Thursday 28 June 2012

ನಿದಿರೆಯ ಸ್ವಾದ

ಕತ್ತಲೆ ಕಳೆಯಿತು, ಸೂರ್ಯ ನೆತ್ತಿಗೆ ಬಂದಾಯಿತು.
ಕಣ್ಣ  ಬಟ್ಟಲಿನಲ್ಲಿ ಇನ್ನೂ  ನಿದಿರೆಯ ಸಾಮ್ರಾಜ್ಯ
ಕಣ್ಣ ತುಂಬಾ ಕತ್ತಲೆ, ಒಂಥರಾ ಅಮಲು
ತೆರೆಯಲಿಕ್ಕೆ ಯಾಕೋ ಮನಸ್ಸಾಗುತ್ತಿಲ್ಲ.
ತೆರೆದರೆ, ಕಣ್ಣ ಬಟ್ಟಲು ತುಂಬಿದ ಅಮಲಿನ ಸುಖ
ಮಾಯವಾಗುವುದೆಂಬ ಭಯ..!
ಏಳು ಮಗನೇ ಏಳು.. ಹೊತ್ತಾಯಿತು ಕೇಳು.
ಅಮ್ಮನ ದನಿ ಒಳಗಿನಿಂದ ಕೂಗಿರಲು...
ಕರೆದರೂ, ಕೇಳಿದರೂ ಕಣ್ಣು ಬಿಡಲಿಕ್ಕೆ ಯಾಕೋ ಮನಸ್ಸಾಗುತ್ತಿಲ್ಲ
ನಿದಿರೆಯ ಸ್ವಾದ ಇನ್ನೂ ಬೇಕೆನಿಸುತ್ತಿದೆ.
ಕನಸುಗಳ ಬಣ್ಣದ ಬೆಳಕು ಇನ್ನೂ ಕಣ್ಣಿನಲ್ಲಿದೆ.
ನೂರಾರು ಚಿತ್ರಗಳು, ಸುಖ ನೀಡುವ ಕನ್ನೆಯರ ಅಂಗಳವು
ಎಲ್ಲವೂ ಒಟ್ಟಿಗೆ ಬಂದಿರಲು, ನಿದಿರಾ ದೇವಿಯ ಮನವೊಲಿಸುತ್ತಿರಲು
ಕಣ್ಣು ತೆರೆಯಲು ಮನಸ್ಸಾಗುತ್ತಿಲ್ಲ ಅಮ್ಮ..
ಕಣ್ಣ ಬಟ್ಟಲಿನಲಿ
ಇನ್ನಷ್ಟು ಸವಿಗನಸಿದೆ, ಬೆಟ್ಟದಷ್ಟು ನಿದ್ದೆಯಿದೆ, ಸುಖವಿದೆ
ಕ್ಷಮಿಸಮ್ಮ ಉಳಿದ ಸವಿಯನು ಉಂಡು ಬರುವೇ!