Sunday 4 August 2013

ಪ್ರಜಾವಾಣಿಯಲ್ಲಿ ಫಕೀರನ ಕನಸುಗಳು.....!




`ಫಕೀರನ ಕನಸುಗಳು' ಬ್ಲಾಗ್  ಪ್ರಾರಂಭಿಸಿ ಹತ್ತಿರ ಎರಡು ವರ್ಷವಾಗುತ್ತಾ ಬಂದಿತು. ನನ್ನದು ಅನ್ನುವ ಬ್ಲಾಗ್ ಇರಬೇಕು ಅನ್ನುವ ಕಲ್ಪನೆ ಕೂಡ 2 ವರ್ಷದ ಹಿಂದೆ ಇರಲಿಲ್ಲ. ಮುಖ್ಯವಾಗಿ ನಾನು ಕಂಪ್ಯೂಟರ್ ಹಾಗೂ ಇಂಟರ್ನೆಟ್ ಬಳಕೆಯ ಬಗ್ಗೆ ಅಷ್ಟೊಂದು ತಿಳಿದುಕೊಂಡಿರಲಿಲ್ಲ. ಬ್ಲಾಗ್ ಪ್ರಾರಂಭವಾದದ್ದು ಒಂದು ಕೆಟ್ಟ ಘಟನೆಯ ಮೂಲಕ. ಮಾಡುತ್ತಿದ್ದ ಕೆಲಸ ಯಾವುದೋ ಕಾರಣದಿಂದ ನಿಂತುಹೋಯಿತು.ಆ ದಿನಗಳಲ್ಲಿ  ಅನಿರಿಕ್ಷಿತವಾಗಿ ನಿರುದ್ಯೋಗಿಯಾಗಿಬಿಟ್ಟೆ.

 6 ವರ್ಷದ ಬೆಂಗಳೂರಿನ ಜೀವನದಲ್ಲಿ ಏರಳಿತಗಳು  ನನಗೆ ಮಾಮೂಲಿಯಾಗಿದ್ದರಿಂದ, `ಮುಂದೇನು' ಅಂತ ಕಾಡಲಿಲ್ಲ.ಕೆಲಸವಿಲ್ಲದ ಸಮಯದಲ್ಲಿ ಏನಾದರೂ ಹೊಸತನ್ನು ಮಾಡಬೇಕು ಅನ್ನುವ ಹಂಬಲದಲ್ಲಿ ನನ್ನದೇ ಬ್ಲಾಗ್ ಮಾಡಲು ಹೊರಟೆ. `ಬರೆಯುವುದು, ಫಕೀರನಂತೆ ತಿರುಗುವುದು, ಓದುವುದು' ಬಿಟ್ಟರೆ ನನಗೆ ಬೇರೆ ಪ್ರಪಂಚ ಗೊತ್ತಿರಲಿಲ್ಲ. ಈ ರೀತಿಯ ತಿಕ್ಕುಲತನಗಳು ನನ್ನ ಬ್ಲಾಗ್ ಗೆ ಜೀವ ತುಂಬಿದವು.

ಬ್ಲಾಗನ್ನು ಹೇಗೆ ಮಾಡಬೇಕು ಅಂತ ಗೊತ್ತಿಲ್ಲದ ನಾನು ಹಗಲು ರಾತ್ರಿ ನನ್ನ ರುಚಿಗೆ ತಕ್ಕ ಹಾಗೆ ಸುಂದರವಾದ ವೇದಿಕೆಯನ್ನು ನಿರ್ಮಿಸಿಕೊಂಡೆ. ನೂರಾರು ಬ್ಗಾಗ್ ಗಳನ್ನು ನೋಡಿದೆ. ಅವರೆಲ್ಲರ ಬ್ಗಾಗ್ ಗಳಿಗಿಂತ ನನ್ನ ಬ್ಗಾಗ್ ವಿಭಿನ್ನವಾಗಿ ಇರಬೇಕು ಅಂತಂದುಕೊಂಡು ಮಾಡಿದ ನನ್ನ `ಫಕೀರನ ಕನಸುಗಳು' ಬ್ಗಾಗ್  ಕೆಲವೇ ದಿನಗಳಲ್ಲಿ ಅತಿ ಹೆಚ್ಚಿನ ಒದುಗರನ್ನು ಪಡೆದುಕೊಂಡಿತು. ಹೆಚ್ಚಿನವರು ಬ್ಗಾಗ್ನ ಹೆಸರನ್ನು ಇಷ್ಟಪಟ್ಟರೆ, ಇನ್ನು ಅನೇಕರು ನನ್ನ ಲೇಖನ, ಬರವಣಿಗೆಗಳನ್ನು ತುಂಬಾ ಇಷ್ಟಪಟ್ಟರು. ಸಮಯವಿದ್ದಾಗಲೆಲ್ಲಾ ಏನಾದರೂ ಗೀಚುತ್ತಾ, ಕವನಗಳನ್ನು ಬರೆಯುತ್ತಾ ಬ್ಲಾಗ್ ನ್ನು ಅಪ್ ಡೇಟ್ ಮಾಡುತ್ತಿದ್ದೆ. ಕೆಲವು ಬಾರಿ 2-3 ತಿಂಗಳು ಬ್ಗಾಗ್ ಕಡೆ ಮುಖ ಕೂಡ ನೋಡದೆ ಇದ್ದದ್ದು ಕೂಡ ಉಂಟು. ಸುಮಾರು 13ಕ್ಕೂ ಹೆಚ್ಚು ಹೊರದೇಶಗಳಲ್ಲಿದ್ದ ಕನ್ನಡ ಓದುಗರು ನನ್ನ ಬ್ಗಾಗನ್ನು ಓದುತ್ತಿದ್ದರು. ಆ ಮೂಲಕ ಹೊರದೇಶದ ಅನೇಕ ಸ್ನೇಹಿತರ ಪರಿಚಯವಾಯಿತು. ನಮ್ಮ ಊರುಕೇರಿ, ಬರವಣಿಗೆ, ಕಥೆಕವನ ಸಾಹಿತ್ಯ, ಪತ್ರಿಕೋದ್ಯಮ ಎಲ್ಲವನ್ನೂ ಬ್ಲಾಗ್ ನಲ್ಲಿ ತುಂಬಿದೆ. ಬ್ಲಾಗ್ ಒಂದು ರೀತಿಯಲ್ಲಿ ಓದುವ ಮಾಧ್ಯಮವಾಗಿ ರೂಪುಗೊಂಡಿರುವುದು ಸಣ್ಣ ಕನವರಿಕೆ ಅಷ್ಟೇ.

ಮೊನ್ನೆ ಅಂದರೆ ಒಂದನೇ ತಾರೀಖು ನಾನು ರಾಣೇಬೆನ್ನೂರಿನ  ಚಿಕ್ಕಹಳ್ಳಿಯಲ್ಲಿದ್ದೆ. ಆ ದಿನ ನನ್ನ ಬ್ಗಾಗ್ನ ಕುರಿತು  ಪ್ರಜಾವಾಣಿ ಪತ್ರಿಕೆಯಲ್ಲಿ ಲೇಖನ ಪ್ರಕಟವಾಗಿತ್ತು. ಲೇಖನ ನೋಡಿದ ಅನೇಕ ಸ್ನೇಹಿತರು ನನಗೆ ಫೋನ್ ಮಾಡಿ ಅಭಿನಂದಿಸಿದರು. ನನಗೆ ಪ್ರಜಾವಾಣಿ ಪತ್ರಿಕೆ ಅಲ್ಲಿ ಸಿಗಲೇ ಇಲ್ಲ. ಲೇಖನವನ್ನು ನೋಡಲಿಕ್ಕೂ ಕೂಡ ಆಗಲಿಲ್ಲ. ಅದಾದ  ಎರಡು ದಿನಗಳ ನಂತರ ಬೆಂಗಳೂರಿಗೆ ಬಂದ ಮೇಲೆ  ಪ್ರಜಾವಾಣಿ ಪತ್ರಿಕೆಯಲ್ಲಿ ನನ್ನ ಬ್ಲಾಗ್ ಕುರಿತು ವಿಮರ್ಷೆ ನೋಡಿದಾಗ ಹಳೆಯ ಅನೇಕ ಘಟನೆಗಳು ನೆನಪಾದವು. 


ಫಕೀರನ ಈ ಸಣ್ಣ ಪ್ರಯತ್ನವನ್ನು ಗುರುತಿಸಿದ ಪ್ರಜಾವಾಣಿ ಪತ್ರಿಕೆಗೆ ಹಾಗೂ ಲೇಖನ ಬರೆದ ಸಾಕ್ಷಿಯವರಿಗೆ ನನ್ನ ಧನ್ಯವಾದಗಳು....