ನನ್ನೊಳಗೊಬ್ಬ ಗುಮ್ಮ
ಅಡಗಿ ಕುಳಿತಿದ್ದಾನೆ.
ಬಾ ಅಂತ ಕರೆದರೂ ಹೊರಬರುವುದಿಲ್ಲ
ಅಂತ ಹೇಳುತ್ತಿದ್ದಾನೆ.
ಮೈತುಂಬಾ ದುರಾಸೆಯನು ಹೊತ್ತ
ಈ ಗುಮ್ಮ ನನ್ನನ್ನು ಕೆಟ್ಟವನನ್ನಾಗಿಸಿದ್ದಾನೆ.
ಲೋಭಿಯನ್ನಾಗಿಸಿದ್ದಾನೆ.
ಇಂಥವನು ನನ್ನೊಳಗಿರುವುದು ಬೇಡ ಅಂತ ಕೂಗಿ ಹೇಳಿದರೂ
ಆತ ಮಾತ್ರ ಹೊರಬರಲು ಒಪ್ಪುತ್ತಿಲ್ಲ.
ಆತನಿಗೆ ಮಾತ್ರ ನಾನು ಬೇಕು ಅನ್ನುವ ಹಠ
ಜೊತೆಗೆ ಈ ಗುಮ್ಮನಿಗೆ ನೂರೆಂಟು ವ್ಯಾಧಿಗಳು ಬೇರೆ...
ಹಣ ಕಂಡರೆ ನಾ ಬೇಡವೆಂದರೂ ಕೈ ಚಾಚುತ್ತಾನೆ
ಹಾಗಾಗಿ ನನ್ನನ್ನು ಲಂಚಕೋರನೆನ್ನುತಿಹರು...
ಹೆಣ್ಣೆಂದರೆ ಈ ಗುಮ್ಮನಿಗೆ ಬಾಯಿ ತುಂಬಾ ನೀರೇ...!
ನಾನು ಹಾಗಲ್ಲದಿದ್ದರೂ,
ಸ್ತ್ರೀಮೋಹಿ, ಕಾಮುಕನಾಗಿರುವೆ ಈ ಗುಮ್ಮನಿಂದ.
ಏನು ಮಾಡಲಿ, ನನ್ನೊಳಗಿನ ಗುಮ್ಮ
ನನ್ನ ಮಾತು ಕೇಳುತ್ತಿಲ್ಲ...
|1|
ನೆಲ ಕಂಡರೆ ಇದು ನನ್ನದೇ ಅಂತ ಹೇಳುತ್ತಾನೆ
ಕೇಸು ಹಾಕಿದ್ದಾರೆ ಅನೇಕರು ನಾನು ಭೂಗಳ್ಳನೆಂದು.
ನನಗೆ ಕಾಣದ ಬಂಗಾರ
ಗುಮ್ಮನಿಗೆ ಮಣ್ಣಲ್ಲಿ ಕಾಣುತ್ತಿದೆ
ಅಗೆದು ತೆಗೆದು ನನ್ನ ಮಣ್ಣನ್ನೆಲ್ಲಾ ಮಾರಿದ.
ಮಣ್ಣು ಮಾರಿದ ತಪ್ಪಿಗೆ
ಗಣಿಚೋರನೆಂಬ ಪಟ್ಟ ನನಗೆ...!
ಏನು ಮಾಡಲಿ, ನನ್ನೊಳಗಿನ ಗುಮ್ಮ
ನನ್ನ ಮಾತು ಕೇಳುತ್ತಿಲ್ಲ...
|2|
ಕುರ್ಚಿ ಆಸೆ ನನಗಿಲ್ಲ. ಆದರೆ ಈ ಗುಮ್ಮನಿಗೆ ಮುಖ್ಯಮಂತ್ರಿಯ
ಸಿಂಹಾಸನವೇ ಬೇಕಂತೆ…!
ನಾ ಹೇಳಿ ಹೇಳಿ ಸಾಕಾಯ್ತು..
ಸುಳ್ಳ ವಕೀಲನಾಗಿ, ಚೋರ ವೈದ್ಯನಾಗಿ,
ಪೀತ ಪತ್ರಕರ್ತನಾಗಿ, ಇನ್ನು ಹಲವು ಪಾತ್ರಗಳಾಗಿ
ನನ್ನ ವ್ಯಕ್ತಿತ್ವವನ್ನೇ ಹಾಳುಮಾಡುತ್ತಿದ್ದಾನೆ.
ನಾನು ಹಾಗಲ್ಲದಿದ್ದರೂ ಈ ಗುಮ್ಮನಿಂದ
ನಾನು ಕೆಟ್ಟವನಾಗಿಬಿಟ್ಟಿದ್ದೇನೆ.
ವಚನಭ್ರಷ್ಟ ಅಂತೆನಿಸಿಕೊಳ್ಳುತ್ತಿದ್ದೇನೆ.
ಏನು ಮಾಡಲಿ, ನನ್ನೊಳಗಿನ ಗುಮ್ಮ
ನನ್ನ ಮಾತು ಕೇಳುತ್ತಿಲ್ಲ...
|3|
ನಾನು ಸತ್ತ ಮೇಲೂ ಇನ್ನೊಂದು ದೇಹ ಸೇರುವ
ಈ ಗುಮ್ಮನನ್ನು ಏನು ಮಾಡಲಿ?