ಮಗು ಮಲಗಿದೆ, ಎಬ್ಬಿಸಬೇಡಿ
ಗಲಾಟೆ ಮಾಡಬೇಡಿ...
ಕೂಸು ನಿದ್ದೆಗೆ ಜಾರಿದೆ, ಅಮ್ಮನ ಹಾಲುಂಡು.
ಸದ್ಯ ಕನಸಿನ ಮನೆಗೆ ಹೋಗಿರಬಹುದು...
ಮಗು ಏನು ಕನಸು ಕಾಣುತ್ತಿರಬಹುದು?
ಕಂಡವರಾರು? ನೋಡಿದರಾರು?
ಮಗುವಿನ ಕನಸಿನಲ್ಲಿ ದೇವರು ಬಂದಿರಬಹುದು
ದೇವರ ಜೊತೆ ಮಗು ಮಾತನಾಡುತ್ತಿರಬಹುದು...!
ಏನು ಮಾತನಾಡುತ್ತಿರಬಹುದು?
ಮಾತನಾಡಿದ್ದು ನಮಗೆ ಅರ್ಥವಾದೀತೇ?
ಅದು ದೇವರ ಭಾಷೆ... ಮಕ್ಕಳು ದೇವರ ಸಮಾನರಲ್ಲವೇ?
ಮಗು ಮಲಗಿದೆ, ಎಬ್ಬಿಸಬೇಡಿ
ಗಲಾಟೆ ಮಾಡಬೇಡಿ...
ಮಗುವಿಗೆ ಆಟ ಅಂದರೆ ಬಲು ಇಷ್ಟ.
ಅಮ್ಮನ ಮಡಿಲಲ್ಲಿ ಒದ್ದಾಡಿ, ಅಮೃತದ ಕುಡಿಯನ್ನು ಹೀರಿ...
ಅವಳ ಕೂದಲು, ತಾಳಿಯನೆಳೆದು, ಹೊಟ್ಟೆಗೆ ರಪರಪನೇ ಒದ್ದು,
ಅಮ್ಮನ ಸೀರೆ ಎಳೆವ ಮಗು
ಇನ್ನು ದೇವರನ್ನು ಸುಮ್ಮನೇ ಬಿಟ್ಟಿತೇ?
ಅಲ್ಲಿಯೂ ದೇವರಿಗೆ ಅದೇ ಕಾಟ ಕೊಟ್ಟಿರಬಹುದು...
ಮಗುವಿನ ಕಾಟ ತಾಳಲಾರದೇ, ದೇವರು ಮಗುವನ್ನು
ತೊಟ್ಟಿಲಲ್ಲಿ ತೂಗಿರಬೇಕು, ಅದು ಹಾಗೆಯೇ
ಅವನ ಮಡಿಲಲ್ಲಿ ಮಲಗಿರಬೇಕು, ವಿರಮಿಸಿರಬೇಕು.
ಮಗು ಮಲಗಿದೆ, ಎಬ್ಬಿಸಬೇಡಿ
ಗಲಾಟೆ ಮಾಡಬೇಡಿ...
ಮಗು ಎದ್ದಿದೆ...ಅಳುತಿದೆ.
ಮತ್ತೆ ಅಮ್ಮನ ಮಡಿಲ ಸೇರಿದೆ.
ಕನಸಿನ ದೇವರನು ನೋಡಿದೆ.
ಈಗ ಇನ್ನೊಂದು ದೇವರ ಜೊತೆ ಮಾತನಾಡುತಿಹುದು
ಆಟವಾಡುತಿದೆ.
ಮಗು ಎದ್ದಿದೆ, ಗಲಾಟೆ ಮಾಡಬೇಡಿ
Photo Feautre : Panchami (my sister daughter)