ಕನ್ನಡ ರಂಗಭೂಮಿಯ ಹಿರಿಯ ಕೊಂಡಿ ಹಾಗೂ ಕನ್ನಡ ಚಿತ್ರರಂಗದ `ಬ್ಲಾಕ್ಬುಲ್' ಕರಿಬಸವಯ್ಯ ಹಠಾತ್ತಾಗಿ ನಿಧನಹೊಂದಿರುವುದು ನಿಜಕ್ಕೂ ಅವರ ಅಭಿಮಾನಿಗಳಿಗೆ ಅಪಾರ ನೋವನ್ನುಂಟು ಮಾಡಿದೆ. ಕರಿಬಸವಯ್ಯರವರನ್ನು ಕನ್ನಡ ಚಿತ್ರರಂಗದ ಅಜಾತಶತ್ರು ಅಂತ ಹೇಳಿದರೆ ತಪ್ಪಾಗಲಾರದು, ಕರಿಬಸಯವಯ್ಯ ಯಾಕೆ ಎಲ್ಲರಿಗೂ ಇಷ್ಟವಾಗುತ್ತಿದ್ದರು ಅಂತ ಇಷ್ಟಪಡುವವರನ್ನೇ ಕೇಳಿ ಒಬ್ಬೋಬ್ಬರು ಒಂದೊಂದು ಕಾರಣ ಕೊಡುತ್ತಾರೆ. ಅಂದರೆ ಕರಿಬಸವಯ್ಯ ಇಷ್ಟವಾಗಲು ಬಹಳಷ್ಟು ಕಾರಣಗಳಿವೆ ಅಂದ ಹಾಗಾಯ್ತು. ಸಿನಿಮಾ ಅಭಿನಯದ ಹೊರತಾಗಿ ವ್ಯಕ್ತಿಗತವಾಗಿ ಕರಿಬಸವಯ್ಯನವರನ್ನು ಇಷ್ಟಪಡುವವರು ಬಹಳಷ್ಟು ಜನ ಇದ್ದರು.
ಕರಿಬಸವಯ್ಯ ಮೂಲತಃ ರಂಗಭೂಮಿ ಕಲಾವಿದ. ವಂಶಪಾರಂಪರವಾಗಿ ನಡೆಸುಕೊಂಡು ಬರುತ್ತಿದ್ದ ಹರೀಕಥಾ ವಿದ್ವಾನ್. ತಾವು ಓದಿದ ಶೇಷಾದ್ರಿಪುರಂ ಕಾಲೇಜಿನಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಲೇ ರಂಗಭೂಮಿ ಹಾಗೂ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರು. ಅಭಿನಯಿಸಿದ್ದು ಇನ್ನೂರಕ್ಕೂ ಹೆಚ್ಚು ಸಿನಿಮಾಗಳೂ ಆದರೂ ಇವರು ಅಭಿಮಾನ ಸಾಧಿಸಿದ್ದು ಲಕ್ಷಕ್ಕೂ ಹೆಚ್ಚು ಜನ. ಯಾರೊಂದಿಗೂ ಸೆಟ್ನಲ್ಲಿ , ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಾಗಲೀ ಕಿರಿಕ್ ಮಾಡಿಕೊಂಡಿದ್ದಾಗಲೀ, ಸಿಟ್ಟಿನಿಂದ, ಡೌಲತ್ತಿನಿಂದ ಮಾತನಾಡಿಸಿದ್ದಾಗಲೀ ಇಲ್ಲವೇ ಇಲ್ಲ. ಎಲ್ಲರನ್ನೂ ತುಂಬಾ ಪ್ರೀತಿಯಿಂದ ಕಾಣುವ ಸ್ವಭಾವ ಅವರದ್ದು. ಹೊಸಬರಾಗಲಿ, ಹಿರಿಯರಾಗಲಿ ಮಾತನಾಡಿಸಿದರೆ ಅದೇ ಅಕ್ಕರೆ ಅವರಲ್ಲಿ ತುಂಬಿ ತುಳುಕುತ್ತಿತ್ತು. ಹಾಗಾಗಿಯೇ ಕರಿಬಸವಯ್ಯ ಎಲ್ಲರ ಅಚ್ಚುಮೆಚ್ಚು.
ಇದಕ್ಕೆ ಸಾಕ್ಷಿಯಾಗಿ ನಾನು ನೋಡಿದ ಒಂದು ಘಟನೆಯನ್ನು ಇಲ್ಲಿ ಹೇಳಬಲ್ಲೇ. ಸುಮಾರು 2 ವರ್ಷದ ಹಿಂದೆ ಕರಿಬಸವಯ್ಯರ 50ನೇ ಹುಟ್ಟು ಹಬ್ಬವನ್ನು ತುಂಬಾ ಅದ್ದೂರಿಯಾಗಿ ಮಾಡಲಿಕ್ಕೆ ಅವರು ಸಕ್ರೀಯರಾಗಿ ತೊಡಗಿಸಿಕೊಂಡ `ರೂಪಾಂತರ' ಕಲಾತಂಡ ನಿರ್ಧರಿಸಿತ್ತು, ಅದಕ್ಕೆ ತಕ್ಕ ಹಾಗೆ ಎಲ್ಲ ರೀತಿಯಿಂದಲೂ ಸಜ್ಜಾಗಿತ್ತು. ಇದಕ್ಕೆ ಕಾರಣವೂ ಕೂಡ ಸ್ವಷ್ಪವಾಗಿತ್ತು, ಈ ಹುಟ್ಟು ಹಬ್ಬ ಆಚರಣೆಗಿಂತಲೂ ಕೆಲವು ತಿಂಗಳು ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಕರಿಬಸವಯ್ಯನವರ ಮಗಳು ವರದಕ್ಷಿಣೆ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳು ಸತ್ತ ನೋವಿನಲ್ಲಿ ಕರಿಬಸವಯ್ಯ ಮಾನಸಿಕವಾಗಿ ತುಂಬಾ ಬಳಲಿದ್ದರು. ಪುತ್ರಿ ಶೋಕಂ ನಿರಂತರಂ ಅನ್ನುವ ಹಾಗೆ ಮಗಳ ನೆನಪಿನಿಂದ ಕರಿಬಸವಯ್ಯ ಹೊರಬರುವಂತೆ ಮಾಡಲು ಅವರ ಅಸಂಖ್ಯಾತ ಅಭಿಮಾನಿಗಳು ಆ ಒಂದು ಕಾರ್ಯಕ್ರಮವನ್ನು ಯೋಜಿಸಿಕೊಂಡಿದ್ದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಹುಟ್ಟಿದ ಹಬ್ಬವನ್ನು ಆಚರಣೆಯ ಜೊತೆಗೆ ಅವರ ಕುಂವೀ ಅವರ ಕಥೆಯ ಆಧಾರಿತವಾದ ಜನಪ್ರಿಯ ನಾಟಕವನ್ನು ಪ್ರಸ್ತುತಪಡಿಸಲು ರೂಪಾಂತರ ತಂಡ ಸಿರ್ಧಾರ ಮಾಡಿತ್ತು. ಇದರ ಮುಂದಾಳತ್ವನ್ನು ರೂಪಾಂತರ ತಂಡದ ಚಂದ್ರುರವರು ವಹಿಸಿಕೊಂಡಿದ್ದರು. ನಾನು ಆ ದಿನ ಕರಿಬಸವಯ್ಯನವರ ನಾಟಕ ನೋಡಲಿಕ್ಕೆ ಕಲಾಕ್ಷೇತ್ರಕ್ಕೆ ಹೋಗಿದ್ದೆ. ಮುಖ್ಯವಾಗಿ ಅವರ ಹುಟ್ಟುಹಬ್ಬವನ್ನು ನೋಡುವ ಕಾತುರ ಕೂಡ ನನ್ನನ್ನು ಕಾಡಿತ್ತು. ರವೀಂದ್ರ ಕಲಾಕ್ಷೇತ್ರ ಇಡೀ ಜನರಿಂದ ತುಂಬಿ ಹೋಗಿತ್ತು. ಇನ್ನೂ ಹಲವಾರು ಜನರು ಸೀಟಿಲ್ಲದೇ ಹೊರಗಡೆ ಬಂದು ನಿಂತಿದ್ದರು. ಯಾವೊಬ್ಬ ರಾಜಕಾರಣಿ ಅಥವಾ ಸಿನಿಮಾ ಸ್ಟಾರ್ಗೂ ಅಷ್ಟೋಂದು ಜನಗಳು ಸೇರುವುದು ನಿಜಕ್ಕೂ ಅಪರೂಪ ಅಂತಹುದರಲ್ಲಿ ಕರಿಬಸವಯ್ಯನವರ 50ನೇ ಹುಟ್ಟಿದ ಹಬ್ಬದ ದಿನಕ್ಕೆ ಅಷ್ಟೊಂದು ಜನ ಸೇರಿದ್ದರು. ಅವರಾಗೆ ಕರಿಬಸವಯ್ಯನವರ ಮೇಲಿನ ಪ್ರೀತಿಯನ್ನಿಟ್ಟುಕೊಂಡು ಬಂದವರು.
ಕನ್ನಡ ಸಿನಿಮಾ ಉದ್ಯಮದ ಘಟಾನುಘಟಿ ನಟರುಗಳೆಲ್ಲಾ ಆ ದಿನ ಫ್ರೀ ಮಾಡಿಕೊಂಡು ಕಾರ್ಯಕ್ರಮಕ್ಕೆ ಬಂದು ಕರಿಬಸವಯ್ಯನವರಿಗೆ ಶುಭಕೋರಿದ್ದರು. ಅಂದು ಸೇರಿದ್ದ ಸಾವಿರಾರು ಜನರ ಪ್ರೀತಿಯನ್ನು ನೋಡಿ ಕರಿಬಸವಯ್ಯನವರ ಕಣ್ಣಲ್ಲಿ ನೀರು ತುಂಬಿತ್ತು. ಇಡೀ ಕಲಾಕ್ಷೇತ್ರದ ವೇದಿಕೆಯ ತುಂಬಾ ಕರಿಬಸವಯ್ಯನವರ ಅಭಿಮಾನಿಗಳು ಸೇರಿದ್ದರು. ಕೇವಲ ಸಾಮಾನ್ಯ ಪೋಷಕ ನಟ ಇಷ್ಟೊಂದು ಅಭಿಮಾನಿಗಳನ್ನು, ಜನರ ಪ್ರೀತಿಯನ್ನು ಹೊಂದಿದ್ದಾನೆ ಅಂದ ಮೇಲೆ ಆತನ ವ್ಯಕ್ತಿತ್ವ ಹೇಗಿರಬಹುದು, ಗೊತ್ತಾದರೂ ಅದನ್ನು ಹೇಗೆ ಬಣ್ಣಿಸುವುದು ಎಂಬುದು ನನಗೆ ಅರ್ಥವಾಗಲಿಲ್ಲ. ಕರಿಬಸವಯ್ಯನವರ ನಾಟಕವನ್ನು(ನಾಟಕದ ಹೆಸರು ಮರೆತುಹೋಗಿದೆ) ಜನ ತುಂಬಾ ಖುಷಿಪಟ್ಟು ಆರಾಧನೆ ಮಾಡಿದರು. ಅದರಲ್ಲಿ ನಾನೂ ಒಬ್ಬ. ಆ ದಿನ ವೇದಿಕೆಯಲ್ಲಿದ್ದ ಮಾಸ್ಟರ್ ಹಿರಣ್ಣಯ್ಯನವರು ಮಾತನಾಡಿ, `ಇಡೀ ಜಗತ್ತಿನಲ್ಲಿ ತನ್ನ ಹುಟ್ಟುಹಬ್ಬದ ದಿನವನ್ನು ನಾಟಕ ಮಾಡಿ ಅಭಿನಯಿಸುವುದರ ಮೂಲಕ ಆಚರಿಸಿಕೊಂಡ ಏಕೈಕ ನಟ ಕರಿಬಸವಯ್ಯ' ಅಂತ ಹೊಗಳಿದ್ದರು. ಆ ದಿನ ವೇದಿಕೆಯಲ್ಲಿ ಕರಿಬಸವಯ್ಯನವರ ತಾಯಿ ಹಾಗೂ ಅವರ ಶ್ರೀಮತಿಯನ್ನು ಸನ್ಮಾನ ಕೂಡ ಮಾಡಲಾಯಿತು. ಒಬ್ದ ಕಲಾವಿದನಿಗೆ ಇದಕ್ಕಿಂತ ದೊಡ್ಡ ಪುಣ್ಯ ಬೇಕಿಲ್ಲ ಅಂತ ಕರಿಬಸವಯ್ಯ ಅಲ್ಲಿ ಸೇರಿದ್ದ ಸಾವಿರಾರು ಜನರ ಮುಂದೆ ಹೇಳಿದ ಮಾತನ್ನು ಎಂದಿಗೂ ಮರೆಯುವಂತಿರಲಿಲ್ಲ. ಇಂದಿಗೂ ಅದು ನನ್ನ ಕಣ್ಣಮುಂದೆ ನಿನ್ನೆಯೋ, ಮೊನ್ನೆಯೋ ನಡೆದ ಹಾಗೆ ಭಾಸವಾಗುತ್ತಿದೆ.
ಅಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕಿಕ್ಕಿರಿದು ಕರಿಬಸವಯ್ಯನವರಿಗೆ ಹುಟ್ಟುಹಬ್ಬದಂದು ಶುಭಕೋರಲು ಬಂದಿದ್ದ ಸಾವಿರಾರು ಜನರು ಇಂದು ಅದೇ ಕಲಾಕ್ಷೇತ್ರದಲ್ಲಿ ಕರಿಬಸವಯ್ಯನವರ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಇಂದು ಕೂಡ ಸಾವಿರಾರು ಜನರು ಸೇರಿದ್ದರು ಕರಿಬಸವಯ್ಯನವರಿಗೆ ಅಂತಿಮ ನಮನ ಸಲ್ಲಿಸಲು...!
ವಿಧಿಲಿಖಿತ ಅಂದರೆ ಇದೇ ಅಲ್ಲವೇ...!
ಕರಿಬಸವಯ್ಯನವರ ಆತ್ನಕ್ಕೆ ಚಿರಶಾಂತಿ ಕೋರುತ್ತಾ, ಅವರ ನೆನಪು ಸದಾ ಹೀಗೆಯೇ ಇರುತ್ತೆ, ಅದನ್ನು ಯಾವುದೇ ಕಾರಣಕ್ಕೂ ಅಳಿಸಲಾಗುವುದಿಲ್ಲ.
ಶ್ರೀಧರ್ ಸಾರ್ ತುಂಬಾ ಚೆನ್ನಾಗಿದೆ. ಇನ್ನೂ ಹೊಸ ಮಾಹಿತಿ ಗಳಿದ್ದರೆ ಫಕೀರನ ಮನೆಯಲ್ಲಿ ಬರೆಯಿರಿ. ಪ್ಲೀಸ್ ಕಾಯುತ್ತಿರುತ್ತೇವೆ.
ReplyDeleteabhinandanegalu nimma preetige...
ReplyDeleteRegards
Phakira