Monday, 28 May 2012

ಅನಲ ಆರಿಲ್ಲ…!


ಅವನ ವೃಷಣ ಚೀಲವು ಭರ್ತಿಯಾಗಿತ್ತು
ಬೇಡವೆಂದರೂ ಮುಗಿಲೇರಿಸಿಕೊಂಡು ಅವಳ ಹಿಂದೆ ಬಿದ್ದ
ನನಗೆ ಗೊತ್ತಿತ್ತು, ಹೀಗೆಯೇ ಆಗುತ್ತೇ ಅಂತ  ಅಂದರು
ಎಲ್ಲಾ ಮುಗಿದ ಮೇಲೆ…!
ಇವನೇನು ಸಾಮಾನ್ಯನಾಗಿರಲಿಲ್ಲ, ಅವ ಸಿದ್ದವಾಗಿದ್ದ ಕಾರ್ಮುಕ  
ಅವಳು ಸುಮಬಾಲೆ, ಮಲ್ಲಿಗೆ ಸಿರಿ, ವೃಂದಾರಕ  
ಅಂದದ ದೇಹ ಧರಿಸಿದವಳು. ಗರ್ಭದಲಿ ಬೆಂಕಿಯ ಅಂಡಾಶಯ ಇದ್ದವಳು
ತನುಘಟದ ಅಳತೆಯಲಿ ಅವನ ಕರಣ ಕುಕ್ಕಿದವಳು!
ಅವಳು ಮೋಸಗಾರ್ತಿ..ವಂಚನೆಯ ಯೋನಿ ಇರಲು
ಅವನ ದೇಹದ ಬಸಿರಿಗೆ ಹಸಿರಾದವಳು
ಅವಳು ಉಣ್ಣಿಸಿದಳು..ಈತನು ಹೊಟ್ಟೆ ತುಂಬ  ಉಂಡ
ಈತ ಬಲು ಹಸಿದಿದ್ದ, ಅವನದು ತೀರದ ಬಯಕೆ,
ಆಸ್ಥೆ ಹಸಿಯಾಗಿತ್ತು,ಬೆಂಕಿಯಾಗಿತ್ತು
ಏಷ್ಟು ಉಂಡರೂ ಅಸಮಾಧಾನ. ಬಿರುಬು ಅತಿಯಾಗಿತ್ತು
ಈಜುವ, ನುಗ್ಗುವ ಅಪಾರ ತೆವಲು
ಅವಳು ವಂಚಕಿ..ಅವಳಿಗೆ ಉಣ್ಣಿಸುವವರು ಬಹಳಷ್ಟಿದ್ದರು. ಪಾಪ
ಈತನಿಗೆ ಅದು ತಿಳಿಯದು,
ದೇಹಕೆ ರುಚಿ ಹಚ್ಚಿಸಿದಳು
ಹಸಿವಿನ ಬೇಟೆ ಹೆಚ್ಚಾದಂತೆ, ಅವಳು ಕಾಣದಾದಳು
ಈತನ ಚೀಲ ಇನ್ನೂ ಖಾಲಿಯಾಗಿರಲಿಲ್ಲ, ತನುರುಜೆ ಬಿಟ್ಟಿರಲಿಲ್ಲ
ಹುಡುಕುತ್ತಿದ್ದಾನೆ.. . ಸಿಕ್ಕವರನ್ನು ಅನುಭವಿಸುತ್ತಿದ್ದಾನೆ
ಕತ್ತಲೆಯಲ್ಲಿ ಕಾಣುವ ಸೌಂದರ್ಯದ ಅವಗಾಹನೆ ಸುತ್ತ
ಈತನದೇ  ಕಣ್ಣು,,
ಇವನ ಹೃತ್ಕೂಪ ಇನ್ನೂ ಖಾಲಿ ಇದೆ
ಅನಲ ಆರಿಲ್ಲ…!


ಹೀಗೊಂದು ದಾಂಪತ್ಯ !


ಅಪರಿಮಿತ ಪ್ರೀತಿ, ಸಾಗರದಷ್ಟು ನಂಬಿಕೆ
ಹಂಚಿಕೊಂಡಿದ್ದಷ್ಟೂ ನಿಲುಕದ ನೆನಪುಗಳು..
ಕಳೆದ ರಾತ್ರಿಗಳು, ದಿನಗಳು, ಮಾಸಗಳು
ವರುಷಗಳು,ದಶಕಗಳು ಕೇವಲ ಲೆಕ್ಕಕಷ್ಟೇ!
ಯೌವ್ವನ, ಗ್ರಹಸ್ತಾಶ್ರಮದ ಕ್ಷಣಗಳು
ಪಟಪಟನೆ ಓಡಿರಲು..
ಒಡಲು ತುಂಬಿದ ಮಕ್ಕಳು, ದೇವರು ಕೊಟ್ಟ ಕುಡಿಗಳಲ್ಲಿ
ಅಂಬರವೇ ನಾಚುವಷ್ಟು ಕಂಡ ಪ್ರೀತಿ..!
ಅವರ ನಗುವಿನಲ್ಲಿ ಕಂಡ ಅಪಾರ ಖುಷಿ.
ಸುಖ-ದಾಂಪತ್ಯದ ಪರಮಾತ್ಮ ಒಳಗೊಳಗೆ ಕುಣಿಯುತಿರಲು..
ಅಂಗಳದಲಿ ಮನೆದೇವರ ಶುಭಹಾರೈಕೆಯ  ದರ್ಪಣ..
ಮುಗಿಲಮಲ್ಲಿಗೆ ಸಿರಿ ಇನ್ನೂ ಕಮರಿಲ್ಲ.
ಏಳೇಳು ಜನ್ಮಕ್ಕೂ ನನಗೇ ನೀನೇ,
ನಿನಗೇ ನಾನೇ... ಎಲ್ಲರ ಮಾತು ಇದೇ. ಹೇಳಲು ವಾಕರಿಕೆ.
ಎಳಸು, ಹಳಸು    ಮಾತು, ಇದು ನಮಗೆ ಬೇಡ..
ಜನ್ಮ ಒಂದೇ ಸಾಕು,
ಏಳು ಜನ್ಮ ಉಂಡಷ್ಟು, ನೆನೆಪಿಸಿಕೊಳ್ಳುವಷ್ಟು ಬ್ಯಾಂಕಿನಲ್ಲಿಟ್ಟ
ನಮ್ಮ ಅಪಾರ ಪ್ರೀತಿಯ ಅಸಲು.
ಬಡ್ಡಿ, ಚಕ್ರಬಡ್ಡಿಯಾಗಿ ಉಕ್ಕಿಹರಿಯುವುದು .
ನಮ್ಮ ರಕ್ತದಲ್ಲಿ, ಮುಂದಿನ ತಲೆಮಾರಿನಲ್ಲಿ.
ನಾನೆಲ್ಲೋ.. ! ನೀನೆಲ್ಲೋ...?
ಮದುವೆಯಾದರೂ, ಸೇರದಿದ್ದರೂ..
ಹಿಂದಿನ ನೆನಪಲ್ಲೆ ಇರೋಣ..
ಎಂದೆಂದಿಗೂ...