``ರವಿ ಕಾಣದ್ದನ್ನ ಕವಿ ಕಂಡ 'ಅನ್ನೋ ಉಕ್ತಿಯಂತೆ, ಎಲ್ಲರಿಗೂ ಕಲ್ಪನಾ ಶಕ್ತಿ ಇರುತ್ತದೆ. ಆದರೆ ಕವಿ ಮನಸ್ಸು ಇರುವಂತಹ ವ್ಯಕ್ತಿಗಳ ಕಲ್ಪನೆ ನಿಲುಕಲಾಗದ್ದು. ಅಂತಯೇ ಸುತ್ತಲಿನ ಪ್ರಪಂಚವನ್ನು ದಿನನಿತ್ಯವೂ ನೋಡುತ್ತೇವೆ. ನೋಡುವ ನಮ್ಮ ಕಣ್ಣುಗಳಿಗೆ ಪ್ರಪಂಚ ಸರಳವಾಗಿಯೇ ಕಂಡರೂ, ನಮ್ಮ ಕಣ್ಣಿನಲ್ಲಿರುವ ಸೂಪ್ತ ಮನಸ್ಸು ಬೇರೆ ರೀತಿಯಲ್ಲಿ ಆ ಪ್ರಪಂಚವನ್ನು ನೋಡುತ್ತಿರುತ್ತದೆ. ಈ ಸೂಪ್ತ ಮನಸ್ಸಿಗೆ ಕ್ಯಾಮೆರಾ ಕಣ್ಣು ಸೇರಿಬಿಟ್ಟರೆ ಅಲ್ಲಿ ಕಾಣುವ ಸೊಬಗೆ ಬೇರೆ ರೀತಿಯದ್ದು.
ನಮ್ಮ ಕಣ್ಣು ಕಂಡಿದ್ದನ್ನು ಕ್ಯಾಮರಾ ಕಣ್ಣು ಬೇರೆ ರೀತಿಯಲ್ಲಿ ನೋಡುತ್ತಿರುತ್ತದೆ. ನೋಡುಗನಿಗೆ ಅದು ಸಹಜ ಅಂತ ಅನಿಸಿದರೂ, ಕ್ಯಾಮೆರಾ ಕಣ್ಣು ಇದ್ದಂತಹ ವ್ಯಕ್ತಿಗಳಿಗೆ ಅದು ರೋಚಕವಾಗಿ ಕಾಣುತ್ತಿರುತ್ತದೆ. ಇಂತಹ ಕ್ಯಾಮೆರಾ ಕಣ್ಣು ಇರುವುದು ಅಪರೂಪ. ಇಂತಹ ಅಪರೂಪದ ಪ್ರತಿಭೆಗಳಲ್ಲಿ ನಮ್ಮ ಬನವಾಸಿಯ ಪ್ರಶಾಂತ್ ಸಂಗೀತಗಾರರವರನ್ನು ಗುರುತಿಸಬಹುದು.
ಪ್ರಶಾಂತ್ ಒಬ್ಬ ಅದ್ಭುತ ಚಿತ್ರಕಲಾವಿದ ಹಾಗೂ ಛಾಯಾಗ್ರಾಹಕ. ನಮ್ಮ ಬನವಾಸಿಗ ಎಂಬುದು ನಮ್ಮೆಲ್ಲರ ಹೆಮ್ಮೆ. ಬನವಾಸಿಯ ಇವರ ಸಂಗೀತಗಾರ ಮನೆತನವು ಮಧುಕೇಶ್ವರ ದೇವಸ್ಥಾನದ ವೈದಿಕ ಕಾರ್ಯಗಳಲ್ಲಿ ತಲೆತಲಾಂತರಗಳಿಂದ ತೊಡಗಿಸಿಕೊಂಡಿದೆ. ಹಾಗಾಗಿ ಪ್ರಶಾಂತ್ ಸಂಗೀತಗಾರರ ಮನೆತನದಲ್ಲಿ ಎಲ್ಲರೂ ಸಂಗೀತದ ಪೂಜಕರು. ಕಲೆಯ ಉಸಿರು ಇವರ ರಕ್ತದಲ್ಲೇ ಇದೆ. ಪ್ರಶಾಂತ್ ಕೂಡ ವಾದ್ಯಗಳನ್ನು ನುಡಿಸಬಲ್ಲ, ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಇದ್ದವ. ನಮ್ಮ ಕಾಮನಗಲ್ಲಿ ಕೇರಿಯ ತುಂಟ ಹುಡುಗನಾಗಿದ್ದವ. ಶೆಟ್ರು ಹಿತ್ತಲಿಗೆ ಬಂದು ಅಮಟೆಕಾಯಿ ಹೊಡೆದು ಚಿಕ್ಕವರಾಗಿದ್ದ ನಮಗೆಲ್ಲಾ ಕೊಡುತ್ತಿದ್ದವ. ಹೆಣ್ಣು ಮಕ್ಕಳ ಶಾಲೆಯಲ್ಲಿ ನಾವು ಓದುತ್ತಿದ್ದಾಗ ಪ್ರತಿದಿನ ಶಾಲೆಗೆ ಬರುವಾಗ ಪ್ರಶಾಂತ್ ಮನೆಯಿಂದ ತರುತ್ತಿದ್ದ ಹುಣಸೆಹಣ್ಣನ್ನು ನಮಗೆಲ್ಲಾ ತೋರಿಸಿ ಬಾಯಿಯಲ್ಲಿ ನೀರು ತರಿಸುತ್ತಿದ್ದವ. ಪ್ರತಿವರ್ಷ ಕಾಮನಗಲ್ಲಿಯ ಕಾಮಣ್ಣನನ್ನು ಮೊದಲು ಓಡಿ ಬಂದು ಸುಡುತ್ತಿದ್ದವ. ದೀಪಾವಳಿ ಹಬ್ಬದ ರಾತ್ರಿ ಎಲ್ಲರಿಗಿಂತ ದೊಡ್ಡ ಪುಂಡಿ ಕೋಲನ್ನು ಮಾಡಿಕೊಂಡು ಅದಕ್ಕೆ ಬೆಂಕಿ ಹಚ್ಚಿಕೊಂಡು ಇಡೀ ಕೇರಿಗೆ ಕೇಳುವಷ್ಟು ಕೂಗುತ್ತಿದ್ದವ, ಪುರೋಹಿತರ ಮನೆಯಲ್ಲಿ ಕ್ರಿಕೇಟ್ ನೋಡಲು ಕುಳಿತಾಗ ಫೋರು/ಸಿಕ್ಸು ಬಿದ್ದಾಗಲೆಲ್ಲಾ ಜೋರಾಗಿ ಕೇಕೆ ಹಾಕುತ್ತಿದ್ದವ, ಮನೆಮುಂದೆ ಕೇರಿಯ ಎಲ್ಲ ಹುಡುಗರನ್ನು ಸೇರಿಸಿ ಕ್ರಿಕೇಟ್ ಆಡುತ್ತಿದ್ದವ. ಹೀಗೆ ಪ್ರಶಾಂತಣ್ಣನನ್ನು ನಮ್ಮ ಬಾಲ್ಯ ದಿನಗಳಲ್ಲಿ ಕಾಮನಗಲ್ಲಿಯಲ್ಲಿ ನಾನು ನೋಡಿದ ಅನೇಕ ಮಜಲುಗಳನ್ನು ಇಲ್ಲಿ ನೆನಪಿಸಿಕೊಳ್ಳಲಿಕ್ಕೆ ತುಂಬಾ ಖುಷಿಯಾಗುತ್ತದೆ. ಈಗಲೂ ಕಾಮನಗಲ್ಲಿಯ ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರೆ ಅಷ್ಟೇ ಕಣ್ಣಲ್ಲಿ ನೀರು ಕೂಡ ಬರುತ್ತೇ. ಅಷ್ಟು ಸುಂದರವಾಗಿತ್ತು ನಮ್ಮೇಲ್ಲರ ಬಾಲ್ಯದ ಜೀವನ. ಬೆಂಗಳೂರಿನ ಬಕ್ವಾಸ್ ಬದುಕಿಗಿಂತ ಸಾವಿರ ಪಟ್ಟು ಚೆನ್ನಾಗಿತ್ತು.
ದೀಪಾವಳಿ ಹಬ್ಬದ ಸಮಯದಲ್ಲಿ ಪುಂಡಿ ಕೋಲು ರೆಡಿ ಮಾಡಿಕೊಂಡು ಸಾಯಂಕಾಲ ಹುಲ್ಲಿನ ಅಜ್ಜಿ ಮನೆ ಮಾಡಿಕೊಂಡು, ದೇವರ ದೀಪ ಹಚ್ಚಿದ್ದೇ ತಡ ನಮ್ಮ ಬೆಂಕಿ ಆಟ ಶುರುವಾಗುತ್ತಿತ್ತು. ಯಾರು ಮೊದಲು ಅಜ್ಜಿಮನೆಗೆ ಬೆಂಕಿ ಹಚ್ಚುತ್ತಾರೆ ಅನ್ನುವ ಕುತೂಹಲ. ಮೊದಲು ಓಡಿ ಹೋಗಿ ಅಜ್ಜಿಮನೆ ಸುಟ್ಟಾಗ ಸಿಗುತ್ತಿದ್ದ ಆನಂದವನ್ನು ಈ ಮೂಲಕ ಹೇಳುವುದು ತುಂಬಾ ಕಷ್ಟ. `ದೀಪ್ ದೀಪ್ ದೀಪಾವಳಿ.. ಮನೆಯೆಲ್ಲಾ ಹೋಳಗಿ' ಅಂತೆಲ್ಲಾ ನಾವು ಕೂಗುತ್ತಿದ್ದ ದಿನಗಳು ಇಂದಿಗೂ ಕಾಡುತ್ತವೆ. ನಮ್ಮ ಧ್ವನಿ ಇನ್ನೂ ಕಿವಿಯಲ್ಲಿ ಪ್ರತಿಧ್ವನಿಸುತ್ತದೆ. ಈಗಿನ ಬನವಾಸಿಯ ಹುಡುಗರು ಆ ಪುಂಡಿಕೋಲಿನ ಬೆಂಕಿಯಾಟವನ್ನು ಮರೆತಿದ್ದಾರೆ. ಚಿನ್ನಿದಾಂಡು, ಲಗೋರಿ, ಬುಗುರಿ ಎಂತೆಂತಹ ಆಟಗಳನ್ನು ನಾವು ಆಡಿದ್ವಿ. ಇವೆಲ್ಲ ಕೇವಲ ನೆನಪಷ್ಟೇ. ಹೋ..ಪ್ರಶಾಂತ್ ಸಂಗೀತಗಾರನ ಬಗ್ಗೆ ಬರೆಯಲಿಕ್ಕೆ ಹೋಗಿ ನಮ್ಮ ಬಾಲ್ಯದ ಅನೇಕ ವಿಷಯಗಳು ನೆನಪಾದವು. ಹೌದು, ಪ್ರಶಾಂತಣ್ಣನನ್ನು ನೆನಪಿಸಿಕೊಂಡಾಗಲೆಲ್ಲಾ ನಮ್ಮ ಬಾಲ್ಯದ ನೆನಪುಗಳು ನನ್ನನ್ನು ಕಾಡುತ್ತವೆ. ಹೈಸ್ಕೂಲ್ವರೆಗೆ ನಮ್ಮ ಜೊತೆ ಪ್ರಶಾಂತ್ ಬನವಾಸಿಯಲ್ಲಿ ಇದ್ದ ದಿನಗಳು ನಮ್ಮ ಬಾಲ್ಯದ ರೋಚಕ ಕ್ಷಣಗಳಿಗೆ ಸಾಕ್ಷಿಯಾಗುತ್ತದೆ.
ಮೊದಲಿನಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಇದ್ದ ಪ್ರಶಾತ್, ಹೈಸ್ಕೂಲನ್ನು ಜಯಂತಿ ಸ್ಕೂಲ್ನಲ್ಲಿ ಮಾಡಿದ ನಂತರ ಸೇರಿದ್ದು ಕಾರವಾರ ಟಾಗೋರ್ ಸ್ಕೂಲ್ ಆಫ್ ಆಟ್ಸ್ಗೆ. ಅಲ್ಲಿ ಫೈನ್ ಆಟ್ಸ್ ನಲ್ಲಿ ಪದವಿ ಪಡೆದು, ಕಳೆದ ಅನೇಕ ವರ್ಷಗಳಿಂದ ಬೆಂಗಳೂರಿನ ಸುಂದರಂ ಆರ್ಕಿಟೆಕ್ಟ್ ಕಂಪನಿಯಲ್ಲಿ ಕೆಲಸಮಾಡುತ್ತಿದ್ದಾನೆ. ಪ್ರಶಾಂತ್ಗೆ ಆನಿಮೇಷನ್ನಲ್ಲಿ ಒಳ್ಳೆಯ ಜ್ಞಾನವೂ ಕೂಡ ಉಂಟು. ಕಾರವಾರದ ಫೈನ್ ಆಟ್ಸ್ ಸ್ಕೂಲ್ನಲ್ಲಿ ಓದುತ್ತಿರುವಾಗಲೇ ಬನವಾಸಿಯ ಹನುಮಂತ ದೇವಸ್ಥಾನದ ಚೌತಿಯ ದೊಡ್ಡ ಗಣಪತಿ ಡೆಕಾರೇಷನ್ಗೆ ಆಳೆತ್ತರದ ಮಧ್ವಾಚಾರ್ಯರ ಕೃತಿಯನ್ನು ಪೇಂಟಿಂಗ್ ಮೂಲಕ ಎಲ್ಲರೂ ನೆಬ್ಬರಗಾಗುವಂತೆ ಪ್ರಶಾಂತ್ ಚಿತ್ರಿಸಿದ್ದ. ಆಗಿನ ದಿನಗಳಲ್ಲಿ ಪ್ರಶಾಂತ್ನ ಕಲೆಗಾರಿಕೆಗೆ ಇದು ಸಣ್ಣ ಸಾಕ್ಷಿಯಾಗಿತ್ತು ಅಷ್ಟೇ. ಈ ಮೂಲಕ ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ಇದ್ದರೂ, ಪ್ರಶಾಂತನಲ್ಲಿ ಒಬ್ಬ ಅದ್ಭುತ ಸಂವೇದನಾಶೀಲ ಮನಸ್ಸು ಅಡಗಿ ಕುಳಿತಿತ್ತು. ಇದಕ್ಕೆ ಸಾಕ್ಷಿ ಈತನ ಫೋಟೋಗ್ರಫಿ ಕೈಚಳಕವೇ ನಿದರ್ಶನ. ಸುತ್ತಮುತ್ತಲಿನ ಪ್ರಕೃತಿ, ನಮ್ಮಂತ ಹುಳುಮಾನವರು, ಪ್ರಾಣಿಗಳು, ಪಕ್ಷಿಗಳು ನಮಗೆ ಅವು ಸಾಮಾನ್ಯವಂತೆ ಕಾಣುತ್ತಿರುತ್ತವೆ, ಈ ಸಾಮಾನ್ಯದಲ್ಲಿ ಅಸಾಮಾನ್ಯತೆಯನ್ನು ಕ್ಯಾಮೆರಾ ಕಣ್ಣಿನ ಮೂಲಕ ತೋರಿಸುವ ದೊಡ್ಡ ಪ್ರಯತ್ನವನ್ನು ಪ್ರಶಾಂತ್ ಮಾಡುತ್ತಿದ್ದಾರೆ. ಫೋಟೋಗ್ರಫಿ ಈತನ ಹವ್ಯಾಸವಾಗಿಬಿಟ್ಟಿದೆ. ಇದುವರೆಗೆ ತಾನು ತೆಗೆದಿರುವ ಅದ್ಭುತ ಫೋಟೋಗಳನ್ನು ಪ್ರಶಾಂತ್ ಒಂದು ಬ್ಲಾಗ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಬ್ಲಾಗ್ನಲ್ಲಿ ಪ್ರಶಾಂತ್ ಮಾಡಿರುವ ಸಮಗ್ರ ಫೋಟೋಗ್ರಫಿ ಕೆಲಸ ಎದ್ದು ಕಾಣುತ್ತದೆ. ಬ್ಲಾಗ್ಗೆ ಪ್ರಶಾಂತ್ ಇಟ್ಟಿರುವ ಹೆಸರು `ಪಾಚಸ್'.
ಪಾಚಸ್ನಲ್ಲಿ ತುಂಬಾ ಸಂವೇದನಾಶೀಲ, ಚಿಂತನಶೀಲ ಫೋಟೋಗಳಿವೆ. ನೋಡಿದ ಕೂಡಲೇ ಒಂದು ರೀತಿಯ ಅವ್ಯಕ್ತ ಭಾವನೆ ನಮಗೆ ತೋರ್ಪಡಿಸಿದಂತೆ ಕಾಣುತ್ತದೆ. ನೀವು ಅದನ್ನು ಸ್ಥಳ/ವಸ್ತು ನೋಡಿರುತ್ತೀರಿ, ಆದರೆ ಅದು ನನ್ನ ಕಣ್ಣಿಗೆ ಅದು ಆ ರೀತಿ ಕಾಣಲೇ ಇಲ್ಲ ಅಂತ ಖಂಡಿತ ಮನಸ್ಸಿನಲ್ಲಿ ಗೊಣಗುತ್ತೀರಿ, ಈ ತರಹ ಭಾವನಗಳು ಪ್ರಶಾಂತ್ ತೆಗೆದಿರುವ ಫೋಟೋಗಳಲ್ಲಿ ನಿಮಗೆ ಅನಿಸುತ್ತದೆ. ನಾವು ನೋಡಿದ ನಮ್ಮ ಬನವಾಸಿಯನ್ನು ಇನ್ನೋಂದು ರೀತಿಯಲ್ಲಿ ಪ್ರಶಾಂತ್ ತನ್ನ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾನೆ.
ನನಮ್ಮ ಬನವಾಸಿಗರು ಪ್ರಶಾಂತ್ ಈ ಫೋಟೋಗ್ರಫಿ ಕಲೆಯನ್ನು ನೋಡಿ ಆತನ ಬೆನ್ನು ತಟ್ಟಲೇಬೇಕು. ಹಾಗಾಗಿ ಬನವಾಸಿಗರು ಕೆಳಕಂಡ ಬ್ಲಾಗ್ಗೆ ಭೇಟಿ ಕೊಟ್ಟು ಪ್ರಶಾಂತ್ ಸಂಗೀತಗಾರ್ಗೆ ಒಂದು ಫೋನ್ ಮಾಡಿ, ತುಂಬಾ ಬ್ಯೂಸಿಯಾಗಿದ್ದರೆ ಒಂದು `ವೆಲ್ಡನ್' ಅಂತ ಮೇಸೆಜ್ ಹಾಕಿರುವೆಂದು ಖಂಡಿತ ನಾನು ನಂಬಿರುತ್ತೇನೆ. ನಾವು ಬನವಾಸಿಗರಾಗಿ ನಮ್ಮ ಬನವಾಸಿಗರನ್ನು ಬೆಂಬಲಿಸುವ ರೀತಿ ಅಂತ ಅಂದುಕೊಂಡಿದ್ದೇನೆ.
ಪ್ರಶಾಂತ ಸಂಗೀತಗಾರ್ ನ ಫೋನ್ ನಂಬರ್ ಮೋ: 9663871418,
ಪ್ರಶಾಂತ್ ಕ್ಯಾಮೆರಾ ಕಣ್ಣಿನಲ್ಲಿ ಕಂಡ ಅದ್ಭುತ ಫೋಟೊಗಳು..
ಇಟ್ಟ ನೋಟ-ಗುರಿ |
ಗೇಟಿನ ಅಂಚಿನಲ್ಲಿ ಮಧುಕೇಶ್ವರ ಓಡೆಯರವರರ ಮನೆ |
ಪತ್ರಗಳನ್ನು ಹಾಕುತ್ತಿದ್ದ ಡಬ್ಬ |
ಮೊಬೈಲ್ ಯುಗದಲ್ಲೂ ಟೆಲಿಫೋನ್ ಗೆಳೆಯ |
ನಿಲ್ಲಲಾ ಬತ್ತಾ ಇದೀನಿ... |
ವರದೆಯ ತಪ್ಪಲಿನಲ್ಲಿ |
ರಥ-ರಾಜ-ಬೀದಿ |
ನಾನು ಗೊತ್ತಾಗಲಿಲ್ವಾ..! |
ಬೀಳಲ್ಲಾ ಬಿಡ್ರಿ... |
ಗಂಟೆ-ಹನುಮ |
ಪ್ರಶಾಂತ್ ತೆಗೆದಿರುವ ಬಹಳಷ್ಟು ಪೋಟೋಗಳು ಆತನ ಬ್ಲಾಗ್ ನಲ್ಲಿವೆ. ನೋಡಿ ಹಾಗೆ ತಮ್ಮ ಅಭಿಪ್ರಾಯವನ್ನು ಹೇಳುವುದನ್ನು ಮರೆಯದಿರಿ
ಪ್ರೀತಿಯಿಂದ
ನಿಮ್ಮ
ಬನವಾಸಿಗ