Monday, 20 February 2012

ಜನಸೇವೆಗಿಂತ ದೊಡ್ಡ ಪ್ರಾಯಶ್ಚಿತ್ತ ಇವರಿಗಿಲ್ಲ..!

ಖಂಡಿತ ಇದು ನಾಚಿಕೆಕೇಡಿತನದ ವಿಷಯವೇ?
ಸೆಕ್ಸ್ ಅನ್ನುವುದು ಇಂದಿಗೂ ನಮ್ಮ ದೇಶದಲ್ಲಿ ಅದು ನಾಲ್ಕು ಗೋಡೆಯ ಒಳಗಿನ ಪರಿಧಿಗೆ ಸೀಮಿತವಾಗಿದ್ದರೂ, ಕೆಲವೊಮ್ಮೆ ಬೆಳೆದ ತಂತ್ರಜ್ಞಾನದ ಅಳವವಿಡಿಕೆಯಿಂದಾಗಿ ತನ್ನ ಎಲ್ಲೆಯನ್ನು ಮೀರಿ ವರ್ತಿಸುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ, ಸದನದಲ್ಲಿ ಸಚಿವರು ಸೆಕ್ಸ್ ವಿಡಿಯೋ ನೋಡುತ್ತಾ ಟೈಂಪಾಸ್ ಮಾಡಿದ್ದು!


ಹೌದು, ಈ ಹಿಂದೆ ಹಾಲಪ್ಪ, ರೇಣುಕಾಚಾರ್ಯನಂತಹ ನಾಯಕರು ರೇಪ್, ಕಾಮಕೇಳಿಯಂತಹ ಸೆಕ್ಸ್ ಸ್ಕ್ಯಾಂಡಲ್ಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರೂ, ಇಂದು ಅವರು ಹೊರಗಡೆ ಆರಾಮಾಗಿ ಓಡಾಡಿಕೊಂಡು ಮುಂದಿನ ಚುನಾವಣೆಗೆ ರೆಡಿಯಾಗುತ್ತಿದ್ದಾರೆ. ಇದರ ಮುಂದುವರೆದ ಭಾಗವಾಗಿ ಲಕ್ಷ್ಮಣ್ ಸವದಿ, ಪಾಟೀಲ್, ಕೃಷ್ಣ ಪಾಲೇಮಾರ್ರಂತಹ ಸಚಿವರು `ಸೆಕ್ಸ್ ಬೇಕು' ಅಂತ ನಾಚಿಕೆ ಬಿಟ್ಟು ಕೇಳುವ ವಯೋಮಾನದಲ್ಲಿ ನಡೆದ ಈ `ನೀಲಿ ಚಿತ್ರದ ವೀಕ್ಷಣೆಯ' ಎಪಿಸೋಡು ನಮ್ಮ ಕರ್ನಾಟಕದ ವಿಧಾನಸಭೆಯಲ್ಲಿ ಏನೇನೆಲ್ಲಾ ನಡೆಯುತ್ತದೆ, ಹೀಗೂ ಆಗುತ್ತಾ? ಅನ್ನುವ ತರ್ಕಗಳಿಗೆ  ಸಾಕ್ಷ್ಷಿಯಾಗುತ್ತ್ತಿದೆ.  ಸದನವೆಂಬ ದೇವರಮನೆಯಲ್ಲಿ ಮದಿರೆಯರ ಸೊಂಟವನ್ನು ನೋಡುತ್ತಾ, ನಿಶೆಗೆ ಏರಿ ಮೈಲಿಗೆಯಾಗುವ ನಮ್ಮ ಸಚಿವರ ಪರಿಯನ್ನು ಬಣ್ಣಸಲಾದೀತೇ? ಬಣ್ಣಿಸಿದರೂ ತಿದ್ದಿಕೊಳ್ಳುವ ಜಾಯಮಾನಕ್ಕೆ ಒಗ್ಗುವರೇ?
ನಾವು ಕಷ್ಟಪಟ್ಟು ಸಾಲಿನಲ್ಲಿ ನಿಂತು ಕೈ ಬೆರಳಿಗೆ ಅಳಿಸದ ಬಣ್ಣವನ್ನು ಹಚ್ಚಿಸಿಕೊಂಡು ಓಟು ಹಾಕಿ ಗೆಲ್ಲಿಸಿದ ನಾಯಕರು ಹೀಗೆ ಮಾಡಿದರೆ ಹೇಗೆ? ಮನೆಯ ಯಜಮಾನನೇ ಜವಾಬ್ದಾರಿ ಇಲ್ಲದೇ ಕುಡಿದು ತೂರಾಡುತ್ತಾ, ಬೇರೆಯವರ ಮನೆಯನ್ನು ಹೊಕ್ಕು, ಮಣ್ಣು ಮಸಿ ಇಲ್ಲದ ಹಾದರವ ಮಾಡುತ್ತಾ ಹೋದರೆ ಆ ಮನೆಯಲ್ಲಿ ನೆಮ್ಮದಿಯ ಉಸಿರು ಇರುವುದೇ? ಹೊರಗಡೆ ನಿಂತು ನೋಡುವ ಜನರು ತಮ್ಮದು ಒಂದು ಮಾತಿರಲಿ ಅಂತ ಯಜಮಾನನ ಹೆಂಡತಿ-ಮಕ್ಕಳನ್ನು ತಿವಿದು ಮಾತನಾಡಿಸುವುದಿಲ್ಲವೇ..! ಈಗಾಗಲೇ ಹೊರಗಡೆಯವರು ನಮ್ಮ ಕನ್ನಡದವರನ್ನ ನೋಡಿ ನಗುತ್ತಿದ್ದಾರೆ. ಗೇಲಿ ಮಾಡಿ ಅಪಹಾಸ್ಯ ಮಾಡುತ್ತಿದ್ದಾರೆ.


ಇದಕ್ಕೆ ಒಂದು ಉದಾಹರಣೆಯನ್ನು ನೀಡುವುದಾದರೆ, ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರು ಯಾವುದೋ ಕೆಲಸದ ನಿಮಿತ್ತ ಕೋಲ್ಕತಾಗೆ ಹೋಗಿದ್ದರು. ಅಲ್ಲಿ ನಮ್ಮ ಸ್ನೇಹಿತ ಕರ್ನಾಟಕದವನು ಅಂತ ಗೊತ್ತಾದ ಮೇಲೆ ಆ ಎಮ್ಎನ್ಸಿ ಕಂಪನಿಯಲ್ಲಿದ್ದ ಬೆಂಗಾಲಿ, ಉತ್ತರಭಾರತದ ಸಾಫ್ಟ್ವೇರ್ ಎಂಜಿನಿಯರ್ಗಳು `ನಿಮ್ಮ ಮಿನಿಸ್ಟ್ರಿಗೆ ಸ್ವಲ್ಪವೂ ಕಾಮನ್ಸೆನ್ಸ್ ಇಲ್ಲವಾ? ಬಿಎಫ್ ನೋಡೋಕೆ ಅಸೆಂಬ್ಲಿ ಹಾಲೇ  ಬೇಕಾಗಿತ್ತಾ.. ಕಾರು, ಎಸಿ ರೂಮಲ್ಲಿ ಕೂತು ನೋಡಬಹುದಿತ್ತು. ಛೇ..! ಎಂಥಾ ಜನಗಳಪ್ಪ ನಿಮ್ಮ ಎಮ್ಮೆಲ್ಲೆಗಳು...!' ಅಂತ ಗೇಲಿ ಮಾಡಿದರಂತೆ. ನನ್ನ ಸ್ನೇಹಿತ ಸಮಂಜಸವಾದ  ಉತ್ತರ ಕೊಟ್ಟರೂ,ಅವರಿಗೆ ಅದು ರುಚಿಸಲಿಲ್ಲ. ಇದು ಕೇವಲ ಒಬ್ಬ ಜನಸಾಮಾನ್ಯನಿಗೆ ಮಾತ್ರ ಈ ತರಹ ಅನುಭವ ಆಗುತ್ತಿಲ್ಲ್ಲ.  ಹಿರಿಯ ಕಾಂಗ್ರೇಸ್ ಮುಖಂಡ, ಕೇಂದ್ರ ಕಾರ್ಮಿಕ ಸಚಿವರಾದಂತಹ ಮಲ್ಲಿಕಾರ್ಜುನ್ ಖರ್ಗೆಯವರು ಕೂಡ ತಮಗೆ ಆದಂತಹ ಅನುಭವವನ್ನು ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ವ್ಯಕ್ತಪಡಿಸಿದ್ದರು. ತಾವು ಕರ್ನಾಟಕದಿಂದ ಬಂದಿರುವುದರಿಂದ ದೆಹಲಿಯಲ್ಲಿದ್ದಾಗಲೆಲ್ಲಾ ಬೇರೆ ಬೇರೆ ಮಿನಿಸ್ಟ್ರುಗಳು, ಮೀಡಿಯಾದವರು ಇದರ ಬಗ್ಗೆ ಕೇಳುತ್ತಲೇ ಇರುತ್ತಾರೆ. ನನಗೂ ಇದನ್ನು  ಹೇಳಲೂ ಬೇಸರವಾಗುತ್ತೇ, ಅಂತಹ ನಾಚಿಕೆಗೇಡಿತನದ ಕೆಲಸವನ್ನು ನಮ್ಮ  ಎಮ್ಮೆಲ್ಲೆಗಳು ಮಾಡಿರುವುದು ಕೆಟ್ಟ ದುರಂತ ಅಂತ ಮಾಧ್ಯಮದವರ ಹತ್ತಿರ ಖರ್ಗೆ ಹೇಳಿಕೊಂಡಿದ್ದರು.

ಮಾಧ್ಯಮದವರ ಎಡವಟ್ಟು..!
ಹೌದು ತಮ್ಮ ಪಾಡಿಗೆ ಅವರು ಪೋರ್ನ್ ಚಿತ್ರವನ್ನು ನೋಡುತ್ತಿದ್ದರು. ಅದನ್ನು ರಹಸ್ಯವಾಗಿ ಸೆರೆಹಿಡಿದು ನಮ್ಮ ರಾಜಕೀಯ ವ್ಯಕ್ತಿಗಳು ವಿಧಾನಸೌಧದಲ್ಲಿ ಕೂತು ಏನು ಮಾಡುತ್ತಿದ್ದಾರೆ ಅಂತ ತೋರಿಸಿದ ಟೀವಿ ಚಾನೆಲ್ಗಳ ಕೆಲಸವನ್ನು ಮೆಚ್ಚುವಂತದ್ದೆ.  ಆದರೆ ಆ ನಂತರ ನಮ್ಮ ಟೀವಿ ಚಾನೆಲ್ಗಳು ಮಾಡಿದ್ದೇನು.? ಅವರು ನೋಡುತ್ತಿದ್ದ ಪೋರ್ನ್ ಚಿತ್ರವನ್ನು  ಒಂದೊಂದು ನಿಮಿಷಕ್ಕೆ ತೋರಿಸಿ ತೋರಿಸಿ ಇಡೀ ಕರ್ನಾಟಕವೇಕೆ? ಇಡೀ ಜಗತ್ತಿಗೆ  ಅವರು ನೋಡುತ್ತಿದ್ದ  ಆ ಬ್ಲ್ಯೂ ಫಿಲಂನ್ನು ಇಂಚು ಇಂಚಾಗಿ  ತೋರಿಸಿದ್ದು ಏಷ್ಟು ಸರಿ..? ಅದರಲ್ಲೂ ಒಂದು ಚಾನೆಲ್ ತನ್ನಷ್ಟು ಬುದ್ದಿವಂತರೇ ಇಲ್ಲ , ಅನ್ನುವಂತೆ , ಸಚಿವರು ಯಾವ ವಿಡಿಯೋವನ್ನು ನೋಡುತ್ತಿದ್ದರು ಎಂಬುದನ್ನು ಪತ್ತೆ ಹಚ್ಚಿ ಅದನ್ನು ಹೇಗೋ, ಏಲ್ಲಿಂದಲೋ ಡೌನ್ ಲೋಡ್ ಮಾಡಿ ಮೂಲ ವಿಡಿಯೋವನ್ನೇ ಪ್ರಸಾರ ಮಾಡಿತ್ತು. ಇದೇನಾ, ನಮ್ಮ ಮಾಧ್ಯಮಗಳ ಜವಾಬ್ದಾರಿ..?  ಟೀವಿಯನ್ನು ಅವರ ಮನೆಯ  ಮಕ್ಕಳು ನೋಡುತ್ತಿರುತ್ತಾರೆ ಎನ್ನುವ ಪರಿಜ್ಞಾನ ಕೂಡ ಇರಬೇಡವಾ? ವಿಡಿಯೋವನ್ನು ಬ್ಲರ್ ಮಾಡಿ ತೋರಿಸಬಹುದಿತ್ತು. ಏಕೆ ಮಾಡಲಿಲ್ಲ. ಟ್ರಾಯ್ ಟೀವಿ ಕಟೆಂಟ್ ಗೆ ಸಂಬಂಧಿಸಿದಂತೆ ಸೆಕ್ಸ್ ಹಾಗೂ ಕ್ರೈಂ ಗಳಿಗೆ ಟೀವಿ ಮಾಧ್ಯಮಗಳು ಅಷ್ಟೋಂದು ವೈಭವಿಕರಣ ಮಾಡಬಾರದು ಅಂತ ಹೇಳುತ್ತದೆ. ರಕ್ತ ಹಾಗೂ ನಗ್ನತೆಯನ್ನು  ಸ್ವಲ್ಪ ಮರೆಮಾಚಿ , ನೋವಾಗದಂತೆ ತೋರಿಸಬೇಕು ಅಂತ ನಿಯಮ ಹೇಳುತ್ತದೆ. ಇದನ್ನು ನಮ್ಮ ದೇಶದ ಏಷ್ಟು ಚಾನೆಲ್ಗಳು ಪಾಲಿಸುತ್ತಿವೆ. ನಿಯಮಾವಳಿಗಳು ಕೇವಲ ಕಾಗದ ಪತ್ರ ಹಾಗೂ ಆ ದಿನ ಮೀಟಿಂಗ್ ಗೆ ಮಾತ್ರ ಸೀಮಿತವಾಗಿದೆಯೇ?
 ಇದನ್ನೆಲ್ಲ ನೋಡಿಕೊಂಡು ಮೊನ್ನೆ ನಮ್ಮ ಸ್ನೇಹಿತ ಟೀವಿ ಚಾನೆಲ್ಗಳ ಬಗ್ಗೆ ದೊಡ್ಡ ಕಾಮಿಡಿ ಮಾಡಿದ, `ಹೆಚ್ಚಿನ ನಮ್ಮ ಹಳ್ಳಿ ಜನರಿಗೆ `ಬ್ಲ್ಯೂ ಫಿಲಂ' ಅಂದರೆ ಏನು ಅಂತ ಗೊತ್ತಿರಲಿಲ್ಲ. ಆದರೆ ಮೊನ್ನೆ ಟೀವಿ ಚಾನೆಲ್ಗಳು ಒಬ್ಬ ಹಳ್ಳಿ ಹೈದನಿಗೂ `ಬ್ಲ್ಯೂ ಫಿಲಂ' ಏನು ಅಂತ ತೋರಿಸುವುದರ ಮೂಲಕ ಅವನಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಪಾಠ ಮಾಡಿದವು.  ಇದು ನಂಬಲೇಬೇಕಾದ ಅತಿ ಕೆಟ್ಟ ಸತ್ಯ..!

ತಪ್ಪು ಮಾಡದವರು ಯಾರು ಇಲ್ಲ..! ತಪ್ಪು ಆಗಿದೆ. ಅದನ್ನು ನಮ್ಮ ಸಚಿವರು ಮಾಡಿದ್ದಾರೆ. ಮಾಧ್ಯಮದವರು ಕೂಡ ಮಾಡಿದ್ದಾರೆ.  ಮೊನ್ನೆ ಹುಟ್ಟಿದಹಬ್ಬ ಆಚರಣೆ ಮಾಡಿಕೊಂಡ ಛಾಲೆಂಜಿಂಗ್ ಸ್ಟಾರ್  ದರ್ಶನ್ ಕೂಡ ತಪ್ಪು ಮಾಡಿ ಈಗ ಸರಿದಾರಿಗೆ ಬಂದು, ತನ್ನ ವಿರುದ್ದವೇ ಕಂಪ್ಲೆಂಟ್ ಕೊಟ್ಟ ಹೆಂಡತಿ ವಿಜಯಲಕ್ಷ್ಮಿ ಜೊತೆ  ಸಂಸಾರ ಮಾಡುತ್ತಿದ್ದಾನೆ. ಸೋ.. ಈ ಮೂವರು ಎಮ್ಮೆಲ್ಲೆಗಳು ತಪ್ಪು ಮಾಡಿದ್ದಾರೆ. ಅದಕ್ಕೆ ಶಿಕ್ಷೆ ಕೂಡ ಆಗಿದೆ, ಹಾಗಂತ ಕ್ಷಮಿಸಲು ಸಾಧ್ಯವೇ ಇಲ್ಲ ಅಂತ ಹೇಳಲಾಗದು. ಬೇಡಿದವರನ್ನು ಕ್ಷಮಿಸಿವುದು ಕನ್ನಡಿಗರ ಹುಟ್ಟು ಗುಣ. ಇದು ಕದಂಬರ ಕಾಲದಿಂದಲೂ ನಡೆದು ಬಂದಿದೆ. ನಮ್ಮ ಕ್ಷಮೆಗೆ ಅವರು ಅರ್ಹರಾಗಬೇಕಾದರೆ ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ತಮ್ಮ ತಮ್ಮ ಕ್ಷೇತ್ರದ ಕಡೆ ಹೆಚ್ಚೆಚ್ಚು ಗಮನ ಹರಿಸಬೇಕು. ಜನಸೇವೆಯೇ ಜನಾರ್ದನ ಸೇವೆ ಅನ್ನುವ ಮಾತಿನಂತೆ, ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಇರುವುದು ಒಂದೇ ದಾರಿ ಅದು ಜನಸೇವೆ ಮಾತ್ರ. ಇದು ಸನ್ಮಾನ್ಯರಾದ ಈ ಮೂವರು ನೀಲಿ ಸಚಿವರಿಗೆ ಮಾತ್ರ ಅನ್ವಯವಾಗದೇ ಎಲ್ಲ ಎಮ್ಮೆಲ್ಲೆಗಳು, ಎಮ್ಎಲ್ಸಿಗಳಿಗೂ ಪಾಠವಾದರೆ ಸಾಕು. ಏನಂತೀರಿ...?