Thursday 15 March 2018

ವಿಭಿನ್ನ ಅನುಭವಧಾರೆಯ ಕಾದಂಬರಿ `ಚಿರಸ್ಮಿತ'

ಸದಾ ನಗುಮುಖ, ಆಪ್ತತೆಯಿಂದ ಎಲ್ಲರಿಗೂ ಇಷ್ಟವಾಗುವ ನಮ್ಮ ನಾಡಿನ ಜನಪ್ರಿಯ ಲೇಖಕರು ಆದಂತಹ ಯತಿರಾಜ್ ವೀರಾಂಬುಧಿ ಅವರ ಕಾದಂಬರಿ 'ಚಿರಸ್ಮಿತ' ಕೃತಿಯನ್ನು‌ಓದಿ ಆ ಕೃತಿಯನ್ನು‌ಮೆಚ್ಚಿ ನನ್ನ ಮಾತುಗಳನ್ನು ಈ ಮೂಲಕ‌ ಹಂಚಿಕೊಂಡಿದ್ದೇನೆ.
ಕಾದಂಬರಿಯ ವಸ್ತು ಎಲ್ಲರಿಗೂ ಇಷ್ಟವಾಗುವಂತಹದ್ದು. ಅವರ ಸರಳ ನಿರೂಪಣೆಯೇ ಓದಿಸಿಕೊಂಡು‌ ಹೋಗುವಂತಹ‌ ಶಕ್ತಿ ಹೊಂದಿದೆ. ಅವರ ಜ್ಞಾನ, ಬದುಕಿನ‌ ಅನುಭವ ದೊಡ್ಡದು. ಅದು ಕೃತಿಯಲ್ಲಿಯೂ ವ್ಯಕ್ತವಾಗುತ್ತದೆ.

ವಿಭಿನ್ನ ಅನುಭವಧಾರೆಯ ಕಾದಂಬರಿ `ಚಿರಸ್ಮಿತ'
`ಚಿರಸ್ಮಿತ' ಕಾದಂಬರಿ ಇದುವರೆಗೆ ನಾನು ಓದಿರುವ ಕಾದಂಬರಿಗಳಲ್ಲಿ ಅತ್ಯಂತ ವಿಭಿನ್ನ ಅನುಭವ ನೀಡಿದಂತಹ ಕಾದಂಬರಿ ಎಂದು ಬಣ್ಣಿಸುವೆ. ಕಾದಂಬರಿಯ ಆಳಕ್ಕೆ ಹೋಗಿ ಅದನ್ನು ಬಣ್ಣಿಸುವ ಮುನ್ನ, ಕೃತಿಕಾರನ ಮನಸ್ಥಿತಿಯನ್ನು ಆತನ ವ್ಯಕ್ತಿತ್ವವನ್ನು ಮೊದಲು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಯಾವುದೇ ಲೇಖಕರ ಅಂತರಾಳ, ಮನಸ್ಥಿತಿಯ ತಕ್ಕಹಾಗೆ ಅವರ ಭಾವನೆಗಳು ಸ್ಫುರಣೆಗೊಳ್ಳುತ್ತಲೇ ಇರುತ್ತವೆ. ಭಾವನೆಗಳಿಗೆ ತಕ್ಕಹಾಗೆ ಕೃತಿಯ ನೆಲಘಟ್ಟು ರೂಪುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಕೃತಿಕಾರನ ಅಂತರಾಳವೇ ಸೂಕ್ಷ್ಮ, ನಿಷ್ಕಲ್ಮಶ ಮಮಕಾರದ ಕೊಡದಂತಿದೆ. ಇನ್ನೊಂದು ರೀತಿ ನಮ್ಮ ಆಡುಭಾಷೆಯಲ್ಲಿ ಹೇಳುವುದಾದರೆ ಕೃತಿಕಾರನ ಮನಸ್ಸು ತಾಯಿಕರುಳಿನಂತಿರುವುದರಿಂದ ಸಂವೇದನೆಯನ್ನು ಈ ಕಾದಂಬರಿಯಲ್ಲಿ ಸುಲಭವಾಗಿ ಗುರುತಿಸಬಹುದು.
ಈ ಕಾದಂಬರಿಯನ್ನು ಓದುವುದರ ಜೊತೆಗೆ ನನಗೆ ಕೃತಿಕಾರನ ಅಂತರಾಳವನ್ನು ಹೊಕ್ಕು ನೋಡಿದ ಅನುಭವವಾಯಿತು. ಲೇಖಕರ ಆಂತರಿಕ ಸಂವೇದನೆಯೇ ಈ ರೀತಿ ಇರುವಾಗ ಚಿರಸ್ಮಿತ ಕಾದಂಬರಿಯೂ ಆ ನೆಲೆಗಟ್ಟಿನಲ್ಲಿಯೇ ಬರೆಯುವ ಪ್ರಯತ್ನ ಮಾಡಿರುವುದನ್ನು ಇಲ್ಲಿ ಕಾಣಬಹುದು.
ಬದುಕು ಎಂದ ಮೇಲೆ ಏರಳಿತಗಳ ದಾರಿ, ಕಷ್ಟಸುಖಗಳ ಹಗಲು ರಾತ್ರಿ ಸಹಜ. ಕೃತಿಕಾರನ ಸಾಹಿತ್ಯವೂ ಅದೇ ರೀತಿಯಲ್ಲೇ ರೂಪುಗೊಳ್ಳುತ್ತದೆ. ಸದಾ ಬೇರೆಯವರಿಗೆ ಒಳ್ಳೆಯದನ್ನು ಬಯಸುವ ನಿರ್ಮಲ ಮನಸ್ಸಿದ್ದವರು ಮಾತ್ರ ಚಿರಸ್ಮಿತದಂತಹ ಕಾದಂಬರಿಯನ್ನು ಬರೆಯಬಲ್ಲರು, ಅರ್ಥಮಾಡಿಕೊಳ್ಳಬಲ್ಲರು. ಇಲ್ಲವಾದರೆ ಕೃತಿಯೂ ಸುಖಕ್ಕಿಂತ ಕಷ್ಟದ ವಾಸ್ತವವನ್ನೇ ರಹದಾರಿಯನ್ನಾಗಿಸಿಕೊಂಡು ಓದುಗರ ಚಿಂತನೆಗೆ ಕಾರಣವಾಗುತ್ತದೆ. ಚಿರಸ್ಮಿತದಲ್ಲಿ ಸುಹಾಸಿನಿಯ ಬದುಕು ಕಷ್ಟದ ಮಡಿಕೆಯಲ್ಲಿ ನೊಂದು ಬೆಂದರೂ ಅವಳ ಸುತ್ತಲಿನ ಪ್ರಪಂಚ ಸುಖದ ಉಯ್ಯಾಲೆಯಲ್ಲಿ ತೇಲುತ್ತಲೇ ಹೋಗುತ್ತದೆ. ಒಂದು ಶತಮಾನದ ಕಾಲಘಟ್ಟದಲ್ಲಿ ಬದುಕಿ ಬಾಳಿದ ತಲೆಮಾರನ್ನು ನಿರೂಪಿಸಿರುವ ಲೇಖಕರು ತುಂಬಾ ಆಳಕ್ಕೆ ಹೋಗದೇ ನೇರವಾಗಿ ಕಾದಂಬರಿಯನ್ನು ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ಈ ರೀತಿಯ ನಿರೂಪಣೆ ಕೃತಿಕಾರನ ಸ್ವಾಭಾವಿಕ ಬರವಣಿಗೆಯ ಶೈಲಿಯಾಗಿದ್ದರೂ ಆಗಿರಬಹುದು, ಅಥವಾ ಈ ಕಾದಂಬರಿಗೆ ಬಳಸಿರುವ ವಸ್ತುನಿಷ್ಠತೆಯೂ ಇರಬಹುದು. 
`ಚಿರಸ್ಮಿತ' ಅನ್ನುವ ಹೆಸರಿನ ಮರ್ಮ ಕಾದಂಬರಿಯ ಕೊನೆಯ ಅಧ್ಯಾಯಗಳಲ್ಲಿ ಪ್ರಸ್ತಾಪವಾಗುತ್ತಾ, ಅದು ಕೂಡ ಒಂದು ಪಾತ್ರವಾಗಿಬಿಡುತ್ತದೆ. ಈ ಅಂಕಿತನಾಮ ಕಥಾನಾಯಕಿಯ ಅನಾಮಧೇಯ ಹೆಸರಾದರೂ ಅದು ಕೂಡ ಪಾತ್ರವಾಗಿ ಕಂಡಾಗ, ಇಡೀ ಕಾದಂಬರಿಯ ಚಿತ್ರಣವನ್ನು ಅದು ತೆರೆದಿಡುತ್ತದೆ. ನಾಯಕಿಯ ಅಷ್ಟು ವರ್ಷದ ಬದುಕನ್ನು ಚಿರಸ್ಮಿತ ಅನ್ನುವ ಪಾತ್ರ ಜನಪ್ರಿಯಗೊಳಿಸುತ್ತದೆ. ಸುಹಾಸಿನಿಯ ಬದುಕನ್ನು ಓದುತ್ತಾ ಹೋದಂತೆ ಆಕೆಯಲ್ಲಿನ ಸದ್ಗುಣಗಳು ಅವಳ ಬದುಕಿನ ಎಲ್ಲ ಕಷ್ಟಗಳನ್ನು ನುಂಗಿಬಿಡುತ್ತವೆ. ಆದರೂ ಓದುಗರಿಗೆ ಅವಳ ಬದುಕನ್ನು ಕಂಡಾಗ ಕಣ್ಣೀರು ಬರದೇ ಇರದು. ಅವಳ ಜೀವನ ಹೀಗಾಗಬಾರದಿತ್ತು ಅಂತ ಯೋಚನೆ ಮಾಡುತ್ತಲೇ ಹೋದಾಗ ಚಿರಸ್ಮಿತ ಎಂಬ ಲೇಖಕಿಯು ಹುಟ್ಟಿಕೊಳ್ಳಲು ಅದು ಕಾರಣವಾಗುತ್ತದೆ ಅನ್ನುವುದು ಕೊನೆಗೆ ಅರಿವಾಗುತ್ತದೆ.
ಕಾದಂಬರಿಯಲ್ಲಿ ಬರುವ ಸುಹಾಸಿನಿ ಮತ್ತು ಸುಫಲಾ ಎಂಬ ಇಬ್ಬರು ಸ್ನೇಹಿತೆಯರ ಬದುಕು ಒಂದೊಂದು ರೀತಿ ಸಾಗುತ್ತದೆ. ಅವಳ ಬದುಕು ಇವಳಂತೆ; ಇವಳ ಬದುಕು ಅವಳಂತೆ ಆಗದೇ ಸಾಗುತ್ತದೆ. ಆದರೆ ಅವರಿಬ್ಬರ ಸ್ನೇಹ ಮಾತ್ರ ಗಟ್ಟಿಯಾಗಿ ಕೊನೆಯವರೆಗೂ ನಿಲ್ಲುವಂತೆ ಲೇಖಕರು ಮಾಡಿದ್ದಾರೆ. ಇಲ್ಲಿ ಸುಹಾಸಿನಿಯ ಬದುಕನ್ನು ಚಿತ್ರಿಸುವಾಗ ಸುಫಲಾಳ ಬದುಕು ಕೇವಲ ಹೋಲಿಕೆಗೆ ಮಾತ್ರ ಸಿಗುತ್ತದೆ. ಇಡೀ ಕಾದಂಬರಿಯಲ್ಲಿ ಖಳನಾಯಕರು ಎಂದು ಗುರುತಿಸುವುದಾದರೆ ಆರಂಭದಲ್ಲಿ ಸುಹಾಸಿನಿಯ ತಂದೆಯೇ ಆಕೆಗೆ ಕಂಟಕವಾಗಿ ವಿರೋಧಿಸುವವನಾದರೆ, ಮಧ್ಯ ಭಾಗದಲ್ಲಿ ಗಜಾನನನೇ ಇಡೀ ಕಾದಂಬರಿಗೆ ತಿರುವು ನೀಡುತ್ತಾನೆ. ಕಾದಂಬರಿಯ ಆರಂಭದಲ್ಲಿ ಗಜಾನನ ಸಾತ್ವಿಕ ವ್ಯಕ್ತಿಯಂತೆ ಕಂಡರೂ, ಬರುಬರುತ್ತ ಅವನ ಹೋರಾಟದ ಮನೋಭಾವವು ಬದಲಾಗುತ್ತಾ ಆತನ ವ್ಯಕ್ತಿತ್ವದಲ್ಲಿಯೂ ಕೂಡ ಕೆಟ್ಟ ಬದಲಾವಣೆಯಾಗುತ್ತದೆ. ಲೇಖಕರು ಚಿತ್ರಿಸಿರುವ ಆತನ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದ ವಿಚಾರಗಳು ಅಂದಿನ ಮೂಡ್ಗೆ ಓದುಗರನ್ನು ಕರೆದುಕೊಂಡು ಹೋಗುತ್ತವೆ. ಮಗ ಭಾರತೀಪ್ರಿಯನ ಬದುಕು ಈ ರೀತಿ ಇರಬಾರದಿತ್ತು, ಬೇರೆ ರೀತಿ ಚಿತ್ರಿಸಬಹುದಾಗಿತ್ತು ಅಂತ ಓದುಗನಾದ ನನಗೂ ಅನಿಸಿತು. ಆತನ ದುರಂತ ಅಂತ್ಯ ಸುಹಾಸಿನಿಯ ಬದುಕನ್ನು ಇನ್ನಷ್ಟು ಗಟ್ಟಿಮಾಡುತ್ತದೆ.
ಇಡೀ ಕಾದಂಬರಿಯಲ್ಲಿ ಮೆಚ್ಚುವಂತಹ ವಿಷಯವೆಂದರೆ, ಸುಹಾಸಿನಿಗೆ ಇಲ್ಲಿ ಯಾರೂ ಖಳನಾಯಕಿಯರಿಲ್ಲ. ಕೃತಿಕಾರನ ಮಹಿಳಾಪಾತ್ರಗಳೆಲ್ಲಾ ಉದಾತ್ತ ಗುಣಸ್ವಭಾವದವರೇ ಆಗಿದ್ದಾರೆ. ಹೆಣ್ಣಿಗೆ ಹೆಣ್ಣೆ ಶತ್ರು ಅನ್ನುವ ಮಾತು ಈ ಕಾದಂಬರಿಯಲ್ಲಿ ಕಾಣುವುದೇ ಇಲ್ಲ. ಅವರೊಳಗೆ ಒಬ್ಬ ಫಿಮಿನೆಸ್ಟ್ ಕೂತಿರಬಹುದೇ? ಇದನ್ನು ನನಗೆ ಗ್ರಹಿಸಲು ಆಗಲಿಲ್ಲ. ಒಟ್ಟಾರೆಯ ಕಾದಂಬರಿಯನ್ನು ನಿರೂಪಿಸಿದ ರೀತಿ ನನಗೆ ಹೊಸದಾಗಿ ಕಂಡರೂ ಒಂದು ಕಾಲಘಟ್ಟವನ್ನು ಹೊರವರ್ತುಲದಲ್ಲಿ ಕಾಣುವಂತೆ ಹೇಳುತ್ತಾ ಹೋಗಿರುವುದು ಮುಖ್ಯ ಅಂಶವೆನಿಸಿಕೊಳ್ಳುತ್ತದೆ.
ಗಂಭೀರವಾಗಿ ಆಳವಾಗಿ ತುಂಬಾ ಶಿಷ್ಟಭಾಷೆಯಲ್ಲಿ ಬರೆದಂತಹ ಕಾದಂಬರಿಗಳಿಗೆ ಇದನ್ನು ಹೋಲಿಕೆ ಮಾಡಲಾಗದು. ಕುವೆಂಪು, ಕಾರಂತ, ಭೈರಪ್ಪರಂತಹ ಕಾದಂಬರಿಗಳನ್ನು ಅನಲೈಸ್ ಮಾಡುವವರಿಗೆ ಈ ಕಾದಂಬರಿ ರುಚಿಸದೇನೂ ಇರಬಹುದು. ಆದರೆ ಸಾಮಾನ್ಯ ಓದುಗರಿಗೆ ಇದು ಸ್ಷಪ್ಟವಾಗಿ ಓದಿಸಿಕೊಂಡು ಹೋಗುವಂತಹ ಶಕ್ತತೆಯನ್ನು ಹೊಂದಿದೆ. ಇಡೀ ಕಾದಂಬರಿಯು ಮೈಸೂರು ಪ್ರಾಂತ್ಯವನ್ನು ಒಳಗೊಂಡಂತೆ ಅಲ್ಲಿನ ವೈದಿಕ ಮನೆತನಗಳ ಕಷ್ಟನಷ್ಟಗಳ ಬವಣೆಯನ್ನು ಕೂಡ ಆಂದ್ರವಾಗಿಸುತ್ತದೆ. 80ರ ದಶಕದ ನಂತರ ಹುಟ್ಟಿದಂತಹ ನನ್ನಂತವರಿಗೆ ನಮ್ಮ ತಂದೆತಾಯಿ, ತಾತಮುತ್ತಾತರ ಕಾಲಘಟ್ಟವನ್ನು ಹೇಳುವಾಗ ಇರುವ ಕುತೂಹಲ ಇಲ್ಲಿಯೂ ವ್ಯಕ್ತವಾಗುತ್ತದೆ. ಅರವತ್ತು, ಎಪ್ಪತ್ತು ಮತ್ತು ಎಂಬತ್ತರ ದಶಕಗಳ ಸಿನಿಮಾಗಳನ್ನು ಕಾದಂಬರಿಯ ಓಘಕ್ಕೆ ಪೂರಕವಾಗಿ ಬಳಸಿಕೊಂಡಿರುವುದು ಕೂಡ ಕೃತಿಕಾರನ ಸೃಜನಶೀಲ ವಿಚಾರವೇ!
ಪುಟ 259ರಲ್ಲಿ ಬರುವ ಒಂದು ಶ್ಲೋಕವು (ಪಿತಾ ರಕ್ಷತಿ ಕೌಮಾರೇ|....) ಕೃತಿಕಾರನಿಗೆ ಇಡೀ ಕಾದಂಬರಿಯನ್ನು ಬರೆಯಲು ವೇದಿಕೆಯನ್ನು ನೀಡಿರಬಹುದು, ಪ್ರೇರಣೆಯನ್ನು ನೀಡಿರಬಹುದು ಅನ್ನುವುದು ನನ್ನ ಭಾವನೆ.
ಇಡೀ ಕಾದಂಬರಿ ನೆನಪಿನಲ್ಲಿ ಉಳಿಯುತ್ತದೆ. ಸಾಹಿತ್ಯಿಕ ವಿಮರ್ಶಾತ್ಮಕವಾಗಿ ನೋಡದೇ ಓದುಗನ ಭಾವನೆಗೆ ತಕ್ಕಂತೆ ನನ್ನ ಮಾತುಗಳನ್ನು ಬರೆಯಲಿಕ್ಕೆ ಪ್ರಯತ್ನಿಸಿದ್ದೇನೆ.
ವಂದನೆಗಳು.

No comments:

Post a Comment