`ಶ್ರೀಧರ್, ಸಿದ್ದವನ ಗುರುಕುಲದ 75 ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ನೀನು ಬರಬೇಕು' ಅಂತ ಗುರುಕುಲದ ವಾರ್ಡನ್ ಆಗಿರುವ ಪ್ರೀತಿಯ ಮಹಾಬಲೇಶ್ವರ ಭಟ್ ಅವರು ಫೋನ್ ಮಾಡಿ ಖುದ್ದಾಗಿ ತಿಳಿಸಿದಾಗ, `ಇದಕ್ಕಿಂತ ದೊಡ್ಡ ಸೌಭಾಗ್ಯ ಇನ್ಯಾವುದಿದೆ, ನನಗೆ' ಅಂತ ಅಂತರಾಳದಿಂದ ನನ್ನ ಮನಸ್ಸು ಅವರ ಆಹ್ವಾನದಿಂದ ತುಂಬಿಹೋಗಿತ್ತು. ಬರದೇ ಇರಲಿಕ್ಕೆ, ಹೋಗದೇ ಇರಲಿಕ್ಕೆ ವೈಯಕ್ತಿಕ ಕೆಲಸಗಳ ಅಡ್ಡಿ ಇದ್ದರೂ, ಅದನ್ನೂ ಮೀರಿ, ನನ್ನ ಗುರುಕುಲದ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಲೇ ಬೇಕು ಅನ್ನುವ ಧೃಡಸಂಕಲ್ಪ ಆ ಕ್ಷಣವೇ ಗಟ್ಟಿಯಾಗಿತ್ತು. ಗುರುಕುಲ ಪ್ರಾರಂಭವಾಗಿ 75 ವರ್ಷಗಳು ಕಳೆದಿವೆ. ನನ್ನಂತೆ, ಬಡತನ, ಅವಕಾಶವಂಚಿತ ಗ್ರಾಮೀಣ ಪ್ರದೇಶದ ಸಾವಿರಾರು ವಿಧ್ಯಾರ್ಥಿಗಳಿಗೆ ಅನ್ನ, ವಿದ್ಯೆ, ಅಭಯ, ಆಶ್ರಯವನ್ನು ನೀಡಿದಂತಹ ಮಹಾನ್ ವಿದ್ಯಾಲಯದ ಋಣವನ್ನು ಈ ಜನ್ಮದಲ್ಲಿ ತೀರಿಸುವುದು ಕಷ್ಟವಾದರೂ, ಅದರ ಅಮೃತ ಮಹೋತ್ಸವದ ಸಂತಸದಲ್ಲಿ ನಾನು ಭಾಗಿಯಾದೆ ಅನ್ನುವ ಸಾರ್ಥಕತೆ ನನಗೆ ಬೇಕಾಗಿತ್ತು. ಅದು ಈಡೇರಿದ್ದು ಕೂಡ ನನ್ನ ಸೌಭಾಗ್ಯವೇ ಸರಿ.
ಸಿದ್ಧವನ ಗುರುಕುಲವನ್ನು ನೆನೆಸಿಕೊಂಡಾಗಲೆಲ್ಲಾ ನನ್ನ ಕಣ್ಣಮುಂದೆ ಅನೇಕ ನೆನಪುಗಳು ಬಂದು ಕಾಡುತ್ತವೆ. ಎಸ್ಎಸ್ಎಲ್ಸಿ ನಂತರ ನನ್ನ ಮುಂದಿನ ಬದುಕು ಏನು? ಅನ್ನುವ ದೊಡ್ಡ ಪ್ರಶ್ನೆಗೆ ಉತ್ತರ ಕೊಟ್ಟಿದ್ದೆ ಈ ನಂದನವನ. ಓದಲಿಕ್ಕೆ ಬಡತನ, ಆರ್ಥಿಕ ಸಮಸ್ಯೆ, ಸರಿಯಾದ ಮಾರ್ಗದರ್ಶನವಿಲ್ಲದೇ ಒದ್ದಾಡುತ್ತಿದ್ದ ನನಗೆ ಜೀವನದ ಸರಿಯಾದ ಮಾರ್ಗದರ್ಶನ ತೋರಿಸಿದ್ದೇ ಈ `ಸಿದ್ಧರ' ವನ. ಅಂದಿನ ದಿನಗಳನ್ನು ನೆನಪಿಸಿಕೊಂಡಾಗಲೆಲ್ಲಾ, ನನ್ನ ಇಂದಿನ ಬದುಕು ಹೀಗೆ ಇರುತ್ತಿತ್ತಾ? ಅಕಸ್ಮಾತ್ ಸಿದ್ಧವನ, ಎಸ್ಡಿಎಮ್ ಕಾಲೇಜಿನಲ್ಲಿ ನನಗೆ ಅವಕಾಶ ದೊರೆಯದೇ ಹೋಗಿದ್ದರೇ, ನನ್ನ ಇಂದಿನ ಜೀವನವನ್ನು ಕಲ್ಪನೆ ಕೂಡ ಮಾಡಿಕೊಳ್ಳಲಾಗುವುದಿಲ್ಲ. ಹೌದು, ಬದುಕೆಂದರೆ ನಿಂತ ನೀರಿನಂತಲ್ಲ...! ಅದು ಹರಿಯುತ್ತಲೇ ಇರುತ್ತದೆ. ಹೀಗೆ ಹರಿಯುವ ನದಿಗೂ ಮಾರ್ಗವಿಲ್ಲದಿದ್ದರೆ, ಅದು ಎತ್ತಿಂದತ್ತಲೋ ಲಂಗುಲಗಾಮಿಲ್ಲದೇ ಹರಿಯುತ್ತಿರುತ್ತದೆ. ಹಾಗಾಗಿ ಪ್ರತಿಯೊಬ್ಬರ ಜೀವನಕ್ಕೂ ಒಂದು ಮಾರ್ಗದರ್ಶನ ಬೇಕೇ ಬೇಕು. ಒಮ್ಮೆ ಅಂತಹ ದಾರಿ ಸಿಕ್ಕಿಬಿಟ್ಟರೆ, ಜೀವನ ಸುಂದರವಾಗಿ ಸಾಗುತ್ತಿರುತ್ತದೆ. ಕಳೆದ 75 ವರ್ಷಗಳಲ್ಲಿ ಸಿದ್ಧವನದಲ್ಲಿ ಆಶ್ರಯವನ್ನು ಪಡೆದು ತಮ್ಮ ಬದುಕನ್ನು ರೂಪಿಸಿಕೊಂಡ ಸಾವಿರಾರು ವಿದ್ಯಾಥರ್ಿಗಳು ಪ್ರಪಂಚದ ಮೂಲೆಮೂಲೆಗಳಲ್ಲಿ ವಾಸಿಸುತ್ತಿದ್ದಾರೆ. ಇಂದಿಗೂ ಅವರ ಜೀವನದಲ್ಲಿ ಸಿದ್ಧವನ ಮತ್ತು ಎಸ್ಡಿಎಮ್ ಕಾಲೇಜಿನಲ್ಲಿ ಶಿಕ್ಷಣ ಪಡೆದುಕೊಂಡಿದ್ದು, ಬದುಕಿನ ಪ್ರಮುಖ ಘಟ್ಟವಾಗಿದೆ. ವಿದ್ಯೆ, ಆಶ್ರಯ, ಅಭಯವನ್ನು ನೀಡಿದ ಧರ್ಮಸ್ಥಳ ಸಂಸ್ಥೆ ಮತ್ತು ವೀರೆಂದ್ರ ಹೆಗ್ಗಡೆಯವರ ಕುಟುಂಬದವರ ಬಗ್ಗೆ ಅದಮ್ಯವಾದ ಪ್ರೀತಿ, ಗೌರವವನ್ನು ಇಂದಿಗೂ ಇಟ್ಟುಕೊಂಡಿದ್ದಾರೆ. ಬದುಕಿನಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ತುಂಬುವ ಮತ್ತು ಶಿಕ್ಷಣದಿಂದ ಅವಕಾಶವಂಚಿತರಾದಂತಹ ವಿದ್ಯಾರ್ಥಿಗಳಿಗಂತಲೇ ಪ್ರಾರಂಭವಾದಂತಹ ಸಿದ್ಧವನ ಗುರುಕುಲ, ಪರಮಪೂಜ್ಯ ಮಂಜಯ್ಯ ಹೆಗ್ಗಡೆಯವರ ಕನಸಿನ ಕೂಸಾಗಿದೆ. ಬಂಗಾಳದಲ್ಲಿ ರವೀಂದ್ರನಾಥ ಠಾಗೋರ್ರವರು ಪ್ರಾರಂಭಿಸಿದಂತಹ ಶಾಂತಿನಿಕೇತನದಂತಯೇ ಕರ್ನಾಟಕದಲ್ಲಿಯೂ ಕೂಡ ಇಂತಹ ಗುರುಕುಲ ಪದ್ಧತಿಯನ್ನು ಪ್ರಾರಂಭಿಸಬೇಕೆಂದು ಸಂಕಲ್ಪ ಮಾಡಿದ್ದ ಪೂಜ್ಯ ಶ್ರೀ ಮಂಜಯ್ಯ ಹೆಗ್ಗಡೆಯವರು, ತಮ್ಮ ಕನಸಿನ ಬೀಜಕ್ಕೆ ನೀರು, ಫಲವತ್ತಾದ ಮಣ್ಣು, ಗೊಬ್ಬರ, ಆರೈಕೆಯನ್ನು ಮಾಡಿ, ಪ್ರಾಚೀನ ಗುರುಕುಲ ಪದ್ಧತಿಯ ಬೇರುಗಳನ್ನು ಹೊಂದಿರುವ ದೇಶದ ಶ್ರೇಷ್ಟ ಸಂಸ್ಥೆಯನ್ನಾಗಿ ಮಾಡಿದ್ದು ಈಗ ಇತಿಹಾಸ. ಈ ಇತಿಹಾಸವನ್ನು ಕೀರ್ತಿಶೇಷ ರತ್ನವರ್ಮ ಹೆಗ್ಗಡೆ ಮತ್ತು ಪರಮಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ಉಳಿಸಿಕೊಂಡು ಬೆಳೆಸಿಕೊಂಡು, ಅದು ಹೆಮ್ಮರವಾಗಿ ಬೆಳೆಯುವಂತೆ ಮಾಡಿದ್ದು ಕೂಡ ಸುವರ್ಣಾಕ್ಷರಗಳಲ್ಲಿ ಬರೆಯುವಂತಹದ್ದು. ಇಂತಹ ಶ್ರೇಷ್ಟ ಸಂಸ್ಥೆಯಲ್ಲಿ ಓದಿ, ಆಶ್ರಯ ಪಡೆದು, ಹೇಗೆ ಬದುಕಬೇಕು ಅನ್ನುವ ಮಾರ್ಗದರ್ಶನ ಮತ್ತು ಸಂಸ್ಕಾರವನ್ನು ಅಳವಡಿಸಿಕೊಂಡಿರುವ ಅಸಂಖ್ಯ ವಿದ್ಯಾರ್ಥಿಗಳಲ್ಲಿ ನಾನು ಕೂಡ ಒಬ್ಬ ಎಂಬ ಹೆಮ್ಮೆಯೇ ಸಂಸ್ಥೆಯ ಮೇಲಿನ ನನ್ನ ಅಭಿಮಾನಕ್ಕೆ ಕಾರಣ.
ಮೇ 7 ರಂದು ಸಿದ್ಧವನ ಗುರುಕುಲದ ಅಮೃತಮಹೋತ್ಸವ ಮತ್ತು ಮೇ 8 ರಂದು ಎಸ್ಡಿಎಮ್ ಕಾಲೇಜಿನ ಸುವರ್ಣಮಹೋತ್ಸವ- ಈ ಎರಡು ಉತ್ಸವಗಳು ಒಟ್ಟಿಗೆ ಬಂದಿರುವುದು ಅಪ್ಪ-ಮಗನ ಜನ್ಮದಿನದ ಸಂಭ್ರಮ ಒಂದೇ ದಿನ ಬಂದಿರುವಂತೆ ಬಣ್ಣಿಸುವಂತಿತ್ತು. ಏಕೆಂದರೆ, ಸಿದ್ಧವನದಲ್ಲಿ ಆಶ್ರಯ ಪಡೆದವರು, ಎಸ್ಡಿಎಮ್ನಲ್ಲಿ ಓದಿರುತ್ತಾರೆ, ಎಸ್ಡಿಎಮ್ ಕಾಲೇಜು 50 ವರ್ಷಗಳ ಹಿಂದೆ ಸಿದ್ಧವನದಲ್ಲೇ ಪ್ರಾರಂಭವಾದಾಗ, ಅಲ್ಲಿಯೇ ಆರಂಭದ ತರಗತಿಗಳು ನಡೆಯುತ್ತಿದ್ದವು. ಹೊಸ ಕಟ್ಟಡ ಆಗುವವರೆಗೂ ಸಿದ್ಧವನ ಗುರುಕುಲದ ಆವರಣವೇ ಎಸ್ಡಿಎಮ್ ಕಾಲೇಜಿನ ಆಲಯವಾಗಿತ್ತು. ಹಾಗಾಗಿ ಹೆಚ್ಚಿನ ವಿದ್ಯಾಥರ್ಿಗಳಿಗೆ ಎರಡೂ ಸಂಸ್ಥೆಗಳ ನಂಟು ಬಿಡಿಸಲಾಗದ್ದು.
14 ವರ್ಷಗಳ ನಂತರ ಗುರುಕುಲದ ಅಮೃತಮಹೋತ್ಸವದ ಕಾರ್ಯಕ್ರಮಕ್ಕೆ ಕಾಲಿಟ್ಟಾಗ, ನಾನು ಮೊದಲ ದಿನ ಸಿದ್ಧವನಕ್ಕೆ ಬಂದಂತಹ ದಿನವೇ ಕಣ್ಣಮುಂದಿತ್ತು. ಅಂದು ಕೂಡ ಗುರುಕುಲದ ವಿದ್ಯಾರ್ಥಿಗಳು ನನ್ನನ್ನು ಆಹ್ವಾನಿಸಿ ಪಾಲಕರ ಕೋಣೆಗೆ ಕರೆದುಕೊಂಡು ಹೋದ ಹಾಗೆ, ಉತ್ಸವದ ದಿನವೂ ಕೂಡ ವಿದ್ಯಾರ್ಥಿಗಳು ನನ್ನನ್ನು ಪಾಲಕರ ಕೋಣೆಯ ಹತ್ತಿರವೇ ಕರೆದುಕೊಂಡು ಹೋಗಿದ್ದರು. ಮರೆತೆನಂದರೂ ಮರೆಯೋದು ಹ್ಯಾಂಗ... ಆ ಸಂಭ್ರಮದ ದಿನದಂದು, ಸಿದ್ಧವನದಲ್ಲಿ ಇದ್ದ ಪ್ರತಿಕ್ಷಣವೂ ನಾನು ಭಾವುಕನಾಗಿಬಿಟ್ಟಿದ್ದೆ. ಹಳೆಯ ನೆನಪುಗಳು ಕ್ಷಣಕ್ಷಣವೂ ನನ್ನ ಕಣ್ಣ ಮುಂದೆ ಬಂದುಹೋಗುತ್ತಿದ್ದವು. ಸಂಭ್ರಮದ ಹಿಂದಿನ ದಿನವೇ ನೂರಾರು ಹಳೆಯ ವಿದ್ಯಾರ್ಥಿಗಳು ಸೇರಿ, ಸ್ವಯಂ ಸೇವಕರಾಗಿ ದುಡಿಯುತ್ತಿದ್ದರು. ಎಲ್ಲರಿಗೂ ತಮ್ಮ ಮನೆಯ ಸಂಭ್ರಮಕ್ಕೆ ಅಂತಲೇ ದುಡಿಯುತ್ತಿದ್ದೇವೆ ಅನ್ನುವ ಭಾವನೆ... ಪ್ರತಿಯೊಬ್ಬರ ಮುಖದಲ್ಲೂ ಆ ಸಂಭ್ರಮದ ಸಂತಸ ಎದ್ದು ಕಾಣುತ್ತಿತ್ತು. ಹಳೆಯ ವಿದ್ಯಾರ್ಥಿಗಳು ಗುಂಪುಗುಂಪಾಗಿ ಸೇರಿಕೊಂಡು ಸಿದ್ಧವನದ ಮೂಲೆಮೂಲೆಯೂ ಓಡಾಡುತ್ತಾ, ಅಂದಿನ ನೆನಪುಗಳಿಗೆ ಜಾರಿದ್ದರು. ಹೆಚ್ಚಿನವರ ವಯಸ್ಸು 50 ದಾಟಿತ್ತು, ಇನ್ನೂ ಹೆಚ್ಚಿನವರು 70 ದಾಟಿದವರೂ ಕೂಡ ಇದ್ದರು. ಅಬ್ಬಾ... ಈ 75 ವರ್ಷಗಳಲ್ಲಿ ಎಂತೆಂತಹ ಮಹಾನುಭಾವರನ್ನು, ವಿದ್ಯಾವಂತರನ್ನು, ಸಂಸ್ಕಾರವಂತರನ್ನು, ಸಿರಿವಂತರನ್ನಾಗಿ ಯಾವ ಜಾತಿ/ಧರ್ಮದ ಭೇದವಿಲ್ಲದೇ ಬೆಳೆಸಿದ್ದರೂ, ಸಿದ್ಧವನ ಮಾತ್ರ ಯಾವ ಹಮ್ಮಿಲ್ಲದೇ ನಿಗುಮ್ಮನಾಗಿ ತನ್ನ ಸರಳತೆ, ಪ್ರಶಾಂತತೆಯಿಂದಲೇ ನಮ್ಮನ್ನು ನೋಡಿ ಬರಮಾಡಿಕೊಳ್ಳುತ್ತಿತ್ತು. ತನ್ನ ಮಡಿಲಲ್ಲಿ ಬೆಳೆದಂತಹ ಮಕ್ಕಳನ್ನು ಎಷ್ಟೋ ವರ್ಷಗಳ ನಂತರ ಮತ್ತೆ ನೋಡುತ್ತಿದ್ದೇನೆ ಅನ್ನುವ ಸಾರ್ಥಕತೆಯ ಖುಷಿಯನ್ನು ಅದು ಒಳಗೊಳಗೆ ಅನುಭವಿಸುತ್ತಿತ್ತೋ? ಸಿದ್ಧವನ ಆಂತರ್ಯವನ್ನು ಹೊಕ್ಕು ಅರಿತಾಗಲೇ ಅದರ ಆಳವನ್ನು ಅರಿಯಬಹುದೇನೋ? ಏಷ್ಟೋ ವರ್ಷಗಳ ನಂತರ ಹೆತ್ತಮಕ್ಕಳನ್ನು ನೋಡಿ, ಕಣ್ಣುತುಂಬಿಕೊಳ್ಳುವ ತಂದೆತಾಯಿಗಳ ಆಂತರ್ಯದ ಪ್ರೀತಿ, ವಾತ್ಸಲ್ಯವನ್ನು ಬಣ್ಣಿಸುವುದು ಕಷ್ಟ ಅಂತ ಹೇಳುವಾಗ, 75 ವರ್ಷಗಳಲ್ಲಿ ಅಸಂಖ್ಯ ಮಕ್ಕಳನ್ನು ಅತ್ಯಂತ ಕಾಳಜಿಯಿಂದ ಸಾಕಿ ಸಲುಹಿದ ಸಿದ್ಧವನವೆಂಬ ತಾಯಿಯ ಒಡಲಾಳದ ಪ್ರೀತಿಯನ್ನು ಬಣ್ಣಿಸಲಾದಿತೇ? ಬಣ್ಣಿಸಿದರೂ, ಇದೊಂಥರ ಆಗಸದ ವಿಸ್ತಾರವನ್ನು ಲೆಕ್ಕಮಾಡಿ ಹೇಳಿದಂತೆ...! ಕಲ್ಪನೆ ನಿಲುಕದ್ದು... ಅಂತಹದ್ದುರಲ್ಲಿ ಅಲ್ಲಿ ಓದಿ,ಆಡಿ ಬೆಳೆದ ನಮ್ಮಂತ ವಿದ್ಯಾಥರ್ಿಗಳು ಮತ್ತೇ ಏಷ್ಟೋ ವರ್ಷಗಳ ನಂತರ ಮತ್ತೇ ಆ ನೆಲದಲ್ಲಿ ನಿಂತಾಗ ಕಾಡಿದ ನೆನಪುಗಳು, ಅದರಿಂದ ಸಿಕ್ಕ ಖುಷಿಯನ್ನು ಬಣ್ಣಿಸುವುದು ಕೂಡ ಕಷ್ಟವೇ... ಅದನ್ನು ಅನುಭವಿಸಿದಂತಹ ಎಲ್ಲ ಹಳೆಯ ವಿದ್ಯಾರ್ಥಿಗಳಿಗೆನೇ ಕೇಳಬೇಕಷ್ಟೇ...! 14 ವರ್ಷಗಳ ನಂತರ ನನಗೆ ಪಾಲಕರಾಗಿದ್ದಂತಹ ಶ್ರೀ ಮಹಾಬಲೇಶ್ವರ ಭಟ್ ಮಾತನಾಡಿಸಿದಾಗ, ಇಂದಿಗೂ ಅವರ ಮಾತಿನಲ್ಲಿ ಅದೇ ಪ್ರೀತಿ, ವಾತ್ಸಲ್ಯ, ಕಾಳಜಿ... ಅವರ ಮುಂದೆ ಮತ್ತೇ ನಾನು ಸಣ್ಣವನಾಗಿಬಿಟ್ಟೆ. ಮಾತುಗಳೇ ಹೊರಡಲಿಲ್ಲ. ನನ್ನ ಜೊತೆಗೆ ಓದಿದ ಅನೇಕ ಸ್ನೇಹಿತರು ಅಂದು ಬರದೇ ಇದ್ದುದು ನನ್ನ ನಿರಾಶೆಗೆ ಕಾರಣವಾಗಿತ್ತು. ಹೀಗಿದ್ದರೂ, ನನ್ನ ಸಹಪಾಠಿಗಳಾದ ಶಿವಕುಮಾರ್ ಗೌಡ, ರಾಜೇಶ್ ಜೈನ್, ಪ್ರದೀಪ್ ಶೆಟ್ಟಿ, ಪ್ರವೀಣ್ಕುಮಾರ್ರಂತಹ ಕೆಲವು ಸ್ನೇಹಿತರು ಮಾತ್ರ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು.
ಅಂದು ಸೇರಿದ್ದ ಹಿರಿಯ ಹಳೆಯ ವಿದ್ಯಾರ್ಥಿಗಳೆಲ್ಲಾ ಸಿದ್ಧವನದ ಸಮವಸ್ತ್ರವಾದ ಬಿಳಿ ಅಂಗಿ ಮತ್ತು ಬಿಳಿಪಂಚೆ ಉಟ್ಟು ಮತ್ತೆ ತಾವು ಹಳೆಯ ವಿದ್ಯಾಥರ್ಿಗಳಂತೆ ಇಡೀ ಸಿದ್ಧವನದ ತುಂಬಾ ಓಡಾಡುತ್ತಿದ್ದರು. ಅವರು ಕಳೆಯುತ್ತಿದ್ದ ಪ್ರತಿಕ್ಷಣದ ಹಿಂದೆಯೂ ಹಳೆಯ ನೆನಪುಗಳ ದೊಡ್ಡ ಸಡಗರವೇ ಎದ್ದು ಕಾಣುತ್ತಿತ್ತು. ಅಮೃತಮಹೋತ್ಸವದ ಕಾರ್ಯಕ್ರಮ 11 ಗಂಟೆಗೆ ಪ್ರಾರಂಭವಾಗಿರುವಾಗಲೇ ಪರಮಪೂಜ್ಯ ಖಾವಂದರು ಮತ್ತು ಶ್ರೀಮತಿ ಹೇಮಾವತಿ ವಿ ಹೆಗ್ಗಡೆಯವರು ಅಧ್ಯಕ್ಷರಾಗಿ ಆಗಮಿಸಿದ್ದರು. 30-40 ವರ್ಷಗಳ ಹಿಂದೆ ಸಿದ್ದವನದಲ್ಲಿ ಓದಿ ಕಲಿತು, ಒಳ್ಳೆಯ ಹುದ್ದೆಯಲ್ಲಿದ್ದ ಅನೇಕರು ತಮ್ಮ ಬದುಕಿನಲ್ಲಿ ಸಿದ್ಧವನ ನೀಡಿದ ಪ್ರಮುಖ ಪಾತ್ರವನ್ನು, ಹಳೆಯ ನೆನಪುಗಳಿಗೆ ಜಾರಿ, ಅಲ್ಲಿ ಸೇರಿದ್ದ ನೂರಾರು ಹಳೆಯ ವಿದ್ಯಾರ್ಥಿಗಳ ಮುಖವಾಣಿಯಾಗಿ ಮಾತನಾಡಿದ್ದರು. ಅಂದು ಸೇರಿದ್ದ ಪ್ರತಿಯೊಬ್ಬರ ಹಿಂದೆಯೂ ಸಿದ್ಧವನದ ಹಳೆಯ ನೆನಪುಗಳ ದೊಡ್ಡ ಮೂಟೆಯೂ ಇದೆ. ಎಲ್ಲರಿಗೂ ತಮ್ಮ ತಮ್ಮ ಅವಕಾಶಗಳನ್ನು ಹೇಳಿಕೊಳ್ಳಲಿಕ್ಕೆ ಅವಕಾಶ ಸಿಗದೇ ಇದ್ದರೂ, ಅದನ್ನು ಮನಸ್ಸಿನಲ್ಲೇ ಮತ್ತೆ ಮೆಲುಕು ಹಾಕಿ ಆ ಸ್ವಾದವನ್ನು ಒಳಗೊಳಗೆ ಅನುಭವಿಸಿದಂತೆ ಭಾಸವಾಗುತ್ತಿತ್ತು. ಪೂಜ್ಯ ವೀರೇಂದ್ರ ಹೆಗ್ಗೆಡೆಯವರು ಕೂಡ ಸಿದ್ಧವನದೊಂದಿಗೆ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದು ಕೂಡ ವಿಶೇಷವಾಗಿತ್ತು. ಕಾರ್ಯಕ್ರಮದ ನಂತರ ಸಿದ್ಧವನವನ್ನು ಪ್ರಾರಂಭಿಸಿ, ಬೆಳೆಸಿದ ಶ್ರೀ ಮಂಜಯ್ಯ ಹೆಗ್ಗಡೆ, ಶ್ರೀ ರತ್ನವರ್ಮ ಹೆಗ್ಗಡೆ ಮತ್ತು ಶ್ರೀ ವೀರೆಂದ್ರ ಹೆಗ್ಗಡೆಯವರ ಸಾಧನೆಯ ಕುರಿತು ಮಾತನಾಡಿದ್ದು ಇಡೀ ಕಾರ್ಯಕ್ರಮಕ್ಕೆ ಕಳಶಭೂಷಣದಂತಿತ್ತು. ಸಿದ್ಧವನದಲ್ಲಿ ಮತ್ತೆ ಎಂದಿನಂತೆ ಮುಂಜಾನೆಯ ಗಂಜಿ ಊಟ, ಕೊಬ್ಬರಿ ಚಟ್ನಿ, ಉಪ್ಪಿನಕಾಯಿ ಜೊತೆಗೆ ಥರಾವರಿ ವಿವಿಧ ತಿಂಡಿ, ಮಧ್ಯಾಹ್ನದ ಭಾರಿ ಮೃಷ್ಟಾನ್ನ ಭೋಜನ ಸಿದ್ಧವನದ ಅಮೃತಮಹೋತ್ಸವದ ವಿಶೇಷವಾಗಿತ್ತು. ಸಾಯಂಕಾಲ ಮತ್ತೆ ಹಳೆಯ ನೆನಪುಗಳು, ಮನರಂಜನೆ, ಎಸ್ಡಿಎಮ್ ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿವರ್ಗದವರು ಅಭಿನಯಿಸಿದ್ದ ನಾಟಕ ಇತ್ಯಾದಿ ಕಾರ್ಯಕ್ರಮಗಳು, ರಾತ್ರಿ ಮತ್ತೆ ಮೃಷ್ಟಾನ ಭೋಜನ ಇಂತವುಗಳಿಂದ ಭಾಗವಹಿಸಿದ ನಮ್ಮಂತ ಹಳೆಯ ವಿದ್ಯಾರ್ಥಿಗಳಿಗೆ ಇಡೀ ಅಮೃತ ಮಹೋತ್ಸವದ ನೆನಪು ಚಿರಸ್ಥಾಯಿಯಾಗಿ ಉಳಿಯುವಂತಾಗಿದೆ.
ಮರುದಿನ ಎಸ್ಡಿಎಮ್ ಕಾಲೇಜಿನ 50 ವರ್ಷದ ಸಂಭ್ರಮ ಕೂಡ ಇನ್ನಷ್ಟು ಭರ್ಜರಿಯಾಗಿ ನೆರವೇರಿತು. ಸಿದ್ಧವನದ ಅಮೃತಮಹೋತ್ಸವಕ್ಕೆ ಬಂದವರೆಲ್ಲಾ ಕಾಲೇಜಿನ ಚಿನ್ನದ ಮಹೋತ್ಸವಕ್ಕೆ ಭಾಗವಹಿಸಿದ್ದರು. 50 ವರ್ಷಗಳಲ್ಲಿ ಕಾಲೇಜಿನಲ್ಲಿ ಓದಿದ ಎಲ್ಲ ವಿದ್ಯಾರ್ಥಿಗಳು ದೇಶವಿದೇಶದ ಮೂಲೆಗಳಿಂದ ಕಾಲೇಜಿನ ಚಿನ್ನದಂತಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈಗಾಗಲೇ ನಿವೃತ್ತಿ ಹೊಂದಿದ ಹಳೆಯ ಪ್ರಾಧ್ಯಾಪಕರು, ನಿವೃತ್ತಿಯ ಅಂಚಿನಲ್ಲಿದ್ದವರು, ಸಕ್ರಿಯವಾಗಿದ್ದ ಎಲ್ಲ ಪ್ರಾಧ್ಯಾಪಕರು ಸ್ವಾಗತಕಾರರಾಗಿ, ಸ್ನೇಹಿತರಂತೆ ಹಳೆಯ ವಿದ್ಯಾರ್ಥಿಗಳನ್ನು ಬರಮಾಡಿಕೊಂಡಿದ್ದು ಎಲ್ಲರಿಗೂ ಆತ್ಮೀಯತೆಯನ್ನು ಹುಟ್ಟಿಸುವಂತಿತ್ತು. ಅದು ಗುರುಶಿಷ್ಯರ ಸಮಾಗಮವಾದರೂ, ಇಬ್ಬರು ಹಳೆಯ ಸ್ನೇಹಿತರ ಸಮ್ಮೀಲನದಂತೆ ಕಾಣುತ್ತಿತ್ತು. ಅಂದು ಯಾವ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ತಮಗೆ ಗೌರವ ಕೊಡಬೇಕೆಂದು ನಿರೀಕ್ಷಿಸುತ್ತಿರಲಿಲ್ಲ. ಪ್ರಾಂಶುಪಾಲರಾಗಿದ್ದ ಯಶೋವರ್ಮರೂ ಕೂಡ ತುಂಬಾ ಉತ್ಸಾಹದಿಂದ ಎಲ್ಲ ಹಳೆಯ ವಿದ್ಯಾರ್ಥಿಗಳ ಜೊತೆ ಪ್ರೀತಿಯಿಂದ ಬರೆಯುತ್ತಾ, ಖುದ್ದಾಗಿ ಅವರೇ ಎಲ್ಲರ ಆತಿಥ್ಯವನ್ನು ನೋಡಿಕೊಳ್ಳುತ್ತಿದ್ದುದು, ಕಾರ್ಯಕ್ರಮದ ವಿಶೇಷವಾಗಿತ್ತು. ಆಯಾ ವರ್ಷಗಳಲ್ಲಿ ಓದಿದದವರು ಒಂದೊಂದು ಕೋಣೆಯಲ್ಲಿ ಸೇರುವಂತೆ ಮಾಡುವ ಯೋಜನೆಯು ಕೂಡ ಹಳೆಯ ವಿದ್ಯಾರ್ಥಿಗಳ ಸಂತೋಷಕ್ಕೆ ಕಾರಣವಾಗಿತ್ತು. ಅಂದು ಪ್ರತಿಯೊಬ್ಬರ ಮುಖದಲ್ಲಿ ಸಂತೋಷ, ಸಂತಸ ವರ್ಣಿಸಲಾಗದಷ್ಟು ಸಡಗರದಲ್ಲಿ ಮೊಳಗಿತ್ತು. ಹೆಚ್ಚಿನವರು ತಮ್ಮ ಹೆಂಡತಿ, ಮಕ್ಕಳು, ಮೊಮ್ಮಕ್ಕಳೊಂದಿಗೆ ಬಂದವರಿದ್ದರು. ತಮ್ಮ ಕುಟುಂಬದವರನ್ನು ಇಡೀ ಕಾಲೇಜಿನ ಇಂಚು ಇಂಚನ್ನು ಬಿಡದೇ ಎಲ್ಲ ಕಡೆಯೂ ಓಡಾಡಿ ಹಳೆಯ ನೆನಪುಗಳಿಗೆ ಜಾರಿದ್ದರು. ಇದಕ್ಕೆ ನಾನು ಕೂಡ ಹೊರತಾಗಿಲ್ಲ. ಕಾಲೇಜಿನ ಮುಖ್ಯ ಗೇಟ್ನಿಂದ ಹೊರಟು, ಲೈಬ್ರೈರಿಯ ಸುತ್ತಮುತ್ತ, ಕ್ಯಾಂಟೀನ್, ಗ್ರಂಥಾಲಯದ ಒಳಗೆ, ನಾವು ಓದುತ್ತಿದ್ದ ಜಾಗ ಎಲ್ಲಡೆ ಮತ್ತೆ ಓಡಾಡಿ ಲೈಬ್ರರಿಯಲ್ಲಿನ ನೆನಪುಗಳನ್ನು ಮತ್ತೆ ಮೆಲುಕುಹಾಕಿದ್ದಾಯಿತು. ನಾನು ವಿಜ್ಞಾನದ ವಿದ್ಯಾರ್ಥಿಯಾಗಿದ್ದರಿಂದ ಫಿಸಿಕ್ಸ್, ಕೆಮಸ್ಟ್ರಿ, ಬಯಾಲಜಿ ಡಿಪಾರ್ಟ್ಮೆಂಟ್ಗಳಿಗೆ ಹೋಗಿ, ಪಾಠ ಮಾಡಿದ ಗುರುಗಳು, ಲ್ಯಾಬ್ಗಳಲ್ಲಿ ಗಂಟೆಗಟ್ಟಲೇ ನಿಂತು ಮರೆತುಹೋದ ಏಷ್ಟೋ ನೆನಪುಗಳನ್ನು ಮತ್ತೆ ತಲೆಯಲ್ಲಿ ತುಂಬಿಕೊಂಡು ಹೊರಬಂದಿದ್ದೆ. ಮಧ್ಯಾಹ್ನದ ಮೃಷ್ಟಾನ್ನ ಭೋಜನ, ಅದರ ಜೊತೆಗೆ ಮನರಂಜನಾ ಕಾರ್ಯಕ್ರಮ, ಸಾಯಂಕಾಲದ ಮುಖ್ಯ ಕಾರ್ಯಕ್ರಮ ಪ್ರಾರಂಭವಾಗುವವರೆಗೂ ಸಮಯ ಹೇಗೆ ಕಳೆಯಿತೋ ಅನ್ನುವುದೇ ತಿಳಿಯಲಿಲ್ಲ. ಪೂಜ್ಯ ಖಾವಂದರು ಮತ್ತು ಶ್ರೀಮತಿ ಹೇಮಾವತಿ ಹೆಗ್ಗಡೆ, ಡಾ.ಎಸ್.ಪ್ರಭಾಕರ್, ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದ ಬೆಳ್ತಂಗಡಿಯ ಶಾಸಕರಾಗಿದ್ದ ವಸಂತ ಬಂಗೇರ ಇನ್ನು ಹಲವು ಗಣ್ಯರು ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿದ್ದರು. 50ತುಂಬಿದ ಕಾಲೇಜಿಗೆ ದುಡಿದ ಎಲ್ಲರಲ್ಲಿಯೂ ಬೆಟ್ಟದಷ್ಟು ನೆನಪುಗಳಿದ್ದವು. ಅನೇಕರು ಹೃದಯತುಂಬಿದ್ದ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಅಂದು ವೇದಿಕೆಯಾಗಿತ್ತು. ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದ, ಇಂದು ಕಲಾ ಕ್ಷೇತ್ರದಲ್ಲಿ ತುಂಬಾ ಹೆಸರು ಮಾಡಿರುವ ವಿಲಾಸ್ ನಾಯಕ್ ವೇದಿಕೆಯಲ್ಲೇ ಅದ್ಭುತ ಸ್ಥಿರಚಿತ್ರವನ್ನು ಬಿಡಿಸಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ನಮ್ ಬ್ಯಾಚ್ 2001-02 ಬ್ಯಾಚ್ನನವರಲ್ಲಿ ಹೆಚ್ಚಿನವರು ಅಂದು ಬರದೇ ಇರುವುದು ಅತ್ಯಂತ ಬೇಸರ ಹುಟ್ಟಿಸಿತು. ಖಂಡಿತ ಅವರೆಲ್ಲಾ ಒಂದು ಅದ್ಭುತ ಕ್ಷಣಗಳ ದಿನವನ್ನು ಮಿಸ್ ಮಾಡಿಕೊಂಡರು ಅನ್ನುವ ಭಾವನೆ ನನ್ನಲ್ಲಿ ಮೂಡಿತು. ಅಂದು ಅನೇಕ ಸ್ನೇಹಿತರನ್ನು ಭೇಟಿಮಾಡಬೇಕೆಂದು ಅಂದುಕೊಂಡಿದ್ದ ನನಗೆ ದೊಡ್ಡ ನಿರಾಸೆ ಕಾಡಿತು. ಹೀಗಿದ್ದರೂ ಬೆಳಗ್ಗೆಯಿಂದ ರಾತ್ರಿ 8 ಗಂಟೆಯವರೆಗೂ ಕಾಲೇಜಿನ ಆವರಣದ ಆ ಸಡಗರವನ್ನು ಕ್ಷಣಕ್ಷಣವೂ ಆಸ್ವಾದಿಸುತ್ತಿದ್ದೆ. ನನ್ನಂತೆ ಎಲ್ಲರೂ... ಎಲ್ಲರ ಜೀವನದಲ್ಲಿ ಎಲ್ಲದಿನಗಳೂ ಕಾಡುವ ದಿನಗಳಾಗಿರುವುದಿಲ್ಲ. ಯಾವುದೋ ಒಂದು ದಿನ, ಕ್ಷಣ ವರವಾಗಿ ಬಂದಿರುತ್ತೆ. ಅಂತಹ ವರ ಸಿದ್ಧವನದ ಅಮೃತಮಹೋತ್ಸವ ಮತ್ತು ಎಸ್ಡಿಎಮ್ ಕಾಲೇಜಿನ 50ರ ಸಂಭ್ರಮದ ದಿನವಾಗಿತ್ತು ಅಂದರೆ ಅತಿಶಯೋಕ್ತಿಯೆನಲ್ಲ.
50 ನೇ ವರ್ಷದ ಕಾರ್ಯಕ್ರಮದಂದು ಪ್ರತಿ ವರುಷ ಮೇ1 ನೇ ತಾರೀಖನ್ನು ಎಸ್ ಡಿ ಎಮ್ ಹಳೆಯ ವಿದ್ಯಾರ್ಥಿಗಳ ಸಮ್ಮೀಲನಕ್ಕೆ ಮೀಸಲಾಗಿಡುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಪ್ರತಿ ವರ್ಷ ಮೇ1 ಕಾರ್ಮಿಕರ ದಿನಾಚರಣೆ ಎಲ್ಲರಿಗೂ ಸರ್ಕಾರಿ ರಜೆ ಇರುತ್ತದೆ. ಅಂದು ಮತ್ತೆ ಎಲ್ಲರೂ ಸೇರಲು ಒಳ್ಳೆಯ ಸುವರ್ಣಾವಕಾಶ.