Saturday, 12 May 2012

ಅದು ಅಮ್ಮನದೇ ಮುತ್ತು..!

(ಮೇ13, ಮದರ್ಸ್ ಡೇ, ಅರ್ಥಾತ್ ವಿಶ್ವತಾಯಂದಿರ ದಿನ, ಈ ದಿನದ ನೆನಪಿನಲ್ಲಿ ಅಮ್ಮನ ಬಗ್ಗೆ)




















ಅಮ್ಮನಿಗೆ ಪರಿಪರಿಯಾಗಿ ಕೇಳಿಕೊಂಡಿದ್ದೆ.
ಅಮ್ಮ ಮುಂದೆಂದೂ ಇಂತಹ ತಪ್ಪು ಮಾಡಲಾರೆ..!
ಕ್ಷಮಿಸಿ ಬಿಡು ಎನ್ನನು...
ಅಮ್ಮ ಮೌನವಾಗಿ ಕೇಳಿದಳು, ನಗುತ್ತಾ ಹೇಳಿದಳು.
ಮಗು, ಒಪ್ಪಬೇಕಾದವಳು,
ಮಾಡಬಾರದು ಅಂತ ಹೇಳುವ ವಯಸು ಮುಗಿದಿದೆ ನನಗೆ.
ನೀನಿನ್ನೂ ಚಿಕ್ಕ ಮಗು ಅಲ್ಲ..!
ಬೆಳೆದ ದೇಹ ನಿನ್ನದು
ಹಾರುತ್ತಿರುವ ಪಕ್ಷಿ, ಓಡುವ ಪ್ರಾಣಿ ನೀನು.
ಈಗಾಗಲೇ ನಿನಗರಿವಿಲ್ಲದೇ, ನಿನ್ನೊಳಗೆ ಇನ್ನೊಬ್ಬ ಅಮ್ಮನನ್ನು
ತಂದು ಇಟ್ಟಿದ್ದೇನೆ.
ಅವಳು ಇದ್ದಾಳೆ, ನಿನ್ನೊಳಗೆ, ನಿನಗರಿವಿಲ್ಲದೇ..!
ಜೊತೆಗೆ ನಿಮ್ಮಪ್ಪನೂ ಬೆನ್ನಿಗಂಟಿದ್ದಾನೆ.
ನಿನ್ನೊಳಗೆ ಇಬ್ಬರೂ ಇದ್ದಾರೆ, ಕೊರಗುವ ಪ್ರಶ್ನೆಯೇ ಇಲ್ಲ.
ಕೇಳುವುದೇನಿದ್ದರೂ ಅವರನ್ನು ಕೇಳು..!
 -------2----------
ಮೆದು ಮಾಂಸದವರೆಗೆ ನೀನು ನನ್ನವನಾಗಿದ್ದೆ.
ನಾ ಹೇಳುತ್ತಿದ್ದೆ, ನೀನು ಕೇಳುತ್ತಿದ್ದೆ.
ನೀನು ಈಗ ಬಲಿತದೇಹ. ತಪ್ಪು ಮಾಡುವ ಮುಂಚೆ, ತಪ್ಪು
ಮಾಡಿದ ಮೇಲೆ, ನಿನ್ನೊಳಗಿನ ಅಮ್ಮನನ್ನೇ ಕೇಳು.
ಅವಳು ಕ್ಷಮೆ ನೀಡಿದರೆ...
ನಾನು ಕ್ಷಮೆ ನೀಡಿದಂತೆ.
ನೀನಿನ್ನೂ ಚಿಕ್ಕವನಲ್ಲ... ಎತ್ತಿ ಮುದ್ದಾಡುವ ಮಗುವಲ್ಲ..!
ಮತ್ತೋಮ್ಮೆ ಅಮ್ಮ ಮಾತನ್ನು ಹೇಳಿದಳು, ಎಚ್ಚರಿಸಿದಳು.
ಅಮ್ಮನ ಮಾತು ಕಠೋರವಾಗಿತ್ತು, ಒಡಲ ನೋವು ತುಂಬಿತ್ತು.
ಸುತ್ತಲೂ ಕತ್ತಲು ಕವಿದಿತ್ತು. ಅಮ್ಮನ ದನಿ ಬೆಳಕಾಗಿರಲು..
ಅಮ್ಮ... ಅಮ್ಮ... ಅಮ್ಮ... ಅಂತ ಜೋರಾಗಿ ಕಿರುಚಿದೆ.
ಅಮ್ಮ ಅಂತ ಕೂಗಿದ ನನ್ನ ದನಿಯ ನೋವಿಗೆ
ಒಳಗೆ ಯಾರೋ ನನ್ನ ಎದೆಗೆ
ಮುತ್ತಿಕ್ಕಿದಂತಾಯಿತು.

  -----3--------
ಹೌದು, ಇದು ನನ್ನ ಅಮ್ಮನದೇ ಮುತ್ತು.
ಅಮ್ಮ ಹೇಳಿದ್ದು ನಿಜ... ಅವಳು ಪೇಳಿದಾಗೆ
ನನ್ನೊಳಗೆ  ಇನ್ನೊಬ್ಬ ಅಮ್ಮ ಇದ್ದಾಳೆ. ಸೇರಿಕೊಂಡಿದ್ದಾಳೆ.
ನಾನು ತಪ್ಪು ಮಾಡಿದ್ದಕ್ಕೆ ದುಃಖಿಸುತ್ತಿದ್ದಾಳೆ. ಉಮ್ಮಳಿಸಿ ಅಳುತ್ತಿದ್ದಾಳೆ.
ಅಮ್ಮ... ಹೇಗೆ ನಿನ್ನನು ಸಮಾಧಾನ ಮಾಡಲಿ,
ಕಾಡುತಿಹೆ ನೀನು... ಕ್ಷಮೆ ಕೇಳುವೆ.
ಎದೆಯಲಿ ನೀನಿರುವೆ, ಹೇಗೆ ಹೊರಿಸಲಿ
ನನ್ನ ತಪ್ಪಿನ ಭಾರವ..!
ಬೆನ್ನಿಗಂಟಿದ ಅಪ್ಪನನ್ನು ಬಿಟ್ಟು ಬಂದು ಬಿಡು ಅಂತ ಕೂಗಿದೆ.
ಬೇಡಿಕೊಂಡರೂ, ಪಾಡಿಕೊಂಡರೂ
ಒಳಗಿನ ಅಮ್ಮ ಬರಲಿಲ್ಲ.
ಬರುವ ಇಚ್ಚೆ ಇದ್ದಂತೆ ಕಾಣಲಿಲ್ಲ.
ಅವಳು ಪಿಸುಗುಟ್ಟಿದ ಒಂದು ಮಾತು
ಅರ್ಥವಾಗಿತ್ತು. ಲೋಕಸತ್ಯವಾಗಿತ್ತು.
ನಾ ಹೊರಗೆ ಬಂದರೆ, ಜೀವನವಿಡೀ ನನ್ನ ಕುಡಿಯನು,
ಕ್ಷಮಿಸುವವರು ಜಗತ್ತಿನಲ್ಲೇ ಯಾರಿಹರು?
ಅವಳು ನೇರವಾಗಿ ಪ್ರಶ್ನಿಸಿದಳು.
ಮಾತು ಅರ್ಥವಾಯಿತು. ಕ್ಷಮೆ ಸಿಕ್ಕಿತು.
ನೀನೊಬ್ಬಳು ನನ್ನ ಜೊತೆಗಿರು.
ನೀನು ಅಲ್ಲೇ ಇರು.. ನಿನ್ನ ಬೆನ್ನಿಗಂಟಿದ ಅಪ್ಪನೂ...