Friday 24 August 2012

ಭಟ್ಟರು ಸೋತರು, ಕನ್ನಡ ಪ್ರಭ ಗೆದ್ದಿತು !

ಈ ತಿಂಗಳ 19 ರಂದು ಸುದ್ದಿವಾಹಿನಿ ಸುವರ್ಣ ನ್ಯೂಸ್24*7 ಹಾಗೂ ಕನ್ನಡ ಪ್ರಭಗಳು ಹೊಸದಾಗಿ  ರೀಲಾಂಚ್ ಆಗಿವೆ. ಅಂದರೆ ಈ ಎರಡು ಮಾಧ್ಯಮಗಳು ಹೊಸಸೀರೆಯನ್ನುಂಟು ಕನ್ನಡಿಗರಿಗೆ ಹೊಸದಾಗಿ ಪರಿಚಯವಾಗಿವೆ. ಈ ಎರಡು ಮಾಧ್ಯಮಗಳು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ ರವರ ಒಡೆತನಕ್ಕೆ ಸೇರಿವೆ ಎಂಬುದು ಹೆಚ್ಚಿನವರಿಗೆ ತಿಳಿದಿರುವ ವಿಷಯ.  ಸುವರ್ಣ ನ್ಯೂಸ್ ಶುರುವಾದಾಗಿನಿಂದ ವಿಧಾನಸೌಧದ ಹಿಂಭಾಗದ ಕಮೀಷನರ್ ಆಫೀಸ್ ಎದುರುಗಡೆ ಇರುವ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈಗ  ಇದರಹೊಸ ಕಛೇರಿ ಶಿವಾನಂದ್ ಸರ್ಕಲ್ಗೆ ಶಿಫ್ಟ್ ಆಗಿದೆ. ಕನ್ನಡ ಪ್ರಭ ಕೂಡ  ಇಂಡಿಯನ್ ಎಕ್ಸ್ ಪ್ರೆಸ್ ಕಟ್ಟಡದಿಂದ  ವಾಹಿನಿಯ ಜೊತೆಗೇನೆ ಸೇರಬಹುದು. ಕನ್ನಡ ಪ್ರಭ ಹಾಗೂ ಸುವರ್ಣ ವಾಹಿನಿ ಎರಡೂ ಹೊಸ ಹೊಸ ಕಾನ್ಸೆಪ್ಟ್ ಗಳೊಂದಿಗೆ ಸದ್ಯ ವಿಭಿನ್ನವಾಗಿ ಕಾಣುತ್ತಿವೆ. ಕನ್ನಡಪ್ರಭ ಮಾತ್ರ ತನ್ನ ಹಳೆಯ ವೈಭವವನ್ನು ಮತ್ತೆ ಪಡೆದುಕೊಂಡಿದೆ ಅಂತ ಹೇಳಿದರೆ ತಪ್ಪಾಗಲಾರದು.
ಸುಮಾರು 5-6 ವರ್ಷದ ಹಿಂದಿನ  ಕನ್ನಡಪ್ರಭವನ್ನು ನೆನಪಿಸಿಕೊಳ್ಳಿ, ಹಾಗೆಯೇ ಈಗಿನ ಕನ್ನಡಪ್ರಭವನ್ನು ಹೋಲಿಕೆ ಮಾಡಿ ನೋಡಿದರೆ, ಪ್ರಭಕ್ಕೆ ಈಗ ಹೊಸ ಪ್ರಭೆ ಬಂದಿದೆ, ಹಳೆಯ ಚಾರ್ಮ್ ಮತ್ತೇ ಮೈಗೇರಿಸಿಕೊಂಡಿದೆ ಅಂತ ವಿಮರ್ಷಿಸಬಹುದು.  ಹಳೆಯ ಕನ್ನಡ ಪ್ರಭ ತನ್ನ ಕಟೆಂಟ್ ನಿಂದ  ಅಪಾರ ಓದುಗರನ್ನು ಪಡೆದುಕೊಂಡಿತ್ತು. ರಂಗನಾಥ್ರವರು  ಕನ್ನಡ ಪ್ರಭ ಬಿಟ್ಟ ಮೇಲೂ ಪತ್ರಿಕೆಯ ಹಳೆಯ ವೈಭವದ ಬೇರನ್ನು  ನಂತರ  ಸಂಪಾದಕರಾಗಿ ಬಂದ  ಶಿವಸುಬ್ರಮಣ್ಯರವರು ಮುಂದುವರೆಸಿಕೊಂಡು ಹೋದರು. ಮತ್ತೇ ಬೆಳವಣಿಗೆ ಎಂಬಂತೆ ವಿಶ್ವೇಶ್ವರ ಭಟ್ರವರು ಕನ್ನಡಪ್ರಭದ ಸಾರಥ್ಯ ವಹಿಸಿಕೊಂಡಾಗ, ಈ ಹಿಂದೆ ಅನೇಕ ದಶಕಗಳಿಂದ ನೋಡುತ್ತಿದ್ದ ಕನ್ನಡಪ್ರಭದ ನೋಟವನ್ನು ಬದಲಾಯಿಸಿ ಅದಕ್ಕೆ ವಿಶ್ವೇಶ್ವರ ಭಟ್ಟರು ಹೊಸ ರೂಪ ಕೊಟ್ಟರು. ಅದು  ಒಂದು ರೀತಿಯಲ್ಲಿ ಕನ್ನಡ ಪ್ರಭವನ್ನು ರಿಲಾಂಚ್ ಮಾಡಿದ ಹಾಗೆ ಇತ್ತು.  ಇದರಲ್ಲಿ ತಾವು ಈ ಹಿಂದೆ ವಿಜಯ ಕರ್ನಾಟಕದಲ್ಲಿ ಮಾಡಿದ್ದ ಹೊಸ ಪ್ರಯೋಗಗಳನ್ನೇ ಕನ್ನಡಪ್ರಭಕ್ಕೆ ಅಳವಡಿಸಿಕೊಂಡರು. ಹತ್ತಾರು ವರ್ಷಗಳಿಂದ ಕನ್ನಡ ಪ್ರಭವನ್ನು ನೋಡುತ್ತಿದ್ದ ನಮಗೆ, ಹೊಸ ಪ್ರಯೋಗದ ಕನ್ನಡ ಪ್ರಭವನ್ನು ಆರಂಭದಲ್ಲಿ ಒಪ್ಪಿಕೊಳ್ಳುವುದು ಕಷ್ಟವಾಗಿತ್ತು. ಹೀಗಿದ್ದರೂ ಭಟ್ಟರ ಹೊಸ ಹೊಸ ಪ್ರಯೋಗಗಳು ಕನ್ನಡಪ್ರಭದ ಮೂಲ ಬೇರನ್ನೇ ಬದಲಾಯಿಸಿಬಿಟ್ಟಿತ್ತು. ಬರುಬರುತ್ತಾ ಕನ್ನಡಪ್ರಭದ ಮೆರುಗು ಕಡಿಮೆಯಾಗುತ್ತಾ ಹೋಯಿತು. ಪತ್ರಿಕೆಯಲ್ಲಿ ಹೊಸತನದ ವಿಷಯಕ್ಕೆ ಬರ ಬಿದ್ದಿತು. ಓದುಗರು ಕಡಿಮೆಯಾಗುತ್ತಾ ಹೋದರು. ಅದೇ ಸಮಯದಲ್ಲಿ ವಿಜಯಸಂಕೇಶ್ವರ್ರವರ ವಿಜಯವಾಣಿ (ವಿಜಯ ಕರ್ನಾಟಕ+ ಉದಯವಾಣಿ) ತನ್ನ ಹೊಸ ಹೊಸ ಕಂಟೆಂಟ್ ನಿಂದ ಓದುಗರರಿಗೆ ಹೆಚ್ಚೆಚ್ಚು ಪರಿಚಯವಾಗುತ್ತಾ ಬೇರೆ ಪತ್ರಿಕೆಗಳಿಗೆ ದಿಟ್ಟ  ಉತ್ತರವನ್ನು ನೀಡುತ್ತಾ  ಮಾರುಕಟ್ಟೆಯಲ್ಲಿ ತನ್ನದೇ ಆದ ಅಸ್ತಿತ್ವವನ್ನು ಉಳಿಸಿಕೊಳ್ಳತೊಡಗಿತು. 
 ವಿಜಯವಾಣಿಯ ಬೆಳವಣಿಗೆಯ ಹಿಂದೆ ಕನ್ನಡಪ್ರಭದ ಬದಲಾವಣೆ ಕೂಡ ಕಾರಣವಾಗಿರಬಹುದು. ಕನ್ನಡಪ್ರಭದ ಓದುಗರೆಲ್ಲಾ ವಿಜಯವಾಣಿಗೆ ಶಿಫ್ಟ್ ಆದರು. ಪತ್ರಿಕೆಯ ಓದುಗರ ಸಂಖ್ಯೆ ಇಳಿಯಿತು.  ಅದೇ ರೀತಿ ಈ ಹಿಂದೆ ಕನ್ನಡಪ್ರಭದ ಸಂಪಾದಕರಾಗಿದ್ದ  ಶಿವಸುಬ್ರಮಣ್ಯರವರು ಹೊಸದಿಗಂತದ ಸಾರಥ್ಯವನ್ನು ವಹಿಸಿಕೊಂಡ ಮೇಲೆ, ಇದು ಕೂಡ ತನ್ನ ಹೊಸ ಮೆರಗನ್ನು ಪಡೆದುಕೊಂಡಿತು. ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಯಿತು. ವಿಜಯವಾಣಿಯ ಗೆಲವು ಸಂಕೇಶ್ವರ್ ರವರಿಗೆ ಇನ್ನೊಂದು ಪತ್ರಿಕೆಯನ್ನು (ದಿಗ್ವಿಜಯ) ಪ್ರಾರಂಭಿಸುವ ಸ್ಪೂರ್ತಿ ನೀಡಿದೆ. ಕನ್ನಡ ಸುದ್ದಿ ಮಾಧ್ಯಮದಲ್ಲಾದ ಈ ಎಲ್ಲ ಬೆಳವಣಿಗೆಗೆಗಳು ಕನ್ನಡಪ್ರಭಕ್ಕೆ ಒಂದು ದೊಡ್ಡ ಸವಾಲನ್ನು ತಂದುಕೊಟ್ಟಿತ್ತು. ಇದರ ಪ್ರಯತ್ನವೇ ಹೊಸದಾಗಿ ರಿಲಾಂಚ್ ಆಗಿರುವ ಕನ್ನಡಪ್ರಭದ ಹೊಸ  ಅವತಾರ  ಅಂತ ತುಂಬಾ ಸುಲಭವಾಗಿ ಅಂದಾಜಿಸಬಹುದು.
ಈ ಹೊಸ ರೂಪದ ಕನ್ನಡಪ್ರಭ ಪತ್ರಿಕೆ ನಮಗೆ ಇದರ ಹಳೆಯ  ಸಿರಿಯನ್ನು ನೆನಪಿಸುತ್ತಿದೆ . ಅನೇಕ ವರ್ಷಗಳ ನಂತರ ಹಳೆಯ ಕನ್ನಡಪ್ರಭವನ್ನು ಓದಿದ ನೆನಪಾಗುತ್ತಿದೆ, ಅನುಭವವಾಗುತ್ತಿದೆ. ಈ ಮೂಲಕ ಭಟ್ಟರು ಪತ್ರಿಕೆಯ ಮೂಲ ಬೇರನ್ನು ಮತ್ತೇ ಅಂಟಿಕೊಳ್ಳುವ ಪರಿಸ್ಥಿತಿಗೆ ಬಾಗಿದಂತೆ ಕಾಣುತ್ತಿದೆ.   ಹೀಗೆ ವಿಶ್ವೇಶ್ವರ ಭಟ್ಟರ ಸಾರಥ್ಯದಲ್ಲಿರುವಾಗಲೇ  ಎರಡು ಬಾರಿ   ಕನ್ನಡ ಪ್ರಭ  ಬದಲಾಗಿದೆ. ಹಳೆ ಬೇರು ಹೊಸ ಚಿಗುರು ಕೂಡಿರಲು ಪ್ರಭದ ಸೊಗಸು ಅನ್ನುವ ಹಾಗಿದೆ.
ಸುವರ್ಣ ನ್ಯೂಸ್  ರೀಲಾಂಚ್ ಆಗುತ್ತಿರುವುದು ಇದು ಎರಡನೇ ಬಾರಿ . ಮೊದಲ ಬಾರಿ ರಂಗನಾಥ್ ರವರು ಕನ್ನಡಪ್ರಭದಿಂದ ಸುವರ್ಣನ್ಯೂಸ್ ಗೆ ಬಂದ ಮೇಲೆ ಸುವರ್ಣ ನ್ಯೂಸ್ , `ಸುವರ್ಣ 24*7 ಅಂತ ಬದಲಾಗಿ ಒಳ್ಳೆಯ ಮೆರಗನ್ನು ಪಡೆದುಕೊಂಡಿತ್ತು. ಈಗ ಭಟ್ಟರ ಸಾರಥ್ಯದಲ್ಲಿ  ವಾಹಿನಿ  ಇನ್ನೊಮ್ಮೆ ಬದಲಾಗಿದೆ. ಉದ್ಯಮಿ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಏಷಿಯಾನೆಟ್ ಕಮ್ಯುನಿಕೇಷನ್ ಯಾವಾಗ  ಕಂಪನಿಯನ್ನು ಖರೀದಿ ಮಾಡಿದರೋ, ಆಗ ಕನ್ನಡದಲ್ಲಿದ್ದ  ಮನರಂಜನವಾಹಿನಿ ಸುವರ್ಣವನ್ನು ಎರಡು ಭಾಗಗಳಾಗಿ ಅಂದರೆ ಸುವರ್ಣ ಹಾಗೂ ಸುವರ್ಣ ನ್ಯೂಸ್ ಆಗಿ ಮಾಡಿದರು. ಇದರಲ್ಲಿ ನ್ಯೂಸ್ ವಿಭಾಗವನ್ನು ಇಟ್ಟುಕೊಂಡು ಸುವರ್ಣ ವಾಹಿನಿಯನ್ನು ಸ್ಟಾರ್ ಸಮೂಹಕ್ಕೆ ಒಳ್ಳೆಯ ಬೆಲೆಗೆ ಮಾರಿದರು, ಆ ಮೂಲಕ ದಕ್ಷಿಣದಲ್ಲಿ  ರೂಪರ್ಟ್ ಮೂರ್ಡೋಕ್ ಒಡೆತನದ ಸ್ಟಾರ್ ಸಮೂಹಕ್ಕೆ  ಒಳ್ಳೆಯ ನೆಲೆ ಸಿಕ್ಕಿತು.ಶಶಿಧರ ಭಟ್ ರು  ಆರಂಭದಲ್ಲಿ ಸುವರ್ಣ ನ್ಯೂಸ್  ನ್ನು ಮುನ್ನೆಡೆಸಿದರು. ಶಶಿಧರ್ ಭಟ್ರ ಸಮಯದಲ್ಲಿ ವಾಹಿನಿಗೆ  ಹೇಳಿಕೊಳ್ಳುವಂತಹ ಜಿಆರ್ಪಿ ಅಂಕಗಳು ಬರುತ್ತಿರಲಿಲ್ಲ. ವಾಹಿನಿಗೆ ಬದಲಾವಣೆ ಬೇಕೆ ಬೇಕಿತ್ತು. ಆಗ ರಾಜೀವ್ ಚಂದ್ರಶೇಖರ್ ಶಶಿಧರ್ ಭಟ್ ರನ್ನು ತಮ್ಮ ರಾಜಕೀಯ ಸಲಹೆಗಾರರನ್ನಾಗಿ ಮಾಡಿಕೊಂಡು, ಅವರ  ಜಾಗಕ್ಕೆ ಕನ್ನಡಪ್ರಭ ರಂಗನಾಥ್ ರವರನ್ನು ಕರೆತಂದರು. ರಂಗನಾಥ್ ಬಂದ ಮೇಲೆ ಸುವರ್ಣ ನ್ಯೂಸ್ ಸಂಪೂರ್ಣವಾಗಿ ಬದಲಾಯಿತು. ಚಾನೆಲ್ ಲೋಗೋ ಬದಲಾವಣೆಯಿಂದ ಹಿಡಿದು, ಎಲ್ಲ ವಿಭಾಗಗಳಲ್ಲಿ ಹೊಸ ಬದಲಾವಣೆ ಕಂಡಿತು. ಟಿವಿ9 ನ ಒಳ್ಳೆಯ ತಂಡ ಸುವರ್ಣ 24*7 ಕ್ಕೆ ಬಂದಿತು. ರಂಗನಾಥ್ರವರು ತಾವು ಬೆಳೆದು, ವಾಹಿನಿಗೂ ಅಲ್ಪಸ್ವಲ್ಪ ಹೆಸರನ್ನು ತಂದುಕೊಟ್ಟರು .
ಈಗ ರಂಗನಾಥ್ ರವರು ಸುವರ್ಣ ನ್ಯೂಸ್ ಬಿಟ್ಟು ತಮ್ಮದೇ ಸ್ವಂತ ಪಬ್ಲಿಕ್ ವಾಹಿನಿಯನ್ನು ಶುರುಮಾಡಿದರು. ಪಬ್ಲಿಕ್ ಟೀವಿ ಯಾಕೋ ಜನಮೆಚ್ಚುಗೆಯ ವಾಹಿನಿಯಾಗಿಲ್ಲ ಅನ್ನುವುದು ತುಂಬಾ ಬೇಸರದ ಸಂಗತಿ. ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇಂದಿಗೂ ತುಂಬಾ ಕಷ್ಟಪಡುತ್ತಿದೆ. ಹೊಸದಾಗಿ ರೀಲಾಂಚ್ ಆಗಿರುವ ಸುವರ್ಣ 24*7  ಈಗ ಹೊಸ ಕಚೇರಿಯಲ್ಲಿ ಹೊಸ ರೂಪದೊಂದಿಗೆ ಕಾಣಿಸಿಕೊಂಡಿದೆ. ಜನರಿಗೆ ಇಷ್ಟವಾಗುವ ಮಟ್ಟಿಗೆ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಮುಂದಿನ ಬೆಳವಣಿಗೆಯನ್ನು ಕಾದು ನೋಡಬೇಕಾಗಿದೆ.
ರೀಲಾಂಚ್  ಪದಕ್ಕೆ  ಬೆಲೆ  ಇಲ್ಲದಂತಾಗಿದೆ
  ಇತ್ತೀಚಿನ ದಿನಗಳಲ್ಲಿ ವಾಹಿನಿಗಳು ರಿಲಾಂಚ್ ಆಗುವುದು ಮಾಮೂಲು ಆಗಿಬಿಟ್ಟಿದೆ. ಕಸ್ತೂರಿ ಸಮೂಹ ,  ಮನರಂಜನಾ ವಾಹಿನಿ  ಹಾಗೂ ನ್ಯೂಸ್ ಎಂಬ ಎರಡು ಭಾಗಗಳಾಗಿದೆ. ಅಂದರೆ  ಎರಡು ವಾಹಿನಿಗಳಾಗಿ   ಕಾರ್ಯನಿರ್ವಹಿಸುತ್ತಿದೆ.  ನ್ಯೂಸ್ ವಿಭಾಗವು ಕಸ್ತೂರಿ ನ್ಯೂಸ್ಜ್ ಹೆಸರಿನಲ್ಲಿ  ಹೊಸದಾಗಿ ಪ್ರಾರಂಭವಾಗಿದೆ. ಈಗ ಇದೇ ದಾರಿಯಲ್ಲಿ ಜಿಇಸಿ ಕಸ್ತೂರಿ ಕೂಡ ಹೊಸದಾಗಿ ರಿಲಾಂಚ್ ಆಗಲು ತಯಾರಿಯನ್ನು ನಡೆಸಿದೆ.  ಹೊಸ ಹೊಸ ಧಾರಾವಾಹಿಗಳು ಸದ್ಯದರಲ್ಲೇ ನಿಮ್ಮ ಮೆಚ್ಚಿನ ಹೆಮ್ಮೆಯ ಪ್ರತೀಕ ಕಸ್ತೂರಿಯಲ್ಲಿ ಪ್ರಸಾರವಾಗಿವೆ.`ಸಮಯ ಸುದ್ದಿ ವಾಹಿನಿ ಕೂಡ ಆಂತರಿಕ ಬೆಳವಣಿಗೆಗಳು ಹಾಗೂ ಮಾಲೀಕರ ಬದಲಾವಣೆಯಿಂದ ಹೊಸದಾಗಿ ಪರಿಚಯವಾಗಿತ್ತು.
ಜನಶ್ರೀ ವಾಹಿನಿಯನ್ನು  ಕೂಡ ಒಡಿಶಾ ಕಂಪನಿಗೆ  ಮಾರಾಟ ಮಾಡಿದ್ದರೂ ಬೇರೆ ವಾಹಿನಿಗಳಲ್ಲಿ ಆದಂತ ಬೆಳವಣಿಗೆಗಳು  ಇಲ್ಲಿ ಆಗಲಿಲ್ಲ. ಅನಂತ್ ಚಿನಿವಾರ್ರವರು ಜನಶ್ರೀ ವಾಹಿನಿಯನ್ನು ಮಾರುಕಟ್ಟೆಯಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಒಳ್ಳೆಯ ಜಿಆರ್ ಪಿ ಅಂಕಗಳನ್ನು ಪಡೆಯುತ್ತಿದೆ.
ಝೀ ಕನ್ನಡ ವಾಹಿನಿಯ ಲೋಗೋ ಬದಲಾವಣೆ ಇಲ್ಲಿಯ ನಿರ್ಧಾರವಾಗಿರಲಿಲ್ಲ. ಎಸ್ಸೆಲ್ ಸಮೂಹದ ಜೀ ಎಲ್ಲ ವಾಹಿನಿಗಳ ಲೋಗೋ ಬದಲಾಗಿತ್ತು. ಆರಂಭದಲ್ಲಿ ಝೀ ಕನ್ನಡ ಲೋಗೋ ಅಪರಿಚಿತವಾಗಿ ಕಂಡು, ಸಾಮಾನ್ಯ ಜನರಿಗೆ ಯಾವುದೋ ಹೊಸ ವಾಹಿನಿ ಪ್ರಾರಂಭವಾಗಿದೆ ಅಂತಲೇ    ಅಂದುಕೊಂಡಿದ್ದರು. ಈಟೀವಿ ಸಮೂಹವು ರಿಲಿಯನ್ಸ್ ಗೆ ಮಾರಾಟವಾಗಿದೆ. ಅದರ ಬೆಳವಣಿಗೆಗಳು ಮಾತ್ರ ಅಷ್ಟೊಂದು ಸುದ್ದಿ ಮಾಡಿಲ್ಲ.           
ಸ್ಟಾರ್ ಸಮೂಹದ  ಸುವರ್ಣ  ವಾಹಿನಿ ಯ ಲೆಕ್ಕಾಚಾರ ಯಾಕೋ ತಪ್ಪಿದಂತೆ ಕಾಣುತ್ತಿದೆ. ಇತ್ತೀಚಗಷ್ಟೇ  ಮುಕ್ತಾಯವಾದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಮುಗಿದಾಗಿನಿಂದ ಹೊಸ ಹೊಸ ರಿಯಾಲಿಟಿ ಶೋಗಳನ್ನು ನಿರ್ಮಿಸಲು ವಾಹಿನಿ ಮನಸ್ಸು ಮಾಡುತ್ತಿಲ್ಲ. ಸದ್ಯ ವಾಹಿನಿ ತುಂಬಾ ಸಂಕಷ್ಟದಲ್ಲಿದೆ. ಮೊನ್ನೆಯಷ್ಟೇ ಸುಮಾರು 80 ಜನರನ್ನು ಸುವರ್ಣ ವಾಹಿನಿ ಕೆಲಸದಿಂದ ತೆಗೆದು ಹಾಕಿದೆ. ಯಾರದೋ ಮಾಡಿದ ತಪ್ಪಿಗೆ ಇನ್ಯಾರನ್ನೋ ಬಲಿ ಕೊಟ್ಟ ಹಾಗಾಗಿದೆ  ಇದು ಸುವರ್ಣ ವಾಹಿನಿಯ ಸ್ಥಿತಿಗತಿ.   ಕನ್ನಡದ ಮಟ್ಟಿಗೆ ಪ್ರತಿ ಎಪಿಸೋಡ್ಗೆ ಹತ್ತು ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿದ ಕೀರ್ತಿಯನ್ನು ಸುವರ್ಣ ಹೊತ್ತರೂ, ಅಷ್ಟು ಹಣವನ್ನು ಜಾಹೀರಾತುಗಳು ಹಾಗೂ ಸ್ಪಾನ್ಸರ್ಗಳಿಂದ ಪಡೆದಿದೆಯೇ ಅನ್ನುವುದು ಮಾತ್ರ ವಾಹಿನಿಗಿರುವ ಯಕ್ಷಪ್ರಶ್ನೆ..
 ಪುನೀತ್ ರಾಜ್ ಕುಮಾರ್ ಸಾರಥ್ಯದ ಕೋಟ್ಯಧಿಪತಿ ಕಾರ್ಯಕ್ರಮ ವಾಹಿನಿಗೆ ಅಪಾರ ಹೆಸರನ್ನು ತಂದುಕೊಟ್ಟಿದ್ದರೂ, ವಾಹಿನಿಯ ಲಾಭ ನಷ್ಟದ ಲೆಕ್ಕಾಚಾರದಲ್ಲಿ ನಷ್ಟದ ಪ್ರಮಾಣವೇ ಹೆಚ್ಚು ಅಂತ ಹೇಳಬಹುದು. ಸುವರ್ಣ ವಾಹಿನಿ  ಕೆಬಿಸಿಯ ಇದುವರೆಗಿನ 80 ಕ್ಕೂ ಹೆಚ್ಚು ಎಪಿಸೋಡ್ಗಳಿಗೆ 20 ಕೋಟಿ ಯಷ್ಟು ಹಣವನ್ನು ಖರ್ಚು ಮಾಡಿದೆ. ಇದರಲ್ಲಿ ವಾಹಿನಿಗೆ ಏಷ್ಟು ಲಾಭವಾಗಿದೆ ಎಂಬುದನ್ನು ವಾಹಿನಿಯವರೇ ಉತ್ತರ ಕೊಡಬೇಕು.ಯಾವ ರಿಯಾಲಿಟಿ ಶೋಗಳಿಂದ ಸುವರ್ಣ ವಾಹಿನಿಗೆ  ದೊಡ್ಡ ಹೆಸರು ಬಂದಿತೋ, ಇಂದು ಅದೇ ರಿಯಾಲಿಟಿ ಶೋಗಳು ಸುವರ್ಣ ವಾಹಿನಿಯಲ್ಲಿ ನಿರ್ಮಾಣವಾಗುತ್ತಿಲ್ಲ. ರಿಯಾಲಿಟಿ ಶೋಗಳನ್ನು ನಿಲ್ಲಿಸಿ ಸೀರಿಯಲ್ಗಳನ್ನು ನಿರ್ಮಿಸುತ್ತಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಕನ್ನಡ ವಾಹಿನಿಗಳಲ್ಲಿ ಅನೇಕ ಬೆಳವಣಿಗೆಗಳು ಆಗಿವೆ. ರೀಲಾಂಚ್ ಅನ್ನುವ ಶಬ್ದಕ್ಕೆ ಬೆಲೆ ಇಲ್ಲದಂತಾಗಿದೆ. ಕರ್ನಾಟಕದ ಸಣ್ಣ ಮಾರುಕಟ್ಟೆಯಲ್ಲಿ ಇಂದು ಎಲ್ಲ ವಾಹಿನಿಗಳು, ವೃತ್ತಪತ್ರಿಕೆಗಳು ಹೋರಾಟ ಮಾಡಬೇಕಾಗಿದೆ. ಸ್ಪರ್ಧೇ ತುಂಬಾ ಪ್ರಬಲವಾಗಿದೆ. ಸುದ್ದಿ ಹಸಿವಿನ ಬಾವಿಯನ್ನು ಎಷ್ಟು ತುಂಬಿದರೂ ಕಡಿಮೆ ಆಗುತ್ತಿಲ್ಲ. ಗಿಮಿಕ್ಸ್ ಮಾಡಿದರೂ, ವರ್ಕ್ಔಟ್ ಆಗೋದು ತುಂಬಾ ಕಷ್ಟ. ಜನ ತುಂಬಾ ಬುದ್ದಿವಂತರಾಗಿಬಿಟ್ಟಿದ್ದಾರೆ. ಜನರನ್ನುಮೆಚ್ಚಿಸುವುದು ತುಂಬಾ ಕಷ್ಟ. ನಿಟ್ಟಿನಲ್ಲಿ ವಾಹಿನಿಗಳು ತಮ್ಮ ಉಳಿವಿಗೆ ಹೋರಾಟ ಮಾಡುತ್ತಿವೆ. .