Friday, 11 January 2013

ಅಮ್ಮನ ಆಟೋಗ್ರಾಫ್ ಕುರಿತ ಮೊದಲ ವಿಮರ್ಶೆ


(ಕನ್ನಡ ಬ್ಲಾಗ್ನ ನ ಪ್ರಮುಖ ಬರಹಗಾರ, ಯುವ ಕವಿ ಪ್ರಮೋದ್ (ಡಿವಿಪಿ, ನನ್ನ ಕಥಾ ಸಂಕಲನ ಅಮ್ಮನ ಆಟೋಗ್ರಾಫ್ ಕೃತಿಯನ್ನು  ಓದಿ, ಪ್ರೀತಿಪೂರ್ವಕವಾದ ವಿಮರ್ಷೆಯನ್ನು ಬರೆದಿದ್ದಾರೆ. ಇದು ಪುಸ್ತಕ ಬಿಡುಗಡೆಯ ನಂತರ ಸಿಕ್ಕ ಮೊದಲ ವಿಮರ್ಶೆ. ಪ್ರಮೋದ್  ಗೆ ಧನ್ಯವಾದಗಳು...)

ಕಳೆದ ಭಾನುವಾರ ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ತು ಕಛೇರಿಯಲ್ಲಿ ಜರುಗಿದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ಕಥೆಗಾರವೀರಭದ್ರರವರಮಂಕು ಮಡೆಯನ ಕೊಂಕು ನುಡಿಗಳು’, ’ಕಗ್ಗೆರೆ ಪ್ರಕಾಶ್ರವರಭುವಿಬಾಲೆ’, ಹಾಗೂ ಸ್ನೇಹಿತರಾದಶ್ರೀಧರ್ ಬನವಾಸಿ(ಫಕೀರ)’ರವರಅಮ್ಮನ ಆಟೋಗ್ರಾಫ್ ಕೃತಿಗಳು ಹಿರಿಯ ಸಾಹಿತಿಗಳಾದ ಸಿ.ಪಿ.ಕೆ, ದೇಜಗೌ ಅವರ ಸಮ್ಮುಖದಲ್ಲಿ ಲೋಕಾರ್ಪಣೆಯಾಯಿತು. ಮೂರು ಕೃತಿಗಳಲ್ಲಿ ಯಾವುದನ್ನು ಓದುವುದು ಎಂದು ತರ್ಕಿಸುತ್ತಿರುವಾಗ., ಅಮ್ಮನ ಆಟೋಗ್ರಾಫ್ ಶೀರ್ಷಿಕೆಯೇ ನನ್ನ ಆಕರ್ಷಿಸಿಬಿಟ್ಟಿತ್ತು., ನನ್ನನ್ನು ಮಾತ್ರವಲ್ಲ ಎಲ್ಲರನ್ನು ಆಕರ್ಷಿಸುತ್ತದೆ ಎಂದು ನಂಬಿದ್ದೇನೆ.
ನಿಜವಾಗಿ ಹೇಳಬೇಕೆಂದರೆ ಇದು ಶ್ರೀಧರ್ ರವರ ಮೊದಲ ಕೃತಿಯಾದ್ದರಿಂದ ಕೃತಿಯ ಬಗ್ಗೆ ಹೆಚ್ಚಿಗೆ ಅಪೇಕ್ಷೆ ಏನೂ ಇಟ್ಟುಕೊಂಡಿರಲಿಲ್ಲ. ಒಂಭತ್ತು ಕಥೆಗಳುಳ್ಳಅಮ್ಮನ ಆಟೋಗ್ರಾಫ್ಒಳಗೆ ಸುಳಿದಾಗಲೇ ಕಥೆಗಳ ಉತ್ಕೃಷ್ಟತೆ, ಕಥೆಗಾರ ಸತು ವಿವೇಚನೆಗೆ ನಿಲುಕಿದ್ದು. ಕನ್ನಡ ಸಾಹಿತ್ಯದ ಅಗಾಧ ಪ್ರಪಂಚದಲ್ಲಿ ಮೊದಲ ಕೃತಿಯಲ್ಲೇ ಗೆದ್ದವರು ತೀರಾ ವಿರಳ, ವಿರಳದಲ್ಲಿ ಅಮ್ಮನ ಆಟೋಗ್ರಾಫ್ ಕೂಡ ಒಂದು ಹೇಳಿದರೆ ತಪ್ಪಾಗಲಾರದು. ಒಂದು ಕೃತಿಯ ಯಶಸ್ಸನ್ನು ಅಳೆಯುವ ಮಾಪನ ಯಾವುದು ಎಂದು ನೋಡುವುದಾದೆರೆ., ಯಾವ ಕೃತಿ ಓದುಗನ ಎದೆಯಲ್ಲಿ ಚಿರವಾಗಿ ಉಳಿಯುತ್ತದೋ, ಓದುಗನ ಮನವನ್ನು ಕದಡುತ್ತದೋ., ಕಥೆಯನ್ನು ರೀತಿಯೂ ಬರೆಯಬಹುದಲ್ಲವೇ ಎಂದು ಉದ್ಗಾರವೆಳೆದರೆ ಕೃತಿ ಯಶಸ್ವಿ ಯಾನ ನಡೆಸಿದೆ ಎಂದರ್ಥ., ’ ಅಮ್ಮನ ಆಟೋಗ್ರಾಫ್ಕೂಡ ನನ್ನಲ್ಲಿ ಇದೇ ರೀತಿಯ ಭಾವನೆಗಳನ್ನು ಮೂಡಿಸಿತ್ತು. ಇದನ್ನೂ ನಾನು ಯಶಸ್ವಿ ಕೃತಿಯೆಂದು ಧೈರ್ಯವಾಗಿ, ಅತೀ ಸಂತೋಷದಿಂದ ಹೇಳುತ್ತೇನೆ.
ನಾನು ಅವರ ಕೃತಿಯನ್ನು ವಿಮರ್ಶಿಸಲು ಹೋಗುವುದಿಲ್ಲ., ವಿಮರ್ಶನೆಯ ಅರ್ಥವಾಗಲೀ., ಅದರ ವಿಸ್ತಾರ, ಮಿತಿಗಳ ಬಗ್ಗೆ ಕೊಂಚವೂ ಅರಿವಿಲ್ಲ., ನಾನು ಕಥಾ ಸಂಕಲನವನ್ನು ಓದಿ ಕಂಡುಂಡರಗಿಸಿಕೊಂಡ ಕಥೆಗಳ ಸ್ವಾದವನ್ನು ನಿಮ್ಮೆದುರು ಹೇಳಲು ಇಚ್ಛಿಸುತ್ತೇನೆ. ಶ್ರೀಧರ್ ರವರು ಪ್ರಚುರ ಪಡಿಸಿರುವ ಕೃತಿ ಒಂಭತ್ತು ಕಥೆಗಳನ್ನೊಳಗೊಂಡಿದೆ., ಒಂದೊಂದು ಒಂದಕ್ಕಿಂತ ಚೆನ್ನಾಗಿದೆ., ಯಾವ ಕಥೆಯೂ ವಾಸ್ತವತೆಯನ್ನು ಮೀರದೆ., ಎಲ್ಲವೂ ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ. ನವರಸಗಳನ್ನೂ ಹೊಂದಿರುವ ಕಥಾ ಸಂಕಲನ., ಕನ್ನಡ ಸಾಹಿತ್ಯಕ್ಕೆ ನವಮಣಿಯ ಮುಕುಟ ಎಂದರೆ ತಪ್ಪಾಗಲಾರದು. ಒಂದೊಂದೂ ಒಂದೊಂದು ವೈಶಿಷ್ಟ್ಯತೆಯನ್ನು ತನ್ನೊಳಗುದುಗಿಸಿಕೊಂಡಿದೆ.
) ಕ್ಷಣ ಕತ್ತಲೆಯ ಭಯ : ಮನುಷ್ಯನ ಬದುಕಿನಲ್ಲಿ ಎಂದು ಯಾವ ಕ್ಷಣ ಏನಾಗುತ್ತದೋ ತಿಳಿಯದು., ಹಾಗೇ ೨೦ ವರ್ಷಗಳ ಕಾಲ ಲಾರಿ ಚಾಲಕನಾಗಿದ್ದ ಕರಿ ಬಸಪ್ಪ ಹಲವಾರು ಕತ್ತಲನ್ನು ತನ್ನ ಜೀವ ಮಾನದಲ್ಲಿ ಕಂಡಿದ್ದರೂ., ಅದೊಂದು ಕ್ಷಣದ ಕತ್ತಲೆ ಅವನ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿತ್ತು., ಮದಿರೆಯ ಮತ್ತು ಬದುಕನ್ನು ಹೇಗೆ ನುಂಗುತ್ತದೆ ಎಂಬುದನ್ನು ಕಥೆಗಾರ ಇಲ್ಲಿ ಸಮರ್ಥವಾಗಿ ಅರುಹಿದ್ದಾರೆ.
) ಅಮ್ಮನ ಆಟೋಗ್ರಾಫ್ : ದೇವರ ಮೂರ್ತ ರೂಪವೆಂದು ನಂಬಿದ್ದ ಮಗ., ಯಾರೋ ಒಬ್ಬಸೂಳೆ ಮಗಎಂದು ಬೈದಿದ್ದನ್ನು ಮನಸ್ಸಿನಲ್ಲಿಟ್ಟುಕೊಂಡು., ತನ್ನೊಳಗೇ ಆಂದೋಲನವೊಂದನ್ನು ಸೃಷ್ಟಿಸಿಕೊಂಡು ತನ್ನ ತಾಯಿಯನ್ನೇ ಅನುಮಾನಿಸಿದ ಮಗ ತನ್ನ ತಾಯಿಗೆ ಕ್ಷಮಾಪಣೆ ಕೇಳುವ ಕಥಾ ಹಂದರ ನಿಜಕ್ಕೂ ಮನಸ್ಸನ್ನು ಮುಟ್ಟುವುದರಲ್ಲಿ ಎರಡು ಮಾತಿಲ್ಲ.
) ಹಲ್ಕಾ ಬದುಕಿನ ನಡುವೆ : ಮಂಗಳ ಮುಖಿಯರ ಬದುಕನ್ನು ಮೂಲವಾಗಿಟ್ಟುಕೊಂಡು ರಚಿಸಲ್ಪಟ್ಟಿರುವ ಕಥೆ., ನಿಜಕ್ಕೂ ಇದು ನನ್ನನ್ನು ಬಹಳವಾಗಿ ಕಾಡಿದ ಕಥೆ. ತನ್ನ ವಿಚಿತ್ರ ವರ್ತನೆಯಿಂದ ಊರು, ಮನೆಯಿಂದ ದೂರವಾದ ಮಂಗಳಮುಖಿಯೊಬ್ಬ ಬೆಂಗಳೂರಿನ ರೋಡ್ ಸೈಡ್ ಕ್ಯಾಂಟೀನ್ ನಲ್ಲಿ ಕೆಲಸಕ್ಕೆ ಸೇರಿ., ದಿನಾ ರಾತ್ರಿ ಮಲಗುವಾಗ ಕಣೆದುರು ಸರಿದು ಹೋಗುತ್ತಿದ್ದ ಅದೇ ಆಕಾಶ, ಅದೇ ನಕ್ಷತ್ರ ಹಾಗೂ ನೂರಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಬಗೆ., ನಿಜವಾದ ನಪುಂಸಕತ್ವ ಯಾವುದು ಎಂದು ಅರಿಯುವ ಕಥೆ ನಿಜಕ್ಕೂ ಮನಸ್ಸನ್ನು ಕದಡುತ್ತದೆ.
) ಕಾಮನ ಗಲ್ಲಿಯ ಹುಡುಗರು : ಇದು ಹಾಸ್ಯ ಲೇಪಿತ ನವಿರಾದ ಕಥಾ ಹಂದರ. ಅನೇಕ ವರ್ಷಗಳಿಂದಕಾಮನ ಹಬ್ಬವನ್ನು ಬಹಳ ವಿಜೃಂಬಣೆಯಿಂದ ಮಾಡಿಕೊಂಡು ಬರುತ್ತಿದ್ದ ಕೇರಿಯಲ್ಲಿ., ಹಿಂದಿನ ವೈಭವವನ್ನು ಉಳಿಸಿಕೊಳ್ಳಲು ಅಲ್ಲಿನ ಹುಡುಗರು ಪಡುವ ಪಾಡು ಹಾಗೂ ಅಲ್ಲಿನ ಆಚರಣೆಗಳು ಮನವನ್ನು ಸೂರೆಗೊಳ್ಳುತ್ತದೆ., ದೇವರು ಯಾವ ರೀತಿಯಲ್ಲಾದರೂ ಕಳ್ಳರಿಗೆ ಶಿಕ್ಷಿಸುತ್ತನೆ ಎಂಬುದಕ್ಕೆ ಸದಾಶಿವ ಶೆಟ್ಟರ ಬದುಕು ಸಾಕ್ಷಿಯಾಗಿ ನಿಲ್ಲುತ್ತದೆ.
) ಪೋಸ್ಟ್ ಮಾರ್ಟಂ : ಎಲ್ಲರ ಬದುಕಿನಲ್ಲೂ ಯಾವುದೋ ಒಂದು ಘಟ್ಟ ತಿರುವನ್ನು ನೀಡಿರುತ್ತದೆ., ಅದರಂತೆಯೇ ಕಥೆಯ ಕಥಾ ನಾಯಕನ ಬದುಕಿನಲ್ಲಿ ವೈದ್ಯನಾಗುವುದಕ್ಕೆ ಪ್ರೇರೇಪಿಸಿದ ಘಟನೆಯೊಂದರ ಸಚಿತ್ರ ವಿವರಣೆ ಇಲ್ಲಿದೆ. ಇಲ್ಲಿ ಬರುವ ಎಲ್ಲಾ ಪಾತ್ರಗಳೂ ಕಾಡುತ್ತವೆ.
) ಸಾಬರ ಹುಡುಗಿ : ಯೌವನಕ್ಕೆ ಕಾಲಿಡುತ್ತಿದ್ದ ಹುಡುಗಿಯೊಬ್ಬಳ ಆಂತರ್ಯದ ವಿಶ್ಲೇಷಣೆ ಚೆನ್ನಾಗಿ ಮೂಡಿ ಬಂದಿದೆ., ಅತ್ತ ಅಪ್ಪನ ಧರ್ಮ., ಇತ್ತ ಮನದಲ್ಲಿ ಕಾಡುತ್ತಿದ್ದ ಧರ್ಮಗಳ ಕಟ್ಟುಪಾಡಿನ ಬಗೆಗಿನ ಪ್ರಶ್ನೆಗಳು. ಯಾವುದು ಸರಿ? ಯಾವುದು ತಪ್ಪು? ಎಂದು ಯುವತಿ ತರ್ಕಿಸುವ ಪರಿ ಮನ ಮುಟ್ಟುತ್ತದೆ.
) ಸೌಧಾಮಿನಿ ಅಪಾರ್ಟ್ ಮೆಂಟ್ : "STUDENT LIFE IS GOLDEN LIFE" ಎಂಬುದನ್ನು ಎಲ್ಲೋ ಓದಿದ್ದ ಕಥಾ ನಾಯಕ ಅದೇ ಗುಂಗಿನಲ್ಲಿ ಹುಡುಗಿಯೊಬ್ಬಳನ್ನು ಪ್ರೀತಿಸಿ., ನಂತರ ಪ್ರೀತಿ ಮುರಿದು ಬಿದ್ದು, ಅದರಿಂದ ಹೊರ ಬರಲು ಪುಸ್ತಕಗಳ ಓದಿನಲ್ಲಿ ತೊಡಗಿಕೊಳ್ಳುತ್ತಾನೆ., ಅದೇ ಸಂದರ್ಭದಲ್ಲಿ ಜೊತೆಯಾದ ಸೌಧಾಮಿನಿಯೊಡನೆ ಅನುರಕ್ತನಾಗಿ ನಡೆಯುವ ಘಟನೆಗಳನ್ನು ಕಥೆಗಾರರು ಉತ್ತಮವಾಗಿ ನಿರೂಪಿಸಿದ್ದಾರೆ. ಕೊನೆಗೆ ಅವರೆಲ್ಲರ ಪ್ರಶ್ನೆಗೆಕಬೀರ್ ದಾಸರುಉತ್ತರಿಸುತ್ತಾರೆ!
) ಊರು ಮತ್ತು ದೇವರು : ದೇವಸ್ಥಾನವೊಂದರ ಆಡಳಿತವನ್ನು ತನ್ನ ಕೈಯೊಳಗೆ ಇಟ್ಟುಕೊಂಡು ತನ್ನ ಜೋಳಿಗೆಯನ್ನು ತುಂಬಿಸಿಕೊಳ್ಳುತ್ತಿದ್ದ ರಾಮಕೃಷ್ಣನ ಗರ್ವಕ್ಕೆ ಅವನ ಮಗಳೇ ಕೊಡಲಿ ಪೆಟ್ಟು ಕೊಡುತ್ತಾಳೆ., ಜಾತೀಯತೆಯೆ ನಿರ್ಮೂಲನೆ ಅಲ್ಲಿನ ಇನ್ಸ್ ಪೆಕ್ಟರ್ ಇಡುವ ದಿಟ್ಟ ಹೆಜ್ಜೆ ಮನೋಹರವಾಗಿ ಚಿತ್ರಿತವಾಗಿದೆ.
) ಯಕ್ಷಪ್ರಶ್ನೆ : ವಯಕ್ತಿಕವಾಗಿ ಕಥೆ ನನಗೆ ಬಹಳ ಇಷ್ಟವಾಯಿತು. ವಿದ್ಯಾವಂತ, ಪದವೀಧರನೂ ಆಗಿದ್ದ ಮಂಜಯ್ಯ ಹೆಗ್ಗಡೆಯವರು., ತಮ್ಮ ಬದುಕನ್ನು ಯಕ್ಷಗಾನಕ್ಕೆ ಮೀಸಲಿಟ್ಟಿದ್ದರು., ಹಾಗೂ ಯಕ್ಷಗಾನವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತಗೆದುಕೊಂಡು ಹೋಗಿ., ತನ್ನದೇ ಅಭಿಮಾನಿ ವೃಂದವನ್ನು ಇಟ್ಟುಕೊಂಡಿದ್ದ ಅವರ ಬದುಕಿನಲ್ಲಿ ನಡೆಯುವ ಘಟನೆ ಅವರ ಮಗನಾದ ಚಿದಂಬರ ಹೆಗ್ಗಡೆ ಯಕ್ಷಗಾನದಿಂದ ಮಿಮುಖನಾಗಿ ಅಪ್ಪನ ಆಸೆಗಳಿ ತಣ್ಣೀರೆರಚಿದಾಗ ನಡೆದ ಘಟನಾವಳಿಗಳನ್ನು ಕಥೆಗಾರ ನವಿರಾಗಿ ಹೆಣೆದಿದ್ದಾರೆ.
ಪ್ರತೀ ಕಥೆಯನ್ನು ಓದಿದಾಗಲೂ ಒಂದೊಂದು ರೀತಿಯ ಅನುಭೂತಿ ದೊರೆಯುತ್ತಿತ್ತು., ಶ್ರೀಧರ್ ರವರು ಬದುಕಿನ ಹಲವು ಮಗ್ಗಿಲುಗಳನ್ನು ಪರಿಚಯಿಸಿದ್ದರು., ಒಮ್ಮೆಪೂಚಂತೆಯವರ ಶೈಲಿಯನ್ನು ಅನುಸರಿಸುತ್ತಿದ್ದಾರೆಯೇ ಎನ್ನಿಸಿತು., ಮತ್ತೊಮ್ಮೆಶಿವರಾಂ ಕಾರಂತ ಶೈಲಿಯಿರಬಹುದೇ ಎನ್ನಿಸಿತ್ತು., ಆದರೆ ಕೊನೆಗೆ ಇಲ್ಲಾ ಇದೇ ವಿಭಿನ್ನವಾದ ಶೈಲಿ. ಇವರೂ ಕೂಡ ಮುಂದೊಂದು ದಿನ ಸಾಹಿತ್ಯ ದಿಗಂತದಲ್ಲಿ ಉಚ್ಛ ಸ್ಥಾನ ಅಲಂಕರಿಸುತ್ತಾರೆ ಎನ್ನಿಸಿದ್ದಂತೂ ನಿಜ. ಪುಸ್ತಕವನ್ನು ಎಲ್ಲಾ ಸಾಹಿತ್ಯಾಸಕ್ತರು ಓದಲೇಬೇಕು. ಪುಸ್ತಕಗಳು ಸಿಗುವ ಕೆಲವು ಸ್ಥಳಗಳ ವಿಳಾಸವನ್ನು ನಿಮಗೆ ಕೊಡಲಿಚ್ಛಿಸುತ್ತೇನೆ.
1.
ಸಪ್ನ ಬುಕ್ ಹೌಸ್, ಮೆಜೆಸ್ಟಿಕ್-ಗಾಂಧಿನಗರ, ಬೆಂಗಳೂರು
2.
ಸ್ಪರ್ಧ ಚೈತ್ರ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು
3.
ಸ್ನೇಹ ಬುಕ್ ಹೌಸ್, ಗಿರಿನಗರ, ಬೆಂಗಳೂರು
4.
ರವಿ ಬೆಳಗೆರೆ ಬುಕ್ಸ್ ಆಂಡ್ ಕಾಫಿ, ಗಾಂಧಿ ಬಝಾರ್, ಬೆಂಗಳೂರು
5.
ಸಾಯಿ ಬುಕ್ ವಲ್ಡ್ , ಗಾಂಧಿಬಜಾರ್, ಬೆಂಗಳೂರು
6.
ಟೋಟಲ್ ಕನ್ನಡ, ಜಯನಗರ 4ನೇ ಬ್ಲಾಕ್ , ಬೆಂಗಳೂರು
7.
ರಂಗಶಂಕರ, ಜೆಪಿನಗರ, ಬೆಂಗಳೂರು
8.
ಸುಮುಖ ಬುಕ್ ಹೌಸ್ , ಬೆಂಗಳೂರು
9.
ನವಾಡ ಬುಕ್ ಸ್ಟಾಲ್, ಬೆಂಗಳೂರು
10.
ಅಂಕಿತ ಪುಸ್ತಕ, ಗಾಂಧಿ ಬಝಾರ್, ಬೆಂಗಳುರು

-
ಡಿ.ವಿ.ಪಿ-