Monday, 26 December 2011

`ವಿಷ್ಣುವರ್ಧನ'ನಿಗೆ ದ್ವಾರಕೀಶನೇ ಮೈನಸ್ಸು !ಅಪರೂಪಕ್ಕೊಮ್ಮೆ ಥಿಯೇಟರ್ಗೆ ಹೋಗಿ ಸಿನಿಮಾ ನೋಡುವ ಮನಸ್ಸು ಬಂದಿತ್ತು. ಡಾನ್-2 ನೋಡಬೇಕಾಗಿತ್ತು. ಇನ್ನೇನು ಎರಡೇ ದಿನಗಳಲ್ಲಿ ಅದೇ ಟೀವಿಗೆ ಬರುತ್ತದೆ, ಆಮೇಲೆ ಅದರಲ್ಲೆ ನೋಡಿದರಾಯಿತು, ಮೊದಲು ನಮ್ಮ ಕನ್ನಡ ಸಿನಿಮಾವನ್ನು ನೋಡೋಣ ಅಂತ ಅಂದುಕೊಂಡೆ. ಸಿನಿಮಾ ಸುದ್ದಿ ಮಾಧ್ಯಮದಲ್ಲಿ ನಾನು ಕೆಲಸ ಮಾಡುತ್ತಿರುವುದರಿಂದ ಜಾಸ್ತಿ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುತ್ತಿರುತ್ತೇನೆ. ಪೇಜುಗಟ್ಟಲೇ ಬರೆಯುತ್ತಿರುತ್ತೇನೆ. ಏಷ್ಟೋ ಸಿನಿಮಾಗಳ ಬಗ್ಗೆ ಪ್ರಚಾರ, ರಿಪೋರ್ಟಿಂಗ್ , ಫಿಲಂ ಮೇಕಿಂಗ್ ಬಗ್ಗೆ ಸಿಕ್ಕಾಪಟ್ಟೆ ಕೊಯ್ದಿದಿರುತ್ತೇನೆ. ಆದರೆ ನಾನು ಮಾತ್ರ ಆ ಸಿನಿಮಾ ನೋಡಿರುವುದಿಲ್ಲ. ಈ ತರಹ ಏಷ್ಟೊ ಸಾರಿ ಆಗಿದ್ದುಂಟು. ಕನ್ನಡದ ಸೂಪರ ಹಿಟ್ ಸಿನಿಮಾಗಳನ್ನು ಕೂಡ ನೋಡಿರುವುದಿಲ್ಲ. ಇದಕ್ಕೆ ಕಾರಣಗಳು ಹಲವು. ಈ ಮಾತು ಈಗ ಅವಶ್ಯಕವಲ್ಲ, ಅಪ್ರಸ್ತುತ. ಇತ್ತೀಚಿನ ದಿನಗಳಲ್ಲಿ ಸಿನಿಮಾ ಮಾಧ್ಯಮ ಮಿತ್ರರು ಹೆಚ್ಚಾಗಿ ಮಾತನಾಡಿದ್ದು `ವಿಷ್ಣುವರ್ಧನ್ ಸಿನಿಮಾದ ಬಗ್ಗೆ. ಎಲ್ಲರೂ ಸಿನಿಮಾವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ, ನಿರ್ದೇಶನ ಚೆನ್ನಾಗಿದೆ. ಸುದೀಪ್ ಆಕ್ಟಿಂಗ್ ಸೂಪರ್ಬ್ ! ಅಂತೆಲ್ಲ  ಹೊಗಳಿದ್ದೆ ಹೊಗಳಿದ್ದು. ನನ್ನ ನಿರೀಕ್ಷೆ ಕೂಡ ಅದರ ಬಗ್ಗೆ ಸ್ವಲ್ಪ ಹೆಚ್ಚಾಗಿಯೇ ಇತ್ತು.

     ಸಂತೋಷ್ ಥಿಯೇಟರ್. ಪಕ್ಕದಲ್ಲಿ ಸಾರಥಿ ಕಟೌಟ್ಗೆ ಸರಿಸಾಟಿಯಾಗಿ ಸುದೀಪನ ಸಿನಿಮಾ. `ಸಾರಥಿ' ಚಿತ್ರತಂಡ  ಬೃಹತ್ತಾದ ಚಾಮುಂಡೇಶ್ವರಿಯನ್ನು ಸಿನಿಮಾ ಪ್ರಮೋಷನ್ಗೆ ನಿಲ್ಲಿಸಿದರೆ, ದ್ವಾರಕೀಶ್ ಇನ್ನು ಒಂದು ಹೆಜ್ಜೆ  ಮುಂದೆ ಹೋಗಿ `ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮೋನೇ' ಅಂತ ಹಾಡಿದ  ಸಾಹಸಸಿಂಹ ವಿಷ್ಣುವರ್ಧನ್ರವರ ದೊಡ್ಡ ಕಟೌಟನ್ನು ನಿಲ್ಲಿಸಿ ತಮ್ಮ ರಚ್ಚು ತೋರಿಸಿಕೊಂಡ ಹಾಗೆ ಕಾಣುತ್ತಿತ್ತು. `ವಿಷ್ಣುವರ್ಧನ್  ಎಂಬ ಬ್ರ್ಯಾಂಡನ್ನು ಆರಂಭದಲ್ಲೂ ಬಳಸಿಕೊಂಡು, ಸತ್ತ ಮೇಲೂ ಬಳಸಿಕೊಳ್ಳವ ಏಕೈಕ ವ್ಯಕ್ತಿ ಅಂದರೆ ಅದು ದ್ವಾರಕೀಶನೇ! ನಟ ಅಭಿಜಿತ್ ಕೂಡ `ವಿಷ್ಣು' ಹೆಸರನ್ನು ಬಳಸಿಕೊಂಡಿದ್ದಾರೆ, ಆದರೆ ಹೇಗೆ ಬಳಸಿಕೊಳ್ಳಬೇಕೆಂದು ಮಾತ್ರ  ಪಾಪ ಗೊತ್ತಿಲ್ಲ. ಅಭಿಜಿತ್ ದ್ವಾರಕೀಶರನ್ನು ನೋಡಿ ಕಲಿಯಬೇಕು.
`ವಿಷ್ಣುವರ್ಧನ್ ಸಿನಿಮಾ  ತುಂಬಾ ಚೆನ್ನಾಗಿ ಮೂಡಿಬಂದಿದೆ. ಇದು ದ್ವಾರಕೀಶ್ ನಿರ್ಮಾಣದ 48ನೇ ಸಿನಿಮಾ. ಚಿತ್ರವನ್ನು ತುಂಬಾ ಅದ್ದೂರಿಯಾಗಿ ದ್ವಾರಕೀಶ್ ನಿರ್ಮಾಣ ಮಾಡಿದ್ದಾರೆ. ಅದರಲ್ಲಿ 50 ವರ್ಷಗಳ ಸುದೀರ್ಘ ಅನುಭವವೂ ಇದ್ದರೂ ಇರಬಹುದು. ಚಿತ್ರದ ನಿರೂಪಣೆಯಿಂದ ಚಿತ್ರದ ಕ್ಲೈಮಾಕ್ಸ್ವರೆಗೆ ಸಾಗುವ ರೀತಿ ತುಂಬಾ ಚೆನ್ನಾಗಿದೆ. ಇತ್ತೀಚಿನ ದಿನಗಳಲ್ಲಿ ತೆಲುಗು ನಟ ರವಿತೇಜನ ಎಲ್ಲ  ಸಿನಿಮಾಗಳು ಇದೇ ರೀತಿಯಲ್ಲಿ ಬರ್ತಾ ಇವೆ. ಆತನ ಚಿತ್ರದಲ್ಲಿ ತುಂಬಾ ಎಂಟರ್ಟೇನ್ಮೆಂಟ್ ಇರುತ್ತೆ.
`ವಿಷ್ಣುವರ್ಧನ್ ಸಿನಿಮಾವನ್ನು ನಿರ್ದೇಶಕರಾದ ಪಿ.ಕುಮಾರ್ ತುಂಬಾ ಶಿಸ್ತಿಬದ್ದವಾಗಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾ ನೋಡುವಾಗ ಒಂದೆರಡು ಸೀನುಗಳು ಮಾತ್ರ ಸ್ವಲ್ಪ ಬೋರ್ ಅನ್ನಿಸಬಹುದು ಅಷ್ಟೇ. ಚಿತ್ರದ ಕಥೆಯು ತುಂಬಾ  ಕೂಡ ಟೈಟಾಗಿ ಸಾಗುವುದರಿಂದ ಎಲ್ಲಿಯೂ ಆಚೆ ಈಚೆ ನಿಮ್ಮ ಕತ್ತು ತಿರುಗಿಸಿ ಬೇರೆಯವರನ್ನೂ ನೋಡಲು, ಬಾಯಿ ತೆರೆದು ಆಕಳಿಸಲು ಖಂಡಿತ ಆಗುವುದಿಲ್ಲ, ಹಾಗೆ ಸಾಗುತ್ತದೆ ಸಿನಿಮಾ. ಸಂಕಲನದಲ್ಲಿ ಸಿಕ್ಕಾಪಟ್ಟೆ ಶ್ರಮವಿದೆ. ರಾಜರತ್ನಂ ಅವರ ಕ್ಯಾಮೆರ ಕೆಲಸ ಕೂಡ ಕಥೆಯ ವೇಗಕ್ಕೆ ತಕ್ಕ ಹಾಗೆ ಶೂಟ್ ಮಾಡಿದ್ದಾರೆ. ಕೆಲವೊಂದು ಫ್ರೇಮುಗಳು ಕನ್ನಡಕ್ಕೆ ಹೊಸತಾಗಿದ್ದರೂ, ಇನ್ನು ಅನೇಕ ಫ್ರೇಮುಗಳಲ್ಲಿ ಅವರಿಗೆ ಝೀರೋ ಮಾರ್ಕ್ಸ  ಕೊಡಬೇಕು. ಇಟ್ಟಿರುವ ಲೋ ಆಂಗಲ್ ಶಾಟ್ಗಳು ಕೆಲವೊಮ್ಮೆ ರಿಪೀಟ್ ಅನಿಸುತ್ತೆ. 3-4 ಸೀನ್ಗಳಲ್ಲಿ ಪಾತ್ರಧಾರಿಗಳ ಮುಖವೇ ಬನರ್್ ಆಗಿ ಬಿಟ್ಟಿದೆ. ಇದನ್ನು ವೈಡ್ ಶಾಟ್ನಲ್ಲಿ ಇಟ್ಟಿದ್ದರಿಂದ ಸಾಮಾನ್ಯರ ಕಣ್ಣಿಗೆ ಕಾಣುವುದಿಲ್ಲ. ಇದನ್ನು ನಿರ್ದೇಶಕರೂ ಕೂಡ ನೋಡಿಲ್ಲವೇನೋ? ಅಥವಾ ಅದಕ್ಕೆ ತಲೆಕೆಡಿಸಿಕೊಳ್ಳಲಿಲ್ಲವೇನೋ?
ಸುದೀಪ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾನೆ. ಅದರಲ್ಲೂ ಸುದೀಪನಷ್ಟೇ ಪ್ರಬಲವಾಗಿ ಆಕ್ಟ್ ಮಾಡಿರುವವನು ಸೋನು ಸೂದ್. ಖಂಡಿತ ಆರಡಿಯ ಸುದೀಪನ ದೇಹಕ್ಕೆ ಸೋನು ಒಳ್ಳೆ ಮೈಕಟ್ಟನ್ನೇ ಒಡ್ಡುತ್ತಾನೆ. ಆಕ್ಟಿಂಗ್ನಲ್ಲೂ ಸೋನು ಸಖತ್ ಮಿಂಚುತ್ತಾನೆ. ಆದಿಶೇಷನ ಪಾತ್ರಕ್ಕೆ ಸೋನು ಧೀಮಂತವಾದ ಜೀವಂತಿಕೆಯನ್ನು ನೀಡಿದ್ದಾನೆ. ಯಕ್ಷಗಾನದ ರಂಗಕಲೆಗೆ ಕಳೆ ತುಂಬುವವರೇ ವಿದೂಷಕ. ವಿಷ್ಣುವರ್ಧನ್ ಸಿನಿಮಾದಲ್ಲಿ ವಿದೂಷಕನಾಗಿ ಚಿತ್ರಕ್ಕೆ ವಿಭಿನ್ನ ಹಾಸ್ಯ ಸ್ವರೂಪವನ್ನು ಅರುಣ್ ಸಾಗರ್ ನೀಡುತ್ತಾನೆ. ಅಪ್ಪಟ ಬಯಲು ಸೀಮೆಯ ಮಾತುಗಳು,, ಬಾಡ್ಕೋ...ಸುವ್ವರ್ ..ಬಾಡ್ಯ..ಲೇ..ಉಚ್ಚಿ ಹೋಯ್ಯಕ್ಕತನ್ಲೆ ನಾನು...ಈ ತರಹದ ಬಯಲು ಸೀಮೆಯ ಬೈಗುಳದ ಮಾತುಗಳು, ಆ ತರಹದ ಬೈಗುಳದ ವಾತಾವರಣದಲ್ಲಿ ಬೆಳೆದ ನನ್ನಂಥವರಿಗೆ ಖಂಡಿತ ಇಷ್ಟವಾಗುತ್ತಾನೆ ಅರುಣ್ ಸಾಗರ್ . ಎಸಿಪಿಯಾಗಿ ಖಳನಾಗಿ ಅಭಿನಯಿಸಿರುವ ಮುನಿ ಇಡೀ ಚಿತ್ರದ ಕೊನೆಯವರೆಗೂ ಇದ್ದು, ಸಿನಿಮಾ ಬಿಟ್ಟು ಹೊರಗಡೆ ಬಂದ ಮೇಲೂ ನೆನಪಾಗುತ್ತಾರೆ. ಇವರಿಗೆಲ್ಲ ಅವರ ವೃತ್ತಿ ಜೀವನದಕ್ಕೆ ಬ್ರೇಕ್ ಕೊಡುವ ಪ್ರಯತ್ನವಾಗಬಹುದು.
ತಮಿಳು ಪೊಣ್ಣು ಪ್ರಿಯಾಮಣಿ, ಮಲಬಾರ್ ಭಾವನ ಕುಟ್ಟಿ ಗಮನ ಸೆಳೆಯುತ್ತಾರೆ. ಆರಂಭದಲ್ಲಿ ಬರುವ ಐಟೆಮ್ ಸಾಂಗ್ನ ಡ್ಯಾನ್ಸರ್, ಸಿನಿಮಾದ ಎಲ್ಲ ಹಾಡುಗಳಿಗೆ ವಿದೇಷಿ ಡ್ಯಾನ್ಸರ್ಸ್, ಮತ್ತವರ ಬಾಳೆದಿಂಡಿನಂತ  ತೊಡೆಗಳು, ಹಾಡು, ಡ್ಯಾನ್ಸ್, ಹರ್ಷ ಕೋರಿಯೋಗ್ರಫಿಯನ್ನು ಆಸ್ವಾದಿಸಲು ತೊಂದರೆಯಿಲ್ಲ.

ಇಡೀ ಸಿನಿಮಾದಲ್ಲಿ ಒಂದು ಅಂಶವನ್ನು ನಾವು ಒತ್ತಿ ಹೇಳುವುದಾದರೆ ಚಿತ್ರವನ್ನು  ಗುಣಮಟ್ಟದಲ್ಲಿ ಸಿದ್ದಪಡಿಸಿದ್ದರೂ ಸಹ, ಸುಮ್ಮಸುಮ್ಮನೇ ಸಾಹಸಸಿಂಹ ವಿಷ್ನುವರ್ಧನ್ರ ಸಿನಿಮಾದ ವಿಜುವಲ್ಸ್, ಹಾಗೂ ಪೋಸ್ಟರ್ಗಳನ್ನು ಸುಮ್ಸುಮ್ಮನೇ ಬಳಸಿಕೊಂಡಿರುವುದು ಸಮಂಜಸವಲ್ಲ ಎಂಬುದು ನಮ್ಮ ಅಭಿಮತ. ಅದರಲ್ಲೂ ದ್ವಾರಕೀಶ್ ಆಪ್ತಮಿತ್ರ ವಿಷ್ಣುವರ್ಧನ್ ಹೆಸರನ್ನು ನೆನಪಿಸಿಕೊಂಡು ಕಣ್ಣೀರು ಹಾಕುವುದು ದೊಡ್ಡ ಕಾಮಿಡಿ ತರಹ ಕಾಣುತ್ತೆ. ಈ ಮೂಲಕ ಕನ್ನಡ ಜನರಿಗೆ ಹಾಗೂ ಭಾರತಿಯವರಿಗೆ ಏನು ಹೇಳಲಿಕ್ಕೆ ಹೊರಟಿದ್ದಾರೋ ಎಂಬುದನ್ನು ಸ್ವತಃ ದ್ವಾರಕೀಶ್ರವರೇ ಸ್ಪಷ್ಟೀಕರಣ ನೀಡಬೇಕು.
ಸಿನಿಮಾದಲ್ಲಿ ಕರ್ನಲ್ ಪಾತ್ರಧಾರಿ ದ್ವಾರಕೀಶ್ ಹೊರತುಪಡಿಸಿನೋಡಿದರೆ ಚಿತ್ರ ತುಂಬಾ ಚೆನ್ನಾಗಿದೆ. ನನಗಂತೂ ತೆಲುಗು ನಟ ರವಿತೇಜನ ಸಿನಿಮಾವನ್ನು ಕನ್ನಡದಲ್ಲಿ ನೋಡಿದ ಹಾಗಾಯಿತು. ಸಿನಿಮಾ ಬೇರೆ ಭಾಷೆಗೆ  ರಿಮೇಕ್ ಆದರೂ ದೊಡ್ಡ ಸುದ್ದಿಯೇನಲ್ಲ.