ಮೊನ್ನೆ ಅಕ್ಕನ ಮಗಳ ನಾಮಕರಣ ಅಂತ ನಮ್ಮೂರು ಬನವಾಸಿಗೆ ಹೋಗಿದ್ದೆ. ಮನೆ ತುಂಬ ಸಂತೋಷದ ವಾತಾವರಣ..ನಮ್ಮ ಕಾಮನಗಲ್ಲಿ ಯಥಾಪ್ರಕಾರ ತನ್ನದೇ ಸೊಗಸಿನಿಂದ ಮéಿಂಚುತ್ತಿತ್ತು. ದೇವಸ್ಥಾನದ ಹಿಂಬದಿಯ ಕಾಮನಗಲ್ಲಿಗೆ ರೋಡಿಗೆ ಆ ದಿನ ಅಪರೂಪದ ಅತಿಥಿ ಆಗಮಿಸಿದ್ದ. ಕಾಮನಗಲ್ಲಿಯ ಹುಡುಗ-ಹುಡುಗಿಯರೆಲ್ಲಾ ಬೆಂಗಳೂರು ಸೇರಿದ ಮೇಲೂ, ಕೇರಿಯ ಹುಡುಗರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಗೌಳೇರ್, ಕುರುಬರು,, ಬೋಮ್ನಳ್ಳೇರ್, ಬಂಗ್ಲೇ, ಬಡಿಗೇರ್ಮನಿ ಅಂತೆಲ್ಲಾ ಮನಿ ಸೇರಿದರೂ ಹುಡುಗರ ಸಂಖ್ಯೆ 20 ಮೀರುತ್ತದೆ. ಇದರ ಜೊತೆಗೆ ಉಪ್ಪಾರಕೇರಿ, ತಗ್ಗಿನಕೇರಿ, ದೇವಸ್ಥಾನದ ಓಣಿ, ಪ್ಯಾಟೀಂದ ಬರೋ ಹುಡುಗರ ಸಂಖ್ಯೆ ಸೇರಿದ್ರೆ ಅದು ಇನ್ನೂ ಹೆಚ್ಚಾಗುತ್ತದೆ. ಅಂತದ್ರಲ್ಲಿ ಮಟ್ಟ ಮಟಮಟ ಮಧ್ಯಾಹ್ನ ಎಲ್ಲ ಹುಡುಗರು ಸೇರಿ ಆಟವಾಡುತ್ತಿದ್ದರು.
ಬಂಗ್ಲೇರ್ ಮನೆಯ ಕಂಪೌಂಡ್ನಲ್ಲಿ ಕುಳಿತಿದ್ದ ಅತಿಥಿ !
ಮಳೆ ಬಂದಾಗ ಊರಿನ ವರದಾ ನದಿ ತುಂಬಿ ಹರಿಯುವುದು, ಆ ನೀರು ಸುತ್ತಲಿನ ಕಪಗೇರಿ, ಭಾಸಿ, ತಿಗಣಿಯ ಸುತ್ತಮುತ್ತ ಇರುವ ಹೊಲಗದ್ದೆಗಳಿಗೆ ಹೊಕ್ಕಿ ಅಲ್ಲಿರುವ ಜೀವಜಂತುಗಳು ಅಲ್ಲಿಂದ ಇಲ್ಲಿಗೆ, ಬನವಾಸಿ ಬದಿಯಿಂದ ಸುತ್ತಲಿನ ಹಳ್ಳಿಗಳಿಗೆ ನುಗ್ಗುವುದು ಸಾಮಾನ್ಯ. ಮೀನು, ಏಡಿ, ಸಿಂಗಡಿಗಳ ಜೊತೆಗೆ ಮೊಸಳೆಗಳು ಇದರಲ್ಲಿ ಸೇರಿವೆ. ಅದರಲ್ಲೂ ಬನವಾಸಿಯ ವರದಾ ನದಿಯ ತಪ್ಪಲಿನಲ್ಲಿ ಭಯಾನಕ ಮೊಸಳೆಗಳು ಇದ್ದಾವೆ ಅನ್ನುವುದು ನಮ್ಮೂರಿನ ಎಲ್ಲರಿಗೂ ಗೊತ್ತಿದ್ದ ಸಂಗತಿಯಾಗಿತ್ತು. ನಾವು ಚಿಕ್ಕವರಾಗಿದ್ದಾಗ ಶಿವರಾತ್ರಿ ದಿನ ಹೊಳೇಲಿ ಇಳಿಯಲಿಕ್ಕೆ ಹೋದಾಗಲೆಲ್ಲಾ ಅಮ್ಮ' ನೀರಿಗೆ ಇಳಿಬೇಡ, ಮೊಸಳೆಗಳು ಉಂಟು. ಇಲ್ಲೆ ಕುತ್ಕಂಡು ಸ್ನಾನ ಮಾಡು' ಅಂತ ಹೆದರಿಸುತ್ತಿದ್ದಳು. ಹಾಗಾಗಿ ನನಗೆ ನಮ್ಮೂರಿನ ವರದಾನದಿಯ ಮೊಸಳೆಗಳ ಬಗ್ಗೆ ನನಗೆ ಅತೀವ ಆಸಕ್ತಿ ಮನೆಮಾಡಿತ್ತು. ನಾನು ನೋಡಿದ ಮೊದಲ ಮೊಸಳೆ ತುಂಬಾ ಭಯಾನಕವಾಗಿತ್ತು. ಚಿಕ್ಕವನಾಗಿದ್ದಾಗ ಅಂದು ಮೊದಲು ನೋಡಿದ ಮೊಸಳೆಯನ್ನು ಉಪ್ಪಾರಕೇರಿಯ ಜನ ಹಿಡಿದಿದ್ರು. ತುಂಬಾ ದೊಡ್ಡದಾದ, ನೋಡಲು ಉಗ್ರವಾಗಿತ್ತು. ಸಿಟ್ಟಿನಿಂದ ಕೆರಳುತ್ತಿತ್ತು. ಅದನ್ನ ಹೆಡೆಮೀರಿ ಕಟ್ಟಿ ಎಳೆದು ತಂದಿದ್ದರು. ಕಡಿಮೆ ಅಂದರೂ 20 ಜನ ಅದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಅದರ ಬಾಲದ ಮೇಲಿದ್ದ ಚೂಪಾದ ಮೂಳ್ಳುಗಳು ಎಲ್ಲಿ ಬಂದು ನಮ್ಮನ್ನು ಹೊಡೆದುಬಿಡುತ್ತವೆಯೊ ಅಂದು ತುಂಬ ಹೆದರಿಕೊಂಡು ದೂರದಿಂದಲೇ ನೋಡಿಕೊಂಡು ಬಂದಿದ್ದೆ. ಕೆಲವರು ಅದರ ಮೇಲೆ ಕುಳಿತು ಫೋಟೋ ತೆಗೆಸಿಕೊಂಡರು. ಇದಾದ ಮೇಲೆ ವರದೆಯ ತಪ್ಪಲಿನ ಮೊಸಳೆಗಳನ್ನ ನೋಡುವ ಹುಚ್ಚು ಅತಿಯಾಗಿ ಕಾಡುತ್ತಿತ್ತು. ಏಷ್ಟೋ ಬಾರಿ ನಿಂಗನಮಟ್ಟಿ, ಉಪ್ಪಾರಕೇರಿ, ಏಡೂರ್ಬೈಲ್ ಕಡೆಯ ಜನರೆಲ್ಲಾ ಹೊಳೆ ಕಡಿ ಮೊಸಳೆ ಹೊಕ್ಕಿದೆ, ನಾವು ನೋಡಿದೀವಿ ಅಂತೆಲ್ಲಾ ಹೇಳಿದಾಗಲೆಲ್ಲಾ ನಾನು ಅದನ್ನು ಹುಡುಕಿಕೊಂಡು ಹೊರಟುಬಿಟ್ಟಿದ್ದೆ. ಏಷ್ಟೋ ಸಲ ಹಾಗೆ ಹೋದಾಗ ಮೊಸಲೇ ಕಾಣದೆ ವಾಪಾಸ್ ಬಂದದ್ದು ಕೂಡ ಉಂಟು. ಎರಡು ಮೂರು ಬಾರಿ ದೂರದ ಬಿದಿರಮಟ್ಟಿಯ ಕೆಳಗೆ ಬಾಯಿ ತಳೆದುಕೊಂಡು ಮಲಗಿದ್ದ ಮೊಸಳೆಯನ್ನು ನೋಡಿ ತನ್ನ ಆಸೆಯನ್ನು ಈಡೇರಿಸಕೊಳ್ಳುತ್ತಿದ್ದೆ.
ಸಾಮಾನ್ಯವಾಗಿ ಬನವಾಸಿಯಲ್ಲಿ ಮಳೆ ಬಂದಾಗ, ಮಳೆ ನೀರು ಎಲ್ಲ ಹರಿದು ಸೀದಾ ಹೊಳೆಗೆ ಸೇರುವುದು ಮಾಮೂಲು. ಏಷ್ಟೋ ಸಾರಿ ನೀರಿನ ಹೊಳೆಯ ದಡ,ಇಲ್ಲವೇ ಬಿದಿರು ಮಟ್ಟಿಯ ಸಂದಿಯಲ್ಲಿ ಮೊಸಳೆಗಳು ಮರಿ ಮಾಡುವುದು ಸಾಮಾನ್ಯ. ಈ ಮೊಸಳೆಮರಿಗಳು ಒಂದೆಡೆ ನಿಲ್ಲದೇ ಆ ಕಡೆ ಈ ಕಡೆ ಓಡಾಡುವಾಗ ಕಾಲುವೆಗೆ ಹರಿಯುವ ನೀರಿನ ಜೊತೆ ಸೇರಿ ಉರೋಳಗೆ ಬಂದುಬಿಡುತ್ತವೆ. ಈ ಥರ ಮೊಸಳೆ ಮರಿಗಳು ಮಳೆ ಬಂದಾಗ ಬನವಾಸಿಯ ರಸ್ತೆ, ಕಾಲುವೆಗಳಲ್ಲಿ ಕಾಣುವುದು ಸಾಮಾನ್ಯವಾಗಿತ್ತು. ಮೊನ್ನೆ ಕೂಡ ಹೀಗೆ ಆಗಿತ್ತು. ಹೀಗೆ ಮಳೆ ನೀರು ಕಾಲುವೆಗೆ ಹೊಕ್ಕಾಗ ಎಲ್ಲೋ ಇದ್ದ ಚಿಕ್ಕ ಮೊಸಳೆ ಮರಿ ನಮ್ಮ ಕಾಮನಗಲ್ಲಿಗೆ ಸೇರಿಬಿಟ್ಟಿದೆ. ಆ ಮೊಸಳೆ ಅವಿತುಕೊಂಡಿದ್ದ ಜಾಗದಲ್ಲೇ ಹುಡುಗರು ಆಟವಾಡುತ್ತಿದ್ದರು. ಯಾರಿಗೂ ಅದು ಮೊಸಳೆ ಮರಿ ಅಂತ ಮೊದಲಿಗೆ ಗೊತ್ತಾಗಲಿಲ್ಲ. ಕೊನೆಗೆ ಅದರ ಬಾಲವನ್ನು ನೋಡಿದವರು ಇದು ಮೊಸಳೆ ಅಂತ ಗುರುತಿಸಿದರು. ಕೇರಿಯ ಕೆಲವರು ಮತ್ತು ನಮ್ಮ ಬಾವನವರು ಸೇರಿ ಕಂಪೌಂಡ್ನಲ್ಲಿ ಅವಿತುಕೊಂಡಿದ್ದ ಮರಿಯನ್ನು ಹಿಡಿದೆಳೆದು ಹೊರಗೆ ತಂದು ಅದನ್ನು ನೀರಿದ್ದ ಬಕೇಟಿನಲ್ಲಿ ಮುಳುಗಿಸಿದರು. ಮೊಸಳೆಯ ಕುತ್ತಿಗೆಗೆ ಸೆಣಬಿನದಾರವನ್ನು ಕಟ್ಟಿ ಬಡಿಗೇರ ಮನೆಯ ತೊಲೆಗೆ ಕಟ್ಟಿದ್ದರು. ಹಾಗಾಗಿ ನಾಯಿಗೆ ಕಟ್ಟಿದ್ದ ಚೇನ್ನಂತೆ ಅದು ಅಲ್ಲೇ ಒದ್ದಾಡುತ್ತಿತ್ತು. ಆ ಮೊಸಳೆಯನ್ನು ನೋಡುತ್ತಿದ್ದ ಮಕ್ಕಳಿಗೆ ಖುಷಿಯೋ ಖುಷಿ...! ಕೇರಿಯ ದೊಡ್ಡವರು ಕೂಡ ಬಂದು ನೋಡಿದರು. ಮನೆಯಲ್ಲಿ ನನ್ನ ತಮ್ಮ ಮೊಸಳೆ ಬಂದಿದೆ ಅಂತ ಹೇಳಿದಾಗ, ಕೂತೂಹಲ ತಡೆಯಲಾರದೇ ಆ ಮರಿ ಇದ್ದ ಬಡಿಗೇರ್ ಮನೆಗೆ ಧಾವಿಸಿದೆ. ಸ್ವಲ್ಪ ಹೊತ್ತು ಹಾಗೆ ಆ ಮರಿಯ ತುಂಟಾಟವನ್ನು ನೋಡಿದೆ. ಮರಿಯನ್ನು ಎತ್ತಿದೆ, ಮುಟ್ಟಿದೆ, ಸುಮ್ಮನೇ ಇತ್ತು. ಒಮ್ಮೆ ಮಾತ್ರ ಬುಸ್ ಅಂತ ಬಾಯಿ ತೆಗಯಿತು. ಆಗಲೇ ನಾನು ಸ್ವಲ್ಪ ಹೆದರಿದೆ. ಅದು ಬುಸ್ ಅಂತ ಶಬ್ಗ ಮಾಡಿದಾಗ ಹತ್ತಿರದಲ್ಲೇ ಇದ್ದ ಮಗುವುಂತೂ ಕೀಟಾರನೆ ಚೀರಿತು. ಮನೆಯಲ್ಲಿದ್ದ ಕಾಮೆರಾದಿಂದ ನಮ್ಮ ಬಾ ಅದರ ಕೆಲವು ಪೋಟೋಗಳನ್ನು ಕ್ಲಿಕ್ಕಿಸಿದರು.
ನಮ್ಮ ಕೇರಿ ಕಾಮನಗಲ್ಲಿಗೆ ಮೊಸಳೆ ಬಂದ ಆ ದಿನ ತುಂಬಾ ಮಜವಾಗಿತ್ತು. ಎಲ್ಲರೂ ನಮ್ಮ ಕೇರಿಗೆ ಹೊಸಗೆಸ್ಟ್ ಬಂದಿದಾನೆ ಅಂತ ಅಂದುಕೊಂಡು, ನೋಡಿಕೊಂಡು, ಹೋಗುತ್ತಿದ್ದರು. ಎಲ್ಲರೂ ನೋಡಿದ ಮೇಲೆ ಬಡಿಗೇರ್ ಮನೆಯ ಶ್ರೀಧರಣ್ಣ ಅದನ್ನು ಮತ್ತೇ ವರದಾ ನದಿಗೆ ಬಿಟ್ಟರು. ನದಿಗೆ ಇಳಿದ ಆ ಮೊಸಳೆಮರಿ ಅಮ್ಮನನ್ನು ಹುಡುಕುತ್ತಾ ಯಾವ ಕಡೆಗೆ ಹೋಯಿತು ಗೊತ್ತಾಗಲಿಲ್ಲ. ಆ ಮೊಸಳೆ ಮರಿಯ ಅಪ್ಪ-ಅಮ್ಮ ಬನವಾಸಿಯಲ್ಲಿದ್ದರೋ, ಪಕ್ಕದ ಕಪಗೇರಿ,ಭಾಷಿ, ತಿಗಣಿಯಲ್ಲಿದ್ದರೋ...?
ಆದಷ್ಟು, ಅಮ್ಮನ ಮಡಿಲನ್ನ ಬೇಗ ಸೇರಿದರೆ ಸಾಕು!