Sunday, 28 October 2012

ಕನ್ನಡದ ಹಿರಿಯ ನಿರೂಪಕಿ ಅಪರ್ಣ ಹೇಳಿದ ಸತ್ಯಗಳು


ಕನ್ನಡದ ಮುದ್ದು ಮುಖದ ಅಪರ್ಣ 27 ವರ್ಷಗಳ ಹಿಂದೆ ಮಾಧ್ಯಮಗಳಲ್ಲಿ ಹೇಗೆ ಕಾಣಿಸಿಕೊಂಡರೋ ಈಗಲೂ ಹಾಗೆಯೇ ಇದ್ದಾರೆ. ಅರ್ಥಾತ್ ಅದೇ  ಹದಿನಾರರ ಶೋಡಷೆಯ ಹುರುಪು, ಉತ್ಸಾಹ, ಬತ್ತದ ಜೀವನ ಸೆಲೆಯ ಪ್ರೀತಿ. ವೇದಿಕೆ ಮೇಲೆ, ಸಭೆ-ಸಮಾರಂಭಗಳಲ್ಲಿ ಅಪರ್ಣ ಕಾಣಿಸಿಕೊಳ್ಳುತ್ತಾರೆ ಅಂದರೆ, ಇಡೀ ಕಾರ್ಯಕ್ರಮಕ್ಕೆ ಚೈತನ್ಯ, ಮೆರಗು, ವಿಶೇಷ ಆಕರ್ಷಣೆ ಬಂದುಬಿಡುತ್ತದೆ. ಅವರದ್ದೇ ಆದ  ಮಾತು, ಶೈಲಿ, ಹಾವ-ಭಾವ, ಸ್ವಚ್ಛ-ಅಚ್ಚ ಕನ್ನಡ ಭಾಷೆಯ ಅವರ ನಿರೂಪಣಾ ವಿಧಾನದ ಸೊಗಸೇ ಸೊಗಸು. ಕಾರಣಕ್ಕೆ ಅವರೊಬ್ಬ ಕನ್ನಡದ ಏಕೈಕ ಸ್ಟಾರ್ ನಿರೂಪಕಿಯಾಗಿ ನಿಲ್ಲುತ್ತಾರೆ. ಹಿರಿಯ ಸಿನಿಮಾ ಪತ್ರಕರ್ತರಾಗಿದ್ದ ತಂದೆ ನಾರಾಯಣಸ್ವಾಮಿ ಹಾಗೂ ತಾಯಿ ಪದ್ಮ ಅವರ ಉತ್ತಮ ಸಂಸ್ಕಾರದಲ್ಲಿ ಬೆಳೆದು ಬಂದವರು. ಇಂಥ ವಿಶೇಷತೆಯ ಅಪರ್ಣ, ನಟಿಯಾಗಿ, ನಿರೂಪಕಿಯಾಗಿ, ಕಂಠದಾನ ಕಲಾವಿದೆಯಾಗಿ ಕರ್ನಾಟಕಕ್ಕೆ  ಎವರ್ಗ್ರೀನ್!  ಅಪರ್ಣ ಜೀವನದ ಸಂಪೂರ್ಣ ಮಾತುಕತೆ

ಹೀಗಿತ್ತು ನನ್ನ ಆರಂಭ
ಅವತ್ತು ಆಕಾಶವಾಣಿಯ ಪ್ರಥಮ ಅನೌನ್ಸರ್ ಆಯ್ಕೆಗೆ ನಾನು ಹೋದಾಗ ನಾನಿನ್ನೂ ಕಾಲೇಜು ಓದುತ್ತಿದ್ದೆ. ಚೂಡಿದಾರ್ ಹಾಕಿಕೊಂಡ ಚಿಕ್ಕ ಹುಡುಗಿಯಾಗಿ ದಿನ ಬಂದಿದ್ದ ನೂರಾರು ಸ್ಪರ್ಧೆಗಳಲ್ಲಿ ನಾನು ಒಬ್ಬಳಾಗಿದ್ದೆ. ಕೆಲವರು ನನ್ನನ್ನು ನೋಡಿ ಇದೇನ್ ಚಿಕ್ಕ ಹುಡುಗಿ ಇವಳಿಗೆಲ್ಲಾ ಟೀವಿಯಲ್ಲಿ ಬರೋ ಆಸೆ ಅಂತ ಕಿಸಕ್ಕನೇ ನನ್ನನ್ನು ಹಂಗಿಸಿದ ಖುಷಿ ನೋಡಿದವರಿಗಿತ್ತು. ದಿನ ಬಂದವರನ್ನು ನೋಡಿದಾಗ ನನಗೆ ಶಾಕ್ ಆಗಿತ್ತು. ಏನಪ್ಪಾ ಇವ್ರು! ಇಂಟ್ರ್ಯೂ ಅಂದರೆ ಹೀಗೆಲ್ಲಾ ಬರಬೇಕಾ? ನಾ ನೋಡಿದ್ರೆ ಹೀಗೆ ಬಂದಿದೀನಿ ಅನ್ನುವ  ಸಣ್ಣ ಅಳುಕು ನನ್ನನ್ನು ಕಾಡಿತ್ತು. ಈವಾಗ ಯಾವ ರೀತಿಯಲ್ಲಿ ನಿರೂಪಕಿಯರಿಗೆ ಆಡಿಷನ್ ಮಾಡುತ್ತಾರೆ ಅನ್ನುವುದು ನನಗೆ ಗೊತ್ತಿಲ್ಲ. ಆದರೆ ನಮಗೆ ಆಡಿಷನ್ ಮಾಡಿದಾಗ ಎಷ್ಟು ಟಫ್ ಇರ್ತಿತ್ತು ಅಂದ್ರೆ ನಿರೂಪಕರು ಅಂದರೆ ಕೇವಲ ಬರೆದುಕೊಟ್ಟಿದ್ದನ್ನು ಹೇಳುವುದು ಮಾತ್ರ ಅವರ ಜವಾಬ್ದಾರಿಯಲ್ಲ. ಬರೆದದ್ದು ಸರಿಯಾಗಿದೆಯೋ, ಇಲ್ಲವೋ? ಅವರು ಕೊಟ್ಟ ಮಾಹಿತಿ ಸರಿಯೋ ಸಪ್ಪೋ? ಅನ್ನುವುದನ್ನು ಕೂಡ ಪರೀಕ್ಷೆ ಮಾಡುತ್ತಿದ್ದರು. ಬೇಕು ಅಂತಲೇ  ತಪ್ಪು ತಪ್ಪಾಗಿ ಬರೆದು ಅದನ್ನು ಓದಲಿಕ್ಕೆ ಹೇಳುತ್ತಿದ್ದರು. ನನಗೆ ಮೊದಲಬಾರಿಗೆ ಓದಲು ಕೊಟ್ಟ ಸ್ಕ್ರಿಪ್ಟನ್ನು ಅನೇಕ ವರ್ಷಗಳವರೆಗೆ ನೆನಪಿಗೆ ಇಟ್ಟುಕೊಂಡಿದ್ದೆ. `ಏಳು ಗಂಟೆ ಇಪ್ಪತ್ತೈದು ನಿಮಿಷಕ್ಕೆ ಚಿತ್ರಮಂಜರಿ',  `ಸಿಲಿನಿಯರಿಂಗಳಿಲ್ ಸಿಲಮಗರಿಂದಲ್ ಚಲನಚಿತ್ರದಿಂದ ಆಯ್ದಂತಹ ಗೀತೆ' ತರಹದ ತುಂಬಾ ನಮ್ಮ ನಾಲಿಗೆಗೆ ಕಸರತ್ತನ್ನು ನೀಡುವ ಪ್ರಶ್ನೆಗಳನ್ನು ಕೊಟ್ಟಿದ್ರು. ಬೇಕು ಅಂತಲೇ ತಪ್ಪು ಕನ್ನಡವನ್ನು ಬರೆದು ಓದಲಿಕ್ಕೆ ಹೇಳ್ತಿದ್ರು. ತಪ್ಪನ್ನು ಸರಿಯಾಗಿ ಓದುತ್ತಾರೋ ಇಲ್ಲವೋ, ವ್ಯಾಕರಣ ಸರಿಯಾಗಿ ತಿಳಿದುಕೊಂಡಿದ್ದಾರೋ ಇಲ್ಲವೋ, ಅಲ್ಪಪ್ರಾಣ ಮಹಾಪ್ರಾಣವನ್ನು ಸರಿಯಾಗಿ ಉಚ್ಚರಿಸುತ್ತಾರೋ ಇಲ್ಲವೋ, ಶುದ್ಧ ಕನ್ನಡದ ಎಲ್ಲ ಘಟ್ಟಗಳನ್ನು ಪರೀಕ್ಷೆ ಮಾಡಿ, ಅಳೆದು ತೂಗಿ ನಮ್ಮನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಬಹುಶಃ ಆಯೋಜಕರು ಕೊಟ್ಟ ಸ್ಕ್ರಿಪ್ಟ್ನ ಪರೀಕ್ಷೆಯಲ್ಲಿ ಪಾಸಾದವರು ಎಂಟೋ ಹತ್ತೋ ಜನರಿರಬಹುದು. ಅದರಲ್ಲಿ ಪ್ರಥಮ ಅಂತ ನಿಂತವಳು ನಾನಂತೆ.  ದಿನಗಳಲ್ಲಿ ಆಡಿಷನ್ ಅಷ್ಟು ಕಟ್ಟುನಿಟ್ಟಾಗಿತ್ತು. ಕೇವಲ ನೇರ ನಿರೂಪಣೆ ಮಾಡುವವರನ್ನು ಅಷ್ಟು ಸ್ಪರ್ಧಾತ್ಮಕ ರೀತಿಯಲ್ಲಿ ಅಷ್ಟು ಕಟ್ಟುನಿಟ್ಟಾಗಿ ಮಾಡಿದ್ರು. ನಮಗೆಲ್ಲಾ ಭಾಷೆ ಅಂದರೆ ಅಭಿವ್ಯಕ್ತಿಯ ಸಂಕೇತ. ನಾವು ಶುದ್ಧವಾಗಿ ಕನ್ನಡವನ್ನು ಮಾತನಾಡಿದಷ್ಟು ನಮ್ಮನ್ನು ಅನುಕರಿಸುವವರು ಅಷ್ಟೇ ಸ್ಟಷ್ಟವಾಗಿ ಮಾತನಾಡುತ್ತಾರೆ.

ದೂರದರ್ಶನದಲ್ಲಿ ಕಲಾಸಂಸ್ಕಾರ ಸಿಕ್ಕಿದ್ದು
ನಮಗೆ ದೂರದರ್ಶನದಲ್ಲಿ ಯಾವ ರೀತಿ ಸಂಸ್ಕಾರ ಹಾಗೂ ತರಬೇತಿ ಕೊಡೋರು ಅಂದ್ರೆ, ಅಲ್ಲಿದ್ದ ಹಿರಿಯರಿಗೆಲ್ಲಾ ಸಾಹಿತ್ಯ, ಸಂಗೀತದ ಜ್ಞಾನವಿತ್ತು, ನಮ್ಮ ಕನ್ನಡ ಕಲೆ ಸಾಂಸ್ಕೃತಿಕ ಬದುಕಿನ ಒಡನಾಟ ಇತ್ತು. ಇದು ತಪ್ಪು, ಅದು ಸರಿ ಅಂತ ಹೇಳುವ ಹಿಡಿತ ಇತ್ತು. ಹಾಗಾಗಿ ಅದನ್ನೆಲ್ಲಾ ನಮಗೆಲ್ಲಾ ಮಾರ್ಗದರ್ಶನ ಮಾಡ್ತಿದ್ರು. ಹೇಮಲತಾ ಅನ್ನುವವರು ಈಗಿಲ್ಲ  ಅವರನ್ನು ಖಂಡಿತ ಮರೆಯೋಕ್ಕಾಗಲ್ಲ. ನಮಗೆಲ್ಲಾ ತುಂಬಾ ಗೈಡ್ ಮಾಡಿದೋರು. ಆವಾಗೆಲ್ಲಾ ವಿಜಯದಶಮಿ ಕಾರ್ಯಕ್ರಮ ಮಾಡಬೇಕಾದ್ರೆ, ಹೇಮಲತಾ ಮೇಡಂ ನನ್ನನ್ನು ಕರೆದು,  `ಅಪರ್ಣ ನಾಳೆ ವಿಜಯದಶಮಿ, ಹಾಗಾಗಿ ಚೆನ್ನಾಗಿ ತಿನ್ಕೊಂಡು ಬರಬೇಕು. ಹೊಟ್ಟೆ ಖಾಲಿ ಮಾಡಿಕೊಂಡು ಬರೋ ಹಾಗಿಲ್ಲ. ದೊಡ್ಡದಾಗಿ ಕುಂಕುಮ ಇಟ್ಟುಕೊಂಡು, ತಲೆತುಂಬ ಹೂವು, ರೇಷ್ಮೆಸೀರೆ ಉಟ್ಟುಕೊಂಡು ಒಳ್ಳೆ ಮಹಾಲಕ್ಷ್ಮಿ ತರಹ ಡ್ರೆಸ್ ಮಾಡಿಕೊಂಡು ಬರಬೇಕು ಅಂತ ಹೇಳ್ತಿದ್ರು. ಈಗ ಯಾವ ಚಾನೆಲ್ನಲ್ಲಿ ತರಹ ಮಾರ್ಗದರ್ಶನ ಮಾಡೋರು ಇದಾರೆ. ಈವಾಗ ಮಹಾಲಕ್ಷ್ಮೀ ತರಹ ಡ್ರೆಸ್ ಮಾಡಿಕೊಂಡು ಬಂದರೆ ನೋಡಿ ನಗೋರೆ ಜಾಸ್ತಿ ಅಂತದ್ರಲ್ಲಿ ತರಹ ಬರೋಕೆ ಸಾಧ್ಯವೇ ಅಂತ ಹೇಳಿ ನಗುತ್ತಾರೆ ಅಪರ್ಣ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಟ್ರೇನಿಂಗ್ ಪಡೆಯೋದಂದ್ರೆ ಅವೆನ್ಯೂ ರೋಡ್ನಲ್ಲಿ ಯಾರಿಗೂ ತಾಗಿಸದೇ ಹಾಗೆ ಗಾಡಿ ಓಡಿಸಿದ ಹಾಗೆ. ಅಂತಹ ಟ್ರೇನಿಂಗ್ ಅಲ್ಲಿ ಸಿಗ್ತಿತ್ತು, ಈಗ ಹೇಗೆ ಅಂತ ಗೊತ್ತಿಲ್ಲ.

ಅಪ್ಪ-ಅಮ್ಮನೇ ಇಂದಿಗೂ ಸದಾ ಆದರ್ಶ
ವೃತ್ತಿ ಹಾಗೂ ನನ್ನ ವ್ಯಕ್ತಿತ್ವವನ್ನು ನೋಡಿ ನಮ್ಮ ತಂದೆಯನ್ನು ನೆನಪಿಸಿಕೊಳ್ಳೋದಾದ್ರೆ ನಮ್ಮ ತಂದೆ ಯಾವತ್ತು ನಮಗೆ ಹೊಡೆಯಲಿಲ್ಲ. ಬೈಯಲಿಲ್ಲ. ಮುದ್ದು ಮಾಡಲಿಲ್ಲ. ನಮ್ಮ ತಂದೆ ಎರಡು ವಿಷಯಗಳನ್ನು ತುಂಬಾ ಸ್ಪಷ್ಟವಾಗಿ, ಗಂಭೀರವಾಗಿ ನನಗೆ ತಿಳಿಸಿಬಿಟ್ಟಿದ್ರು. ಅವರ ಮಾತುಗಳು ನನಗೆ ಈಗಲೂ ಮಾದರಿ. ಅವರೇ ನನ್ನ ರೋಲ್ ಮಾಡೆಲ್. ಮೊದಲನೆಯದಾಗಿ ಗೇಟ್ ಹೊರಗಡೆ ನೀನು ಎಂತಹ ದೊಡ್ಡ ವ್ಯಕ್ತಿಯಾಗಿರು, ದೇಶದ ಪ್ರಧಾನಿಯಾಗಿದ್ರೂ ಸಹ, ಗೇಟ್ ಒಳಗಡೆ ಬಂದ ಮೇಲೆ ನೀನು ಮನೆಮಗಳಾಗಿರು. ನಮ್ಮದು ಸಾಧಾರಣ ಮಧ್ಯಮ ವರ್ಗದ ಕುಟುಂಬವಾಗಿತ್ತು. ನೀನು ಎಂತಹ ಸ್ಟಾರ್ ಆದರೂ ಮನೆ ಮುಸುರೆ ತಿಕ್ಕಕ್ಕೂ ರೆಡಿ ಇರಬೇಕು. ಮುಖ್ಯವಾಗಿ ನೀನು ನೀನಾಗಿರಬೇಕು ಅಷ್ಟೇ. 

ಎರಡನೆಯದಾಗಿ ಯಾವಾಗಲೂ ನೀನು ಜ್ಞಾನ, ಸಾಹಿತ್ಯ, ತಿಳುವಳಿಕೆ, ಬುದ್ಧಿವಂತಿಕೆ ಇದರ ಸಂಪರ್ಕದಲ್ಲಿರುವ ಕೆಲಸಗಳನ್ನು ನೀನು ಮಾಡಬೇಕು ಅಂತ ಹೇಳೋರು. `ಮಸಣದ ಹೂವು' ಸಿನಿಮಾದ ನಂತರ ದೂರದರ್ಶನದ ಬಹಳಷ್ಟು ಕಾರ್ಯಕ್ರಮಗಳು ನನಗೆ ಸಿಗಲೇ ಇಲ್ಲ. ಅಪ್ಪನಿಗೆ ನಾನು ಸಿನಿಮಾ ಕಡೆ ಹೋಗುವುದು ಅಷ್ಟಾಗಿ ಇಷ್ಟವಿರಲಿಲ್ಲ. ನೀನು ಯಾವುದೇ ಕಾರಣಕ್ಕೂ ಸುದ್ದಿಯ ಹಿಂದೆ ಹೋಗಬೇಡ, ಹೊಸ ಹೊಸ ವಿಷಯಗಳನ್ನು ತಿಳ್ಕೋ, ಓದು, ಹೋಗು ಆಕಾಶವಾಣಿಗೆ... ಕೇಳು ಅವಕಾಶನಾ... ಪ್ರದೇಶ ಸಮಾಚಾರ ಓದ್ತೀನಿ ಅಂತ ಹೇಳು, ಆ್ಯಂಕರಿಂಗ್ ಮಾಡ್ತೀನಿ ಅಂತ ಕೇಳು... ಆಗ ಮಾತ್ರ ನೀನು ಯಾವಾಗಲೂ ಅಪ್ಡೇಟ್ ಆಗಿ ಇರಲಿಕ್ಕೆ ಸಾಧ್ಯ, ಆಲ್ವೇಸ್ ಬೀ ಅಪ್ಡೇಟ್...! ಬುದ್ಧಿಗೆ ಕಸರತ್ತು ಕೊಡು, ಓದಕ್ಕಾಗಲ್ಲ ಅಂದ್ರೆ ಬೇರೆಯವರಿಂದ ತಿಳ್ಕೋ... ಸಗಣಿಯೊಡನೆ ಗುದ್ದಾಟಕ್ಕಿಂತ ಗಂಧದ ಜೊತೆ ಗುದ್ದಾಟ ಮೇಲು ಅನ್ನುವ  ಮಾತನ್ನು ಸದಾ ನನಗೆ ಹೇಳೋರು. ಹೀಗೆ ನನ್ನ ಬಗ್ಗೆ ತುಂಬಾ ಕಾಳಜಿ ತಗೊಂಡು ಹೇಳೋರು. 

ಮೂರನೆಯದಾಗಿ ಅವರು ಹೇಳ್ತಿದ್ದ ಮಾತು ಅಂದ್ರೆ ಸಾರ್ವಜನಿಕ ಹಾಗೂ ವೈಯಕ್ತಿಕ ಜೀವನ ಎರಡೂ ಬೇರೆ ಬೇರೆ. ನೀನು ಸಾರ್ವಜನಿಕ ಮುಖ ಆದ್ರೆ, ಮುಖಕ್ಕೆ ಅದರದ್ದೇ ಆದ ಚೌಕಟ್ಟು, ರೀತಿ ನೀತಿ ಇದೆ. ಅದಕ್ಕೆ ತಕ್ಕಹಾಗೆ ನೀನು ನಡೆದುಕೊಳ್ಳಬೇಕು. ಇದಕ್ಕೆ ಒಂದು ಘಟನೆಯನ್ನು ನಾನು ನೆನಪಿಸಿಕೊಳ್ಳೋದಾದ್ರೆ, ನಮ್ಮ ತಂದೆ ಹಾಗೂ ಡಾ. ರಾಜ್ಕುಮಾರ್ ತುಂಬಾ ಒಳ್ಳೆಯ ಸ್ನೇಹಿತರಾಗಿದ್ರು. ಒಮ್ಮೆ ಅವರ ಮನೆಯಲ್ಲಿ ಯಾವುದೋ ಫಂಕ್ಷನ್ ಇತ್ತು. ಅಪ್ಪ ನನ್ನನ್ನು ಕರೆದುಕೊಂಡು ಹೋದ್ರು. ನಾವಿಬ್ರೂ ಒಂದು ಸಾಲಿನಲ್ಲಿ ಕುಳಿತುಕೊಂಡ್ವಿ. ರಾಜ್ಕುಮಾರ್ ಅವರನ್ನು ಮಾತನಾಡಿಸಲಿಕ್ಕೆ ಬಹಳಷ್ಟು ಜನರು ಬರ್ತಾ ಇದ್ರು. ಅವ್ರು ಪ್ರತಿಬಾರಿಯು ಎದ್ದು ನಿಂತು ಬಂದವರನ್ನು ಮಾತನಾಡಿಸುತ್ತಿದ್ರು. ಹೀಗೆ ಬಂದವರೆಲ್ಲರಿಗೂ ಎದ್ದು ನಿಂತು ನಮಸ್ಕರಿಸೋರು. ನಮ್ಮಪ್ಪ ನನ್ನನ್ನು ನೋಡಿ ರಾಜ್ಕುಮಾರ್ ಅವರನ್ನು ನೋಡಿ ಏನ್ ಕಲಿತೆ ಅಂತ ಕೇಳಿದ್ರು. ಪ್ರತಿಬಾರಿ ಯಾರೇ ಬಂದು ಮಾತನಾಡಿಸಿದ್ರೂ, ಬೇಸರಪಟ್ಟುಕೊಳ್ಳದೇ ಎದ್ದು ನಿಂತು ಮಾತನಾಡಿಸುತ್ತಾರೆ. ವಿನಯವಂತಿಕೆಯನ್ನು ನೀನು ಅಳವಡಿಸಿಕೊಳ್ಳಬೇಕು ಅಂತ ಹೇಳಿದ್ರು. ದೂರದರ್ಶನದ ಕಾರ್ಯಕ್ರಮ ಮುಗಿಸಿಕೊಂಡು ಬಂದು, ಅವರಿವರೂ ಹೇಳಿದ ಹೊಗಳಿಕೆಯನ್ನು ಅಪ್ಪನಿಗೆ ಹೇಳಿದ್ರೆ. ಅಪ್ಪ ಮಾತ್ರ ಅದಕ್ಕೆ ಜಾಸ್ತಿ ಪ್ರತಿಕ್ರಿಯಿಸದೆ, ನನ್ನ ಭಾಷಾಶೈಲಿಯನ್ನು ತಿದ್ದುವ ಪ್ರಯತ್ನ ಮಾಡ್ತಿದ್ರು. ಭಾಷೆಯನ್ನು ಯಾವಾಗಲೂ ಜಿಪುಣತನದಿಂದ ಬಳಸಬೇಕು. ಇದೆ ಅಂತ ಧಾರಾಳತನ ತೋರಬಾರದು ಎಂದು ಹೇಳ್ತಿದ್ರು. ಹೀಗೆ ನನ್ನ ಜೀವನದಲ್ಲಿ ನಮ್ಮಪ್ಪ ಎಲ್ಲಾ ಆಗಿದ್ರು. ಅದೇ ನಮ್ಮಮ್ಮನ ಬಗ್ಗೆ ಹೇಳೋದಾದ್ರೆ, ಅಮ್ಮ ಅಪ್ಪಟ ಮೈಸೂರಿನವರು. ಹಳೆ ಸಂಪ್ರದಾಯಗಳನ್ನು ಅರಿತವರು. ಸಂಗೀತ, ಸಾಹಿತ್ಯವನ್ನು ಚೆನ್ನಾಗಿ ತಿಳಿದುಕೊಂಡಿದ್ರು.  ನನಗೆ ಇವತ್ತು ಸಂಗೀತ, ದಾಸರ ಪದಗಳು, ಸಾಹಿತ್ಯದ ಜ್ಞಾನ ತಕ್ಕಮಟ್ಟಿಗೆ ಇದೆ ಅಂದರೆ ಅದಕ್ಕೆ ನಮ್ಮಮ್ಮನೇ ಕಾರಣ. ನಮ್ಮಮ್ಮ ತುಂಬಾ ಕಷ್ಟದ ಜೀವನವನ್ನು ನೋಡಿರೋರು. ನಮ್ಮ ಅಪ್ಪ-ಅಮ್ಮ ಮಾಡಿದ ಒಂದು ವಿಷಯವನ್ನು ಒತ್ತಿ ಹೇಳೋದಾದ್ರೆ ಅವ್ರು ಯಾವತ್ತೂ ಮಕ್ಕಳನ್ನು ಎದುರಿಗೆ ಹೊಗಳಲೇ ಇಲ್ಲ. ನೀನು ತುಂಬಾ ಗ್ರೇಟು, ಶ್ರೇಷ್ಠ ಅಂತ ಅವ್ರು ಯಾವತ್ತು ಹೇಳಲೇ ಇಲ್ಲ. ಎದುರಿಗೆ ಮಕ್ಕಳನ್ನು ಹೊಗಳಿದ್ರೆ ಅವರಿಗೆ ಕೋಡು ಮೂಡುತ್ತೇ ಅಂತ ಹೇಳೋರು. ಇದನ್ನೆಲ್ಲಾ ನೆನಪಿಸಿಕೊಂಡ್ರೆ ತಂದೆ-ತಾಯಿಯ ಬಗ್ಗೆ ತುಂಬಾ ಅಭಿಮಾನ ಮೂಡುತ್ತೆ.

ಬಾಲ್ಯದ ಕ್ಷಣಗಳು... ಕಷ್ಟದ ದಿನಗಳಲ್ಲೂ ಸಿಹಿಯ ನೆನಪುಗಳು...
ಬಾಲ್ಯದಲ್ಲಿ ನಮ್ಮದು ಅಪ್ಪಟ ಮಧ್ಯಮವರ್ಗ, ತುಂಬಾ ಸುಶಿಕ್ಷಿತ, ತಂದೆಯ ಸಂಬಳದಲ್ಲೇ ಜೀವನ ಸಾಗಿಸುವ ಸಾಧಾರಣ ಕುಟುಂಬವಾಗಿತ್ತು. ನನಗೆ ಒಬ್ಬ ಅಣ್ಣ ಇದ್ದಾರೆ. ತಂದೆ ಸಾಹಿತ್ಯ, ಪತ್ರಿಕೋದ್ಯಮದಲ್ಲಿ ಕೆಲಸ ಮಾಡ್ತಿದ್ದೋರು. ನಾವು ಪಾಕೆಟ್ ಮನಿ ನೋಡಲಿಲ್ಲ. ಟ್ಯೂಷನ್ ಕ್ಲಾಸ್ಗೆ ಹೋಗಲಿಲ್ಲ. ನಾವು ಚೆನ್ನಾಗಿ ಓದಬೇಕು, ಒಳ್ಳೆಯ ಕೆಲಸ ಪಡೆದುಕೊಳ್ಳಬೇಕು ಇಷ್ಟೇ ನಮ್ಮ ಬಾಲ್ಯದ ಕನಸಾಗಿತ್ತು. ನಮ್ಮ ತಂದೆ ಮೂಲತಃ ಹಾಸನ ಜಿಲ್ಲೆಯ ಅರಿಸೀಕೆರೆಯವರು. ಅಮ್ಮ ಮೈಸೂರಿನವರು. ಚಿಕ್ಕವರಾಗಿದ್ದಾಗ ನಾವೆಲ್ಲಾ ನಮ್ಮ ಅಜ್ಜನ ಮನೆ ಇದ್ದ ಅರಿಸೀಕೆರೆಗೆ ಹೋಗ್ತಿದ್ವಿ. ಹಳ್ಳಿ ವಾತಾವರಣ ಕೂಡ ನಮಗೆ ಒಗ್ಗಿಹೋಗಿತ್ತು. ಓದಿದ್ದು, ಬೆಳೆದಿದ್ದೆಲ್ಲಾ ಬೆಂಗಳೂರಿನ ಮಲ್ಲೇಶ್ವರಂನಲ್ಲಿ. ಮನೆಯಲ್ಲಿ ಸಾಹಿತ್ಯದ ವಾತಾವರಣ ಇತ್ತು. ಮನೆಗೆ ಸಾಹಿತಿಗಳು, ಪತ್ರಕರ್ತರು ಬಂದು ಹೋಗೋರು. ನನಗೆ ಸಾಹಿತ್ಯದ ಕಡೆ ಆಸಕ್ತಿ ಬರಲಿಕ್ಕೆ ಇದು ಕೂಡ ಕಾರಣವಾಗಿತ್ತು. ಚಿಕ್ಕವರಾಗಿದ್ದಾಗ ಕುಮಾರಪಾರ್ಕನ ಕಾನ್ವೆಂಟ್ ಸ್ಕೂಲ್ನ ನನ್ನ ಸಹಪಾಠಿಗಳೆಲ್ಲ ರವಿವಾರ ಅಲ್ಲಿಗೆ ಹೋಗಿದ್ವಿ. ಹೋಟೆಲ್ನಲ್ಲಿ ಮಸಾಲ್ ದೋಸೆ, ಐಸ್ ಕ್ರೀಮ್ ತಿಂದ್ವಿ ಅಂತೆಲ್ಲಾ ಹೇಳಿದ್ರೆ, ನಾನು ಮತ್ತು ನಮ್ಮಣ್ಣ, ಕ್ಲಾಸ್ಮೇಟ್ಸ್ಗಳಿಗೆ `ನಿಂಗೋತ್ತಾ, ನಮ್ಮಪ್ಪ ನಿನ್ನೆ ನಮ್ಮನ್ನು ಸಿನಿಮಾ ಸೆಟ್ಗೆ ಕರೆದುಕೊಂಡು ಹೋಗಿದ್ರು, ಅಲ್ಲಿ ನಾನು ಅಂಬರೀಷ್ ಅವರನ್ನು ಭೇಟಿ ಮಾಡಿದೆ ಅಂತ ನಾವು ಹೇಳ್ತಿದ್ವಿ. ಆಗ ನಮಗೆ ನಾಟಕಗಳು ಅರ್ಥವಾಗದೇ ಇರೋ ದಿನಗಳಲ್ಲಿಯೂ ಕೂಡ ತಂದೆ  ನಮ್ಮನ್ನು ರವೀಂದ್ರ ಕಲಾಕ್ಷೇತ್ರ, ಕೆನ್ ಸ್ಕೂಲ್ಗೆ ಕರೆದುಕೊಂಡು ಹೋಗ್ತಿದ್ರು. ಸುಮ್ಮನೇ ನಾಟಕ ನೋಡೋದು, ಬರೋದು ಇದೇ ನಮ್ಮ ವೀಕೆಂಡ್ ಪ್ಲಾನುಗಳಾಗಿದ್ದವು. ಸ್ಕೂಲ್ನಲ್ಲಿ ಓದುವಾಗ ತುಂಬಾ ಆ್ಯಕ್ವೀವ್ ಆಗಿದ್ದೆ. ಎಲ್ಲದರಲ್ಲೂ ನನಗೆ ಫಸ್ಟ್ ಪ್ರೈಜ್ ಬರೋದು ಗ್ಯಾರೆಂಟಿ ಆಗಿತ್ತು. ಅದೇ ಎಂಇಎಸ್ ಕಾಲೇಜಿನಲ್ಲಿ ಓದುತ್ತಿರುವಾಗಲೇ ನಾನು ಸಿನಿಮಾದಲ್ಲಿ ಅಭಿನಯಿಸಿದ್ದರಿಂದ  ನನ್ನ ಓದಿನ ಕಾಯಕಕ್ಕೆ ಏನು ತೊಂದರೆಯಾಗಲಿಲ್ಲ. ಕಾಲೇಜಿನ ಗುರುಗಳು ನನಗೆ ತುಂಬಾ ಸಪೋರ್ಟ್  ಕೊಡ್ತಿದ್ರು. ಬಾಲ್ಯದ ಹಾಗೂ ಕಾಲೇಜಿನ ದಿನಗಳು ತುಂಬಾ ಸುಂದರವಾಗಿದ್ದವು.

ಪುಟ್ಟಣ್ಣ ಹಾಗೂ ನಮ್ಮ ತಂದೆ!

ನಮ್ಮ ತಂದೆ, ಪುಟ್ಟಣ್ಣ ಕಣಗಾಲ್, ವಿಜಯನಾರಸಿಂಹ ತುಂಬಾ ಒಳ್ಳೆಯ ಸ್ನೇಹಿತರಾಗಿದ್ರು. ಪುಟ್ಟಣ್ಣ ಅವರಿಗೆ ಹೋಗೋ ಬಾರೋ ಅಂತ ಕರೆಯೋರು. ಒಂದು ಕಾಲದಲ್ಲಿ ಪುಟ್ಟಣ್ಣನವರ ಕಷ್ಟದ ದಿನಗಳಲ್ಲಿ ನಮ್ಮ ತಂದೆ ತುಂಬಾ ಸಹಕಾರಿಯಾಗಿದ್ರು. ಒಂದು ಋಣವನ್ನು ನಾ ಹೇಗೋ ತೀರಿಸೋದು ಅಂತೆಲ್ಲ ಪುಟ್ಟಣ್ಣ ನಮ್ಮ ತಂದೆಗೆ ಹೇಳ್ತಿದ್ರು. ಅವ್ರು ತುಂಬಾ ಜನಪ್ರಿಯ ನಿರ್ದೇ ಶಕರಾದ ಮೇಲೆ ನನ್ನನ್ನು ನೋಡಿ ನಿನ್ನ ಮಗಳನ್ನು ನನ್ನ ಸಿನಿಮಾದ ನಾಯಕಿಯನ್ನಾಗಿ ಮಾಡಿಕೊಳ್ತೀನಿ ಅನುಮತಿ ಕೊಡು ಅಂತ ಒಮ್ಮೆ ಕೇಳಿದ್ರು. ನಮ್ಮಪ್ಪನಿಗೆ ನಾನು ಸಿನಿಮಾದ ಕಡೆ ಹೋಗೋದು ಇಷ್ಟವಿರಲಿಲ್ಲ. ಆದರೂ ಪುಟ್ಟಣ್ಣ ಕೇಳೋದನ್ನು ಮಾತ್ರ ಬಿಡಲಿಲ್ಲ. ನಾನು ಸಿನಿಮಾ ಮಾಡೇ ಮಾಡ್ತೀನಿ, ನೀನು ಅದಕ್ಕೆ ಒಪ್ಪಿಗೆ ಕೊಡಲೇಬೇಕು ಅಂತ ಹಠ ಹಿಡಿದ್ರು. ಅಂತೂ ಅಪ್ಪ ಕೊನೆಗೆ ಒಪ್ಪಿಕೊಂಡ ಮೇಲೆ ನಾನು ಅವರ `ಮಸಣದ ಹೂವು' ಚಿತ್ರದಲ್ಲಿ ಅಭಿನಯಿಸಿದೆ. ಪುಟ್ಟಣ್ಣ ನಮ್ಮಪ್ಪನನ್ನು `ನಾರಾಯಣ ಸ್ವಾಮಿಗಳೇ...' ಅಂತ ಸಂಬೋಧಿಸಿ ಮಾತನಾಡುತ್ತಿದ್ದರು. ಅವ್ರು ಸಾಯುವವರೆಗೂ ನಮ್ಮಪ್ಪನ ಮೇಲೆ ಅಪಾರ ಗೌರವವನ್ನು ಇಟ್ಟುಕೊಂಡಿದ್ರು. ರಂಗನಾಯಕಿ ಸಿನಿಮಾದಲ್ಲಿ ಸೆಕೆಂಡ್ ಆಫ್ನಲ್ಲಿ ಆರತಿಯನ್ನು ಸಂದರ್ಶನ ಮಾಡುವ ಒಬ್ಬ ಪತ್ರಕರ್ತನಿಗೆ 'ನಾರಾಯಣಸ್ವಾಮಿ' ಅಂತ ಹೆಸರಿಟ್ಟಿದ್ದಾರೆ. ಆರತಿ ಬಾಯಲ್ಲಿ `ಅದು ಹಂಗಲ್ಲ ನಾರಾಯಣ ಸ್ವಾಮಿಗಳೇ...' ಅಂತ ಡೈಲಾಗ್ ಕೂಡ ಹೇಳ್ಸಿದಾರೆ. ಮಸಣದ ಹೂವು ಸಿನಿಮಾ ನಡೆಯುವಾಗಲೇ ಪುಟ್ಟಣ್ಣ ತಮ್ಮ ಬ್ಯಾನರ್ನ ಮುಂದಿನ ಮೂರು ಸಿನಿಮಾಗಳಿಗೆ ನನ್ನನ್ನು ಬುಕ್ ಮಾಡಿಕೊಂಡಿದ್ದರು. ಮೊದಲನೆಯದು `ಸ್ಕೂಲ್ ಗಲರ್್', ಎರಡನೆಯದಾಗಿ `ತಂಗಾಳಿ, ಬಿರುಗಾಳಿ', ಮೂರನೆಯದು ಒಂದು ಯಂಗ್ ಲವ್ ಸ್ಟೋರಿ ಮಾಡ್ತೀನಿ ಅಂತೆಲ್ಲ ನನ್ನತ್ರ, ನನ್ನ ತಂದೆ ಹತ್ರ ಮಾತನ್ನು ಹೇಳಿದ್ರು. ಬೇರೆಯವರ ಹತ್ತಿರ ಏನ್ ವಿಷಯ ಹೇಳಿದ್ರೋ ನಂಗೊತ್ತಿಲ್ಲ. ಇದಾದ ಮೇಲೆ ಕೆ. ಬಾಲಚಂದರ್ ಅವರ ಸಿನಿಮಾದಿಂದಲೂ ಆಫರ್ ಬರಲಿಕ್ಕೆ ಶುರುವಾಯ್ತು. ಆಗ ಮಾತ್ರ ನಮ್ಮಪ್ಪ ನೀನು ಓದು ಮುಗಿಸೋವರೆಗೂ ಸಿನಿಮಾ ಮಾಡೋ ಹಾಗಿಲ್ಲ ಅಂತ ಹೇಳಿ ತುಂಬಾ ಸ್ಟ್ರಿಕ್ಟ್ ಆಗಿ ಹೇಳಿದ್ರು. ಆಮೇಲೆ ನಾನು ನನ್ನ ಡಿಗ್ರಿ ಕಡೆಗೆ ಗಮನ ಹರಿಸಲಿಕ್ಕೆ ಶುರು ಮಾಡಿದೆ.
ಪುಟ್ಟಣ್ಣರ ಬಗ್ಗೆ
ಪುಟ್ಟಣ್ಣರ ಬಗ್ಗೆ ಹೇಳೋಕೆ ನಾನು ತುಂಬಾ ಚಿಕ್ಕವಳು. ಅವರೊಂಥರ ಯುನಿವರ್ಸಿಟಿ ಇದ್ದ ಹಾಗೆ. ಪುಟ್ಟಣ್ಣರಿಗೆ ಪುಟ್ಟಣ್ಣರೇ ಸರಿಸಾಟಿ ಅಂತ ಮಾತ್ರ ಹೇಳಬಲ್ಲೆ. ಇದಕ್ಕಿಂತ ದೊಡ್ಡ ಪದ ಅವರ ಬಗ್ಗೆ ಹೇಳಲಿಕ್ಕೆ ನನಗೆ ಗೊತ್ತಿಲ್ಲ.

 
ಕಿರುತೆರೆ ಸೀರಿಯಲ್ನಲ್ಲಿ ಕಾಣಿಸಿಕೊಂಡಿದ್ದು...
ಆಗ ದೂರದರ್ಶನಕ್ಕೆ ವೈಶಾಲಿ ಕಾಸರವಳ್ಳಿ, ಮಂಜುಳಾ ಗುರುರಾಜ್ ಇವರೆಲ್ಲ ಗೆಸ್ಟ್ ನ್ಯೂಸ್ ರೀಡರ್ಗಳಾಗಿ ಬರ್ತಿದ್ರು. ನಾವೆಲ್ಲಾ ಅವರು ಹೇಗೆ ಸುದ್ದಿ ಓದುತ್ತಾರೆ ಅನ್ನೋದೆ ದೊಡ್ಡ ಕುತೂಹಲವಾಗಿತ್ತು. ಅದೇ ಸಮಯದಲ್ಲಿ ದೂರದರ್ಶನ ಆಗ ವಿಶ್ವೇಶ್ವರಯ್ಯ ಟವರ್ನ ಇಪತ್ತನೇ ಕಟ್ಟಡಲ್ಲಿತ್ತು. ಕಟ್ಟಡದಲ್ಲಿ ದೂರದರ್ಶನ ಮೊದಲ ಬಾರಿಗೆ ನಿರ್ಮಾಣ ಮಾಡಿದ್ದ `ಮನವೆಂಬ ಮರ್ಕಟ' ನಾಟಕದಲ್ಲಿ ನಾನು, ಶ್ರೀನಿವಾಸ ಪ್ರಭು, ಪ್ರಕಾಶ್ ರೈ, ವಿಶ್ವನಾಥರಾಯರು (ಸಿ. ಅಶ್ವಥ್ ಅಣ್ಣ) ಎಲ್ಲರೂ ಅಭಿನಯಿಸಿದ್ವಿ. ಇದಾದ ಮೇಲೆ `ಸಿಹಿಕಹಿ' ಸೀರಿಯಲ್ನ ಎರಡು-ಮೂರು ಎಪಿಸೋಡ್ನಲ್ಲಿ  ಆ್ಯಕ್ಟ್ ಮಾಡಿದೆ. ನಾಗಾಭರಣ ನಿರ್ದೇಶನ ಮಾಡಿದ `ನಮ್ಮ ನಮ್ಮಲ್ಲಿ' ಧಾರಾವಾಹಿಯಲ್ಲಿ ಅಭಿನಯಿಸಿದೆ. ಧಾರಾಯಾಹಿಯಲ್ಲಿ ಬಿ. ಜಯಶ್ರೀ, ವೈಶಾಲಿ ಕಾಸರವಳ್ಳಿ ಅವರ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿತ್ತು. ಮೊದಲ 13 ಎಪಿಸೋಡ್ಗಳನ್ನು ನಾಗಾಭರಣ ನಿರ್ದೇಶನ ಮಾಡಿದ್ರೆ, ನಂತರದ 13 ಎಪಿಸೋಡುಗಳನ್ನು ಆರತಿ ಅವರು ನಿರ್ದೇಶನ ಮಾಡಿದರು. ಆರತಿ ಅವರ ಇನ್ನೊಂದು ಧಾರಾವಾಹಿ `ಜಾತಿ'ಯಲ್ಲೂ ನಟಿಸಿದೆ. ಆಗೆಲ್ಲ ಅರ್ಧಗಂಟೆ ಎಪಿಸೋಡುಗಳ ಧಾರಾವಾಹಿಗಳು, ಎಲ್ಲವೂ ತುಂಬಾ ಚೆನ್ನಾಗಿ ಇರೋವು. ಮನಮುಟ್ಟುವಂತಿದ್ದವು. ಇದಾದ ಮೇಲೆ ನನಗೆ ದೂರದರ್ಶನದಲ್ಲಿ ನಿರೂಪಕಿಯಾಗುವ ಆಫರ್ ಬಂದುಬಿಟ್ಟಿತ್ತು. ಅಷ್ಟೊತ್ತಿಗಾಗಲೇ ನಾನು ಸಿನಿಮಾ, ನಾಟಕ, ಸೀರಿಯಲ್ಗಳಲ್ಲಿ ಕೆಲಸ ಮಾಡಿ ಆಲ್ರೌಂಡರ್ ಅಂತ ಕರೆಸಿಕೊಂಡುಬಿಟ್ಟಿದ್ದೆ. ಇದಾಗಿ  ಅನೇಕ ವರ್ಷಗಳ ನಂತರ ನಾನು ಈಟೀವಿಯಲ್ಲಿ 'ಮೂಡಲಮನೆ', 'ಪ್ರೀತಿ ಇಲ್ಲದ ಮೇಲೆ', 'ಮುಕ್ತ',  ಕಸ್ತೂರಿಯಲ್ಲಿ `ಸಹಗಮನ', ಝೀ ಕನ್ನಡದಲ್ಲಿ `ಜೋಗುಳ', ಕೊನೆಯದಾಗಿ ಈಗ `ಶುಭಮಂಗಳ'ದಲ್ಲಿ ಅಭಿನಯಿಸ್ತಾ ಇದೀನಿ.  ಮಾಡಿದ ಎಲ್ಲ ಸೀರಿಯಲ್ಗಳಲ್ಲಿ ಪಾತ್ರಗಳನ್ನು ತುಂಬಾ ಅಳೆದು ತೂಗಿ ಮಾಡಿದ್ದೇನೆ. ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ಖುಷಿ ಇದೆ.
ಮುಂದೇನು ಅಂತ ಕಾಡಿದ ದಿನಗಳು
ಸಿನಿಮಾ ಉದ್ಯಮದಲ್ಲಿ ಆಗ ಹೇಗಿತ್ತು ಅಂದ್ರೆ ವಿಷ್ಣುವರ್ಧನ್, ಅಂಬರೀಷ್ ದೊಡ್ಡ ನಟರಾಗಿದ್ದರು. ಅವರಿಗೆ ನಾಯಕಿಯಾಗೋಕೆ ನಾನು ತುಂಬಾ ಚಿಕ್ಕವಳಾಗಿದ್ದೆ. ಯಂಗ್ ಹೀರೋಗಳು ಇನ್ನೂ ಬಂದಿರಲಿಲ್ಲ. ಶಿವಣ್ಣರ ಜೊತೆ ಅಪರ್ಣ ಆ್ಯಕ್ಟ್ ಮಾಡ್ತಾರೆ ಅಂತ ಪತ್ರಿಕೆಯಲ್ಲಿ ಸುದ್ದಿ ಬಂದಿತ್ತು. ಆಮೇಲೆ ಅದು ಕೂಡ ಆಗಲೇ ಇಲ್ಲ. ಕಾರಣ ಗೊತ್ತಿಲ್ಲ. ಇಂತಹ ಸಮಯದಲ್ಲಿ ನನಗೆ ಶಬಾನಾ ಅಜ್ಮಿ, ಸ್ಮಿತಾ ಪಾಟೀಲ್  ಮಾಡುತ್ತಿದ್ದ ಪಾತ್ರಗಳ ತರಹ ನಾನು ಮಾಡಬೇಕು ಅಂತ ಆಸೆ ಇತ್ತು. ಆದರೆ ತರಹದ ಕಥೆಗಳು ಬರಲೇ ಇಲ್ಲ. ಯಾವುದೋ ತಂಗಿ ಪಾತ್ರ ಮಾಡು ಅನ್ನೋರು, ನನಗೆ ಅದು ಇಷ್ಟವಾಗ್ತಾ ಇರಲಿಲ್ಲ. ಆಗ ಸಿನಿಮಾದಲ್ಲಿ ಮುಂದುವರಿಯಬೇಕೋ, ಬೇಡವೋ ಅನ್ನುವ ತಳಮಳ ನನ್ನನ್ನು ತುಂಬಾ ಕಾಡಿತ್ತು. ಆಗಿನ ಸಮಯದಲ್ಲಿ ಸಿನಿಮಾದಲ್ಲಿದ್ದ ಎಲ್ಲರಿಗೂ, ಸಿನಿಮಾ ಇಲ್ದಿದ್ರೆ ಮುಂದೇನು ಎನ್ನುವ   ನೋವು ಕಾಡುತ್ತಿತ್ತು. ನನಗೂ ತರಹ ಅನಿಸಿದ್ದುಂಟು. ಇದಕ್ಕೆ ಸಾಂತ್ವನವಾಗಿ ನನಗೆ ದೂರದರ್ಶನದ ನಿರೂಪಣೆ ಕೆಲಸ ಸಿಕ್ತು. ನನ್ನ ಮೊದಲ ನಿರೂಪಣೆ ಮಾಡಿದ ಮುನ್ನೋಟ ಟೀವಿಯಲ್ಲೇ ಬರಲೇ ಇಲ್ಲ. ನಂತರ ಮಾಡಿದ ಮುನ್ನೋಟ, ಸುತ್ತಮುತ್ತ ಟೀವಿಯಲ್ಲಿ ಬಂದಿತು. ಬೆಳಗಿನ `ಸುತ್ತಮುತ್ತ' ಕಾರ್ಯಕ್ರಮ ಮುಗಿಸಿಕೊಂಡು ಸಾಯಂಕಾಲ ಚೌಡಯ್ಯ ಮೆಮೋರಿಯಲ್ ಹಾಲ್ಗೆ ಒಂದು ಕಾರ್ಯಕ್ರಮಕ್ಕೆ ಹೋದಾಗ ಇಡೀ ಹಾಲ್ನಲ್ಲಿದ್ದ ಜನರೆಲ್ಲರೂ ಒಮ್ಮೆ ನನ್ನ ಹಿಂದಿರುಗಿ ನೋಡಿದ್ರು. ಯಾವ ಜನಪ್ರಿಯ ನಟಿಗೂ ಕಡಿಮೆ ಇಲ್ಲದಂತಹ ಗರಿಮೆ ನನಗೆ ಸಿಕ್ಕಿತ್ತು. ಅಲ್ಲಿದ್ದ ಅಷ್ಟು ಜನರು `ಸುತ್ತಮುತ್ತ' ಕಾರ್ಯಕ್ರಮ ನೋಡಿದ್ದರು. ಆರಂಭದಲ್ಲಿ ನನ್ನ ನಿರೂಪಣೆಯ ಬಗ್ಗೆ ಸಿಕ್ಕಾಪಟ್ಟೆ ಪರ ಹಾಗೂ ವಿರೋಧದ ಪ್ರತಿಕ್ರಿಯೆಗಳು ಬಂದಿದ್ವು. ನಾನು ಶ್ರೀನಿವಾಸ ಪ್ರಭು ನಡೆಸಿಕೊಡುತ್ತಿದ್ದ `ಹಲೋ ವೀಕ್ಷಕರೇ' ಕಾರ್ಯಕ್ರಮ ತುಂಬಾ ಜನಪ್ರಿಯವಾಗಿತ್ತು. ಕಾರ್ಯಕ್ರಮಕ್ಕೆ ಸಾವಿರಾರು ಲೇಟರ್ಗಳು ಬರ್ತಾ ಇದ್ವು. ದೂರದರ್ಶನದಲ್ಲಿ ರೆಗ್ಯುಲರ್ ಅನೌನ್ಸರ್ ಆದ ಮೇಲೆ ಸೀರಿಯಲ್ಗಳ ಅಭಿನಯಕ್ಕೆ ಸ್ವಲ್ಪ ವಿರಾಮ ಕೊಡಬೇಕಾಯಿತು. ನಿರೂಪಕಿಯರು ಸೀರಿಯಲ್ನಲ್ಲಿ ಆಕ್ಟ್ ಮಾಡಬಾರದು ಅನ್ನುವ ಸಣ್ಣ ಕಾನೂನು ತಂದರು. ದೂರದರ್ಶನ ಮುಗಿದ ಮೇಲೆ, ಸ್ಯಾಟಲೈಟ್ ಯುಗ ಪ್ರಾರಂಭವಾದ ಮೇಲೆ ಟೀವಿಯಲ್ಲಿ ನಾನು ಮಾಡಿದ್ದ `ಯುವ ಚಾವಡಿ, ಒಂದು ಸಣ್ಣ ಪ್ರಾಬ್ಲೆಂ' ನನಗೆ ತುಂಬಾ ಇಷ್ಟವಾಗಿದ್ದ ಕಾರ್ಯಕ್ರಮವಾಗಿತ್ತು. ತುಂಬಾ ಮನಮುಟ್ಟಿದ ಕಾರ್ಯಕ್ರಮ ಅಂದರೂ ತಪ್ಪೇನಿಲ್ಲ.

ಇಂದಿನವರೆಗಿನ ನಿರೂಪಣೆ
ನಿರೂಪಕಿಯಾಗಿ ಇದುವರೆಗೂ ಸಾವಿರಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೇನೆ. ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ ಆಹ್ವಾನ ಪತ್ರಿಕೆಗಳನ್ನು ಎಲ್ಲವನ್ನು ಇಟ್ಟುಕೊಂಡಿದ್ದೇನೆ. ಅವುಗಳ ಸಂಖ್ಯೆಯೇ 4500 ದಾಟಿದೆ. ಇದರ  ಹೊರತಾಗಿ ಸುಮಾರು 500ಕ್ಕೂ ಹೆಚ್ಚು ಕಾರ್ಯಕ್ರಮಗಳ ಇನ್ವಿಟೇಷನ್ ಕಳೆದು ಹೋಗಿವೆ. ಸುಮಾರು 5000ಕ್ಕೂ ಹೆಚ್ಚಿನ  ಕಾರ್ಯಕ್ರಮಗಳ ನಿರೂಪಣೆಯನ್ನು ಕನ್ನಡ ಮತ್ತು ಇಂಗ್ಲಿಷಿನಲ್ಲಿ ಮಾಡಿರಬಹುದು. ಆರಂಭದಲ್ಲಿ ನನ್ನ ನಿರೂಪಣೆಗೆ ಸಚಿವರಾಗಿದ್ದ ಜೀವರಾಜ್ ಆಳ್ವಾ ಅವರು ತುಂಬಾ ಸಪೋರ್ಟ್  ಮಾಡಿದ್ರು.

ಐತಾಳರು ಹೇಳಿದ ಮುತ್ತಿನಂತ ಮಾತು!
ಒಮ್ಮೆ ಕನ್ನಡದ ಜನಪ್ರಿಯ ಛಾಯಾಗ್ರಾಹಕ ದಿವಂಗತ ರಾಮಚಂದ್ರ ಐತಾಳರು ನನಗೆ ಒಂದು ಮಾತನ್ನು ಹೇಳಿದ್ರು, ಎಲ್ಲರೂ ಅಂದುಕೊಳ್ಳುವ ಹಾಗೆ ಅಪರ್ಣ ಅಂದ್ರೆ ಒಳ್ಳೆಯ ನಿರೂಪಕಿ, ಶುದ್ಧ ಕನ್ನಡ ಅಂತ. ಹಾಗಾಗಿ ನಿಮ್ಮನ್ನು ಇಷ್ಟಕ್ಕೆ ಸೀಮಿತಗೊಳಿಸಿಬಿಟ್ಟಿದ್ದಾರೆ. ಆದರೆ ನಿರೂಪಣಾ ವಲಯದಲ್ಲಿ ನೀವು ಏನೇನೆಲ್ಲಾ ಸಾಧನೆ ಮಾಡಿದ್ದೀರಿ ಅನ್ನೋದು ನಿಜಕ್ಕೂ ದಾಖಲಾಗಬೇಕು, ಒಂದು ಸುಪ್ರಯತ್ನವಾಗಬೇಕು. ಇದನ್ನು ಸುವಿಸ್ತಾರವಾಗಿ ಎಲ್ಲಾದರೂ ನೀವು ಹೇಳಬೇಕು. ನಿಮ್ಮ ನಿರೂಪಣೆ ಕನ್ನಡದಲ್ಲಿ ಒಂದು ಹೆಗ್ಗಳಿಕೆ ಅನ್ನೋದಾದ್ರೆ ಅದು ಯಾಕೆ ಹೆಗ್ಗಳಿಕೆ ಆಗಬೇಕು ಅನ್ನುವುದು ನಿಜಕ್ಕೂ ಎಲ್ಲರಿಗೂ ಮನದಟ್ಟಾಗಬೇಕು. ಸುಮ್ಮನೇ ಆಗುವಂತದ್ದು ಅಥವಾ ಹೇಳುವಂತಹುದನ್ನು ಒಂದು ಕಲಾತ್ಮಕ ಚೌಕಟ್ಟಿಗೆ ಸೇರಿಸಿದ್ದನ್ನು ಖಂಡಿತ ಒಂದು ಮಾಧ್ಯಮದಲ್ಲಿ ಮೂಡಿಬಂದರೆ ಅಂತ ತುಂಬಾ ಚೆನ್ನ ಎಂದು ರಾಮಚಂದ್ರರು ನನಗೆ ಹೇಳಿದರು. ಅವರ ಮಾತನ್ನು ನಾನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ನನ್ನ ನಿಧರ್ಾರದ ಹಿಂದೆಯೂ ಒಂದು ನೋವಿನ ಸಂಗತಿ ಇದೆ. ಇಂದು ಬೇರೆ ಬೇರೆ ಮಾಧ್ಯಮಗಳಲ್ಲಿ ನಿರೂಪಕರು ಮಾತನಾಡುತ್ತಿರುವ ಕನ್ನಡ, ಮಾತಿನ ಶೈಲಿ, ಅವರ ನಿರೂಪಣೆಯಲ್ಲಿ ಕನ್ನಡವನ್ನು ಹುಡುಕುವ ಪರಿಸ್ಥಿತಿ ಎಲ್ಲವನ್ನು ನೋಡಿದಾಗ, ಛೇ... ದೂರದರ್ಶನದಲ್ಲಿ ನಮಗೆ ಸಿಕ್ಕಂತ ಟ್ರೇನಿಂಗ್ ಇವರಿಗೆ ಸಿಕ್ಕಿದ್ದರೆ ಅವರು ಹೀಗೆ ಕನ್ನಡ ಮಾತನಾಡುತ್ತಿರಲಿಲ್ಲ. ನಾವು ನಿರೂಪಣೆಯಲ್ಲಿ ಏನೇನೆಲ್ಲಾ ಸವಾಲುಗಳನ್ನು ಎದುರಿಸಿದ್ವಿ. ಎಂತೆಂತಹ ಸಮಾರಂಭಗಳಲ್ಲಿ ಘಟಾನುಘಟಿಗಳ ಕಾರ್ಯಕ್ರಮಗಳನ್ನು ಧೈರ್ಯವಾಗಿ ಮಾಡಿದ್ವಿ, ನಿರೂಪಣೆಯಲ್ಲಿ ಎಷ್ಟೊಂದು ಏಟುಗಳು ನಮಗೆ ಬಿದ್ದಿದ್ದವು. ಇದನ್ನೆಲ್ಲ ನೋಡಿದಾಗ ನಮಗೆ ಎದ್ದು ಕಾಣುವುದೇ ನಮಗೆ ಸಿಕ್ಕಂತಹ ತರಬೇತಿ, ಎದುರಿಸಿದ ಸವಾಲುಗಳು, ಸಾಹಿತ್ಯದ ಪರಿಚಯ, ಸಾಹಿತಿಗಳ ಒಡನಾಟ ಎಲ್ಲವೂ ನಮಗೆ ಒಂದು ರೀತಿಯಲ್ಲಿ ನಮ್ಮ ನಿರೂಪಣೆಯ ಕ್ಷೇತ್ರದಲ್ಲಿ ಒಂದು ತಕ್ಕಮಟ್ಟಿನ ಸಾಧನೆಯನ್ನು ಮಾಡಲಿಕ್ಕೆ ಸಾಧ್ಯವಾಯಿತು. ನನ್ನ 20ಕ್ಕೂ ಹೆಚ್ಚು ವರ್ಷದ ನಿರೂಪಣಾ ಅನುಭವವನ್ನು ಒಂದೆಡೆ ದಾಖಲಾಗಿಸಬೇಕು. ನಮ್ಮ ಸವಾಲುಗಳು, ಅವುಗಳನ್ನು ಎದುರಿಸಿದ್ದು, ಕಲಿತಿದ್ದು ಎಲ್ಲವನ್ನು ಒಂದು ಲೇಖನದ ಮಾಲೆಯಲ್ಲಿ ಬರೆಯುವ ಪ್ರಯತ್ನ ಮಾಡಬೇಕೆಂದು ಅಂದುಕೊಂಡಿದ್ದೇನೆ. ಇಲ್ಲಿ ಯಾರನ್ನು ಮನನೋಯಿಸುವುದಿಲ್ಲ. ನನ್ನ ಪ್ರಯತ್ನ ಹೊಸಬರಿಗೆ ಒಂದು ಮಾರ್ಗದರ್ಶಿಯಾದರೆ ತುಂಬಾ ಒಳ್ಳೆಯದು ಅನ್ನುವುದು ನನ್ನ ಅರಿಕೆ.

ಇದು ನನ್ನ ಕನ್ನಡದ ನೆಲ, ಕನ್ನಡದಲ್ಲಿಯೇ ಉಸಿರಾಡುವೆ!
ನಾನು ಅಪ್ಪಟ ಕನ್ನಡದ ಹೆಣ್ಣುಮಗಳು. ಇಂದಿಗೂ ನನ್ನ ನಿರೂಪಣೆಯ ಕಾರ್ಯಕ್ರಮಗಳಲ್ಲಿ ನಾನು ಕನ್ನಡದ ಹೆಣ್ಣುಮಗಳಾಗಿಯೇ ಕಾಣಿಸಿಕೊಳ್ಳಲಿಕ್ಕೆ ಇಷ್ಟಪಡುತ್ತೇನೆ. ಅದು ಕನ್ನಡ ಸಂಸ್ಕೃತಿಯ ಇಲಾಖೆಯ ಕಾರ್ಯಕ್ರಮವಾಗಿರಬಹುದು, ಇಲ್ಲವೇ ಬಹುರಾಷ್ಟ್ರೀಯ ಕಂಪನಿಗಳ ಇಂಗ್ಲಿಷ್ ಕಾರ್ಯಕ್ರಮವಾಗಿರಬಹುದು. ನಾನು ಇಂಗ್ಲಿಷ್ನಲ್ಲಿ ನಿರೂಪಣೆ ಮಾಡಿದರೂ ಅಲ್ಲಿ ನನ್ನ ಕನ್ನಡತನವನ್ನು ಉಳಿಸಿಕೊಳ್ಳಲಿಕ್ಕೆ ಸದಾ ಪ್ರಯತ್ನ ಪಡುತ್ತೇನೆ. ನನಗೆ ನನ್ನ ಕನ್ನಡದಲ್ಲಿ ಇಂಗ್ಲಿಷ್ ಬೆರೆಸಿ ಮಾತನಾಡಲು ಬರುವುದಿಲ್ಲ. ಕಮರ್ಷಿಯಲ್ ಸ್ಟ್ರೀಟ್ ಇಲ್ಲವೇ ಮಾಲ್ಗೆ ಶಾಪಿಂಗ್ಗೆ ನಾನು ಹೋದರೂ, ಕನ್ನಡದಲ್ಲಿಯೇ ಮಾತನಾಡೋದು, ವ್ಯವಹರಿಸೋದು. ಅಂಗಡಿಯವನಿಗೆ ಕನ್ನಡ ಗೊತ್ತಿಲ್ಲದಿದ್ದರೆ ಆತನಿಗೆ ಅವನ ಭಾಷೆಯಲ್ಲಿ ನಾನು ಮಾತನಾಡುವುದಿಲ್ಲ. ನನ್ನ ಕನ್ನಡ ನೆಲದಲ್ಲಿ ಆತ ವ್ಯಾಪಾರ ಮಾಡಲಿಕ್ಕೆ ಬಂದಿರೋದು. ಆತ ಮೊದಲು ನಮ್ಮ ನೆಲದ ಭಾಷೆಯನ್ನು ಮೊದಲು ಕಲಿಯಬೇಕು. ನಾವು ಆತನ ಭಾಷೆಯನ್ನಲ್ಲ. ಕೆಲವರು ಅಪರ್ಣ ಅವರು ನೀವೇಕೆ ಹೀಗೆ ಅಂತ ಕೇಳುತ್ತಾರೆ. ಹೌದು ನಾನು ಕನ್ನಡದ ಅಳಿವು-ಉಳಿವಿನ ವಿಷಯದಲ್ಲಿ ಹೀಗೆಯೇ ಅಂತ ಉತ್ತರ ಕೊಡುತ್ತೇನೆ.

ನಾನು ಸದಾ ಅಪರ್ಣ ಆಗಿಯೇ ಇರುತ್ತೇನೆ
ಇಂದಿಗೂ ನನಗೆ ಮೈಸೂರು ಜರತಾರಿ ಸೀರೆಯೇ ಇಷ್ಟ. ಅನೇಕರು ನನ್ನ ಡ್ರೆಸ್ಕೋಡ್ ಬಗ್ಗೆ ಕಾಮೆಂಟ್ ಮಾಡಿದ್ದುಂಟು. ನೀವ್ಯಾಕೆ ಜನಪ್ರಿಯ ಉತ್ತರಭಾರತ ಶೈಲಿಯ ಡ್ರೆಸ್ ತೊಟ್ಟು ನಮ್ಮ ಕಾರ್ಯಕ್ರಮ ನಡೆಸಿಕೊಡಬಾರದೇಕೆ? ಅಂತ ಅನೇಕ  ಇವೆಂಟ್ ಮ್ಯಾನೇಜರ್ಗಳು ಕೇಳಿದ್ದುಂಟು. ಕೇಳೋದು ಅವರ ಕರ್ತವ್ಯವಾದರೂ, ಅದು ಸರಿ-ತಪ್ಪು ಅನ್ನುವುದನ್ನು ಪರಾಮಾರ್ಶಿಸಿ  ಉತ್ತರ ನೀಡೋದು ಕೂಡ ನಮ್ಮ ದೊಡ್ಡ ಕರ್ತವ್ಯವಾಗಿರುತ್ತದೆ. ಅವರು ಕೇಳಿದ ಪ್ರಶ್ನೆಗೆ ನನ್ನ ಖಾರ ಉತ್ತರ ಕಂಡು ಅವರು ಸೋತಿದ್ದುಂಟು. ಹೀಗೆ ಅವರು ಸೋತರೂ ನನ್ನನ್ನು ಕಾರ್ಯಕ್ರಮದ ನಿರೂಪಣೆಯಿಂದ ತೆಗೆದು ಹಾಕಲಾಗಲಿಲ್ಲ. ಏಕೆಂದರೆ ನಿರೂಪಣೆಯಲ್ಲಿ ಅಪರ್ಣ ಅನ್ನುವ ಶಕ್ತಿ ಎಂತಹುದು ಅವರಿಗೆ ತಿಳಿದ ಸಂಗತಿಯಾಗಿತ್ತು. ಇಷ್ಟು ವರ್ಷದ ನಿರೂಪಣೆ ಹಾಗೂ ಕಿರುತೆರೆಯ ಅನುಭವದಲ್ಲಿ ಬಹಳಷ್ಟು ಜನರು ಕನ್ನಡನಾಡಿನಲ್ಲಿದ್ದುಕೊಂಡೇ ಕನ್ನಡವನ್ನು ಸಾಯಿಸುವವರನ್ನು ನೋಡಿದ್ದೇನೆ. ಕನ್ನಡ ಗೊತ್ತಿದ್ದು ಗೊತ್ತಿಲ್ಲದವರಂತೆ ವರ್ತಿಸುವ ವ್ಯಕ್ತಿಗಳ ಜೊತೆಯೂ ನಾನು ಮಾತನಾಡಿದ್ದೇನೆ. ಕನ್ನಡ ಗೊತ್ತಿಲ್ಲದೆ, ನೆಲದ ಗಂಧಗಾಳಿಯಿಲ್ಲದ ವ್ಯಕ್ತಿಗಳು ಕನ್ನಡ ವಾಹಿನಿಗಳಲ್ಲಿ ಕಾರ್ಯಕ್ರಮಗಳನ್ನು ಮಾಡಿದವರನ್ನು ನೋಡಿದ್ದೇನೆ. ಇವರೆಲ್ಲರ ಜೊತೆ ಕೆಲಸ ಮಾಡಿದ್ದ ಅನುಭವ ಒಂದು ರೀತಿಯಲ್ಲಿ ಹೆದರಿಕೆಯನ್ನುಂಟು ಮಾಡುತ್ತಿದೆ.
ನಿರೂಪಣೆ ಅಂದುಕೊಂಡಷ್ಟು ಸುಲಭವಲ್ಲ
ನಿರೂಪಣೆ ಅಷ್ಟು ಗ್ರೇಟಾ? ಏನ್ ಕನ್ನಡವನ್ನು ಇಂಗ್ಲಿಷ್ ಬಳಸದೆ ಮಾತನಾಡಿದರೆ ಅದೇ ದೊಡ್ಡ ಆ್ಯಂಕರಿಂಗಾ? ಅಂತ ಮೂಗೆಳೆಯುವವರು ತುಂಬಾ ಜನ ಇದ್ದಾರೆ. ಮಾತನ್ನು ನನ್ನನ್ನು ನೋಡಿ ಕೂಡ ಹೇಳಿದ್ದುಂಟು. ಇಂದು ಯಾರು ಬೇಕಾದರೆ ಹೀರೋ ಆಗಬಹುದು, ಯಾರು ಬೇಕಾದರೂ ನಿರ್ದೇಶಕ, ನಾಯಕಿ, ನಿರೂಪಕ, ನಿರ್ಮಾಪಕನಾಗಬಹುದು. ಅಂತಹ ಪರಿಸ್ಥಿತಿ ಈಗಾಗಲೇ ಉದ್ಯಮದಲ್ಲಿ ನಿರ್ಮಾಣವಾಗಿದೆ. ವ್ಯವಸ್ಥೆಯನ್ನು ಖಂಡಿತ ನಾನು ವಿರೋಧಿಸುವುದಿಲ್ಲ. ಇದರಲ್ಲಿ ಒಂದು ಸೂಕ್ಷ್ಮವನ್ನು ನಾನು ತಿಳಿಸುವುದಾದರೆ, ಪ್ರತಿಯೊಂದು ಜವಾಬ್ದಾರಿಗೂ ಅದರದ್ದೇ ಆದ  ಸತ್ವ  ಇದೆ. ಅದಕ್ಕೊಂದು ಮೌಲ್ಯವಿದೆ, ಚೌಕಟ್ಟಿದೆ. ಒಂದು ಸೂಕ್ಷ್ಮ ನಮ್ಮ ಕೈತಪ್ಪಿದ್ದಾಗ ಆಗುವ ಅವಘಡವನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟ ಸಾಧ್ಯ. ಯಾವಾಗ ನಾವು ಮೌಲ್ಯ, ಚೌಕಟ್ಟನ್ನು ಚೆನ್ನಾಗಿ ದುಡಿಸಿಕೊಂಡಾಗ ಮಾತ್ರ ಅದು ಸತ್ವಯುತವಾಗಿ ನಿಲ್ಲುತ್ತೆ, ಒಂದೊಳ್ಳೆಯ ಪ್ರಾಡಕ್ಟ್ ಆಗಿ ನಿಲ್ಲಲ್ಲಿಕ್ಕೆ ಸಾಧ್ಯವಾಗುತ್ತೆ.

ಕನ್ನಡದ ಮೇಲಾಗುತ್ತಿರುವ ಸಾಂಸ್ಕೃತಿಕ ದಾಳಿ
ಹೊರಗಡೆಯವರು ನಮ್ಮನ್ನು ಆಳುತ್ತಿದ್ದಾರೆ. ಕನ್ನಡದ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ. ಇವರಿಗೆ ಕನ್ನಡ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡತನ ಬೇಕಾಗಿಲ್ಲ. ತಮ್ಮ ಸಂಸ್ಕೃತಿಯನ್ನು ಇಲ್ಲಿ ಹೇರಲಿಕ್ಕೆ ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಒಂದು ಉದಾಹರಣೆಯನ್ನು ನಾನು ನೀಡಬಲ್ಲೆ. ಹೆಸರೇಳದ ಒಂದು ಕನ್ನಡದ ವಾಹಿನಿಯಲ್ಲಿ ನಾನು ಗಣೇಶ್ ಚತುರ್ಥಿಯ ಬಗ್ಗೆ ವಿಶೇಷ ಕಾರ್ಯಕ್ರಮವನ್ನು ಮಾಡಬೇಕಾಗಿತ್ತು. ಬಾಂಬೆಯ ಒಬ್ಬ ವ್ಯಕ್ತಿ ಕಾರ್ಯಕ್ರಮದ ಉನ್ನತ ಹುದ್ದೆಯಲ್ಲಿ ಕುಳಿತಿದ್ದ. ಆತ ಅಷ್ಟಸಿದ್ಧಿ ವಿನಾಯಕ ಕಾನ್ಸೆಪ್ಟನ್ನು ಕನ್ನಡದಲ್ಲಿ ಕಾರ್ಯಕ್ರಮದ ಮೂಲಕ ಮಾಡಬೇಕೆಂದು ಆತ ನಿರ್ಧರಿಸಿದ್ದ. ನನಗೆ ಆತನ ಕಾನ್ಸೆಪ್ಟ್ ಕೇಳಿ ತುಂಬಾ ಕಸಿವಿಸಿ ಆಯ್ತು. ಅಷ್ಟಸಿದ್ಧಿ ವಿನಾಯಕ ಕಾನ್ಸೆಪ್ಟ್ ಅನ್ನೋದು ಮಹಾರಾಷ್ಟ್ರದಲ್ಲಿ ಮಾಡುವಂತಹ ಆಚರಣೆ. ಕರ್ನಾಟಕದಲ್ಲಿ ಗಣಪತಿಯನ್ನು ಪೂಜೆ ಮಾಡುವ ಪದ್ಧತಿಯೇ ಬೇರೆ, ಮಹಾರಾಷ್ಟ್ರದ ಪದ್ಧತಿಯೇ ಬೇರೆ. ಅದು ನಮ್ಮ ಕನ್ನಡದಲ್ಲಿ ಮಾಡುವಂತಹ ಕಾರ್ಯಕ್ರಮವಲ್ಲ ಅಂತ ಆತನಿಗೆ ಮನವರಿಕೆ ಮಾಡಿ, ಕೊನೆಗೆ ಕರ್ನಾಟಕದ ಎಂಟು ಗಣಪತಿ ಕ್ಷೇತ್ರಗಳನ್ನಿಟ್ಟುಕೊಂಡು ಕಾರ್ಯಕ್ರಮ ಮಾಡೋಣ ಅಂತ ಆತನಿಗೆ ಹೇಳಿ ಕಾರ್ಯಕ್ರಮ ಮಾಡಲಾಯಿತು. ಅಕಸ್ಮಾತ್ ನನ್ನ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದು, ಅವರಿಗೆ ವಿಷಯದ ಅರಿವು ಇಲ್ಲದೆ ಇದ್ದಿದ್ದರೆ ಮಹಾರಾಷ್ಟ್ರದ ಆಚರಣೆಯನ್ನ ಕರ್ನಾಟಕದ ಆಚರಣೆ ಅಂತ ಮಾಡಿಬಿಡುತ್ತಿದ್ದರು. ರೀತಿಯಾಗಿ ಅನೇಕ ರೀತಿಯಲ್ಲಿ ನಮ್ಮ ಮೇಲೆ ವಾಹಿನಿಗಳ ಮುಖಾಂತರ ಬೇರೆ ಭಾಷೆಯವರ ಸಾಂಸ್ಕೃತಿಕ ದಾಳಿ ಆಗುತ್ತಿದೆ. ವಿಜಯದಶಮಿ ವಿಶೇಷ ದಿನದಂದು ನಿಮ್ಮ ನೆಚ್ಚಿನ ವಾಹಿನಿಯಲ್ಲಿ ನಟಿ ರಮ್ಯಾ ಜೊತೆ ಮಾತುಕತೆ ಕಾರ್ಯಕ್ರಮವನ್ನು ಮಾಡುತ್ತಾರೆ. ಹಬ್ಬದ ದಿನ ರಮ್ಯಾ ಅರ್ಧ ಇಂಗ್ಲಿಷ್, ಇನ್ನರ್ಧ ಕನ್ನಡದಲ್ಲಿ ಮಾತನಾಡುವುದನ್ನು ಇಡೀ ಕರ್ನಾಟಕ ನೋಡುತ್ತಿರುತ್ತದೆ. ಹೀಗೆ ಟೀವಿ ಚಾನೆಲ್ಗಳ ಮೂಲಕ ಆಗುತ್ತಿರುವ ಅಪಾಯವನ್ನು ಆದಷ್ಟು ಕಡಿಮೆ ಮಾಡಬೇಕು. ಏಕೆಂದರೆ ಇಂದು ಟೀವಿ ತುಂಬಾ ಪ್ರಬಲ ಮಾಧ್ಯಮವಾಗಿದೆ. ಇಂದಿನ ತಲೆಮಾರಿನವರು ಟೀವಿಯನ್ನು ನೋಡಿ ಆಚರಿಸುವವರು ಬಹಳ. ಈಗಾಗಲೇ ಹೇಳಿದಾಗೆ ಅಷ್ಟವಿನಾಯಕ ಆಚರಣೆಯನ್ನು ಕನ್ನಡದಲ್ಲಿ ಇದ್ದರೂ ಇರಬಹುದು ಅಂತ ಅಂದುಕೊಂಡು ಒಪ್ಪಲುಬಹುದು. ಏಕೆಂದರೆ ಮುಖ್ಯವಾಗಿ ಅವರಿಗೆ ಹಿರಿಯರ ಮಾರ್ಗದರ್ಶನ, ನಮ್ಮ ಸಂಸ್ಕೃತಿಯ ಅರಿವು ಇರುವುದು ತುಂಬಾ ಕಡಿಮೆ. ಟೀವಿ ಮಾಡಿದ್ದನ್ನು, ನಿರೂಪಕಿ ಹೇಳಿದ್ದನ್ನು ನಂಬಲೂಬಹುದು.

ನನಗಿಂತ ನನ್ನತನ ದೊಡ್ಡದು
ನಾನು ಯಾವುದೇ ಕಾರ್ಯಕ್ರಮಕ್ಕೆ, ಯಾವುದೇ ಸಮಾರಂಭಕ್ಕೆ ಕೇವಲ ಅಪರ್ಣ ಆಗಿ ಹೋಗುವುದಿಲ್ಲ. ಅಲ್ಲಿ ಇಡೀ ಕಾರ್ಯಕ್ರಮದ ಮುಖವಾಣಿಯಾಗಿ ನಾನು ನಿಂತಿರುತ್ತೇನೆ. ಹಾಗಾಗಿ ನನ್ನ ಭಾಷೆ, ವೇಷಭೂಷಣ ಎಲ್ಲವೂ ಬಂದವರಿಗೆ ಮಾದರಿಯಾಗುವ, ಹತ್ತು ಜನರಿಗೆ  ಪೂರಕವಾಗಿ ಇರಲಿಕ್ಕೆ ಸದಾ ಪ್ರಯತ್ನಿಸುತ್ತೇನೆ. ಬಾಯಲ್ಲಿ ಶುದ್ಧ ಕನ್ನಡ, ವೇಷಭೂಷಣದಲ್ಲಿ ಮಾತ್ರ ನಮ್ಮತನವನ್ನು ಮಾತ್ರ ಉಳಿಸಿಕೊಳ್ಳದೆ, ಆಂತರಂಗಿಕವಾಗಿಯೂ ಕೂಡ ನಾನು ಹಾಗೆ ಇರಲಿಕ್ಕೆ ಪ್ರಯತ್ನಿಸುತ್ತೇನೆ.

ಕೊನೆ ಮಾತು
 ಸಾಮಾನ್ಯವಾಗಿ ಅಪರ್ಣ ಅಂದರೆ ಎಲ್ಲರೂ ಅಂದುಕೊಳ್ಳೋದು ಕನ್ನಡದ ಪ್ರತಿಭಾವಂತ ನಿರೂಪಕಿ ಅಂತ, ಅಷ್ಟಕ್ಕೆ ಅವರನ್ನು ಸೀಮಿತ ಮಾಡಲಾಗಿದೆ. ಆದರೆ ಅಪರ್ಣ ಕೇವಲ ನಿರೂಪಕಿ ಮಾತ್ರವಲ್ಲ ! ಅವರನ್ನು ಸಾಮಾಜಿಕ ಚಿಂತಕಿ, ಕನ್ನಡ ಪರ ಕಾಳಜಿ ಇರುವವರು, ಅದ್ಭುತ ಕಲಾವಿದೆ, ಒಳ್ಳೆಯ ಬರಹಗಾರ್ತಿ ಅಂತ ನಾವು ಅವರನ್ನು ಗುರುತಿಸಿದರೂ, ಅವರ ಮಾತುಗಳಲ್ಲಿ, ನಡೆನುಡಿಗಳಲ್ಲಿ ಇವೆಲ್ಲವೂ ವ್ಯಕ್ತವಾಗುತ್ತದೆ. ಆದರೆ ಅಪರ್ಣರವರಿಗೆ ತಮ್ಮನ್ನು ರೀತಿ ಗುರುತಿಸಿಕೊಳ್ಳಲು ಸ್ವಲ್ಪವೂ ಇಷ್ಟವಿಲ್ಲ.