ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ದೇಶನದ ಎರಡನೇ ಚಿತ್ರ ‘ರಣಧೀರ’ ಸಿನಿಮಾವನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೀರಿ. ಇಡೀ ಚಿತ್ರದ ಹಾಡುಗಳು ಇಂದಿಗೂ ಸೂಪರ್....! ಸಂಗೀತ ನಿರ್ದೇಶಕ ಹಂಸಲೇಖರ ಮ್ಯೂಸಿಕ್ ಮ್ಯಾಜಿಕ್ ಪ್ರೇಮಲೋಕದ ನಂತರ ರಣಧೀರದಲ್ಲಿಯೂ ಕೂಡ ಆಗಿತ್ತು. ಇಡೀ ಸಿನಿಮಾದಲ್ಲಿ ಒಂದು ಕೊಳಲಿನ ಟ್ಯೂನ್ ಇದೆ. ಅದನ್ನು ಇಡೀ ಸಿನಿಮಾದಲ್ಲಿ ಅಲ್ಲಲ್ಲಿ ಬಳಸಿಕೊಳ್ಳಲಾಗಿದೆ. ಚಿತ್ರದ ಕಥೆಯಲ್ಲಿ ನಾಯಕ ಕೊಳಲಿನಿಂದ ಆ ಟ್ಯೂನನ್ನು ನುಡಿಸುತ್ತಿರುತ್ತಾನೆ.. ಈ ಕೊಳಲಿನ ಟ್ಯೂನ ನ್ನು ಇಟ್ಟುಕೊಂಡು ಹಂಸಲೇಖ `ಒಂದಾನೊಂದು ಕಾಲದಲ್ಲಿ ಆರಂಭ…’’ ಅನ್ನುವ ಹಾಡನ್ನು ಕೂಡ ಬರೆದಿದ್ದರು. ಆ ಹಾಡು ಸಿನಿಮಾದ ಕೊನೆಯಲ್ಲಿ ಬರುತ್ತದೆ. ಈ ಕೊಳಲಿನ ಟ್ಯೂನ್ ಇಂದಿಗೂ ಎಲ್ಲರ ಅಚ್ಚುಮೆಚ್ಚು. ಹಾಗೆಯೇ ಜಗತ್ಪ್ರಸಿದ್ದವಾಗಿದೆ ಕೂಡ. ಕರ್ನಾಟಕದಲ್ಲಿ ಹೆಚ್ಚಿನವರು ಈ ಟ್ಯೂನನ್ನು ಹಂಸಲೇಖ ಕಂಪೋಸ್ ಮಾಡಿದ್ದಾರೆ ಅಂತ ತಿಳಿದುಕೊಂಡಿದ್ದಾರೆ. ಆದರೆ ಹಂಸಲೇಖ ಆ ಟ್ಯೂನನ್ನು ಕಂಪೋಸ್ ಮಾಡಿರಲಿಲ್ಲ. ಈ ಟ್ಯೂನ್ನ ಮೂಲ ಸೃಷ್ಟಿಕರ್ತರು ಯಾರು ಅನ್ನುವುದರ ಬಗ್ಗೆ ದೊಡ್ಡ ಕಥೆ ಇದೆ.ವಾಸ್ತವವಾಗಿ ನೋಡಿದಾಗ ಈ ಟ್ಯೂನಿನ ಹಿನ್ನಲೆ ಹೀಗಿದೆ.
ರವಿಚಂದ್ರನ್ `ಪ್ರೇಮಲೋಕ’ ಸಿನಿಮಾದ ನಂತರ ಇಡೀ ಭಾರತದಾದ್ಯಂತ ಜನಪ್ರಿಯವಾಗಿದ್ದರು. ಮಿಸ್ ಇಂಡಿಯಾ ಆಗಿದ್ದ ಜೂಹಿ ಚಾವ್ಲಾಳನ್ನು ಮೊದಲ ಬಾರಿ ದಕ್ಷಿಣ ಚಿತ್ರೋದ್ಯಮ ಅದರಲ್ಲೂ ಕನ್ನಡ ಸಿನಿಮಾ ಮೂಲಕ ಜೂಹಿಯನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ್ದರು. ಅತಿ ಕಡಿಮೆ ವಯಸ್ಸಿನಲ್ಲಿ ಅಂದರೆ ಸುಮಾರು 26 ನೇ ವಯಸ್ಸಿನಲ್ಲಿ ರವಿಚಂದ್ರನ್ ಪ್ರೇಮಲೋಕ ಸಿನಿಮಾವನ್ನು ನಿರ್ದೇಶನ, ನಿರ್ಮಾಣ ಮಾಡುವುದರ ಜೊತೆಗೆ ನಾಯಕರಾಗಿಯೂ ಕೂಡ ಅಭಿನಯಿಸಿದ್ದರು. ಇಡೀ ಸಿನಿಮಾ ಭಾರತದಾದ್ಯಂತ ಜನಪ್ರಿಯವಾಗಿತ್ತು. ಎಲ್ಲ ಸಿನಿಮಾ ಉದ್ಯಮದಲ್ಲಿ ಪ್ರೇಮಲೋಕದ ಬಗ್ಗೆ ಚರ್ಚೆ ಕೂಡ ಆರಂಭವಾಗಿತ್ತು. ತಮಿಳು, ಹಿಂದಿ ಚಿತ್ರರಂಗದ ಘಟಾನುಘಟಿಗಳು ಕೂಡ ಈ ಸಿನಿಮಾದ ಪ್ರಿಂಟನ್ನು ತರಿಸಿಕೊಂಡು ನೋಡಿದ್ದರು. ಈ ಸಿನಿಮಾದ ನಂತರ ರವಿಚಂದ್ರನ್ ಅವರನ್ನು ಕನ್ನಡದ ಶೋ ಮ್ಯಾನ್ ರಾಜ್ ಕಪೂರ್ ಅಂತ ಮಾಧ್ಯಮಗಳು ಕರೆದವು. ಹಾಡುಗಳ ಮೂಲಕವೇ ಇಡೀ ಸಿನಿಮಾದ ಕಥೆಯನ್ನು ಹೇಳಬಹುದು ಅನ್ನುವುದನ್ನು ರವಿಚಂದ್ರನ್ ಹಾಗೂ ಹಂಸಲೇಖ ನಿರೂಪಿಸಿದ್ದರು, ಸಾಧಿಸಿ ತೋರಿಸಿದ್ದರು. ‘ಪ್ರೇಮಲೋಕ’ ಚಿತ್ರ ತಮಿಳಿಗೂ ಕೂಡ ಡಬ್ ಆಗಿತ್ತು. ಖ್ಯಾತ ನಿರ್ದೇಶಕ ಮಣಿರತ್ನಂರ ಅಣ್ಣ ‘ಜೀವಿ’( ಜಿ ವೆಂಕಟರಾಮನ್) ಈ ಚಿತ್ರವನ್ನು ತಮಿಳಿಗೆ ಡಬ್ ಮಾಡಿ ಬಿಡುಗಡೆ ಮಾಡಿದ್ದರು, ಜೀವಿ ಪ್ರೇಮಲೋಕ ಸಿನಿಮಾಕ್ಕೆ ಫೈನಾನ್ಸ್ ಮಾಡಿದ್ದರು. ಹಾಗಾಗಿ ರವಿಚಂದ್ರನ್ ಈ ಸಿನಿಮಾವನ್ನು ಜೀವಿಗೆ ನೀಡಿದ್ದರು. ಪ್ರೇಮಲೋಕದ ನಂತರ ಕನ್ನಡ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆ ಸಿಕ್ಕಿತ್ತು. ರವಿಚಂದ್ರನ್ ದಕ್ಷಿಣ ಭಾರತದ ಜನಪ್ರಿಯ ಹಿರೋ ಆಗಿಬಿಟ್ಟರು.
ರವಿಚಂದ್ರನ್ ತಮ್ಮ ಎರಡನೇ ನಿರ್ದೇಶನದ ಸಿನಿಮಾಕ್ಕೆ ಹಿಂದಿಯಲ್ಲಿ ಜಾಕಿಶ್ರಾಫ್ ಅಭಿನಯಿಸಿದ್ದ ಸುಭಾಷ್ ಘೈ ನಿರ್ದೇಶನದ `ಹಿರೋ’ ಸಿನಿಮಾದ ಕಥೆಯನ್ನು ಆಯ್ಕೆಮಾಡಿಕೊಂಡಿದ್ದರು. ಹಿಂದಿಯಲ್ಲಿ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಹಿಂದಿಯ `ಹಿರೋ’ ಚಿತ್ರ ಕನ್ನಡದಲ್ಲಿ `ರಣಧೀರ’ ಆಗಿ ರಿಮೇಕ್ ಆಗಿತ್ತು. 1983ರಲ್ಲಿ ಬಿಡುಗಡೆಯಾಗಿದ್ದ `ಹಿರೋ’ ಸಿನಿಮಾದ ಎಲ್ಲ ಹಾಡುಗಳು ದೊಡ್ಡ ಹಿಟ್ ಅಗಿದ್ದವು. ಲಕ್ಷ್ಮಿಕಾಂತ್ ಪ್ಯಾರೆಲಾಲ್ ಜೋಡಿ ಈ ಚಿತ್ರಕ್ಕೆ ಸಂಗೀತ ನೀಡಿತ್ತು. ಮೂಲ ಚಿತ್ರದಲ್ಲಿದ್ದ ಈ ಕೊಳಲಿನ ಟ್ಯೂನನ್ನು ರವಿಚಂದ್ರನ್ ರಣಧೀರದಲ್ಲಿಯೂ ಬಳಸಿಕೊಂಡರು. ಇದರ ಹೊರತಾಗಿ ಹಂಸಲೇಖ ಎಲ್ಲ ಹಾಡುಗಳನ್ನು ಹೊಸದಾಗಿ ಕಂಪೋಸ್ ಮಾಡಿದರು.
ಕನ್ನಡದವರು ಈ ಕೊಳಲಿನ ಟ್ಯೂನನ್ನು ಹಂಸಲೇಖ ಕಂಪೋಸ್ ಮಾಡಿದ್ದಾರೆ ಅಂತ ಅಂದುಕೊಂಡಿದ್ದರೆ,
ಹಿಂದಿಯವರು ಹಿರೋ ಸಿನಿಮಾದಲ್ಲಿನ ಈ ಟ್ಯೂನನ್ನು ಲಕ್ಷ್ಮಿಕಾಂತ್- ಪ್ಯಾರೆಲಾಲ್ ಕಂಪೋಸ್ ಮಾಡಿದ್ದಾರೆ ಅಂತ ತಿಳಿದುಕೊಂಡಿದ್ದಾರೆ. ಹೆಚ್ಚಿನವರಿಗೆ ಗೊತ್ತಿಲ್ಲದ ಸಂಗತಿಯೆಂದರೆ ಈ ಕೊಳಲಿನ ಟ್ಯೂನನ್ನು ಕಂಪೋಸ್ ಮಾಡಿದವರು ಅಂತರಾಷ್ಟ್ರೀಯ ಖ್ಯಾತಿಯ ಕೊಳಲುವಾದಕ `ಪಂಡಿತ್ ಹರಿಪ್ರಸಾದ್ ಚೌರಾಸಿಯಾ’.
ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಈ ಕೊಳಲಿನ ಟ್ಯೂನನ್ನು ಕಂಪೋಸ್ ಮಾಡಿಇಟ್ಟುಕೊಂಡಿದ್ದರು. ಅವರ ಕೆಲವು ಕಾರ್ಯಕ್ರಮಗಳಲ್ಲಿ ಇದನ್ನು ನುಡಿಸಿದ್ದರು ಕೂಡ. ತಮಗೆ ಇಷ್ಟವಾಗಿದ್ದ ಈ ಟ್ಯೂನನ್ನು, ಪ್ರೀತಿಯ ಸ್ನೇಹಿತರಾಗಿದ್ದ ಟ್ಯೂನನ್ನು ಲಕ್ಷ್ಮಿಕಾಂತ್- ಪ್ಯಾರೆಲಾಲ್ ಜೋಡಿಗೆ ನೀಡಿದ್ದರು. ಈ ಜೋಡಿ ಈ ಟ್ಯೂನನ್ನು ಹಿರೋ ಚಿತ್ರದ ನಾಯಕನ ಪಾತ್ರಕ್ಕೆ ಬಳಸಿಕೊಂಡರು. ಚಿತ್ರದ ಕಥೆಯಲ್ಲಿ ನಾಯಕನಿಗೆ ಕೊಳಲು ಅಂದರೆ ಇಷ್ಟ. ಆತನ ಕೊಳಲಿನಿಂದ
ಸದಾ ಹೊರಹೊಮ್ಮುವುದೇ ಈ ಟ್ಯೂನ್. ರವಿಚಂದ್ರನ್ ಕೂಡ ಈ ಟ್ಯೂನನ್ನು ತಮ್ಮ ಚಿತ್ರದಲ್ಲಿ ಬಳಸಿಕೊಂಡರು.
ನಾವು ನೀವು ಎಲ್ಲರೂ ಮೆಚ್ಚಿದ್ದ ರಣಧೀರ ಸಿನಿಮಾದ ಟ್ಯೂನನ್ನು ನೀಡಿದವರು ಅಂತರಾಷ್ಟ್ರೀಯ ಖ್ಯಾತಿಯ ಕೊಳಲುವಾದಕ ಪಂಡಿತ್ ಹರಿಪ್ರಸಾದ್ ಚೌರಾಸಿಯಾ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಈ ಹಾಡಿನ ಬಗ್ಗೆ ಮಾತನಾಡುವಾಗ ಕನ್ನಡದಲ್ಲಿ ಹಂಸಲೇಖರನ್ನು ನೆನಪಿಸಿಕೊಂಡರೆ, ಹಿಂದಿಯವರು ಲಕ್ಷ್ಮಿಕಾಂತ್- ಪ್ಯಾರೆಲಾಲ್ ರನ್ನು ನೆನಪಿಸಿಕೊಳ್ಳುತ್ತಾರೆ. ಈ ಟ್ಯೂನ್ ನ ಮಾತು ಬಂದಾಗ ಹರಿಪ್ರಸಾದ್ ರ ಹೆಸರು ಬರುವುದು ತುಂಬಾ ಅಪರೂಪ. ಹೀಗೆ ಹರಿಪ್ರಸಾದ ಚೌರಾಸಿಯಾ ಅವರ ಕ್ಲಾಸಿಕ್ ಟ್ಯೂನ್ ಕಮರ್ಷಿಯಲ್ ಟ್ಯೂನ್ ಆಗಿ ಹಿಂದಿಯ `ಹಿರೋ’ ಹಾಗೂ ಕನ್ನಡದ `ರಣಧೀರ’ ಚಿತ್ರದ ಮೂಲಕ ಗೆದ್ದ ಹಿಂದಿನ ಕಥೆ.