Monday, 25 July 2016

`ವಿಶ್ವಕ್ರಿಕೆಟ್ ನಲ್ಲಿ ಕರ್ನಾಟಕದ ಆಟಗಾರರು’ ಪುಸ್ತಕ ಅನಾವರಣ

`ವಿಶ್ವಕ್ರಿಕೆಟ್ ನಲ್ಲಿ ಕರ್ನಾಟಕದ ಆಟಗಾರರು’ ಪುಸ್ತಕ ಅನಾವರಣ
ನಮ್ಮ ಸಂಸ್ಥೆಯ ಹಿತೈಷಿಗಳು ಮತ್ತು ನನ್ನ ಆತ್ಮೀಯರು ಆಗಿರುವ ಚನ್ನಗಿರಿ ಕೇಶವಮೂರ್ತಿಯವರು ಕ್ರಿಕೆಟ್ ಅಂಕಿ ಅಂಶ ಕ್ಷೇತ್ರದಲ್ಲಿ ನಮ್ಮ ದೇಶದಲ್ಲೇ ಅತ್ಯಂತ ವಿಶಿಷ್ಟ ಸಾಧನೆಯನ್ನು ಮಾಡಿದವರು. ಇಂದಿಗೂ ಪ್ರತಿದಿನ ಸುಮಾರು 18 ಗಂಟೆಗಳ ಕಾಲ ಕ್ರಿಕೆಟ್ ಅಂಕಿ ಅಂಶಗಳ ಕುರಿತು ದಾಖಲೆಗಳ ಕ್ರೋಢಿಕರಣ, ಪತ್ರಿಕೆಗಳಿಗೆ ಅಂಕಿಅಂಶಗಳ ಕುರಿತು ಲೇಖನ, ಸಂಶೋಧನೆ ಮತ್ತು ಕ್ರಿಕೆಟ್ ಕುರಿತ ಗ್ರಂಥಗಳ ರಚನೆಯಲ್ಲಿ ಸದಾ ತೊಡಗಿಕೊಂಡಿದ್ದಾರೆ. 78ರ ಈ ಇಳಿವಯಸ್ಸಿನಲ್ಲೂ ಅವರ ಈ ಹುಮ್ಮಸ್ಸನ್ನು ಎಂತವರಾದರೂ ಮೆಚ್ಚುವಂತಹದ್ದು. ಹಾಗಾಗಿಯೇ ಇವರನ್ನು `ಕ್ರಿಕೆಟ್ ಅಂಕಿ ಅಂಶಗಳ ಲಿಟ್ಲ್ಮಾಸ್ಟರ್' ಮತ್ತು `ದೇಸಿ ಕ್ರಿಕೆಟ್ನ ಗೂಗಲ್' ಅಂತ ಗೌರವದಿಂದ ಕರೆಯುತ್ತಾರೆ. ಕ್ರೀಡಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಒಳ್ಳೆಯ ಮಾಹಿತಿಪೂರ್ಣ ಗ್ರಂಥವನ್ನು ಮಾಡಬೇಕೆಂಬುದು ನಮ್ಮ ಸಂಸ್ಥೆಯ ಅಭಿಲಾಷೆಯಾಗಿತ್ತು. ನಮ್ಮ ಈ ಆಸೆಯನ್ನು ಕೇಶವಮೂರ್ತಿಯವರ ಹತ್ತಿರ ಕೇಳಿಕೊಂಡಾಗ ಸತತ ಎರಡು ವರ್ಷಗಳ ಕಾಲ ಅಧ್ಯಯನ ಮಾಡಿ, ವಿಶ್ವಕ್ರಿಕೆಟ್ನಲ್ಲಿ ಮಿಂಚಿದ ಕರ್ನಾಟಕದ 29 ಪ್ರಸಿದ್ಧ ಶ್ರೇಷ್ಟ ಆಟಗಾರರ ಪರಿಚಯ ಮತ್ತು ಸಾಧನೆಯನ್ನು ಅಂಕಿಅಂಶಗಳ ಮೂಲಕ ರಚಿಸಿದ ಈ ಗ್ರಂಥವನ್ನು ಸಂಸ್ಥೆಯ ಪ್ರಕಾಶನಕ್ಕೆ ನೀಡಿದರು. ಇಂತಹ ಶ್ರೇಷ್ಟ ಕೃತಿಯನ್ನು ಪ್ರಕಾಶನ ಮಾಡಲು ಅನುಮತಿಯನ್ನು ನೀಡಿರುವುದು ನಮ್ಮ ಭಾಗ್ಯವೇ ಸರಿ.

ನಮ್ಮ ಸಂಸ್ಥೆ ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್ ಪ್ರಕಟಿಸಿರುವ `ವಿಶ್ವಕ್ರಿಕೆಟ್ನಲ್ಲಿ ಕರ್ನಾಟಕದ ಆಟಗಾರರು’ ಈ ಗ್ರಂಥವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿರುವ ಪಿ.ಆರ್ .ಅಶೋಕ್ ಆನಂದ್ ಅವರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅನಾವರಣ ಮಾಡಿದರು. ಉಳಿದಂತೆ ಕ್ರಿಕೇಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಬ್ರಿಜೇಶ್ ಪಟೇಲ್ ಅವರಿಗೆ ಮತ್ತು ಭಾರತೀಯ ಕ್ರಿಕೇಟ್ನ ಮಾಸ್ಟರ್ ಪೀಸ್ ಆಟಗಾರರಾಗಿರುವ ಬಿಎಸ್ ಚಂದ್ರಶೇಖರ್ ಅವರ ಮನೆಗೆ ಹೋಗಿ ಆಟಗಾರರ ಪರವಾಗಿ ಮೊದಲ ಕೃತಿಯನ್ನು ಗೌರವದಿಂದ ನೀಡಲಾಯಿತು.
`ವಿಶ್ವಕ್ರಿಕೆಟ್ ನಲ್ಲಿ ಕರ್ನಾಟಕದ ಆಟಗಾರರು' ಈ ಬೃಹತ್ಗ್ರಂಥ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಪಟ್ಟ ಮಹತ್ವಪೂರ್ಣ ಮತ್ತು ಸಂಗ್ರಹ ಯೋಗ್ಯ ಕೋಶವೆಂದರೆ ತಪ್ಪಾಗಲಾರದು. ಗ್ರಂಥದಲ್ಲಿರುವ ಜಗತ್ಪ್ರಸಿದ್ದ ಆಟಗಾರರಾಗಿರುವ ಜಿ ಆರ್ ವಿಶ್ವನಾಥ್, ಚಂದ್ರಶೇಖರ್, ಪ್ರಸನ್ನ, ಕುಂಬ್ಳೆ, ಶ್ರೀನಾಥ್, ದ್ರಾವಿಡ್ರಂತಹ ಕ್ರಿಕೆಟರ್ಗಳ ಜೀವನಚರಿತ್ರೆಯನ್ನು ಸಂಪೂರ್ಣವಾಗಿ ಓದಲಾಗದಿದ್ದವರು, ಈ ಗ್ರಂಥದ ಮೂಲಕ ತುಂಬಾ ಸರಳವಾಗಿರುವ ಅವರ ಜೀವನ ಮತ್ತು ಸಾಧನೆಯನ್ನು ತಿಳಿದುಕೊಳ್ಳಬಹುದಾಗಿದೆ. ಹಾಗಾಗಿಯೇ ಈ ಗ್ರಂಥ ಓದುಗರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಲೇಖಕರು ಈ ಗ್ರಂಥದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ 29 ಶ್ರೇಷ್ಟ ಆಟಗಾರರ ಸಂಪೂರ್ಣ ಪರಿಚಯ ಮತ್ತು ಸಾಧನೆಯನ್ನು ಹೇಳುವ ಮೂಲಕ, ಅವರಿಗೆ ಬಹುದೊಡ್ಡ ಗೌರವವನ್ನು ಸಲ್ಲಿಸಿದ್ದಾರೆ. ಈ ಗ್ರಂಥದ ರಚನೆಯನ್ನು ಒಂದು ತಪಸ್ಸಿನಂತೆ ಆಚರಿಸಿರುವ ಲೇಖಕರು ಆಟಗಾರರ ಸಾಧನೆಯ ಸಮಾನರಾಗಿ ನಮಗೆ ಕಾಣುತ್ತಾರೆ. ಕ್ರಿಕೇಟ್ ಪ್ರೇಮಿಗಳಿಗೆ ಓದುಗರಿಗೆ, ಇಂತಹ ಮಹತ್ವಪೂರ್ಣ ಕೃತಿಯನ್ನು ರಚಿಸಿಕೊಟ್ಟಿರುವ ಚನ್ನಗಿರಿ ಕೇಶವಮೂರ್ತಿಯವರಿಗೆ ಸಂಸ್ಥೆಯ ಅಭಿನಂದನೆಗಳು. ಈ ಕೃತಿಯ ಆರಂಭದಿಂದ ಇಂದಿನವರೆಗೆ ನನ್ನ ಜೊತೆ ಹೆಗಲು ಕೊಟ್ಟು ದುಡಿದಿರುವ ಸಹೋದ್ಯೋಗಿ, ಶ್ರೀ ಕಗ್ಗೆರೆ ಪ್ರಕಾಶ್ ಅವರಿಗೂ ಕೂಡ ವಂದನೆಗಳು. ಈ ಗ್ರಂಥಕ್ಕೆ ಮುಖಪುಟ ಡಿಸೈನ್ ಮಾಡಿದ ಪ್ರದೀಪ್ ಶಾನಭೋಗ್, ಒಳಪುಟಗಳನ್ನು ಅಂದವಾಗಿಸಿದ ಶ್ರೇಷಾದ್ರಿ ಧನಗುರು, ಸುಂದರವಾಗಿ ಪ್ರಿಂಟ್ ಮಾಡಿದ ಮುದ್ರಕರನ್ನು ಈ ಕ್ಷಣ ನೆನಪಿಸಿಕೊಳ್ಳುತ್ತೇನೆ. ಎಂದಿನಂತೆ ಓದುಗರ ಪ್ರೋತ್ಸಾಹವಿಲ್ಲದೆ ಇದ್ದರೆ, ಖಂಡಿತ ಈ ಗ್ರಂಥ ಯಶಸ್ವಿಯಾಗಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರು ಈ ಗ್ರಂಥವನ್ನು ಕೊಂಡು ಓದಬೇಕು, ಕ್ರಿಕೆಟ್ ಪ್ರೇಮಿಗಳ ಪ್ರತಿ ಮನೆಯಲ್ಲೂ ಈ ಅಪರೂಪದ ಗ್ರಂಥವಿದ್ದರೆ, ನಮ್ಮ ಈ ಶ್ರಮ ಸಾರ್ಥಕವೆಂದುಕೊಳ್ಳುವೆ.
ಓದುಗರ ಪ್ರೋತ್ಸಾಹ, ಕೊಂಡು ಓದುವ ಸಂಸ್ಕೃತಿ, ಪುಸ್ತಕ ಪ್ರೇಮ- ಕನ್ನಡ ಸಾಹಿತ್ಯವಲಯಕ್ಕೆ ಅವಶ್ಯಕವಿದ್ದು, ಇದರಿಂದ ಲೇಖಕರಿಗೆ ಮಾತ್ರವಲ್ಲದೇ ಪ್ರಕಾಶಕರ ಬೆಳವಣಿಗೆಗೂ ಇದು ಸಹಕಾರವಾಗಲಿ ಅಂತ ಆಶಿಸುತ್ತೇನೆ.
ಪ್ರತಿಗಳಿಗಾಗಿ ಸಂಪರ್ಕಿಸಿ ; 9242744854/9739561334

Thursday, 2 June 2016

ಸಿದ್ಧವನದ ಅಮೃತಮಹೋತ್ಸವವೂ, ಎಸ್ ಡಿ ಎಮ್ ಕಾಲೇಜಿನ ಸುವರ್ಣ ಉತ್ಸವವೂ...

`ಶ್ರೀಧರ್, ಸಿದ್ದವನ ಗುರುಕುಲದ 75 ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ನೀನು ಬರಬೇಕು' ಅಂತ ಗುರುಕುಲದ ವಾರ್ಡನ್ ಆಗಿರುವ ಪ್ರೀತಿಯ ಮಹಾಬಲೇಶ್ವರ ಭಟ್ ಅವರು ಫೋನ್ ಮಾಡಿ ಖುದ್ದಾಗಿ ತಿಳಿಸಿದಾಗ, `ಇದಕ್ಕಿಂತ ದೊಡ್ಡ ಸೌಭಾಗ್ಯ ಇನ್ಯಾವುದಿದೆ, ನನಗೆ' ಅಂತ ಅಂತರಾಳದಿಂದ ನನ್ನ ಮನಸ್ಸು ಅವರ ಆಹ್ವಾನದಿಂದ ತುಂಬಿಹೋಗಿತ್ತು. ಬರದೇ ಇರಲಿಕ್ಕೆ, ಹೋಗದೇ ಇರಲಿಕ್ಕೆ ವೈಯಕ್ತಿಕ ಕೆಲಸಗಳ ಅಡ್ಡಿ ಇದ್ದರೂ, ಅದನ್ನೂ ಮೀರಿ, ನನ್ನ ಗುರುಕುಲದ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಲೇ ಬೇಕು ಅನ್ನುವ ಧೃಡಸಂಕಲ್ಪ ಆ ಕ್ಷಣವೇ ಗಟ್ಟಿಯಾಗಿತ್ತು. ಗುರುಕುಲ ಪ್ರಾರಂಭವಾಗಿ 75 ವರ್ಷಗಳು ಕಳೆದಿವೆ. ನನ್ನಂತೆ, ಬಡತನ, ಅವಕಾಶವಂಚಿತ ಗ್ರಾಮೀಣ ಪ್ರದೇಶದ ಸಾವಿರಾರು ವಿಧ್ಯಾರ್ಥಿಗಳಿಗೆ ಅನ್ನ, ವಿದ್ಯೆ, ಅಭಯ, ಆಶ್ರಯವನ್ನು ನೀಡಿದಂತಹ ಮಹಾನ್ ವಿದ್ಯಾಲಯದ ಋಣವನ್ನು ಈ ಜನ್ಮದಲ್ಲಿ ತೀರಿಸುವುದು ಕಷ್ಟವಾದರೂ, ಅದರ ಅಮೃತ ಮಹೋತ್ಸವದ ಸಂತಸದಲ್ಲಿ ನಾನು ಭಾಗಿಯಾದೆ ಅನ್ನುವ ಸಾರ್ಥಕತೆ ನನಗೆ ಬೇಕಾಗಿತ್ತು. ಅದು ಈಡೇರಿದ್ದು ಕೂಡ ನನ್ನ ಸೌಭಾಗ್ಯವೇ ಸರಿ.
ಸಿದ್ಧವನ ಗುರುಕುಲವನ್ನು ನೆನೆಸಿಕೊಂಡಾಗಲೆಲ್ಲಾ ನನ್ನ ಕಣ್ಣಮುಂದೆ ಅನೇಕ ನೆನಪುಗಳು ಬಂದು ಕಾಡುತ್ತವೆ. ಎಸ್ಎಸ್ಎಲ್ಸಿ ನಂತರ ನನ್ನ ಮುಂದಿನ ಬದುಕು ಏನು? ಅನ್ನುವ ದೊಡ್ಡ ಪ್ರಶ್ನೆಗೆ ಉತ್ತರ ಕೊಟ್ಟಿದ್ದೆ ಈ ನಂದನವನ. ಓದಲಿಕ್ಕೆ ಬಡತನ, ಆರ್ಥಿಕ ಸಮಸ್ಯೆ, ಸರಿಯಾದ ಮಾರ್ಗದರ್ಶನವಿಲ್ಲದೇ ಒದ್ದಾಡುತ್ತಿದ್ದ ನನಗೆ ಜೀವನದ ಸರಿಯಾದ ಮಾರ್ಗದರ್ಶನ ತೋರಿಸಿದ್ದೇ ಈ `ಸಿದ್ಧರ' ವನ. ಅಂದಿನ ದಿನಗಳನ್ನು ನೆನಪಿಸಿಕೊಂಡಾಗಲೆಲ್ಲಾ, ನನ್ನ ಇಂದಿನ ಬದುಕು ಹೀಗೆ ಇರುತ್ತಿತ್ತಾ? ಅಕಸ್ಮಾತ್ ಸಿದ್ಧವನ, ಎಸ್ಡಿಎಮ್ ಕಾಲೇಜಿನಲ್ಲಿ ನನಗೆ ಅವಕಾಶ ದೊರೆಯದೇ ಹೋಗಿದ್ದರೇ, ನನ್ನ ಇಂದಿನ ಜೀವನವನ್ನು ಕಲ್ಪನೆ ಕೂಡ ಮಾಡಿಕೊಳ್ಳಲಾಗುವುದಿಲ್ಲ. ಹೌದು, ಬದುಕೆಂದರೆ ನಿಂತ ನೀರಿನಂತಲ್ಲ...! ಅದು ಹರಿಯುತ್ತಲೇ ಇರುತ್ತದೆ. ಹೀಗೆ ಹರಿಯುವ ನದಿಗೂ ಮಾರ್ಗವಿಲ್ಲದಿದ್ದರೆ, ಅದು ಎತ್ತಿಂದತ್ತಲೋ ಲಂಗುಲಗಾಮಿಲ್ಲದೇ ಹರಿಯುತ್ತಿರುತ್ತದೆ. ಹಾಗಾಗಿ ಪ್ರತಿಯೊಬ್ಬರ ಜೀವನಕ್ಕೂ ಒಂದು ಮಾರ್ಗದರ್ಶನ ಬೇಕೇ ಬೇಕು. ಒಮ್ಮೆ ಅಂತಹ ದಾರಿ ಸಿಕ್ಕಿಬಿಟ್ಟರೆ, ಜೀವನ ಸುಂದರವಾಗಿ ಸಾಗುತ್ತಿರುತ್ತದೆ. ಕಳೆದ 75 ವರ್ಷಗಳಲ್ಲಿ ಸಿದ್ಧವನದಲ್ಲಿ ಆಶ್ರಯವನ್ನು ಪಡೆದು ತಮ್ಮ ಬದುಕನ್ನು ರೂಪಿಸಿಕೊಂಡ ಸಾವಿರಾರು ವಿದ್ಯಾಥರ್ಿಗಳು ಪ್ರಪಂಚದ ಮೂಲೆಮೂಲೆಗಳಲ್ಲಿ ವಾಸಿಸುತ್ತಿದ್ದಾರೆ. ಇಂದಿಗೂ ಅವರ ಜೀವನದಲ್ಲಿ ಸಿದ್ಧವನ ಮತ್ತು ಎಸ್ಡಿಎಮ್ ಕಾಲೇಜಿನಲ್ಲಿ ಶಿಕ್ಷಣ ಪಡೆದುಕೊಂಡಿದ್ದು, ಬದುಕಿನ ಪ್ರಮುಖ ಘಟ್ಟವಾಗಿದೆ. ವಿದ್ಯೆ, ಆಶ್ರಯ, ಅಭಯವನ್ನು ನೀಡಿದ ಧರ್ಮಸ್ಥಳ ಸಂಸ್ಥೆ ಮತ್ತು ವೀರೆಂದ್ರ ಹೆಗ್ಗಡೆಯವರ ಕುಟುಂಬದವರ ಬಗ್ಗೆ ಅದಮ್ಯವಾದ ಪ್ರೀತಿ, ಗೌರವವನ್ನು ಇಂದಿಗೂ ಇಟ್ಟುಕೊಂಡಿದ್ದಾರೆ. ಬದುಕಿನಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ತುಂಬುವ ಮತ್ತು ಶಿಕ್ಷಣದಿಂದ ಅವಕಾಶವಂಚಿತರಾದಂತಹ ವಿದ್ಯಾರ್ಥಿಗಳಿಗಂತಲೇ ಪ್ರಾರಂಭವಾದಂತಹ ಸಿದ್ಧವನ ಗುರುಕುಲ, ಪರಮಪೂಜ್ಯ ಮಂಜಯ್ಯ ಹೆಗ್ಗಡೆಯವರ ಕನಸಿನ ಕೂಸಾಗಿದೆ. ಬಂಗಾಳದಲ್ಲಿ ರವೀಂದ್ರನಾಥ ಠಾಗೋರ್ರವರು ಪ್ರಾರಂಭಿಸಿದಂತಹ ಶಾಂತಿನಿಕೇತನದಂತಯೇ ಕರ್ನಾಟಕದಲ್ಲಿಯೂ ಕೂಡ ಇಂತಹ ಗುರುಕುಲ ಪದ್ಧತಿಯನ್ನು ಪ್ರಾರಂಭಿಸಬೇಕೆಂದು ಸಂಕಲ್ಪ ಮಾಡಿದ್ದ ಪೂಜ್ಯ ಶ್ರೀ ಮಂಜಯ್ಯ ಹೆಗ್ಗಡೆಯವರು, ತಮ್ಮ ಕನಸಿನ ಬೀಜಕ್ಕೆ ನೀರು, ಫಲವತ್ತಾದ ಮಣ್ಣು, ಗೊಬ್ಬರ, ಆರೈಕೆಯನ್ನು ಮಾಡಿ, ಪ್ರಾಚೀನ ಗುರುಕುಲ ಪದ್ಧತಿಯ ಬೇರುಗಳನ್ನು ಹೊಂದಿರುವ ದೇಶದ ಶ್ರೇಷ್ಟ ಸಂಸ್ಥೆಯನ್ನಾಗಿ ಮಾಡಿದ್ದು ಈಗ ಇತಿಹಾಸ. ಈ ಇತಿಹಾಸವನ್ನು ಕೀರ್ತಿಶೇಷ ರತ್ನವರ್ಮ ಹೆಗ್ಗಡೆ ಮತ್ತು ಪರಮಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ಉಳಿಸಿಕೊಂಡು ಬೆಳೆಸಿಕೊಂಡು, ಅದು ಹೆಮ್ಮರವಾಗಿ ಬೆಳೆಯುವಂತೆ ಮಾಡಿದ್ದು ಕೂಡ ಸುವರ್ಣಾಕ್ಷರಗಳಲ್ಲಿ ಬರೆಯುವಂತಹದ್ದು. ಇಂತಹ ಶ್ರೇಷ್ಟ ಸಂಸ್ಥೆಯಲ್ಲಿ ಓದಿ, ಆಶ್ರಯ ಪಡೆದು, ಹೇಗೆ ಬದುಕಬೇಕು ಅನ್ನುವ ಮಾರ್ಗದರ್ಶನ ಮತ್ತು ಸಂಸ್ಕಾರವನ್ನು ಅಳವಡಿಸಿಕೊಂಡಿರುವ ಅಸಂಖ್ಯ ವಿದ್ಯಾರ್ಥಿಗಳಲ್ಲಿ ನಾನು ಕೂಡ ಒಬ್ಬ ಎಂಬ ಹೆಮ್ಮೆಯೇ ಸಂಸ್ಥೆಯ ಮೇಲಿನ ನನ್ನ ಅಭಿಮಾನಕ್ಕೆ ಕಾರಣ.

ಮೇ 7 ರಂದು ಸಿದ್ಧವನ ಗುರುಕುಲದ ಅಮೃತಮಹೋತ್ಸವ ಮತ್ತು ಮೇ 8 ರಂದು ಎಸ್ಡಿಎಮ್ ಕಾಲೇಜಿನ ಸುವರ್ಣಮಹೋತ್ಸವ- ಈ ಎರಡು ಉತ್ಸವಗಳು ಒಟ್ಟಿಗೆ ಬಂದಿರುವುದು ಅಪ್ಪ-ಮಗನ ಜನ್ಮದಿನದ ಸಂಭ್ರಮ ಒಂದೇ ದಿನ ಬಂದಿರುವಂತೆ ಬಣ್ಣಿಸುವಂತಿತ್ತು. ಏಕೆಂದರೆ, ಸಿದ್ಧವನದಲ್ಲಿ ಆಶ್ರಯ ಪಡೆದವರು, ಎಸ್ಡಿಎಮ್ನಲ್ಲಿ ಓದಿರುತ್ತಾರೆ, ಎಸ್ಡಿಎಮ್ ಕಾಲೇಜು 50 ವರ್ಷಗಳ ಹಿಂದೆ ಸಿದ್ಧವನದಲ್ಲೇ ಪ್ರಾರಂಭವಾದಾಗ, ಅಲ್ಲಿಯೇ ಆರಂಭದ ತರಗತಿಗಳು ನಡೆಯುತ್ತಿದ್ದವು. ಹೊಸ ಕಟ್ಟಡ ಆಗುವವರೆಗೂ ಸಿದ್ಧವನ ಗುರುಕುಲದ ಆವರಣವೇ ಎಸ್ಡಿಎಮ್ ಕಾಲೇಜಿನ ಆಲಯವಾಗಿತ್ತು. ಹಾಗಾಗಿ ಹೆಚ್ಚಿನ ವಿದ್ಯಾಥರ್ಿಗಳಿಗೆ ಎರಡೂ ಸಂಸ್ಥೆಗಳ ನಂಟು ಬಿಡಿಸಲಾಗದ್ದು.
14 ವರ್ಷಗಳ ನಂತರ ಗುರುಕುಲದ ಅಮೃತಮಹೋತ್ಸವದ ಕಾರ್ಯಕ್ರಮಕ್ಕೆ ಕಾಲಿಟ್ಟಾಗ, ನಾನು ಮೊದಲ ದಿನ ಸಿದ್ಧವನಕ್ಕೆ ಬಂದಂತಹ ದಿನವೇ ಕಣ್ಣಮುಂದಿತ್ತು. ಅಂದು ಕೂಡ ಗುರುಕುಲದ ವಿದ್ಯಾರ್ಥಿಗಳು ನನ್ನನ್ನು ಆಹ್ವಾನಿಸಿ ಪಾಲಕರ ಕೋಣೆಗೆ ಕರೆದುಕೊಂಡು ಹೋದ ಹಾಗೆ, ಉತ್ಸವದ ದಿನವೂ ಕೂಡ ವಿದ್ಯಾರ್ಥಿಗಳು ನನ್ನನ್ನು ಪಾಲಕರ ಕೋಣೆಯ ಹತ್ತಿರವೇ ಕರೆದುಕೊಂಡು ಹೋಗಿದ್ದರು. ಮರೆತೆನಂದರೂ ಮರೆಯೋದು ಹ್ಯಾಂಗ... ಆ ಸಂಭ್ರಮದ ದಿನದಂದು, ಸಿದ್ಧವನದಲ್ಲಿ ಇದ್ದ ಪ್ರತಿಕ್ಷಣವೂ ನಾನು ಭಾವುಕನಾಗಿಬಿಟ್ಟಿದ್ದೆ. ಹಳೆಯ ನೆನಪುಗಳು ಕ್ಷಣಕ್ಷಣವೂ ನನ್ನ ಕಣ್ಣ ಮುಂದೆ ಬಂದುಹೋಗುತ್ತಿದ್ದವು. ಸಂಭ್ರಮದ ಹಿಂದಿನ ದಿನವೇ ನೂರಾರು ಹಳೆಯ ವಿದ್ಯಾರ್ಥಿಗಳು ಸೇರಿ, ಸ್ವಯಂ ಸೇವಕರಾಗಿ ದುಡಿಯುತ್ತಿದ್ದರು. ಎಲ್ಲರಿಗೂ ತಮ್ಮ ಮನೆಯ ಸಂಭ್ರಮಕ್ಕೆ ಅಂತಲೇ ದುಡಿಯುತ್ತಿದ್ದೇವೆ ಅನ್ನುವ ಭಾವನೆ... ಪ್ರತಿಯೊಬ್ಬರ ಮುಖದಲ್ಲೂ ಆ ಸಂಭ್ರಮದ ಸಂತಸ ಎದ್ದು ಕಾಣುತ್ತಿತ್ತು. ಹಳೆಯ ವಿದ್ಯಾರ್ಥಿಗಳು ಗುಂಪುಗುಂಪಾಗಿ ಸೇರಿಕೊಂಡು ಸಿದ್ಧವನದ ಮೂಲೆಮೂಲೆಯೂ ಓಡಾಡುತ್ತಾ, ಅಂದಿನ ನೆನಪುಗಳಿಗೆ ಜಾರಿದ್ದರು. ಹೆಚ್ಚಿನವರ ವಯಸ್ಸು 50 ದಾಟಿತ್ತು, ಇನ್ನೂ ಹೆಚ್ಚಿನವರು 70 ದಾಟಿದವರೂ ಕೂಡ ಇದ್ದರು. ಅಬ್ಬಾ... ಈ 75 ವರ್ಷಗಳಲ್ಲಿ ಎಂತೆಂತಹ ಮಹಾನುಭಾವರನ್ನು, ವಿದ್ಯಾವಂತರನ್ನು, ಸಂಸ್ಕಾರವಂತರನ್ನು, ಸಿರಿವಂತರನ್ನಾಗಿ ಯಾವ ಜಾತಿ/ಧರ್ಮದ ಭೇದವಿಲ್ಲದೇ ಬೆಳೆಸಿದ್ದರೂ, ಸಿದ್ಧವನ ಮಾತ್ರ ಯಾವ ಹಮ್ಮಿಲ್ಲದೇ ನಿಗುಮ್ಮನಾಗಿ ತನ್ನ ಸರಳತೆ, ಪ್ರಶಾಂತತೆಯಿಂದಲೇ ನಮ್ಮನ್ನು ನೋಡಿ ಬರಮಾಡಿಕೊಳ್ಳುತ್ತಿತ್ತು. ತನ್ನ ಮಡಿಲಲ್ಲಿ ಬೆಳೆದಂತಹ ಮಕ್ಕಳನ್ನು ಎಷ್ಟೋ ವರ್ಷಗಳ ನಂತರ ಮತ್ತೆ ನೋಡುತ್ತಿದ್ದೇನೆ ಅನ್ನುವ ಸಾರ್ಥಕತೆಯ ಖುಷಿಯನ್ನು ಅದು ಒಳಗೊಳಗೆ ಅನುಭವಿಸುತ್ತಿತ್ತೋ? ಸಿದ್ಧವನ ಆಂತರ್ಯವನ್ನು ಹೊಕ್ಕು ಅರಿತಾಗಲೇ ಅದರ ಆಳವನ್ನು ಅರಿಯಬಹುದೇನೋ? ಏಷ್ಟೋ ವರ್ಷಗಳ ನಂತರ ಹೆತ್ತಮಕ್ಕಳನ್ನು ನೋಡಿ, ಕಣ್ಣುತುಂಬಿಕೊಳ್ಳುವ ತಂದೆತಾಯಿಗಳ ಆಂತರ್ಯದ ಪ್ರೀತಿ, ವಾತ್ಸಲ್ಯವನ್ನು ಬಣ್ಣಿಸುವುದು ಕಷ್ಟ ಅಂತ ಹೇಳುವಾಗ, 75 ವರ್ಷಗಳಲ್ಲಿ ಅಸಂಖ್ಯ ಮಕ್ಕಳನ್ನು ಅತ್ಯಂತ ಕಾಳಜಿಯಿಂದ ಸಾಕಿ ಸಲುಹಿದ ಸಿದ್ಧವನವೆಂಬ ತಾಯಿಯ ಒಡಲಾಳದ ಪ್ರೀತಿಯನ್ನು ಬಣ್ಣಿಸಲಾದಿತೇ? ಬಣ್ಣಿಸಿದರೂ, ಇದೊಂಥರ ಆಗಸದ ವಿಸ್ತಾರವನ್ನು ಲೆಕ್ಕಮಾಡಿ ಹೇಳಿದಂತೆ...! ಕಲ್ಪನೆ ನಿಲುಕದ್ದು... ಅಂತಹದ್ದುರಲ್ಲಿ ಅಲ್ಲಿ ಓದಿ,ಆಡಿ ಬೆಳೆದ ನಮ್ಮಂತ ವಿದ್ಯಾಥರ್ಿಗಳು ಮತ್ತೇ ಏಷ್ಟೋ ವರ್ಷಗಳ ನಂತರ ಮತ್ತೇ ಆ ನೆಲದಲ್ಲಿ ನಿಂತಾಗ ಕಾಡಿದ ನೆನಪುಗಳು, ಅದರಿಂದ ಸಿಕ್ಕ ಖುಷಿಯನ್ನು ಬಣ್ಣಿಸುವುದು ಕೂಡ ಕಷ್ಟವೇ... ಅದನ್ನು ಅನುಭವಿಸಿದಂತಹ ಎಲ್ಲ ಹಳೆಯ ವಿದ್ಯಾರ್ಥಿಗಳಿಗೆನೇ ಕೇಳಬೇಕಷ್ಟೇ...! 14 ವರ್ಷಗಳ ನಂತರ ನನಗೆ ಪಾಲಕರಾಗಿದ್ದಂತಹ ಶ್ರೀ ಮಹಾಬಲೇಶ್ವರ ಭಟ್ ಮಾತನಾಡಿಸಿದಾಗ, ಇಂದಿಗೂ ಅವರ ಮಾತಿನಲ್ಲಿ ಅದೇ ಪ್ರೀತಿ, ವಾತ್ಸಲ್ಯ, ಕಾಳಜಿ... ಅವರ ಮುಂದೆ ಮತ್ತೇ ನಾನು ಸಣ್ಣವನಾಗಿಬಿಟ್ಟೆ. ಮಾತುಗಳೇ ಹೊರಡಲಿಲ್ಲ. ನನ್ನ ಜೊತೆಗೆ ಓದಿದ ಅನೇಕ ಸ್ನೇಹಿತರು ಅಂದು ಬರದೇ ಇದ್ದುದು ನನ್ನ ನಿರಾಶೆಗೆ ಕಾರಣವಾಗಿತ್ತು. ಹೀಗಿದ್ದರೂ, ನನ್ನ ಸಹಪಾಠಿಗಳಾದ ಶಿವಕುಮಾರ್ ಗೌಡ, ರಾಜೇಶ್ ಜೈನ್, ಪ್ರದೀಪ್ ಶೆಟ್ಟಿ, ಪ್ರವೀಣ್ಕುಮಾರ್ರಂತಹ ಕೆಲವು ಸ್ನೇಹಿತರು ಮಾತ್ರ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು. 
ಅಂದು ಸೇರಿದ್ದ ಹಿರಿಯ ಹಳೆಯ ವಿದ್ಯಾರ್ಥಿಗಳೆಲ್ಲಾ ಸಿದ್ಧವನದ ಸಮವಸ್ತ್ರವಾದ ಬಿಳಿ ಅಂಗಿ ಮತ್ತು ಬಿಳಿಪಂಚೆ ಉಟ್ಟು ಮತ್ತೆ ತಾವು ಹಳೆಯ ವಿದ್ಯಾಥರ್ಿಗಳಂತೆ ಇಡೀ ಸಿದ್ಧವನದ ತುಂಬಾ ಓಡಾಡುತ್ತಿದ್ದರು. ಅವರು ಕಳೆಯುತ್ತಿದ್ದ ಪ್ರತಿಕ್ಷಣದ ಹಿಂದೆಯೂ ಹಳೆಯ ನೆನಪುಗಳ ದೊಡ್ಡ ಸಡಗರವೇ ಎದ್ದು ಕಾಣುತ್ತಿತ್ತು. ಅಮೃತಮಹೋತ್ಸವದ ಕಾರ್ಯಕ್ರಮ 11 ಗಂಟೆಗೆ ಪ್ರಾರಂಭವಾಗಿರುವಾಗಲೇ ಪರಮಪೂಜ್ಯ ಖಾವಂದರು ಮತ್ತು ಶ್ರೀಮತಿ ಹೇಮಾವತಿ ವಿ ಹೆಗ್ಗಡೆಯವರು ಅಧ್ಯಕ್ಷರಾಗಿ ಆಗಮಿಸಿದ್ದರು. 30-40 ವರ್ಷಗಳ ಹಿಂದೆ ಸಿದ್ದವನದಲ್ಲಿ ಓದಿ ಕಲಿತು, ಒಳ್ಳೆಯ ಹುದ್ದೆಯಲ್ಲಿದ್ದ ಅನೇಕರು ತಮ್ಮ ಬದುಕಿನಲ್ಲಿ ಸಿದ್ಧವನ ನೀಡಿದ ಪ್ರಮುಖ ಪಾತ್ರವನ್ನು, ಹಳೆಯ ನೆನಪುಗಳಿಗೆ ಜಾರಿ, ಅಲ್ಲಿ ಸೇರಿದ್ದ ನೂರಾರು ಹಳೆಯ ವಿದ್ಯಾರ್ಥಿಗಳ ಮುಖವಾಣಿಯಾಗಿ ಮಾತನಾಡಿದ್ದರು. ಅಂದು ಸೇರಿದ್ದ ಪ್ರತಿಯೊಬ್ಬರ ಹಿಂದೆಯೂ ಸಿದ್ಧವನದ ಹಳೆಯ ನೆನಪುಗಳ ದೊಡ್ಡ ಮೂಟೆಯೂ ಇದೆ. ಎಲ್ಲರಿಗೂ ತಮ್ಮ ತಮ್ಮ ಅವಕಾಶಗಳನ್ನು ಹೇಳಿಕೊಳ್ಳಲಿಕ್ಕೆ ಅವಕಾಶ ಸಿಗದೇ ಇದ್ದರೂ, ಅದನ್ನು ಮನಸ್ಸಿನಲ್ಲೇ ಮತ್ತೆ ಮೆಲುಕು ಹಾಕಿ ಆ ಸ್ವಾದವನ್ನು ಒಳಗೊಳಗೆ ಅನುಭವಿಸಿದಂತೆ ಭಾಸವಾಗುತ್ತಿತ್ತು. ಪೂಜ್ಯ ವೀರೇಂದ್ರ ಹೆಗ್ಗೆಡೆಯವರು ಕೂಡ ಸಿದ್ಧವನದೊಂದಿಗೆ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದು ಕೂಡ ವಿಶೇಷವಾಗಿತ್ತು. ಕಾರ್ಯಕ್ರಮದ ನಂತರ ಸಿದ್ಧವನವನ್ನು ಪ್ರಾರಂಭಿಸಿ, ಬೆಳೆಸಿದ ಶ್ರೀ ಮಂಜಯ್ಯ ಹೆಗ್ಗಡೆ, ಶ್ರೀ ರತ್ನವರ್ಮ ಹೆಗ್ಗಡೆ ಮತ್ತು ಶ್ರೀ ವೀರೆಂದ್ರ ಹೆಗ್ಗಡೆಯವರ ಸಾಧನೆಯ ಕುರಿತು ಮಾತನಾಡಿದ್ದು ಇಡೀ ಕಾರ್ಯಕ್ರಮಕ್ಕೆ ಕಳಶಭೂಷಣದಂತಿತ್ತು. ಸಿದ್ಧವನದಲ್ಲಿ ಮತ್ತೆ ಎಂದಿನಂತೆ ಮುಂಜಾನೆಯ ಗಂಜಿ ಊಟ, ಕೊಬ್ಬರಿ ಚಟ್ನಿ, ಉಪ್ಪಿನಕಾಯಿ ಜೊತೆಗೆ ಥರಾವರಿ ವಿವಿಧ ತಿಂಡಿ, ಮಧ್ಯಾಹ್ನದ ಭಾರಿ ಮೃಷ್ಟಾನ್ನ ಭೋಜನ ಸಿದ್ಧವನದ ಅಮೃತಮಹೋತ್ಸವದ ವಿಶೇಷವಾಗಿತ್ತು. ಸಾಯಂಕಾಲ ಮತ್ತೆ ಹಳೆಯ ನೆನಪುಗಳು, ಮನರಂಜನೆ, ಎಸ್ಡಿಎಮ್ ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿವರ್ಗದವರು ಅಭಿನಯಿಸಿದ್ದ ನಾಟಕ ಇತ್ಯಾದಿ ಕಾರ್ಯಕ್ರಮಗಳು, ರಾತ್ರಿ ಮತ್ತೆ ಮೃಷ್ಟಾನ ಭೋಜನ ಇಂತವುಗಳಿಂದ ಭಾಗವಹಿಸಿದ ನಮ್ಮಂತ ಹಳೆಯ ವಿದ್ಯಾರ್ಥಿಗಳಿಗೆ ಇಡೀ ಅಮೃತ ಮಹೋತ್ಸವದ ನೆನಪು ಚಿರಸ್ಥಾಯಿಯಾಗಿ ಉಳಿಯುವಂತಾಗಿದೆ.
ಮರುದಿನ ಎಸ್ಡಿಎಮ್ ಕಾಲೇಜಿನ 50 ವರ್ಷದ ಸಂಭ್ರಮ ಕೂಡ ಇನ್ನಷ್ಟು ಭರ್ಜರಿಯಾಗಿ ನೆರವೇರಿತು. ಸಿದ್ಧವನದ ಅಮೃತಮಹೋತ್ಸವಕ್ಕೆ ಬಂದವರೆಲ್ಲಾ ಕಾಲೇಜಿನ ಚಿನ್ನದ ಮಹೋತ್ಸವಕ್ಕೆ ಭಾಗವಹಿಸಿದ್ದರು. 50 ವರ್ಷಗಳಲ್ಲಿ ಕಾಲೇಜಿನಲ್ಲಿ ಓದಿದ ಎಲ್ಲ ವಿದ್ಯಾರ್ಥಿಗಳು ದೇಶವಿದೇಶದ ಮೂಲೆಗಳಿಂದ ಕಾಲೇಜಿನ ಚಿನ್ನದಂತಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈಗಾಗಲೇ ನಿವೃತ್ತಿ ಹೊಂದಿದ ಹಳೆಯ ಪ್ರಾಧ್ಯಾಪಕರು, ನಿವೃತ್ತಿಯ ಅಂಚಿನಲ್ಲಿದ್ದವರು, ಸಕ್ರಿಯವಾಗಿದ್ದ ಎಲ್ಲ ಪ್ರಾಧ್ಯಾಪಕರು ಸ್ವಾಗತಕಾರರಾಗಿ, ಸ್ನೇಹಿತರಂತೆ ಹಳೆಯ ವಿದ್ಯಾರ್ಥಿಗಳನ್ನು ಬರಮಾಡಿಕೊಂಡಿದ್ದು ಎಲ್ಲರಿಗೂ ಆತ್ಮೀಯತೆಯನ್ನು ಹುಟ್ಟಿಸುವಂತಿತ್ತು. ಅದು ಗುರುಶಿಷ್ಯರ ಸಮಾಗಮವಾದರೂ, ಇಬ್ಬರು ಹಳೆಯ ಸ್ನೇಹಿತರ ಸಮ್ಮೀಲನದಂತೆ ಕಾಣುತ್ತಿತ್ತು. ಅಂದು ಯಾವ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ತಮಗೆ ಗೌರವ ಕೊಡಬೇಕೆಂದು ನಿರೀಕ್ಷಿಸುತ್ತಿರಲಿಲ್ಲ. ಪ್ರಾಂಶುಪಾಲರಾಗಿದ್ದ ಯಶೋವರ್ಮರೂ ಕೂಡ ತುಂಬಾ ಉತ್ಸಾಹದಿಂದ ಎಲ್ಲ ಹಳೆಯ ವಿದ್ಯಾರ್ಥಿಗಳ ಜೊತೆ ಪ್ರೀತಿಯಿಂದ ಬರೆಯುತ್ತಾ, ಖುದ್ದಾಗಿ ಅವರೇ ಎಲ್ಲರ ಆತಿಥ್ಯವನ್ನು ನೋಡಿಕೊಳ್ಳುತ್ತಿದ್ದುದು, ಕಾರ್ಯಕ್ರಮದ ವಿಶೇಷವಾಗಿತ್ತು. ಆಯಾ ವರ್ಷಗಳಲ್ಲಿ ಓದಿದದವರು ಒಂದೊಂದು ಕೋಣೆಯಲ್ಲಿ ಸೇರುವಂತೆ ಮಾಡುವ ಯೋಜನೆಯು ಕೂಡ ಹಳೆಯ ವಿದ್ಯಾರ್ಥಿಗಳ ಸಂತೋಷಕ್ಕೆ ಕಾರಣವಾಗಿತ್ತು. ಅಂದು ಪ್ರತಿಯೊಬ್ಬರ ಮುಖದಲ್ಲಿ ಸಂತೋಷ, ಸಂತಸ ವರ್ಣಿಸಲಾಗದಷ್ಟು ಸಡಗರದಲ್ಲಿ ಮೊಳಗಿತ್ತು. ಹೆಚ್ಚಿನವರು ತಮ್ಮ ಹೆಂಡತಿ, ಮಕ್ಕಳು, ಮೊಮ್ಮಕ್ಕಳೊಂದಿಗೆ ಬಂದವರಿದ್ದರು. ತಮ್ಮ ಕುಟುಂಬದವರನ್ನು ಇಡೀ ಕಾಲೇಜಿನ ಇಂಚು ಇಂಚನ್ನು ಬಿಡದೇ ಎಲ್ಲ ಕಡೆಯೂ ಓಡಾಡಿ ಹಳೆಯ ನೆನಪುಗಳಿಗೆ ಜಾರಿದ್ದರು. ಇದಕ್ಕೆ ನಾನು ಕೂಡ ಹೊರತಾಗಿಲ್ಲ. ಕಾಲೇಜಿನ ಮುಖ್ಯ ಗೇಟ್ನಿಂದ ಹೊರಟು, ಲೈಬ್ರೈರಿಯ ಸುತ್ತಮುತ್ತ, ಕ್ಯಾಂಟೀನ್, ಗ್ರಂಥಾಲಯದ ಒಳಗೆ, ನಾವು ಓದುತ್ತಿದ್ದ ಜಾಗ ಎಲ್ಲಡೆ ಮತ್ತೆ ಓಡಾಡಿ ಲೈಬ್ರರಿಯಲ್ಲಿನ ನೆನಪುಗಳನ್ನು ಮತ್ತೆ ಮೆಲುಕುಹಾಕಿದ್ದಾಯಿತು. ನಾನು ವಿಜ್ಞಾನದ ವಿದ್ಯಾರ್ಥಿಯಾಗಿದ್ದರಿಂದ ಫಿಸಿಕ್ಸ್, ಕೆಮಸ್ಟ್ರಿ, ಬಯಾಲಜಿ ಡಿಪಾರ್ಟ್ಮೆಂಟ್ಗಳಿಗೆ ಹೋಗಿ, ಪಾಠ ಮಾಡಿದ ಗುರುಗಳು, ಲ್ಯಾಬ್ಗಳಲ್ಲಿ ಗಂಟೆಗಟ್ಟಲೇ ನಿಂತು ಮರೆತುಹೋದ ಏಷ್ಟೋ ನೆನಪುಗಳನ್ನು ಮತ್ತೆ ತಲೆಯಲ್ಲಿ ತುಂಬಿಕೊಂಡು ಹೊರಬಂದಿದ್ದೆ. ಮಧ್ಯಾಹ್ನದ ಮೃಷ್ಟಾನ್ನ ಭೋಜನ, ಅದರ ಜೊತೆಗೆ ಮನರಂಜನಾ ಕಾರ್ಯಕ್ರಮ, ಸಾಯಂಕಾಲದ ಮುಖ್ಯ ಕಾರ್ಯಕ್ರಮ ಪ್ರಾರಂಭವಾಗುವವರೆಗೂ ಸಮಯ ಹೇಗೆ ಕಳೆಯಿತೋ ಅನ್ನುವುದೇ ತಿಳಿಯಲಿಲ್ಲ. ಪೂಜ್ಯ ಖಾವಂದರು ಮತ್ತು ಶ್ರೀಮತಿ ಹೇಮಾವತಿ ಹೆಗ್ಗಡೆ, ಡಾ.ಎಸ್.ಪ್ರಭಾಕರ್, ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದ ಬೆಳ್ತಂಗಡಿಯ ಶಾಸಕರಾಗಿದ್ದ ವಸಂತ ಬಂಗೇರ ಇನ್ನು ಹಲವು ಗಣ್ಯರು ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿದ್ದರು. 50ತುಂಬಿದ ಕಾಲೇಜಿಗೆ ದುಡಿದ ಎಲ್ಲರಲ್ಲಿಯೂ ಬೆಟ್ಟದಷ್ಟು ನೆನಪುಗಳಿದ್ದವು. ಅನೇಕರು ಹೃದಯತುಂಬಿದ್ದ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಅಂದು ವೇದಿಕೆಯಾಗಿತ್ತು. ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದ, ಇಂದು ಕಲಾ ಕ್ಷೇತ್ರದಲ್ಲಿ ತುಂಬಾ ಹೆಸರು ಮಾಡಿರುವ ವಿಲಾಸ್ ನಾಯಕ್ ವೇದಿಕೆಯಲ್ಲೇ ಅದ್ಭುತ ಸ್ಥಿರಚಿತ್ರವನ್ನು ಬಿಡಿಸಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ನಮ್ ಬ್ಯಾಚ್ 2001-02 ಬ್ಯಾಚ್ನನವರಲ್ಲಿ ಹೆಚ್ಚಿನವರು ಅಂದು ಬರದೇ ಇರುವುದು ಅತ್ಯಂತ ಬೇಸರ ಹುಟ್ಟಿಸಿತು. ಖಂಡಿತ ಅವರೆಲ್ಲಾ ಒಂದು ಅದ್ಭುತ ಕ್ಷಣಗಳ ದಿನವನ್ನು ಮಿಸ್ ಮಾಡಿಕೊಂಡರು ಅನ್ನುವ ಭಾವನೆ ನನ್ನಲ್ಲಿ ಮೂಡಿತು. ಅಂದು ಅನೇಕ ಸ್ನೇಹಿತರನ್ನು ಭೇಟಿಮಾಡಬೇಕೆಂದು ಅಂದುಕೊಂಡಿದ್ದ ನನಗೆ ದೊಡ್ಡ ನಿರಾಸೆ ಕಾಡಿತು. ಹೀಗಿದ್ದರೂ ಬೆಳಗ್ಗೆಯಿಂದ ರಾತ್ರಿ 8 ಗಂಟೆಯವರೆಗೂ ಕಾಲೇಜಿನ ಆವರಣದ ಆ ಸಡಗರವನ್ನು ಕ್ಷಣಕ್ಷಣವೂ ಆಸ್ವಾದಿಸುತ್ತಿದ್ದೆ. ನನ್ನಂತೆ ಎಲ್ಲರೂ... ಎಲ್ಲರ ಜೀವನದಲ್ಲಿ ಎಲ್ಲದಿನಗಳೂ ಕಾಡುವ ದಿನಗಳಾಗಿರುವುದಿಲ್ಲ. ಯಾವುದೋ ಒಂದು ದಿನ, ಕ್ಷಣ ವರವಾಗಿ ಬಂದಿರುತ್ತೆ. ಅಂತಹ ವರ ಸಿದ್ಧವನದ ಅಮೃತಮಹೋತ್ಸವ ಮತ್ತು ಎಸ್ಡಿಎಮ್ ಕಾಲೇಜಿನ 50ರ ಸಂಭ್ರಮದ ದಿನವಾಗಿತ್ತು ಅಂದರೆ ಅತಿಶಯೋಕ್ತಿಯೆನಲ್ಲ.

50 ನೇ ವರ್ಷದ ಕಾರ್ಯಕ್ರಮದಂದು ಪ್ರತಿ ವರುಷ ಮೇ1 ನೇ ತಾರೀಖನ್ನು ಎಸ್ ಡಿ ಎಮ್ ಹಳೆಯ ವಿದ್ಯಾರ್ಥಿಗಳ ಸಮ್ಮೀಲನಕ್ಕೆ ಮೀಸಲಾಗಿಡುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಪ್ರತಿ ವರ್ಷ ಮೇ1 ಕಾರ್ಮಿಕರ ದಿನಾಚರಣೆ ಎಲ್ಲರಿಗೂ ಸರ್ಕಾರಿ ರಜೆ ಇರುತ್ತದೆ. ಅಂದು ಮತ್ತೆ ಎಲ್ಲರೂ ಸೇರಲು ಒಳ್ಳೆಯ ಸುವರ್ಣಾವಕಾಶ.

Monday, 6 April 2015

ನನ್ನ ಮೂರು ಪುಸ್ತಕಗಳು

ಪ್ರೀತಿಯ ಸ್ನೇಹಿತರೇ,

ನನ್ನ ಹಿಂದಿನ ಪುಸ್ತಕಗಳಾದ `ಅಮ್ಮನ ಆಟೋಗ್ರಾಫ್’ ಮತ್ತು `ದೇವರ ಜೋಳಿಗೆ’ ಪುಸ್ತಕಗಳನ್ನು ಕೊಂಡು ಓದಿ ಅಭಿಪ್ರಾಯ ತಿಳಿಸಿದ ನಿಮಗೆಲ್ಲರಿಗೂ ವಂದನೆಗಳನ್ನು ತಿಳಿಸುತ್ತಾ, ನನ್ನ ಮೂರನೇ ಪುಸ್ತಕ `ತಿಗರಿಯ ಹೂಗಳು’ ಕವನ ಸಂಕಲನದ ಬಗ್ಗೆಯೂ ನಿಮ್ಮಿಂದ ಅಷ್ಟೇ ಪ್ರೋತ್ಸಾಹವನ್ನು ನಿರೀಕ್ಷಿಸುತ್ತಿದ್ದೇನೆ. `ತಿಗರಿಯ ಹೂಗಳು’ ಸಂಕಲನವು ಈ ಕೆಳಕಂಡ ಬುಕ್ ಸ್ಟೋರ್ ಗಳಲ್ಲಿ ಲಭ್ಯವಿದೆ. ನಿಮ್ಮ ಹತ್ತಿರದ ಬುಕ್ ಸ್ಟೋರ್ ಗಳಲ್ಲಿ ಲಭ್ಯವಿರುವ ಈ ಸಂಕಲನವನ್ನು ಕೊಂಡು, ಓದಿ ಅಭಿಪ್ರಾಯ ತಿಳಿಸಬೇಕೆಂದು ಕೇಳಿಕೊಳ್ಳುತ್ತೇನೆ.

• ಸಪ್ನಾ ಬುಕ್ ಸ್ಟಾಲ್, ಗಾಂಧಿನಗರ ಮತ್ತು ಕರ್ನಾಟಕದ ಎಲ್ಲ ಬ್ರಾಂಚ್ ಗಳು
• ಸ್ಪರ್ಧಾ ಚೈತ್ರಾ ಬುಕ್ ಹೌಸ್, ಗ್ರೀನ್ ಹೌಸ್ ಹತ್ತಿರ, ಗಾಂಧಿನಗರ, ಬೆಂಗಳೂರು
• ಬೆಳೆಗೆರೆ ಬುಕ್ಸ್ ಆಂಡ್ ಕಾಫಿ, ಗಾಂಧಿಬಝಾರ್, ಬೆಂಗಳೂರು
• ಓಂಕಾರ್ ಬುಕ್ ಹೌಸ್, ಗಿರಿನಗರ, ಬೆಂಗಳೂರು
• ಟೋಟಲ್ ಕನ್ನಡ, ಜಯನಗರ 4ನೇ ಬ್ಲಾಕ್
• ಅಂಕಿತ ಬುಕ್ ಸ್ಟೋರ್, ಗಾಂಧಿಬಝಾರ್ ,ಬೆಂಗಳೂರು
ಪುಸ್ತಕ ಮಳಿಗೆಗಳಿಗೆ ಹೋಗಿ, ಕೊಂಡುಕೊಳ್ಳಲು ಆಗದಿದ್ದರೆ, ಆನ್ಲೈನ್ ನಲ್ಲಿಯೂ ಕೂಡ ಪುಸ್ತಕವನ್ನು ಕೊಂಡುಕೊಳ್ಳಬಹುದು.
https://sapnaonline.com/tigariya-hoogalu-fakeer-panchami-pu…
http://www.totalkannada.com/tigariya-hoogalu--P29385


ನನ್ನ ಕಥಾ ಸಂಕಲನಗಳಾದ `ಅಮ್ಮನ ಆಟೋಗ್ರಾಫ್,' `ದೇವರ ಜೋಳಿಗೆ'  ಮತ್ತು ಕವನ ಸಂಕಲನ `ತಿಗರಿಯ ಹೂಗಳು' ಈ ಮೂರು ಪುಸ್ತಕಗಳನ್ನು ಒಟ್ಟಿಗೆ ಕೊಳ್ಳುವುದಾದರೆ,  ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ..

https://sapnaonline.com/shop/search/fakeer

http://www.totalkannada.com/search.html#?q=panchami%20publications


ದೇವರ ಜೋಳಿಗೆ ಮತ್ತು ಅಮ್ಮನ ಆಟೋಗ್ರಾಫ್ ಪುಸ್ತಕಗಳು ಫ್ಲಿಫ್ ಕಾರ್ಟ್ ಮತ್ತು ಅಮೆಜಾನ್ ನಲ್ಲಿ ಲಭ್ಯವಿದೆ. ಈ ಕೆಳಗಿನ ಲಿಂಕ್ ಗಳನ್ನು ಕ್ಲಿಕ್ ಮಾಡಿ, ಬುಕ್ ಮಾಡಿಕೊಳ್ಳಬಹುದು.

http://www.flipkart.com/devara-jolige/p/itmefs9ypez7xxzf
http://www.amazon.in/Devara-Jolige-Fakeera-Shridhar-Banavaasi/dp/B00MEALAZS

http://www.flipkart.com/ammana-autograph/p/itmefs92gsdnayhx
http://www.amazon.in/Ammana-Autograph-Phakeera-Shreedhar-Banavaasi/dp/B00LCHGZLS

ಪುಸ್ತಕವನ್ನು ಕೊಂಡು, ಓದಿ ಅಭಿಪ್ರಾಯ ತಿಳಿಸಿದರೆ, ಇದಕ್ಕಿಂತ ದೊಡ್ಡ ಪ್ರೋತ್ಸಾಹವಿಲ್ಲ ಅಂತ ಅಂದುಕೊಳ್ಳುವೆ.
`ಬರಹಗಾರನಿಗೆ ಓದುಗ ಮಹಾಶಯನೇ ನಿಜವಾದ ಹಿತೈಷಿ'
ಧನ್ಯವಾದಗಳೊಂದಿಗೆ
ಇಂತಿ ನಿಮ್ಮವ
ಫಕೀರ
(ಶ್ರೀಧರ ಬನವಾಸಿ)
Monday, 9 February 2015

ಕದಂಬೋತ್ಸವ ನೆಪದಲ್ಲಾದರೂ ಬನವಾಸಿ ಉಳಿಸಿ...!!


ಪ್ರತಿವರ್ಷವೂ ಐತಿಹಾಸಿಕ ಸ್ಥಳವಾಗಿರುವ ಬನವಾಸಿಯಲ್ಲಿ ಹಮ್ಮಿಕೊಳ್ಳುವ ಕದಂಬೋತ್ಸವವೂ ಸಕರ್ಾರಕ್ಕೆ ಆಗಾಗ ಬಿಸಿತುಪ್ಪದಂತೆ ತೋರ್ಪಟ್ಟಿದೆ. ಸಾಹಿತ್ಯ ವಲಯ, ಚಿಂತಕರು ಮತ್ತು ಬನವಾಸಿಗರ ವಿರೋಧಗಳು, ಟೀಕೆಗಳಿಂದ ಹೇಗಾದರೂ ತಪ್ಪಿಸಿಕೊಳ್ಳಲೇಬೇಕು ಅನ್ನುವ ಯೋಚನೆಗಳನ್ನಿಟ್ಟುಕೊಂಡು ಉತ್ಸವವನ್ನು ಹಮ್ಮಿಕೊಳ್ಳುತ್ತಿರುವುದನ್ನು ಅನೇಕ ವರ್ಷಗಳಿಂದ ಕಾಣಬಹುದು. ಪ್ರತಿವರ್ಷದ ಕದಂಬೋತ್ಸವವೂ ಸರ್ಕಾರದ ಆಶ್ವಾಸನೆಗಳು ಮತ್ತು ಇನ್ನೀತರ ಸಾಧನೆಗಳ ತೋರ್ಪಡಿಕೆ, ಮನರಂಜನೆ, ಜಿಲ್ಲೆಯ ರಾಜಕೀಯ ಮುಖಂಡರು ಈ ನೆಪದಲ್ಲಾದರೂ ಬನವಾಸಿಗೆ ಬಂದುಹೋಗುವುದಕ್ಕೆ ಸೀಮಿತವಾಗಿಬಿಟ್ಟಿದೆ. ಇದು ಪಂಪನ ನಾಡು ಬನವಾಸಿಗೆ ಒದಗಿರುವ ದುರ್ಗತಿ ಅನ್ನಬೇಕೋ, ಸದವಕಾಶ ಅನ್ನಬೇಕೋ ಅಂತ ಹೇಳುವುದು ಸ್ವಲ್ಪ ಕಷ್ಟ.
ಕನ್ನಡಿಗರ ಮೊದಲ ರಾಜಧಾನಿ ಬನವಾಸಿಯನ್ನು ನೋಡಲು ಅತಿ ಉತ್ಸಾಹದಿಂದ ಅನೇಕ ಕಡೆಯಿಂದ ಜನರು, ಪ್ರವಾಸಿಗರು, ಸಂಶೋಧನಾ ವಿದ್ಯಾ ರ್ಥಿಗಳು ಬಂದುಹೋಗುತ್ತಾರೆ. ಹೀಗೆ ಒಮ್ಮೆ ಬನವಾಸಿಯನ್ನು ನೋಡಿಕೊಂಡು ಹೋದವರು ಮತ್ತೆ ಬರುವುದು ತುಂಬಾ ಕಡಿಮೆ, ಇದರಿಂದ ಇಲ್ಲಿನ ಪ್ರವಾಸೋದ್ಯಮದಲ್ಲೂ ಹೇಳಿಕೊಳ್ಳುವಂತಹ ಅಭಿವೃದ್ಧಿ ಇಲ್ಲ ಮತ್ತು ಮಧುಕೇಶ್ವರ ದೇವಸ್ಥಾನದ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾದಂತೆ ಕಂಡಿಲ್ಲ. ಈ ರೀತಿಯ ವಾತಾವರಣ ನಿರ್ಮಾಣವಾಗಲಿಕ್ಕೆ, ಮುಖ್ಯ ಕಾರಣವೇ, ಮೂಲಭೂತ ಸೌಲಭ್ಯಗಳ ಕೊರತೆ ಮತ್ತು ಬನವಾಸಿಯ ಇತಿಹಾಸದ ಮೂಲಬೇರುಗಳನ್ನು ಉಳಿಸಿಕೊಳ್ಳುವ ಯಾವುದೇ ಪ್ರಯತ್ನಗಳು ಇದುವರೆಗೂ ಆಗದೇ ಇರುವುದು. ಬನವಾಸಿಯಲ್ಲಿ ಶ್ರೀ ಮಧುಕೇಶ್ವರ ದೇವಸ್ಥಾನ ಬಿಟ್ಟರೆ, ಈ ನಾಡನ್ನು ಕಟ್ಟಿ ಬೆಳೆಸಿದ ಕದಂಬ ಮನೆತನಗಳು, ಸೋದೆ ಅರಸರು ಕುರಿತಾದ ಶಾಸನಗಳು, ಐತಿಹಾಸಿಕವಾಗಿ ದೊರೆಯುವಂತಹ ಯಾವುದೇ ಕುರುಹುಗಳನ್ನು ಉಳಿಸಿಕೊಳ್ಳುವ, ಬೆಳೆಸುವ ಯಾವುದೇ ಪ್ರಯತ್ನಗಳು ಕ್ಷೇತ್ರದಲ್ಲಿ ಕಾಣಸಿಗುವುದಿಲ್ಲ ಅನ್ನುವುದು ಎಲ್ಲರ ದೂರು. ಇದು ಬನವಾಸಿಯ ಮೇಲೆ ಅಭಿಮಾನವಿಟ್ಟುಕೊಂಡಂತಹ ಎಂತಹವರಿಗಾದರೂ ನಿರಾಸೆಯನ್ನು ಹುಟ್ಟಿಸುವಂತಹ ಸಂಗತಿಯಾಗಿದೆ. ಆದಿಕವಿ ಪಂಪ, ಅಲ್ಲಮ, ಹರ್ಡೆಕರ್ ಮಂಜಪ್ಪರಂತಹ ಮಹಾನ್ ತೇಜಸ್ವಿಗಳು ಬದುಕಿ ಬಾಳಿದ ಬನವಾಸಿಯಲ್ಲಿ, ಈ ವ್ಯಕ್ತಿಗಳು ಮಾಡಿರುವ ಸಾಧನೆ, ಅವರ ಗ್ರಂಥಗಳ ಸಂಗ್ರಹ ಮತ್ತು ಪೋಷಣೆ, ಇವರ ಕುರಿತಾದ ಸಂಶೋಧನಾ ಕೇಂದ್ರಗಳು, ಮ್ಯೂಸಿಯಂಗಳ ನಿರ್ಮಾಣ ಇಂತಹ ಯಾವ ಪ್ರಯತ್ನಗಳು ಇದುವರೆಗೂ ಆಗಿಲ್ಲ. ಈ ಹಿಂದೆ ಪುರಾತತ್ವ ಇಲಾಖೆಯವರು ಬನವಾಸಿ ಮತ್ತು ಅದರ ಸುತ್ತಮುತ್ತಲೂ ಉತ್ಕನನ ಮಾಡಿದಾಗ ಸಿಕ್ಕಿರುವ ಅನೇಕ ಶಾಸನಗಳು, ವಿಗ್ರಹಗಳು, ಭಗ್ನಗೊಂಡ ಜೈನ ತೀರ್ಥಂಕರರ ವಿಗ್ರಹಗಳು ದೇವಸ್ಥಾನದ ಒಂದು ಕೋಣೆಯಲ್ಲಿ ಧೂಳು ತಿನ್ನುತ್ತಿವೆ. ಬನವಾಸಿಯ ಇತಿಹಾಸವನ್ನು ಇನ್ನಷ್ಟು ತೆರೆದಿಡುವ ಇಂತಹ ಕುರುಹುಗಳು ಮೊದಲು ಹೇಗೆ ಭೂಮಿಯಲ್ಲಿ ಅಡಗಿದ್ದವೋ, ಅದೇ ರೀತಿ ಧೂಳು ತುಂಬಿಕೊಂಡು ಇಂದು ದೇವಸ್ಥಾನದಲ್ಲಿ ಅನಾಥವಾಗಿ ಮಲಗಿಕೊಂಡಿವೆ. ಅವುಗಳ ಬಗ್ಗೆ ಮಾಹಿತಿ ನೀಡುವವರು ಯಾರೂ ಇಲ್ಲ. ಸಂಶೋಧನೆ ಇಲ್ಲ. ಪ್ರವಾಸಿಗರಿಗೂ ಅಲ್ಲಿ ಪ್ರವೇಶವಿಲ್ಲ. ದೂರದಿಂದಲೇ ಅವುಗಳನ್ನು ನೋಡಿಕೊಂಡು ಕಣ್ಣೀರು ತುಂಬಿಕೊಂಡು ಬರಬೇಕಷ್ಟೇ. ಕನ್ನಡ ರಾಜಮನೆತನಗಳ ಬಗ್ಗೆ ಅಪಾರವಾದ ಸಂಶೋಧನೆ ಮಾಡಬೇಕೆನ್ನುವರಿಗೆ ಬನವಾಸಿಯೇ ಮೊದಲ ಸಾಕ್ಷಿಯಾಗುತ್ತದೆ. ಈಗ ಸಿಕ್ಕಿರುವ ಕುರುಹುಗಳು, ಶಾಸನಗಳು ಪ್ರಬಲವಾದ ಸಾಕ್ಷ್ಯವನ್ನು ನೀಡುತ್ತವೆ, ಈ ನಿಟ್ಟಿನಲ್ಲಿ ಪ್ರಾಮಾಣಿಕವಾದ ಆಳವಾದ ಸಂಶೋಧನೆ ಆಗಬೇಕಷ್ಟೇ. ಹೀಗೆ ಸಾಹಿತ್ಯಕವಾಗಿ ಮತ್ತು ಐತಿಹಾಸಿಕವಾಗಿ ಸಂಶೋಧನೆ ಮಾಡುವಂತಹ ಪ್ರಯತ್ನಗಳು ಬನವಾಸಿಯಲ್ಲಿ ಆಗದೇ ಇರುವ ದೂರುಗಳ ಜೊತೆಗೆ,  ಕರ್ನಾಟಕದ ಪ್ರಮುಖ ಪ್ರವಾಸೋದ್ಯಮದ ಕೇಂದ್ರವಾಗಿರುವ ಈ ನೆಲೆಯಲ್ಲಿ ಮೂಲಭೂತ ಸೌಲಭ್ಯಗಳು ಕೂಡ ಇಲ್ಲ. ಪ್ರವಾಸಿಗರು ಉಳಿದುಕೊಳ್ಳಲಿಕ್ಕೆ ಸರಿಯಾದ ವ್ಯವಸ್ಥೆಗಳಿಲ್ಲ, ಒಂದು ಅತಿಥಿ ಗೃಹ ಇದ್ದರೂ, ಅದು ಕೂಡ ಜನಸಾಮಾನ್ಯರಿಗೆ ದುಬಾರಿಯಾಗಿದೆ. ಖಾಸಗಿಯವರಿಗೆ ವಹಿಸಲಾಗಿದೆ. ಹೊರಗಡೆಯಿಂದ ಬರುವ ಪ್ರವಾಸಿಗರು, ಇತಿಹಾಸದ ವಿದ್ಯಾರ್ಥಿ ಗಳು, ಸಂಶೋಧಕರು ಉಳಿದುಕೊಳ್ಳಬೇಕಾದರೆ ಶಿರಸಿಗೆ ಹೋಗಬೇಕು. ಇದು ಇಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆಗಳಲ್ಲಿ ಪ್ರಮುಖವಾದುದು.

ಸೊರಬ ಮತ್ತು ಶಿರಸಿ ತಾಲೂಕಿನ ಮಧ್ಯದಲ್ಲಿರುವ ಬನವಾಸಿ, ಈ ಎರಡು ತಾಲೂಖುಗಳ ವಿಧಾನಸಭಾ ಕ್ಷೇತ್ರಗಳಿಗೆ ಸೇರಿಕೊಳ್ಳದೇ, ಕ್ಷೇತ್ರ ಮರುಗಣನೆ ಸಮಯದಲ್ಲಿ ಯಲ್ಲಾಪುರ ಕ್ಷೇತ್ರಕ್ಕೆ ಸೇರಿಕೊಂಡಿದೆ. ಯಲ್ಲಾಪುರ ಬನವಾಸಿಯಿಂದ ಸುಮಾರು 73  ಕಿಲೋಮೀಟರ್ ದೂರದಲ್ಲಿದೆ. ಇಲ್ಲಿನ ಸಮಸ್ಯೆಗಳು ಮತ್ತು ಕುಂದುಕೊರತೆಗಳಿಗೆ 20ಕಿಲೋಮೀಟರ್ ದೂರದಲ್ಲಿರುವ ಶಿರಸಿಗಿಂತ, 70 ಕಿಲೋಮೀಟರ್ ದೂರದ ಯಲ್ಲಾಪುರದಲ್ಲಿರುವ ಸ್ಥಳೀಯ ಎಮ್ಮೆಲ್ಲೆಗಳನ್ನು ಕಾಣಬೇಕು. ಇನ್ನೂ ಕ್ಷೇತ್ರದ ರಾಜಕೀಯ ಮುಖಂಡರುಗಳಿಗೆ ಬನವಾಸಿ ಎಂಬುದು, ಕದಂಬೋತ್ಸವ, ಮಧುಕೇಶ್ವರ ಜಾತ್ರೆ ಮತ್ತು ಚುನಾವಣೆ ಸಮಯದಲ್ಲಿ ಮಾತ್ರ ಭೇಟಿ ನೀಡಲಿಕ್ಕೆ ಕಾರಣವಾಗಿದೆ. ಶಾಸಕರ ಕುಂದುಕೊರತೆ ಕಛೇರಿ ಇದ್ದರೂ ಇಲ್ಲದಂತಿದೆ. ಇದು ಕೂಡ ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ರಾಜಕೀಯ ವ್ಯಕ್ತಿಗಳ ಇಚ್ಚಾಶಕ್ತಿಯ ಕೊರತೆಯನ್ನು ಎತ್ತಿ ಹಿಡಿಯುತ್ತದೆ. ಪ್ರತಿವರ್ಷ ಕದಂಬೋತ್ಸವ ನಡೆಯುವಾಗ ಬನವಾಸಿಯು `ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯದಂತೆ' ಸಿರಿ ಸಿಂಗಾರಗೊಂಡಿರುತ್ತದೆ. ರಸ್ತೆ ರಿಪೇರಿ, ಇನ್ನೀತರ ಅಭಿವೃದ್ದಿ ಕೆಲಸಗಳು ಕದಂಬೋತ್ಸವವೆಂಬ ನೆಪಕ್ಕೆ ಮಾತ್ರ ನಡೆಯುತ್ತವೆ. ಇದಾದ ಮೇಲೆ ಮುಂದಿನ ಕದಂಬೋತ್ಸವ ಬರುವವರೆಗೂ ಬೇರೆ ರೀತಿಯ ಅಭಿವೃದ್ಧಿಯ ಕೆಲಸಗಳು ಅಷ್ಟಕಷ್ಟೇ. ಹೀಗೆ ಪ್ರತಿವರ್ಷ ಕೋಟಿಗಟ್ಟಲೇ ಹಣ ಖರ್ಚು  ಮಾಡುವ ಕದಂಬೋತ್ಸವದಲ್ಲಿ ಸ್ವಲ್ಪ ಭಾಗವನ್ನಾದರೂ, ಕ್ಷೇತ್ರದ ಮೂಲ ಇತಿಹಾಸ, ಸಾಹಿತ್ಯ ಮತ್ತು ಮೂಲಭೂತ ಸಮಸ್ಯೆಗಳಿಗೆ ಮೀಸಲಿಟ್ಟರೆ, ಸರ್ಕಾರದ ಕದಂಬೋತ್ಸವಕ್ಕೆ ಹಿರಿಮೆ ಅನ್ನಬಹುದು. ಈ ಉತ್ಸವದ ನೆಪದಲ್ಲಿ ಕ್ಷೇತ್ರವನ್ನು ಆಳಿದ ರಾಜಮನೆತನಗಳ ಇತಿಹಾಸ, ಶಾಸನಗಳ ರಕ್ಷಣೆ, ಪರಿಚಯ, ಸಂಶೋಧನೆ ಆಗುವ ನಿಟ್ಟಿನಲ್ಲಿ ಮ್ಯೂಸಿಯಂಗಳು, ಸಂಶೋಧನಾ ಕೇಂದ್ರಗಳು ಸ್ಥಾಪನೆಯಾಗಬೇಕು. ಇದರ ಜೊತೆಗೆ ಆದಿಕವಿ ಪಂಪ, ವಚಕಕಾರ ಅಲ್ಲಮರ ತಾಳೆಗರಿಗಳು, 80ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿರುವ ಕರ್ನಾಟಕದ  ಗಾಂಧಿ ಹರ್ಡೆಕರ್  ಮಂಜಪ್ಪನವರ ಗ್ರಂಥಗಳ ಸಂರಕ್ಷಣೆ, ಪಂಪ, ಅಲ್ಲಮರ ಹಳಗನ್ನಡ ಸಾಹಿತ್ಯದ ಕುರಿತಾಗಿ ಸಂಶೋಧನೆ ಮಾಡುವವರಿಗೆ ಧನ ಪ್ರೋತ್ಸಾಹ, ಇವರು ರಚಿಸಿದ ಗ್ರಂಥಗಳ ಮರುಮುದ್ರಣ, ಭಾಷಾಂತರ, ಇಂಟರ್ನೆಟ್ ಮಾಧ್ಯಮಕ್ಕೆ ಅಳವಡಿಸುವುದು, ಹೀಗೆ  ಇತ್ಯಾದಿ ಇತ್ಯಾದಿ ಕೆಲಸಗಳನ್ನು ಕದಂಬೋತ್ಸವದ ನೆಪದಲ್ಲಾದರೂ, ಸರ್ಕಾರ ಖಂಡಿತ ಮಾಡಲಿಕ್ಕೆ ಸಾಧ್ಯವಿದೆ. ದಕ್ಷಿಣ ಭಾರತದಲ್ಲಿ ಜೈನ ಧರ್ಮದ ಪ್ರಮುಖ ಸ್ಥಳಗಳಾಗಿರುವ ಶ್ರವಣಬೆಳಗೊಳ, ದಕ್ಷಿಣ ಕನ್ನಡ ಜಿಲ್ಲೆಯಂತೆ ಪ್ರಾಚೀನ ಬನವಾಸಿಯಲ್ಲಿಯೂ ಕೂಡ ಜೈನ ಧರ್ಮ ಅತ್ಯಂತ ಉತ್ತುಂಗದಲ್ಲಿತ್ತು ಅನ್ನುವುದಕ್ಕೆ ಈಗಾಗಲೇ ಇರುವ ಬಸದಿ, ಸಿಕ್ಕಿರುವ  ಅನೇಕ ಶಾಸನಗಳು, ವಿಗ್ರಹಗಳು ಕ್ಷೇತ್ರದ ಜೈನಧರ್ಮದ ಅಸ್ತಿತ್ವವನ್ನು, ಪ್ರಾಚೀನತೆಯನ್ನು ಎತ್ತಿ ಹಿಡಿಯುತ್ತವೆ. ಆದಿಕವಿ ಪಂಪನೂ ಜೈನ ಧರ್ಮಕ್ಕೆ ಸೇರಿದವನಾಗಿರುವುದು, ಬನವಾಸಿಯಲ್ಲಿನ ಜೈನಪರಂಪರೆಯ ಇತಿಹಾಸಕ್ಕೆ ಇದು ಪೂರಕವಾಗಿದೆ. ಕರ್ನಾಟಕ ಜೈನಧರ್ಮದ ಇತಿಹಾಸದಲ್ಲಿ ಬನವಾಸಿಯ ಜೈನರ ಇತಿಹಾಸ ಸೇರಿಕೊಂಡಿಲ್ಲ ಮತ್ತು ಜೈನ ಇತಿಹಾಸಕಾರರು ಬನವಾಸಿಯನ್ನು ಕಡೆಗಣಿಸಿದ್ದು, ಸಂಶೋಧನೆಯನ್ನೂ ಕೂಡ ಮಾಡಿಲ್ಲ. ಹೀಗೆ ಬನವಾಸಿಯ ಮೂಲಬೇರುಗಳನ್ನು ಉಳಿಸುವಂತಹ, ಅನೇಕ ಕಾರ್ಯಕ್ರಮಗಳನ್ನು ಒಂದೇ ಹಂತದಲ್ಲಿ ಮಾಡಲಿಕ್ಕೆ ಸಾಧ್ಯವಾಗದಿದ್ದರೂ, ಪ್ರತಿವರ್ಷ ಕದಂಬೋತ್ಸವಕ್ಕೆ  ಸಿಗುವ ಅನುದಾನದಲ್ಲಿ ಈ ಯೋಜನೆಗಳನ್ನು ಪ್ರಾಚೀನ ಪುರಾತತ್ವ ಇಲಾಖೆಯ ಸಹಯೋಗದೊಂದಿಗೆ ಹಂತ ಹಂತವಾಗಿ ಮಾಡಬಹುದು. ಉತ್ಸವದಲ್ಲಿ ಲಕ್ಷ ಲಕ್ಷಗಟ್ಟಲೇ ಹಣಕೊಟ್ಟು ಪರಭಾಷಾ ಗಾಯಕರು, ಸಿನಿಮಾ ಸಂಗೀತ ನಿರ್ದೇಶಕರ  ಮನರಂಜನೆ ಕಾರ್ಯಕ್ರಮಗಳನ್ನು ಮಾಡುವುದು ಖಂಡಿತ ಬನವಾಸಿಗರಿಗೆ ಬೇಕಾಗಿಲ್ಲ. ಇಂತಹ ಮನರಂಜನಾ ಕಾರ್ಯಕ್ರಮಗಳು ಆದಿಕವಿ ಪಂಪನ ಈ ಉತ್ಸವಕ್ಕೆ ಭೂಷಣವೂ ಅಲ್ಲ, ಇದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ಇಲ್ಲಿನ ಇತಿಹಾಸವನ್ನು ಉಳಿಸುವ ಕಾರ್ಯದ ಮೂಲಕ ಉತ್ಸವ ಆಚರಿಸಿದರೆ, ಪಂಪಪ್ರಶಸ್ತಿಗೆ ಅರ್ಥ ಸಿಕ್ಕಹಾಗಾಗುತ್ತದೆ, ಇಲ್ಲವಾದರೆ ಪಂಪ ಪ್ರಶಸ್ತಿಯನ್ನು ಬನವಾಸಿಗೆ ಬಂದು ಪಡೆಯುವ ಹಿರಿಯ ಸಾಹಿತಿಗಳು ಕೂಡ ಸರ್ಕಾರಕ್ಕೆ  ಮನವಿ ಮಾಡಿಕೊಂಡರೆ, ಆ ಪ್ರಶಸ್ತಿಗೆ ಅವರು ನೀಡುವ ದೊಡ್ಡ ಗೌರವವಾಗುತ್ತದೆ.
ಪಂಪ ಪ್ರಶಸ್ತಿ ಕಾರ್ಯಕ್ರಮದ ಹೊರತಾಗಿ ಮನರಂಜನೆಗಂತಲೇ ಸುರಿಯುವ ಲಕ್ಷಗಟ್ಟಲೇ ಹಣದಲ್ಲಿ ಬನವಾಸಿಯ ಐತಿಹಾಸಿಕ ಮತ್ತು ಸಾಹಿತ್ಯಿಕ ನೆಲೆಗಳನ್ನು ಉಳಿಸುವ ಪ್ರಯತ್ನಗಳಾಗಬೇಕು. ಈಗಾಗಲೇ ಐತಿಹಾಸಿಕ ಕ್ಷೇತ್ರ ಹಂಪಿಯಲ್ಲಿ ಇಂತಹ ಕಾರ್ಯಗಳನ್ನು ಸಾಧಿಸಿರುವ ಸರ್ಕಾರಕ್ಕೆ ಬನವಾಸಿಯ ಮೂಲಬೇರುಗಳನ್ನು ಉಳಿಸುವುದು ಖಂಡಿತ ಕಷ್ಟವಾಗದು. ಉತ್ತರ ಕನ್ನಡ ಜಿಲ್ಲೆಯ ಐತಿಹಾಸಿಕ ಕುರುಹುಗಳು, ಶಾಸನಗಳ ಸಂಶೋಧನೆ ಮತ್ತು ಅದರ ಉಳಿವಿಗೆ ಬನವಾಸಿ ಅತ್ಯಂತ ಪ್ರಶಸ್ತವಾದ ಪ್ರಮುಖ ಕೇಂದ್ರವಾಗಿದೆ. `ನಮ್ಮ ಬನವಾಸಿ ಉಳಿಸಿ' ಅನ್ನುವ ಸಪ್ತಾಹಕ್ಕಿಂತ ಕನ್ನಡಿಗರ ಮೊದಲ ರಾಜಧಾನಿಯನ್ನು ಉಳಿಸಿ ಅಂತ ಹೇಳಿದರೆ ಉತ್ಪ್ರೇಕ್ಷೆಯಾಗದು. ಇದು ಪ್ರತಿಯೊಬ್ಬ ಬನವಾಸಿಗನ ಅಂತಃಕರಣದ ನಿವೇದನೆ ಕೂಡ ಹೌದು. ಈ ಬಾರಿಯ ಕದಂಬೋತ್ಸವ ಇಂತಹ ಯೋಜನೆಗಳಿಗೆ ಮುನ್ನುಡಿಯಾಗಲಿ...


Friday, 31 January 2014

ಗುರುವಿನ ಋಣ ತೀರಿಸುವದೆಲ್ಲಿಂದ ಬಂತು?

ಮಸಲ್ ಮ್ಯಾನ್ ಸಲ್ಮಾನ್ ಖಾನ್ ಅಭಿನಯದ`ಜೈ ಹೋ' ಸಿನಿಮಾದಲ್ಲಿ ಒಂದು ಥೀಮನ್ನು ಅಳವಡಿಸಿಕೊಂಡಿದ್ದಾರೆ. ಯಾರಾದರೂ ತಮಗೆ ಸಹಾಯ ಮಾಡಿದರೆ, ಅವರಿಗೆ ಥ್ಯಾಂಕ್ಯು ಅಂತ ಹೇಳದೇ, ಅವರು ನೀಡಿದ ಸಹಾಯವನ್ನು, ಕಷ್ಟದಲ್ಲಿರುವ ಮೂವರು ಜನರಿಗೆ ಸಹಾಯ ಮಾಡಿ ಅದರ ಆ ಋಣದ ಭಾರವನ್ನು ಕಡಿಮೆ ಮಾಡಿಕೊಳ್ಳುವುದು, ಆ ಮೂಲಕ ಎಲ್ಲರಿಗೆ ಎಲ್ಲರೂ ಸಹಾಯವಾಗಿ ಒಳ್ಳೆಯ ಸಮಾಜವನ್ನು ಕಟ್ಟುವ ವಸ್ತು ಆ ಚಿತ್ರದಲ್ಲಿತ್ತು.

`ಜೈ ಹೋ' ಸಿನಿಮಾವನ್ನು ನೋಡಿದಾಗ, ನಾನು ಎಂದೋ ಕೇಳಿದ, ಓದಿದ ಗುರುಶಿಷ್ಯರ ಸಂಬಂಧದ ಒಂದು ಘಟನೆ ನೆನಪಾಯಿತು. ಗುರು ಶಿಷ್ಯರ ಮಾತುಕತೆಯ ಈ ಘಟನೆ ಸಿನಿಮಾದಲ್ಲಿ ಕಂಡಂತೆ ನನಗೆ ಭಾಸವಾಯಿತು.

ತುಂಬಾ ಕಡು ಬಡತನದಲ್ಲಿ ಇದ್ದ ಒಬ್ಬ ಅನಾಥ ಹುಡುಗನಿಗೆ, ತಾನು ಓದಬೇಕು, ದೊಡ್ಡ ಅಧಿಕಾರಿಯಾಗಬೇಕು ಅನ್ನುವ ಗುರಿ ಇರುತ್ತದೆ. ತುಂಬಾ ಬುದ್ದಿವಂತನಾಗಿದ್ದ ಆ ಹುಡುಗನಿಗೆ ಶಿಕ್ಷಣ ಅನ್ನುವುದು ಮರೀಚಿಕೆ ಆಗಿರುತ್ತದೆ. ತನ್ನ ಆಸೆಯನ್ನು ಅನೇಕರ ಹತ್ತಿರ ಹೇಳಿಕೊಳ್ಳುತ್ತಾನೆ. ಯಾರೂ ಆತನ ಸಹಾಯಕ್ಕೆ ಬರುವುದಿಲ್ಲ. ಕೊನೆಗೆ ಆ ಅನಾಥ ಹುಡುಗನನ್ನು ತುಂಬಾ ದಿನಗಳಿಂದ ಗಮನಿಸುತ್ತಿದ್ದ, ಹತ್ತಿರ ಶಾಲೆಯ ಗುರುಗಳೊಬ್ಬರು, ಆತನ ಕನಸನ್ನು ಈಡೇರಿಸಲು ಮುಂದೆ ಬರುತ್ತಾರೆ. ಬುದ್ದಿವಂತನಾಗಿದ್ದ ಆ ಅನಾಥ ಹುಡುಗ, ಗುರುಗಳ ಸಹಾಯದೊಂದಿಗೆ ಒಳ್ಳೆಯ ಶಿಕ್ಷಣ ಪಡೆದು, ಪ್ರಜ್ಞಾವಂತನಾಗಿ ಬೆಳೆದು, ಸರ್ಕಾರದ ದೊಡ್ಡ ಅಧಿಕಾರಿಯಾಗುವ ಮಟ್ಟಿಗೆ ಬೆಳೆಯುತ್ತಾನೆ. ಹಣ, ಆಸ್ತಿ, ಅಧಿಕಾರ ಎಲ್ಲವೂ ಆತನ ಸ್ವತ್ತಿನಲ್ಲಿ ಬರುತ್ತದೆ. ಹಾಗಂತ ಆತ ಹಣ, ಶ್ರೀಮಂತಿಕೆ ಬಂದ ಮೇಲೆ ಬದಲಾಗುವುದಿಲ್ಲ. ಹಳೆಯದನ್ನು ಆತ ಮರೆತಿರುವುದಿಲ್ಲ...ತನ್ನನ್ನು ಚೆನ್ನಾಗಿ ಓದಿಸಿದ ಆ ಗುರುಗಳನ್ನು ಆತ ದೇವರಂತೆ ಪೂಜಿಸುತ್ತಿರುತ್ತಾನೆ. ಗುರುವಿನ ಋಣವನ್ನು ತಾನು ಹೊತ್ತಿದ್ದೇನೆ ಅನ್ನುವ ನೋವು ಆತನನ್ನು ದಿನವೂ ಕಾಡುತ್ತಿರುತ್ತದೆ. ಗುರು ಋಣದ ಭಾರವನ್ನು ತೀರಿಸುವ ಬಗೆ ಹೇಗೆ ಅಂತ ಚಿಂತಿಸುತ್ತಿರುತ್ತಾನೆ. ಗುರುವಿಗೆ ಏನಾದರೂ ಉಡುಗೊರೆ ಕೊಟ್ಟು ಅವರ ಸಹಾಯವನ್ನು ಹಿಂತಿರುಗಿಸುವ ಯೋಚನೆ ಮೂಡುತ್ತದೆ. ಗುರುಗಳು ಹಣವನ್ನು ಸ್ವೀಕರಿಸುವುದಿಲ್ಲ ಅನ್ನುವುದನ್ನು ಅರಿತ ಆತ, ಗುರುಗಳಿದ್ದ ಊರಿನಲ್ಲಿ ಒಂದು ದೊಡ್ಡ ಜಾಗ ಪಡೆದು ಒಂದು ಭವ್ಯವಾದ ಬಂಗಲೆಯನ್ನು ಕಟ್ಟಿಸುತ್ತಾನೆ. ಅದು ತಾನು ಗುರುವಿಗೆ ನೀಡುತ್ತಿರುವ ದೊಡ್ಡ ಕಾಣಿಕೆ ಅಂದುಕೊಳ್ಳುತ್ತಾನೆ. ಕೊನೆಗೆ ಆ ಭವ್ಯ ಮನೆ ಕಟ್ಟಿದ ಮೇಲೆ, ತನ್ನ ಕುಟುಂಬದ ಜೊತೆ, ಮನೆಯ ಕೀಯನ್ನು ತೆಗೆದುಕೊಂಡು, ಗುರುಗಳ ಮನೆಗೆ ಹೋಗುತ್ತಾನೆ. ಗುರುಗಳು ಅದೇ ಹಳೆ ಮನೆಯಲ್ಲಿ ವಾಸಿಸುತ್ತಿದ್ದರು. ಮುರುಕಲು ಮನೆಯಲ್ಲಿದ್ದ ಗುರುಗಳಿಗೆ ನಮಸ್ಕರಿಸಿ, ತಾವು ಮಾಡಿದ ಸಹಾಯಕ್ಕಾಗಿ ಗುರುಕಾಣಿಕೆ ಸಲ್ಲಿಸುತ್ತಿರುವುದಾಗಿ ಹೇಳಿ, ಹೊಸದಾಗಿ ಕಟ್ಟಿದ ಭವ್ಯ ಬಂಗಲೆಯ ಮನೆಯ ಕೀಯನ್ನು ಕೊಡುತ್ತಾನೆ. ಹೆಚ್ಚಿನ ಗುರುಗಳು, ಕಥೆಯಲ್ಲಿನ ಗುರುಗಳ ಸ್ಥಾನದಲ್ಲಿದ್ದರೆ, ಶಿಷ್ಯನ ಕಾಣಿಕೆಯನ್ನು ಏಷ್ಟು ಪ್ರೀತಿಯಿಂದ ಕಣ್ಣೊತ್ತಿಕೊಂಡು, ಸ್ವೀಕರಿಸುತ್ತಿದ್ದರೋ ಏನೋ, ಆದರೆ ಕಥೆಯಲ್ಲಿನ ಗುರುಗಳು, ಶಿಷ್ಯನು, ತಮಗೆ ಋಣ ತೀರಿಸುವ ಪರಿ ಕಂಡು ನಗುತ್ತಾರೆ, ಶಿಷ್ಯನಿಗೆ ಮತ್ತೊಮ್ಮೆ ಗುರುಗಳಾಗುತ್ತಾರೆ. ಅಂದು ಆತನಿಗೆ ಬದುಕಿನ ನಿಜವಾದ ಪಾಠವನ್ನು ಹೇಳಿಕೊಡುತ್ತಾರೆ.

`ಮಗಾ... ನಾನು ನಿನ್ನನ್ನು ಚೆನ್ನಾಗಿ ಓದಿಸಿದ್ದರಿಂದ, ನೀನು ಈ ಹಂತದವರೆಗೆ ಬೆಳೆಯಲಿಕ್ಕೆ ಸಾಧ್ಯವಾಗಿದೆ ಅಂತ ನೀನು ಅಂದುಕೊಂಡಿರುವೆ. ಗುರುವಾಗಿ ನಾನು ಅದನ್ನು ಒಪ್ಪಿಕೊಳ್ಳುವೆ. ಅದನ್ನು ನೀನು ಋಣದ ಭಾರ ಅಂತ ಅಂದುಕೊಂಡಿರುವೆ. ಅದಕ್ಕೆ ಗುರುಕಾಣಿಕೆಯಾಗಿ ಇದನ್ನು ನೀನು ನೀಡುತ್ತಿರುವೆ... ಮಗಾ... ಒಂದು ಮಾತನ್ನು ಹೇಳುವೆ, ಯಾವಾಗಲೂ ನೆನಪಿಟ್ಟಿಕೋ, ಈ ಜನ್ಮದಲ್ಲಿ ತಾಯಿಋಣ ಮತ್ತು ಗುರುವಿನ ಋಣವನ್ನು ತೀರಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಗುರುವಿನ ಋಣವನ್ನು ತೀರಿಸಬೇಕು ಅಂತ ನೀನು ಅಂದುಕೊಂಡಿದ್ಡರೆ, ಅದನ್ನು ತೀರಿಸಲು ಒಂದು ಮಾರ್ಗವಿದೆ ಅಷ್ಟೇ. ನಾನು ಕಷ್ಟದಲ್ಲಿದ್ದ ನಿನಗೆ ಹೇಗೆ ಓದಲಿಕ್ಕೆ ಸಹಾಯ ಮಾಡಿದೆನೋ,ನೀನು ಅದೇ ರೀತಿ ಇನ್ನು ಮುಂದೆ ನಿನ್ನಂತೆ ಬಡತನದಲ್ಲಿದ್ದ ಹತ್ತಾರು ಹುಡುಗರಿಗೆ ಓದಿಸಲಿಕ್ಕೆ ಸಹಾಯ ಮಾಡು, ಅವರನ್ನು ಶಿಕ್ಷಣವಂತರನ್ನಾಗಿ ಮಾಡು, ಆಗ ನನ್ನ ಋಣ ತೀರಿದಂತೆ' ಅಂತ ಹೇಳುತ್ತಾರೆ. 

ಶಿಷ್ಯನಿಗೆ ಗುರುಗಳು ಹೇಳಿದ ಬದುಕಿನ ಪಾಠ ಅರಿವಾಗುತ್ತದೆ. ಗುರುಗಳ ಮಾತು ಸತ್ಯದರ್ಶನದಂತೆ ತೋರುತ್ತದೆ. ಗುರುಗಳು ತನಗೆ ನೀಡಿದ ಮನೆಯ ಕೀಯನ್ನು ಆತನಿಗೆ ವಾಪಸ್ ಮಾಡಿ, `ನೀನು ನನಗೆ ಕೊಡಬೇಕಿಂದಿದ್ದ ಮನೆಯನ್ನು ಬಡ ಮಕ್ಕಳ ಶಿಕ್ಷಣಕ್ಕೆ ಮೀಸಲಾಗಿಡು, ಆ ಮನೆಯಲ್ಲೇ ಹತ್ತಾರು ಮಕ್ಕಳನ್ನು ಓದಿಸು, ಅವರು ನಿನ್ನಂತೆ ವಿದ್ಯಾವಂತರಾಗಿ, ನಿನ್ನಂತೆ ನಡೆದುಕೊಂಡರೆ, ಈ ಸಮಾಜದಲ್ಲಿ ದೊಡ್ಡ ಬದಲಾವಣೆ ಖಂಡಿತ ಸಾಧ್ಯ' ಅಂತ ಅನ್ನುತ್ತಾರೆ.

ಗುರುಗಳ ಮಾತುಗಳು ಶಿಷ್ಯನ ಮನಮುಟ್ಟುತ್ತದೆ. ಗುರುಗಳಿಗೆ ನೀಡಬೇಕಿಂದಿದ್ದ ಆ ಭವ್ಯ ಬಂಗಲೆ, ಬಡ ಮಕ್ಕಳಿಗೆ ಮೀಸಲಾದ ದೊಡ್ಡ ಆಲಯವಾಗುತ್ತದೆ. ಆ ಮೂಲಕ ಹೊಸ ಪರಂಪರೆಗೆ ಆ ಗುರುಶಿಷ್ಯರು ಕಾರಣರಾಗುತ್ತಾರೆ.

ಏಷ್ಟೋ ವರ್ಷಗಳ ಹಿಂದೆ ಓದಿದ ಈ ಕಥೆ, ಸಲ್ಮಾನ್ ಖಾನನ `ಜೈ ಹೋ ' ಸಿನಿಮಾ ನೋಡಿದಾಗ ನೆನಪಾಯಿತು.

Monday, 9 December 2013

‘ನಟರಂಗ್’ ಎಂಬ ಅದ್ಭುತ ಮರಾಠಿ ಸಿನಿಮಾಇತ್ತೀಚಿನ ದಿನಗಳಲ್ಲಿ ನಾನು ನೋಡಿದ ಕೆಲವು ಸಿನಿಮಾಗಳಲ್ಲಿ ನನ್ನನ್ನು ಅತ್ಯಂತ ಕಾಡಿದ ಸಿನಿಮಾವೆಂದರೆ ಮರಾಠಿಯ ನಟರಂಗ್’ ಚಿತ್ರ. ಸಿನಿಮಾವನ್ನು ಕಳೆದ ಒಂದು ವಾರದಲ್ಲೇ ನಾಲ್ಕೈದು ಬಾರಿ ನೋಡಿಬಿಟ್ಟೆ. ಚಿತ್ರದ ಒಂದೊಂದು ಸನ್ನಿವೇಶಗಳು, ನಾಯಕನ ಅಭಿನಯ, ಸಂಗೀತವು ನೋಡುಗರನ್ನು ಸೆಳೆದುಕೊಂಡು ನೋಡಿಸಿಕೊಂಡು ಹೋಗುತ್ತದೆ. ಅದ್ಭುತ ಹಾಗೂ ಮನಸ್ಸಿಗೆ ತುಂಬಾ ನಾಟುವಂತಹ, ಬದುಕಿಗೆ ತುಂಬಾ ಹತ್ತಿರವಾದಂತಹ ಸಿನಿಮಾ ಅಂತ ಹೇಳಬಹುದು. ಇಡೀ ಸಿನಿಮಾ ನೋಡಿದ ಮೇಲೆ ಯಾರಿಗೇ ಆಗಲಿ ಒಂದು ಅಮೂರ್ತವಾದಂತಹ ಅನುಭವ ನಿಮ್ಮನ್ನು ಕಾಡದೇ ಬಿಡದು. ‘ನಟರಂಗ್’ ಚಿತ್ರದಲ್ಲಿ ಯಾವ ವಿಭಾಗ ಚೆನ್ನಾಗಿಲ್ಲ ಅಂತ ಹೇಳಲು ಸಾಧ್ಯವೇ ಇಲ್ಲ.  ನಟಿಸಿದ ಎಲ್ಲ ನಾಯಕ ನಾಯಕಿಯರು, ಕಲಾವಿದರು, ಸಹಕಲಾವಿದರು, ನಿರ್ದೇಶನ, ಕಥೆ, ಸಂಭಾಷಣೆ, ಛಾಯಾಗ್ರಹಣ, ಸಂಗೀತ ನಿರ್ದೇಶನ, ಸಂಕಲನ, ಮೇಕಪ್ ಉಡುಗೆತೊಡುಗೆ ಹೀಗೆ ಎಲ್ಲರೂ ಎಲ್ಲ ರೀತಿಯಿಂದಲೂ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಮುಖ್ಯವಾಗಿ ಚಿತ್ರದ ಕಥೆಯೇ ಅಂತಹ ದೊಡ್ಡ ಶಕ್ತಿಯನ್ನು ಹೊಂದಿದೆ. 
 
ಸಿನಿಮಾದ ಬಗ್ಗೆ ಹೇಳುವುದಕ್ಕಿಂತ ಮುಂಚೆ ಮರಾಠಿ ಚಿತ್ರರಂಗದ ಬಗ್ಗೆ ಎರಡು ಮಾತನ್ನು ಹೇಳಲೇಬೇಕು. ಮರಾಠಿ ಚಿತ್ರರಂಗ ಬಾಂಬೆಯಲ್ಲೇ ನೆಲೆಸಿದ್ದರೂ, ಬಾಲಿವುಡ್‌ನ ಅಬ್ಬರದ ನಡುವೆ ಅದು ತನ್ನ ಅಸ್ಥಿತ್ವಕ್ಕಾಗಿ ಇಂದಿಗೂ ತುಂಬಾ ಹೆಣಗಾಡುತ್ತಿದೆ. ಮರಾಠಿ ಚಿತ್ರರಂಗ ಸತ್ತೇ ಹೋಯಿತು ಅಂತ  ಹೆಚ್ಚಿನವರು ಮಾತನಾಡಿದ್ದು ಕೂಡ ಉಂಟು. ಈ ಹಿಂದೆ ಮರಾಠಿ ಚಿತ್ರರಂಗದಲ್ಲಿ ಮೂಡಿ ಬರುತ್ತಿದ್ದ ಹೆಚ್ಚು ಸಿನಿಮಾಗಳು ಈಗ ನಿರ್ಮಾಣವಾಗುತ್ತಿಲ್ಲ. ಸಿನಿಮಾಗಳ ನಿರ್ಮಾಣ ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತಿದೆ ಅಂತ ಹೇಳುವುದುಂಟು. ಮರಾಠಿ ಸಿನಿಮಾಗಳ ಬೆಳವಣಿಗೆಗೆ ಹಿಂದಿ ಸಿನಿಮಾಗಳೇ ನೇರ ಕಾರಣ ಅನ್ನುವವರಿದ್ದಾರೆ. ಇದರ ನಡುವೆಯೂ ಒಳ್ಳೆಯ ಮರಾಠಿ ಚಿತ್ರಗಳಿಗೆ ಥಿಯೇಟರ್‌ಗಳು, ಜನರ ಪ್ರೋತ್ಸಾಹ ಸಿಗದೇ ನಿರ್ಮಾಪಕರು, ನಿರ್ದೇಶಕರು ನಷ್ಟ ಅನುಭವಿಸಿದ್ದರು. ಪ್ರಸ್ತುತ ಮರಾಠಿ ಚಿತ್ರರಂಗದಲ್ಲಿ ಪ್ರತಿವರ್ಷ ಸುಮಾರು ೪೦-೫೦ರಷ್ಟು ಸಿನಿಮಾಗಳು ನಿರ್ಮಾಣವಾಗುತ್ತಿವೆ. ಕೆಲವೊಮ್ಮೆ ಇವುಗಳ ಸಂಖ್ಯೆ ಕಡಿಮೆಯಾದದ್ದು ಕೂಡ ಉಂಟು. ಇಂತಹ ಹತ್ತು ಹಲವು ಸವಾಲುಗಳ ನಡುವೆಯೂ ರಾಷ್ಟ್ರಮಟ್ಟದ
ಲ್ಲಿ ಗುರುತಿಸಿಕೊಳ್ಳುವಂತಹ ಅದ್ಭುತ ಸಿನಿಮಾಗಳು ನಿರ್ಮಾಣವಾಗುವುದುಂಟು. ಮರಾಠಿ ಸಿನಿಮಾಗಳು ಆಸ್ಕರ್‌ಗೆ ನಾಮಿನೇಟ್ ಕೂಡ ಆಗಿವೆ. ಈ ವರ್ಷ ಕೂಡ ಹೀಗೆ ಮರಾಠಿ ಚಿತ್ರರಂಗದಲ್ಲಿ ಅರಳಿದ ಅತಿಶ್ರೇಷ್ಟ ಚಿತ್ರಗಳಲ್ಲಿ ಅತುಲ್ ಕುಲಕರ್ಣಿ ಅಭಿನಯದ ‘ನಟರಂಗ್’ ಚಿತ್ರ ಕೂಡ ಒಂದು.
ಮೊದಲೇ ಹೇಳಿದಾಗೆ ಚಿತ್ರದ ಕಥೆಯೆ ಅಷ್ಟು ಚೆನ್ನಾಗಿದೆ. ನಮ್ಮ ಕರ್ನಾಟಕದಂತೆಯೇ, ಮರಾಠಿ ರಂಗಭೂಮಿ ಕೂಡ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ. ಚಿತ್ರದ ಕಾಲಘಟ್ಟ ಕೂಡ ಸುಮಾರು ೫೦ ವರ್ಷಗಳ ಹಿಂದೆಯೇ ತೆರೆದುಕೊಳ್ಳುತ್ತೆ. ಚಿತ್ರದ ಆರಂಭದಲ್ಲಿ ಅಸಂಖ್ಯ ಜನರ ಚಪ್ಪಾಳೆ, ಕೂಗಾಟದ ನಡುವೆ ದೊಡ್ಡ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿಯಿಂದ ಪ್ರಾರಂಭವಾಗುವ ಸನ್ನಿವೇಶ, ಇಷ್ಟು ದೊಡ್ಡ ಗೌರವವನ್ನು ಪಡೆದಂತಹ ವ್ಯಕ್ತಿ ಯಾರು, ಆತನಿಗೆ ಯಾಕೆ ಈ ಪ್ರಶಸ್ತಿ ನೀಡುತ್ತಿದ್ದಾರೆ ಅನ್ನುವ ಕುತೂಹಲದಿಂದ ಕಥೆ ಪ್ರಾರಂಭವಾಗುತ್ತದೆ. ಹಳ್ಳಿಯ ಕೂಲಿ ಕೆಲಸದವನಾಗಿದ್ದ ಗುಣನಿಗೆ ದಿನದಲ್ಲಿ ಮೂರೂತ್ತೋ ಹೊಲಗದ್ದೆಗಳಿಗೆ ನೀರನ್ನು ಹೊತ್ತು ಹಾಕುವುದೇ ಕೆಲಸ. ಆಗೆಲ್ಲಾ ಹಳ್ಳಿಗಳಲ್ಲಿ ಮೋಟಾರ್‌ಗಳು ಇರದೇ ಇರುವುದರಿಂದ ಕೂಲಿಗಳೆ ನೀರು ಹೊತ್ತು ಗದ್ದೆಗಳಿಗೆ ಹಾಕುತ್ತಿದ್ದರು. ನಾಯಕ ಗುಣ ನೋಡಲು ಪೈಲ್ವಾನನ ರೀತಿ ಇರುತ್ತಾನೆ. ದಷ್ಟಪುಷ್ಟವಾಗಿ ಬೆಳೆದಿರುತ್ತಾನೆ. ಇಡೀ ಹಳ್ಳಿಯಲ್ಲಿ ಅವನ ರೀತಿ ಯಾರು ಇರುವುದಿಲ್ಲ. ಅವನ ಅಜಾನುಬಾಹುವಂತಹ ದೇಹ,ನಾಯಕಮೀಸೆಗೆ ಮನಸೋಲದವರು ಆ ಹಳ್ಳಿಯಲ್ಲೇ ಇರುವುದಿಲ್ಲ. ಅಂತಹ ಆಳ್ತನ ನಾಯಕನದ್ದು.  ಹೀಗೆ ಕೂಲಿ ಕೆಲಸದಿಂದ ಹೆಂಡತಿ ಮಕ್ಕಳ ಜೊತೆ ಸಂಸಾರ ಮಾಡುತ್ತಿದ್ದ ಗುಣನಿಗೆ ವಿಪರೀತ ನಾಟಕ ಹುಚ್ಚು, ತಾನು ನಾಟಕದಲ್ಲಿ ಅಭಿನಯಿಸಬೇಕು, ರಾಜನ ಪಾತ್ರ, ಮಹಾಭಾರತದ ಅರ್ಜುನನ ಪಾತ್ರ ಮಾಡಬೇಕೆಂಬ ಅದಮ್ಯ ಆಸೆ ಅವನಿಗೆ. ಎಲ್ಲಾದರೂ ನೃತ್ಯ, ನಾಟಕ ಇದೆಯೆಂದರೆ ಸಾಕು, ತನ್ನ ಸ್ನೇಹಿತರೊಡನೆ ಹೋಗಿ ನೋಡಿಕೊಂಡು ಬರುವ ವ್ಯಕ್ತಿ. ಅಷ್ಟೊಂದು ನಾಟಕದ ಹುಚ್ಚು ಅವನಿಗೆ.  
  ಒಮ್ಮೆ ನಾಯಕ ಗುಣ ವಾಸಿಸುತ್ತಿದ್ದ ಹಳ್ಳಿಯ ಹೊಲಗಳಿಗೆ ನೀರು ಹಾಕುವ ಮೋಟಾರುಗಳು ಬಂದ ಮೇಲೆ, ಕೂಲಿ ಮಾಡುವ ಗುಣನಿಗೆ ಕೆಲಸವಿಲ್ಲದಂತಾಗುತ್ತದೆ. ಎಲ್ಲಿಯೂ ಕೂಲಿ ಕೆಲಸ ಸಿಗುವುದಿಲ್ಲ. ಆಗ ಆತನ ಜೊತೆ ಕೂಲಿ ಕೆಲಸ ಮಾಡುತ್ತಿದ್ದವರೆಲ್ಲಾ ನಾಟಕದಲ್ಲಿ ಆಸಕ್ತಿ ಇದ್ದವರೇ, ತಾವೇ ಯಾಕೆ ಒಂದು ನಾಟಕ ಕಂಪನಿ ಪ್ರಾರಂಭ ಮಾಡಬಾರದು ಅಂತಂದುಕೊಂಡು ನಾಟಕ ಕಂಪನಿ ಶುರುಮಾಡುತ್ತಾರೆ. ಅವರ ತಂಡಕ್ಕೆ ಆಗಲೇ ನಾಟಕದಲ್ಲಿ ಕೆಲಸ ಮಾಡಿದ್ದ ಅದೇ ಊರಿನ ವ್ಯಕ್ತಿ ಸೇರಿಕೊಳ್ಳುತ್ತಾನೆ. ನಾಟಕ ಮಂಡಳಿ ಕಟ್ಟಲು ಹಣವಿರುವುದಿಲ್ಲ. ನಾಟಕದ ಪರಿಕರಗಳಿಗಾಗಿ ಅವರವರ ಮನೆಯಿಂದ ಅದು ಇದು ಕದಿಯಲಿಕ್ಕೆ ಪ್ರಾರಂಭಿಸುತ್ತಾರೆ. ಬರೀ ಗಂಡಸರೇ ಇದ್ದ ಮಂಡಳಿಗೆ ಒಂದು ಹೆಣ್ಣು ಬೇಕೆ ಬೇಕು ಅಂತ ನಿರ್ದೇಶಕ ಹೇಳುತ್ತಾನೆ. ಇಡೀ ಊರು ಅಲಿಯುತ್ತಾರೆ. ಯಾವ ಮನೆಯ ಹೆಣ್ಣುಮಕ್ಕಳು ಅವರ ನಾಟಕದಲ್ಲಿ ಅಭಿನಯಿಸಲು ಬರುವುದಿಲ್ಲ. ದೊಡ್ಡ ನಿರಾಸೆ ಕಾಡತೊಡಗುತ್ತದೆ. ನಾಯಕ ಗುಣನಿಗೆ ಹೇಗಾದರೂ ಮಾಡಿ ನಾಟಕ ಮಂಡಳಿ ಕಟ್ಟಿ ಅಭಿನಯಿಸಬೇಕೆಂಬ ಆಸೆ ಇರುತ್ತದೆ. ಕೊನೆಗೂ ಕೊಲ್ಲಾಪುರದಲ್ಲಿ ನಾಟಕ, ನೃತ್ಯದ ಹಿನ್ನಲೆ ಇರುವ ಹುಡುಗಿ ಸಿಗುತ್ತಾಳೆ. ಆಕೆ ಇವರ ತಂಡದಲ್ಲಿ ಸೇರಲಿಕ್ಕೆ ಒಪ್ಪುತ್ತಾಳೆ. ಸೇರುವುದಕ್ಕೂ ಮುನ್ನ ಆಕೆಯ ತಾಯಿ ಎರಡು ಕಂಡಿಷನ್ ಹಾಕುತ್ತಾಳೆ. ಮೊದಲನೇ ಕಂಡೀಷನ್ ಪ್ರಕಾರ ನಾಟಕದ ಲಾಭದಲ್ಲಿ ಆಕೆಗೂ ಒಂದು ಪಾಲು ನೀಡಬೇಕು, ಎರಡನೇಯದ್ದು ನಾಟಕದಲ್ಲಿ ಯಾರಾದರೂ ಒಬ್ಬರು ಹಿಜಡಾ ಪಾತ್ರಧಾರಿಯಾಗಿ ಅಭಿನಯಿಸಬೇಕು. ಎಲ್ಲರಿಗೂ ಆಶ್ಚರ್‍ಯ. ಮೊದಲನೆಯ ಕರಾರಿಗೆ ಒಪ್ಪಿದರಾದರೂ, ಎರಡನೇ ಕರಾರಿನಂತೆ ಯಾರೋಬ್ಬರು ನಾಟಕದಲ್ಲಿ ಹಿಜಡಾ ಪಾತ್ರ  ಮಾಡಲು ಒಪ್ಪಲಿಲ್ಲ. ಯಾರು ಮಾಡದಿದ್ದರೆ ನಾವು ವಾಪಾಸ್ ಹೋಗುತ್ತೇವೆ ಅಂತ ಆಕೆಯ ತಾಯಿ ಹೇಳುತ್ತಾಳೆ. ನಾಯಕ ಗುಣನಿಗೆ ತನ್ನ ಕನಸು ಸತ್ತು ಹೋಗುತ್ತಿದೆಯೆಲ್ಲ ಅನ್ನುವ ಚಿಂತೆ ಕಾಡಲಾರಂಬಿಸುತ್ತದೆ. ತಂಡದಲ್ಲಿ ಯಾರೋಬ್ಬರೂ ಹಿಜಡಾ ಪಾತ್ರಧಾರಿಯಾಗಿ ಅಭಿನಯಿಸಲಿಕ್ಕೆ ಒಪ್ಪುವುದಿಲ್ಲ. ಕೊನೆಗೆ ನಾಯಕಿಯನ್ನು ಕರೆದುಕೊಂಡು ಬಂದಿದ್ದ ನಿರ್ದೇಶಕ ಮಾತ್ರ ಗುಣನಿಗೆ ನೀನೇ ಆ ಪಾತ್ರ ಮಾಡು ಅಂತ ಬಲವಂತ ಮಾಡುತ್ತಾನೆ. ಇಲ್ಲವಾದರೆ ನಾಟಕ ಕಂಪನಿ ಕಟ್ಟಬೇಕೆಂಬ ಆಸೆ ಬಿಟ್ಟು ಬಿಡು ಅಂತ ಹೇಳುತ್ತಾನೆ. ನಾಯಕ ಗುಣನಿಗೆ ನಾಟಕದಲ್ಲಿ ರಾಜ, ಅರ್ಜುನ ಪಾತ್ರ ಮಾಡಬೇಕೆಂಬ ಆಸೆ ಇರುತ್ತದೆ. ಆದರೆ ಈಗ ಅದು ಕೂಡ ಆಗುವುದಿಲ್ಲವಲ್ಲ ಅನ್ನುವ ನೋವು ಕಾಡಲಾರಂಭಿಸುತ್ತದೆ. ಕೊನೆಗೆ ತನ್ನ ಕನಸಿನ ನಾಟಕ ಕಂಪನಿಯನ್ನು ಉಳಿಸಿಕೊಳ್ಳಬೇಕೆಂಬ ಆಸೆಯಿಂದ ತನ್ನೆಲ್ಲಾ ಆಸೆನೋವುಗಳನ್ನು ಬದಿಗಿಟ್ಟು ಹಿಜಡಾ ಪಾತ್ರಧಾರಿಯಾಗಿ ಅಭಿನಯಿಸಲು ಒಪ್ಪಿಕೊಳ್ಳುತ್ತಾನೆ. ಗುಣ ನೋಡಲಿಕ್ಕೆ ಬಲಭೀಮನಂತೆ ಆಜಾನುಬಾಹು ದೇಹದ ಪೈಲ್ವಾನನಂತೆ ಇರುತ್ತಾನೆ. ಹಿಜಡಾ ಪಾತ್ರಧಾರಿಗೆ ಬೇಕಾಗಿರುವುದು ಕೃಶ ದೇಹ, ಹೆಣ್ಣುಮಕ್ಕಳ ಸೊಂಟದಂತೆ ದೇಹವನ್ನು ಬದಲಾಯಿಸಿಕೊಳ್ಳುವುದು. ನಾಯಕ ಗುಣ ತನ್ನ ಕನಸಿಗಾಗಿ ಹಿಜಡಾ ಆಗಿ ಪರಿವರ್ತಿತನಾಗುತ್ತಾನೆ. ಹೆಣ್ಣುಮಕ್ಕಳ ಹಾವಭಾವ, ನೃತ್ಯ, ಹಿಜಡಾಗಳು ವರ್ತಿಸುವ ರೀತಿ, ಮಾತನಾಡುವ ಶೈಲಿ, ಅವರಂತೆ ದನಿ ಎಲ್ಲವನ್ನೂ ರೂಢಿಸಿಕೊಳ್ಳುತ್ತಾನೆ. ನೋಡಲು ಪೈಲ್ವಾನನಂತೆ ಇದ್ದವನು ಪಾತ್ರದ ಆಳಕ್ಕೆ ಹೋದಂತೆ ಸಂಪೂರ್ಣವಾಗಿ ಬದಲಾಗಿ ಕೃಶ ದೇಹದವನಾಗಿ, ಮೀಸೆ ಬೋಳಿಸಿಕೊಂಡು, ಅತ್ತ ಗಂಡಸು ಅಲ್ಲದ, ಹೆಣ್ಣು ಅಲ್ಲದ ವ್ಯಕ್ತಿಯ ಪಾತ್ರಧಾರಿಯಾಗಿ ಬದಲಾಗುತ್ತಾನೆ. ಪಾತ್ರಕ್ಕಾಗಿ ನಾಯಕಿಯಿಂದ ನೃತ್ಯ ಕಲಿಯುತ್ತಾನೆ. ಚಿತ್ರದ ನಾಯಕಿ ಎಲ್ಲ ರೀತಿಯಿಂದಲೂ ಆತನನ್ನು ತಯಾರಿ ಮಾಡುತ್ತಾಳೆ. ಅವರ ಮೊದಲ ನಾಟಕ ಪ್ರಾರಂಭವಾಗುವುದರೊಳಗೆ ನಾಯಕ ಗುಣ, ನಾಟಕದಲ್ಲಿ ಬರುವ ಪ್ರಮುಖ ಹಿಜಡಾ ಪಾತ್ರಧಾರಿಯಾಗಿ ಬದಲಾಗುತ್ತಾನೆ. ಅವರ ಹಳ್ಳಿಯಲ್ಲೇ ಅಭಿನಯಿಸಿದ ಮೊದಲ ನಾಟಕ ಎಲ್ಲರ ಮನಸೂರೆಗೊಳ್ಳುತ್ತದೆ. ಅಕ್ಕ ಪಕ್ಕದ ಹಳ್ಳಿ, ಊರುಗಳಿಂದ ಇವರ ನಾಟಕ ಕಂಪನಿಗೆ ಆಹ್ವಾನ ಸಿಗತೊಡಗುತ್ತದೆ. 
ಗುಣನ ನಾಟಕ ಕಂಪನಿಗೆ ಒಳ್ಳೆಯ ಹೆಸರು ಬರುವುದರೊಳಗೆ ಆತನ ವೈಯಕ್ತಿಕ ಬದುಕು ಮೂರಾಬಟ್ಟೆಯಾಗಿರುತ್ತದೆ. ತನ್ನ ಗಂಡ ನಾಟಕದಲ್ಲಿ ಹಿಜಡಾ ಪಾತ್ರ ಮಾಡುತ್ತಿದ್ದಾನೆ ಅನ್ನುವ ನೋವು ಆಕೆಯನ್ನು ವಿಪರೀತ ಕಾಡುತ್ತಿರುತ್ತದೆ. ಊರಲ್ಲಿರುವ ಹೆಂಗಸರು, ಗಂಡಸರು, ಮಕ್ಕಳು ಆಕೆಯನ್ನು ಅವಮಾನ ಮಾಡುತ್ತಿರುತ್ತಾರೆ. ಗುಣನ ತಂದೆಗೂ ಕೂಡ ಮಗ ನಾಟಕದ ಹುಚ್ಚು ಅಂಟಿಸಿಕೊಂಡು ಹಾಳಾಗುತ್ತಿದ್ದಾನೆ ಅಂತ ನೋವನ್ನು ಅನುಭವಿಸುತ್ತಿರುತ್ತಾನೆ. ಅದೇ ಕೊರಗಿನಲ್ಲಿ ಹಾಸಿಗೆ ಹಿಡಿಯುತ್ತಾನೆ. ಆತನ ಮಾವ ಕೂಡ ನಾಟಕ ಬಿಟ್ಟು ಬೇರೆ ಬದುಕು ಮಾಡು ಅಂತ ಕಾಲು ಹಿಡಿಯುತ್ತಾನೆ, ಮನೆಯಲ್ಲಿ ಇಷ್ಟೇಲ್ಲಾ ವಿರೋಧ ಬಂದರೂ, ಗುಣ ಮಾತ್ರ ನಾಟಕದ ಮೇಲಿನ ಹುಚ್ಚಿನಿಂದ ಯಾವುದಕ್ಕೂ ಒಪ್ಪುವುದಿಲ್ಲ. ಇದರ ಪ್ರತಿಫಲವಾಗಿ ಕಟ್ಟಿಕೊಂಡ ಹೆಂಡತಿ ಆತನ ಮುಖಕ್ಕೆ ಕಟ್ಟಿದ ತಾಳಿ ಎಸೆದು ಹೊರಗೆ ಹಾಕುತ್ತಾಳೆ.  ಹುಟ್ಟಿಸಿದ ಮಗ ಕೂಡ ಅಪ್ಪನ ಮುಖಕ್ಕೆ ಉಗುಳಿ, ನೀನು ನನ್ನ ಅಪ್ಪನೇ ಅಲ್ಲ ಅಂತ ಹೇಳುತ್ತಾನೆ. ಮಗ ನಾಟಕ ಸೇರಿ ಹಾಳಾದನಲ್ಲ ಅನ್ನುವ ಕೊರಗಿನಲ್ಲೇ ತಂದೆ ಕೂಡ ತೀರಿಕೊಳ್ಳುತ್ತಾನೆ.  ತಂದೆ ತೀರಿಕೊಂಡ ಸಮಯದಲ್ಲಿಯೂ ಅಪ್ಪನ ಅಂತ್ಯಕ್ರಿಯೆಗೆ ಹೋಗದೇ ಇರೋ ಪರಿಸ್ಥಿತಿಯಲ್ಲಿ ನಾಯಕ ಸಿಕ್ಕಿಹಾಕಿಕೊಳ್ಳುತ್ತಾನೆ.  ಹೀಗೆ ನಾಟಕದ ಹುಚ್ಚಿನಿಂದಾಗಿ ವೈಯಕ್ತಿಕ ಬದುಕು ಹಾಳಾಗಿ ಹೋಗುತ್ತದೆ. ಒಳಗೊಳಗೆ ದೊಡ್ಡ ನೋವನ್ನು ಅನುಭವಿಸತೊಡಗುತ್ತಾನೆ. 
ಒಳಗೊಳಗೆ ತಾನೊಬ್ಬ ಗಂಡಸು ಅನ್ನುವ ಭಾವದೊಂದಿಗೆ ಆತ ಇದ್ದರೂ, ಕೆಲವು ಸಂದರ್ಭಗಳಲ್ಲಿ ಆತನ ಹಿಜಡಾಗಳಂತಯೇ ವರ್ತಿಸಬೇಕಾದ ಪರಿಸ್ಥಿತಿ ಆತನಿಗೆ ಒದಗುತ್ತದೆ. ಈತನ ನಾಟಕ ಕಂಪನಿಯ ಪ್ರದರ್ಶನದ ವಿಚಾರದಲ್ಲಿ ಎರಡು ರಾಜಕೀಯ ನಾಯಕರುಗಳ ನಡುವೆ ಗಲಾಟೆ ಆಗುತ್ತದೆ. ತನಗೆ ಗುಣ ಅವಮಾನ ಮಾಡಿದ ಅನ್ನುವ ಸೇಡಿನಲ್ಲಿ ಇನ್ನೊಬ್ಬ ರಾಜಕೀಯ ವ್ಯಕ್ತಿ ಈತನ ನಾಟಕ ಕಂಪನಿಗೆ ಬೆಂಕಿ ಹಚ್ಚುತ್ತಾನೆ. ಆತನ ಕಂಪನಿ ಸಂಪೂರ್ಣವಾಗಿ ಭಸ್ಮವಾಗುತ್ತದೆ. ಅದೇ ನೋವಿನಲ್ಲಿರುವಾಗಲೇ ಆತನ ಮೇಲೆ ರಾಜಕೀಯ ವ್ಯಕ್ತಿ ಮತ್ತು ಆತನ ಬೆಂಬಲಿಗರು ಬಲಾತ್ಕಾರ ಮಾಡುತ್ತಾರೆ.  ಈತನ ಮೇಲೆ ಮಾನಭಂಗ ಮಾಡಿದ ಸುದ್ದಿ ಎಲ್ಲ ಪತ್ರಿಕೆಗಳಲ್ಲಿ ಸುದ್ದಿಯಾಗುತ್ತದೆ. ಆಗಲೇ ಈತನ ಹೆಂಡತಿ, ಮಗ ಇವನಿಂದ ದೂರವಾಗುತ್ತಾರೆ. ಒಂದು ಹಂತದಲ್ಲಿ ಎಲ್ಲವನ್ನೂ ಕಳೆದುಕೊಂಡು ಒಂಟಿಯಾಗುತ್ತಾನೆ. ಕಂಪನಿಯಲ್ಲಿದ್ದ ಆತನ ಜೊತೆಗಾರರೆಲ್ಲಾ ದೂರವಾಗುತ್ತಾರೆ. ಬನ್ನಿ ಮತ್ತೊಮ್ಮೆ ನಾಟಕ ಕಂಪನಿ ಮಾಡೋಣ ಅಂತ ಹೇಳುತ್ತಾನೆ ಯಾರು ಆತನ ಹಿಂದೆ ಬರುವುದಿಲ್ಲ. ಇಡೀ ಪ್ರಪಂಚವೇ ತನ್ನ ವಿರುದ್ಧವಾಗಿದೆ ಅಂತಂದುಕೊಳ್ಳುತ್ತಾನೆ. ಅಂತಹ ಕೊನೆ ಕ್ಷಣದಲ್ಲಿ ಆತನ ಕೈಹಿಡಿಯುವಳೊಬ್ಬಳೇ ಕತೆಯ ನಾಯಕಿ ನೈನಾ. ಗುಣನಿಗೆ ಗುರುವಾಗಿ ನೃತ್ಯ, ಅಭಿನಯವನ್ನು ಕಲಿಸಿಕೊಟ್ಟಿದ್ದ ಆಕೆಯನ್ನು ಆಂತರಂಗಿಕವಾಗಿ ಗುಣ ತುಂಬಾ ಪ್ರೀತಿಸುತ್ತಿದ್ದ. ಆಕೆಯೂ ಕೂಡ ಈತನ ಮೇಲೆ ಅಷ್ಟೇ ಪ್ರೀತಿಯನ್ನು ಇಟ್ಟುಕೊಂಡಿರುತ್ತಾಳೆ. ಅವರಿಬ್ಬರ ನಡುವೆ ದೇಹಸಂಬಂಧ ಕೂಡ ಬೆಳೆದಿರುತ್ತದೆ. ನನ್ನನ್ನು ಮದುವೆಯಾಗು ಅಂತ ಕೇಳಿರುತ್ತಾಳೆ. ನಾಟಕದಲ್ಲಿ ಹಿಜಡಾ ಪಾತ್ರ ಮಾಡುವ ನಿನ್ನನ್ನು ಮದುವೆಯಾಗಿ ಇಡೀ ಸಮಾಜವನ್ನು ನಾನು ಎದುರಿಸಲಾರೆ ಅಂತ ಹೇಳುತ್ತಾನೆ. ತನ್ನ ಇಷ್ಟೆಲ್ಲಾ ನೋವುಗಳಿಗೆ ತನಗಿರುವ ನಾಟಕದ ಹುಚ್ಚು ಮತ್ತು ಮಾಡುತ್ತಿದ್ದ ಹಿಜಡಾ ಪಾತ್ರವೇ ಕಾರಣ ಅನ್ನುವುದು ಆತನಿಗೆ ಮನವರಿಕೆಯಾಗಿರುತ್ತದೆ. ಆದರೂ ನಿಸ್ಸಾಹಯಕನಂತೆ ಬದುಕುವ ಪರಿಸ್ಥಿತಿಯಲ್ಲಿ ಇರುತ್ತಾನೆ.  
ಕಥೆಯ ಕೊನೆಯಲ್ಲಿ ನಾಯಕಿ ನೈನಾಳೇ ಆತನ ಕನಸುಗಳಿಗೆ ಹೆಗಲು ಕೊಡುತ್ತಾಳೆ. ಇವರಿಬ್ಬರೇ ಸೇರಿ ಎರಡೇ ಪಾತ್ರಗಳನ್ನು ಇಟ್ಟುಕೊಂಡು ನಾಟಕಗಳನ್ನು, ನೃತ್ಯಗಳನ್ನು ಮಾಡುತ್ತಾ ದೊಡ್ಡ ಹೆಸರು ಮಾಡತೊಡಗುತ್ತಾರೆ. ನೋಡ ನೋಡುತ್ತಿದ್ದಂತಯೇ ಗುಣನ ಹೆಸರು ನಾಟಕ, ನೃತ್ಯರಂಗದಲ್ಲಿ ದೊಡ್ಡ ಹೆಸರು ಆಗುತ್ತದೆ. ಅನೇಕಾನೇಕ ಪ್ರತಿಷ್ಟಿತ ಪ್ರಶಸ್ತಿಗಳು ಆತನನ್ನು ಅರಸಿ ಬರುತ್ತವೆ. ನೈನಾ ಮತ್ತು ಗುಣ ಇವರಿಬ್ಬರೂ ಸೇರಿ ಸಾವಿರಾರು ಪ್ರದರ್ಶನಗಳನ್ನು ಮಾಡುತ್ತಾರೆ. ಅಲ್ಲಿಯರೆಗೂ ಕೇವಲ ಹಿಜಡಾ ಪಾತ್ರವನ್ನು ಮಾಡುತ್ತಿದ್ದ ಗುಣ, ತನಗಿರುವ ಇಮೇಜನ್ನು ಬದಲಿಸಿಕೊಳ್ಳಲು ಎಲ್ಲ ರೀತಿಯ ಪಾತ್ರಗಳನ್ನು, ವೇಷಭೂಷಣಗಳನ್ನು ಹಾಕಿಕೊಳ್ಳತೊಡಗುತ್ತಾನೆ. ಜನರು ಎಲ್ಲ ಪಾತ್ರದಲ್ಲೂ ಆತನನ್ನು ಇಷ್ಟಪಡತೊಡಗುತ್ತಾರೆ. ಯಾವ ಕಲೆಯನ್ನು ನಂಬಿ, ಹೆಂಡತಿ, ಮಕ್ಕಳು ಎಲ್ಲ ರಕ್ತಸಂಬಂಧಗಳಿಂದ ದೂರವಾಗಿದ್ದನೋ, ಅದೇ ಗುಣ ಸಾವಲ್ಕರ್ ಮುಂದೊಂದು ದಿನ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸುತ್ತಾರೆ. ದೊಡ್ಡ ಸಾಧಕನೆಂದು ಬಿರುದಾಂಕಿತರಾಗುತ್ತಾನೆ.
ಇಡೀ ಚಿತ್ರದ ಕೇಂದ್ರಬಿಂದುವೇ ಗುಣನ ಪಾತ್ರದಲ್ಲಿ ಮಿಂಚಿದ ಅತುಲ್ ಕುಲಕರ್ಣಿ. ಇಡೀ ಪಾತ್ರದ ಅಂತರಂಗವನ್ನು ಹೊಕ್ಕು ಅಭಿನಯಿಸಿದ್ದಾರೆ. ಪೈಲ್ವಾನನ ಪಾತ್ರಕ್ಕೆ ಅವರ ದೇಹವನ್ನು ಹೊಂದಿಸಿಕೊಂಡಿದ್ದಕ್ಕೂ, ಹಿಜಡಾ ಪಾತ್ರಕ್ಕೆ ತಮ್ಮ ದೇಹವನ್ನು ಮೌಲ್ಡ್ ಮಾಡಿಕೊಂಡಿದ್ದು ಅವರು ಪಾತ್ರಕ್ಕೆ ಎಷ್ಟು ಬದ್ಧರಾಗಿದ್ದಾರೆ ಅನ್ನುವುದನ್ನು ತೋರಿಸುತ್ತದೆ. ಪೈಲ್ವಾನನಂತೆ ಇರುವಾಗ ಪೈಲ್ವಾನನಂತೆಯೂ, ಹಿಜಡಾ ಆಗಿ ಅಭಿನಯಿಸುವಾಗ ಅವರಂತಯೇ ಕಾಣುವಂತೆ ತಮ್ಮ ದೇಹವನ್ನು ದಂಡಿಸಿಕೊಂಡಿದ್ದಾರೆ. ಅತುಲ್ ಕುಲಕರ್ಣಿ ನಟರಂಗ್ ಚತ್ರದಲ್ಲಿನ ತಮ್ಮ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ. ೨೦೧೦ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಮಹಾರಾಷ್ಟ್ರದಲ್ಲಿ ಸುಮಾರು ೨೦ ಕೋಟಿ ರೂಪಾಯಿಗಳನ್ನು ಸಂಪಾದಿಸಿದೆ. ಚಿತ್ರದ ಸಂಗೀತವು ಕೂಡ ಅತುಲ್ ಕುಲಕರ್ಣಿಯ ಅಭಿನಯದಷ್ಟೇ ಇಷ್ಟವಾಗುತ್ತದೆ. ಸಾಂಪ್ರದಾಯಿಕ ಮರಾಠಿ ನೃತ್ಯಗಳಿಗೆ ಹೊಂದುವ ಹಾಡುಗಳು, ರಂಗಗೀತೆಗಳು, ಹಾಡುಗಳ ಒಂದಕ್ಕೊಂದು ಚೆನ್ನಾಗಿವೆ. ಎಲ್ಲ ಹಾಡುಗಳು ಕೇಳಲು ಇಂಪಾಗಿವೆ. ಹಿನ್ನಲೆ ಸಂಗೀತ ಕೂಡ ಪ್ರತಿ ಸನ್ನಿವೇಶವನ್ನು ಎತ್ತಿ ಹಿಡಿಯುತ್ತದೆ. 
ಒಟ್ಟಾರೆಯಾಗಿ ನಟರಂಗ್ ಸಿನಿಮಾ ವಿಭಿನ್ನ ಅನುಭವವನ್ನು ನೀಡುವಂತಹ ಸಿನಿಮಾ. ಸಾಧ್ಯವಾದರೆ ಈ ಸಿನಿಮಾವನ್ನು ತಪ್ಪದೇ ನೋಡಿ.

Sunday, 20 October 2013

ತಿರುಪತಿಯಲ್ಲಿ ಈಬಾರಿಯ ವೈಭವದ ಬ್ರಹ್ಮೋತ್ಸವ

ಮೊದಲಬಾರಿಗೆ ತಿರುಪತಿಯ ಬ್ರಹ್ಮೋತ್ಸವದಲ್ಲಿ ಪಾಲ್ಗೊಂಡಿದ್ದು ನನ್ನ ಸುದೈವವೆನ್ನಬಹುದು.  ವರ್ಷಕ್ಕೊಮ್ಮೆ ನಡೆಯುವ ತಿರುಪತಿ ತಿಮ್ಮಪ್ಪನ ಬ್ರಹ್ಮೋತ್ಸವ ನೋಡಲೇಂದೇ ದೇಶದ ಮೂಲೆ ಮೂಲೆಯಿಂದ ಭಕ್ತಾದಿಗಳು ಬರುತ್ತಾರೆ. ತಿರುಪತಿ, ತಿರುಮಲದಲ್ಲಿ ನಿಲ್ಲಲೂ ಕೂಡ ಆಗದಷ್ಟು ಜನ ಸೇರುವುದು ಪ್ರತಿವರ್ಷದ ಸಹಜ. ಬಾಲಾಜಿಯ ವೈಭವದ ಬ್ರಹ್ಮೋತ್ಸವವನ್ನು ನೋಡುವುದೇ ಅದ್ಭುತ ಅನುಭವವೆನುತ್ತಾರೆ ನೋಡಿದವರು. ಆ ದಿನ ಬಾಲಾಜಿಯನ್ನು ಚಿನ್ನದ ರಥದಲ್ಲಿ ಎಳೆಯುತ್ತಾರೆ. ಇಂತಹ ಅದ್ಭುತ ಕ್ಷಣಕ್ಕೆ ಪ್ರತಿವರ್ಷ ಲಕ್ಷ ಲಕ್ಷ ಜನ ಸಾಕ್ಷಿಯಾಗುತ್ತಾರೆ.
ಬ್ರಹ್ಮೋತ್ಸವದ ದಿವಸ ತಿರುಪತಿ ಹಾಗೂ ತಿರುಮಲ ಬೆಟ್ಟವು ಕಣ್ಣುಕೊರೈಸುವ  ದೀಪಾಲಂಕಾರಗಳಿಂದ ಕಂಗೋಳಿಸುತ್ತಿರುತ್ತದೆ. ಹೂವು ಹಣ್ಣುಗಳ ವೈಭೋಗದ ಸರಮಾಲೆ ಎಲ್ಲೆಡೆ ಆವರಿಸಿರುತ್ತದೆ. ತಿರುಮಲ ಬೆಟ್ಟವು ಭೂಲೋಕದ ವೈಕುಂಠವೆಂಬಂತೆ ಭಾಸವಾಗಿರುತ್ತದೆ.  ಆ ದಿನ ಅಸಂಖ್ಯ ಭಕ್ರರು ತಿಮ್ಮಪ್ಪನನ್ನು ನೋಡಲು ಬಂದಿರುವುದರಿಂದ ಎಲ್ಲರಿಗೂ  ಉಳಿಯಲಿಕ್ಕೆ ವ್ಯವಸ್ಥೆ, ಉಚಿತವಾದ ಊಟದ ವ್ಯವಸ್ಥೆ ಮಾಡಿರುತ್ತಾರೆ. ತಿರುಪತಿ ದೇವಸ್ಥಾನವು ಬ್ರಹ್ಮೋತ್ಸವವನ್ನು ಪ್ರತಿವರ್ಷ ಅಷ್ಟೊಂದು ವೈಭೋಗದಿಂದ ಪ್ರತಿವರ್ಷ ಮಾಡುತ್ತಾ ಬಂದಿದೆ.
ಈ ಬಾರಿಯೂ ತಿರುಪತಿ ಮತ್ತು ತಿರುಮಲದಲ್ಲಿ ಅಂತಹ ಸಮೃದ್ಧದ ದೀಪಾಲಂಕಾರ ಎಲ್ಲೆಡೆ ಆಕರ್ಷಿತವಾಗಿತ್ತು. ಎಲ್ಲೆಲ್ಲಿ ನೋಡಿದರೂ ಅಲಂಕಾರದ ಸಿರಿಸಿಂಗಾರವೇ ತುಂಬಿ ತುಳುಕುತ್ತಿತ್ತು. ಅಲಂಕರಿಸಿದ ಇಡೀ ತಿರುಮಲ ಬೆಟ್ಟವನ್ನು ನೋಡಲು ಎರಡು ಕಣ್ಣುಗಳು ಸಾಲುವುದಿಲ್ಲ. ಅಂತಹ ಸುಂದರತೆಯಿಂದ ತಿರುಪತಿ ದೇವಸ್ಥಾನ ಅಂದು ಕಾಣುತ್ತಿತ್ತು.  ಮ್ಯೂಸಿಯಂ, ಪುಷ್ಟಮೇಳ, ಪುಸ್ತಕ ಮೇಳ ಇನ್ನು ಹಲವಾರು ಎಕ್ಸಿಬೀಷನ್ಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾತ್ರಿಯಾದರಂತೂ ತಿರುಪತಿ ಬೆಟ್ಟವು ಭೂಲೋಕದ ವೈಕುಂಠವೇ ಅನ್ನುವಂತೆ ಭಾಸವಾಗುತ್ತಿತ್ತು. ಬ್ರಹ್ಮೋತ್ಸವನ್ನು ನಾನು ಮೊದಲ ಬಾರಿ ನೋಡಿದ್ದರಂದ ನನಗಿದು ಸೋಜಿಗವೆನಿಸಿತ್ತು.
ಆದರೆ ಈ ವರ್ಷದ ಬ್ರಹ್ಮೋತ್ಸವಕ್ಕೆ ತೆಲಂಗಾಣದ ಬಿಸಿ ಏರಿತ್ತು. ತಿರುಪತಿಗೆ ಹೋಗುವ ಎಲ್ಲ ಬಸ್ಸುಗಳು, ವಾಹನಗಳನ್ನು ಪ್ರತಿಭಟನೆಕಾರರು ತಡೆಯುತ್ತಿದ್ದರಿಂದ ಈ ವರ್ಷದ ಬ್ರಹ್ಮೋತ್ಸವವನ್ನು ಅಸಂಖ್ಯ ಭಕ್ತರು ಮಿಸ್ ಮಾಡಿಕೊಂಡರು. ತಿರುಮಲದಲ್ಲಿ ಬ್ರಹ್ಮೋತ್ಸವ ನೋಡಲು ಜನರೇ ಇರಲಿಲ್ಲ. ಭಕ್ತರಿಗಾಗಿ ಊಟ,ವಸತಿ, ಅನ್ನದಾನದಂತಹ ಅನೇಕ ಕಾರ್ಯಕ್ರಮಗಳು ಬೆಟ್ಟದಲ್ಲಿ ಇದ್ದರೂ, ಜನರು ಮಾತ್ರ ಕಡಿಮೆ ಸಂಖ್ಯೆಯಲ್ಲಿ ಇದ್ದರು.  ಕೆಲವು ಸೆಕೆಂಡುಗಳ ಕಾಲ ತಿಮ್ಮಪ್ಪನನ್ನು ನೋಡುವ ದಿನಗಟ್ಟಲೆ, ಕೆಲವೊಮ್ಮೆ ವಾರಗಟ್ಟಲೇ ಕಾಯುವ ಜನರು ಅಂದು 2-3 ತಾಸಿನೊಳಗೆ ದೇವರ ದರ್ಶನ ಮಾಡಿಕೊಂಡು ಬರುತ್ತಿದ್ದರು. ಈ ವರ್ಷ  ಬಾಲಾಜಿ ದೇಗುಲದ ಹುಂಡಿಗೆ ಅಪಾರ ನಷ್ಟವಾಗದೆ ಅಂತ ಹೇಳುತ್ತಿದ್ದರು. ತೆಲಂಗಾಣದ ಹೋರಾಟದ ನಡುವೆಯೇ ಆ ದಿನ ಉಗ್ರರು ಬ್ರಹ್ಮೋತ್ಸವಕ್ಕೆ ತಿರುಪತಿ ಬೆಟ್ಟಕ್ಕೆ ಬರುವ ಭಕ್ತರನ್ನು ಟಾರ್ಗೆಟ್ ಮಾಡಿಕೊಂಡು ತಿರುಪತಿ ಬೆಟ್ಟ ಏರಲು ಸಜ್ಜಾಗಿ ಬಂದಿದ್ದರು. ಶಸ್ತ್ರ, ಮದ್ದುಗುಂಡುಗಳಿಂದ ಬಂದಿದ್ದ ಉಗ್ರಗಾಮಿಗಳನ್ನು ಪೋಲಿಸರು ಅರೆಸ್ಟ್ ಮಾಡುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದರು. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ತಿರುಪತಿ ಬೆಟ್ಟದ ಮೇಲೆ ಕಳೆದ ಎರಡು ದಿನಗಳು ಮಾತ್ರ ಅವಿಸ್ಮರಣೀಯ.
ಬ್ರಹ್ಮೋತ್ಸವದಂದು ತಿರುಮಲ ಬೆಟ್ಟದ ಮೇಲೆ ಅಲಂಕಾರಗೊಂಡ ದೇವರ ಅಂಗಣ ಕ್ಯಾಮೆರಾದಲ್ಲಿ ಸೆರೆಸಿಕ್ಕಾಗSunday, 8 September 2013

ಗಣೇಶ ಚತುರ್ಥಿ ಹಬ್ಬದ ನೆನಪಿನ ಜೊತೆ ಅಂತ್ಯಗೊಂಡ ಮನೆತನದ ಕಲೆ…!


ಪ್ರತಿವರ್ಷದ ಗಣೇಶನ ಹಬ್ಬ ಎಲ್ಲರಿಗೂ ಒಂದು ಸಡಗರ. ಚಿಕ್ಕದು, ದೊಡ್ಡದು ಅನ್ನದೇ ತಮ್ಮ ಆಸೆಗನುಸಾರವಾಗಿ ಗಣೇಶನ ಮೂರುತಿಗಳನ್ನು ಮಾರುಕಟ್ಟೆಯಿಂದ ತಂದು ಪೂಜೆ ಮಾಡಿ, ಗಣಪತಿಗೆ ಲಡ್ಡು, ಮೋದಕ, ಪಾಯಸಗಳ ಎಡೆ ಇಟ್ಟು, ಸಾಯಂಕಾಲ ಊರ ದೇವಸ್ಥಾನ, ಅಕ್ಕಪಕ್ಕದ ಮನೆ, ಕೇರಿಗಲ್ಲಿಗಳಲ್ಲಿ ಇಟ್ಟ ಗಣಪತಿಗಳನ್ನು ನೋಡಿ ಪಂಚಗಜ್ಜಾಯ ಮಿಂದು, ಚಂದ್ರ ಕಾಣುವ ಎಂಬ ಭಯದೊಂದಿಗೆ, ರಾತ್ರಿಯಾದೊಡೆ ಲಘುಬಗೆಯ ಪಟಾಕಿ ಸಿಡಿಮದ್ದುಗಳ ಆಚರಣೆಯೊಂದಿಗೆ ಮತ್ತೆ ಸಿಹಿಯೂಟದೊಂದಿಗೆ ಅಂತ್ಯವಾಗುವ ಗಣೇಶ ಚತುರ್ಥಿ ಹಬ್ಬ, ಜೋರಾಗಿ ಮಾಡುವವರಿಗೆ ನಿಜಕ್ಕೂ ದೊಡ್ಡ ಹಬ್ಬವೇ ಸರಿ. ಆದರೆ ಎಲ್ಲರೂ ಮಾಡುವ ಗಣೇಶನ ಹಬ್ಬದಂತೆ ನಮ್ಮ ಮನೆಯ ಹಬ್ಬ ವಿಭಿನ್ನವಾಗಿರಲಿಲ್ಲ. ಹೆಚ್ಚಿನವರಿಗೆ ಹಬ್ಬದಂದು ಹೊರಗಡೆಯಿಂದ ಹಣ ಕೊಟ್ಟು ಗಣೇಶನನ್ನು ತಂದು ಪೂಜೆ ಮಾಡುವುದು ದೊಡ್ಡ ಖುಷಿಯ ಸಂಗತಿಯಾಗಿದ್ದರೆ, ನಮ್ಮ ಮನೆತನದವರಿಗೆ, ಮನೆಯಲ್ಲಿ ಗಣಪತಿ ಇಟ್ಟು ಪೂಜೆಮಾಡುವವರಿಗೆ ಮಣ್ಣಿನಲ್ಲಿ ಗಣಪತಿಯನ್ನು ಮಾಡಿಕೊಡುವುದೇ ಪ್ರವೃತ್ತಿಯಾಗಿತ್ತು, ಅದೇ ದೊಡ್ಡ ಹಬ್ಬವಾಗಿತ್ತು ನಮಗೆ. ಬನವಾಸಿಯ ಸುತ್ತಮುತ್ತಲಿನ ಹತ್ತೂರ ಹಳ್ಳಿಯಿಂದ ಹಬ್ಬದ ದಿನ ನಮ್ಮ ಮನೆಗೆ ಗಣಪತಿ ಕೊಳ್ಳಲು ಜನರು ಬರುವುದೇ ದೊಡ್ಡ ಆಚರಣೆಯಾಗಿತ್ತು.

ಹಬ್ಬ ಮಾಡುವವರಿಗೆ ಗಣಪತಿಗಳನ್ನು ಮಣ್ಣಿನಲ್ಲಿ ಮಾಡಿಕೊಡುವುದು ನಮಗೂ ಕೂಡ ದೊಡ್ಡ ಖುಷಿಯ ಸಂಗತಿಯಾಗಿತ್ತು. ಇತ್ತೀಚೆಗೆ ತೀರಿಕೊಂಡ ನಮ್ಮ ಮಾವ ಕುಂಬಾರ ಶಿವಾನಂದಪ್ಪನವರೊಂದಿಗೆ ನಾಲ್ಕೈದು ದಶಕಗಳೊಂದಿಗೆ ಮಾಡುತ್ತಿದ್ದ ಮಣ್ಣಿನಿಂದ ಗಣಪತಿ ಮಾಡುವ ಪ್ರವೃತ್ತಿಯ ಜೊತೆಗೆ ಕಲೆಯೂ ಅವರೊಂದಿಗೆ ಹಾಗೆಯೇ ಕಣ್ಣು ಮುಚ್ಚಿತು. ಇದಕ್ಕೂ ಮೊದಲು ನಾವು ಮಾಡುತ್ತಿದ್ದ ಕುಂಬಾರಿಕೆಯ ವೃತ್ತಿಯೂ ಕೂಡ ನಮ್ಮ ತಾತ ಕುಂಬಾರ ಮಂಜಣ್ಣ, ಅಜ್ಜಿ ಹಿರಿಗಮ್ಮರು ತೀರಿಕೊಂಡ ಮೇಲೆ ಅದು ಕೂಡ ಮಣ್ಣು ಸೇರಿತು. ಈಗ ಮನೆತನದ ಕಲೆಯನ್ನು ಮುಂದುವರೆಸಿಕೊಂಡು ಹೋಗುವ ಮೊಮ್ಮಕ್ಕಳು ಯಾರೂ ಇಲ್ಲ. ಎಲ್ಲರೂ ಅವರವರ ಕೆಲಸಗಳೊಂದಿಗೆ ಬ್ಯುಸಿಯಾಗಿದ್ದಾರೆ. ಇವರಲ್ಲಿ ನಾನು ಕೂಡ ಸೇರುತ್ತೇನೆ. ನಾನು ಮನೆತನದ ಕಲೆಯನ್ನು ಕಲಿತಿದ್ದರೂ ಊರಿಗೆ ಹೋಗಿ ಮಾಡುವ ಪರಿಸ್ಥಿತಿಯಲ್ಲಿ ನಾನು ಇಲ್ಲ. ಎರಡು ತಿಂಗಳುಗಳ ಹಿಂದೆ ತೀರಿಕೊಂಡ ನಮ್ಮ ಮಾವನೊಂದಿಗೆ ವರ್ಷದ ಗಣೇಶ ಹಬ್ಬವೂ, ಹಿಂದಿನ ಅನೇಕ ವರ್ಷಗಳನ್ನು ನೆನಪು ಮಾಡುತ್ತಿತ್ತು.

ಮಣ್ಣಿನಿಂದ ಮಡಿಕೆ, ಕುಡಿಕೆ, ಗಣಪತಿಯ ಮೂರ್ತಿಗಳನ್ನು ಸುಮಾರು 40 ವರ್ಷಗಳಿಂದ ಮಾಡುತ್ತಾ ಬಂದಿರುವ ನಮ್ಮ ಕುಟುಂಬದವರಿಗೆ ಇದೊಂದು ವಿಶಿಷ್ಟ ಕಲೆಯಾಗಿತ್ತು ಅಂತ ಹೇಳಬಹುದು. ನಮ್ಮ ತಾತ ಕುಂಬಾರ ಮಂಜಣ್ಣರು ಪ್ರಾರಂಭಿಸಿದ್ದ ಮಣ್ಣಿನ ಕಲೆಯ ಕೆಲಸವನ್ನು ನಮ್ಮ ಮಾವ ಶಿವಾನಂದಪ್ಪನವರು ಮುಂದುವರೆಸಿಕೊಂಡಿದ್ದರು. ನಮ್ಮ ಮಾವನ ನಂತರ ಮನೆತನದ ಕಲೆಯನ್ನು ನನ್ನ ಹೊರತಾಗಿ ಬೇರೆ ಯಾವ ಮೊಮ್ಮಕ್ಕಳು ಕಲಿಯಲಿಲ್ಲ. ನಾನು ಕೂಡ ನನ್ನ ಮಾವನ ಜೊತೆಗೆ ಸುಮಾರು 16 ವರ್ಷಗಳಿಂದ  ಮಣ್ಣಿನ ಕೆಲಸದಲ್ಲಿ ಭಾಗಿಯಾಗಿ, ಪ್ರತಿವರ್ಷ ಗಣಪತಿಗಳನ್ನು  ಮಾಡಿ ಬರುತ್ತಿದ್ದೆ. ನಾನು ಮಣ್ಣಿನಲ್ಲಿ ಗಣಪತಿಗಳನ್ನು ಮಾಡಲಿಕ್ಕೆ, ಕಲೆ ನನಗೆ ಒಲಿಯಲಿಕ್ಕೆ ನನ್ನ ಮಾವ  ನನಗೆ ನೀಡಿದ ತರಬೇತಿಯೇ ಕಾರಣ. ಇದರ ಜೊತೆಗೆ ನನಗೂ ಚಿತ್ರಕಲೆ, ಮಣ್ಣಿನ ಕೆಲಸದಲ್ಲಿ ವಿಪರೀತ ಆಸಕ್ತಿಯಿದ್ದುದರಿಂದ ನಾನು ಮನೆತನದ ಕಲೆಯನ್ನು ಕಲಿತಿದ್ದೆ. ಬನವಾಸಿಯಲ್ಲಿ ಇರುವವರೆಗೂ ನಾನು ಪ್ರತಿವರ್ಷ ನಾನು ಮಾವನ ಜೊತೆ ಗಣಪತಿ ಮಾಡುವ ಕೆಲಸದಲ್ಲಿ ಭಾಗಿಯಾಗಿರುತ್ತಿದ್ದೆ ನಂತರ ನನ್ನ ವಿದ್ಯಾಭ್ಯಾಸ, ಉದ್ಯೋಗ ಅಂತ ಊರು ಬಿಟ್ಟ ಮೇಲೆ ಬನವಾಸಿಯಿಂದ ದೂರ ಇದ್ದರೂ, ಪ್ರತಿವರ್ಷ ಗಣೇಶನನ್ನು ಮಾಡಲೆಂತಲೇ ಊರಿಗೆ ಹೋಗಿ ಮಣ್ಣಿನಿಂದ ಕೆಲವು ಮೂರ್ತಿಗಳನ್ನು ಮಾಡಿ ಬರುತ್ತಿದ್ದೆ. ಮಣ್ಣಿನ ಮೂರ್ತಿಗಳಿಗೆ ಬಣ್ಣ ಹಚ್ಚುವಾಗಲೂ ನಾನು ಇರುತ್ತಿದ್ದೆ. ನನಗೆ ಬುದ್ದಿ ಬಂದಾಗಿನಿಂದಲೂ ಕಳೆದ ವರ್ಷದವರೆಗೂ ನಾನು ಮಣ್ಣಿನಿಂದ ಗಣಪತಿಯನ್ನು ಮಾಡುವುದನ್ನು ಬಿಟ್ಟಿರಲಿಲ್ಲ. ಕಳೆದ ಎರಡು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಮ್ಮ ಮಾವನಿಗೆ ಮೊದಲಿನಂತೆ ಕುಳಿತು ಮಣ್ಣಿನಿಂದ ಗಣಪತಿಗಳನ್ನು ಮಾಡಲು ಆಗುತ್ತಿರಲಿಲ್ಲ. ಕಳೆದ ವರ್ಷವೇ ಗಣಪತಿ ಮಾಡುವುದನ್ನು ನಿಲ್ಲಿಸಿಬಿಡೋಣ ಅಂತ ಹೇಳುತ್ತಲೇ ಇದ್ದ ಅವರಿಗೆ ನಾವೇ ಬಲವಂತವಾಗಿ ಕೊನೆ ವರ್ಷದವರೆಗೂ ಮಾಡುವಂತೆ ಮಾಡಿದ್ದೇವು. ವರ್ಷ ಸಾಧ್ಯವಾದರೆ ಮಾಡೋಣ, ಇಲ್ಲವಾದರೆ ಬಿಟ್ಟುಬಿಡೋಣ ಅಂತ ಹೇಳಿದ್ದ, ಅವರಿಗೆ ಕಳೆದ 6 ತಿಂಗಳಿಂದ ವಿಪರೀತ ಅನಾರೋಗ್ಯ ಕಾಡಿ, ಸಾವಿನೊಂದಿಗೆ ಅಂತ್ಯವಾಗಿತ್ತು. ನಮ್ಮ ಮಾವನ ನಂತರ ವೃತ್ತಿಯನ್ನು ಗಂಭೀರವಾಗಿ ಯಾರು ತೆಗೆದುಕೊಳ್ಳಲಿಲ್ಲ. ನನಗೆ ಆಸಕ್ತಿ ಇದೆ, ಆಸಕ್ತಿಯ ಶಕ್ತಿ ನಮ್ಮ ಮಾವನೊಂದಿಗೆ ಮಣ್ಣು ಸೇರಿತು

ನಮ್ಮ ಮಾವ, ಅಜ್ಜ ಗಣಪತಿ ಮಾಡುವಾಗ ಬನವಾಸಿಯ ಸುತ್ತಮುತ್ತಲಿನ ಹಳ್ಳಿಗಳಾದ ಕೆರೆಕೊಪ್ಪ, ಭಾಸಿ, ಎಡೂರಬೈಲು, ತಿಗಣಿ, ತೆಕ್ಕೂರು, ಜಡ್ಡಳ್ಳಿ, ನರೂರು, ಮದ್ರಳ್ಳಿ, ಸಂಪಗೋಡು, ಗುಡ್ನಾಪುರ, ಕಪಗೇರಿ ಹೀಗೆ ಇನ್ನು ಹಲವು ಹಳ್ಳಿಗಳಿಂದ ಜನರು ಬಂದು ಗಣಪತಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಪ್ರತಿವರ್ಷ ಗಣಪತಿ ಮಾಡುವಾಗ ಅವರೆಲ್ಲಾ ಬಂದು ಗಂಟೆಗಟ್ಟಲೇ ಹರಟುತ್ತಿದ್ದರು. ರೀತಿಯ ಲೋಕಾಭಿರೂಢಿ ಮಾತುಕತೆಯ ನಡುವೆ ಸಾಗುತ್ತಿದ್ದ ನಮ್ಮ ಕೆಲಸವನ್ನು ಈಗ ನೆನಪಿಸಿಕೊಂಡರೆ ತುಂಬಾ ಖುಷಿಯಾಗುತ್ತದೆಹೀಗೆ ಸುತ್ತಮುತ್ತಲೂ ಹಳ್ಳಿಗಳಿಂದ ಬರುತ್ತಿದ್ದವರು ನಮ್ಮ ಅಜ್ಜನ ಕಾಲದಿಂದಲೂ ಖಾಯಂ ಆಗಿ ನಮ್ಮ ಮನೆಯಿಂದ ಗಣಪತಿಗಳನ್ನು ಮಾಡಿಸಿಕೊಂಡು ಹೋಗುತ್ತಿದ್ದವರು.ಮಣ್ಣಿನಿಂದ ಗಣಪತಿ ಮಾಡುವ ಕೆಲಸ ತಪಸ್ಸಿನಂತೆ

ಬನವಾಸಿಯಲ್ಲಿ ಮಣ್ಣಿನಿಂದ ಗಣಪತಿ ಮೂರ್ತಿಗಳನ್ನು ಮಾಡುವ ಒಳ್ಳೆಯ ಕಲಾವಿದರ ಕುಟುಂಬದವರಿದ್ದಾರೆ. ಮುಖ್ಯವಾಗಿ ಗುಡಿಗಾರರ ಕುಟುಂಬದವರನ್ನು ಮೊದಲನೆಯಾಗಿ ಹೆಸರಿಸಬಹುದು. ಇಂದು ಬಹಳಷ್ಟು ಕಲಾವಿದರು ಗಣಪತಿಗಳನ್ನು ಮಾಡುತ್ತಿದ್ದರೂ, ಅವರೆಲ್ಲಾ ಗುಡಿಗಾರರ ಹತ್ತಿರವೇ ಪಳಗಿದರು. ನಮ್ಮ ಮಾವ ಕೂಡ 40 ವರ್ಷಗಳ ಹಿಂದೆ ಗುಡಿಗಾರರಲ್ಲೇ ಪಳಗಿ, ನಂತರ ಸ್ವಂತವಾಗಿ ತಾವೇ ಗಣಪತಿ ಮಾಡುತ್ತಾ ಬಂದವರು. ನನ್ನ ಪ್ರಕಾರ ಈಗಲೂ ಗುಡಿಗಾರರೇ ಬನವಾಸಿಯಲ್ಲಿ ಹೆಚ್ಚು ಗಣಪತಿಗಳನ್ನು  ಮಾಡುತ್ತಿರಬಹುದುಹಳೆಯ ಕುಟುಂಬಗಳ ಹೊರತಾಗಿ ಮೈಸೂರಿನಲ್ಲಿ ಫೈನ್ ಆರ್ಟ್ಸ್ ಮತ್ತು ಆರ್ಟ್ ಕ್ರಾಫ್ಟ್ ತರಬೇತಿಯನ್ನು ಪಡೆದುಕೊಂಡು ಬಂದಿರುವ ಶ್ರೀಪಾದ ಪುರೋಹಿತ್ ಚಿಕ್ಕ ವಯಸ್ಸಿನಲ್ಲೇ ಬನವಾಸಿಯ ಸುತ್ತಮುತ್ತಲೂ ವಿಶಿಷ್ಟ ರೀತಿಯಲ್ಲಿ ಗಣಪತಿಗಳನ್ನು ಮಾಡುವ ಮೂಲಕ ತುಂಬಾ ಹೆಸರುವಾಸಿಯಾದವರು. ಸಾಂಪ್ರದಾಯಿಕ ಶೈಲಿಯಲ್ಲಿ ಕಾಣುವಂತೆಮಣ್ಣಿನಿಂದ ಗಣಪತಿ ಮೂರ್ತಿಗಳನ್ನು ಮಾಡುತ್ತಿದ್ದವರ ನಡುವೆ, ಶ್ರೀಪಾದ ಪುರೋಹಿತ್, ಆಧುನಿಕ ಶೈಲಿಯಲ್ಲಿ ಸುಂದರವಾದ ಪುಟ್ಟ ಪುಟ್ಟ ಗಣೇಶಗಳಿಂದ ಹಿಡಿದು ಹತ್ತು ಅಡಿ ಗಣೇಶನವರೆಗೂ ಮಾಡಿ ಎಲ್ಲರಿಂದ ಭೇಷ್ ಅನಿಸಿಕೊಂಡವರು. ಇಂದಿಗೂ ಶ್ರೀಪಾದ ಪುರೋಹಿತ್ರ ಪುಟ್ಟ ಗಣಪತಿಗಳಿಗೆ ಅಪಾರ ಬೇಡಿಕೆ ಇದೆ. ಹೊಸ ತಲೆಮಾರಿನ ಕಲಾವಿದರಲ್ಲಿ ಬನವಾಸಿಯ ಶ್ರೀಪಾದ ಪುರೋಹಿತ್ ಮತ್ತು ಮಂಜು ಗುಡಿಗಾರ್ ಅವರನ್ನು ಗುರುತಿಸಬಹುದು. ಅದರಂತೆ ಸುರೇಶ್ ಬಳೆಗಾರ, ನಾಗರಾಜ ಚಕ್ರಸಾಲಿ ಇನ್ನು ಕೆಲವರು ಮೂರ್ತಿಗಳನ್ನು ಪ್ರತಿವರ್ಷ ಮಾಡುತ್ತಾರೆ. ಮಣ್ಣಿನಿಂದ ಗಣಪತಿಗಳನ್ನು ಮಾಡುವುದು ಅತ್ಯಂತ ದಣಿವಿನ ಕೆಲಸ ಅಂತ ಹೇಳಬಹುದು. ಇದು ಸೂಕ್ಷ್ಮ ಕುಸುರಿ ಕೆಲಸವಾಗಿದ್ದರಿಂದ, ವಿಪರೀತ ತಾಳ್ಮೆ ಬೇಕು. ಒಂದು ಕಡೆ ಕೂತು ಅಲ್ಲಾಡದಂತೆ ಮಾಡಲು ದೈಹಿಕವಾಗಿ ಗಟ್ಟಿಯಾಗಿರಬೇಕು. ಏಕಾಗ್ರತೆ ಇದ್ದರೆ ಮಾತ್ರ ಇಂತಹ ಕೆಲಸ ಸಾಧ್ಯ ಅನ್ನುವುದು ನನ್ನ ಅನುಭವದ ಮಾತು. ಬೆಂಗಳೂರಿನಲ್ಲಿ ಸಿಗುವ ಅಚ್ಚಿನ ಸುಣ್ಣದ ಗಣಪತಿಗಳಂತೆ, ಒಂದೊಂದೆ ಮಣ್ಣಿನ ಗಣಪತಿಗಳನ್ನು ತಿದ್ದಿ ತೀಡಿ ಮಾಡುವುದು ತುಂಬಾ ಕಷ್ಟ. ಗಣಪತಿ ಮಾಡುವ ಮುನ್ನ ಅದಕ್ಕೆ ಬೇಕಾದ ಮಣ್ಣನ್ನು ಹದಮಾಡುವುದು ಕೂಡ ತುಂಬಾ ಶ್ರಮದಾಯಕ, ಅಷ್ಟೇ ಮಣ್ಣನ್ನು ಹದ ಮಾಡುವುದಕ್ಕೂ ಅಪಾರ ಅನುಭವ ಬೇಕಾಗುತ್ತದೆ. ಮಣ್ಣು ನಾದಿದಷ್ಟು ಗಣಪತಿ ಮಾಡುವಾಗ ಫಿನಿಶಿಂಗ್ ತುಂಬಾ ಚೆನ್ನಾಗಿ ಸಿಗುತ್ತದೆ.

ಎರಡು ತಿಂಗಳ ಹಿಂದೆ ತೀರಿಕೊಂಡ ನಮ್ಮ ಮಾವನ ನೆನಪಿನೊಂದಿಗೆ ವರ್ಷದ ಗಣೇಶ ಹಬ್ಬವನ್ನು ಮಾಡದೇ, ಕಳೆದ ವರ್ಷಗಳಲ್ಲಿ ಆಚರಿಸಿದ ಗಣೇಶ ಹಬ್ಬವನ್ನು ನೆನಪುಮಾಡಿಕೊಂಡು ಖುಷಿ ಪಡುವ ಸಣ್ಣಪ್ರಯತ್ನವಷ್ಟೇ .

ಎಲ್ಲರಿಗೂ ಗಣೇಶ ಚತುರ್ಥಿಯ ಶುಭಕಾಮನೆಗಳು. ಎಲ್ಲರಿಗೂ ಶುಭವಾಗಲಿ.

Some Photographs