Sunday, 24 February 2013

ಸಾಹಿತ್ಯವೆಂಬುದು ತಪಸ್ಸು


ಸಾಹಿತ್ಯದ ಪ್ರತಿ  ಪ್ರಕಾರದ  ಬರವಣಿಗೆಯು  ಒಂದು  ತಪಸ್ಸಿದ್ದಂತೆ. ಬರೆದ ಕಾಗದಗಳ ಮೇಲೆ ಸಾಕ್ಷಾತ್ ಸರಸ್ವತಿಯೇ ಪ್ರತ್ಯಕ್ಷಳಾಗುತ್ತಾಳೆ. ತಾಯಿಯನು ಒಲಿಸಿಕೊಂಡವನ ಮುಖದಲಿ ಗೆಲುವಿನ ಅಕ್ಷರಗಳು . ಅಕ್ಷರಗಳನು ಗೆದ್ದವ ಮೊದಲು ತನ್ನನ್ನೇ ಗೆಲ್ಲುತ್ತಾನೆ. ತನ್ನನ್ನು ಜಯಿಸಿಕೊಂಡವನಿಗೆ ಲೋಕವೇ ಆತನಿಗೆ ಶರಣಾಗುತ್ತದೆ.ಓದಿ ಓದಿ ಬರೆದು ಬರೆದು ಮರುಳಾಗದೇ, ವಾಗ್ಧೇವಿಯ ಮಕ್ಕಳಾಗೋಣ


Friday, 22 February 2013

ಭಯದ ನೆರಳು


ಭಯದ ನೆರಳು ಬೆಂಬತ್ತಿ ಕಾಡದೇ ಇದ್ದರೆ, ನಾವೆಲ್ಲ ನಿಂತ ಜಾಗದಲ್ಲೆ ನಿಲ್ಲಬೇಕಾಗುತ್ತದೆ. ಓಡುವವನನಿಗೂ ಭಯ, ಎಲ್ಲಿ ಪಕ್ಕದವನು ನನ್ನ ಮುನ್ನುಗ್ಗಿ ಹೋಗುವನುಭಯ ಗೆಲುವನ್ನು ತಂದುಕೊಡುತ್ತೆ, ಗೆಲುವು ಜೀವನವನ್ನು ಸುಂದರವಾಗಿಸುತ್ತೆ. ಭಯ ಪಾಪಪ್ರಜ್ಞೆಯನ್ನು ಕಟ್ಟಿಕೊಡುತ್ತೆ. ಪಾಪಪ್ರಜ್ಷೆ ಮುಕ್ತಿಗೆ ಹಪಹಪಿಸುತ್ತದೆ. ತಾಯಿ ಮಗುವನ್ನು ಹೆರುವಾಗಲು ಭಯ ಪಡಲೆಬೇಕು. ಆಕೆ ಕ್ಷಣ ಭಯ ಪಡದೇ ಇದ್ದರೇ ಮಗುವಿನ ಜೀವಕ್ಕೆ ಅಪಾಯಬೇಟೆಯಾಡುವ ಸಿಂಹಕ್ಕೆ ಕಾಡು ಹಂದಿಯ ಹಲ್ಲುಗಳೇ ಭಯಒಂದೊಂದು ಜೀವಕ್ಕೂ ಒಂದೊಂದು ಭಯದ ಮಿತ್ರ. ಭಯದ ಪರಿಧಿ ಇರಲೇಬೇಕು. ಭಯದ ವಿಸ್ತರಣೆಗೆ ಅಕ್ಷರದ ಮಿತಿಯಿಲ್ಲ,

Friday, 15 February 2013

ಮೆಟ್ನ್ಯಾಗ ಹೊಡಿಸ್ಕಡ್ಹಂಗೆ..!


ಸಣ್ಣ ಕತೆ


 ಸಿಟ್ಟು ನನ್ನ ಮೇಲೆ ನನಗೆ ಸಿಟ್ಟು... ನನ್ನೊಳಗಿನ ಮನುಷ್ಯನನ್ನು ಕೊಂದು ಬಿಡುವಷ್ಟು ಸಿಟ್ಟು... ಹುಟ್ಟಿಸಿದ ಪಿತಾಮಹ ಕಾಣದ ದಿಕ್ಕಿಗೆ ಹೋದಾಗಿನಿಂದ ನನಗೆ ಎಲ್ಲಿಂದ ಹುಟ್ಟಿತೋ ಸಿಟ್ಟು ನಾನ್ಯಾಕೆ ಹುಟ್ಟಿದೆ ಎಂಬ ಸಿಟ್ಟು. ಬೆಂಗಳೂರಿಗೆ ಬಂದು ವರ್ಷವಾದರೂ ಕೆಲಸ ಸಿಗಲಿಲ್ಲವೆಂಬ ಸಿಟ್ಟು. ಅಲೆದು ಅಲೆದು ಚಪ್ಪಲಿ ಸವೆಯಿತು ಎಂಬ ಸಿಟ್ಟು. `ಕೆಲಸ ಇನ್ನೂ ಸಿಗಲಿಲ್ಲವೇನೋ' ಅಂಥ ಅಮ್ಮ ಕೇಳಿದಾಗಲೆಲ್ಲಾ ಸಿಟ್ಟು..ಅವಳು ಕಷ್ಟಪಟ್ಟು ಕೂಲಿ ನಾಲಿ ಮಾಡಿ ಓದಿಸಿದ್ದಕ್ಕೆ  ಪ್ರತಿಫಲ ನಿರೀಕ್ಷಿಸುವುದು ತಪ್ಪೇನು ಅಂಥ ಅರಿವಾದಾಗಲೂ ಬಂದ ಸಿಟ್ಟು...! `ನೈಸ್' ರಸ್ತೆಯಲ್ಲಿ ಓಡಾಡಿದರೂ ಎಲ್ಲಿ ಎಡವಿ ಬೀಳುತ್ತೇನೆಂಬ ಭಯ. ಹೆಜ್ಜೆ ಹೆಜ್ಜೆಗೂ ನನಗೆ ಸನ್ನೇ ಹಾಕಿ ಬೀಳಿಸಿ ಮಜಾ ತೊಗೋಳ್ಳುತ್ತಿದ್ದ ಶನಿ ಮಹಾರಾಜ ! ನಾನು ಕೂರಲು ಏಳಲು ಆಗದ ಹಾಗೆ ಓಂಥರಾ ಮೂಲವ್ಯಾಧಿಯ ಥರ ಹೊಕ್ಕು ಕೂತಿದ್ದ .
ಕೆಲಸ ಮಾಡುತ್ತಿದ್ದೆ ಒಂದು ಕಡೆ. ಅದು ಅನಿವಾರ್ಯ. ಹೊಟ್ಟೆಗೆ,ರೂಮಿಗೆ ಕಾಸು ಬೇಕಾಗಿತ್ತು. ಇಲ್ಲದಿದ್ದರೆ  ಮತ್ತದೇ ತಣ್ಣೀರುಅಯ್ಯಪ್ಪನ ಪ್ರಸಾದ. ಹಾಗಾಗಿಯೇ ಸಹಿಸಿಕೊಂಡು ಹಲವು ತಿಂಗಳು ನಮ್ಮ ಬಾಸ್ನ ಹತ್ತಿರ ಕೆಲಸ ಮಾಡಿದೆ.   ಬಾಸ್ನನ್ನು ನೆನೆಸಿಕೊಂಡಾಗಲೆಲ್ಲಾ ನನಗೆ ನೆನಪಾಗುವ ಒಂದು ಶಬ್ದವೆಂದರೆ `ಅವನೊಬ್ಬ ಬೋ----' ಮನೆಯಲ್ಲಿನ ಹೆಂಡತಿಯ ಮೇಲಿನ ಸಿಟ್ಟನ್ನು, `ಪ್ರೀತಿಯನ್ನ' ನನ್ನ ಮೇಲೆ ಕಾರುತ್ತಿದ್ದ. ಅನುಭವಿಸಿದೆ. ನರಕಯಾತನೆ, ಅವನ ಜೊತೆ. ಅನಿವಾರ್ಯ. ಬಿಟ್ಟರೆ ಹೊಟ್ಟೆಪಾಡಿಗೆ ಮತ್ತದೇ... ಆದರೂ ನನ್ನೊಲ್ಲೊಬ್ಬ ಅಲೆಗ್ಸಾಂಡರ್ (ಸ್ವಾಭಿಮಾನಿ) ಇದ್ದ. ಧೈರ್ಯದ, ವೀರಾವೇಶದ ರಕ್ಕಸದ ಯೋಧ ಆತ. ನಾನು ಸಹಿಸಿದರೂ ಅವನು ಸಹಿಸಲಿಲ್ಲ, ಕೊನೆಗೊಂದು ದಿನ ಅವನ ಜೊತೆ ಯುದ್ದಕ್ಕೆ ನಿಂತೇಬಿಟ್ಟ. ಅಂದು ಅವನು  ನಾಯಿಯಂತೆ ಬೊಗಳಿದ. ನಾನು ಜೋರಾಗಿ ಬೊಗಳಿದೆ. ಕೊನೆಗೆ ಎರಡು ನಾಯಿಗಳು ಬಾಲಮುದುರಿಕೊಂಡು ದೂರ ಸರಿದವು. ಕೆಲಸ ಮಾಡಿದ್ದ ಇಪ್ಪತ್ತೈದು ದಿನಗಳ ಸಂಬಳ ಕೂಡ ಆಲೆಗ್ಸಾಂಡರ್ನಿಂದ ಖೋತಾ ಆಗಿತ್ತು.

ಮುಂದೇನು ಅಂತ ಯೋಚಿಸುತ್ತಾ, ಬಸ್ಸಲ್ಲಿ ಬರದೇ ಚಿಲ್ಲರೇ ಕಾಸು ಉಳಿಸಲು ನಡೆದುಕೊಂಡೇ ಬರುತ್ತಿದ್ದೆ. ಅಬ್ಬಾ..! ದಾರಿಯಲ್ಲಿ ಐನೂರು ರೂಪಾಯಿಯ ನೋಟು... ಹೌದು ಅದೇ ಗಾಂಧಿ ತಾತ ನಗುತ್ತಿದ್ದಾನೆ. ಐನೂರು ರೂಪಾಯಿ ಐವತ್ತು ಸಾವಿರದಂತೆ ಕಂಡಿತ್ತು. ಅಂಥೂ ದೇವರು ನನ್ನ ಮೇಲೆ ಕರುಣೆ ತೋರಿಬಿಟ್ಟ ಅಂದುಕೊಂಡೆ. ತಿಂಗಳ ಖರ್ಚು  ಬಾಬ್ತಿಯಾಯಿತು. ಮಾಡಿಕೊಂಡ ಇನ್ನೂರು ರೂಪಾಯಿ ಸಾಲ ತೀರಿಸಿದರಾಯಿತು. ಇನ್ನೈವತ್ತು ಸಿಗರೇಟಿಗಾಯಿತು. ಕ್ಷಣ ನನ್ನಲ್ಲಿಯ ಅಲೆಗ್ಸಾಂಡರ್ ಯುದ್ದಗೆದ್ದ ಹುಮ್ಮಸ್ಸಿನಲ್ಲಿದ್ದ. ಕಾಲಡಿಯಲ್ಲಿದ್ದ ಐನೂರು ರೂಪಾಯಿ ನನ್ನಲ್ಲಿ ಸಾವಿರ ಆಸೆಗಳನ್ನ ಹುಟ್ಟಿಸಿತ್ತು. ಮೂಲವ್ಯಾಧಿ ಹೋಯಿತೆಂಬ ಸಂತೋಷ. ಪಟ್ಟನೇ ನೋಟನ್ನ ಎತ್ತಿಕೊಂಡು ಜೇಬಿನಲ್ಲಿಟ್ಟುಕೊಂಡೆ. ಅಬ್ಬಾ...ಯಾರೂ ನೋಡಿಲ್ಲ ಅಂದುಕೊಂಡೆ. ಒಂದು ನಿಮಿಷ ಹಾಗೆ ನಿಂತೆ. ನನ್ನ ಸುತ್ತಲೂ ಹತ್ತಿಪ್ಪತ್ತು ಕಾಲೇಜು ಹುಡುಗ ಹುಡುಗಿಯರು. ಯಾವುದೋ ಟೀವಿ ಮಾಧ್ಯಮದವರು ಮತ್ತು ಜನರು ನನ್ನನ್ನು ನೋಡಿ `ಬಕ್ರಾ.. ಬಕ್ರಾ..'  ಎಂದು ಕೂಗಲಾರಂಭಿಸಿದರು. ಬಂದವರೇ ನನ್ನ ತಲೆಗೆ ಯಾವುದೋ ಟೋಪಿ ಇಟ್ಟರು. ಬಾಯಿಗೆ ಮೈಕು ಹಿಡಿದರು. ಹೆಸರೇನಂದರು..ಜೇಬಲ್ಲಿದ್ದ ಐನೂರು ರೂಪಾಯಿ ಕಿತ್ತುಕೊಂಡರು. ಯಾವಾಗಲೂ ಮೂಗಿನ ತುದಿಯಲ್ಲಿರುತ್ತಿದ್ದ ನನ್ನ ಸಿಟ್ಟು, ಅಂದು ನನ್ನ ಮುಕುಳಿಯ ಅಂಡಿನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಸುತ್ತಲಿನ ಎಲ್ಲ ಹುಡುಗ ಹುಡುಗಿಯರು ಮತ್ತೊಮ್ಮೆ ನನ್ನ ನೋಡಿ ಕಿಸಿ ಕಿಸಿ ನಕ್ಕರು. ಪಕ ಪಕ ಫೋಟೋ ತೆಗೆದರು. ಕ್ಯಾಮೆರಾ ತೋರಿಸಿ `ಸ್ಮೈಲ್ ಪ್ಲೀಸ್' ಅಂದರು.
ನಾನು ನಗುತ್ತಿದ್ದೆ.
ಒಳಗಿನ ಅಲೆಗ್ಸಾಂಡರ್ ಅಳುತಲಿದ್ದ.