Sunday 29 January 2012

ನ್ಯಾಯದ ಧಿಕ್ಕಾರದ ನಡುವೆ ಅನ್ಯಾಯದ ಬಸಿರು...!


ಸೀನ್ 1, ಕಾರ್ಪೋರೇಷನ್ ಸರ್ಕಲ್ ಟುವಾಡ್ಸ್ ಕೆಜಿ ರೋಡ್, ಹಗಲು/ಬೆಳಗ್ಗೆ 10.30

ಮೊನ್ನೆ ಯಾವುದೋ ಅರ್ಜೆಂಟ್ ಕೆಲಸ ನಿಮಿತ್ತ ಮೆಜೆಸ್ಟಿಕ್ಗೆ ಬಸ್ನಲ್ಲಿ ಹೋಗುತ್ತಿದ್ದಾಗ ಅನಿರೀಕ್ಷಿತವಾದ ಟ್ರಾಫಿಕ್ ಜಾಮ್ ಎದ್ದು ಕಂಡಿತ್ತು. ನನ್ನಂತೆ ಅರ್ಜೆಂಟ್ ಕೆಲಸವಿದ್ದವರು, ಆಫೀಸಿಗೆ ಹೋಗುವವರು, ದೂರದ ಊರಿಗೆ ಹೋಗಬೇಕಾದವರು, ಶಾಲಾ-ಕಾಲೇಜಿಗೆ ಹೋಗುತ್ತಿದ್ದ ಹೆಣ್ಣುಮಕ್ಕಳು, ವಿದ್ಯಾರ್ಥಿಗಳು, ವಯಸ್ಸಾದವರು ಎಲ್ಲರೂ ನಾನಿದ್ದ ಬಸ್ನಲ್ಲಿ ಕುಳಿತಿದ್ದರು. ಸುಮಾರು ಅರ್ಧ ಗಂಟೆವರೆಗೂ ಗಾಡಿ ನಿಂತಲ್ಲೇ ನಿಂತಿತ್ತು. ಹೀಗಿದ್ದರೂ ಆ ದಿನದ ಟ್ರಾಫಿಕ್ ಜಾಮ್ ಕೆಲವು ಹೊತ್ತಿನವರೆಗೆ ವಿಶೇಷವೆನಿಸದಿದ್ದರೂ ಜಾಮ್ನ ವ್ಯಾಲಿಡಿಟಿ ಹೆಚ್ಚಾದಂತೆಲ್ಲಾ ನನಗ್ಯಾಕೋ ಡೌಟ್ ಬರಲಿಕ್ಕೆ ಶುರುವಾಯಿತು. ಪಕ್ಕದಲ್ಲಿದ್ದವರನ್ನು ಕೇಳಿದೆ. ಯಾರ ಹತ್ತಿರವೂ ಆ ಟ್ರಾಫಿಕ್ ಜಾಮ್ಗೆ ಸಂಬಂಧಪಟ್ಟ ಹಾಗೆ ಮಾಹಿತಿ ಸಿಗಲಿಲ್ಲ. ಬಸ್ನ ಡ್ರೈವರ್ ತಲೆಕೆರೆದುಕೊಳ್ಳುತ್ತಿದ್ದ. ಮನಸ್ಸಿನಲ್ಲಿ ಯಾರನ್ನೋ ಬಯ್ಯುತ್ತಿದ್ದ. ಕಿಟಕಿ ಆಚೆ ನೋಡಿದೆ. ನಮ್ಮ ಹಿಂದೆ ಮುಂದೆ ನಿಂತಿದ್ದ ಬಸ್ನ ಜನರೆಲ್ಲಾ ಇಳಿದು ತಮ್ಮ ಪಾಡಿಗೆ ನಡೆದುಕೊಂಡು `ಇದು ಮುಗಿಯದ ಕಥೆ' ಅಂತ ನಡೆದುಕೊಂಡು ಹೋಗುತ್ತಿದ್ದರು. ಬಸ್ಗಳು ಸ್ವಲ್ಪ ಮುಂದೆ ಹೋದವು. ಡ್ರೈವರ್ ತಲೆಕೆಟ್ಟು ಗಾಡಿಯನ್ನು `ಯೂ ಟರ್ನ್  ಮಾಡಿಕೊಂಡು ಟೌನ್ ಹಾಲ್ ಫ್ಲೈ ಓವರ್ ಹತ್ತಿ ಗೂಡ್ಸ್ ಶೆಡ್ ರೋಡ್ ಮೂಲಕ ಮೆಜೆಸ್ಟಿಕ್ ಹೇಗೋ ಮುಟ್ಟಿಸಿದ. ಇಡೀ ವಾತಾವರಣ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳುವ ಮನಸ್ಸುಗಳ ನೋವನ್ನು ಹೇಳುತ್ತಿತ್ತು. ಎಲ್ಲರೂ ಆ ದಿನದ ಟ್ರಾಫಿಕ್ ಜಾಮ್ ಬಗ್ಗೆಯೇ ಮುನಿಸಿಕೊಂಡಿದ್ದರು. ಆದರೆ ಟ್ರಾಫಿಕ್ ಜಾಮ್ ಕಾರಣ ಗೊತ್ತಾಗಲಿಲ್ಲ.

ಸೀನ್ 2: ಮೆಜೆಸ್ಟಿಕ್, ಹಗಲು/ಸಮಯ ಮಧ್ಯಾಹ್ನ 12 ಗಂಟೆ
ಮೆಜೆಸ್ಟಿಕ್ ತುಂಬಾ ಜನದೋಕುಳಿ... ಸುಮಾರು ಹತ್ತಾರು ಪೋಲಿಸರು ಆ ಕಡೆ ಈ ಕಡೆ ಓಡಾಡುತ್ತಿದ್ದರು. ಯಾವುದಾದ್ರೂ ಮರ್ಡರ್ ಆಗಿರಬೇಕು ಅಂತ ಅಂದುಕೊಂಡೆ. ನಾನು ಹೋಗಬೇಕಾಗಿದ್ದ ಬಸ್ನ ಫ್ಲಾಟ್ ಫಾರಂ ಇನ್ನು ಸಿಕ್ಕಿರಲಿಲ್ಲ.ಫ್ಲಾಟ್ ಫಾರಂ -17ರಲ್ಲಂತೂ ಜನರ ದಾಂಧಲೆ ಅಬ್ಬರವಾಗಿತ್ತು. ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್, ಮಾರತಹಳ್ಳಿ ಕಡೆ ಕೂಲಿ ಕೆಲಸಕ್ಕೆ ಹೋಗಲಿಕ್ಕಂತಲೇ ದಿನನಿತ್ಯ ಓಡಾಡುತ್ತಿದ್ದ ಜನರು ಕಂಗಾಲಾಗಿದ್ದರು. ಇವತ್ತು ಕೆಲಸ ಮಾಡಲಿಲ್ಲವೆಂದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ...! ಕೆಲವರ ಆತುರ, ವರ್ತನೆ ಹಾಗೆಯೇ ಇತ್ತು. ಏಷ್ಟು ಕಾದರೂ ಬಸ್ ಬರಲಿಲ್ಲ. ಕಂಟ್ರೋಲರ್ `ಬಸ್ ಬರುತ್ತೇ ಹೆದ್ರಬ್ಯಾಡ್ರಿ... ನಾ ಏನ್ ಮಾಡ್ಲಿರೀ.. ಅವ್ರು ಗಲಾಟೆ ಮಾಡಿದ್ರೆ...' ಅಂತ ಜನ ಕೇಳಿದ ಹತ್ತು ಪ್ರಶ್ನೆಗಳಿಗೆ ರೆಡಿಮೇಡ್ ಉತ್ತರ ಕೊಡುತ್ತಿದ್ದ. ನನಗ್ಯಾಕೋ ಟ್ರಾಫಿಕ್ ಜಾಮ್ ಯಾಕೆ ಆಗಿದೆ ಅಂತ ಕೇಳಲಿಕ್ಕೆ ಮನಸ್ಸಾಗಲಿಲ್ಲ. ಯಾವುದೋ ಬಸ್ ಬಂದಿತು. ನೂರಾರು ಜನರು ಒಮ್ಮಿದೊಮ್ಮೆಲೇ ನುಗ್ಗಿದರು. ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಹುಡುಗರು ಬಾಗಿಲ ಕಡೆಗೆ ಓಡದೇ ಸೀದಾ ಕಿಟಿಕಿ ಮೂಲಕ ನುಗ್ಗಿ ತಮ್ಮ ಸೀಟನ್ನು ರಿಸರ್ವ್ ಮಾಡಿಕೊಳ್ಳುತ್ತಿದ್ದರು. ತೆಳ್ಳಗೆ ಇದ್ದ ಹುಡುಗರು ತುಂಬಾ ಈಝಿಯಾಗಿ ಕಿಟಿಕಿ ಮೂಲಕ ಒಳಗೆ ನುಗ್ಗಿದರು. ಪ್ಯಾಂಟು ಶರ್ಟ್ ಹಾಕಿಕೊಂಡ ಒಬ್ಬ ಆಫೀಷಿಯಲ್ ಪರ್ಸನ್ ನುಗ್ಗಲಿಕ್ಕೆ ಹೋಗಿ ತನ್ನ ಕತ್ತನ್ನು ಸಿಕ್ಕಿಸಿಕೊಂಡು ಓದ್ದಾಡುತ್ತಿದ್ದ. ಹೆಗಲಿಗೆ ಹಾಕಿಕೊಂಡಿದ್ದ ಬ್ಯಾಗು ಕೆಳಗೆ ಬಿದ್ದಿತು. ಈತನ ಕುತ್ತಿಗೆ ಒಳಗೆ ಇದೆ. ನುಗ್ಗಲು ತಿಣುಕುತ್ತಿದ್ದ. ಕೊನೆಗೆ ಬಸ್ನೊಳಗಿದ್ದ ಮಹಾನುಭಾವ ಇವರನ್ನು ಹಿಡಿದೆಳೆದ. ಇನ್ಯಾರೋ ಮಹಾನುಭಾವ ಬಿದ್ದಿದ್ದ ಬ್ಯಾಗನ್ನು ತೆಗೆದುಕೊಟ್ಟ. ಥ್ಯಾಂಕ್ಸ್ ಹೇಳೋಕೆ ಅಂತ ಆ ಪರ್ಸನ್ ತಿರುಗಿದರೆ ಬ್ಯಾಗ್ ಕೊಟ್ಟ ವ್ಯಕ್ತಿ ತನ್ನ ಬಸ್ ಬಂತು ಅಂತ ಓಡುತ್ತಿದ್ದ.
ಪಾಪ.. ಬಸ್ ಬಂದ ರಭಸದಲ್ಲಿ ಕೆಲವು ಉತ್ತರ ಭಾರತದ ಹುಡುಗರು ಲೇಡೀಸ್ ಸೀಟಲ್ಲಿ ಗೊತ್ತಿಲ್ಲದೇ ಕುಳಿತುಕೊಂಡಿದ್ದರು. ಅರ್ಜೆಂಟಲ್ಲಿ ಏನೋ ಸೀಟು ಸಿಕ್ತಲ್ಲ ಅಂತ ಖುಷಿಯಲ್ಲಿದ್ದರು. ಅವರ ಜಾಗಕ್ಕೆ ಬಂದ ನಾಲ್ಕೈದು ಹೆಂಗಸರಲ್ಲಿ ಒಬ್ಬಳು `ಇದು ಲೇಡಿಸ್ ಸೀಟು.. ಏಳಿ' ಅಂತ ಅವಾಜ್ ಹಾಕಿದಳು. ಇವರಿಗೆ ಕನ್ನಡ ಅರ್ಥವಾಗದು. ಆ ಘಟವಾಣಿಗೆ ಹಿಂದಿ ಅಷ್ಟಕಷ್ಟೇ. ಎರಡು ಮೂರು ನಿಮಿಷ ಇವರಿಬ್ಬರ ಭಾಷಾಕಲಹ ಹಾಗೆಯೇ ಮುಂದುವರೆಯಿತು. ಅಲ್ಲಿದ್ದ ಒಂದು ಕಾಲೇಜು ಹುಡುಗಿ ಅವರಿಗೆ ಹಿಂದಿಯಲ್ಲಿ ಅರ್ಥವಾಗುವಂತೆ ಹೇಳಿದಾಗ ಕೊನೆಗೂ ಆ ಹುಡುಗರು ಎದ್ದರು. ಸೀಟು ಸಿಕ್ಕಾಗ ಇದ್ದ ಖುಷಿ, ಏಳುವಾಗ ಇರಲಿಲ್ಲ. ಇವರಿಗೆ ಸೀಟು ಸಿಕ್ಕಿದ್ದನ್ನು ನೋಡಿ ಕೆಲವರು ಹಾಗೆಯೇ ಮುಖಮುಖ ನೋಡಿಕೊಂಡರು. ತಮ್ಮ ಕೆಲಸದ ಸಮಯವನ್ನು ಕಿತ್ತುಕೊಂಡ ಕಾರಣದ ಬಗ್ಗೆ ಅವರ್ಯಾರು ಚಿಂತಿಸಿದ ಹಾಗೆ ಕಾಣಲಿಲ್ಲ. ಯಥಾಪ್ರಕಾರ ಟ್ರಾಫಿಕ್ ಜಾಮ್ ಇನ್ನು ಹೆಚ್ಚಾಗಿಯೇ ಇತ್ತು. ಅದು ನಿಲ್ಲುವ ಸೂಚನೆ ಕಾಣುತ್ತಿರಲಿಲ್ಲ.

ಸೀನ್ 3: ಓಕುಳಿಪುರಂ, ಹಗಲು/ಮಧ್ಯಾಹ್ನ 2.30
ಕೆಲಸ ಮುಗಿಸಿಕೊಂಡು ಬಸ್ಗಾಗಿ ಕಾದುನಿಂತಿದ್ದೆ. ಮುಷ್ಕರದ ಕಾರಣ ಗೊತ್ತಾಗಿತ್ತು. ನನ್ನ ಪಕ್ಕ ಒಬ್ಬ ವಯಸ್ಸಾದ ಹಿರಿಯರು, ಜೊತೆಗೆ ಅವರ ಶ್ರೀಮತಿ, ಸೊಸೆ ಅಥವಾ ಮಗಳು ಇರಬೇಕು. ಅವರು ನನಗಿಂತ ಮೊದಲೇ ಬಸ್ಗಾಗಿ ಕಾಯುತ್ತಿದ್ದರು ಅನ್ನುವುದಕ್ಕೆ ಅವರ ಮುಖಾರವಿಂದವೇ ಹೇಳುತ್ತಿತ್ತು. ಜೊತೆಗಿದ್ದ ಪುಟ್ಟು ಕೂಸು ಅಳುತ್ತಿತ್ತು. ಸಿಕ್ಕಾಪಟ್ಟೆ ಹಸಿದಿತ್ತು ಅಂತ ಬಿಡಿಸಿ ಹೇಳಬೇಕಾಗಿಲ್ಲ. ಮಗುವಿಗೆ ಎದೆ ಹಾಲು ಕುಡಿಸಲು ತಾಯಿಗೆ ಅದು ಅಂತಹ ಜಾಗವಾಗಿರಲಿಲ್ಲ. ಅವಳಿಗೆ ಮುಜುಗರ. ಏಷ್ಟು ಸಮಾಧಾನ ಮಾಡಿದರೂ ಅದು ಕೇಳುತ್ತಿಲ್ಲ. ಮಗು ಮಾತ್ರ ಅಳುತ್ತಲೇ ಇತ್ತು. ಏಲ್ಲಿ ಕುಡಿಸುವುದು. ಪಾಪ ಆ ಹಸಿಗೂಸಿಗೆ ಆ ದಿನ `ದಿ ಗ್ರೇಟ್ ಬೆಂಗಳೂರು ವಕೀಲರು' ಮುಷ್ಕರ ಮಾಡುತ್ತಿದ್ದಾರೆ ಅಂತ ಗೊತ್ತಿಲ್ಲ. ತನ್ನ ಪಾಡಿಗೆ ಅಮ್ಮ ಹಾಲು ಕುಡಿಸು ಅಂತ ಅಳುತಲಿತ್ತು. ವಯಸ್ಸಾದ ಆ ಹಿರಿಯರಿಗೆ ಇದು ಅರ್ಥವಾದಂತೆ ಕಂಡಿತ್ತು. ಆದರೆ ಅವರು ಆಟೋ ಅಥವಾ ಟ್ಯಾಕ್ಸಿಯಲ್ಲಿ ಹೋಗುವಷ್ಟು ಅನುಕೂಲವಾಗಿರಲಿಲ್ಲ. ತಮ್ಮನ್ನು ಮನೆ ಸೇರಿಸುವ ಬಸ್ಸು ಬರಬಹುದೆಂಬ ಕುಹುಕು ಇನ್ನೂ ಅವರನ್ನು ಕಾಡುತ್ತಿತ್ತು. ಬಸ್ ಇನ್ನೂ ಬರಲಿಲ್ಲ. ಆ ಕಡೆ ಕೆಜಿ ರೋಡಿನಲ್ಲಿ ಮುಷ್ಕರ ನಡೆಯುತ್ತಲೇ ಇತ್ತು. ಮಗುವಿನ ಅಳು ಇನ್ನೂ ಜೋರಾಯಿತು. ಅಮ್ಮನಿಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಪಕ್ಕದಲ್ಲಿ ನಿಂತಿದ್ದ ನನ್ನಂತ ಸಾಮಾನ್ಯರು ಕೂಡ ಏನು ಮಾಡುವಂತಿರಲಿಲ್ಲ. ಆ ಹಿರಿಯರು ಆಟೋ ಕೂಗಿದರು. ಅಡ್ರೆಸ್ ಹೇಳಿದರು. ಅವ ಆ ಕಡೆ ಸಿಕ್ಕಾಪಟ್ಟೆ ಜಾಮ್... ಬೇರೆ ರೂಟಿಂದ ಹೋಗಬೇಕು, ಇಷ್ಟು ದುಡ್ಡು ಕೊಡಿ ಅಂತ ಕೇಳಿದ. ನಡುವೆ ಚೌಕಾಸಿ ನಡೆಯಿತು. ಆ ಹಿರಿಯರು ತಮ್ಮ ಹೆಂಡತಿ ಮತ್ತು ಮಗಳ ಕಡೆ ನೋಡಿದರು. ಮಗು ಇನ್ನೂ ಜೋರಾಗಿ ಅಳುತಲಿತ್ತು. ಕೊನೆಗೆ ಆ ವಯಸ್ಸಾದ ಹಿರಿಯರೇ ಸೋತರು. ಆಯ್ತಪ್ಪ ನೀ ಹೇಳಿದ ರೇಟಲ್ಲಿ ಹೋಗೋಣ ನಡಿ ಅಂದರು. ಆಟೋದವನ ಮುಖದಲ್ಲಿ ದೊಡ್ಡ ಖುಷಿ. ಮಗಳು ಮೊದಲು ಏರಿದಳು. ನಂತರ ಆ ವಯಸ್ಸಾದ ಹಿರಿಯರು ಕುಳಿತರು. ಸ್ವಲ್ಪ ಹೊತ್ತಾದ ಮೇಲೆ ಮಗು ಅಳುವುದನ್ನು ನಿಲ್ಲಿಸಿತು. ನನ್ನ ಜೊತೆ ಇದ್ದ ಅನೇಕರು ಯಾವುದೋ ಬಸ್ ದೂರದಲ್ಲಿ ಬರುತ್ತಿರುವುದನ್ನು ಕಂಡು, ಒಮ್ಮೆಯೇ ಹತ್ತಿ ಸೀಟು ಹಿಡಿಯುವ ಕಾತುರದಲ್ಲಿದ್ದೇವು.

ಸೀನ್ 4 : ಕೆಆರ್ ಮಾರ್ಕೆಟು  ಟು ಮಾರತಹಳ್ಳಿ, ಹಗಲು/ಸಾಯಂಕಾಲ 6.30

ಮುಷ್ಕರದ ಜ್ವರ ಕಡಿಮೆಯಾದಂತೆ ಕಾಣುತ್ತಿತ್ತು. ಬಸ್ಗಳ ಓಡಾಟದ ಭರಾಟೆ ಜೋರಾಗಿತ್ತು. ನಾನು ಹತ್ತಿದ್ದ ಬಸ್ನಲ್ಲಿ ಜನರಂತೂ ಮೇಲಿಂದ ಮೇಲೆ ಓಡುತ್ತಾ, ಮೈಮೇಲೆ ಬೀಳುತ್ತಿದ್ದರು. ಇಡೀ ಬಸ್ ಕ್ಷಣ ಮಾತ್ರದಲ್ಲಿ ತುಂಬಿತ್ತು. ಕಂಡಕ್ಟರ್ `ರೈಟ್ ರೈಟ್' ಅಂತ ಕೂಗಿದ. ಕಿಟಕಿ ಪಕ್ಕದಲ್ಲಿ ಕುಳಿತಿದ್ದ ನನಗೆ, ಅಲ್ಲಿ ಪುಟ್ಟ ಹುಡುಗ ಸಂಜೆಪತ್ರಿಕೆ ಇಟ್ಟುಕೊಂಡು `ಪೇಪರ್ ಪೇಪರ್... ವಕೀಲರ ಮುಷ್ಕರ..ಕಂಗಾಲಾದ ಬೆಂಗಳೂರು... ಬಿಸಿ ಬಿಸಿ ಸುದ್ದಿ... ಬಿಸಿ ಬಿಸಿ....' ಅಂತ ಕೂಗುತ್ತಿದ್ದ. ಪೇಪರ್ ತೆಗೆದುಕೊಂಡು ಹಾಗೆ ಕಣ್ಣಾಡಿಸಿದೆ. ಪಕ್ಕದಲ್ಲಿದ್ದ ಹಿರಿಯರೊಬ್ಬರು ಆ ಪೇಪರನ್ನು ತುಂಬಾ ಸಿಟ್ಟಿನಿಂದ ನೋಡುತ್ತಿದ್ದರು. ನಾನು ಅವರ ಮುಖ ನೋಡಿದೆ. ನನ್ನ ಜೊತೆ ಮಾತನಾಡಿದರು. `ನೋಡಿ ಇವತ್ತು ನನಗೆ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಕೆಲಸ ಇತ್ತು. ಸಿಕ್ಕಾಪಟ್ಟೆ ಅಜರ್ೆಂಟು ಕೆಲಸ ಅದು. ಕೈಯಲ್ಲಿ ಲಕ್ಷಾಂತರ ಕ್ಯಾಶ್ ಇತ್ತು. ಏನ್ ಮಾಡೋದು ಈ ವಕೀಲರ ಗಲಾಟೆಯಲ್ಲಿ ನಾನು ಸಿಕ್ಕಿಹಾಕಿಕೊಂಡಾಗ ಕೈಯಲ್ಲಿದ್ದ ಕ್ಯಾಶ್ನ ಬ್ಯಾಗು ಕೆಳಗೆ ಬಿದ್ದುಬಿಟ್ಟಿತ್ತು. ಕೆಳಗೆ ನೋಡಿದರೆ ಬ್ಯಾಗ್ ನೆಲದಲ್ಲಿ ಇರಲಿಲ್ಲ. ನನ್ನ ಎದೆ ಧಸ್ಸಂಕ್ಕೆಂದಿತು. ತುಂಬಾ ಕಷ್ಟಪಟ್ಟು ಜೀವನವಿಡೀ ಸಂಪಾದಿಸಿದ ಹಣವದು. ರಿಟೈರ್ ಆಗಿದ್ದೇನೆ, ಇದೆ ನನ್ನ ಜೀವನಕ್ಕೆ ಆಧಾರವಾಗಿತ್ತು. ನನ್ನ ಇಡೀ ಜನುಮದ ಬೆವರು ಆ ಬ್ಯಾಗಿನಲ್ಲಿ ಅಡಗಿತ್ತು. ನೋಡಿದರೆ ಒಂದು ಕ್ಷಣದಲ್ಲಿ ಮಾಯವಾಗಿತ್ತು. ಆ ಕ್ಷಣ ಏಷ್ಟು ಅಳಬೇಕು ಅಂತ ಅರ್ಥವಾಗಲಿಲ್ಲ. ನನ್ನ ದುಃಖದ ಕಟ್ಟೆ ಒಡೆಯಿತು. ಹೆಂಡ್ತಿ ಮಕ್ಕಳು ನೆನಪಾದರು. ಅಲ್ಲಿಯೇ ಕುಸಿದು ಬಿದ್ದೆ. ಹತ್ತಿರದಲ್ಲಿದ್ದ ಪೋಲಿಸರನ್ನು ಹೋಗಿ ಕೇಳಿದೆ. ನನ್ನ ಬ್ಯಾಗು ಕಳಿದಿದೆ, ಹುಡುಕಿಕೊಡಿ ಅಂತ ಕೇಳಿದೆ. `ಅಯ್ಯೋ ನಿಮ್ಮದು ಬರೀ ಬ್ಯಾಗ್ ಅಷ್ಟೇ..! ಇಲ್ಲಿ ಪರ್ಸ್ , ಕ್ಯಾಮೆರಾ, ಶರ್ಟು -ಪ್ಯಾಂಟು ಹರ್ಕೋಂಡವ್ರು ಇದ್ದಾರೆ... ಹೋಗಿ ಹೋಗಿ' ಅಂತ ಹೇಳಿದ. ಆತನಿಗೆ ಬ್ಯಾಗ್ನಲ್ಲಿ ಏನಿತ್ತು ಅಂತ ಮಾತ್ರ ಹೇಳಲಿಲ್ಲ. ಮೈಯೆಲ್ಲಾ ಬೆವತಿತ್ತು. ಈ ಮುಖ ಇಟ್ಕೊಂಡು ಮನೆಗೆ ಹೇಗೆ ಹೋಗಲಿ ಅಂತ ತಲೆಕೆಡಿಸಿಕೊಂಡಿದ್ದೆ. ಯಾರೋ ನನ್ನ ಭುಜ ಮುಟ್ಟಿದಂತಾಗಿತ್ತು. ತಿರುಗಿ ನೋಡಿದೆ, ಯಾವುದೋ ಕಾಲೇಜು ಹುಡುಗ ನನ್ನ ಬ್ಯಾಗನ್ನು ಹಿಡಿದುಕೊಂಡು ನಿಂತಿದ್ದ. ಸರ್ ನಿಮ್ಮ ಬ್ಯಾಗು' ಅಂತ ಹೇಳಿದ. ನನ್ನ ಕಣ್ಣಲ್ಲಿದ್ದ ನೀರು ಆತನಿಗೆ ದೊಡ್ಡ ನಮಸ್ಕಾರವನ್ನು ಹೇಳಿತ್ತು. ನನ್ನ ಹಣೆಬರಹ ಮುಷ್ಕರದ ದಿನ ಗಟ್ಟಿಯಾಗಿತ್ತು. ಬ್ಯಾಗನ್ನು ಎತ್ತಿಕೊಂಡು ಹತ್ತಿರದಲ್ಲಿದ್ದ ಮೈಸೂರು ಬ್ಯಾಂಕಿಗೆ ಹೋಗಿ ಹಣ ಜಮಾ ಮಾಡಿದೆ. ಆ ಕ್ಷಣ ಸಿಕ್ಕ ನೆಮ್ಮದಿಯ ಉಸಿರನ್ನು ಹಿಂದೆ ಯಾವತ್ತು ಉಸಿರಲಿಲ್ಲ. ಮುಂದೆ ಕೂಡ ಉಸಿರುತ್ತೇನೆ ಅಂತ ಗೊತ್ತಿಲ್ಲ' ಅಂತ ನನ್ನ ಮುಖ ನೋಡಿಕೊಂಡು ಹೇಳಿದಾಗ ಅವರ ನೋವಿನ ದನಿ ನನಗೆ ಅರ್ಥವಾಗಿತ್ತು. ಪೇಪರ್ ನೋಡಿಕೊಂಡು ಬಸ್ಗಳತ್ತ ಹಾಗೆ ಕಣ್ಣಾಡಿಸಿದೆ. ಪಾಪದ ಜನರು ಆ ದಿನ ಏನೂ ಆಗಿಲ್ಲವೆಂಬಂತೆ ಓಡಾಡುತ್ತಿದ್ದರು. ಪಕ್ಕದಲ್ಲಿದ್ದ ಆ ವ್ಯಕ್ತಿ ತನ್ನ ಕಥೆ ಹೇಳಿ ನನ್ನ ಭುಜಕ್ಕೆ ಒರಗಿ ಸಣ್ಣಗೆ ತೂಗಡಿಸುತ್ತಿದ್ದರು. `ಅಂತೂ ಮನೆ ಸೇರಿದೆ' ಅನ್ನುವ ನೆಮ್ಮದಿಯಲ್ಲಿ ಒಳಗೆ ಬಂದರೆ ಮನೆಯಲ್ಲೂ ಟೀವಿಯಲ್ಲಿ ಅದೇ ಲಾಯರ್ಗಳ `ಬ್ರೇಕಿಂಗ್ ನ್ಯೂಸ್'. ಮತ್ತೇ ಮೂಡ್ ಆಫ್...!

ಇಡೀ ಊರಿಗೆ ನ್ಯಾಯ ಹೇಳೋ ಜನಗಳಿಗೆ ಬುದ್ದಿ ಹೇಳುವರ್ಯಾರು...?  ಇದು ನಮ್ಮ ಜನರಿಗೆ ಎಂದೂ ಅರ್ಥವಾಗದ ಸಂಗತಿ.