Friday, 26 April 2013

ಮಲ್ಲರು ಬೇಕು



ಛಲದಂಕ ಮಲ್ಲರ ಹುಡುಕುತಾ ಬಂದಿಹೆನು.
ನೀವೇನು ಎಲ್ಲಿಹರೆಂದು ತಿಳಿದಿಹರೇನು?
ಸಿರಿಸಂಪತ್ತನ್ನು ಹೊತ್ತೊಯ್ಯದಂತೆ
ತಲೆಗಂಟಿದ ಅಧಿಕಾರದ ಕಿರೀಟವನು ಸದಾ ಕಾಯುವ
ಕೈ ಹಿಡಿದ ಮನದನ್ನೆಯರ ಬೆಂಗಾವಲಾಗುವ
ಮಲ್ಲರನು ಹುಡುಕುತಿಹೆನು...
ಹಣವಿದೆ, ಅಧಿಕಾರವಿದೆ, ಸೌಂದರ್ಯವಿದೆ
ಇಷ್ಟಪಟ್ಟಿದ್ದೆಲ್ಲವೂ ಕ್ಷಣಮಾತ್ರದಲಿ ಕಣ್ಣಮುಂದೆ.
ಬಯಸದೇ ಬರುವ ಭಾಗ್ಯ, ತಡೆಯಲು ಮನಸಿಲ್ಲ.
ಯಾವುದು ಚೆನ್ನ, ಯಾವುದು ನಂಬಿಕೆ
ಎಲ್ಲವೂ ಬದುಕಿನ ತಿಳಿನೀರಿನಂತೆ.
ಎಲ್ಲಾ ಇರುವ, ಇದ್ದು ಇಲ್ಲದಂತೆ ಬದುಕುವ ಸ್ಥಿತಿ
ನಂಬಿಕೆ ಕಾಣುತ್ತಿಲ್ಲ ನಿಯತ್ತಿನ ನಿಧಿ ಸಿಗುತ್ತಿಲ್ಲ
ಹುಡುಕಲು ಯೋಧರು ಬೇಕು...
ಅದಕಾಗಿ ಸೋಲೊಪ್ಪದ ಛಲದಂಕಮಲ್ಲರನು
ಹುಡುಕುತಿಹೆನು...
ಬದುಕಿನ ಅರ್ಥಕ್ಕಾಗಿ, ನೆಮ್ಮದಿಗಾಗಿ
ಗೊತ್ತಿದ್ದರೆ ಸಿರಿವಂತರ ವಿಳಾಸ ಕೊಡಿ.