Wednesday 11 April 2012

ನಾರಾಯಣರ ಸೋಲು ಕನ್ನಡ ಚಿತ್ರರಂಗದ ಸೋಲಲ್ಲ...!



ಸುಬ್ಬಾರೆಡ್ಡಿ ನಾರಾಯಣ ಅಲಿಯಾಸ್ ಎಸ್.ನಾರಾಯಣ್ ಕನ್ನಡ ಚಿತ್ರರಂಗಕ್ಕೆ ವಿದಾಯ ಹೇಳಿರುವುದು ಚಿತ್ರರಂಗದಲ್ಲಿ, ಮಾಧ್ಯಮಗಳಲ್ಲಿ ಒಂದು ಸಣ್ಣ ಚರ್ಚೆ ಎಡೆಮಾಡಿಕೊಟ್ಟಿತ್ತು. ಇತ್ತೀಚೆಗೆ ನಿವೃತ್ತಿ ಘೋಷಿಸಿದ  ಖ್ಯಾತ ಕ್ರಿಕೇಟಿಗ, ವಾಲ್ ಆಫ್ ಇಂಡಿಯನ್ ಕ್ರಿಕೇಟ್ ಅಂತ ಹೆಸರು ಪಡೆದಿದ್ದ ರಾಹುಲ್ ದ್ರಾವಿಡ್ರ ವಿಷಯವೂ ಅಷ್ಟೇ ಗ್ರಾಸವಾಗಿತ್ತು. ಕ್ರಿಕೇಟ್ ಹಾಗೂ ಸಿನಿಮಾ ಎರಡೂ ಪಕ್ಕಾ ಮನರಂಜನೆಯ ಮಾಧ್ಯಮಗಳು.  ಎರಡೂ ಹಣದ ಹೊಳೆಯನ್ನು ಹರಿಸುವ ಉದ್ಯಮಗಳು ಕೂಡ.  ಗೆದ್ದಾಗ ಜನಪ್ರಿಯತೆ/ಸೆಲೆಬ್ರಿಟಿ ಎಂಬ ಕಿರೀಟ ಯಾವಾಗಲೂ ತಲೆಯ ಮೇಲೆ ಕೂತೇ ಇರುತ್ತದೆ. 35ನೇ ವಯಸ್ಸಿಗೆ ಕ್ರಿಕೇಟಿಗರು `ಮುದುಕರು' ಅಂತ ಅನಿಸಿದರೆ, ಹೆಚ್ಚಿನ ಸಿನಿಮಾದವರ ನಿಜವಾದ ಕ್ಯಾರಿಯರ್ ಶುರುವಾಗುವುದೇ 30 ನಂತರ. ನಾನು ಹೇಳಬೇಕಾದ ವಿಷಯ ಹಾದಿ ತಪ್ಪಿದ ಹಾಗೆ ಕಾಣ್ತಾ ಇದೆ.


ಎಸ್. ನಾರಾಯಣ್ ಇನ್ನು ಮುಂದೆ ಕನ್ನಡ ಚಿತ್ರರಂಗದಲ್ಲಿ ಸಕ್ರೀಯರಾಗಿರುವುದಿಲ್ಲ, ಅರ್ಥಾತ್ ಯಾವುದೇ ಕನ್ನಡ ಸಿನಿಮಾಗಳನ್ನು  ನಿರ್ದೇಶಿಸುವುದಿಲ್ಲ, ನಿರ್ಮಾಣ ಮಾಡುವುದಿಲ್ಲ ಅಂತ ಹಠ ಹಿಡಿದು ಕೂತಿದ್ದಾರೆ. ಮೂಲಕ ನಾರಾಯಣ್ ಕನ್ನಡ ಸಿನಿಮಾ ಉದ್ಯಮದಿಂದ ದೂರ ಸರಿಯುವ ಪ್ರಯತ್ನದಲ್ಲಿದ್ದಾರೆ.  ಒಂದು ರೀತಿಯಲ್ಲಿ ಎಸ್ ನಾರಾಯಣರ ವಿದಾಯದ  ನಿರ್ಧಾರ, ಕನ್ನಡ ಚಿತ್ರರಂಗಕ್ಕೆ ಒಳಿತು ಹಾಗೂ ಕನ್ನಡದ  ಸ್ವಂತ ಕಥೆಗಳನ್ನು ತೆರೆಯ ಮೇಲೆ ತರುವ ನಿಟ್ಟಿನಲ್ಲಿ ಸಾಗುವ ದಾರಿಗೆ ನಾರಾಯಣ್ ತಮ್ಮ ದಾರಿಯನ್ನು ಸುಗಮ ಮಾಡಿಕೊಟ್ಟ ಹಾಗಾಗಿದೆ. ನಾರಾಯಣ್ ಚಿತ್ರರಂಗದಿಂದ ದೂರ ಸರಿಯಲು ನೀಡುವ ಕಾರಣಗಳಾದರೂ ಏಂತಹದ್ದು. ಚಿತ್ರರಂಗದಲ್ಲಿ ಶಿಸ್ತು ಇಲ್ಲ, ಪ್ರಾಮಾಣಿಕತೆ ಇಲ್ಲ. ಜನ ಕನ್ನಡ ಸಿನಿಮಾಗಳನ್ನು ನೋಡುತ್ತಿಲ್ಲ, ಬಹಳಷ್ಟು ಜನರು ತಮ್ಮ ಮನಸ್ಸಿಗೆ ನೋವನ್ನುಂಟು ಮಾಡಿದ್ದಾರೆ. ತರಹದ ಹತ್ತು ಹಲವು ಕಾರಣಗಳನ್ನು ಟೀವಿ ಸ್ಟುಡಿಯೋದಲ್ಲಿ ಕುಳಿತು ಪುಂಖಾನುಪುಂಖವಾಗಿ ನಾರಾಯಣ್ ಮಾತನಾಡುತ್ತಿದ್ದರೆ, ಕಡೆ ಕಾನಿಷ್ಕಾ ಅಂಗಳದಲ್ಲಿ  ಕಾರ್ಯಕ್ರಮ ನೋಡುತ್ತಿದ್ದ ಗಾಂಧಿನಗರದವರು ನಾರಾಯಣ್ರ ಸೋತ ಮುಖವನ್ನು ನೋಡಿ ನಗುತ್ತಿದ್ದರು. ಒಂದೇ ಮಾತಿನಲ್ಲಿ ಹೇಳುವುದಾದರೆ ಇದು ನಾರಾಯಣರ `ಸ್ವಯಂಕೃತ ಅಪರಾಧ'. ನಾರಾಯಣರ ಈಗಿನ ಸ್ಥಿತಿಗತಿಗೆ ಅವರೇ ಕಾರಣ ಹೊರತು, ಬೇರೆಯವರ ಮೇಲೆ ದೂರುತ್ತಿರುವುದು ಸರಿಯಲ್ಲ.  ಇದೊಂಥರ ಕೋತಿ ತಾನು ಬೆಣ್ಣೆ ತಿಂದು, ಬೇರೆಯವರ ಬಾಯಿಗೆ ಸವರಿದ ಹಾಗಾಯ್ತು. ಅಷ್ಟಕ್ಕೂ ಕನ್ನಡ ಚಿತ್ರರಂಗಕ್ಕೆ ಎಸ್ .ನಾರಾಯಣ್ ನೀಡಿದ ಕೊಡುಗೆಯಾದರೂ ಏನು? ಆರಂಭದಲ್ಲಿ ಮಾಡಿದ 3-4 ಸ್ವಮೇಕ್ ಸಿನಿಮಾಗಳನ್ನು ಬಿಟ್ಟರೆ ಇಡೀ ತಮ್ಮ ಚಿತ್ರರಂಗ ಕ್ಯಾರಿಯರ್ನದುದ್ದಕ್ಕೂ ಮಾಡಿದ್ದು ಸಾಲು ಸಾಲು ರಿಮೇಕ್ ಸಿನಿಮಾಗಳು, ಕಂಡಿದ್ದು ಅನ್ಯ ಭಾಷೆಯ ಸಿನಿಮಾಗಳ ಕಥೆಯ ಛಾಯೆ.  ರಿಮೇಕ್ ಸಿನಿಮಾಗಳನ್ನು ಮಾಡಿ ಸೂಪರ್ಡ್ಯೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಅಂತ ಎಲ್ಲರಿಂದಲೂ ಕರೆಸಿಕೊಳ್ಳುತ್ತಾ ಹೋದರೆ ವಿನಾ ಕೊನೆಯವರೆಗೂ ಎಸ್. ನಾರಾಯಣರ ಸಿನಿಮಾಗಳು ಎಂತಹವು ಎಂಬುದು ನಮ್ಮ ಜನರಿಗೆ ಇಂದಿಗೂ ಅರ್ಥವಾಗಲೇ ಇಲ್ಲ.  ಕನ್ನಡದ ಡಾ.ರಾಜ್ಕುಮಾರ್,ವಿಷ್ಟುವರ್ಧನ್,ಅಂಬರೀಷ್ರಿಂದ ಹಿಡಿದು  ಸುದೀಪ್, ದರ್ಶನ್,ರವಿಚಂದ್ರನ್,ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್, ಗಣೇಶ್,ಶ್ರೀನಗರ ಕಿಟ್ಟಿ ಹೀಗೆ ಇನ್ನು ಹಲವಾರು ಸ್ಟಾರ್ಗಳ ಚಿತ್ರಗಳನ್ನು ನಿರ್ದೇಶಿಸಿದ ಕೀರ್ತೀ ಖಂಡಿತ ಎಸ್ ನಾರಾಯಣ್ ರವರಿಗೆ ಸೇರಲೇಬೇಕು. ಕನ್ನಡದ ಮಟ್ಟಿಗೆ ನಾರಾಯಣ್ ತಲೆಮಾರಿನ ನಿರ್ದೇಶಕರಲ್ಲಿ ಯಾರೂ ಇಂತಹ ಸಾಧನೆ ಮಾಡಿಲ್ಲ. ವಿಷಯದಲ್ಲಿ ಅವರನ್ನು ಮೆಚ್ಚಲೇಬೇಕು ಇದರಲ್ಲಿ ಡಾ.ರಾಜ್ ಕುಮಾರ್ ರವರ  `ಶಬ್ಧವೇಧಿ' ಸಿನಿಮಾ ಹೊರತುಪಡಿಸಿ ವಿಷ್ಣುವರ್ಧನ್, ಅಂಬರೀಷ್ರಂತಹ ಮೇರುನಟರನ್ನು ಇಟ್ಟುಕೊಂಡು ಹಿರಿಯ ಅನುಭವಿ ನಿರ್ದೇಶಕರಾಗಿ ನಾರಾಯಣ್ ಒಂದು ಸ್ವಮೇಕ್ ಸಿನಿಮಾ ಮಾಡದಿರುವುದು ಮಾತ್ರ ದೊಡ್ಡ ದುರಂತ.  
     

ತಮಿಳು, ತೆಲುಗು ಚಿತ್ರರಂಗವನ್ನು ಬಿಟ್ಟು ನಾವು ಮಾತನಾಡುವುದಾದರೆ, ಮಲಯಾಳಂ ಚಿತ್ರರಂಗ ನಮ್ಮಷ್ಟೇ ಚಿಕ್ಕದು. ಕೇರಳ ಚಿತ್ರರಂಗದಲ್ಲಿ ಮುಮ್ಮುಟ್ಟಿ, ಮೋಹನ್ ಲಾಲ್ ರಂತಹ  ನಟರಿಗೆ ಎಸ್. ನಾರಾಯಣ್  ಸಮಕಾಲೀನದಲ್ಲಿ ಬಂದಂತಹ ಮಲ್ಲು ನಿರ್ದೇಶಕರು ಅಪ್ಪಟ ಮಲಯಾಳಂ ಸಿನಿಮಾಗಳನ್ನು ಮಾಡುತ್ತಾರೆ. ಅವರ ಸಿನಿಮಾಗಳಲ್ಲಿ ಬೇರೆ ಭಾಷೆಯ ಕಥೆಗಳ ವಾಸನೆ ಇರುವುದಿಲ್ಲ, ಅಲ್ಲಿ ಅಪ್ಪಟ ಮಲಯಾಳಂ ಕಥೆ ಇರುತ್ತದೆ.  ಅಕಸ್ಮಾತ್ ತಾವು ರಿಮೇಕ್ ಮಾಡಲು ನಿರ್ಮಾಪಕರುಹೀರೋಗಳು ಕಾರಣ ಅಂತ ನಾರಾಯಣ ಕಾರಣ ಕೊಟ್ಟರೂ, ಅದು ಅವರ ಸ್ವಂತಿಕೆ ಇಲ್ಲದ ಪರಮಾವಧಿಯನ್ನು ತೋರ್ಪಡಿಸುತ್ತದೆ. ನಾರಾಯಣ್ ಈಗಾಗಲೇ ಕಳೆದ 25 ವರ್ಷಗಳಿಂದ ಚಿತ್ರರಂಗದಲ್ಲಿ ದುಡಿದವರು, ಸಿನಿಮಾಭಾಷೆಯನ್ನು ಅರ್ಥಮಾಡಿಕೊಂಡವರು, ಯಶಸ್ಸು, ಹಣ, ಹೆಸರು-ಪ್ರಶಸ್ತಿಯನ್ನು ಎಲ್ಲವನ್ನೂ ಪಡೆದವರು, ನಟರಾಗಿ ನಿಂತವರು, ಇಂತಹ ಅನುಭವಿ, ಬೇರೆಯವರ ಒತ್ತಡ ಏಷ್ಟೇ ಇದ್ದರೂ ಅಪ್ಪಟ ಕನ್ನಡ ಸಿನಿಮಾಗಳನ್ನು ಮಾಡಬೇಕಿತ್ತು; ಆದರೆ ಮಾಡಲಿಲ್ಲ. ಈಗಾಗಲೇ ಮಲಯಾಳಂ, ತಮಿಳು, ತೆಲಗು ಸಿನಿಮಾಗಳಲ್ಲಿ ಸೂಪರ್ ಹಿಟ್  ಆದಂತಹ ಸಿನಿಮಾಗಳನ್ನ ಮತ್ತೆ ಕನ್ನಡದಲ್ಲಿ ಮಾಡಿ ತೋರಿಸಿದರೆ ಸಿನಿಮಾಗಳು ಯಶಸ್ವಿಯಾಗುವುದೇ...? ಎಲ್ಲರಿಗೂ ತಿಳಿದಿರುವಂತೆ ಬೇರೆ ಭಾಷೆಯ  ಸೂಪರ್ ಹಿಟ್ ಸಿನಿಮಾಗಳು ಇಂದು ಕರ್ನಾಟಕದ ಮೂಲೆ ಮೂಲೆ, ಹಳ್ಳಿಹಳ್ಳಿಗಳಲ್ಲಿ ನೂರುದಿನ ಓಡುತ್ತಿವೆ. ಪೈರಸಿ ಸೀಡಿಗಳು ಬಿಸಿಬಿಸಿ ದೋಸೆಯಂತೆ ಖರ್ಚಾಗುತ್ತಿವೆ.  ಬೇರೆ ಭಾಷೆಯ ಸಿನಿಮಾಗಳನ್ನು ನೋಡುತ್ತಿರುವರು ಯಾರು? ಚಿರಂಜೀವಿ, ರಜನಿ, ಕಮಲ್, ಬಾಲಕೃಷ್ಣ, ಮಹೇಶ್ ಬಾಬುರಂತಹ ಸೂಪರ್  ಸ್ಟಾರ್ ಗಳ ಸಿನಿಮಾಗಳನ್ನು  ಕೋಟಿಗಟ್ಟಲೇ ಬಿಡ್ ಮಾಡಿ ಹಂಚಿಕೆ ಮಾಡಲು ತೆಗೆದುಕೊಳ್ಳುತ್ತಿರುವವರು ಯಾರು

ಇಂದಿಗೂ ಬೆಂಗಳೂರಿನ ಪ್ರಮುಖ ಥಿಯೇಟರ್ಗಳಾದ ನಟರಾಜ, ಪಲ್ಲವಿ, ಮೂವೀಲ್ಯಾಂಡ್ಗಳಲ್ಲಿ  ಮೊದಲ ದಿನದ ಟಿಕೇಟ್ಗಳನ್ನು ಹೇಳಿದ ರೇಟಿಗೆ ಬ್ಲಾಕ್ನಲ್ಲಿ ಕೊಂಡು ನೋಡುವವರು ಯಾರು? ಇದೇ ನಮ್ಮ ಕನ್ನಡಿಗರು. ಹೀಗೆ ಇಡೀ ಕರ್ನಾಟಕವೇ  ನೋಡಿ ಆಶೀರ್ವಾದ  ಮಾಡಿದ ಬೇರೆ ಸಿನಿಮಾಗಳನ್ನು ನಮ್ಮ ಕನ್ನಡ ಮಣ್ಣಿನ ಸೊಗಡು ಅಂತ ಹೇಳಿ ಸಗಣಿ ಸಾರಿಸಿ ಅಂಗಳ ಮಾಡಿದರೆ, ಅಂಗಳದಲ್ಲಿ ನಮ್ಮವರು ಓಡಾಡುವರೇ? ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿದರೆ ನಮ್ಮ ಕನ್ನಡಿಗರು ತಿರಸ್ಕರಿಸದೇ ಇರುವರೇ! ಆಗಲೇ ಸಿನಿಮಾಗಳನ್ನು ಥಿಯೇಟರ್ಗೆ ಹೋಗಿ ನೋಡಿದವರಿಗೆ ಮತ್ತೇ ಯಾಕೆ ಅದೇ ಕಥೆಯನ್ನು ಗಣೇಶನ ಮುಖದಲ್ಲೋ, ಶ್ರೀನಗರ ಕಿಟ್ಟಿ, ಸುದೀಪನ ಮುಖದಲ್ಲೋ ನೋಡಬೇಕು. ಹಾಗಾಗಿಯೇ ನಾರಾಯಣರ ಸಿನಿಮಾಗಳು ಸೋಲುತ್ತಿವೆ. ಜನರು ಥಿಯೇಟರ್ಗೆ ಬರದೇ ಇರೋಕೆ ಇದೇ ಕಾರಣ. ಚಿತ್ರರಂಗದಲ್ಲಿ ಶಿಸ್ತು ಇರದೇ ಇರಲಿಕ್ಕೆ ಇದೇ ಕಾರಣ. ಇತ್ತೀಚೆಗೆ ಬಿಡುಗಡೆಯಾದ ಎಸ್ ನಾರಾಯಣರ ವೀರಪರಂಪರೆ (ಹಿಂದಿ-ಸರ್ಕಾರ್), ದುಷ್ಟ (ತಮಿಳು ಮೈನಾ ಎಳೆ), ಶೈಲೂ(ಮೈನಾ) ಎಲ್ಲ ಸಿನಿಮಾಗಳು ಸೋತಿವೆ. ಸೋಲಲು ಮುಖ್ಯ ಕಾರಣ ನಮ್ಮ ಜನರು ಈಗಾಗಲೇ ಮೂಲ ಸಿನಿಮಾಗಳನ್ನು  ನೋಡಿದ್ದಾರೆ.  ನಮ್ಮ ಜನರಿಗೆ ರಾತ್ರಿ ಅನ್ನವನ್ನು ಬೆಳಗ್ಗೆ ಚಿತ್ರಾನ್ನ ಮಾಡಿ ಕೊಡುವುದು ಬೇಡ
ಮಾಡುವುದಾದರೆ ಬಿಸಿ ಬಿಸಿ ಹೊಸತನ್ನ ಮಾಡಿ. ಮಾತು ಕೇವಲ ಎಸ್. ನಾರಾಯಣಗೆ ಮಾತ್ರ ಅನ್ವಯಿಸುವುದಿಲ್ಲ. ನಾರಾಯಣರ ಸಮಕಾಲೀನದಲ್ಲಿ ಬಂದಂತಹ ಶಿವಮಣಿ, ಓಂಪ್ರಕಾಶ್ ರಾವ್, ಎಮ್.ಎಸ್.ರಮೇಶ್ ಇನ್ನು ಹಲವು ನಿರ್ದೇಶಕರಿಗೂ ಅನ್ವಯಿಸುತ್ತದೆ

ಇಡೀ ಕರ್ನಾಟಕಕ್ಕೆ  ಗೊತ್ತು. ಎಸ್ ನಾರಾಯಣ್ ಒಬ್ಬ ಅಪರೂಪದ ಬರಹಗಾರ, `ಕಲ್ಲಾದರೆ ನಾನು' ಎಂಬ ಅದ್ಭುತ ಗೀತೆಯನ್ನು ಕನ್ನಡ ನಾಡನ್ನು ವರ್ಣಿಸಿ ರಚಿಸಿದವರು, ಶಿಸ್ತಿನ ಮನುಷ್ಯ, ನಿಮ್ಮಲ್ಲಿ ಇನ್ನೂ ಆನೆ ಬಲದಷ್ಟು ಸಾಮಥ್ರ್ಯವಿದೆ. ಕನ್ನಡಿಗರಿಗೆ ಸಾಧ್ಯವಾದಷ್ಟು ಇನ್ನು ಒಳ್ಳೆಯ ಸಿನಿಮಾಗಳನ್ನು ನೀಡಲಿಕ್ಕೆ ಪ್ರಯತ್ನಿಸಿ. ನಿವೃತ್ತಿಯ ವಿಷಯ ಮಾತನಾಡದೇ ಮತ್ತೆ ಚಿತ್ರರಂಗಕ್ಕೆ ಬನ್ನಿ. ಕನ್ನಡದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಕನ್ನಡ ಸಿನಿಮಾ ಉದ್ಯಮಕ್ಕೆ ಇನ್ನು ಹಲವಾರು ಶಿಷ್ಯರುಗಳನ್ನು ತಯಾರು ಮಾಡಿ ಎಂಬುದು ಚಿತ್ರರಸಿಕರ ಕೋರಿಕೆ. ಇಲ್ವವೇ ನಿಮ್ಮ ವಿದಾಯದ ಮಾತುಗಳು ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಹೋಗುವ ಮುನ್ಸೂಚನೆಗೆ ದಾರಿ ತೋರಿಸುತ್ತಿದ್ದೀರಿ  ಅಂತ ಅಂದುಕೊಳ್ಳಬಹುದೇ..! ಭದ್ರಾವತಿಯಿಂದ ಬಂದವರು ಮತ್ತೇ ಭದ್ರಾವತಿಗೆ ಹೋಗಿ ಜನರ ಮುಂದೆ ಓಟು ಕೇಳುವಿರೇ..? ನಾರಾಯಣರಿಗೆ ಶುಭವಾಗಲಿ..