Friday, 16 March 2012

ಟೀವಿಯಿಂದ ಹೋದ ಮಾನ, ಟೀವಿಯಿಂದಲೇ ಬಂತು...!



(ಮಾರ್ಚ್ 3 ರಂದು `ಹೊಸ ದಿಗಂತ' ದಿನಪತ್ರಿಕೆಯ ಸಂಪಾದಯಕೀಯ ವಿಭಾಗದಲ್ಲಿ  ಪ್ರಕಟವಾದ ನನ್ನ ಲೇಖನ)


ಇಂದು ಟೀವಿಯಲ್ಲಿ ಮೋಸಗಾರ, ಕೊಲೆಗಾರ, ಸ್ಯಾಡಿಸ್ಟ್, ವಿಕೃತಕಾಮಿ, ವಚನಭ್ರಷ್ಟ, ಗಣಿಚೋರ ಹೀಗೆ ಇತ್ಯಾದಿ ನಾಮಫಲಕಗಳಿಂದ ಕರೆಯಲ್ಪಡುವ ವ್ಯಕ್ತಿಯೇ ನಾಳೆ ಅದೇ ಟೀವಿ ಚಾನೆಲ್ನಲ್ಲಿ ಹಲ್ಲು ಕಿರಿಯುತ್ತಾ ಪ್ಯಾನೆಲ್ ಚರ್ಚೆಯಲ್ಲಿರುತ್ತಾನೆ. ಅಲ್ಲಿ ಆತನ ಗುಣಗಾನವಾಗಿರುತ್ತದೆ, ವೈಭವೀಕರಣವಾಗಿರುತ್ತದೆ. ಹೆಂಡತಿಗೆ ಹೊಡೆದು ಜೈಲಿಗೆ ಹೋದ ದರ್ಶನ್ನನ್ನು ಮೈಲಿಗೆ ಅಂತ ನಮ್ಮ ಜನ ಹೊರಗೆ ನಿಲ್ಲಿಸಲಿಲ್ಲ. ಹಾಗಾದರೆ ನ್ಯೂಸ್ ಚಾನೆಲ್ಗಳು ನೀಡುತ್ತಿರುವ ಸುದ್ದಿಯಲ್ಲಿ ಜನರಿಗೆ ನಂಬಿಕೆ ಹೊರಟುಹೋಗಿದೆಯೇ? ಸಮಾಜದಲ್ಲಿನ ಈ ತರಹದ ಹತ್ತು ಹಲವು ಜಂಜಾಟಗಳ ನಡುವೆ ನಮ್ಮ ಜನರು ಬದುಕುತ್ತಿದ್ದಾರೆ. ಬದುಕಬೇಕು ಕೂಡ. ಟೀವಿ ಚಾನೆಲ್ನಲ್ಲಿ `ಬ್ರೇಕಿಂಗ್ನ್ಯೂಸ್' ಬಂದಾಕ್ಷಣ ರಿಮೋಟ್ ಹಿಡಿದು ಚಾನೆಲ್ ಚೇಂಜ್ ಮಾಡುವ ಸಂದರ್ಭ ಮುಂದಿನ ದಿನಗಳಲ್ಲಿ ಬಂದರೂ ಆಶ್ಚರ್ಯವಿಲ್ಲ.

ಮಾರ್ಚ2,2010ರಂದು ಎಂದಿನಂತೆ ಸುದ್ದಿ ವಾಹಿನಿಗಳು ಕೆಲಸಮಾಡುತ್ತಿರಲಿಲ್ಲ. ಎಲ್ಲ ಚಾನೆಲ್ಗಳು ನಾ ಮುಂದು, ತಾ ಮುಂದು ಎನ್ನುವಂತೆ `ಬ್ರೇಕಿಂಗ್ ನ್ಯೂಸ್' ಹೊಡೆಯುತ್ತಿದ್ದವು. ಸುದ್ದಿಮೂಲದ ಹಸಿವಿನ ತೊಟ್ಟಿಯನ್ನು ಇಟ್ಟುಕೊಂಡು ಕರುಬುವ ಟೀವಿ ಚಾನೆಲ್ಗಳಿಗೆ ದೊಡ್ಡ ಬೇಟೆ ಸಿಕ್ಕಿತ್ತು. ಇದು ಬರೀ ಮಾಮೂಲಿ ಬೇಟೆಯಾಗಿರಲಿಲ್ಲ; ಭರ್ಜರಿ ಬೇಟೆಯಾಗಿತ್ತು. ಮಾಧ್ಯಮಗಳ ಬಲಿಗೆ ಸಿಕ್ಕ ಪ್ರಾಣಿ ಸ್ವಾಮಿ ನಿತ್ಯಾನಂದ!
ಬೆಂಗಳೂರಿನ ಬಿಡದಿ ಆಶ್ರಮದ ದೊರೆಸಾನಿ ನಿತ್ಯಾನಂದ `ಮಹಾ'ಸ್ವಾಮಿಗಳು ತಮಿಳು ನಟಿ ರಂಜಿತಾ ಜೊತೆಗಿನ ಪ್ರಣಯ ದೃಶ್ಯಗಳನ್ನೊಳಗೊಂಡ ಸೆಕ್ಸ್ ಸ್ಕ್ಯಾಂಡಲ್ ಸೀಡಿ ಸನ್ ನೆಟ್ ವರ್ಕ್ನ ಎಲ್ಲ ಟಿವಿ ಚಾನೆಲ್ಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಯಿತು. ಈ ಸೀಡಿಯ ಕಾಫಿರೈಟ್ಸ್ ಸನ್ಟೀವಿಗೆ ಸಿಕ್ಕಿದ್ದರೂ ಬೇರೆ ಎಲ್ಲ ಟಿವಿ ಚಾನೆಲ್ಗಳಿಗೆ ಆ ಕ್ಷಣ ಅದು ಬಿಸಿ ಬಿಸಿ ಸೇಲ್ ಆಗುವ ಮಸಾಲ್ ದೋಸೆ ಆಗಿತ್ತು. ಎಲ್ಲ ಚಾನೆಲ್ಗಳಿಗೆ ನಿತ್ಯಾನಂದನ ಸೆಕ್ಸ್ ಸೀಡಿ ದೊಡ್ಡ ಬಾಡೂಟವಾಯಿತು. ಅದರಲ್ಲಿ ಕ್ರೈಂ ಇರಲಿಲ್ಲ, ಸೆಕ್ಸ್ ಇತ್ತು, ಹೀಗೆ ಒಂದು ವಾರ ನಿತ್ಯಾನಂದ ಎಲ್ಲ ಟೀವಿ ಚಾನೆಲ್ಗಳ ಅನ್ನದಾತನಾಗಿ ಬಿಟ್ಟ. ಕನ್ನಡವೂ ಸೇರಿದಂತೆ ಎಲ್ಲ ಟೀವಿ ನ್ಯೂಸ್ ಚಾನೆಲ್ಗಳ ಟಿಆರ್ಪಿ ಮುಗಿಲಂಚು ಮುಟ್ಟುವಷ್ಟು ಏರಿತ್ತು. ಬೇರೆ ಭಾಷೆಯ ಸುದ್ದಿ ವಾಹಿನಿಗಳಿಗೆ ಹೋಲಿಕೆ ಮಾಡಿ ನೋಡಿದಾಗ ಕನ್ನಡ ಸುದ್ದಿ ವಾಹಿನಿಗಳು ಇದರ ಹೆಚ್ಚಿನ ಲಾಭವನ್ನು ಮಾಡಿಕೊಂಡವು. ಎಲ್ಲ್ಲೆಡೆ ವಿರೋಧ ವ್ಯಕ್ತವಾಯಿತು. ನಿತ್ಯಾನಂದ ಪೋಟೋ ಇದ್ದ ಸರ ಹಾಕಿಕೊಂಡು `ಬದುಕು ಜಟಕಾ ಬಂಡಿ' ಕಾರ್ಯಕ್ರಮ ನಡೆಸುತ್ತಿದ್ದ ಕನ್ನಡದ ಖ್ಯಾತ ಅಭಿನೇತ್ರಿ, ಈ ಸೆಕ್ಸ್ ಸ್ಕ್ಯಾಂಡಲ್ ರಿಲೀಸ್ ಆದ ಮರುದಿನವೇ ನಿತ್ಯಾನಂದನ ಸರವನ್ನು ತೆಗೆದು ಶೂಟಿಂಗ್ನಲ್ಲಿ ಭಾಗವಹಿಸಿದ್ದರು. ಅಲ್ಲಿಯವರೆಗೂ ನಿತ್ಯಾನಂದನ ಜಪ ಮಾಡುತ್ತಿದ್ದ ಭಕ್ತರೆಲ್ಲಾ ಕ್ಯಾಕರಿಸಿ ನಿತ್ಯಾನಂದನ ಮುಖಕ್ಕೆ ಉಗಿದರು. ವಿಶ್ವ್ವದಾದ್ಯಂತ ಇರುವ ಎಲ್ಲ ಆಶ್ರಮಗಳಲ್ಲಿ ಆತನ ಬಗ್ಗೆ ವಿರೋಧ ವ್ಯಕ್ತವಾಯಿತು. ವಿಶೇಷವಾಗಿ ಕರ್ನಾಟಕದಲ್ಲಿ ದೊಡ್ಡ ಗಲಭೆ, ಹೊಡೆದಾಟ, ದಾಳಿ, ಆಶ್ರಮದ ಲೂಟಿ ಎಲ್ಲವೂ ಆಯಿತು ಏಕೆಂದರೆ ನಿತ್ಯಾನಂದನ ಇಡೀ ಸಂಪತ್ತಿನ ದುನಿಯಾ ಬೆಂಗಳೂರಿನಲ್ಲಿ ಅಡಗಿತ್ತು. ಬೆಂಗಳೂರಿನಲ್ಲಿ ಆತನದ್ದು ಸಾವಿರಾರು ಕೋಟಿ ಬೆಲೆಬಾಳುವ ಆಸ್ತಿ ಇತ್ತು. ಲಕ್ಷಾಂತರ ಅಭಿಮಾನಿಗಳಿದ್ದರು. ಆಶ್ರಮವಿತ್ತು. ಆಶ್ರಮದ ಸುತ್ತಮುತ್ತ ಲ್ಯಾಂಡ್ ಮಾಫಿಯಾದ ದೊಡ್ಡ ಕೆಟ್ಟ ಮುಖವಿತ್ತು.
ಪ್ರತಿದಿನ, ಪ್ರತಿ ಕ್ಷಣವೂ, ಪ್ರಾದೇಷಿಕ ಟಿವಿಗಳು, ರಾಷ್ಟ್ರೀಯ, ಬಿಬಿಸಿಯಂತಹ ಅಂತರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಕೂಡ ನಿತ್ಯಾನಂದನದ್ದೆ ದೊಡ್ಡ ಜಪ..! ಯಾಕೆ ಟೀವಿ ಚಾನೆಲ್ಗಳಿಗೆ ನಿತ್ಯಾನಂದ ಬೇಕಾದ? ಅಷ್ಟಕ್ಕೂ ಆತನ ಚಾರಿತ್ರ್ಯವಧೆ ಮಾಡಲು ಆತನ ವಿರೋಧಿಗಳು, ರಾಜಕೀಯ ಪ್ರೇರಣೆ ಇತ್ತೇ? ಈ ತರಹದ ಹತ್ತು ಹಲವು ವಿಚಾರಗಳು ತರ್ಕಕ್ಕೆ ಎದ್ದರೂ ಸರಿಪಡಿಸುವ, ಸಂಶೋಧಿಸುವ ನಿಟ್ಟಿನಲ್ಲಿ ನಮ್ಮ ಟೀವಿ ಚಾನೆಲ್ಗಳು ಮಾಡಲೇ ಇಲ್ಲ. ಇದನ್ನು ಮುಂದೆ ಕೂಡ ಮಾಡುವುದಿಲ್ಲ. ಏಕೆಂದರೆ ನಮ್ಮ ಟೀವಿ ಚಾನೆಲ್ಗಳು ಈ ಸಂಸ್ಕಾರವನ್ನು ಮರೆತು ಯಾವುದೋ ಕಾಲವಾಗಿದೆ. ಟಿಆರ್ಪಿ ಬರಬೇಕು, ನಮ್ಮ ಕುದುರೆ ಓಡಬೇಕು ಅಷ್ಟೇ! ಇದೇ ಇಂದಿನ ಸುದ್ದಿ ವಾಹಿನಿಗಳ ದೊಡ್ಡ ಖಯಾಲಿಯಾಗಿದೆ. ಇರುವಷ್ಟು ದಿನವೂ ನಿತ್ಯಾನಂದನನ್ನು ಸೆಕ್ಸ್ ಸೀಡಿಯ ವಿಡಿಯೋ ತೋರಿಸಿ ಲಾಭ ಮಾಡಿಕೊಂಡ ಚಾನೆಲ್ಗಳಿಗೆ ಇದೆಲ್ಲ ಸುದ್ದಿ ಹಳಸಿದೊಡನೆ, ಕರ್ನಾಟಕ  ಸರ್ಕಾರದ ಸಚಿವರಾಗಿದ್ದ ಸಾಗರ ಎಮ್ಮೆಲ್ಲೆ ಹಾಲಪ್ಪನ ಸೀಡಿ, ನರ್ಸ್  ಜಯಲಕ್ಷ್ಮೀಯ ಜೊತೆಗಿನ ರೇಣುಕಾಚಾರ್ಯರ ಕಾಮಪುರಾಣ ಹೀಗೆ ಇನ್ನು ಹಸಿ ಹಸಿ ಸುದ್ದಿಗಳು ಟೀವಿ ಚಾನೆಲ್ಗಳಿಗೆ ಮತ್ತೇ ಜೀವಂತಿಕೆಯನ್ನು ನೀಡಿತು. ಮತ್ತೇ ನ್ಯೂಸ್ ಚಾನೆಲ್ಗಳ ಟಿಆರ್ಪಿ ನಾಗಾಲೋಟದಲ್ಲಿ ಓಡಲಾರಂಭಿಸಿತು. ಈ ಸೀಡಿಯ ಹಿಂದಿನ ಎಲ್ಲ ಮರ್ಮಗಳನ್ನು ಭೇದಿಸಲು, ಸಂಶೋಧಿಸಲು ಚಾನೆಲ್ಗಳು ಹೋಗಲೇ ಇಲ್ಲ. ನಿತ್ಯಾನಂದನ ವಿಷಯದಲ್ಲಿ ಆದ ತಪ್ಪುಗಳು ಹಾಲಪ್ಪನ ವಿಷಯದಲ್ಲೂ ಹಾಗೆ ಆಯಿತು. ಸುದ್ದಿ ವಾಹಿನಿಗಳು ಬಿತ್ತರಿಸಿದ ಸುದ್ದಿ, ತೋರಿಸಿದ ಹೋರಾಟಗಳು, ಹೇಳಿಕೆಗಳು, ಅಭಿಮಾನಿಗಳ ಗಲಾಟೆ, ದಾಂಧಲೆ, ಹೊಡೆದಾಟ ಎಲ್ಲವೂ ನಿತ್ಯಾನಂದ ಹಾಗೂ ಹಾಲಪ್ಪ ಇಬ್ಬರ ವೈಯಕ್ತಿಕ ಜೀವನವೇ ಮುಳುಗಿ ಹೋಯಿತು ಅಂತ ತಿಳಿದುಕೊಂಡರು. ವಿರೋಧಿಗಳು ಸಿಕ್ಕಾಪಟ್ಟೆ ಖುಷಿಪಟ್ಟರು. ಟೀವಿ ಚಾನೆಲ್ಗಳ ಮೂಲಕ ಮಾನ ಹರಾಜು ಮಾಡಿಕೊಂಡ ಈ ನಾಯಕರ ಸ್ಥಿತಿ ಹೇಗಿದೆ? ಇದು ಅಷ್ಟಕ್ಕೇ ಮುಗಿಯಿತೇ? ಅವರ ಜೀವನ ಬರ್ಬಾದ್ ಆಗಿ ಹೋಯಿತೇ..!
 ಇತ್ತೀಚಿಗೆ ಅಂದರೆ, ಜನವರಿ 3,2011 ರಂದು ನಿತ್ಯಾನಂದನ 34ನೇ ಬರ್ತಡೇಗೆ ಬಾಂಬೆಯಿಂದ `ನಿಂಬೆಹಣ್ಣಿನಂತ ಹುಡುಗಿ' ಜೂಹಿ ಚಾವ್ಲಾ ಬಿದಡಿ ಆಶ್ರಮಕ್ಕೆ ಬಂದು ಆತನಿಗೆ ವಿಶ್ ಮಾಡಿ ಹೋದಳು. ಅದಕ್ಕಿಂತ ಮುಖ್ಯವಾಗಿ ನಿತ್ಯಾನ ಸ್ಕ್ಯಾಂಡಲ್ ಹಿರೋಯಿನ್ ರಂಜಿತಾ ಕೂಡ ಭಾಗವಹಿಸಿದ್ದಳು. ಎಲ್ಲರ ಜೊತೆ ಗುರುವಿನ ಜೊತೆ ಏನು ಆಗಿಲ್ಲವೆಂಬಂತೆ ನಗುತ್ತಿದ್ದಳು. ಮಾಳವಿಕ ಅವಿನಾಶ್ ಕೂಡ ಭಾಗವಹಿಸಿದ್ದರು ಎಂಬ ಸುದ್ದಿ ಇದೆ. ಜನರು ಈ ಹಿಂದೆ ನಿತ್ಯಣ್ಣನ ಬಗ್ಗೆ ಟೀವಿಯಲ್ಲಿ ಬಂದಿದ್ದನ್ನು ಎಲ್ಲವನ್ನು ಮರೆತಿದ್ದರು. ನಿತ್ಯಾನಂದನನ್ನು ನೋಡಲು ಸಾವಿರಾರು ಹೆಂಗಸರು ಜಮಾಯಿಸಿದ್ದರು. ಎಲ್ಲರೂ ಆತನ ಪರಮಾಪ್ತ ಭಕ್ತೆಯರು. ವಿದೇಷಿ ಹೆಂಗಸರು, ವಿಧವೆಯರು, ಮದುವೆಯಾಗದವರು, ಆದವರು ಹೀಗೆ ಎಲ್ಲರೂ ಅಲ್ಲಿ ಸೇರಿದ್ದರು. ಇದೇನು ಪವಾಡವೇ!  ಪೌರಾಣಿಕ ಸಿನಿಮಾಗಳಲ್ಲಿ ತೋರಿಸುವಂತೆ 9 ಬಾಗಿಲುಗಳು ಪಟಪಟನೆ ಓಪನ್ ಆದಾಗ ಕಾಣುವ ಮಹಾವಿಷ್ಣುವಿನಂತೆ,  ದಿ ಗ್ರೇಟ್ ನಿತ್ಯಾನಂದ ಇದೇ ಸ್ಟೈಲ್ನಲ್ಲಿ, ಕೇಜಿಗಟ್ಟಲೇ ತೂಗುವ ಕಿರೀಟ, ರತ್ನಕಚಿತ, ಚಿನ್ನದ ಸಿಂಹಾಸನದಲ್ಲಿ ಕುಳಿತ ಗೆಟಪ್ನಲ್ಲಿ ದೇವೇಂದ್ರನಂತೆ ಭಕ್ರರಿಗೆ ದರ್ಶನ ನೀಡಿದ. ಸುಮಾರು 100ಕ್ಕೂ ಹೆಚ್ಚು ದೇಶಗಳಲ್ಲಿನ ಭಕ್ತರಿಗೆ  ನಿತ್ಯಾನಂದನ ದರ್ಶನವನ್ನು ತೋರಿಸಲಿಕ್ಕೆ ಸುಮಾರು 70 ಜನ ತಂತ್ರಜ್ಞರು ಹಗಲು ರಾತ್ರಿ ಕೆಲಸಮಾಡಿದ್ದರು. ದೊಡ್ಡ ಕಂಪನಿಯೇ ಇದರ ಕಾಂಟ್ರ್ಯಾಕ್ಟನ್ನು ಪಡೆದುಕೊಂಡಿತ್ತು. ವೈಭವಸ್ವರೂಪನಾಗಿ, ದೇವರ ಅವತಾರದಲ್ಲಿ ಮೊನ್ನೆ ನೋಡಿದ ನಿತ್ಯಾನಂದನಿಗೂ, ಈ ಹಿಂದೆ ಸೆಕ್ಸ್ ಸ್ಕ್ಯಾಂಡಲ್ನಲ್ಲಿ ಮಿಂಚಿದ್ದ ನಿತ್ಯಾನಂದನಿಗೂ ಏಷ್ಟೋಂದು ವ್ಯತ್ಯಾಸ. ಹಾಗಾದರೆ ಅಕ್ರಮ ಸಂಬಂಧದಲ್ಲಿ ಸಿಲುಕಿ ಟೀವಿ ಚಾನೆಲ್ಗಳಲ್ಲಿ ಮಿಂಚಿದ ನಿತ್ಯಾನಂದ ಅಷ್ಟು ಬೇಗ ಮರೆತುಹೋದನೇ? ಹಾಗಾದರೆ ಅದು ಕನಸೆ? ಇಲ್ಲವೇ ಟೀವಿಯಲ್ಲಿ ನೋಡಿದ್ದು ಬರೀ ಬೋಗಸ್ಸೇ? ಈ ತರಹದ ಹತ್ತು ಪ್ರಶ್ನೆಗಳು ಖಂಡಿತ ಕಾಡುತ್ತವೆ. ಇದು ಕೇವಲ ನಿತ್ಯಾನಂದ ಪ್ರಸಂಗವನ್ನಿಟ್ಟುಕೊಂಡು ಮಾತ್ರ ನೋಡಲಾಗುವುದಿಲ್ಲ. ಅತ್ಯಾಚಾರದಂತಹ ಗಂಭೀರ ಆರೋಪ ಹೊತ್ತಿದ್ದ ಎಮ್ಮೆಲ್ಲೆ  ಹಾಲಪ್ಪನನ್ನು ಕೂಡ ಅವರ ಸೊರಬ, ಸಾಗರ ಕ್ಷೇತ್ರದ ಜನ ಕ್ಷಮಿಸಿಬಿಟ್ಟಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ ಹಾಲಪ್ಪ ಇಂದಿಗೂ ಚಲಾವಣೆಯಲ್ಲಿರುವ ನೋಟು..! ಅದಕ್ಕೆ ಯಾವಾಗಲೂ ಬೆಲೆ ಇದ್ದೇ ಇದೆ. ಮುಂದಿನ ಎಲೆಕ್ಷನ್ನಲ್ಲಿ ಹಾಲಪ್ಪನಂತಹ ಆರೋಪಿಗಳು ಗೆದ್ದು ಬಂದರೂ ಆಶ್ಚರ್ಯವಿಲ್ಲ. ಭ್ರಷ್ಟ್ಟಾಚಾರ ಆರೋಪದಲ್ಲಿ ರೆಡ್ ಹ್ಯಾಂಡಾಗಿ ಸಿಲುಕಿದ್ದ ವೈ.ಸಂಪಂಗಿ, `ನರ್ಸ್
' ರೇಣುಕಾಚಾರ್ಯರನ್ನು ನಮ್ಮ ಕರ್ನಾ ಟಕ ಜನ ಕ್ಷಮಿಸಿಬಿಟ್ಟಿದ್ದಾರೆ. ಎಂತಹ ವಿಷವರ್ತುಲದಲ್ಲಿ ನಾವು ಸಿಲುಕಿ ಹಾಕಿಕೊಂಡಿದ್ದೇವೆ ಎಂಬುದರ ಅರಿವು ಖಂಡಿತ ನಮ್ಮ ಜನರಿಗೆ ಆಗುತ್ತಿಲ್ಲ. ಗಣಿ ನಾಡಿನಲ್ಲಿ ಅಬ್ಬರಿಸುತ್ತಾ ದೂರದ ದೆಹಲಿಯವರೆಗೆ ತನ್ನ ಬೇರುಗಳನ್ನು ಬಲಪಡಿಸಿಕೊಂಡಿದ್ದ ಗಾಲಿ ಜನಾರ್ಧನ್ರೆಡ್ಡಿಯನ್ನು ಇದೇ ಟೀವಿ ಮಾಧ್ಯಮದಲ್ಲಿ ಆತನ ವೈಭವ ಜೀವನವನ್ನು ತೋರಿಸಿ, ಸಾರಿಸಲಾಗಿತ್ತು. ಸದ್ಯದ ಮಟ್ಟಿಗೆ ಕೇಂದ್ರ ಹಾಗೂ ರಾಜ್ಯಸಕರ್ಾರಕ್ಕೆ ವಿಲನ್ ಆಗಿದ್ದ ಜನಾರ್ಧನ್ ರೆಡ್ಡಿ ಇಂದು ಹಿಂಡಲಗಾ ಜೈಲಿನಲ್ಲಿದ್ದಾರೆ.  ಬಳ್ಳಾರಿಯಲ್ಲಿ ಮೆರೆದ ದಿನಗಳು, ಜೈಲಿಗೆ ಹೋದ ಕ್ಷಣಗಳನ್ನು ವೈಭವೀಕರಣ ಮಾಡಿದ ನಮ್ಮ ಸುದ್ದಿ ವಾಹಿನಿಗಳಿಗೆ ಮುಂದಿನ ದಿನಗಳಲ್ಲಿ ರೆಡ್ಡಿಯವರು ಸಿಎಂ ಹುದ್ದೆಗೆ ಕಣ್ಣು ಹಾಕಿದರೂ, ಗಾಲಿಯ ಹಿಂದಿನ ಫೈಲನ್ನು ತೆಗೆದು ಜನರಿಗೆ ತೋರಿಸುವ ಪ್ರಯತ್ನವನ್ನು ಖಂಡಿತ ಮಾಡುವುದಿಲ್ಲ. ಅಲ್ಲಿಗೆ ಯಾರು ಬೇಕಾದರೂ, ಯಾವ ಹುದ್ದೆಯನ್ನು ಬೇಕಾದರೂ ಪಡೆದುಕೊಳ್ಳಬಹುದು ಎನ್ನುವ ವಾತಾವರಣ, ಸನ್ನಿವೇಶ ಸಿದ್ಧವಾಗಬಹುದು. ಈ ನಿಟ್ಟಿನಲ್ಲಿ ಎಲ್ಲ ನ್ಯೂಸ್ ಚಾನೆಲ್ಗಳು, ಮುದ್ರಣ ಮಾಧ್ಯಮದವರು ಸುದ್ದಿಯನ್ನು ಬಿತ್ತರಿಸುವ ಮುಂಚೆ ಮುಂದಿನ ಎಲ್ಲ ಬದಲಾವಣೆಗಳನ್ನೆಲ್ಲ ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಇಲ್ಲವಾದರೆ ವಿಶೇಷ ಸುದ್ದಿಗಳೆಲ್ಲ ಜನರಿಗೆ ಕಾಮಿಡಿ ಸೀನ್ ತರಹ ಕಂಡರೂ ಆಶ್ಚರ್ಯವಿಲ್ಲ.
ಹಿಂದೆಲ್ಲ ಟಿವಿ ಚಾನೆಲ್ಗಳ ಕ್ರೈಂ ಸ್ಟೋರಿ, ಕ್ರೈಂ ಡೈರಿಯಂತಹ ರಾತ್ರಿ ಹತ್ತು ಗಂಟೆಯ ರಕ್ತ ಬಸಿಯುವ ಕಾರ್ಯಕ್ರಮಗಳಲ್ಲಿ ತಮ್ಮ ಮುಖ ತೋರಿಸಿಕೊಳ್ಳಲು ಜನರು ಹೆದರುತ್ತಿದ್ದರು. ಉದಯ ಟೀವಿ, ಈಟೀವಿ ಜಮಾನಾದ ನಂತರ ಈ ಸಂಪ್ರದಾಯವನ್ನು ಟಿವಿ9 ಕೂಡ ಸ್ವಲ್ಪ ದಿನ ಮುಂದುವರೆಸಿಕೊಂಡಿತು. ಏಕೆಂದರೆ ಇಂತಹ ಕಾರ್ಯಕ್ರಮಗಳು ವ್ಯಕ್ತಿಯ ವ್ಯಕ್ತಿತ್ವವನ್ನೇ ನಾಶಮಾಡುವಂತಹ, ಸಮಾಜದಲ್ಲಿ ತಲೆಎತ್ತಿ ಬದುಕಲು ಆಗದಂತಹ ಸನ್ನಿವೇಶವನ್ನು ಎಡೆಮಾಡುತ್ತಿದ್ದವು, ಸೃಷ್ಟಿಸುತ್ತಿದ್ದವು. ಆದರೆ ಪರಿಸ್ಥಿತಿ ಬದಲಾಗಿದೆ. ಇಂದು ಟೀವಿಯಲ್ಲಿ ಮೋಸಗಾರ, ಕೊಲೆಗಾರ, ಸ್ಯಾಡಿಸ್ಟ್, ವಿಕೃತಕಾಮಿ, ವಚನಭ್ರಷ್ಟ, ಗಣಿಚೋರ ಹೀಗೆ ಇತ್ಯಾದಿ ನಾಮಫಲಕಗಳಿಂದ ಕರೆಯಲ್ಪಡುವ ವ್ಯಕ್ತಿಯೇ ನಾಳೆ ಅದೇ ಟೀವಿ ಚಾನೆಲ್ನಲ್ಲಿ ಹಲ್ಲುಕಿರಿಯುತ್ತಾ ಪ್ಯಾನೆಲ್ ಚಚರ್ೆಯಲ್ಲಿರುತ್ತಾನೆ. ಅಲ್ಲಿ ಆತನ ಗುಣಗಾನವಾಗಿರುತ್ತದೆ, ವೈಭವೀಕರಣವಾಗಿರುತ್ತದೆ. ಹೆಂಡತಿಗೆ ಹೊಡೆದು ಜೈಲಿಗೆ ಹೋದ ದರ್ಶನ್ನನ್ನು ಮೈಲಿಗೆ ಅಂತ ನಮ್ಮ ಜನ ಹೊರಗೆ ನಿಲ್ಲಿಸಲಿಲ್ಲ. ಆತನ ಸಾರಥಿ ಸಿನಿಮಾವನ್ನು ನೋಡಲಿಕ್ಕೆ ತಮ್ಮ ಮಕ್ಕಳನ್ನು ಕಂಕುಳದಲ್ಲಿ ಕಟ್ಟಿಕೊಂಡು ಹೋಗಿ ನೋಡಿದವರು ಇದೇ ಹೆಣ್ಣು ಮಕ್ಕಳು. ಹಾಗಾದರೆ ನ್ಯೂಸ್ ಚಾನೆಲ್ಗಳು ನೀಡುತ್ತಿರುವ ಸುದ್ದಿಯಲ್ಲಿ ಜನರಿಗೆ ನಂಬಿಕೆ ಹೊರಟುಹೋಗಿದೆಯೇ?
ಸೆಕ್ಸು, ಕ್ರೈಮು, ಸಮಿಶ್ರ ಸರಕಾರ, ಭಿನ್ನಮತ, ಹೋಮ ಹವನ ಇವೆಲ್ಲಾ ಮುಂದಿನ ದಿನಗಳಲ್ಲೂ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಇವೆಲ್ಲಾ ನೆವರ್ ಎಂಡಿಂಗ್ ಸ್ಟೋರೀಸ್...! ಈ ನಿಟ್ಟಿನಲ್ಲಿ ಮಾಧ್ಯಮಗಳು, ವಿಶೇಷವಾಗಿ ಕ್ಷಣಕ್ಷಣಕ್ಕೂ ಬ್ರೇಕಿಂಗ್ ನ್ಯೂಸ್ ಕೊಡುವ ನ್ಯೂಸ್ ಚಾನೆಲ್ಗಳು ಜವಾಬ್ದಾರಿಯಿಂದ ವತರ್ಿಸಬೇಕು. ಸಮಾಜದಲ್ಲಿನ ಈ ತರಹದ ಹತ್ತು ಹಲವು ಜಂಜಾಟಗಳ ನಡುವೆ ನಮ್ಮ ಜನರು ಬದುಕುತ್ತಿದ್ದಾರೆ. ಬದುಕಬೇಕು ಕೂಡ. ಟೀವಿ ಚಾನೆಲ್ನಲ್ಲಿ `ಬ್ರೇಕಿಂಗ್ನ್ಯೂಸ್' ಬಂದಾಕ್ಷಣ ರಿಮೋಟ್ ಹಿಡಿದು ಚಾನೆಲ್ ಚೇಂಜ್ ಮಾಡುವ ಸಂದರ್ಭ ಮುಂದಿನ ದಿನಗಳಲ್ಲಿ ಬಂದರೂ ಆಶ್ಚರ್ಯವಿಲ್ಲ, ಏನಂತೀರಿ...!