ಕೇವಲ ಮೂರು ದಿನಗಳ ಹಿಂದೆಯಷ್ಟೇ ನನಗೆ ಫೋನ್ ಮಾಡಿ ಮಾತನಾಡಿದ ವ್ಯಕ್ತಿ, ನಿನ್ನೆ ಮುಂಜಾನೆ ಪತ್ರಿಕೆಯ ಮೂಲಕ ಅವರ ಸತ್ತ ಸುದ್ದಿಯನ್ನು ಓದುವ ಪರಿಸ್ಥಿತಿ ಕೆಟ್ಟ ಘಳಿಗೆ ನನ್ನದಾಗಿತ್ತು. ಸುದ್ದಿಯನ್ನು ಓದಿ ಮನಸ್ಸಿಗೆ ತುಂಬಾ ಬೇಸರವಾಗಿ ಆ ಕೂಡಲೇ ಅವರಿದ್ದ ಮೈಸೂರಿಗೆ ಹೋಗಿ ಅವರ ಮೃತದೇಹ ದರ್ಶನ ಮಾಡಿ ಅಂತ್ಯಕ್ತಿಯೆಯಲ್ಲಿ ಭಾಗವಹಿಸಿ ಮನೆಗೆ ಬಂದೆ. ಸಾಯುವ ಮೂರು ದಿನಗಳ ಹಿಂದೆ ನನಗೆ ಫೋನ್ ಮಾಡಿ ಮಾತನಾಡಿದ ವ್ಯಕ್ತಿಯ ಹೆಸರು ಎಸ್ಎನ್ ಶಂಕರ್. ಇವರು ಕನ್ನಡದ ಮಹಾನ್ ಕಾದಂಬರಿಗಾರ್ತಿ ತ್ರಿವೇಣಿಯವರ ಯಜಮಾನ್ರು. ಮಾತನಾಡಿದ ವಿಷಯ ನನ್ನ ಕಥಾಸಂಕಲನದ ಪುಸ್ತಕಕ್ಕೆ ಅವರು ಬರೆದ ಬೆನ್ನುಡಿ ಕುರಿತಾಗಿತ್ತು. ಶಂಕರ್ರವರ ಅಂತಿಮ ದರ್ಶನ ಮಾಡಲು ನಾನು ಹಾಗೂ ಶಂಕರ್ರವರನ್ನು ಸಾಹಿತ್ಯಕ ಲೋಕಕ್ಕೆ ಪರಿಚಯಿಸಿದ ಕಗ್ಗೆರೆ ಪ್ರಕಾಶ ಹೋಗಿದ್ದೇವು.
ಮೈಸೂರಿನ ತಮ್ಮ ಮನೆಯ ಮುಂದೆ ಶಂಕರ್ |
ದಸರಾ ಸಂಭ್ರಮದ ಗಲಾಟೆಯಲ್ಲಿ ಶಂಕರ್ ಸತ್ತಿರುವ ಸುದ್ದಿ ಯಾವ ಟೀವಿಮಾಧ್ಯಮಗಳಲ್ಲಿ, ಮುಖ್ಯ ಪತ್ರಿಕೆಗಳಲ್ಲಿ ಸುದ್ದಿಯಾಗಲೇ ಇಲ್ಲ. ಪ್ರಜಾವಾಣಿಯಲ್ಲಿ ಮಾತ್ರ ಇವರ ಬಗ್ಗೆ ಸಣ್ಣ ಸುದ್ದಿ ಪ್ರಕಟವಾಗಿತ್ತು. ತ್ರಿವೇಣಿ-ಶಂಕರ್ರ ಏಕಮಾತ್ರ ಮಗಳು ಮೀರಾ ಕುಮಾರ್ ಆಗಲೇ ಬೆಂಗಳೂರಿನಿಂದ ಅಪ್ಪ ಇದ್ದ ಮೈಸೂರಿಗೆ ಬಂದಿದ್ದರು. ಸಂಬಂಧಿಕರು ಸೇರಿದ್ದರು. ಮೊಮ್ಮಕ್ಕಳು ಅಮೇರಿಕದಲ್ಲಿದ್ದರು. ಅದರಲ್ಲಿ ಮೊಮ್ಮಗಳು ಪರೀಕ್ಷೆ ಇದ್ದುದರಿಂದ, ಪರೀಕ್ಷೆ ಮುಗಿಸಿಕೊಂಡು ಅಜ್ಜನ ಮುಖ ನೋಡಲು ತುಂಬಾ ತಡವಾಗಿ ಬಂದಳು. ಮೊಮ್ಮಗಳು ಬರುವವರೆಗೂ ಕಾದು ಆ ನಂತರ ಅಂತ್ಯಸಂಸ್ಕಾರವನ್ನು ಚಾಮುಂಡಿಪುರ ತಪ್ಪಲಿನ ಆರ್ಯಸಮಾಜದ ರುದ್ರಭೂಮಿಯಲ್ಲಿ ಮಾಡಲಾಯಿತು.
ಮನೆಯಲ್ಲಿ ಶಂಕರ್ ನಮ್ಮ ಜೊತೆ ಮಾತುಕತೆಗೆ ಕುಂತಾಗ |
ಪ್ರತಿ ಯಶಸ್ವಿ ಗಂಡಿನ ಹಿಂದೆ ಹೆಣ್ಣು ಇರುತ್ತಾಳೆ ಅನ್ನುವ ಮಾತಿದೆ. ಆದರೆ ತ್ರಿವೇಣಿ ವಿಷಯದಲ್ಲಿ ಇದು ಉಲ್ಪಾ ಆಗಿದೆ. ತ್ರಿವೇಣಿ ಯಶಸ್ಸಿನ ಹಿಂದೆ ಆಕೆಯ ಪತಿ ಶಂಕರ್ ಇದ್ದರು. ತ್ರಿವೇಣಿ ಮದುವೆಗೆ ಮುಂಚೆ ಬರೆದಿದ್ದು ತುಂಬಾ ಕಡಿಮೆ, ಮದುವೆಯ ನಂತರ ಬರೆದದ್ದು ಬೆಟ್ಟದಷ್ಟು ಕಾದಂಬರಿಗಳು. ಎಲ್ಲವೂ ರಾಷ್ಟ್ರೀಯ ಮಟ್ಟದಲ್ಲಿ ಮುಂಚುವಂತಹ ಕಾದಂಬರಿಗಳೇ. ಪುಟ್ಟಣ್ಣ, ರಾಜೇಂದ್ರಸಿಂಗ್ ಬಾಬುರಂತಹ ಮೇರು ನಿರ್ದೇಶಕರು ತಮ್ಮ ಸಿನಿಮಾಕ್ಕೆ ತ್ರಿವೇಣಿ ಕಥೆ ಬೇಕು ಅಂತ ಹೇಳುವಂತಹ ದಿನಗಳು. ತ್ರಿವೇಣಿಯ ಹೆಚ್ಚಿನ ಕಾದಂಬರಿಗಳು ಕನ್ನಡ, ಮಲಯಾಳಂ, ತೆಲುಗಿನಲ್ಲಿ ನಿರ್ಮಾಣವಾಗಿವೆ. ಕಾದಂಬರಿಗಳು ಧಾರಾವಾಹಿಗಳಾಗಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ, ಟೀವಿಯಲ್ಲಿ ಸೀರಿಯಲ್ಗಳಾಗಿ ಮರು ರೂಪ ಪಡೆದುಕೊಂಡಿವೆ. ತ್ರಿವೇಣಿ ಬರೆದಿರುವ ಪ್ರಸಿದ್ದ ಕಾದಂಬರಿಗಳು ಈಗ ಇಂಗ್ಲಿಷ್ ಭಾಷೆಗೆ ಅನುವಾದಿತವಾಗುತ್ತಿವೆ.
ತ್ರಿವೇಣಿ -ಶಂಕರ್ ಮದುವೆಯಾದಾಗ ತೆಗೆಸಿಕೊಂಡಿದ್ದ ಫೋಟೋ |
ಹೀಗೆ ತ್ರಿವೇಣಿ ಬರೆಯಲಿಕ್ಕೆ, ಸಾಧನೆ ಮಾಡಲಿಕ್ಕೆ ಮುಖ್ಯವಾಗಿ ನಿಂತವರೇ ಈ ಎಸ್.ಎನ್.ಶಂಕರ್. ಇಂತಹ ಮೇರು ಚೇತನಕ್ಕೆ 87 ವರ್ಷವಾಗಿತ್ತು. ತ್ರಿವೇಣಿ ಸತ್ತು 50 ವರ್ಷಗಳಾದರೂ, ಅವಳ ಸತ್ತ ಅಷ್ಟು ವರ್ಷಗಳನ್ನು ಒಬ್ಬಂಟಿಯಾಗಿ ಕಳೆದವರು. ಟೆನ್ನಿಸ್ ಅಂದರೆ ಇವರಿಗೆ ಪಂಚಪ್ರಾಣ ನಾಲ್ಕು ಬಾರಿ ವಿಂಬಲ್ಡನ್ ಪಂದ್ಯಗಳನ್ನು ನೋಡಲಿಕ್ಕೆ ಹೋದವರು. ಒಂದು ವರ್ಷ ಅಮೇರಿಕದಲ್ಲಿ ಮಗಳ ಮನೆಯಲ್ಲಿ ಇದ್ದರು. ಶಂಕರ್ರವರಿಗೆ ಚಿಕ್ಕವಯಸ್ಸಿನಲ್ಲಿ ವಿದುರ ಪಟ್ಟ ಒಲಿದರೂ, ಮತ್ತೊಂದು ಮದುವೆಯಾಗದೇ ತ್ರಿವೇಣಿ ಕೊಟ್ಟ ಮಗಳನ್ನು ನೋಡಿಕೊಳ್ಳುತ್ತಾ ಜೀವನವನ್ನು ಕಳೆದಿದ್ದರು. ಶಂಕರ್ ಸಾಯುವ ಹಿಂದಿನ ದಿನವೂ ತುಂಬಾ ಆರೋಗ್ಯವಾಗಿದ್ದವರೇ. ಲವಲವಿಕೆಯಿಂದ ಓಡಾಡಿಕೊಂಡಿದ್ದರು. ಅಷ್ಟು ವರ್ಷವಾದರೂ ಚಾಮರಾಜಪುರಂನಲ್ಲಿರುವ ತಮ್ಮ ಮನೆಯಲ್ಲೇ ಒಬ್ಬರೇ ವಾಸವಾಗಿದ್ದರು. ಪ್ರತಿದಿನ ಗಂಟೆಗಟ್ಟಲೇ ಟೆನ್ನಿಸ್ ಆಡುತ್ತಿದ್ದರು. ಆರೋಗ್ಯವಾಗಿದ್ದರು. ಇಂತಹ ಸಾತ್ವಿಕ ಮನಸ್ಸಿನ ಆರೋಗ್ಯವಂತ ದೇಹಕ್ಕೂ ಕೂಡ ಸಾವು ಅನ್ನುವ ವಿಧಿಪಟ್ಟ ಅಂಟಿಕೊಂಡಿತ್ತು. ಎಲ್ಲವೂ ಕಾಲಾಯ ತಸ್ಮೈ ನಮಃ ಅಂತ ಅಂದುಕೊಳ್ಳಬೇಕಷ್ಟೇ.
ತ್ರಿವೇಣಿಗೆ ಮಿಡಿದ ಶಂಕರ್
ಕನ್ನಡದ ಮಹಾನ್ ಕಾದಂಬರಿಗಾರ್ತಿ ತ್ರಿವೇಣಿ ತೀರಿಗೊಂಡು ಆಗಲೇ 50 ವರ್ಷಗಳಾಗುತ್ತಾ ಬಂದವು. ತ್ರಿವೇಣಿ ಬದುಕಿದ್ದು ಕೇವಲ 35 ವರ್ಷ. ಬದುಕಿದ್ದ ಇಷ್ಟು ವರ್ಷಗಳಲ್ಲಿ ತ್ರಿವೇಣಿ ಬರೆದಿದ್ದು 20ಕ್ಕೂ ಕಾದಂಬರಿಗಳು, ಮೂರು ಕಥಾ ಸಂಕಲನಗಳು. ಬೆಳ್ಳಿಮೋಡ, ಶರಪಂಜರ, ಹೂವು-ಹಣ್ಣು, ಬೆಕ್ಕಿನ ಕಣ್ಣು, ಹಣ್ಣೆಲೆ ಚಿಗುರಿದಾಗ ಇನ್ನು ಕೆಲವು ಕಾದಂಬರಿಗಳು ಸಿನಿಮಾಗಳಾಗಿವೆ. ತ್ರಿವೇಣಿಯವರಿಗೆ ಬರವಣಿಗೆ ಹಾಗೂ ಸಾಹಿತ್ಯಕ ಗೀಳು ಅವಳ ರಕ್ತದಿಂದಲೇ ಬಂದಿದೆ ಅಂದರೆ ತಪ್ಪಾಗಲಾರದು. ತ್ರಿವೇಣಿ ಮನೆತನವೇ ಸಾಹಿತಿಗಳ ತಾಣ. ಕನ್ನಡದ ಕಣ್ವ ಬಿ.ಎಂ. ಶ್ರೀಕಂಠಯ್ಯ ತ್ರಿವೇಣಿಯ ದೊಡ್ಡಪ್ಪ (ತ್ರಿವೇಣಿ ತಂದೆ ಬಿ.ಎಂ.ಕೃಷ್ಣಸ್ವಾಮಿ, ಬಿ.ಎಂ.ಶ್ರೀಯವರ ತಮ್ಮ), ಹಾಗೆಯೆ ಕನ್ನಡದ ಪ್ರಸಿದ್ದ ಕಾದಂಬರಿಗಾರ್ತಿ ವಾಣಿ ತ್ರಿವೇಣಿಯವರ ಚಿಕ್ಕಮ್ಮ, ಖ್ಯಾತ ಲೇಖಕಿ ಆರ್ಯಾಂಭಾ ಪಟ್ಟಾಭಿ ತ್ರಿವೇಣಿಯ ತಂಗಿ. ಕಥೆಗಾರ ಅಶ್ವಥ್ ತ್ರಿವೇಣಿಯ ಸಂಬಂಧಿ, ಹೀಗೆ ತ್ರಿವೇಣಿಯ ಒಡಹುಟ್ಟಿದವರು, ರಕ್ತ ಸಂಬಂಧಿಗಳೆಲ್ಲಾ ಅಕ್ಷರಲೋಕದ ದಾಸಾನುದಾಸರುಗಳೇ. ಇವರೆಲ್ಲರ ನಡುವೆ ತ್ರಿವೇಣಿ ಮಹಿಳಾ ಸಾಹಿತ್ಯ ಲೋಕದಲ್ಲಿ ಅಪಾರ ಸಾಧನೆ ಮಾಡಿ ನಿಲ್ಲುತ್ತಾರೆ. ತ್ರಿವೇಣಿ ಇದೇ ಖುರ್ಚಿಯಲ್ಲಿ ಕೂತು ಕಾದಂಬರಿಗಳನ್ನು ಬರೆಯುತ್ತಿದ್ದರು, ಹೆಚ್ಚಿನ ಸಲ ಇಲ್ಲೇ ಮಲಗುತ್ತಿದ್ದರು. |
ತ್ರಿವೇಣಿ ಬದುಕಿನ ಈ ಸಾಧನೆಯ ಹಿಂದೆ ನಿಂತವರು ಆಕೆಯ ಪತಿ ಎಸ್.ಎನ್.ಶಂಕರ್(ಸಂಪಿಗೆ ನಾರಾಯಣರಾವ್ ಶಂಕರ್). ಅನಾರೋಗ್ಯದ ನಡುವೆಯೂ ತ್ರಿವೇಣಿ ಬರೆಯಲಿಕ್ಕೆ ಬೆನ್ನಲುಬಾಗಿ ನಿಂತವರು. ತ್ರಿವೇಣಿ ಬರೆಯಲಾಗದ ಸ್ಥಿತಿಯಲ್ಲಿದ್ದಾಗ ಆಕೆ ಮಹಾಭಾರತದ ಸಂಜಯನಂತೆ ಕಥೆಯನ್ನು ಹೇಳುತ್ತಾ ಹೋಗುತ್ತಿದ್ದರೆ, ಶಂಕರ್ ಗಣಪತಿಯಂತೆ ಆಕೆಯ ಕಾದಂಬರಿಗಳನ್ನು ಬರೆಯುತ್ತಾ ಹೋದರು. ತ್ರಿವೇಣಿಯ ಕಾದಂಬರಿಗಳ ಜನಪ್ರಿಯತೆಯಲ್ಲಿ ಅವರದ್ದು ಬಹು ದೊಡ್ಡ ಪಾತ್ರ. ಅಷ್ಟು ನೈತಿಕವಾಗಿ ಹೆಂಡತಿಗೆ ಬೆಂಬಲ ನೀಡಿ ಬರೆಸಿದರು ಶಂಕರ್.
ಸಾಹಿತ್ಯಿಕ ಜಗತ್ತಿಗೆ ಇದೊಂದೇ ತ್ರಿವೇಣಿಯ ಫೋಟೋ ಪರಿಚಯವಾಗಿದ್ದು |
ತ್ರಿವೇಣಿಗೆ ಬಾಲ್ಯದಿಂದಲೂ ಅಸ್ಥಮಾರೋಗ ಕಾಡುತ್ತಿತ್ತು. ಈ ರೋಗವೇ ಆಕೆಯನ್ನು ಬಲಿತೆಗೆದುಕೊಂಡಿತು. ಒಮ್ಮೊಮ್ಮೆ ಈ ರೋಗ ರಾತ್ರಿ ಸಮಯದಲ್ಲಿ ಉಲ್ಬಣವಾದಾಗ ತ್ರಿವೇಣಿ ಇಡೀ ಮನೆ ಬೆಚ್ಚಿಬೀಳುವಂತೆ ನರಳುತ್ತಿದ್ದರು. ಅಂತಹ ಸಮಯದಲ್ಲಿ ಶಂಕರ್ ರಾತ್ರಿ ಇಡೀ ಆಕೆಯ ಬೆನ್ನಿಗೆ ಮಸಾಜ್ ಮಾಡಿ ಆ ನೋವನ್ನು ಕಡಿಮೆ ಮಾಡುತ್ತಿದ್ದರು. ಈ ಎಲ್ಲ ಅನಾರೋಗ್ಯದ ಕಷ್ಟನಷ್ಟಗಳ ನಡುವೆ ತ್ರಿವೇಣಿ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದರು. ಇಂದಿಗೂ ತ್ರಿವೇಣಿಗೆ ಸರಿಸಮನಾಗಿ ನಿಲ್ಲುವಂತಹ ಕಾದಂಬರಿಗಾರ್ತಿ ಬಂದಿಲ್ಲ.
ನನ್ನ ಮತ್ತು ಶಂಕರ್ ಪರಿಚಯ
ನನ್ನ ಆತ್ಮೀಯರಾಗಿರುವ ಕಗ್ಗೆರೆ ಪ್ರಕಾಶ್, ಶಂಕರ್ ಬರೆದಿದ್ದ ಲೇಖನಗಳು, ಕಥೆಗಳು, ನಾಟಕಗಳನ್ನೊಳಗೊಂಡ ಸಮಗ್ರ ಅಕ್ಷರ ಭಂಡಾರ `ತ್ರಿವೇಣಿಗೆ ಮಿಡಿದ ಶಂಕರ್' ಅನ್ನುವ ಕೃತಿಯನ್ನು ಸಂಪಾದಿಸಿ ಪ್ರಕಟಮಾಡಿದ್ದರು. ಈ ಪುಸ್ತಕ ಅತ್ಯಂತ ಜನಪ್ರಿಯವಾಗುವುದರ ಜೊತೆಗೆ ಅಪಾರ ಓದುಗರನ್ನು ಪಡೆದುಕೊಂಡಿತ್ತು. ಇಡೀ ಪುಸ್ತಕದಲ್ಲಿ ಶಂಕರ್, ತ್ರಿವೇಣಿ ಬರೆದಿದ್ದ ಕಾದಂಬರಿಗಳನ್ನು ನಾಟಕರೂಪಕ್ಕೆ ಇಳಿಸಿದ್ದರು. ಇಂಗ್ಲೀಷ್ ಕಥೆಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದರು. ಹಾಗಾಗಿ ಇಡೀ ಪುಸ್ತಕದಲ್ಲಿ ಶಂಕರ್ರವರ ಸಾಹಿತ್ಯಕ ಮುಖ ಎದ್ದು ಕಾಣುತ್ತಿತ್ತು ಆ ಗ್ರಂಥದಲ್ಲಿ ಅಷ್ಟು ಸತ್ವ ತುಂಬಿಕೊಂಡಿತ್ತು. ತ್ರಿವೇಣಿಯ ಆತ್ಮದಲ್ಲಿ ಹೊಕ್ಕು ಅವಳಾಗಿ ಆ ಕೃತಿಯನ್ನು ರಚಿಸಿದ್ದರು. ಹೀಗೆ ತಮಗೆ ಲೇಖಕ, ನಾಟಕಕಾರ ಅನ್ನುವ ಹಣೆಪಟ್ಟಿ ಬರಲು ಕಾರಣರಾಗಿದ್ದ ಪ್ರಕಾಶ್ರನ್ನು ಸದಾ ನೆನಪಿಸಿಕೊಳ್ಳುತ್ತಿದ್ದರು. ಶಂಕರ್ ಅವರನ್ನು ಭೇಟಿ ಮಾಡಲು ಪ್ರಕಾಶ್ರವರ ಜೊತೆ ನಾನು ಮೈಸೂರಿಗೆ ಹೋಗಿದ್ದೆ. ತ್ರಿವೇಣಿಯವರ ಸಾಹಿತ್ಯಕ ಸೇವೆಯನ್ನು ಅರಿತುಕೊಂಡಿದ್ದ ನನಗೆ, ತ್ರಿವೇಣಿಗೆ ಬೆನ್ನುಲುಬಾಗಿ ನಿಂತ ಶಂಕರ್ರವರನ್ನು ಭೇಟಿ ಮಾಡುವ ಕುತೂಹಲ ಮಾತ್ರ ತುಂಬಿಕೊಂಡಿತ್ತು. ಮೊದಲ ಭೇಟಿಯಲ್ಲಿ ಅವರ ಪರಿಚಯವಾಗಿ ಅವರು ನನ್ನನ್ನು ತುಂಬಾ ಇಂಪ್ರೆಸ್ ಮಾಡಿದ್ದರು. 87 ವರ್ಷವಾದರೂ ಇಂದಿಗೂ 20 ಯುವಕರಂತೆ ಓಡಾಡುತ್ತಿದ್ದರು. ಟೆನ್ನಿಸ್ ಆಡುತ್ತಿದ್ದರು. ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ಮೊದಲನೇ ಭೇಟಿಯಲ್ಲಿ ತ್ರಿವೇಣಿ ಬಗ್ಗೆ ಅಪಾರ ನನೆಪುಗಳನ್ನು ಹಂಚಿಕೊಂಡಿದ್ದರು. ಅವರ ಮೃದು ಭಾಷೆ, ಸಾತ್ವಿಕ ಮನಸ್ಸು ನನಗೆ ತುಂಬಾ ಇಷ್ಟವಾಗಿತ್ತು. ಮನೆಯಲ್ಲಿ ಕೂತು ಬರವಣಿಗೆ ಮಾಡುತ್ತಿದ್ದ ಶಂಕರ್ 1950ರಲ್ಲಿ ಬಾಂಬೆಯಲ್ಲಿ ಐದು ರೂಪಾಯಿಗೆ ತೆಗೆದುಕೊಂಡಿದ್ದ ಓ ಹೆನ್ರಿಯ ಇಂಗ್ಲೀಷ್ ಕಥಾ ಪುಸ್ತಕವನ್ನು ಕನ್ನಡಕ್ಕೆ ರೂಪಾಂತರ ಮಾಡುತ್ತಿದ್ದರು. ಆಗಲೇ ಸುಮಾರು ಓ ಹೆನ್ರಿಯ ಅಪರೂಪದ 15 ಕಥೆಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದರು. ನನಗೆ ಈ ಕಥೆಗಳನ್ನು ನನ್ನ ಪ್ರಕಾಶನ ಸಂಸ್ಥೆಯ ಮೂಲಕ ಮಾಡುವ ಆಸಕ್ತಿ ಬೆಳೆಯಿತು. ಈ ಕಥಾಸಂಕಲನವನ್ನು ನನಗೆ ಕೊಡಿ ಅಂತ ಕೇಳಿದೆ. ಏನೂ ಮಾತನಾಡದೇ ಅವರು ಸಂತೋಷದಿಂದ ಆ ಕಥೆಗಳನ್ನು ನೀಡಿದರು. ನನಗೆ ಆಗ ಆದ ಸಂತೋಷ ಅಷ್ಟಿಷ್ಟಲ್ಲ. ಕನ್ನಡ ಸಾಹಿತ್ಯಕ್ಕೆ ಓ ಹೆನ್ರಿ ಎಲ್ಲೋ ಒಂದು ಕಡೆ ದೂರವಾಗಿದ್ದ. ಕೊನೆ ಪಕ್ಷ ಈ ಸಂಕಲನದ ಮೂಲಕವಾದರೂ ಓ ಹೆನ್ರಿ ಕತೆಗಳನ್ನು ಕನ್ನಡಕ್ಕೆ ಪರಿಚಯಿಸುವ ದೊಡ್ಡ ಯೋಜನೆ ಹಮ್ಮಿಕೊಂಡಿದ್ದೆ. ನನ್ನ ಈ ಯೋಜನೆಗೆ ಜೊತೆಗಿದ್ದ ಕಗ್ಗೆರೆ ಪ್ರಕಾಶ ಕೂಡ ಬೆನ್ನುಲಬಾಗಿ ನಿಂತಿದ್ದರು. ಶಂಕರ್ ಜೊತೆ ನಾನು ಫೋಟೋ ತೆಗೆಸಿಕೊಂಡಿದ್ದು. |
ಆದರೆ ನನ್ನ ಈ ಸಂತೋಷ ಬಹಳ ದಿನಗಳ ಕಾಲ ನಿಲ್ಲಲಿಲ್ಲ. ಬೆಂಗಳೂರಿಗೆ ಬಂದ ಮೇಲೆ ಈ ಕಥೆಗಳನ್ನು ಪ್ರಕಾಶನ ಮಾಡಲು ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳತೊಡಗಿದೆ. ಆದರೆ ಯಾಕೋ ದುರಾದೃಷ್ಟಕ್ಕೆ ಆ ಕಥಾ ಸಂಕಲನವನ್ನು ಮಾಡಲಾಗಲಿಲ್ಲ. ತ್ರಿವೇಣಿಯವರ ಸಂಬಂಧಿಕರು ಆ ಕಥೆಗಳನ್ನು ತಾವು ಮಾಡುವುದಾಗಿ ಅಂತ ಹಠ ಹಿಡಿದಿದ್ದರು. ನನಗೂ ಅವರ ಜೊತೆ ಈ ವಿಷಯದಲ್ಲಿ ತಿಕ್ಕಾಟ ಮಾಡಿಕೊಳ್ಳಲು ಇಷ್ಟವಾಗಲಿಲ್ಲ. ಸಂತೋಷದಿಂದ ಆ ಕಥೆಗಳನ್ನು ಮತ್ತೇ ಶಂಕರ್ರವರಿಗೆ ನೀಡಿದೆ. ನಮಗೆ ಬೇಸರವಾಗಿದೆ ಅನ್ನುವುದನ್ನು ಅರಿತ ಶಂಕರ್ರವರು, ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ, ನಿಮಗೆ ಇನ್ನೊಂದು ಸುಂದರ ಕೃತಿಯನ್ನು ಬರೆದುಕೊಡುವುದಾಗಿ ಹೇಳಿದರು. ಆಗ ನಾನು ಮತ್ತು ಪ್ರಕಾಶ್, ನೀವು ಕಂಡಂತೆ ತ್ರಿವೇಣಿಯ ಕುರಿತಾಗಿ ಬರೆದುಕೊಡಿ ಅಂತ ಕೇಳಿಕೊಂಡೆವು. ನಮ್ಮ ಮಾತನ್ನು ಕೇಳಿ ಅವರ ಮುಖದಲ್ಲಿ ದುಃಖ ಉಮ್ಮಳಿತು. ಖಂಡಿತ ಇದು ಮಾತ್ರ ನನಗೆ ಸಾಧ್ಯವಿಲ್ಲ. ಆಕೆಯನ್ನು ಕುರಿತು ಬರೆಯಲಿಕ್ಕೆ ಶುರುಮಾಡಿದರೆ, ನನಗೆ ಅಪಾರ ನೆನಪುಗಳು, ನೋವುಗಳು ಕಾಡುತ್ತವೆ. ದಯವಿಟ್ಟು ಈ ವಿಷಯದಲ್ಲಿ ಮಾತ್ರ ನನಗೆ ಬಲವಂತ ಮಾಡಬೇಡಿ ಅಂತ ಹೇಳಿದರು. ನಾವು ಸುಮ್ಮನಾದೆವು.
ಇದೆಲ್ಲದರ ನಡುವೆಯೂ ನನಗೆ ಅವರಿಂದ ಏನಾದರೂ ಬರೆಸಲೇಬೇಕೆಂದು ಪಣ ತೊಟ್ಟಿದ್ದರಿಂದ ನಾ ಬರೆದ ಕಥಾ ಸಂಕಲನಕ್ಕೆ ಅವರ ಕಡೆಯಿಂದ ಮುನ್ನುಡಿ ಬರೆಸಬೇಕೆಂದು ಆಗಲೇ ನಿರ್ಧರಿಸಿ ಬಿಟ್ಟಿದ್ದೆ. ಎಲ್ಲವೂ ಅಂದುಕೊಂಡಂತೆ ಮೈಸೂರಿಗೆ ಹೋಗಿ, ಚಾಮರಾಜಪುರಂನಲ್ಲಿರುವ ಅವರ ಬಾಗಿಲು ತಟ್ಟಿದೆವು. ಅದು ಅವರ ತೀರಿಕೊಂಡ ಇದೇ ತಿಂಗಳು, ಸುಮಾರು ಎರಡು ವಾರದ ಹಿಂದೆಯಷ್ಟೇ. ಭೇಟಿಯಾದ ದಿನ ಶಂಕರ್ ಜೊತೆ ಪ್ರಕಾಶ್ ಹಾಗೂ ನಾನು ಹೊರಗಡೆಗೆ ಬಂದು ಸಣ್ಣ ವಾಕ್ ಮಾಡಿ ಹಲವಾರು ವಿಷಯಗಳ ಬಗ್ಗೆ ಮಾತನಾಡುತ್ತಾ, ಹತ್ತಿರದಲ್ಲಿ ಹೋಟೆಲ್ಗೆ ಹೋಗಿ ಕಾಫಿ ಕುಡಿದಿದ್ದೇವು. ತಮ್ಮ ಎರಡನೇ ಭೇಟಿಯಲ್ಲಿ ಶಂಕರ್ ತುಂಬಾ ಬಳಲಿದ್ದಂತೆ ಕಂಡಿದ್ದರು. ಯಾವುದೋ ಕೆಲವು ಹಳೆಯ ನೋವುಗಳು ಅವರನ್ನು ಚಿಂತೆಗೀಡು ಮಾಡಿದ್ದವು ಅಂತ ಅನಿಸಿತ್ತು. ಅನೇಕ ವಿಷಯಗಳನ್ನು ಮುಕ್ತವಾಗಿ ನಮ್ಮೊಂದಿಗೆ ಹಂಚಿಕೊಂಡಿದ್ದರು. ನನ್ನ ಅವರ ಕಥಾಸಂಕಲವನ್ನು ನೀಡಿ ಇದಕ್ಕೆ ತಾವು ಬೆನ್ನುಡಿ ಬರೆದುಕೊಡಬೇಕು ಅಂತ ಕೇಳಿಕೊಂಡೆವು. ಖಂಡಿತ ಬರೆದುಕೊಡುವುದಾಗಿ ಒಪ್ಪಿಕೊಂಡಿದ್ದರು. ಅವರಿಗೆ ನನ್ನ ಕಥಾ ಸಂಕಲನವನ್ನು ಒಪ್ಪಿಸಿ ಬೆಂಗಳೂರಿಗೆ ಬಂದ ಮೇಲೆ ಅವರು ಎಲ್ಲ ಕತೆಗಳನ್ನು ಓದಿ, ಕೆಲವು ತಪ್ಪುಗಳನ್ನು ತಿದ್ದಿ, ಕಥೆಗಳ ಬಗ್ಗೆ ತಮ್ಮ ಅಭಿಪ್ರಾಯ ಬರೆದು ನನಗೆ ಫೋನ್ ಮಾಡಿ ಹೇಳಿದ್ದರು. ಈ ಘಟನೆ ಕಳೆದು ಮೂರು ದಿನದ ನಂತರ ಅವರು ತೀರಿಕೊಂಡಿದ್ದಾರೆ. ಅಮ್ಮನ ಆಟೋಗ್ರಾಫ್ ಅವರು ಓದಿದ ಕೊನೆಯ ಹಸ್ತಪ್ರತಿ. ನಿಜಕ್ಕೂ ಅವರ ಆಶೀರ್ವಾದ ನನ್ನ ಕಥಾ ಸಂಕಲನಕ್ಕೆ ಸಿಕ್ಕಿದೆ ಅಂತ ಅಂದುಕೊಂಡಿದ್ದೇನೆ. ಅವರ ಮಾತುಗಳು ನನ್ನ ಕಥಾ ಸಂಕಲನಕ್ಕೆ ದೊಡ್ಡ ಶ್ರೀ ರಕ್ಷೆಯಾಗಲಿದೆ ಅಂತ ಅಂದುಕೊಳ್ಳುತ್ತೇನೆ. ಅವರ ಸ್ವಾಭಿಮಾನ ಹಾಗೂ ಸಾತ್ವಿಕ ಮನಸ್ಸು ನನ್ನನ್ನು ಸದಾ ಕಾಡುತ್ತದೆ.
`ತ್ರಿವೇಣಿ' ಅಂತ ಹೆಸರಿಟ್ಟಿದ್ದೆ ಎಂ.ಕೆ.ಇಂದಿರಾ
ಮನಃಶಾಸ್ತ್ರದಲ್ಲಿ ತ್ರಿವೇಣಿ ಡಿಗ್ರಿ ಪಡೆದ ಕ್ಷಣ |
ಕೊನೆಯ ಆಸೆ
ಅವರ ಅಂತಿಮ ದರ್ಶನವನ್ನು ಮಾಡಲು ನಾನು ಹಾಗೂ ಪ್ರಕಾಶ್ ಹೋದಾಗ ಹೋದಾಗ, ಅವರ ಟೇಬಲ್ ಮೇಲೆ ಇದ್ದ ಒಂದು ಹಾಳೆ ನಮ್ಮನ್ನು ತುಂಬಾ ಆಶ್ಚರ್ಯಗೊಳಿಸಿತ್ತು. `ನಾ ಕಂಡಂತೆ ತ್ರಿವೇಣಿ' ಅನ್ನುವ ಶೀರ್ಷಿಕೆ ಬರೆದು, ಅದರ ಕೆಳಗೆ ತ್ರಿವೇಣಿ ಜೊತೆಗಿನ ತಮ್ಮ ಬದುಕಿನ ಅನುಭವಗಳನ್ನು ಬರೆಯಲಿಕ್ಕೆ ಶುರುಮಾಡಿದ್ದರು. ಸುಮಾರು ಮುಕ್ಕಾಲು ಪೇಜು ಬರೆದಿದ್ದರು. ಹಿಂದೊಮ್ಮೆ ನಾವು ತ್ರಿವೇಣಿ ನೀವು ಕಂಡಂತೆ ತ್ರಿವೇಣಿ ಬಗ್ಗೆ ಬರೆದುಕೊಡಿ ಅಂತ ಕೇಳಿಕೊಂಡಾಗ, ತುಂಬಾ ನೋವಿನಿಂದ ಅದನ್ನು ಮಾತ್ರ ಬರೆಯಲು ಆಗುವುದಿಲ್ಲ ಅಂತ ಹೇಳಿದ್ದರು. ಆದರೆ ಅವರ ಕೊನೆಯ ದಿನಗಳಲ್ಲಿ ತ್ರಿವೇಣಿ ಬದುಕಿನ ಕುರಿತು ಅವರು ಬರೆಯಲಿಕ್ಕೆ ಮನಸ್ಸು ಮಾಡಿದ್ದರು. ಬರೆಯಲಿಕ್ಕೆ ಶುರುಮಾಡಿದ್ದರು. ನಾವು ಹಿಂದೆ ಹೇಳಿದ ಮಾತಿಗೆ ಸೋತು ಮತ್ತೇ ಬರೆಯಲಿಕ್ಕೆ ಮನಸ್ಸು ಮಾಡಿದ್ದರು. ಆದರೆ ಅದು ಕೂಡ ಬರೆಸಿಕೊಳ್ಳುವುದು ಆ ದೇವರಿಗೆ ಇಷ್ಟವಿಲ್ಲದಂತೆ ಕಂಡಿರಬಹುದು. ತ್ರಿವೇಣಿಯ ನೆನಪು ಬೆಳಗುವ ಮುನ್ನವೇ ಆ ಬೆಳಕನ್ನು ಆರುವಂತೆ ಮಾಡಿದ್ದು ಮಾತ್ರ ಮರೆಯಲಾಗದ ದೊಡ್ಡ ದುರಂತ. ಮೊದಲಿನಿಂದಲೂ ಶಂಕರ್ಗೆ ತ್ರಿವೇಣಿ ಕತೆಗಳು, ಕಾದಂಬರಿಗಳು ಇಂಗ್ಲೀಷ್ ಸಾಹಿತ್ಯಕ್ಕೆ ಹೋಗಬೇಕೆಂದು ತುಂಬಾ ಆಸೆ ಪಟ್ಟಿದ್ದರು. ಮಗಳು ಮೀರಾ ಕುಮಾರ್ ಕೂಡ ಈ ಪ್ರಯತ್ನಕ್ಕೆ ಕೈ ಹಾಕಿದ್ದರು. ಅದಕ್ಕಾಗಿ ಈಗಾಗಲೇ ತ್ರಿವೇಣಿ ಬರೆದಿದ್ದ ಕಾದಂಬರಿಗಳು, ಸಣ್ಣ ಕಥೆಗಳನ್ನು ಇಂಗ್ಲೀಷ್ಗೆ ತರ್ಜುಮೆ ಮಾಡಿದ್ದರು. ಇಂಗ್ಲೀಷ್ನಲ್ಲಿ ಪ್ರಕಟಿಸಲು ಪ್ರಕಾಶಕರ ಜೊತೆ ಮಾತುಕತೆಯನ್ನು ನಡೆಸಿದ್ದರು. ಈಗಾಗಲೇ ಇಂಗ್ಲೀಷ್ನಲ್ಲಿ ಬರೆದಿದ್ದ ಕಥೆಗಳ ಫ್ರೂಫ್ ನೋಡುತ್ತಿದ್ದರು. ತ್ರಿವೇಣಿಯ ಪುಸ್ತಕಗಳು ಇಂಗ್ಲೀಷ್ಗೆ ಪರಿವರ್ತನೆ ಆಗುವ ಕೆಲಸ ಹಾಗೆಯೇ ನೆನಗುಂದಿಗೆ ಉಳಿಯಿತು.
ತ್ರಿವೇಣಿ ಸಾವಿನ ದಿನ!
ತ್ರಿವೇಣಿ ಸಾವಿನ ಕ್ಷಣದ ದಿನಗಳನ್ನು ಶಂಕರ್, ಕಗ್ಗರೆ ಪ್ರಕಾಶ ಸಂಪಾದಿತ `ತ್ರಿವೇಣಿಗೆ ಮಿಡಿದ ಶಂಕರ್' ಹೊತ್ತಿಗೆಯಲ್ಲಿ ಆ ನೆನಪುಗಳನ್ನು ತುಂಬಾ ನೋವಿನಿಂದಲೇ ಹಂಚಿಕೊಂಡಿದ್ದರು. `1963ರಲ್ಲಾದ ತ್ರಿವೇಣಿ ಸಾವು ಎಂದಾಕ್ಷಣವೇ ನನ್ನ ಹೃದಯ ಕಿತ್ತು ಬರುತ್ತದೆ. ಆ ಸಾವಿನ ಆಘಾತ ನನ್ನಲ್ಲಿ ಇನ್ನೂ ಮಾಸಿಲ್ಲ. ಅಧ್ಯಾಪಕನಾಗಿದ್ದ ನಾನು ಶಾರದಾ ವಿಲಾಸ ಕಾಲೇಜಿಗೆ ಸೈಕಲ್ನಲ್ಲಿ ಹೋಗುತ್ತಿದ್ದೆ. ಆಗ ಯಾರೋ ತ್ರಿವೇಣಿ ತೀರಿಕೊಂಡರು ಎಂಬ ವಿಷಯ ತಿಳಿಸಿದರು. ಎದ್ದೆನೋ ಬಿದ್ದೇನೋ ಎಂಬುವಷ್ಟರ ವೇಗದಲ್ಲಿ ಮಿಷನ್ ಆಸ್ಪತ್ರೆಗೆ ಓಡಿಹೋದೆ. ಆಕೆಯ ಎದೆಬಡಿತ ನಿಂತುಹೋಗಿತ್ತು. ನನ್ನ ಎದೆಬಡಿತ ಹೆಚ್ಚಾಗಿತ್ತು. ಮಗಳು ಹುಟ್ಟಿದ ಹನ್ನೊಂದನೇ ದಿನಕ್ಕೆ ಆ ಕ್ರೂರಿ ಭಗವಂತ ಆಕೆಯನ್ನು ನನ್ನಿಂದ ಕಸಿದುಕೊಂಡಿದ್ದ. ನನ್ನ ಮಗಳನ್ನು ತಾಯಿ ಇಲ್ಲದ ತಬ್ಬಲಿ ಮಾಡಿಬಿಟ್ಟ. ತ್ರಿವೇಣಿ ಮುಖವನ್ನೇ ಮಗಳು ನೋಡದಾದಳು. ಇದೂ ಈಗಲೂ ನನ್ನನ್ನು ಬಾಧಿಸುತ್ತಿದೆ. ಏಕೆಂದರೆ ನಾನು ನನ್ನ ಮಗಳಿಗೆ ತಂದೆಯಾಗಬಹುದೇ ಹೊರತು ತಾಯಿಯಾಗಲು ಸಾಧ್ಯವಿಲ್ಲವಲ್ಲ. ಏಷ್ಟೊ ಮಂದಿ ಇನ್ನೊಂದು ಮದುವೆ ಮಾಡಿಕೊಳ್ಳಿ ಎಂದು ಒತ್ತಾಯಿಸಿದರು. ನಾನು ಖಡಾಖಂಡಿತವಾಗಿ ಹೇಳಿಯೇಬಿಟ್ಟೆ; ನನ್ನ ಮಗಳಿಗೆ ಮಲತಾಯಿ ತರುವುದಿಲ್ಲವೆಂದು ತ್ರಿವೇಣಿಗೆ ನಾನು ಹೇಳುತ್ತಿದ್ದೆ. ನಮಗೆ ಮಕ್ಕಳು ಬೇಡ ಕಣೇ ಎಂದು. ಆದರೆ ಅವಳು ಪಟು ಹಿಡಿದಳು. `ಇಲ್ಲರೀ ನಾನು ಏನಾದರೂ ಸರಿ, ನನಗೆ ತಾಯ್ತನದ ಸುಖ ಬೇಕು' ಅಂತ ಹಠ ಹಿಡಿದಳು. ಅವಳ ತಾಯಿ ತಂಗಮ್ಮ ಕೂಡ `ನೀನು ನಮಗೊಂದು ಮಗು ಹೆತ್ತು ಕೊಟ್ಟುಬಿಡು ಸಾಕು' ಅಂತ ಕುಮ್ಮಕ್ಕು ಕೊಟ್ಟಿದ್ದರು. ನಾನು ತ್ರಿವೇಣಿಗೆ ಸೋಲಲೇಬೇಕಾಯಿತು, ಇದರ ಮುಂದಿನ ಜೀವನವೆಲ್ಲಾ ಒಂದು ರೀತಿಯಲ್ಲಿ ನನ್ನ ಹೋರಾಟವೇ ಸರಿ!' ಅವರ ಮಾತು ಮುಗಿದಿತ್ತು. ಮನಸ್ಸಿನಲ್ಲೇ ದೊಡ್ಡ ದುಗುಡ ತುಂಬಿಕೊಂಡಿತ್ತು.
ತ್ರಿವೇಣಿ ಮೊಮ್ಮಕ್ಕಳು |