Sunday 5 August 2012

ಬನವಾಸಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಂದ ಘಟನೆ!


(ಈ ಘಟನೆಯನ್ನು ಬೇರೆಯವರು ಮಾತನಾಡಿದ್ದು, ಹಾಗೂ ನಾ ಕಂಡ ಕೆಲವು ನೆನಪುಗಳ ಆಧಾರದ ಮೇಲೆ ನೆನಪಿಸಿಕೊಂಡಿದ್ದೇನೆ ಅಷ್ಟೇ)

ಸುಮಾರು 1997-98ನೇ ಇಸವಿ ಅಂತ ಕಾಣುತ್ತೆ. ಘಟನೆ ನಡೆದು 15 ವರ್ಷಗಳಾಗಿರಬಹುದು. ನಮ್ಮ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಸುನೀಲ್ ಕುಮಾರ್ ದೇಸಾಯಿಯವರು `ನಮ್ಮೂರ ಮಂದಾರ  ಹೂವೇ' ಸಿನಿಮಾ ಶೂಟಿಂಗ್ ಮಾಡುತ್ತಿದ್ದರು. ಸಿನಿಮಾದ ಕಥೆ ನಮ್ಮ ಮಲೆನಾಡಿನ ಸೀಮೆ ಹಾಗೂ ಯಕ್ಷಗಾನಕ್ಕೆ ಸಂಬಂಧಿಸಿದ್ದಾಗಿತ್ತು. ಮುಖ್ಯವಾಗಿ ಹವ್ಯಕರ ಮನೆತನ ಹಾಗೂ ಹವ್ಯಕ ಭಾಷೆಯನ್ನು ಚಿತ್ರದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಲಾಗಿತ್ತು. ಚಿತ್ರದಲ್ಲಿ ಅಭಿನಯಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಪ್ರೇಮಾ, ಸುಮನ್ ನಗರಕರ್ ಇನ್ನು ಹಲವು ಕಲಾವಿದರು ಶಿರಸಿಯಲ್ಲಿ ಬೀಡು ಬಿಟ್ಟಿದ್ದರು ಸಮಯದಲ್ಲಿ ಶಿವರಾಜ್ ಕುಮಾರ್ ರವರಿಗೆ ಶಿರಸಿಯ ಪಕ್ಕದಲ್ಲಿ ಇದ್ದ ಬನವಾಸಿಯ ಐತಿಹಾಸಿಕ ಮಧುಕೇಶ್ವರ ದೇವರ ಬಗ್ಗೆ ಯಾರೋ ತಿಳಿಸಿದ್ದಾರೆ. ಶಿವಣ್ಣನಿಗೂ ಬನವಾಸಿಯನ್ನು ನೋಡೇ ಬಿಡಬೇಕೆಂದು ಅನಿಸಿತು. ಹೋಗಲು ಸಿದ್ದತೆ ಮಾಡಿ ಅಂತ ತಮ್ಮ ಸಹಾಯಕರಿಗೆ ತಿಳಿಸಿದ್ದಾರೆ. ತಲುಪಲು ಎಲ್ಲಾ ರೆಡಿ ಆದ ಮೇಲೆ ಶೂಟಿಂಗ್ ಮುಗಿಸಿಕೊಂಡು ಸೀದಾ ಬನವಾಸಿಗೆ ಬಂದೇ ಬಿಟ್ಟರುಶಿವಣ್ಣ ಬನವಾಸಿಗೆ ಬರುವ ವಿಷಯ ಹೆಚ್ಚಿನವರಿಗೆ ತಿಳಿದಿರಲಿಲ್ಲ. ಬನವಾಸಿಯ ಊರ ನಾಗರಿಕರಿಗೂ ಕೂಡ ಇದು ತಿಳಿದಿರದ ವಿಷಯವಾಗಿತ್ತು. ಶಿವಣ್ಣ ಬರುವ ವಿಷಯವನ್ನು ಸ್ಥಳೀಯ ಪೋಲಿಸರಿಗೆ ಮಾತ್ರ ತಿಳಿಸಲಾಗಿತ್ತು. ದೇವಸ್ಥಾನದಲ್ಲಿ ಬೇಕಾದ ಸಣ್ಣ ಭದ್ರತೆಗೋಸ್ಕರ ಎರಡು ಮೂರು ಪೋಲಿಸರನ್ನು ನಿಯೋಜಿಸಲಾಗಿತ್ತು. ಶಿವರಾಜ್ಕುಮಾರ್ ಯಾವುದೇ ಆಡಂಬರವಿಲ್ಲದೇ ಸರಳವಾಗಿ ಬನವಾಸಿಗೆ ಬಂದು ದೇವರನ್ನು ದರ್ಶನ ಮಾಡಬೇಕೆಂದು ಆಸೆ ಇಟ್ಟುಕೊಂಡು ಬಂದಿದ್ದರು. ಆದರೆ ಶಿವಣ್ಣ ಅಂದುಕೊಂಡ ಹಾಗೆ ಬನವಾಸಿಯಲ್ಲಿ ಆಗಲೇ ಇಲ್ಲ

ಶಿವರಾಜ್ ಕುಮಾರ್ ಬನವಾಸಿಗೆ ಬಂದಿದ್ದಾರೆ. ಅವ್ರು ದೇವಸ್ಥಾನದಲ್ಲಿ ಇದ್ದಾರೆ ಅನ್ನುವ ವಿಷಯ ಇಡೀ ಊರ ತುಂಬಾ ಹಬ್ಬಿ ತ್ತು.  ನಮಗೆಲ್ಲಾ ಶಿವರಾಜ್ ಕುಮಾರ್ ರನ್ನು ನೋಡುವ ಆಸೆ. ದೇವಸ್ಥಾನದ ಕಡೆ ಓಡಿದೆವು. ಬಹಳಷ್ಟು ಜನರು ದೇವಸ್ಥಾನದ ಕಡೆಗೆ ಓಡಿದರು. ಇಡೀ ಊರ ತುಂಬಾ ಶಿವಣ್ಣ ಬಂದಿರುವ ಸುದ್ದಿ ಗೊತ್ತಾಗಿ, ದಿನ ಬುಧವಾರವಿರಬಹುದು. ಊರಲ್ಲಿ ಸಂತೆ ಇತ್ತು,. ಬಹಳಷ್ಟು ಜನರು ಸೇರಿದರುಅಷ್ಟು ದೊಡ್ಡ ನಟ ನಮ್ಮೂರಿಗೆ ಬಂದಿರುವುದೇ ಹೆಮ್ಮೆಯ ಸಂಗತಿ ಅಂದ ಮೇಲೆ, ಶಿವಣ್ಣ ಬನವಾಸಿಯಲ್ಲಿನ ಅವರ ಅಭಿಮಾನಿಗಳನ್ನು ನೋಡದಿದ್ದರೆ ಹೇಗೆ? ಅನ್ನುವ ಮಾತುಗಳನ್ನು ಕೇಳಲಾಯಿತು. ಊರಿನ ಕೆಲವರು (ಯಾರು ಮಾತನಾಡಿದರೋ ನೆನಪಾಗುತ್ತಿಲ್ಲ) ಶಿವರಾಜ್ ಕುಮಾರ್ ರವರಿಗೆ ಜನರಿಗೆ, ಅಭಿಮಾನಿಗಳಿಗೆ ನೀವು ದರ್ಶನ ಕೊಡಲೇಬೇಕು, ನಿಮ್ಮ ಅಭಿಮಾನಿಗಳು ಊರ ಸುತ್ತಮುತ್ತ ತುಂಬಾ ಇದ್ದಾರೆ, ನೀವು ಅವರಿಗೋಸ್ಕರ  ಮಾತನಾಡಬೇಕು ಅಂತ ಮನವಿ ಮಾಡಿಕೊಂಡಾಗ ಶಿವರಾಜ್ ಕುಮಾರ್ ಒಪ್ಪಿಕೊಂಡರು.

 ಶಿವರಾಜ್ ಕುಮಾರ್ ರನ್ನು ಸೀದಾ ಬಸ್ಸ್ಟ್ಯಾಂಡ್ ಪಕ್ಕ ಇದ್ದ ಮಧುಕೇಶ್ವರ್ ಟೆಂಟ್ಗೆ ಕರೆತರಲಾಯಿತು. ಸಾಯಂಕಾಲದ ಶೋ ಕೂಡ ಕಾನ್ಸೆಲ್ ಮಾಡಲಾಯಿತು. ಕಣ್ಣು ಬಿಟ್ಟು ನೋಡುವುದರಲ್ಲಿ ಇಡೀ ಟೆಂಟ್ ತುಂಬಿ ಹೋಯಿತು. ಟೆಂಟ್ ನವರು ಶಿವಣ್ಣನನ್ನು ನೋಡಲಿಕ್ಕೆ ಐದು ರೂಪಾಯಿಯ ಟಿಕೇಟು ಮಾಡಿದ್ದರಂತೆ ಕಾಣುತ್ತೆ ! ಟೆಂಟ್ ತುಂಬಿದ್ದರೂ ಹೊರಗಡೆ ಇದ್ದ ಅನೇಕ ಅಭಿಮಾನಿಗಳಿಗೆ ಶಿವಣ್ಣನನ್ನು ನೋಡಲಿಕ್ಕೆ ಆಗಲೇ ಇಲ್ಲಟೆಂಟ್ ಒಳಗಡೆ  ಶಿವಣ್ಣ  ಬನವಾಸಿಯ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಜನಗಳು ಶಿವಣ್ಣ ಹಾಡಬೇಕೆಂದು ಕೂಗಿದರು. ಎರಡು ಹಾಡುಗಳನ್ನು ಹಾಡಿದರು. ಅವರು ಹಾಡುವಾಗಲೇ ಹೊರಗಡೆ ದೊಡ್ಡ ಗಲಾಟೆ ಆಗಿಬಿಟ್ಟಿತ್ತು. ಶಿವಣ್ಣನನ್ನು ನೋಡಲಾಗದವರೆಲ್ಲಾ ಕೂಗತೊಡಗಿದರು, ನಾವು ಕೂಡ ಶಿವಣ್ಣನನ್ನು ನೋಡಬೇಕು ಒಳಗೆಬಿಡಿ ಅಂತ ಗಲಾಟೆ ಮಾಡತೊಡಗಿದರು. ಇವರ ಕೂಗಾಟ, ಗಲಾಟೆಯನ್ನು ಕಂಡು ಶಿವಣ್ಣ ಹೊರಗೆ ಬಂದರು. ಟೆಂಟ್ನಲ್ಲಿದ್ದ ಜನರು ಕೂಡ ಹೊರಗೆ ಬಂದರು. ಕೊನೆಗೆ ಬಸ್ಸ್ಟ್ಯಾಂಡ್ನ ಹತ್ತಿರ ನಿಂತು ಇಡೀ ಜನರಿಗೆ ಕೈ ಬೀಸಿ ಎಲ್ಲರಿಗೂ ತಮ್ಮ ದರ್ಶನ ನೀಡಿದರುಅಣ್ಣಾವ್ರ ಮಗನನ್ನು ಹತ್ತಿರದಿಂದ ನೋಡಿ ಬನವಾಸಿ ಹಾಗೂ ಸುತ್ತಮುತ್ತಲಿನ ಜನರು ತುಂಬಾ ಖುಷಿಪಟ್ಟರು. ಶಿವಣ್ಣ ಅಭಿಮಾನಿಗಳ ಎದುರು ಮಾತನಾಡಿ, ಪೋಲಿಸರ ಭದ್ರತೆಯೊಂದಿಗೆ ತಮ್ಮ ಕಾರನ್ನೇರಿ ಶಿರಸಿ ಮೂಲಕ ಬೆಂಗಳೂರಿಗೆ ತಲುಪಿದರು

ಘಟನೆಯನ್ನು ಬೇರೆಯವರು ಮಾತನಾಡಿದ್ದು, ಹಾಗೂ ನಾ ಕಂಡ ಕೆಲವು ನೆನಪುಗಳ ಆಧಾರದ ಮೇಲೆ ನೆನಪಿಸಿಕೊಂಡಿದ್ದೇನೆ ಅಷ್ಟೇ. ಬೆಂಗಳೂರಿಗೆ ಬಂದ ಮೇಲೆ ಶಿವಣ್ಣನನ್ನು ನೇರವಾಗಿ ನಾನು ಎರಡು ಮೂರು ಬಾರಿ ಭೇಟಿಯಾಗಿ ಮಾತನಾಡಿದ್ದರೂ, ಬಾಲ್ಯದಲ್ಲಿದ್ದ ಶಿವರಾಜ್ ಕುಮಾರ್ ರವರನ್ನು ನೋಡಬೇಕೆಂಬ ತವಕ ಈಗಿರಲಿಲ್ಲ. ದಿನ ನಾನು ಶಿವಣ್ಣನನ್ನು ನೋಡುವ ಅವಕಾಶ ಮಿಸ್ ಮಾಡಿಕೊಂಡಿದ್ದನ್ನು ಎಂದಿಗೂ ಮರೆಯಲಾಗದು.

ಬಾಲ್ಯದಲ್ಲಿ ಶಿವರಾಜ್ ಕುಮಾರ್ ನನಗೆ ತುಂಬಾ ಫೆವರಿಟ್ ಹೀರೋ ಆಗಿದ್ದ. ಆಗ ಟೀವಿಯಲ್ಲಿ ಭಾನುವಾರ ಹಾಕುತ್ತಿದ್ದ ವಾರಕ್ಕೊಂದು ಸಿನಿಮಾದಲ್ಲಿ ಶಿವಣ್ಣನ ಸಿನಿಮಾಗಳು, ಗುರುವಾರ ತಪ್ಪಿದರೆ ಶುಕ್ರವಾರ ಬರುತ್ತಿದ್ದ ಚಿತ್ರಮಂಜರಿಯಲ್ಲಿ ಶಿವಣ್ಣನ ಹಾಡುಗಳು ಹೆಚ್ಚು ಬರುತ್ತಿದ್ದವು. ಒಂದು ಆಕರ್ಷಣೆಯೂ ಇದ್ದರೂ ಇರಬಹುದು. ಬನವಾಸಿಯಲ್ಲಿ ನಾನೊಬ್ಬ ಮಾತ್ರ ಅಲ್ಲ, ಅನೇಕರು ಶಿವರಾಜ್ ಕುಮಾರ್ ಅಭಿಮಾನಿಗಳಾಗಿದ್ದರು. ಇದಕ್ಕೆ ಇನ್ನೊಂದು ಘಟನೆಯನ್ನು ನೆನಪಿಸಿಕೊಳ್ಳುವುದಾದರೆ, ನಮ್ಮ ಕನ್ನಡ ಶಾಲೆಯ ಹಿಂದೆ ಇದ್ದ  ಹನುಮಂತ ದೇವಸ್ಥಾನದಲ್ಲಿ ಸಾರ್ವಜನಿಕ ಗಣಪತಿಯನ್ನು ಇಡುತ್ತಿದ್ದರು, ಕಾರ್ಯಕ್ರಮ ಇಂದಿಗೂ ಪ್ರತಿವರ್ಷ ನಡೆಯುತ್ತಾ ಬಂದಿದೆ. ಗಣಪತಿಯನ್ನು ಬಿಡುವ ಹಿಂದಿನ ದಿನ ಆರ್ಕೆಸ್ಟ್ರಾ ಇರುತ್ತಿತ್ತು. ಹಾಡು, ಡ್ಯಾನ್ಸ್ ಎಲ್ಲಾ ಇರುತ್ತಿತ್ತು. ಚಿಕ್ಕವರಾಗಿದ್ದ ನಮಗೆ ಆರ್ಕೆಸ್ಟ್ರಾ  ಮ್ಯೂಸಿಕ್ ಕೇಳುವುದೆಂದರೆ ಏನೋ ಖುಷಿ. ಬಾಲ್ಯದಲ್ಲಿದ್ದ ನಮ್ಮ ಮನಸ್ತಿತಿಯನ್ನು ಈಗ ತೆರೆದಿಡುವುದು ತುಂಬಾ ಕಷ್ಟ. ಆರ್ಕೆಸ್ಟ್ರಾ ದಲ್ಲಿ ನಮಗೆ ಎಲ್ಲಕ್ಕಿಂತ ಮುಖ್ಯವಾಗಿ ನೋಡಬೇಕೆಸುತ್ತಿದ್ದು ಜೂನಿಯರ್ ಶಿವರಾಜ್ ಕುಮಾರ್ ಡ್ಯಾನ್ಸ್ ಕಾರ್ಯಕ್ರಮ. ಇದನ್ನು ಕಾರ್ಯಕ್ರಮದ ಆರಂಭದಲ್ಲೇ ಜೂನಿಯರ್ ಶಿವರಾಜ್ ಕುಮಾರ್  ನಿಮಗೊಸ್ಕರ ಸುಂದರವಾದ ಡ್ಯಾನ್ಸ್ನೊಂದಿಗೆ ಮನರಂಜನೆ ನೀಡಲಿದ್ದಾರೆ ಅಂತ ಅನೌನ್ಸ್ ಮಾಡಿಬಿಡುತ್ತಿದ್ದರು. ನಮಗೆ ಶಿವಣ್ಣನ ಡ್ಯಾನ್ಸ್ ಈಗ ಬರುತ್ತೆ, ಆಗ ಬರುತ್ತೆ, ಯಾವಾಗ ಬರುತ್ತೆ ಅಂತ ಕಾಯೋವುದೇ ದೊಡ್ಡ ಸಂಗತಿಯಾಗಿತ್ತು. ಅಂತೂ ಕಾರ್ಯಕ್ರಮದ ಕೊನೆಗೆ ಶಿವರಾಜ್ಕುಮಾರ್ ಎಂಟ್ರಿ, ಸಾರಿ.. ಜೂನಿಯರ್ ಶಿವಣ್ಣ ಎಂಟ್ರಿ. ಆನಂದ ಸಿನಿಮಾದ ಟುವಿ ಟುವ್ವಿ.. ಹಾಡಿಗೆ ಜೂನಿಯರ್ ಶಿವರಾಜ್ ಕುಮಾರ್  ಡ್ಯಾನ್ಸ್ ನೋಡಿದ ಮೇಲೆ ನಮಗೆ ಸಮಾಧಾನವಾಗಿತ್ತು. ಆಗ ನಾವಿನ್ನೂ ಚಿಕ್ಕವರು. ಮನರಂಜನೆ ಏನೂ ಅಂದರೆ ಗೊತ್ತೇ ಇರದ ವಯಸ್ಸು, ಜೊತೆಗೆ ಅಂತಹ ವಾತಾವರಣ ಬನವಾಸಿಯಲ್ಲಿತ್ತು.  

ಬನವಾಸಿಗೆ ಟೀವಿ ಬಂದು ಊರಿನಲ್ಲಿ ಕೆಲವೇ ಕೆಲವು ಮನೆಯಲ್ಲಿ ಟೀವಿ ಇದ್ದಾಗಿನ ಪರಿಸ್ಥಿತಿಯನ್ನು ನೆನಪಿಸಿಕೊಂಡರೆ ಅನೇಕ ನೆನಪುಗಳು ಕಾಡುತ್ತವೆ. ಬರೆದರೆ ಒಂದು ಪುಸ್ತಕವೇ ಆಗಬಹುದು. ವಾರಕ್ಕೊಮ್ಮೆ ಬರುತ್ತಿದ್ದ ಸಿನಿಮಾ, ವಾರದ ಮುನ್ನೋಟ, ಚಿತ್ರಮಂಜರಿ, ಚಂದ್ರಕಾಂತ್, ಮಹಾಭಾರತ್, ಅಲಿಫ್ ಲೈಲಾ, ಎಕ್ ಸಿ ಬಡಕರ್ ಎಕ್, ಚಿತ್ರಹಾರ್ ಒಂದೇ ಎರಡೇ ಪ್ರತಿ ಕಾರ್ಯಕ್ರಮವನ್ನು ಆಸೆಪಟ್ಟು ನೋಡಲು ಊರು ತಿರುಗಿದ್ದು, ಟೀವಿ ಇದ್ದವರ ಮನೆ ಬಾಗಿಲು ತಟ್ಟಿದ್ದು, ಕಿಟಿಕಿ ಸ್ವಲ್ಪ ತೆರೆದಿದ್ದರೆ ಕಿಂಡಿಯಲ್ಲಿ ಟೀವಿಯಲ್ಲಿ ಏನಾದರೂ ಕಾಣುತ್ತಾ ಅಂತ ನೋಡುವುದು. ಟೀವಿ ಅಂದು ನಮ್ಮ ಕಣ್ಣಿಗೆ ಸ್ವರ್ಗವನ್ನು ತೋರಿಸುತ್ತಿತ್ತು. ಹಳ್ಳಿಯ ವಾತಾವರಣದಲ್ಲಿ ಬೆಳೆದ ಬನವಾಸಿಗರೆಲ್ಲರಿಗೂ ಘಟನೆಗಳು ಕೇವಲ ನೇಪತ್ಯವಷ್ಟೇ.

ನಟ ಅಶೋಕ್ ಬನವಾಸಿಗೆ ಬಂದಿದ್ದರು.

ನಟ ಅಶೋಕ್ ದೇವಸ್ಥಾನಕ್ಕೆ ಬಂದಿದ್ದಾರೆ ಅನ್ನುವ ಸಂಗತಿ ಬನವಾಸಿಯಲ್ಲಿ ಹಬ್ಬಿತ್ತು. ಘಟನೆ ಕೂಡ ಆಗಿ ಸುಮಾರು 17 ವರ್ಷವಾಗಿರಬಹುದು. ಅಶೋಕ್ ಆಗ ತುಂಬಾ ಜನಪ್ರಿಯ ನಟನಾಗಿದ್ದ, ಮೇಲಾಗಿ ಸುರದ್ರೂಪಿ ಕಲಾವಿದ. ಸುದ್ದಿ ತಿಳಿದ ಕೂಡಲೇ ನಾನು ದೇವಸ್ಥಾನಕ್ಕೆ ಓಡಿಹೋಗಿದ್ದೆ. ಪುಣ್ಯಕ್ಕೆ ಅಶೋಕ್ರವರನ್ನು ಹತ್ತಿರದಿಂದ ನೋಡುವ ಸುಯೋಗ ನನ್ನದಾಯಿತು. ದೇವಸ್ಥಾನದ ಸುತ್ತಲೂ ಇರುವ ಎಲ್ಲ ದೇಗುಲಗಳಿಗೂ ಅಶೋಕ್ ಭೇಟಿ ಇತ್ತರು. ಬನವಾಸಿ ಬಗ್ಗೆ, ಕ್ಷೇತ್ರದ ಬಗ್ಗೆ ಅಲ್ಲಿದ್ದ ಬಟ್ಟರು ಗೈಡನ್ಸ್ ಮಾಡುತ್ತಿದ್ದರು. ದೇವಸ್ಥಾನದ ಇತಿಹಾಸವನ್ನು ತುಂಬಾ ಸೂಕ್ಷ್ಮವಾಗಿ ಕೇಳುತ್ತಿದ್ದರು. ಇಡೀ ದೇವಸ್ಥಾನ ಹಾಗೂ ಬನವಾಸಿಯ ಇತಿಹಾಸವನ್ನು ತಿಳಿದುಕೊಂಡ ಅಶೋಕ್ ದಿನ ದೇವಸ್ಥಾನದ ಹೊರಗಡೆ ಸುಮಾರು ಮುಕ್ಕಾಲು ತಾಸು ಭಾಷಣ ಮಾಡಿದರು. ಮುಖ್ಯವಾಗಿ ಐತಿಹಾಸಿಕವಾಗಿ ಬನವಾಸಿಯನ್ನು ಹೇಗೆ ಉಳಿಸಬೇಕೆಂದು ಅವರು ತುಂಬಾ ಸುದೀರ್ಘವಾಗಿ ಮಾತನಾಡಿದರು. ಅವರ ಮಾತಿನಲ್ಲಿ ಬನವಾಸಿಯ ಬಗ್ಗೆ ಕಳಕಳಿಯ ಮಾತುಗಳಿದ್ದವು. ಅಶೋಕ್ ಬರುತ್ತಾರೆ ಅನ್ನುವ ಮುನ್ಸೂಚನೆ ಊರಿನ ಕೆಲವು ಹಿರಿಯರಿಗೆ ತಿಳಿದಿತ್ತು. ಹಾಗಾಗಿ ಅಶೋಕ್ ಗೋಸ್ಕರ ಎಲ್ಲ ಸಿದ್ದತೆಗಳನ್ನು ಮೊದಲೇ ಮಾಡಿಕೊಂಡಿದ್ದರು. ಪೂರ್ಣಿಮಾ ಸೌಂಡ್ ಸಿಸ್ಟೆಂನ ನಿರಂಜನ್ ಒಡೆಯರ್ ರವರು ಅಶೋಕ್ ಮಾತನಾಡಲು ಮೈಕು ಹಾಗೂ ಸೌಂಡ್ ವ್ಯವಸ್ಥೆಯನ್ನು ನೋಡಿಕೊಂಡಿದ್ದರು. ಅಶೋಕ್ ಬನವಾಸಿಗೆ ಬಂದು ಮಾತನಾಡಿದ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು

ಅಶೋಕ್ ದೇವಸ್ಥಾನದಲ್ಲಿ ಓಡಾಡಿದಲ್ಲೆಲ್ಲಾ ಅವರ ಹಿಂದೆ ನಾನು ಇರುತ್ತಿದ್ದೆ. ಹತ್ತು ವರ್ಷದವನಾಗಿದ್ದ ನನ್ನನ್ನು ಯಾರು ದೂರ ಸರಿಸಲೇ ಇಲ್ಲ. ಆಗ ನಮ್ಮ ತಂದೆಯವರು ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದ್ದರು. ಅಲ್ಲೇ ಇದ್ದ ನಮ್ಮ ತಂದೆ ಮಾಲೆ ಹಾಕಿದ್ದ ತಮ್ಮ ಸ್ನೇಹಿತರನ್ನು ಕರೆದುಕೊಂಡು ಬಂದು ಅಶೋಕ ಜೊತೆ ಪೋಟೋ ತೆಗೆಸಿಕೊಂಡರು. ಫೋಟೋದಲ್ಲಿ ಅಶೋಕ್ ಅವರ ಪಕ್ಕದಲ್ಲಿ ನಿಂತು ಫೊಟೋ ತೆಗೆಸಿಕೊಳ್ಳುವ ಅವಕಾಶ ನನ್ನದಾಗಿತ್ತು. ಅಶೋಕ್ ನಾ ನೋಡಿದ ಮೊದಲ ನಟ. ಒಬ್ಬ ಸಿನಿಮಾ ಹೀರೋ ಅಂದರೆ ಹೀಗಿರುತ್ತಾರೆ, ಇಷ್ಟು ಸುಂದರವಾಗಿರುತ್ತಾರೆ, ಇಷ್ಟು ಎತ್ತರ ಇರುತ್ತಾರೆ ಅನ್ನುವ ಕಲ್ಪನೆಯನ್ನು ಅಶೋಕ್ ರವರನ್ನು ನೋಡಿದ ಮೇಲೆಯೇ ಮನವರಿಕೆ ಆಗಿದ್ದುಅಶೋಕ್ ರವರ ಜೊತೆ ತೆಗೆಸಿಕೊಂಡಿದ್ದ ಫೋಟೋ ನೋಡಿದಾಗ ಹಳೆ ಘಟನೆ ನೆನಪಾಗಿತ್ತು. ಮನೆಯಲ್ಲಿದ್ದ ಫೋಟೋ ಹಾಳಾಗಿ ತನ್ನ ಬಣ್ಣ ಮಾಸಿಕೊಂಡಿತ್ತು. ಕೆಲವು ನೆನಪುಗಳೇ ಹಾಗೇ ಅಲ್ಲವೇ..!