Wednesday 11 July 2012

ಜಾತಿ ರಾಜಕೀಯದ ನಡುವೆ ಜಾತಿ ಇಲ್ಲದವನ ಪಾಡು..!


ಮೊನ್ನೆ ರಾಜ್ಯ ಒಕ್ಕಲಿಗರ ಸಮಾವೇಷ ಅದ್ದೂರಿಯಾಗಿ ನೇರವೇರಿತು. ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರಿಗೆ ಗುರುವಂದನೆ ಸಲ್ಲಿಸಲಾಯಿತು. ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಒಕ್ಕಲಿಗರ ಘಟಾನಘಟಿ ನಾಯಕರುಗಳನ್ನೆಲ್ಲಾ ಒಂದೇ ವೇದಿಕೆಯಲ್ಲಿ ಕೂರಿಸಲಾಗಿತ್ತು. ಒಕ್ಕಲಿಗರ ಬೇರೆ ಬೇರೆ ಮಠದ ಸ್ವಾಮೀಜಿಗಳು ಕೂಡ ಒಂದೇ ವೇದಿಕೆಯಲ್ಲಿ ಸೇರಿಕೊಂಡಿದ್ದು ದಿನದ ವಿಶೇಷವಾಗಿತ್ತು. ಒಕ್ಕಲಿಗರಲ್ಲಿ ಮೂರ್ನಾಲ್ಕು ಪಂಗಡಗಳಿದ್ದರೂ ನಾವೆಲ್ಲಾ ಒಂದೇ ಅಂತ ತೋರಿಸುವ ಪ್ರಯತ್ನ ಹಾಗೂ ರಾಜಕೀಯ ಪಕ್ಷಗಳ ನಡುವೆಯೂ ಒಕ್ಕಲಿಗರು ಒಂದು ತೋರಿಸವ ಪ್ರಯತ್ನ ಕೂಡ ಮಾಡಲಾಯಿತು. ಮುಖ್ಯಮಂತ್ರಿ ಸದಾನಂದ ಗೌಡರು ತಮಗೆ ಮುಖ್ಯಮಂತ್ರಿ ಪಟ್ಟ ಸಿಕ್ಕಿದ್ದೇ ತಾವು ಒಕ್ಕಲಿಗ ಅನ್ನುವ ಕಾರಣ ಅಂತ ಸಭೆಯಲ್ಲಿ ಉದ್ಗೋಷಿಸಿದರು. ಇಂತಹ ಒಂದು ಜಾತಿಯ ಸಮಾವೇಷ ಈಗಿನ ಕಾಲಘಟ್ಟಕ್ಕೆ , ಈಗಿನ ರಾಜಕೀಯ ಪರಿಸ್ಥಿತಿಗೆ ಬೇಕೆತ್ತೇ ಅನ್ನುವ ಪ್ರಶ್ನೆ ನಮ್ಮನ್ನು ಕಾಡಿದರೂ ಕರ್ನಾಟಕದಲ್ಲಿ ಒಕ್ಕಲಿಗರಂತೆ ಪ್ರಾಬಲ್ಯರಾಗಿ ಬೆಳೆದುನಿಂತಿರುವ ಲಿಂಗಾಯತರು ಕೂಡ ಇದಕ್ಕೆ ಸರಿಸಮನಾಗಿ,ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ಮುಂದಾಳತ್ವದಲ್ಲಿ ದೊಡ್ಡ ರಾಜಕೀಯ ಸಮಾವೇಷವನ್ನು ಮುಂದಿನ ದಿನಗಳಲ್ಲಿ ಒಕ್ಕಲಿಗರಿಗೆ ಸಮಾನವಾಗಿ ಮಾಡಬಹುದು. ಒಕ್ಕಲಿಗರಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ, ಬೆಳೆದ ನಾಯಕರಂತೆ, ಲಿಂಗಾಯತರಲ್ಲಿಯೂ  ಕೂಡ ಪ್ರಬಲವಾಗಿ ಬೆಳೆದ ನಾಯಕರಿದ್ದಾರೆ. ಅವರು ಕೂಡ ಮುಂದಿನ ದಿನಗಳಲ್ಲಿ ತಯಾರಾಗಬಹುದು. ಒಕ್ಕಲಿಗ, ಲಿಂಗಾಯತ ಸಮುದಾಯಗಳ ಸಮಾವೇಷಗಳು ನಡೆದಂತೆ ಇತರ ಪ್ರಬಲ ಜಾತಿಗಳಾದ ಕುರುಬ, ಈಡಿಗ, ಬ್ರಾಹ್ಮಣ ಹಾಗೂ ಅಲ್ಪಸಂಖ್ಯಾತ ಜಾತಿಗಳು ಕೂಡ ತರಹದ ಸಮಾವೇಷಗಳನ್ನು ಹಮ್ಮಿಕೊಂಡು ತಾವು ಕೂಡ ರಾಜ್ಯ ಹಾಗೂ ಕೇಂದ್ರ ರಾಜಕೀಯದಲ್ಲಿ ಒಂದಾಗಿದ್ದೇವೆ ಅಂತ ಹೇಳಬಹುದು. ಇವೆಲ್ಲಾ ಕರ್ನಾಟಕದಲ್ಲಿ ಈಗಾಗಲೇ ಬೆಳೆದಿರುವ ಪ್ರಬಲ ಜಾತಿಗಳ ನಡುವಿನ ರಾಜಕೀಯ ವೈಷಮ್ಯವನ್ನು ತೋರ್ಪಡಿಸುತ್ತದೆ ವಿನಹ ಎಲ್ಲ ಜಾತಿಗಳು ಒಂದು ಅನ್ನುವ ನಿಲುವನ್ನು ಒತ್ತಿ ಹೇಳುವುದಿಲ್ಲ. ಕೇವಲ ಪ್ರಬಲ ಜಾತಿಗಳನ್ನು ಬಿಟ್ಟು ಇರುವ ನೂರಕ್ಕೂ ಹೆಚ್ಚು ಇತರ ಜಾತಿಗಳ ಬೆಳವಣಿಗೆಗೆ, ಇದುವರೆಗೆ ನಾಡನ್ನು ಆಳಿದ ನಾಯಕರ ಕೊಡುಗೆಯಾದರೂ ಏನು?    ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ 150 ಶಾಸಕರು, 20 ರಿಂದ 25 ಲೋಕಸಭೆ ಸ್ಥಾನಗಳನ್ನು ಗೆಲ್ಲಿಸುತ್ತೇನೆ. ನನಗೆ ಅಧ್ಯಕ್ಷ ಸ್ಥಾನದ ಹೊರತಾಗಿ ಬೇರೆ ಯಾವ ಹುದ್ದೆಯೂ ಬೇಡ. ಕಾಂಗ್ರೇಸ್ನಲ್ಲಿ ವಿರೇಂದ್ರ ಪಾಟೀಲರ ನಂತರ ವೀರಶೈವರಿಗೆ ಹೆಚ್ಚಾಗಿ ಪ್ರಾತಿನಿಧ್ಯ ಸಿಗುತ್ತಿಲ್ಲ. ರಾಜ್ಯದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವ ವೀರಶೈವರನ್ನು ಕಾಂಗ್ರೇಸ್ ನಿರ್ಲಕ್ಷಿಸಿದೆ ಅಂತ ಕೆಪಿಸಿಸಿಯ ಖಚಾಂಚಿ ಶಾಮನೂರು ಶಿವಶಂಕರಪ್ಪ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದರೆ. ಬಿಜೆಪಿಯಲ್ಲಿ ಯಡಿಯೂರಪ್ಪರವರನ್ನು ಕೈಬಿಟ್ಟರೆ ಬಿಜೆಪಿಯ ಲಿಂಗಾಯತ ಮತಗಳು ಕೈ ಬಿಟ್ಟು ಬೇರೆ ಪಕ್ಷಗಳಿಗೆ ಹೋಗುತ್ತವೆ. ಇನ್ನು ಉಳಿದ ಪಕ್ಷಗಳ ಸ್ಥಿತಿಗತಿಯೂ ಅಷ್ಟಕಷ್ಟೇ. ಹಾಗಾದರೆ ಕರ್ನಾಟಕದಲ್ಲಿ ಇವಿಷ್ಟೇ ಜಾತಿಗಳು ಮಾತ್ರ ಇವೆಯೇ? ಬೇರೆ ಜಾತಿಗಳಿಲ್ಲವೇ? ಒಕ್ಕಲಿಗ, ಲಿಂಗಾಯತ, ಕುರುಬ, ಈಡಿಗ, ಪರಿಶಿಷ್ಟಜಾತಿ, ಅಲ್ಪಸಂಖ್ಯಾತರು ಇತ್ಯಾದಿ ಇತ್ಯಾದಿ ಜಾತಿಗಳು ಮಾತ್ರ ರಾಜಕೀಯ ಅಧಿಕಾರ, ಸಕರ್ಾರಿ ನಿಲುವುಗಳಿಂದ ವಂಚಿತರಾಗುತ್ತಿದ್ದಾರೆಯೇ? ಸಮುದಾಯಗಳನ್ನು ಹೊರತುಪಡಿಸಿ ಇರುವ ನೂರಾರು ಜಾತಿಗಳು ಬೇರೆ ಯಾರನ್ನು ತಮ್ಮ ನಾಯಕರು ಅಂತ ಹೇಳಿಕೊಳ್ಳಬೇಕು, ದಯವಿಟ್ಟು ನಮ್ಮ ಕಡೆ ನೋಡಿ, ನಮಗೂ ಅಧಿಕಾರ ಕೊಡಿ ಅಂತ ಧೈನ್ಯತೆಯಿಂದ ಕೇಳಿಕೊಳ್ಳಬೇಕೆ? ಪ್ರತಿಬಾರಿಯೂ ಟಿಕೇಟು ಹಂಚಿಕೆಯಾಗುವಾಗ ತರಹದ ಲೆಕ್ಕಚಾರದಲ್ಲೇ ಮುಳುಗಿ ಸಮಾಜವಾದ, ಜಾತ್ಯಾತೀತದ ತತ್ವಗಳಿಗೆ ಬೆಲೆ ಇಲ್ಲದಂತಾಗುತ್ತಿರುವುದು ಕರ್ನಾಟಕ ರಾಜಕೀಯದ ದುರಂತ.

ಕರ್ನಾಟಕವನ್ನು ಇದುವರೆಗೂ ಆಳಿದ ಎಲ್ಲ ರಾಜ್ಯನಾಯಕರು, ಮುಖ್ಯಮಂತ್ರಿಗಳು, ರಾಷ್ಟ್ರನಾಯಕರು ಇವರೆಲ್ಲಾ ಮೇಲ್ಕಂಡ ಪ್ರಬಲ ಜಾತಿಗಳಿಗೆ ಸೇರಿದವರು. ಜಾತಿ ರಾಜಕಾರಣವನ್ನು ಬಿಟ್ಟು ವಿದ್ಯಾರ್ಹತೆ, ರಾಜಕೀಯ ಅನುಭವ, ನಿಲುವುಗಳ ಮೇಲೆ ಅಧಿಕಾರಗಿರಿಯನ್ನು ಪಡೆದಿರುವವರು ತುಂಬಾ ಕಡಿಮೆ. ಬೆಳಣಿಕೆಯಷ್ಟು ಜನ.  ಜಾತಿಯವ ಮುಖ್ಯಮಂತ್ರಿ ಆದರೆ ಜಾತಿಗಳ ಎಲ್ಲ ಸಮುದಾಯದವರು  ಸಂತುಷ್ಟರಾಗುತ್ತಾರೆ. ಜಾತಿಗಳ ಬೆಂಬಲ ಚೆನ್ನಾಗಿರುತ್ತೆ. ಮುಂದಿನ ಚುನಾವಣೆಯಲ್ಲಿ ಜಾತಿಯವರು ನಮ್ಮ ಕೈ ಬಿಡುವುದಿಲ್ಲ. ಪ್ರಾಂತ್ಯದಲ್ಲಿ ಜಾತಿಯ ಜನರು ಹೆಚ್ಚಾಗಿದ್ದಾರೆ. ಇವರ  ನಾಯಕರನ್ನು ಇಲ್ಲಿ ಕೂರಿಸಿದರೆ ನಮಗೆ ವೋಟುಗಳು ಸಲೀಸು.. ತರಹ ರಾಜಕೀಯ ಲೆಕ್ಕಾಚಾರಗಳು ಪ್ರತಿ ಪಕ್ಷದಲ್ಲೂ ನಡೆಯುತ್ತಲೇ ಇರುತ್ತವೆ. ಹಾಗಾಗಿ ದೂರದಲ್ಲಿ ಕಾಣುವ ಕೇಂದ್ರ ಸರ್ಕಾರದ  ಹೊರತಾಗಿ, ಕಣ್ಣಿಗೆ ಕಾಣುವ ನಮ್ಮ ರಾಜ್ಯ ಸರ್ಕಾರದ ವೈಖರಿಯನ್ನು ನೋಡಿದಾಗ, ಈಗಾಗಲೇ ಅಧಿಕಾರದ ಮೇಲೆ ಕೂತಿರುವ, ಅಧಿಕಾರ ಅನುಭವಿಸುತ್ತಿರುವ ನಾಯಕರನ್ನು  ನೋಡಿದಾಗ ರೀತಿಯ ಅವ್ಯಕ್ತ ಭಾವನೆ ಖಂಡಿತ ಮೂಡುತ್ತದೆ. ಜಾತಿ ಲೆಕ್ಕಾಚಾರದಲ್ಲಿ ಅಧಿಕಾರ ಹಿಡಿಯುವ ವ್ಯಕ್ತಿಗಳಿಂದ ಮುಖ್ಯವಾಗಿ ಅವರವರ ಜಾತಿಗಳ ಜನರಿಗೆ ಹೆಚ್ಚು ಅಭಿವೃದ್ದಿಯಾಗುವುದೇ ಹೊರತು ಬೇರೆ ಜಾತಿಗಳ ಜನರೆಂದರೆ ಒಂದು ಲೆಕ್ಕದಲ್ಲೇ ಅಸ್ಪಶ್ರ್ಯರೇ ಸರಿ.. ಒಬ್ಬ ಮಂತ್ರಿ ಅಧಿಕಾರ ಸ್ವೀಕರಿಸಿದ ಮರುದಿನವೇ ತನ್ನ ಸುತ್ತಲೂ ಐಎಎಸ್, ಕೆಎಎಸ್, ಜಡ್ಜ್ಗಳು, ಪೋಲಿಸ್ ಪ್ರಧಾನ ಹುದ್ದೆಗಳು, ಇನ್ನು ಹಲವು ಹುದ್ದೆಗಳಿಗೆ ತಮ್ಮ ಜಾತಿಯ ಅಧಿಕಾರಿಗಳನ್ನೇ ಕೂರಿಸಿಕೊಳ್ಳುತ್ತಾರೆ. ಅಕಸ್ಮಾತ್ ಹಿಂದಿನ ನಾಯಕರ ಸಮುದಾಯದವರಿದ್ದರೆ ವರ್ಗಾವಣೆ  ಗ್ಯಾರಂಟಿ.  ಮಂತ್ರಿ ಮಾಡಿದ ಪದ್ಧತಿಯನ್ನು, ಮುಂದೆ ಜಾತಿಹೆಸರಿನಲ್ಲಿ ಅಧಿಕಾರ ಹಿಡಿಯುವ ಮಂತ್ರಿಯು ಅದನ್ನೇ ಫಾಲವ್  ಮಾಡುತ್ತಾನೆ. ಇದೊಂಥರ `ನನಗೆ ರ್ಯಾಗಿಂಗ್ ಮಾಡಿದ್ದಾರೆ, ಹಾಗಾಗಿ ನಾನು ಕೂಡ ರ್ಯಾಗಿಂಗ್ ಮಾಡಬೇಕು', ಅನ್ನುವ ರೀತಿ. 

ಇಲ್ಲಿಯವರೆಗೆ ಜಾತಿ ರಾಜಕಾರಣ ವಿಧಾನಸೌಧದ ಆವರಣ, ಸರ್ಕಾರಿ
ಕಛೇರಿಗಳಲ್ಲಿ ಮಾತ್ರ ಇತ್ತು, ಇತ್ತೀಚೆಗೆ ಅದು ಅದೆಷ್ಟು ಹೇಸಿಗೆಯನ್ನುಂಟು ಮಾಡುತ್ತ್ತಿದೆ ಅಂದರೆ ಇದು ನ್ಯಾಯದೇವತೆ, ಶಿಕ್ಷಣದ ಅಂಗಣವನ್ನು ಕೂಡ ಬಿಟ್ಟಿಲ್ಲ. ಲೋಕಾಯುಕ್ತ, ಉಪಲೋಕಾಯುಕ್ತ, ಜಡ್ಜ್ಗಳು,
 ವಿಶ್ವವಿದ್ಯಾನಿಲಯದ ಕುಲಪತಿಗಳು, ಕಾನೂನು ಆಯೋಗಗಳ ಮುಖಂಡರನ್ನು ಆಯ್ಕೆ ಮಾಡುವಾಗಲೂ ಕೂಡ ಜಾತಿ ಲೆಕ್ಕಾಚಾರದ ರಾಜಕೀಯದ ವಾಸನೆ ಮೂಗಿಗೆ ಬಡಿಯುತ್ತದೆ. ನಮ್ಮ ನಾಯಕರಿಗೆ ಯಾಕೆ ಇದು ಅರ್ಥವಾಗುತ್ತಿಲ್ಲ.  ಸ್ವತಂತ್ರ ಕರ್ನಾಟಕ  ರೂಪು ತಾಳಿ ಇಷ್ಟು ವರ್ಷವಾದರೂ ಇಂದಿಗೂ ಯಾಕೆ ಅಲ್ಪಸಂಖ್ಯಾತ ಜಾತಿಗಳು ಬೆಳವಣಿಗೆಯಾಗಿಲ್ಲ. ಅವರ ಸಮುದಾಯದಿಂದ ಯಾವ ನಾಯಕರೂ ಯಾಕೆ ರಾಜ್ಯಮಟ್ಟದಲ್ಲಿ ರಾಜಕೀಯವಾಗಿ ಬೆಳೆಯುವಂತೆ ಹೊರಹೊಮ್ಮುತ್ತಿಲ್ಲ. ಅನೇಕ ಬಾರಿ ಹಣ ಬಲವು ಕೂಡ ಜಾತಿಬಲದ ಮುಂದೆ ಸೋಲುತ್ತದೆ. ಇತರ ಜಾತಿಗಳ ನಾಯಕರು ಹೊರಹೊಮ್ಮಲು ಬಹುಸಂಖ್ಯಾತ ಸಮುದಾಯಗಳ ನಾಯಕರು ಅಡ್ಡಗಾಲು ಹಾಕುತ್ತಿದ್ದಾರಯೇ? ಬಹುಸಂಖ್ಯೆಯ ಸಮುದಾಯಗಳೇ ಸರ್ಕಾರವನ್ನು, ರಾಜಕೀಯ  ಅಧಿಕಾರವನ್ನು ಐದಾರು ದಶಕಗಳಿಂದ ಬಳಸಿಕೊಳ್ಳುತ್ತಿವೆಯೇ ಹೊರತು `ಸರ್ವಜನಾಂಗದ ಶಾಂತಿಯ ತೋಟ' ಅಂತ ಯಾಕೆ ಪರಿಗಣಿಸುತ್ತಿಲ್ಲ. ಜಾತೀಯತೆಯ ರೋಗ ಇಂದಿಗೂ ಕರ್ನಾಟಕದ ರಾಜಕೀಯ ವ್ಯವಸ್ಥೆಯನ್ನು ಸಂಪೂರ್ಣ ಹಾಳುಮಾಡಿಬಿಟ್ಟಿದೆ. ಯಾವುದೇ ಜಾತಿಯನ್ನು ಪ್ರತಿನಿಧಿಸದೇ, ಪ್ರಜ್ಞಾವಂತನಾಗಿ, ವಿಚಾರವಂತನಾಗಿ ನಾಡನ್ನು ಆಳುತ್ತೇನೆ ಅಂತ ಹೇಳುವ ಒಬ್ಬ ನಾಯಕನನ್ನು ಕೂಡ ಹುಡುಕುವುದು ತುಂಬಾ ಕಷ್ಟವಾಗಿದೆ. ವ್ಯವಸ್ಥೆ ಇತ್ತೀಚಿನ ಜಾತಿವಾರು ಸಮುದಾಯಗಳ ಸಮಾವೇಷಗಳಿಂದ ಇನ್ನು ಹೆಚ್ಚಾಗುತ್ತದೆ. ಒಂದೇ ಜಾತಿ-ಜನರ ನಡುವೆ ಒಕ್ಕಟ್ಟು ಬೇಕೆ ಬೇಕು. ಖಂಡಿತ ಅದನ್ನು ಅಲ್ಲಗೆಳೆಯಲಾಗುವುದಿಲ್ಲ. ಬಹುಸಂಖ್ಯಾತರಾಗಿರುವ ನಮ್ಮ ಜಾತಿಗಳೇ ನಾಡನ್ನು ಆಳಬೇಕು, ನಮಗೆ ಅಧಿಕಾರ ಸಿಗಬೇಕು. ನಮಗೆ ಟಿಕೇಟು ಸಿಗಬೇಕು. ನಮ್ಮ ಜಾತಿಯವರೇ ನನ್ನ ಕೈಕೆಳಗೆ ಕೆಲಸ ಮಾಡಬೇಕು, ಅಧಿಕಾರ ಹಿಡಿಯಬೇಕು ಅನ್ನುವ ವ್ಯವಸ್ಥೆ ಮಾತ್ರ ಆಗಬಾರದು. ಹೀಗಾದರೆ ಹಿಂದೆ ಇದ್ದ ರಾಜರುಗಳ ಸಾರ್ವಭೌಮತ್ವಕ್ಕೂ, ಆಡಳಿತಶಾಹಿಗಳ ದಬ್ಬಾಳಿಕೆಗೂ, ಈಗಿರುವ ರಾಜಕೀಯ ವ್ಯವಸ್ಥೆಗೂ ಏನು ವ್ಯತ್ಯಾಸವಿಲ್ಲವೆಂದು ಹೇಳಬಹುದು.  ಕರ್ನಾಟಕದ ಇಂದಿನ ರಾಜಕೀಯ ಪರಿಸ್ಥಿತಿಯನ್ನು ನೋಡಿದಾಗ ಮುಂಬರುವ ಎಲ್ಲ ದಿನಗಳನ್ನು ಕರ್ನಾಟಕದ ಪ್ರಬಲ ಜಾತಿಗಳ ನಾಯಕರೇ ಆಳಬಹುದು. ಅಕಸ್ಮಾತ್ ಇದನ್ನು ಹೊರತಾಗಿ ಒಬ್ಬ ಅಣ್ಣ ಹಜಾರೆಯಂತ ನೂರು ಬಲದ ವ್ಯಕ್ತಿಗಳಿಗೆ ದೇಶದ ಅಧಿಕಾರವನ್ನು ಕೊಟ್ಟ ದಿನ ಗಾಂಧಿ ಕಂಡ ಕನಸು, ಹಾಗೂ ಕುವೆಂಪುರವರ ವಿಶ್ವಮಾನವ ಸಂದೇಶಕ್ಕೆ ಅರ್ಥಬಂದಂತಾಗುವುದು.