ಸಾರ್' ಸಿನಿಮಾದ ಮೂಲಕ ನಿರ್ದೇಶಕನಾಗಿ, ಬರಹಗಾರರಾಗಿ, ನಿರ್ಮಾಪಕರಾಗಿ ಪರಿಚಯವಾದರು. ಏಳು ಪಂಜಾಬಿ ಸಿನಿಮಾಗಳನ್ನು ನಿರ್ದೇಶನ ಮಾಡಿದರು. ಸವಾ ಲಕ್ ಸೇ ಏಕ್ ಲಾಡಾನ್, ನಾನಾಕ್ ದುಖಿಯಾ ಸಬ್ ಸನ್ಸಾರ್, ಧ್ಯಾನು ಭಾಗತ್, ರಬ್ ದಿಯಾನ್ ರಾಖಾನ್ ಇವು ದಾರಾ ಸಿಂಗ್ ನಿರ್ದೇಶನದ ಪಂಜಾಬಿ ಸಿನಿಮಾಗಳು.

ಕಿರುತೆರೆಯಲ್ಲಿ ದಾರಾ

ಇಂದಿಗೂ ಮನಸ್ಸಿನಲ್ಲಿ ಹನುಮಾನ್ನನ್ನು ನೆನಪಿಸಿಕೊಂಡರೆ ದಾರಾಸಿಂಗ್ ಅಭಿನಯಿಸಿದ್ದ ರಾಮಾಯಣ್ ಸೀರಿಯಲ್ ನೆನಪಾಗುತ್ತದೆ. 1980 ನಂತರ ದಾರಾಸಿಂಗ್ ಬೆಳ್ಳಿ ಪರದೆಯಿಂದ ಕಿರುತೆರೆಗೆ ಧುಮುಕಿದ ಮೇಲೆ ಸಿನಿಮಾಗಳಿಗಿಂತ ಅಪಾರ ಅಭಿಮಾನಿಗಳನ್ನು ಹನುಮಾನ್ ಪಾತ್ರಧಾರಿಯಾಗಿ ಅಭಿನಯಿಸಿದ್ದ `ರಾಮಾಯಣ್' ತಂದುಕೊಟ್ಟಿತ್ತು. ರಮಾನಂದಸಾಗರ್ ನಿರ್ದೇಶನದ `ರಾಮಾಯಣ್' ಸೀರಿಯಲ್ ಅಂದು ಅಪಾರ ಜನಪ್ರಿಯತೆಯನ್ನು ಗಳಿಸಿತ್ತು. ಹನುಮಂತನ ಪಾತ್ರಧಾರಿಯಾಗಿ, ತನ್ನ ಆಜಾನುಬಾಹು ಆಳೆತ್ತರದ ಅಗಲ ದೇಹ ಹೊಂದಿದ್ದ ದಾರಾಸಿಂಗ್ ಪ್ರೇಕ್ಷಕರ ಪಾಲಿಗೆ ನಿಜವಾಗಿಯೂ ಸಾಕ್ಷಾತ್ ಆಂಜನೇಯ ಸ್ವರೂಪವೇ ಆಗಿಬಿಟ್ಟಿದ್ದರು. `ರಾಮಾಯಣ್' ಸೀರಿಯಲ್ ಮೂಲಕ ದಾರಾಸಿಂಗ್ ಸಿನಿಮಾ ಬದುಕಿನ ಯಶಸ್ಸಿನಂತೆ, ಕಿರುತೆರೆಯಲ್ಲಿಯೂ ಕೂಡ ಅಪಾರ ಯಶಸ್ಸನ್ನು ಗಳಿಸಿದರು. `ಹನುಮಾನ್' ಸೀರಿಯಲ್ನ ಇನ್ನೊಂದು ವಿಶೇಷತೆಯೆಂದರೆ ದಾರಾಸಿಂಗ್ ಹನುಮಾನ್ ಪಾತ್ರಕ್ಕೆ ಆಯ್ಕೆಯಾಗುವ ಮುಂಚೆ ಹಿಂದಿ, ಪಂಜಾಬಿ ಸಿನಿಮಾಗಳಲ್ಲಿ ನಾಯಕನಾಗಿ ದೊಡ್ಡ ಹೆಸರು ಮಾಡಿ, ಸಿನಿಮಾ ಉದ್ಯಮದಲ್ಲಿ ತಮ್ಮದೇ ಛಾಪನ್ನು ಮೂಡಿಸಿಕೊಂಡಿದ್ದರು. ಆಗ ದಾರಾ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದರು. ಪೈಲ್ವಾನನಾಗಿ ಇನ್ನು ಗಟ್ಟಿಯಾಗಿ ನೆಲೆಯೂರಿದ್ದರು. ಹನುಮಾನ್ ಪಾತಕ್ಕೆ ಆಯ್ಕೆ ಮಾಡಿಕೊಂಡಾಗ ದಾರಾ ವಯಸ್ಸು 56 ವರ್ಷ. ಇಷ್ಟು ವಯಸ್ಸಿನ ವ್ಯಕ್ತಿ ಹನುಮಾನ್ ಪಾತ್ರಕ್ಕೆ ಸೂಟ್ ಆಗಬಲ್ಲನೇ ಎಂಬ ಪ್ರಶ್ನೆ ಅನೇಕರನ್ನು ಕಾಡಿತ್ತು. ಎಲ್ಲರ ನಿರೀಕ್ಷೆಯನ್ನು ಮೀರಿಸಿ ದಾರಾಸಿಂಗ್ ಹನುಮಾನ್ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದರು. ಪಾತ್ರ ಜಗತ್ತಿನಾದ್ಯಂತ ಮೆಚ್ಚುಗೆಯಾಯಿತು. ಹೀಗೆ ದಾರಾಸಿಂಗ್ ಹಿಂದಿ ಕಿರುತೆರೆಯ ಬೆಳವಣಿಗೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದ್ದರು.

ದಾರಾ ಸ್ಟುಡಿಯೋ

ದಾರಾಸಿಂಗ್ 1978ರಲ್ಲಿ `ದಾರಾ ಸ್ಟುಡಿಯೋ' ಅಂತ ತಮ್ಮದೇ ಆದ ಸ್ವಂತ ಸ್ಟುಡಿಯೋವನ್ನು ಕಟ್ಟಿದ್ದರು. ಪಂಜಾಬ್ನ ಮೋಹಾಲಿಯಲ್ಲಿರುವ ಸ್ಟುಡಿಯೋ ಇಂದಿಗೂ ದೇಶದ ಅತ್ಯುತ್ತಮ ಸ್ಟುಡಿಯೋಗಳಲ್ಲೊಂದಾಗಿದೆ. ಸಿನಿಮಾ, ಟೀವಿ, ಜಾಹಿರಾತು, ಸೌಂಡ್, ಲೈಟಿಂಗ್ ಇನ್ನಿತರ ಹಲವಾರು ತಾಂತ್ರಿಕ ವಿಭಾಗಗಳನ್ನು ಹೊಂದಿದೆ