Saturday, 4 February 2012

ಕರಿಬಸವಯ್ಯರ ಪ್ರಕಾರ ಹಾಸ್ಯ ಅಂದ್ರೆ...


ನಮ್ಮ ಸಂಸ್ಥೆಯ ಮೊದಲ ಕೃತಿ `ಕಲಾವಿದರ ಕಥಾನಕ' ಕೃತಿಯಲ್ಲಿ ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆಗೈದ ಸುಮಾರು 60 ಜನ ಕಲಾವಿದರು ಹಾಗೂ ತಂತ್ರಜ್ಞರ ಜೀವನ ಚರಿತ್ರೆ ಹಾಗೂ ಸಂದರ್ಶನವಿದೆ. ಇದನ್ನು ಶ್ರಮವಹಿಸಿ ಮಾಡಿದವರು ಹಿರಿಯ ಲೇಖಕರಾದ ಕಗ್ಗೆರೆ ಪ್ರಕಾಶ್.  ಈ 60 ಜನ ಮಹನೀಯರಲ್ಲಿ ಕರಿಬಸವಯ್ಯನವರು ಕೂಡ ಒಬ್ಬರು.  ಪ್ರಕಾಶ್, ಕರಿಬಸವಯ್ಯನವರನ್ನು ಭೇಟಿಮಾಡಿ ಅವರ ಸಂದರ್ಶನ ಮಾಡಿದ್ದು ಹಾಗೂ ಕಲಾವಿದರ ಕಥಾನಕದಲ್ಲಿ ಅಡಕವಾಗಿದ್ದ ಕರಿಬಸವಯ್ಬನವರ ಜೀವನದ ಮಾತುಕತೆಯನ್ನು ಇಲ್ಲಿ ಕರಿಬಸವಯ್ಯನವರು ಅಗಲಿದ ನೆನಪಿನಲ್ಲಿ ಇಲ್ಲಿ ಯಥಾವತ್ತಾಗಿ ಈ ಪುಸ್ತಕದ ಪ್ರಕಾಶಕನಾಗಿ ಇಲ್ಲಿ ಪ್ರಕಟಿಸುತ್ತಿರುವೆ. ಕರಿಬಸವಯ್ಯನವರು ನಡೆದುಬಂದ ದಾರಿಯ ಸಮಗ್ರ ನೋಟ ಎಲ್ಲಿಯೂ ಮೂಡಿಬರದ ಮಾಹಿತಿ ಇಲ್ಲಿದೆ. ಹಾಗೆ ಕಣ್ಣಾಡಿಸಿ..

                                       ಸಂದರ್ಶನ: ಕಗ್ಗರೆ ಪ್ರಕಾಶ್ (ಕಲಾವಿದರ ಕಥಾನಕ- ಲೇಖಕರು)

ಕಡುಬಡತನದ ಕುಟುಂಬದಲ್ಲಿ ಸೆಪ್ಟೆಂಬರ್ 1, 1959ರಲ್ಲಿ ಜನಿಸಿದ ಕರಿಬಸವಯ್ಯ ಕನ್ನಡ ಚಿತ್ರರಂಗ ಕಂಡ 'ಕಪ್ಪು ಬಂಗಾರ'. ಕಪ್ಪು ಎಂಬುದು ಅವರ ಚರ್ಮಕ್ಕೆ ಅಂಟಿದ್ದರೂ ಮನಸ್ಸು ಪರಿಶುದ್ಧ, ಪರಿಪಕ್ವ. ಸ್ನೇಹಶೀಲತೆ, ಎಲ್ಲರೊಳಗೆ ಒಂದಾಗುವಿಕೆ, ತಾಳ್ಮೆ-ಸಂಯಮಗಳೇ ಅವರು ಇಷ್ಟು ಕಾಲ ಕನ್ನಡ ಚಿತ್ರರಂಗದಲ್ಲಿ ಉಳಿಯಲು ಕಾರಣವಾಗಿವೆ.
ಕೊಡಿಗೇಹಳ್ಳಿ ಚೆನ್ನಬಸವಯ್ಯ-ಚಿಕ್ಕಮ್ಮ ದಂಪತಿಗಳ ಮೂರನೆ ಮಗನಾದ ಇವರು ಶಾಲಾ-ಕಾಲೇಜು ದಿನಗಳಲ್ಲೇ ನಾಟಕದ ಗೀಳು ಹಚ್ಚಿಕೊಂಡವರು. ನಿಜಲಿಂಗಪ್ಪ ಕಾಲೇಜಿನಲ್ಲಿ ಪಿಯುಸಿ ಕಲಿತು, ಅಂಚೆ ತೆರಪಿನ ಶಿಕ್ಷಣದ ಮೂಲಕ ಸಮಾಜಶಾಸ್ತ್ರವನ್ನೂ ಓದಿದವರು. ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ಜವಾನನಾಗಿ ಸೇರಿ ದ್ವಿತೀಯ  ಸಹಾಯಕರಾಗಿ ಬಡ್ತಿ ಪಡೆದು ಇತ್ತೀಚೆಗಷ್ಟೇ ಸ್ವಯಂ ನಿವೃತ್ತಿ ಪಡೆದವರು. ಕರ್ನಾಟಕ  ಚಲನಚಿತ್ರ ಪೋಷಕ ಕಲಾವಿದರ ಸಂಘದ ಖಜಾಂಚಿ, 'ರೂಪಾಂತರ' ನಾಟಕ ತಂಡದ ಅಧ್ಯಕ್ಷರಾಗಿಯೂ ಸಕ್ರಿಯರು.
ಕಾಲೇಜು, ನಾಟಕ, ಸಿನಿಮಾ, ಧಾರಾವಾಹಿ, ಹರಿಕಥೆ-ಹೀಗೆ ನಾನಾ ಹಂತದಲ್ಲಿ ಮೂರೂವರೆ ದಶಕಗಳ ಸೇವೆ ಸಲ್ಲಿಸಿರುವ ಇವರು ಈಗ ಪೂರ್ಣಪ್ರಮಾಣದಲ್ಲಿ ಕಲಾ ಬದುಕಿಗೆ ತೊಡಗಿಸಿಕೊಂಡವರು. 'ಉಂಡು ಹೋದ ಕೊಂಡು ಹೋದ' ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ ಕರಿಬಸವಯ್ಯ, ರಾಜ್ಯ-ರಾಷ್ಟ್ರ ಪ್ರಶಸ್ತಿಗೂ ಭಾಜನರು. ಕೊಟ್ರೇಶಿ ಕನಸು, ಪುಟ್ಟಿ, ದೊರೆ, ಜನಪದ ಕರಡಿಪುರ ಮುಂತಾದ ಕಲಾತ್ಮಕ ಚಿತ್ರಗಳಲ್ಲಿನ ದಲಿತ ಸಂವೇದಿ ಪಾತ್ರಗಳಿಗೆ ಜೀವ ತುಂಬಿದವರು. ಇದುವರೆಗೂ 148 ಚಿತ್ರಗಳಲ್ಲಿ ಪೋಷಕ ಕಲಾವಿದರಾಗಿ ಅಭಿನಯಿಸಿರುವ ಇವರು 'ಜನುಮದ ಜೋಡಿ'ಯಿಂದ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡು ಸೈಎನಿಸಿಕೊಂಡವರು. ಆದರೆ ಇಂತಹ ಪೋಷಕ ಕಲಾವಿದರ ಬಾಳು ಕನ್ನಡ ಚಿತ್ರರಂಗದಲ್ಲಿ ಶೋಚನೀಯವೇ. ಬನ್ನಿ; ಕರಿಬಸವಯ್ಯನವರ ಜೀವನಾನುಭಗಳನ್ನು ಹಂಚಿಕೊಳ್ಳೋಣ.


ನರಸಿಂಹರಾಜು, ಬಾಲಣ್ಣ, ದಿನೇಶ್, ಮುಸುರಿ, ದ್ವಾರಕೀಶ್ಗೆ ಹೋಲಿಸಿದರೆ ಈಗಿನ ಹಾಸ್ಯ ಅಪಹಾಸ್ಯವಾಗಿದೆ ಏಕೆ?
'ನಾನೊಬ್ಬ ಕಲಾವಿದ, ಹಾಸ್ಯಗಾರನಲ್ಲ. ನಾನು ಗಂಭೀರ ಪಾತ್ರಗಳನ್ನೇ ಮಾಡುತ್ತಾ ಬಂದವನು. ಜೇಡಿಮಣ್ಣಿನಂತೆ ಇರುವ ನಮ್ಮನ್ನು ಒಬ್ಬ ನಿದರ್ೆಶಕ ಯಾವ ರೂಪದಲ್ಲಾದರೂ ಚಿತ್ರಿಸಬಹುದು' ಎಂಬ ಅಂಶವನ್ನು ನಿಮ್ಮ ಗಮನಕ್ಕೆ ತರುತ್ತಾ ನೀವು ಹಾಸ್ಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸುವೆ. ಹಾಸ್ಯ ಅಪಹಾಸ್ಯವಾಗಲು ಮುಖ್ಯ ಕಾರಣ ಅಂದ್ರೆ; ನಿದರ್ೆಶಕರಾಗಲಿ ಕಲಾವಿದರಾಗಲಿ ಒಟ್ಟಿಗೆ ಒಂದೆಡೆ ಕುಳಿತು ಪಾತ್ರಗಳ ಚಿತ್ರಣದ ಬಗ್ಗೆ ಚರ್ಚಿಸುವ ತಾಳ್ಮೆಯೇ ಈಗ ಇಲ್ಲವಾಗಿರುವುದು. ಬೇರೆ ಭಾಷೆಯ ತುಣುಕುಗಳನ್ನೇ ನಕಲು ಮಾಡುತ್ತಾ ಆತುರದಲ್ಲಿ ಚಿತ್ರ ತಯಾರು ಮಾಡುತ್ತಿರುವುದು. ಚಿತ್ರದ ಸಂಪೂರ್ಣ ಕಥೆ ಏನು ಎಂಬುದೇ ನಮಗೆ ಗೊತ್ತಿರುವುದಿಲ್ಲ. ಅವರು ಕೊಟ್ಟ ಪಾತ್ರ, ಬರೆದ ಸಂಭಾಷಣೆಯನ್ನೇ ನಾವು ಗಿಳಿಪಾಠದಂತೆ ಒಪ್ಪಿಸಬೇಕಷ್ಟೇ. ಅದಕ್ಕವರು 'ಸೂಪರ್' ಎನ್ನುತ್ತಾರೆಯೇ ಹೊರತು 'ಒನ್ಸ್ಮೋರ್' ಎಂಬುವರೇ ಇಲ್ಲ. ಆಗ ಕಥೆ, ಚಿತ್ರಕಥೆ, ಸಂಭಾಷಣೆ, ಪಾತ್ರಗಳ ಚಿತ್ರಣಕ್ಕೆ ಸಂಬಂಧಿಸಿದಂತೆ ವರ್ಷಗಟ್ಟಲೆ ತಲೆಕೆಡಿಸಿಕೊಳ್ಳುತ್ತಿದ್ದರು. ಚಿತ್ರದ ಸಂಪೂರ್ಣ ಕಥೆ ಎಲ್ಲ ಕಲಾವಿದರಿಗೆ ಗೊತ್ತಿರುತ್ತಿತ್ತು. ಆದ್ದರಿಂದ ಅವರು ಪಾತ್ರಕ್ಕೆ ಪೂರಕವಾಗಿ ಜೀವ ತುಂಬುತ್ತಿದ್ದರು. ಈಗ ಹಳೆಯ ನಿದರ್ೆಶಕರಿಗೆ ಸಿನಿಮಾಗಳೇ ಇಲ್ಲದಂತೆ ಆಗಿವೆ. ಈಗೆಲ್ಲ ರೆಡಿಮೇಡ್ಫುಡ್. ಇಂತಿಷ್ಟು ಬಜೆಟ್, ಇಂತಿಷ್ಟು ದಿನಗಳಲ್ಲಿ ಮುಗಿಯಬೇಕು. ಒಂದೇ ದಿನದಲ್ಲಿ ಐದಾರು ಸೀನ್. ತತ್ತಕ್ಷಣದಲ್ಲಿ ಮದುವೆ, ಮಕ್ಕಳು, ಮುದುಕರು... ಹೀಗೆ ಸಿನಿಮಾದಲ್ಲಿ ಎಲ್ಲ ದೃಶ್ಯಗಳು ಮುಗಿದು ಹೋಗುತ್ತವೆ.
ಹೀಗಿರುವಾಗ ಹಾಸ್ಯವೇ ಅಲ್ಲ, ಬೇರೆ ಯಾವ ಪಾತ್ರಗಳೂ ಜೀವಂತವಾಗಿ ಗಟ್ಟಿಗೊಳ್ಳಲು ಸಾಧ್ಯವಾಗುತ್ತವೆ. ಯಾವ ಪಾತ್ರ ಯಾವ ಕಲಾವಿದನಿಗೆ ಕೊಟ್ಟರೆ ಸೂಕ್ತವಾಗುತ್ತದೆ, ಆ ಪಾತ್ರದಲ್ಲಿ ಆತನ ಪ್ರತಿಭೆಯನ್ನು ಹೇಗೆ ಹೊರತೆಗೆಯಬಹುದು ಎಂಬ ಚಿಂತನ-ಮಂಥನಗಳು, ವಿಚಾರ-ವಿನಿಮಯಗಳೇ ಇಲ್ಲ. ಹೊಸ ನಿರ್ದೇಶಕರು,ನಿರ್ಮಾಪಕರ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಬೇಕಷ್ಟೇ. ಹಾಗೆಯೇ ಇಂಡಸ್ಟ್ರಿಯಲ್ಲಿ ತಾಳ್ಮೆ, ಸಂಯಮ, ಒಳ್ಳೆಯ ಶಿಸ್ತು-ನಡವಳಿಕೆಗಳನ್ನು ಬೂದುಗನ್ನಡಿ ಹಾಕಿಕೊಂಡು ಹುಡುಕಬೇಕು. ಒಂದು ಕುಟುಂಬದ ವಾತಾವರಣ ಈಗಿಲ್ಲ. ಹಾಗಾಗಿ ಕರಿಬಸವಯ್ಯ, ಮಂಡ್ಯ ರಮೇಶ್, ಬ್ಯಾಂಕ್ ಜನಾರ್ದನ್, ಡಿಂಗ್ರಿ ನಾಗರಾಜ್, ಎಂ.ಎನ್.ಸುರೇಶ್, ರಮಾನಂದ್, ಬಿರಾದಾರ್, ಉಮೇಶ್ ಇಂತಹ ಪೋಷಕ ಕಲಾವಿದರ ಪ್ರತಿಭೆಗಳನ್ನು ಈಗಿನವರು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಈ ಕಲಾವಿದರು ಅಪರೂಪಕ್ಕೆ ಸಿಕ್ಕ ಪಾತ್ರಗಳನ್ನು ಜೀವನ ನಿರ್ವಹಣೆಯ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಒಪ್ಪಿಕೊಂಡು ಅಭಿನಯಿಸುತ್ತಾರೆ.
ರಾತ್ರಿ ಕ್ಯಾಸೆಟ್ ನೋಡುತ್ತಾರೆ, ಬೆಳಗ್ಗೆ ಆಗಲೇ ತಯಾರಿಕೆಗೆ ಮುಂದಾಗುತ್ತಾರೆ. ಬಿಲ್ಡರ್ಸ್ ಅಂಡ್ ಲ್ಯಾಂಡ್ ಮಾಫಿಯಾ ಜನರು ನಿರ್ಮಾಪಕರಾಗಿ  ಹಣ ಹಾಕುತ್ತಾರೆ. ಹಣ ಹಾಕಿದ ತಕ್ಷಣವೇ ಇವರಿಗೆ ಲಾಭ ಬರಬೇಕು. ಅದಕ್ಕೆ ಎಷ್ಟು ಬೇಕೋ ಅಷ್ಟು ಮಸಾಲೆಯನ್ನು  ನಿರ್ದೇಶಕರು ಹಚ್ಚುತ್ತಾರೆ. ಡಬಲ್ ಮೀನಿಂಗ್ ಡೈಲಾಗ್ಗಳು ಹೇರಳವಾಗಿರುತ್ತವೆ. ಈಗಿನ ಚಿತ್ರಗಳ ಹೆಸರನ್ನು ನೋಡಿದರೆ ಪ್ರೇಕ್ಷಕರಿಗೆ ವಾಕರಿಕೆ ತರಿಸುವಂತಿವೆ. ನಮ್ಮ ಹೊಸ  ನಿರ್ದೇಶಕರಿಗೆ ಒಂದು ಸಿನಿಮಾ 'ಟೈಟಲ್' ಸಹ ಯಶಸ್ಸಿನ ಮೆಟ್ಟಲಾಗುತ್ತದೆ ಎಂಬ ಪರಿಜ್ಞಾನವೂ ಇಲ್ಲದಾಗಿದೆ. ಸಿನಿಮಾಗಳ ಹೆಸರು ಪ್ರೇಕ್ಷಕರಲ್ಲಿ ಭಾವನೆಗಳನ್ನು ಮೂಡಿಸುವಂತಿರಬೇಕು.

ನಿಮ್ಮ ಪ್ರಕಾರ ಹಾಸ್ಯ ಅಂದ್ರೆ ಹೇಗಿರಬೇಕು?
ಹಾಸ್ಯ ಅಂದ್ರೆ; ಸ್ಥಳದಲ್ಲೇ ಸೃಷ್ಟಿಯಾಗಬೇಕು, ಪಾತ್ರದ ಗೆಟಪ್ನಲ್ಲಿ ಕಲಾವಿದರನ್ನು ಪ್ರೇಕ್ಷಕ ನೋಡಿದರೆ ಸಾಕು ಹಾಸ್ಯ ಹೊಮ್ಮುವಂತಿರಬೇಕು, ಅಶ್ಲೀಲ, ಅಸಭ್ಯ, ಹಿಂಸೆಕೊಟ್ಟು ನಗಿಸುವುದು ಹಾಸ್ಯವೇ ಅಲ್ಲ. ಮುಖಭಾವಗಳಲ್ಲೇ ನಗೆಯುಕ್ಕಿಸಬೇಕು. ಆಗ ನರಸಿಂಹರಾಜು, ಬಾಲಣ್ಣ, ದಿನೇಶ್, ಮುಸುರಿ, ದ್ವಾರಕೀಶ್ರಂತಹ ಹಾಸ್ಯನಟರು ಸ್ಟೇಜ್ಗೆ ಬಂದ್ರೆ ಸಾಕು ಪ್ರೇಕ್ಷಕರು ನಗುತ್ತಿದ್ದರು. ನಿದರ್ೆಶಕರ ಸೂಚನೆಯಂತೆ, ಸಂಭಾಷಣೆ ಇರುವಂತೆ ನಟಿಸಿ ಹಾಸ್ಯವನ್ನು ಪ್ರೇಕ್ಷಕರಲ್ಲಿ ಹೊಮ್ಮುವಂತೆ ಮಾಡುವಲ್ಲಿ ಕಲಾವಿದರ ಪಾತ್ರ ಮುಖ್ಯವಾಗಿರುತ್ತದೆ. ಅವರೊಳಗೆ ಎಷ್ಟೆ ನೋವು-ಸಂಕಷ್ಟಗಳಿದ್ದರೂ ಅವುಗಳನ್ನು ಪ್ರೇಕ್ಷಕರ ಮುಂದೆ ತೋರಿಸದೆ ನಕ್ಕು ನಗಿಸುತ್ತಾನಲ್ಲ ಆತನೇ ಉತ್ತಮ ಹಾಸ್ಯಗಾರ. ಚಾರ್ಲಿ ಚಾಪ್ಲಿನ್, ನರಸಿಂಹರಾಜು, ಬಾಲಣ್ಣರಂತಹ ಮಹಾನ್ ಕಲಾವಿದರು ಮಾಡಿದ್ದು ಇದನ್ನೇ. ಅದಕ್ಕೆ ಅವರು ಇಂದಿಗೂ ನೆನಪಿನಲ್ಲಿ ಉಳಿಯುತ್ತಾರೆ.

ನಿಮ್ಮ ರಂಗಭೂಮಿಯ ಪ್ರವೇಶ ಹೇಗಾಯಿತು? ಅದರ ಅನುಭವಗಳನ್ನು ಹಂಚಿಕೊಳ್ಳಿ.
ರಂಗಭೂಮಿ ಎಂದಾಕ್ಷಣ ನನ್ನ ಹಳ್ಳಿಯ ಪರಿಸರ ನೆನಪಾಗುತ್ತಿದೆ. ಮಿಡ್ಲು ಸ್ಕೂಲ್ ಓದುತ್ತಿದ್ದಾಗಲೇ ನಾಟಕದ ಗೀಳು ಹಚ್ಚಿಕೊಂಡಿದ್ದೆ. ಸಂಜೆ 5 ಗಂಟೆಗೆ ಮೇಕಪ್ ಹಾಕಿಸಿಕೊಂಡು ಕುಳಿತರೆ ರಾತ್ರಿ 9 ಗಂಟೆಗೆ ನಾಟಕ ಶುರುವಾಗುತ್ತಿತ್ತು. ನಾಟಕದ ಹಾಡು, ಕುಣಿತದಲ್ಲಿ ಪಾಲ್ಗೊಳ್ಳುತ್ತಿದ್ದೆ. ಹೈಸ್ಕೂಲಿಗೆ ಬಂದ ಮೇಲೆ ನರಸಿಂಹಮೂರ್ತಿ,, ಹನುಮಂತು, ಅಶ್ವಥ್ ನಾರಾಯಣ, ಬಸಪ್ಪ, ಆಂಜನಪ್ಪ ಇನ್ನು ಹಲವು ಹುಡುಗರು ಸೇರಿಕೊಂಡು ಒಬ್ಬೊಬ್ಬರ ಮನೆಯಿಂದ ಒಂದೊಂದು ಅಂದರೆ ಸೀರೆ, ಬೆಡ್ಶೀಟ್, ಪೌಡರ್, ಕಣ್ಣುಕಪ್ಪು, ಇದ್ದಲು ಮಸಿ ತರುತ್ತಿದ್ದೆವು. ಬಯಲು ಪ್ರದೇಶದಲ್ಲೇ ಸ್ಟೇಜ್ ನಿಮರ್ಿಸಿಕೊಂಡು 'ತ್ಯಾಗಿ'ಯಂತಹ ನಾಟಕ ಮಾಡುತ್ತಿದ್ದೆವು. ಅಣ್ಣ ರಾಮಚಂದ್ರಯ್ಯ ಹಾರ್ಮೋನಿಯಂ ಬಾರಿಸೋರು, ಇನ್ನೊಬ್ಬ ಅಣ್ಣ ತ್ಯಾಗರಾಜ್ ನಾಟಕ ಮಾಡೋರು. ಇವರು ನನಗೆ ಪ್ರೋತ್ಸಾಹ ನೀಡುತ್ತಿದ್ದರು. ಪುರುಷನಹಳ್ಳಿಯಲ್ಲಿದ್ದ ಸಿದ್ಧಗಂಗ ಗ್ರಾಮಾಂತರ ಪ್ರೌಢಶಾಲೆಗೂ ನಮ್ಮೂರಿಗೂ ಎಂಟು ಮೈಲಿಗಳು. ಇಷ್ಟು ದೂರ ನಡೆದುಕೊಂಡೆ ಶಾಲೆಗೆ ಹೋಗುತ್ತಿದ್ದೆವು. ಅರಣ್ಯದಲ್ಲಿ ಬಿಸಿಲು, ಮಳೆ ಎನ್ನದೆ, ಕಾರೆಗೆಡ್ಡೆಹಣ್ಣು ತಿಂದು, ಕಟ್ಟೆಯ ನೀರು ಕುಡಿದು ಸಾಗುತ್ತಿದ್ದೆವು.
ಸಂಜೆಗೆ ಕೆಂಪಕ್ಕಜ್ಜಿ ಹಿಟ್ಟಿನ ಮಡಿಕೆ ಸೀಕು, ಉಂಡೆ ಬೆಲ್ಲ ಕೊಟ್ಟು ಬಿಟ್ಟರೆ ಅದೇ ನಮಗೆ ಪರಮಾನ್ನ ಭೋಜನ. ಅಜ್ಜಿ ಮೆತ್ತ್ತುತಿದ್ದ ಹರಳೆಣ್ಣೆಯಿಂದಲೇ ನಮ್ಮ ಕೂದಲುಗಳು ಇಂದಿಗೂ ಗಟ್ಟಿಮುಟ್ಟಾಗಿವೆ.
ನಮ್ಮ ತಾತ ಹನುಮಂತಯ್ಯ. ಯಕ್ಷಗಾನ, ಹರಿಕತೆ ಮಾಡುತ್ತಿದ್ದರು. ಚಿಕ್ಕಪ್ಪ ತಬಲ, ಹಾರ್ಮೋನಿಯಂ ಬಾರಿಸೋರು. ಇವರ ಪ್ರಭಾವ ನನ್ನ ಮೇಲಾಯಿತು. ನಮ್ಮೂರು ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಕೊಡಿಗೆಹಳ್ಳಿ. ಪಕ್ಕದೂರು ಹೊಸಪಾಳ್ಯ. ಅಲ್ಲಿ ನಡೆದ 'ರಾಜ್ ಸತ್ಯವ್ರತ' ನಾಟಕದಲ್ಲಿ ಹಾಸ್ಯಪಾತ್ರ ಮಾಡಿದೆ.
ನಾನು ಬೆಂಗಳೂರಿಗೆ ಬಂದ ಮೇಲೆ ಅನಿಲ್ಕುಮಾರ್ ಇದ್ದ ಮಾಲತಿ ದೊಡ್ಡಮನೆ ಅವರ 'ಅಕ್ರಾಂತ್' ನಾಟಕ ತಂಡಕ್ಕೆ ಸೇರಿಕೊಂಡೆ. ಇದಕ್ಕೂ ಮುಂಚೆ  ನಿಜಲಿಂಗಪ್ಪ ಕಾಲೇಜಿನ 'ಸ್ಫೂತರ್ಿ ಕಲಾವಿದರು' ತಂಡದಲ್ಲಿ ಅಭಿನಯಿಸುತ್ತಿದ್ದೆ. ಟಿ.ಆರ್.ಮಹದೇವಯ್ಯ, ವೆಂಕಟಾಚಲಯ್ಯರು  ಪ್ರೋತ್ಸಾಹಿಸುತ್ತಿದ್ದರು. ಬಳಿಕ ಅಮರದೇವ ಪ್ರಾರಂಭಿಸಿದ್ದ 'ರೂಪಾಂತರ' ತಂಡಕ್ಕೆ ಬಂದೆ. ಸುದರ್ಶನ್, ಕೆ.ಎಸ್.ಡಿ.ಎಲ್.ಚಂದ್ರು ಇದ್ರು. 'ರೊಟ್ಟಿ' ಎಂಬ ನಾಟಕದಲ್ಲಿ ನನಗೆ ಅಭಿನಯಿಸುವ ಅವಕಾಶ ಬಂತು. ಅಬಚೂರಿನ ಪೋಸ್ಟಾಫೀಸು, ದೇವರ ಹೆಣ  ನಾಟಕಗಳಲ್ಲೂ ಪಾತ್ರ ಮಾಡಿದೆ.
ಕುಂ.ವೀ. ಅವರ 'ಕತ್ತಲನೂ ತ್ರಿಶೂಲ ಹಿಡಿದ ಕಥೆ' ಆಧಾರಿತ ನಾಟಕವಾಯ್ತು, ನಾಟಕ ರೂಪಾಂತರ ಮಾಡಿದರು ನಟರಾಜ್ ಹುಳಿಯಾರ್. ಅಮರದೇವ್ ನಿರ್ದೇಶಕರು. ನನಗೆ ಪಾತ್ರ ನೀಡಲು ಇಡೀ ನಾಟಕವನ್ನು ಕಂಠಪಾಠ ಮಾಡಿ ಒಪ್ಪಿಸಬೇಕೆಂಬ ಷರತ್ತು ವಿಧಿಸಿದರು. ಇದರಲ್ಲಿ ಸೈ ಎನಿಸಿಕೊಂಡ ಮೇಲೆ ಅವಕಾಶ ಸಿಕ್ತು.
ಇದೇ ಕಥೆಯನ್ನು ಅಮರದೇವ ತಮ್ಮ 'ನಿರಂತರ' ಎಂಬ ಧಾರಾವಾಹಿಯಲ್ಲಿ ಒಂದು ಭಾಗವಾಗಿ ಅಳವಡಿಸಿದ್ದರು. ಅಲ್ಲೂ ನನಗೆ ಅಭಿನಯಿಸುವ ಅವಕಾಶ ನೀಡಿದರು.

ಬೆಳ್ಳಿ ಪರದೆ ಮೇಲೆ ನೀವು ಅರಳಿದ್ದು ಹೇಗೆ?
ಸಿನಿಮಾಕ್ಕೆ ಬರುವ ಮುಂಚೆ ನನ್ನಲ್ಲಿ ಸಾಕಷ್ಟು ಭಯವಿತ್ತು. ಹಿರಿಯ ಕಲಾವಿದರ ಜೊತೆ ನಾನು ಹೊಂದಿಕೊಳ್ಳಲು ಸಾಧ್ಯವೆ? ಕೆಲವು ನಿದರ್ೆಶಕರು ಹೊಡೆಯುತ್ತಾರೆ ಎಂದು ಕೇಳಿದ್ದೆ. ಹೀಗಾಗಿ ಲೈಟ್, ಸೌಂಡ್, ಆಕ್ಷನ್  ಅಂದ್ರೆ ಭಯ ಆವರಿಸುತ್ತಿತ್ತು. ಆದರೆ, ಅದೃಷ್ಟವಶಾತ್ ನನ್ನ ನಾಟಕ, ಧಾರಾವಾಹಿ ಅಭಿನಯವನ್ನು ನೋಡಿ ಮೆಚ್ಚಿಕೊಂಡಿದ್ದ ನಾಗತಿಹಳ್ಳಿ ಚಂದ್ರಶೇಖರ್ 'ಉಂಡು ಹೋದ ಕೊಂಡು ಹೋದ' ಸಿನಿಮಾದಲ್ಲಿ ಮೊದಲು ನನಗೆ ಅವಕಾಶ ಕಲ್ಪಿಸಿಕೊಟ್ಟರು. ನನಗೆ ಕೊಟ್ಟ ಪಾತ್ರದ ಡ್ರೆಸ್ ಬಿಚ್ಚದೆ ಜೊತೆಗೆ ತೆಗೆದುಕೊಂಡು ಹೋಗುತ್ತಿದ್ದೆ. ಏಕೆಂದರೆ 'ಎಲ್ಲಿ ನನ್ನ ಪಾತ್ರ ಬೇರೆಯವರಿಗೆ ಕೊಟ್ಟು ಬಿಡುತ್ತಾರೋ' ಎಂದು. ಇದರಲ್ಲಿ ನಾನು ಅಭಿನಯಿಸುವುದಕ್ಕೆ ನಿಮರ್ಾಪಕರಾದ ನಂದಕುಮಾರ್ ಷರತ್ತು ಹಾಕಿದ್ದರು. ಒಂದೂವರೆ ಪುಟದ ಡೈಲಾಗನ್ನು ಪಟಪಟನೆ ಕಂಠಪಾಠ ಮಾಡಿ ಒಂದೇ ಬಾರಿಗೆ ಒಪ್ಪಿಸಬೇಕು ಎಂದು. ಆ ಪರೀಕ್ಷೆಯಲ್ಲಿ ನಾನು ಗೆದ್ದು, ಅಭಿನಯಿಸಿದೆ. ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯೂ ಬಂತು. ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ಯಶಸ್ಸು ನಾಗತಿಹಳ್ಳಿ ಚಂದ್ರಶೇಖರ್ಗೆ ಸಲ್ಲಬೇಕು.
ಕುಂವೀ ಕಾದಂಬರಿ ಆಧರಿಸಿ ತೆಗೆದ 'ಕೊಟ್ರೇಶಿ ಕನಸು' ಚಿತ್ರದಲ್ಲೂ ನನಗೆ ಅವಕಾಶ ಕೊಟ್ಟರು. ನನ್ನ-ಉಮಾಶ್ರೀ ಅಭಿನಯದ ಈ ಚಿತ್ರ ರಾಜ್ಯ, ರಾಷ್ಟ್ರ ಪ್ರಶಸ್ತಿಯನ್ನು ಪಡೆಯಿತು. ಈ ಪ್ರಶಸ್ತಿ ನನ್ನ ವೃತ್ತಿ ಬದುಕಿನ ಮೇಲೂ ಬದಲಾವಣೆಯಾಯಿತು. ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ಜವಾನನಾಗಿ ಸೇವೆಯಲ್ಲಿದ್ದ ನನಗೆ ದ್ವಿತೀಯ ದರ್ಜೆ ಗುಮಾಸ್ತನನ್ನಾಗಿ ಬಡ್ತಿ ನೀಡಲಾಯಿತು.
ಬಳಿಕ ಹುಲಿ ಚಂದ್ರಶೇಖರ್ ಅವರ 'ಬೆಕ್ವಾ' ನಾಟಕ ವೀಕ್ಷಿಸಲು ಬಂದಿದ್ದ ಸಿದ್ಧಲಿಂಗಯ್ಯನವರು ನನ್ನ ಪಾತ್ರ ಮೆಚ್ಚಿಕೊಂಡು 'ಭೂತಾಯಿ ಮಕ್ಕಳು' ಚಿತ್ರಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡರು. ಹೀಗೆ ಬಾನಲ್ಲೆ ಮಧುಚಂದ್ರಕೆ, ಪೂಜಾ, ದೊರೆ, ಯಾರಿಗೆ ಸಾಲುತ್ತೆ ಸಂಬಳ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವೆ.
ಟಿ.ಎಸ್.ನಾಗಾಭರಣರ 'ಜನುಮದ ಜೋಡಿ' ಚಿತ್ರದಿಂದ ನಾನು ಹಾಸ್ಯ ಪಾತ್ರದಲ್ಲಿ ತೊಡಗಿಸಿಕೊಳ್ಳುವಂತಾಯಿತು. ಬರಗೂರು ರಾಮಚಂದ್ರಪ್ಪ ಅವರು ಈ ಚಿತ್ರದ ಸಂಭಾಷಣೆ ಬರೆದಿದ್ದರು. ಈ ಪಾತ್ರಕ್ಕೆ ಕರಿಬಸವಯ್ಯ ಸೂಟ್ ಆಗುತ್ತಾನೆಂದು ಸೂಚಿಸಿ ನನಗೆ ಅವಕಾಶ ಕಲ್ಪಿಸಿದ್ದರು. ಬರಗೂರರು ತಮ್ಮ ಕರಡಿಪುರ, ಜನಪದ, ಉಗ್ರಗಾಮಿ ಚಿತ್ರಗಳಲ್ಲಿ ನನಗೆ ಅವಕಾಶ ನೀಡಿದ್ದಾರೆ.

ಇದುವರೆಗಿನ ನಿಮ್ಮ ಪೋಷಕ ಪಾತ್ರಗಳಲ್ಲಿ ತೃಪ್ತಿಕೊಟ್ಟ ಪಾತ್ರಗಳ ಬಗ್ಗೆ...
ಇಲ್ಲಿಯವರೆಗೆ 148 ಚಿತ್ರಗಳಲ್ಲಿ, ನೂರಾರು ನಾಟಕ, ಧಾರಾವಾಹಿಗಳಲ್ಲಿ ಅಭಿನಯಿಸಿರುವೆ.
ವಿಧುರ, ಭೀಮ, ಶನಿದೇವರು, ಶೆಟ್ಟಿ ಹೀಗೆ ನಾಟಕದ ಪಾತ್ರಗಳು ನನಗೆ ಖುಷಿ ತಂದಿವೆ. ಹಾಗೆಯೇ ಉಂಡು ಹೋದ ಕೊಂಡು ಹೋದ, ಕೊಟ್ರೇಶಿ ಕನಸು, ಉಮಾಶ್ರಿ ಜೊತೆ ಅಭಿನಯಿಸಿದ ಚಿತ್ರಗಳು ತೃಪ್ತಿ ಕೊಟ್ಟಿವೆ. ಒಟ್ಟಾರೆ ಹೇಳಬೇಕೆಂದರೆ ಕಲಾತ್ಮಕ ಚಿತ್ರಗಳಲ್ಲಿನ ಪಾತ್ರಗಳು ತೃಪ್ತಿ ಕೊಟ್ಟಷ್ಟು ಕಮಷರ್ಿಯಲ್ ಚಿತ್ರಗಳು ನೀಡಿಲ್ಲ.
ಬೆಸಗರಹಳ್ಳಿ ರಾಮಣ್ಣನವರ 'ಕಕರನ ಉಗಾದಿ' ಕತೆ ಆಧಾರಿತ 'ಪುಟ್ಟಿ' ಎಂಬ ಚಿತ್ರದಲ್ಲಿನ ನನ್ನ ಪಾತ್ರ ಬಹಳ ಖುಷಿ ತಂದಿದೆ. ಇದರ  ನಿರ್ದೇಶಕರು ರಾಜವರ್ಧನ್. ಎನ್. ಎಸ್. ಶಂಕರ್  ನಿರ್ದೇಶನದ 'ಉಲ್ಟಾ ಪಲ್ಟಾ'ದಲ್ಲಿನ ಪಾತ್ರ -ಹೀಗೆ ಇನ್ನು ಹಲವಾರಿವೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕ್ಕಿನ ಕಾಂತರಾಜಪುರಕ್ಕೆ ಬರಗೂರರ 'ಉಗ್ರಗಾಮಿ' ಶೂಟಿಂಗ್ಗೆ ಹೋಗಿದ್ದೆವು. ಅದು ಶಿವಪ್ಪನವರ ಮನೆ. ಇದೇ ಮನೆಯಲ್ಲಿ ಹಿಂದೆ 'ಜನಪದ'ವನ್ನು ಚಿತ್ರೀಕರಿಸಲಾಗಿತ್ತು. ಆ ಮನೆ, ಊರಿನವರು ನಮ್ಮ ಮೇಲೆ ತವರಿಗೆ ಮಗಳು ಬಂದಾಗ ತೋರುತ್ತಾರಲ್ಲ ಅಷ್ಟೊಂದು ಪ್ರೀತಿ ವಿಶ್ವಾಸ ತೋರಿದ್ದಾರೆ. ಇಂತಹ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ.

ಪೋಷಕ ಕಲಾವಿದರನ್ನು ಚಿತ್ರರಂಗ ನಡೆಸಿಕೊಳ್ಳುವ ಕುರಿತು...
ಪೋಷಕ ಕಲಾವಿದರ ವಿಚಾರಕ್ಕೆ ಬಂದರೆ, ಇಂತಿಷ್ಟೇ ಸಂಭಾವನೆ ಕೊಡಬೇಕೆಂದು ನಿಗದಿ ಮಾಡಿಕೊಂಡಿರುವ ದೊಡ್ಡಣ್ಣ, ಶ್ರೀನಿವಾಸಮೂತರ್ಿ, ಶೋಭರಾಜ್, ಅವಿನಾಶ್, ರಂಗಾಯಣ ರಘು, ಬುಲೆಟ್ ಪ್ರಕಾಶ್, ಕೋಮಲ್ ಇವರನ್ನು ಹೊರತುಪಡಿಸಿದರೆ ಉಳಿದವರ ಬಾಳು ಶೋಚನೀಯವೇ. ನಮ್ಮ ಸಂಭಾವನೆ ವಿಚಾರದಲ್ಲಿ ಹೇಳಿಕೊಳ್ಳುವಂತೆಯೇ ಇಲ್ಲ. ಅವರು ಕೊಟ್ಟಷ್ಟು ನಾವು ಪಡೆದಷ್ಟು.
ಪೋಷಕ ಕಲಾವಿದನಾದ ನನ್ನ ಬದುಕಿನ ಹಿನ್ನೆಲೆಯನ್ನೇ ನೋಡಿ; ಜವಾನ, ದ್ವಿತೀಯ ದರ್ಜೆ ಸಹಾಯಕನಾಗಿ ಶೇಷಾದ್ರಿಪುರಂ ಪದವಿಪೂರ್ವ ಕಾಲೇಜಿನಲ್ಲಿ 30ವರ್ಷ ದುಡಿದು ಇದೀಗ ಸ್ವಯಂ ನಿವೃತ್ತಿ ಪಡೆದಿರುವೆ. ಈ ಮಧ್ಯೆಯೇ ನಾಟಕ, ಸಿನಿಮಾ, ಧಾರಾವಾಹಿಗಳಲ್ಲಿ ಮೂರೂವರೆ ದಶಕಗಳಿಂದ ಅಭಿನಯಿಸುತ್ತಾ ಬಂದರೂ ಸ್ವಂತ ಮನೆ ಕಟ್ಟಲಾಗಿಲ್ಲ. ಅದೂ ನೂರು ಸಿನಿಮಾಗಳ ನಂತರ ಓಡಾಟದ ಅನಿವಾರ್ಯತೆಗಾಗಿ ಕಷ್ಟಪಟ್ಟು ಒಂದು ಕಾರು ತೆಗೆದುಕೊಂಡೆ. ಇಬ್ಬರು ಹೆಣ್ಣು ಮಕ್ಕಳ ಪೈಕಿ ರಾಧಾ  ಎಂಬ ಹಿರಿಯ ಮಗಳ ಮದುವೆ ಮಾಡಿರುವೆ (ಕೌಟುಂಬಿಕ ಕಾರಣಕ್ಕಾಗಿ ಇತ್ತೀಚೆಗಷ್ಟೆ ಆತ್ಮಹತ್ಯೆ ಮಾಡಿಕೊಂಡ ರಾಧಾಳ ಸಾವು ಕರಿಬಸಯ್ಯರಿಗೆ ಭಾರೀ ಆಘಾತ ಉಂಟು ಮಾಡಿತ್ತು. ಕರಿಬಸಯ್ಯರ ಸಂದರ್ಶನ ಕಾಲಕ್ಕೆ ಅಪರೂಪದ ಪೋಟೋಗಳನ್ನು ನಮಗೆ ಒದಗಿಸಿದ್ದ ಈಕೆಯ ಸಾವು ನಮ್ಮ ಮನವನ್ನು ಕಲಕುತ್ತಲೆ ಇದೆ). ಇನ್ನೊಬ್ಬಳು ವೀಣಾ ಡಿಗ್ರಿ ಮುಗಿಸಿದ್ದಾಳೆ. ನನ್ನ ಬೆಳವಣಿಗೆ ಹಿನ್ನೆಲೆಯಲ್ಲಿ ನನ್ನ ಶ್ರೀಮತಿ ಶಾಂತ ಅವರ ಸಹಕಾರವನ್ನು ಮರೆಯುವಂತಿಲ್ಲ. ಹಾಗೆಯೇ ಶೇಷಾದ್ರಿಪುರಂನ ಸಿಬ್ಬಂದಿಯ ನೆರವನ್ನು ನೆನೆಯಲೇಬೇಕು.
ಇವತ್ತಿಗೂ ನೀವು ಕಾನಿಷ್ಕ ಹೋಟೆಲ್ ಸಮೀಪ ಹೋಗಿ ನೋಡಿ, ನಮ್ಮಂತಹ ಚಲನಚಿತ್ರ ಕೂಲಿಕಾಮರ್ಿಕ ಕಲಾವಿದರು ಕೆಲಸಕ್ಕಾಗಿ ಎಷ್ಟು ಮಂದಿ     ಅಲೆಯುತ್ತಾರೆ ಎಂಬುದು ಗೊತ್ತಾಗುತ್ತದೆ. ಅವರಿಗೆ ಆ ದಿನದ ಕೆಲಸ ಸಿಕ್ಕರೆ ಸಾಕು, ಧನ್ಯತಾಭಾವ ವ್ಯಕ್ತಪಡಿಸುತ್ತಾರೆ.
ನಿಜ ಹೇಳಬೇಕೆಂದರೆ ಅಧಿಕ ಸಂಖ್ಯೆಯ ಚಾನಲ್ಗಳು ಬರದೆ ಧಾರಾವಾಹಿಗಳು ಸೃಷ್ಟಿಯಾಗದಿದ್ದರೆ, ಸಿನಿಮಾವನ್ನೇ ನಂಬಿಕೊಂಡಿದ್ದರೆ, ನಮ್ಮಂತಹ ಪೋಷಕ ಕಲಾವಿದರು ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕಿತ್ತು.
ಹಾಗೆಯೇ ಇಂತಹ ಕಲಾವಿದರಿಗೆ ನನ್ನದೊಂದು ಸಲಹೆ ಎಂದರೆ; ತಾವು ಹಣ ಗಳಿಸಿದಾಗ ನಾನಾ ದುಷ್ಚಟಗಳಿಗೆ ಪೋಲು ಮಾಡದೆ ಭವಿಷ್ಯದ ದೃಷ್ಟಿಯಿಂದ ಮಿತವ್ಯಯ ಮಾಡಬೇಕು. ಉಳಿತಾಯ ಎಂಬುದೇ ನಮ್ಮ ಮುಂದಿನ ಆಪತ್ಬಾಂಧವ. ಏಕೆಂದರೆ ತಮ್ಮ ಕಡೆಯ ಕಾಲದಲ್ಲಿ ಅದೆಷ್ಟೋ ಹಿರಿಯ ಕಲಾವಿದರು ನಿರ್ಗತಿಕರಾಗಿ ಪಾಡುಪಟ್ಟಿರುವ ಪ್ರಸಂಗಗಳನ್ನು ನಾವು ಕಂಡಿದ್ದೇವೆ.
ನೀವು ಏನೇ ಹೇಳಿ; ಕಲಾಜೀವನವನ್ನು ಸಂಪೂರ್ಣ ವೃತ್ತಿಯಾಗಿ ಸ್ವೀಕರಿಸಿ ಬದುಕುವುದು ಕಷ್ಟ. ಇದು ಕೆಲವರಿಗಷ್ಟೇ ಸಾಧ್ಯವಾಗಬಹುದು. ನಮ್ಮಂತಹವರು ಬೇರೆ ವೃತ್ತಿಯನ್ನು ಮಾಡಲೇಬೇಕು, ಈ ಕಲಾ ಜೀವನವನ್ನು ಹವ್ಯಾಸವಾಗಷ್ಟೇ ಕಾಪಾಡಿಕೊಳ್ಳಬೇಕು. ಏಕೆಂದರೆ ನಮ್ಮ ಚಿತ್ರರಂಗದಲ್ಲಿ ರಾಜಕೀಯ, ಮೋಸ ತುಳುಕಾಡಿದೆ.

ನಿಮಗೆ ಇಷ್ಟವಾದ ಸಿನಿಮಾಗಳು, ನಟರು,  ನಿರ್ದೇಶಕರು, ತಂತ್ರಜ್ಞರ ಬಗ್ಗೆ...
ರಾಜ್ಕುಮಾರ್ ಒಬ್ಬ ಅದ್ಭುತ ಕಲಾವಿದ ಎಂಬುದರಲ್ಲಿ ಎರಡು ಮಾತಿಲ್ಲ. ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸುತ್ತಿದ್ದರು. ಕನ್ನಡ ಭಾಷೆಗೆ ತಮ್ಮನ್ನು ಮೀಸಲಾಗಿರಿಸಿ ಕಡೆತನಕ ದುಡಿದವರು. ಗೋಕಾಕ್ ಚಳುವಳಿ ನಡೆದದ್ದು ಇವರ ನೇತೃತ್ವದಲ್ಲೇ. ನಾಡು-ನುಡಿ, ನೆಲ-ಜಲ, ಭಾಷೆಗೆ ಕುಂದು ಬಂದಾಗಲೆಲ್ಲ ಹೋರಾಟಕ್ಕೆ ಮುಂದಾಗಿದ್ದಾರೆ. ಕನ್ನಡಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಕೀತರ್ಿ, ಹೆಸರು ಬರುವಂತೆ ಮಾಡಿದವರ ಪೈಕಿ ಇವರು ಪ್ರಮುಖರು.
ಆಗಿನ ಕಾಲದಲ್ಲಿ ಆರತಿ, ಭಾರತಿ, ಕಲ್ಪನಾ, ಮಂಜುಳ, ಜಯಂತಿ ಎಂಬ ಪಂಚ ತಾರೆಯರ ಹೆಸರನ್ನಾದರೂ ಹೇಳಬಹುದಿತ್ತು. ಆದರೀಗ ಹೀರೋ-ಹೀರೋಯಿನ್ಗಳು ಎರಡ್ಮೂರು ಚಿತ್ರಗಳಿಗೆ ನಾಪತ್ತೆಯಾಗಿಬಿಡುತ್ತಾರೆ. ಪರಭಾಷಾ ನಟಿಯರ ಹಾವಳಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಬೇರೆ ಭಾಷೆಯ ಚಿತ್ರಗಳು ಭರ್ಜರಿ ಯಶಸ್ಸು ಪಡೆಯುತ್ತಿವೆ. ಕನ್ನಡ ಚಿತ್ರಗಳು ಓಡುತ್ತಿಲ್ಲ. ಕನ್ನಡ ಎಂಬುದು ಸೊರಗುತ್ತಿದೆ.
ಕಾಶೀನಾಥ್ ಉತ್ತಮ ನಿರ್ದೇಶಕ. ಇವರಿಂದ ಉಪೇಂದ್ರ, ಸುನಿಲ್ಕುಮಾರ್ ದೇಸಾಯಿ, ವಿ. ಮನೋಹರ್, ಅಭಿನಯ ಮುಂತಾದ ಕಲಾವಿದರು ಪಳಗಿದ್ದಾರೆ. ಆದರೆ ಇವರ ಪ್ರತಿಭೆಯನ್ನು ಕನ್ನಡ ಚಿತ್ರರಂಗ ಯಥೇಚ್ಛವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದೇ ಹೇಳಬೇಕು. ಯಾವುದೇ ಕಲಾವಿದನಿಗೆ ಜಾತಿ, ಭಾಷೆ, ರಾಜಕೀಯ ಎಂಬ ಅಂಶಗಳು ಇರಲೆಬಾರದು. ಅವನ ಪ್ರತಿಭೆ ಮುಖ್ಯವಾಗಬೇಕು. ಒಟ್ಟಾರೆ ಹೇಳಬೇಕೆಂದರೆ, ಎಲ್ಲಿ ನಟರು,  ನಿರ್ದೇಶಕರು, ತಂತ್ರಜ್ಞರಲ್ಲಿ ಪರಿಪಕ್ವತೆ ಇರುತ್ತದೋ ಅಂತಹ ಚಿತ್ರಗಳು ಯಶಸ್ವಿಯಾಗುತ್ತವೆ. ಆದರೆ ನಿರ್ದಿಷ್ಟವಾಗಿ ಇಂತಹವರಿಂದಲೆ, ಇಂತಿಷ್ಟೆ ಎಂದು ಹೇಳಲು ಬರುವುದಿಲ್ಲ.

ಕರಿಬಸವಯ್ಯನ ಒಂದು ನೆನಪು...!ಕನ್ನಡ ರಂಗಭೂಮಿಯ ಹಿರಿಯ ಕೊಂಡಿ ಹಾಗೂ  ಕನ್ನಡ ಚಿತ್ರರಂಗದ `ಬ್ಲಾಕ್ಬುಲ್' ಕರಿಬಸವಯ್ಯ ಹಠಾತ್ತಾಗಿ ನಿಧನಹೊಂದಿರುವುದು ನಿಜಕ್ಕೂ ಅವರ ಅಭಿಮಾನಿಗಳಿಗೆ ಅಪಾರ ನೋವನ್ನುಂಟು ಮಾಡಿದೆ. ಕರಿಬಸವಯ್ಯರವರನ್ನು ಕನ್ನಡ ಚಿತ್ರರಂಗದ ಅಜಾತಶತ್ರು ಅಂತ ಹೇಳಿದರೆ ತಪ್ಪಾಗಲಾರದು, ಕರಿಬಸಯವಯ್ಯ ಯಾಕೆ ಎಲ್ಲರಿಗೂ ಇಷ್ಟವಾಗುತ್ತಿದ್ದರು ಅಂತ ಇಷ್ಟಪಡುವವರನ್ನೇ  ಕೇಳಿ ಒಬ್ಬೋಬ್ಬರು ಒಂದೊಂದು ಕಾರಣ ಕೊಡುತ್ತಾರೆ. ಅಂದರೆ  ಕರಿಬಸವಯ್ಯ ಇಷ್ಟವಾಗಲು ಬಹಳಷ್ಟು ಕಾರಣಗಳಿವೆ ಅಂದ ಹಾಗಾಯ್ತು. ಸಿನಿಮಾ ಅಭಿನಯದ ಹೊರತಾಗಿ ವ್ಯಕ್ತಿಗತವಾಗಿ ಕರಿಬಸವಯ್ಯನವರನ್ನು ಇಷ್ಟಪಡುವವರು ಬಹಳಷ್ಟು ಜನ ಇದ್ದರು.

ಕರಿಬಸವಯ್ಯ ಮೂಲತಃ ರಂಗಭೂಮಿ ಕಲಾವಿದ. ವಂಶಪಾರಂಪರವಾಗಿ ನಡೆಸುಕೊಂಡು ಬರುತ್ತಿದ್ದ ಹರೀಕಥಾ ವಿದ್ವಾನ್. ತಾವು ಓದಿದ  ಶೇಷಾದ್ರಿಪುರಂ ಕಾಲೇಜಿನಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಲೇ  ರಂಗಭೂಮಿ ಹಾಗೂ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರು. ಅಭಿನಯಿಸಿದ್ದು ಇನ್ನೂರಕ್ಕೂ ಹೆಚ್ಚು ಸಿನಿಮಾಗಳೂ ಆದರೂ ಇವರು ಅಭಿಮಾನ ಸಾಧಿಸಿದ್ದು ಲಕ್ಷಕ್ಕೂ ಹೆಚ್ಚು ಜನ. ಯಾರೊಂದಿಗೂ ಸೆಟ್ನಲ್ಲಿ , ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಾಗಲೀ ಕಿರಿಕ್ ಮಾಡಿಕೊಂಡಿದ್ದಾಗಲೀ, ಸಿಟ್ಟಿನಿಂದ, ಡೌಲತ್ತಿನಿಂದ ಮಾತನಾಡಿಸಿದ್ದಾಗಲೀ ಇಲ್ಲವೇ ಇಲ್ಲ. ಎಲ್ಲರನ್ನೂ ತುಂಬಾ ಪ್ರೀತಿಯಿಂದ ಕಾಣುವ ಸ್ವಭಾವ ಅವರದ್ದು.  ಹೊಸಬರಾಗಲಿ, ಹಿರಿಯರಾಗಲಿ ಮಾತನಾಡಿಸಿದರೆ ಅದೇ ಅಕ್ಕರೆ ಅವರಲ್ಲಿ ತುಂಬಿ ತುಳುಕುತ್ತಿತ್ತು. ಹಾಗಾಗಿಯೇ ಕರಿಬಸವಯ್ಯ ಎಲ್ಲರ ಅಚ್ಚುಮೆಚ್ಚು.

ಇದಕ್ಕೆ ಸಾಕ್ಷಿಯಾಗಿ ನಾನು ನೋಡಿದ ಒಂದು ಘಟನೆಯನ್ನು ಇಲ್ಲಿ ಹೇಳಬಲ್ಲೇ. ಸುಮಾರು 2 ವರ್ಷದ ಹಿಂದೆ ಕರಿಬಸವಯ್ಯರ 50ನೇ ಹುಟ್ಟು ಹಬ್ಬವನ್ನು ತುಂಬಾ ಅದ್ದೂರಿಯಾಗಿ ಮಾಡಲಿಕ್ಕೆ ಅವರು ಸಕ್ರೀಯರಾಗಿ ತೊಡಗಿಸಿಕೊಂಡ `ರೂಪಾಂತರ' ಕಲಾತಂಡ ನಿರ್ಧರಿಸಿತ್ತು, ಅದಕ್ಕೆ ತಕ್ಕ ಹಾಗೆ ಎಲ್ಲ ರೀತಿಯಿಂದಲೂ ಸಜ್ಜಾಗಿತ್ತು. ಇದಕ್ಕೆ ಕಾರಣವೂ ಕೂಡ ಸ್ವಷ್ಪವಾಗಿತ್ತು, ಈ ಹುಟ್ಟು ಹಬ್ಬ ಆಚರಣೆಗಿಂತಲೂ ಕೆಲವು ತಿಂಗಳು ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಕರಿಬಸವಯ್ಯನವರ ಮಗಳು ವರದಕ್ಷಿಣೆ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳು ಸತ್ತ ನೋವಿನಲ್ಲಿ ಕರಿಬಸವಯ್ಯ ಮಾನಸಿಕವಾಗಿ ತುಂಬಾ ಬಳಲಿದ್ದರು. ಪುತ್ರಿ ಶೋಕಂ ನಿರಂತರಂ ಅನ್ನುವ ಹಾಗೆ ಮಗಳ ನೆನಪಿನಿಂದ ಕರಿಬಸವಯ್ಯ ಹೊರಬರುವಂತೆ ಮಾಡಲು ಅವರ ಅಸಂಖ್ಯಾತ ಅಭಿಮಾನಿಗಳು ಆ ಒಂದು ಕಾರ್ಯಕ್ರಮವನ್ನು ಯೋಜಿಸಿಕೊಂಡಿದ್ದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಹುಟ್ಟಿದ ಹಬ್ಬವನ್ನು ಆಚರಣೆಯ ಜೊತೆಗೆ ಅವರ ಕುಂವೀ ಅವರ ಕಥೆಯ ಆಧಾರಿತವಾದ ಜನಪ್ರಿಯ ನಾಟಕವನ್ನು ಪ್ರಸ್ತುತಪಡಿಸಲು ರೂಪಾಂತರ ತಂಡ ಸಿರ್ಧಾರ ಮಾಡಿತ್ತು. ಇದರ ಮುಂದಾಳತ್ವನ್ನು ರೂಪಾಂತರ ತಂಡದ ಚಂದ್ರುರವರು ವಹಿಸಿಕೊಂಡಿದ್ದರು. ನಾನು ಆ ದಿನ ಕರಿಬಸವಯ್ಯನವರ ನಾಟಕ ನೋಡಲಿಕ್ಕೆ ಕಲಾಕ್ಷೇತ್ರಕ್ಕೆ ಹೋಗಿದ್ದೆ. ಮುಖ್ಯವಾಗಿ ಅವರ ಹುಟ್ಟುಹಬ್ಬವನ್ನು ನೋಡುವ ಕಾತುರ ಕೂಡ ನನ್ನನ್ನು ಕಾಡಿತ್ತು. ರವೀಂದ್ರ ಕಲಾಕ್ಷೇತ್ರ ಇಡೀ ಜನರಿಂದ ತುಂಬಿ ಹೋಗಿತ್ತು. ಇನ್ನೂ ಹಲವಾರು ಜನರು ಸೀಟಿಲ್ಲದೇ ಹೊರಗಡೆ ಬಂದು ನಿಂತಿದ್ದರು. ಯಾವೊಬ್ಬ ರಾಜಕಾರಣಿ ಅಥವಾ ಸಿನಿಮಾ ಸ್ಟಾರ್ಗೂ ಅಷ್ಟೋಂದು ಜನಗಳು ಸೇರುವುದು ನಿಜಕ್ಕೂ ಅಪರೂಪ ಅಂತಹುದರಲ್ಲಿ ಕರಿಬಸವಯ್ಯನವರ 50ನೇ ಹುಟ್ಟಿದ ಹಬ್ಬದ ದಿನಕ್ಕೆ ಅಷ್ಟೊಂದು ಜನ ಸೇರಿದ್ದರು. ಅವರಾಗೆ ಕರಿಬಸವಯ್ಯನವರ ಮೇಲಿನ ಪ್ರೀತಿಯನ್ನಿಟ್ಟುಕೊಂಡು ಬಂದವರು.
ಕನ್ನಡ ಸಿನಿಮಾ ಉದ್ಯಮದ ಘಟಾನುಘಟಿ ನಟರುಗಳೆಲ್ಲಾ ಆ ದಿನ ಫ್ರೀ ಮಾಡಿಕೊಂಡು ಕಾರ್ಯಕ್ರಮಕ್ಕೆ ಬಂದು ಕರಿಬಸವಯ್ಯನವರಿಗೆ  ಶುಭಕೋರಿದ್ದರು. ಅಂದು ಸೇರಿದ್ದ ಸಾವಿರಾರು ಜನರ ಪ್ರೀತಿಯನ್ನು ನೋಡಿ ಕರಿಬಸವಯ್ಯನವರ ಕಣ್ಣಲ್ಲಿ ನೀರು ತುಂಬಿತ್ತು. ಇಡೀ ಕಲಾಕ್ಷೇತ್ರದ ವೇದಿಕೆಯ ತುಂಬಾ ಕರಿಬಸವಯ್ಯನವರ ಅಭಿಮಾನಿಗಳು ಸೇರಿದ್ದರು. ಕೇವಲ ಸಾಮಾನ್ಯ ಪೋಷಕ ನಟ ಇಷ್ಟೊಂದು ಅಭಿಮಾನಿಗಳನ್ನು, ಜನರ ಪ್ರೀತಿಯನ್ನು ಹೊಂದಿದ್ದಾನೆ ಅಂದ ಮೇಲೆ ಆತನ ವ್ಯಕ್ತಿತ್ವ ಹೇಗಿರಬಹುದು, ಗೊತ್ತಾದರೂ ಅದನ್ನು ಹೇಗೆ ಬಣ್ಣಿಸುವುದು ಎಂಬುದು ನನಗೆ ಅರ್ಥವಾಗಲಿಲ್ಲ. ಕರಿಬಸವಯ್ಯನವರ ನಾಟಕವನ್ನು(ನಾಟಕದ ಹೆಸರು ಮರೆತುಹೋಗಿದೆ) ಜನ ತುಂಬಾ ಖುಷಿಪಟ್ಟು ಆರಾಧನೆ ಮಾಡಿದರು. ಅದರಲ್ಲಿ ನಾನೂ ಒಬ್ಬ. ಆ ದಿನ ವೇದಿಕೆಯಲ್ಲಿದ್ದ ಮಾಸ್ಟರ್ ಹಿರಣ್ಣಯ್ಯನವರು ಮಾತನಾಡಿ, `ಇಡೀ ಜಗತ್ತಿನಲ್ಲಿ ತನ್ನ ಹುಟ್ಟುಹಬ್ಬದ ದಿನವನ್ನು ನಾಟಕ ಮಾಡಿ ಅಭಿನಯಿಸುವುದರ ಮೂಲಕ ಆಚರಿಸಿಕೊಂಡ ಏಕೈಕ ನಟ ಕರಿಬಸವಯ್ಯ' ಅಂತ ಹೊಗಳಿದ್ದರು. ಆ ದಿನ ವೇದಿಕೆಯಲ್ಲಿ ಕರಿಬಸವಯ್ಯನವರ ತಾಯಿ ಹಾಗೂ ಅವರ ಶ್ರೀಮತಿಯನ್ನು ಸನ್ಮಾನ ಕೂಡ ಮಾಡಲಾಯಿತು. ಒಬ್ದ ಕಲಾವಿದನಿಗೆ ಇದಕ್ಕಿಂತ ದೊಡ್ಡ ಪುಣ್ಯ ಬೇಕಿಲ್ಲ ಅಂತ ಕರಿಬಸವಯ್ಯ ಅಲ್ಲಿ ಸೇರಿದ್ದ ಸಾವಿರಾರು ಜನರ ಮುಂದೆ ಹೇಳಿದ ಮಾತನ್ನು ಎಂದಿಗೂ ಮರೆಯುವಂತಿರಲಿಲ್ಲ. ಇಂದಿಗೂ ಅದು ನನ್ನ ಕಣ್ಣಮುಂದೆ ನಿನ್ನೆಯೋ, ಮೊನ್ನೆಯೋ ನಡೆದ ಹಾಗೆ ಭಾಸವಾಗುತ್ತಿದೆ.
ಅಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕಿಕ್ಕಿರಿದು ಕರಿಬಸವಯ್ಯನವರಿಗೆ ಹುಟ್ಟುಹಬ್ಬದಂದು ಶುಭಕೋರಲು ಬಂದಿದ್ದ ಸಾವಿರಾರು ಜನರು ಇಂದು ಅದೇ ಕಲಾಕ್ಷೇತ್ರದಲ್ಲಿ ಕರಿಬಸವಯ್ಯನವರ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಇಂದು ಕೂಡ ಸಾವಿರಾರು ಜನರು ಸೇರಿದ್ದರು ಕರಿಬಸವಯ್ಯನವರಿಗೆ  ಅಂತಿಮ ನಮನ ಸಲ್ಲಿಸಲು...!
ವಿಧಿಲಿಖಿತ ಅಂದರೆ ಇದೇ ಅಲ್ಲವೇ...!
 ಕರಿಬಸವಯ್ಯನವರ ಆತ್ನಕ್ಕೆ ಚಿರಶಾಂತಿ ಕೋರುತ್ತಾ,  ಅವರ ನೆನಪು ಸದಾ ಹೀಗೆಯೇ ಇರುತ್ತೆ, ಅದನ್ನು ಯಾವುದೇ ಕಾರಣಕ್ಕೂ ಅಳಿಸಲಾಗುವುದಿಲ್ಲ.