Tuesday, 26 June 2012

ಆತ್ಮೀಯ ಸ್ನೇಹಿತ ದೀಪಕ್ ಗೆ ಆಲ್ ದಿ ಬೆಸ್ಟ್ !


ಬಾರಿಯ ಇಂಡಿಯನ್ ಐಡಲ್ಗೆ ಇಡೀ ಕರ್ನಾಟಕದಿಂದ ಬೆಂಗಳೂರಿನ ದೀಪಕ್ ದೊಡ್ಡೇರ ಆಯ್ಕೆಯಾಗಿದ್ದಾನೆ. ಯಾವುದೇ ಆಡಿಷನ್ನಲ್ಲಿ ಭಾಗವಹಿಸದೇ, ನೇರವಾಗಿ ಆತನ ದನಿ ಕೇಳಿ ಆಯ್ಕೆ ಮಾಡಿಕೊಂಡಿರುವ ಅನುಮಲ್ಲಿಕ್, ದೀಪಕ್ಗೆ ಮುಂಬೈನ ಸ್ಟುಡಿಯೋದಲ್ಲಿ ಬಂದು ಹಾಡು ಅನ್ನುವ ನೇರ ಆಹ್ವಾನ ನೀಡಿದ್ದಾರೆ. ಈಗ ದೀಪಕ್ ಇಡೀ ಭಾರತದಿಂದ ಆಯ್ಕೆಯಾದ ಎಲ್ಲ ಯುವ ಗಾಯಕ/ಗಾಯಕಿಯರ ಜೊತೆ ನೇರ ಹಣಾಹಣಿಯಲ್ಲಿ ಭಾಗವಹಿಸಿ ಇಂಡಿಯನ್ ಐಡಲ್ ಪಟ್ಟವನ್ನು ಗೆಲ್ಲಬೇಕಾಗಿದೆ. ಇಂಡಿಯನ್ ಐಡಲ್  ಆಡಿಷನ್ನಲ್ಲಿ ಇಡೀ ಭಾರತದಾದ್ಯಂತ ಸುಮಾರು ಲಕ್ಷಾಂತರ ಗಾಯಕರು ಭಾಗವಹಿಸಿದ್ದರು. ಅಂತಿಮವಾಗಿ ಆಯ್ಕೆಯಾದ 25 ಜನರಲ್ಲಿ ದೀಪಕ್ ಕೂಡ ಒಬ್ಬ.

ದೀಪಕ್ ಇಂಡಿಯನ್ ಐಡಲ್ಗೆ ಆಯ್ಕೆಯಾಗ ವಿಷಯ ಕೇಳಿ ತುಂಬಾ ಖುಷಿಯಾದ ಆತ್ಮೀಯರಲ್ಲಿ ನಾನು ಒಬ್ಬ. ಬೆಂಗಳೂರಿನ ನನ್ನ ಆತ್ಮೀಯ ಸ್ನೇಹಿತ ಬಳಗದಲ್ಲಿ ದೀಪಕ್ ಕೂಡ ಒಬ್ಬ. ಆತನ ಫ್ಯಾಮಿಲಿ, ಅಪ್ಪ-ಅಮ್ಮ ಎಲ್ಲರೂ ನನಗೆ ತುಂಬಾ ಆತ್ಮೀಯರು. ನಮ್ಮ ಫ್ಯಾಮಿಲಿ ಕೂಡ ಅವನಿಗೆ ತುಂಬಾ ಪರಿಚಯ. ಬೆಂಗಳೂರಿನಲ್ಲಿ ನನ್ನ ಹಾಗೂ ದೀಪಕ್ ಮನೆ ಕೂಡ ಹತ್ತಿರದಲ್ಲೇ ಇತ್ತು. ತ್ಯಾಗರಾಜನಗರದಲ್ಲಿ ಇಬ್ಬರದೂ ಮನೆ. ಇಬ್ಬರೂ ಬಸವನಗುಡಿಯ ಗಲ್ಲಿಗಲ್ಲಿಗಳಲ್ಲಿ ಹೆಚ್ಚು ಓಡಾಡಿದ್ದೇವೆ. ಪಾರ್ಕನಲ್ಲಿ ಕೂತು ಗಂಟೆಗಟ್ಟಲೇ ಹರಟಿದ್ದೇವೆ. ಬೈಕ್ನಲ್ಲಿ ಲಾಂಗ್ ಡ್ರೈವ್ ಹೋಗಿದ್ದೇವೆ. ದೀಪಕ್ ನಮ್ಮೂರು ಬನವಾಸಿಗೂ ಕೂಡ ಬಂದಿದ್ದ. ನಮ್ಮ ಮನೆಯಲ್ಲಿ ಎರಡು ದಿನ ಇದ್ದ. ಇಬ್ಬರೂ ಸಾಗರ, ವರದಳ್ಳಿ ತಿರುಗಾಡಿದ್ದೇವು. ಹೀಗೆ ಜೊತೆಯಲ್ಲೆ ಇದ್ದ ನನ್ನ ಸ್ನೇಹಿತ ಈಗ ಎಲ್ಲರೂ ಹೆಮ್ಮೆಪಡುವಂತೆ ಸಾಧನೆ ಮಾಡಿದ್ದಾನೆ. ಸಾಧನೆಯ ಹಿಂದೆ ಆತನ ಶ್ರಮ, ಅಪ್ಪ-ಅಮ್ಮನ ಬೆಂಬಲ ಎಷ್ಟಿತ್ತು ಎಂಬುದು ಆತನಿಗೆ ಆತ್ಮೀಯವಾಗಿ ಹತ್ತಿರವಾಗಿದ್ದ ನನಗೆ ಗೊತ್ತು. ಮುಂದೆ ದೊಡ್ಡ ಸಿಂಗರ್ ಆಗುವುದರಲ್ಲಿ ಸಂದೇಹವೇ ಇಲ್ಲ. ಯಾಕಂದರೆ ಅಷ್ಟು ಗುಣಮಟ್ಟದಲ್ಲಿ ಹಾಡುತ್ತಾನೆ. ಆತ ಇಂಡಿಯನ್ ಐಡಲ್ ಆಗುವುದರಲ್ಲಿ ಸಂದೇಹವೇ ಇಲ್ಲ. ಆತ ಗೆದ್ದೆ ಗೆಲ್ಲುತ್ತಾನೆ ಅನ್ನುವ ನಂಬಿಕೆ ಇದೆ.


ದೀಪಕ್ ಬಗ್ಗೆ:
ದೀಪಕ್ ಮೂಲತಃ ಕೊಡಗು ಜಿಲ್ಲೆಯವರು. ತಂದೆ ಲೋಕನಾಥ್, ತಾಯಿ ಮೀನಾಕ್ಷಿಯವರ ಮಕ್ಕಳಲ್ಲಿ ದೀಪಕ್ ಮೊದಲನೆಯವ. ಈತನ ತಮ್ಮ ಎಂಜಿನಿಯರಿಂಗ್ ಓದುತ್ತಿದ್ದಾನೆ. ಲೋಕನಾಥ್ರವರು ಸಜ್ಜನ್ರಾವ್ ಸರ್ಕಲ್ನಲ್ಲಿ ಸಣ್ಣ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಮಧ್ಯಮ ವರ್ಗದ  ಕುಟುಂಬವಾದರೂ ಮಗನ ಸಂಗೀತದ ಸಾಧನೆಗೆ ಆನೆಬಲದಂತೆ ನಿಂತು, ಜೊತೆಯಾಗಿ ಮಗ ದೊಡ್ಡ ಗಾಯಕನಾಗುವ ನಿಟ್ಟಿನಲ್ಲಿ ಬೆಳೆಯಲೆಂದು ಪಣ ತೊಟ್ಟು ನಿಂತಿದ್ದಾರೆ. ದೀಪಕ್ ಬಿಸಿಎ  ಮುಗಿಸಿ ಈಗ ಎಮ್ ಸಿ ಓದುತ್ತಿದ್ದಾನೆ.

ಮೊದಲ ಭೇಟಿ
ನನ್ನ ಆತನ ಭೇಟಿ ಕೂಡ ಈಗಲೂ ನನ್ನ ಕಣ್ಣಮುಂದಿದೆ. ಮಿಡಿಟೆಕ್ ಕಂಪನಿಯಲ್ಲಿ  ಅಸಿಸ್ಟಂಟ್ ಪ್ರೋಡ್ಯುಸರ್ ಆಗಿ ಕೆಲಸಕ್ಕೆ ಸೇರಿದ್ದ ಆರಂಭದ ದಿನಗಳವು. ಆಗ ಸರಿಗಮಪ ಕಾರ್ಯಕ್ರಮ ಶುರುವಾಗಿತ್ತು. ನಮ್ಮ ಕಂಪನಿ ಅದನ್ನು ನಿರ್ಮಾಣ ಮಾಡುತ್ತಿತ್ತು. ನಾನು ಕಾರ್ಯಕ್ರಮದ ಅಸಿಸ್ಟಂಟ್ ಆಗಿದ್ದೆ. ಜಯನಗರದ ಜೆಎಸ್ಎಸ್ ಆಡಿಟೋರಿಯಂನಲ್ಲಿ ಆಡಿಷನ್ ಹಮ್ಮಿಕೊಂಡಿದ್ದೆವು. ಇಡೀ ಕರ್ನಾಟಕದಿಂದ ಬಹಳಷ್ಟು ಯುವಗಾಯಕರು/ಗಾಯಕಿಯರು ಬಂದಿದ್ದರು. ಹೀಗೆ ಬಂದವರಲ್ಲಿ ದೀಪಕ್ ಕೂಡ ಒಬ್ಬ. ಆತ ಅದಕ್ಕೂ ಮುಂಚೆ `ಸ್ಟಾರ್ ಸಿಂಗರ್' ರಿಯಾಲಿಟಿ ಶೋದಲ್ಲಿ ಹಾಡಿದ್ದ ಅಷ್ಟೇ. ಜೆಎಸ್ಎಸ್ ಆಡಿಟೋರಿಯಂನಲ್ಲಿ ಪರಿಚಯವಾದ ದೀಪಕ್ ನನಗೆ ಭಾಗವಹಿಸಿದ್ದ ಎಲ್ಲ ಸಿಂಗರ್ಗಳಿಗಿಂತ  ಮೊದಲ ದಿನವೇ ತುಂಬಾ ಆತ್ಮೀಯನಾಗಿಬಿಟ್ಟ.
ಮನೆ ಒಂದೇ ಏರಿಯಾದಲ್ಲಿ ಇದ್ದುದರಿಂದ ದಿನ ಇಬ್ಬರೂ ಒಟ್ಟಿಗೆ ಬಂದೆವು. ಒಂದು ಬಾಂಧವ್ಯ ಹೀಗೆ ಮುಂದುವರೆಯಿತು. ಅಬ್ಬಾಯಿ ನಾಯಡು ಸ್ಟುಡಿಯೋದಲ್ಲಿ ಶೂಟಿಂಗ್ ಇರ್ತಿತ್ತು. ಅನೇಕ ಬಾರಿ ಇಬ್ಬರೂ ಒಟ್ಟಿಗೆ ಹೋಗುತ್ತಿದ್ದೇವು. ಶೂಟಿಂಗ್ ಲೇಟಾದಾಗ ದೀಪಕ್ ನನಗೋಸ್ಕರ ಕಾಯುತ್ತಿದ್ದ. ಇದರ ಹೊರತಾಗಿ, ಸಂಗೀತದ ವಿಷಯ, ಹಾಡುಗಾರಿಕೆ ವಿಷಯದಲ್ಲಿ ನನ್ನ ಅವನ ನಡುವೆ ಯಾವಾಗಲೂ ಚರ್ಚೆ ಆಗುತ್ತಲೇ ಇರುತ್ತಿತ್ತು. ನನ್ನ ದನಿಗೆ ಹಾಡು ಸೂಟ್ ಆಗುತ್ತಾ, ಸರ್ ನಾನು ಹಾಡನ್ನು ಹಾಡಲಾ? ಹೇಗಿತ್ತುಸರ್ ಒಂದೊಳ್ಳೆಯ ಹಾಡು ಕೊಡಿ.. ತರಹದ ಮಾತುಕತೆಗಳು ನಡಿತಾನೇ ಇರುತ್ತಿದ್ದವು. ಏಷ್ಟೋ ಬಾರಿ ಆತನಿಗೆ ಟೈಮ್ಸೆನ್ಸ್ ಇಲ್ಲ. ತುಂಬಾ ಲೇಟ್ ಮಾಡ್ತಿಯಾ ನೀನು ಅಂತೆಲ್ಲಾ ಬಯ್ದುದ್ದು ಕೂಡ ಉಂಟು. ಹೀಗಿದ್ದರೂ ಒಂದು ಹಂತದಿಂದ ಮತ್ತೊಂದು ಹಂತದವರೆಗೆ, ಹೆಜ್ಜೆಯಿಂದ, ಹೆಜ್ಜೆಗೆ ಆತ ಬೆಳೆಯುತ್ತಲೇ ಹೋದ. ಪ್ರತಿ ಹಂತದ ನಂತರವೂ ಆತ ತುಂಬಾ ಗುಣಮಟ್ಟದಲ್ಲಿ ಹಾಡುತ್ತಿದ್ದ. ಬರುಬರುತ್ತಾ ನಾನು ಕೂಡ ಆತನ ಅಭಿಮಾನಿಯಾಗಿಬಿಟ್ಟಿದ್ದೆ. ಸರಿಗಮಪದ ಫೈನಲ್ನಲ್ಲಿ ದೀಪಕ್ ಸೆಕೆಂಡ್ ರನ್ನರ್ ಅಪ್ ಆಗಿ ಗೆದ್ದದ್ದು ದೊಡ್ಡ ಸಾಧನೆಯೇ ಸರಿ. `ಮುಸ್ಸಂಜೆ ಮಾತು' ಸಿನಿಮಾದ ಪ್ರಮೋಷನ್ಗೆ ಸ್ಟುಡಿಯೋಗೆ ಬಂದಿದ್ದ ಸುದೀಪ್ ಹಾಗೂ ರಘು ದೀಕ್ಷಿತ್, ದೀಪಕ್ ಹಾಡಿದ ಸಿನಿಮಾದ `ಮುಂಜಾನೆ ಮಂಜಲ್ಲಿ' ಹಾಡನ್ನು ಕೇಳಿ, ನೀನು ಮೂಲ ಗಾಯಕನಿಗಿಂತ ತುಂಬಾ ಚೆನ್ನಾಗಿ ಹಾಡಿದ್ದೀಯಾ? ಮೊದಲೇ ನೀನು ಸಿಕ್ಕಿದ್ದರೆ, ನಿನ್ನ ಕೈಯಲ್ಲೇ ಹಾಡನ್ನು ಹಾಡಿಸುತ್ತಿದ್ದೇವು' ಅಂತ ಹೇಳಿದ ಮಾತುಗಳು ದೀಪಕ್ನ ಹಾಡುಗಾರಿಕೆಯನ್ನು ಮೆಚ್ಚುವಂತಿದ್ದವು. ಆತನ ಹಾಡುಗಾರಿಕೆಯ ಬಗ್ಗೆ ಬಹಳಷ್ಟು ಪ್ರಶಂಸೆಯ ಮಾತುಗಳು ಬಂದಿವೆ. ಸರಿಗಮಪ ಗೆದ್ದ ಮೇಲೆ `ವಾಯ್ಸ್ ಆಫ್ ಬೆಂಗಳೂರು' ಪಟ್ಟವನ್ನು ಪಡೆದ. ಗರುಡಾ ಸಮೂಹದಿಂದ ಒಂದು ಕಾರು ಗಿಫ್ಟ್ ಆಗಿ ಸಿಕ್ಕಿತು. ಇದಾದ ಮೇಲೆ ಬೇರೆ ಬೇರೆ ವಾಹಿನಿಯ ಬಹಳಷ್ಟು ಕಾರ್ಯಕ್ರಮಗಳಲ್ಲಿ ಹಾಡಿದ್ದ. ಟೀವಿಯ `ಸ್ನೇಹದ ಕಡಲಲ್ಲಿ', `ಎಂದು ಮರೆಯದ ಹಾಡು', ಝೀ ಕನ್ನಡದ `ಹಾಡು ಹಬ್ಬ' ಕಾರ್ಯಕ್ರಮಗಳಲ್ಲಿ ದೀಪಕ್ ಹಾಡಿದ್ದ. ಟೀವಿ ಪ್ರೋಗ್ರಾಂಗಳ ಹೊರತಾಗಿ ಸೌಂಡ್ ಆಫ್ ಮ್ಯೂಸಿಕ್ ಆರ್ಕೆಸ್ಟ್ರಾದಲ್ಲಿ ಸತತವಾಗಿ ಹಾಡುತ್ತಾ ಎಲ್ಲರಿಗೂ ಇಷ್ಟವಾಗುವ ಗಾಯಕನಾಗಿ ಹೊರಹೊಮ್ಮಿದ. ಸಿನಿಮಾ ಹಾಡುಗಾರಿಕೆಯಲ್ಲಿಯೂ ಕೂಡ ಕೆಲವು ಅವಕಾಶಗಳು ಬಂದವು. ಸಂಗೀತ ನಿರ್ದೇಶಕರಾಗಿರುವ ವಿ.ಶ್ರೀಧರ್, ರಘು ದೀಕ್ಷಿತ್, ಹರಿಕೃಷ್ಣ, ಅರ್ಜುನ್ ಹೀಗೆ ಹಲವು ಸಂಗೀತ ನಿರ್ದೇಶಕರ ಸಿನಿಮಾಗಳಲ್ಲಿ ಹಾಡಿದ್ದಾನೆ. `ಕೃಷ್ಣನ್ ಲವ್ ಸ್ಟೋರಿ' ಸಿನಿಮಾದಲ್ಲಿ ದೀಪಕ್ ಹಾಡಿದ `ಒಂದು ಸಣ್ಣ ಆಸೆ' ಹಾಡು ತುಂಬಾ ಜನಪ್ರಿಯವಾಗಿತ್ತು. ಕನ್ನಡವಲ್ಲದೇ ತಮಿಳು ಸಿನಿಮಾಕ್ಕೂ ಹಾಡಿದ್ದಾನೆ. ಈತನ ಸಿನಿಮಾ ಹಾಡುಗಳಲ್ಲದೇ, ಭಕ್ತಿಗೀತೆ, ಜಾನಪದ ಹಾಡುಗಳ ಎಂಪಿತ್ರಿಗಳು ಈಗಾಗಲೇ ಬಿಡುಗಡೆಯಾಗಿವೆ

ದೀಪಕ್ನ ಒಂದು ಸಾಧನೆಯನ್ನು ಎಲ್ಲರೂ ಮೆಚ್ಚಲೇಬೇಕು, ಆತನಿಗೆ ಸಂಗೀತದ ಹಿನ್ನಲೆ ಇಲ್ಲ. ಆತನ ಮನೆಯಲ್ಲಿ ಯಾರು ಸಂಗೀತ ಕಲಿತವರಲ್ಲಸಂಗೀತ ಕಲಿಸುವಷ್ಟು ಆರ್ಥಿಕವಾಗಿ ಅವರ ಅಪ್ಪ ಅಮ್ಮ ಗಟ್ಟಿಯಿರಲಿಲ್ಲತುಂಬಾ ಮಧ್ಯಮ ವರ್ಗದಲ್ಲಿ ಯಾರ ಹತ್ತಿರವೂ ಸಂಗೀತವನ್ನು ಅಭ್ಯಾಸ ಮಾಡದೇ, ಕೇವಲ ಹಾಡುಗಳನ್ನು ಕೇಳುತ್ತಾ, ಪ್ರಾಕ್ಟೀಸ್ ಮಾಡುತ್ತಾ, ಏಕಲವ್ಯನಾಗಿ ಸಂಗೀತ ಸಾಧನೆ ಮಾಡುತ್ತಿದ್ದಾನೆ. ಈತನ ಬೆಳವಣಿಗೆಯ ವಿಷಯದಲ್ಲಿ ಆತನ ಅಪ್ಪ-ಅಮ್ಮನ ಬೆಂಬಲವನ್ನು ಮೆಚ್ಚಲೇಬೇಕು. ಮಗ ಎಲ್ಲೇ ಹಾಡಲಿ, ಏಷ್ಟೇ ದೂರ ಇರಲಿ ಅಪ್ಪ -ಅಮ್ಮ, ಮಗ ಹಾಡುವುದನ್ನು ನೋಡಲಿಕ್ಕೆ ಹೋಗುತ್ತಾರೆ. ನಾವು ಕಾರ್ಯಕ್ರಮ ಮಾಡುವಾಗ ಪ್ರತಿದಿನ ಆತನ ಅಮ್ಮ ಸ್ಟುಡಿಯೋಗೆ ಬಂದು ಮಗ ಹಾಡುವುದನ್ನು ಕೇಳಿ ಸಂತೋಷ ಪಟ್ಟು ಹೋಗುತ್ತಿದ್ದರು.
ಸದ್ಯ ದೀಪಕ್ ಹಿಂದುಸ್ತಾನಿ ಸಂಗೀತವನ್ನು ಕಲಿಯುತ್ತಿದ್ದಾನೆ. ಜೊತೆಗೆ ಎಂಸಿಎ ಮಾಡುತ್ತಿದ್ದಾನೆ. ಓದುತ್ತಲೇ ಹಾಡಿನ ರಿಹರ್ಸಲ್ ದಿನನಿತ್ಯ ಮಾಡುತ್ತಾನೆ. ಇಂಡಿಯನ್ ಐಡಲ್ ಸ್ಟರ್ಧೆಯಲ್ಲಿ ಹಾಡಲು ಒಳ್ಳೆಯ ತಯಾರಿ ಮಾಡಿಕೊಂಡಿದ್ದಾನೆ. ದೀಪಕ್ ಕನ್ನಡದ ಉದಯೋನ್ಮುಖ ಗಾಯನನಾಗುವುದರಲ್ಲಿ  ಅನುಮಾನವೇ ಇಲ್ಲ. ಇಂಡಿಯನ್ ಐಡಲ್ನ ಎಲ್ಲ ಹಂತಗಳನ್ನು ಆತ ಜಯಿಸಿ ಆತ ಗೆಲ್ಲಲಿ ಅಂತ ಆತನ ಸ್ನೇಹಿತನಾಗಿ ತುಂಬು ಹೃದಯದಿಂದ ಆಶಿಸುತ್ತೇನೆಕನ್ನಡದ ಅದ್ಭುತ ಸಿಂಗರ್ ಆಗಬಲ್ಲ ಅನ್ನುವ ವಿಶ್ವಾಸ ಆತನ ಎಲ್ಲ ಆತ್ಮೀಯರದ್ದು