Sunday, 16 December 2012

ಖ್ಯಾತ ಕಥೆಗಾರ ವೀರಭದ್ರರ ಬಗ್ಗೆ(ಕನ್ನಡದ ಪ್ರಖ್ಯಾತ ಹಿರಿಯ ಕಥೆಗಾರ ವೀರಭದ್ರರ ಎರಡನೇ ಕವನ ಸಂಕಲನ `ಮಂಕುಮಡೆಯನ ಕೊಂಕು ನುಡಿಗಳುಕವನ ಸಂಕಲನ ಕೃತಿ ಸುಮಾರು ಮೂವತ್ತು ವರ್ಷದ ನಂತರ ನಮ್ಮ ಪಂಚಮಿ ಮಾಧ್ಯಮ ಪ್ರಕಾಶನದ ಮೂಲಕ ಹೊರಬರುತ್ತಿದೆ. ಇಂತಹ ಮೇರು ಸಾಹಿತಿಯ ಕವನಸಂಕಲನವನ್ನು ಪ್ರಕಾಶನ ಮಾಡುತ್ತಿರುವುದು ನನ್ನ ಸುಯೋಗವೆಂದು ನಂಬಿದ್ದೇನೆ, ಅವರ ಜೊತೆಗಿನ ನನ್ನ ಪರಿಚಯ, ಒಡನಾಟ ಹಾಗೂ ಮಂಕು ಮಡೆಯನ ಕೊಂಕು ನುಡಿಗಳು ಕೃತಿಯ ಬಗೆಗಿನ ವಿಮರ್ಷೆ ನಾನು ಓದಿದಂತೆ…)
'ಖ್ಯಾತ ಕಥೆಗಾರ ವೀರಭದ್ರ ಅವರನ್ನು ಮೈಸೂರಿಗೆ ಹೋದಾಗ ಭೇಟಿ ಮಾಡಿಕೊಂಡು ಬರೋಣ' ಅಂತ ಆತ್ಮೀಯರು ಹಾಗೂ ಸಹೋದ್ಯೋಗಿಗಳಾಗಿರುವ ಕಗ್ಗೆರೆ ಪ್ರಕಾಶ್ ಒಮ್ಮೆ ಹೇಳಿದ್ದರು. ವೀರಭದ್ರರ ಹೆಸರನ್ನು ಸ್ವಲ್ಪಮಟ್ಟಿಗೆ ಕೇಳಿದ್ದೆನಾದರೂ, ಅವರನ್ನು ತುಂಬಾ ಹತ್ತಿರದಿಂದ ನೋಡಿರಲಿಲ್ಲ. ವೀರಭದ್ರರ ವ್ಯಕ್ತಿತ್ವ, ಸಾಧನೆ, ಅವರ ಜೊತೆಗಿನ ತಮ್ಮ ಮೈಸೂರಿನ ಒಡನಾಟದ ಸಂಪೂರ್ಣ ಮಾಹಿತಿಯನ್ನು ಲೇಖಕ ಕಗ್ಗೆರೆ ಪ್ರಕಾಶ್ ಹೇಳಿದಾಗ, ಅವರನ್ನು ನೋಡಲೇಬೇಕೆಂಬ ಕಾತುರ ನನ್ನಲ್ಲಿ ವಿಪರೀತ ಕಾಡಿತ್ತು. ಮೊದಲ ಬಾರಿಗೆ ಅವರ ಮನೆಗೆ ಹೋದ ಘಟನೆ ನನಗೆ ಇಂದಿಗೂ ನೆನಪಿದೆ. ನನ್ನನ್ನು ಕರೆದುಕೊಂಡು ಹೋಗಿದ್ದ ಕಗ್ಗೆರೆ ಪ್ರಕಾಶ್ ಕೂಡ ಅವರ ಮನೆಗೆ ಹೋಗಿದ್ದು 12 ವರ್ಷಗಳ ನಂತರ. ಆಗ ವೀರಭದ್ರ ಎಂಬ ಮೇರು ಕಥೆಗಾರ ನನ್ನ ಕಣ್ಣಿಗೆ ಮಹಾನ್ ಚೇತನವಾಗಿ  ಕಂಡಿದ್ದರು. ಮೊದಲ ಭೇಟಿಯಲ್ಲೇ ನನಗೆ ಇಷ್ಟವಾಗಿದ್ದು ಅವರ ದನಿ. ಅವರ ಮಾತಿನಲ್ಲಿ ಆಳ ಇತ್ತು. ಗಂಭೀರವದನರಾಗಿ, ಆಗಾಗ ಸಣ್ಣ ನಗೆ ಬೀರುತ್ತಾ, ನಮ್ಮ ಜೊತೆ ತುಂಬಾ ಹೊತ್ತು ಮಾತನಾಡಿದ್ದರು. ಅವರ ಸಾಹಿತ್ಯಕ ಚಟುವಟಿಕೆ ನಿಂತಿರಲಿಲ್ಲ. ತಮಗೆ ಬಂದ ಪುಸ್ತಕಗಳನ್ನು ಓದುತ್ತಿದ್ದರು, ತಿದ್ದುತ್ತಿದ್ದರು.

ಖ್ಯಾತ ಕಥೆಗಾರ ಡಾ. ಬೆಸಗರಹಳ್ಳಿ ರಾಮಣ್ಣ ವೀರಭದ್ರರ ಬಗ್ಗೆ ಬರೆದಂತೆ, `ಕನ್ನಡ ಸಣ್ಣಕತೆಯನ್ನು ಬೆಳೆಸಿದ ಮಾಸ್ತಿ, ಆನಂದ, ಕುವೆಂಪು, ಚದುರಂಗ, ಕಟ್ಟೀಮನಿ, ಲಂಕೇಶ್, ಅನಂತಮೂರ್ತಿ, ಯಶವಂತ ಚಿತ್ತಾಲ, ರಾಜಶೇಖರ ನೀರಮಾನ್ವಿ, ನಾಗವಾರ, ದೇವನೂರು ಮಹಾದೇವರಷ್ಟೇ ಮುಖ್ಯರಾದವರು ವೀರಭದ್ರ'. ಮಾತು ಅಕ್ಷರಶಃ ದಾಖಲೆಯಾಗುವಂತಹದ್ದು. ಒಬ್ಬ ಕಥೆಗಾರನಾಗಿ ಕನ್ನಡ ಸಾಹಿತ್ಯಕ ಪ್ರಪಂಚವನ್ನು ಬಹುಕಾಲು ಆಳಿದವರು. ಎಲ್ಲೋ ಒಂದು ಕಡೆ ಇಂಥ ಎಲೆಮರೆ ಕಥೆಗಾರನನ್ನು ಕನ್ನಡ ಸಾರಸ್ವತ ಲೋಕ ಮರೆತೇಬಿಟ್ಟಿದೆ ಎಂಬ ನೋವು ನಮ್ಮ ಕಾಣುತ್ತದೆ. ಅವರಿಗೆ ಸಿಗಬೇಕಾದ ಮಾನ್ಯತೆ ಸಿಕ್ಕಿಲ್ಲ. ಅಂಥ ಕಡೆಯೆಲ್ಲ ವಂಚಿಲ್ಪಟ್ಟಿದ್ದಾರೆ ಅನ್ನಿಸುತ್ತದೆ. ಇಂಥ ಕೃತಿಮತೆಯಿಂದ ಬೇಸತ್ತ ವೀರಭದ್ರರು ತಮ್ಮ ಪಾಡಿಗೆ ತಾವು ಬರೆಯುತ್ತಾ, ಓದುತ್ತಾ ಇದ್ದುಬಿಟ್ಟಿದ್ದಾರೆ. ಅಬ್ಬರ, ಆಡಂಬರ, ಪ್ರಚಾರಪ್ರಿಯತೆಯಿಂದ ದೂರವೇ ಉಳಿದುಬಿಟ್ಟಿದ್ದಾರೆ. ಆದರೆ, ಅವರ ಮುಖದರ್ಶನ ಜನರಿಗೆ ಅಷ್ಟಿಲ್ಲದಿದ್ದರೂ 'ವೀರಭದ್ರ' ಎಂಬ ಹೆಸರು ಮಾತ್ರ ಕನ್ನಡ ಸಾಹಿತ್ಯಕ ಲೋಕದಲ್ಲಿ ಚಿರಸ್ಥಾಯಿಯಾಗಿದೆ.
ವೀರಭದ್ರ ಹಾಗೂ ಅವರ ಶ್ರೀಮತಿ ಇಂದಿರಾ
ಲೋಹಿಯಾ ಪ್ರಕಾಶನ ಹೊರತಂದಿರುವ `ಅನಾಥ ಪಕ್ಷಿಯ ಕಲರವ' ವೀರಭದ್ರ ಅವರ ಸಮಗ್ರ ಕಥಾ ಸಂಕಲನ. ಇದನ್ನು ಓದಿದಾಗ ಅವರು ಕಥಾ ಪ್ರಪಂಚಕ್ಕೆ ಕಟ್ಟಿಕೊಟ್ಟಿರುವ ಅನುಭವವೇ ವಿಭಿನ್ನವಾದುದು. ಕಥೆ ಬರೆಯುವವರಿಗೆ, ಕಥೆಗಾರನಾಗಬೇಕೆಂದು ಗುರಿ ಇಟ್ಟುಕೊಂಡವರಿಗೆ ವೀರಭದ್ರರು ಗುರುವಾಗಬಲ್ಲರು, ಮಾರ್ಗದರ್ಶಕರಾಗಿ ಮುನ್ನಡೆಸಬಲ್ಲರು. ಇದು ಅವರ ಕತೆಗಳನ್ನು ಓದಿದ ನನ್ನ ಪ್ರಾಮಾಣಿಕ ಅನಿಸಿಕೆ ಅಷ್ಟೇ. ಇಂಥ ಪ್ರೇರಣೆಯಿಂದಲೇ 'ಅಮ್ಮನ ಆಟೋಗ್ರಾಫ್' ನನ್ನ ಮೊದಲ ಕಥಾ ಸಂಕಲನಕ್ಕೆ ವೀರಭದ್ರ ಅವರಿಂದಲೇ ಮುನ್ನುಡಿ ಬರೆಸಬೇಕೆಂದು ದೃಢ ನಿರ್ಧಾರ ಮಾಡಿಕೊಂಡಿದ್ದೆ
ವೀರಭದ್ರ ಅವರನ್ನು ಮೊದಲಿಗೆ ಭೇಟಿಯಾದ ನಾನು ಭಾವನಾತ್ಮಕ ಸೆಲೆಯಲ್ಲಿ ಸಿಲುಕಿಕೊಂಡುಬಿಟ್ಟಿದ್ದೆ. ವೀರಭದ್ರರ ಆದರ ಆತಿಥ್ಯ, ಪ್ರೀತಿಪೂರ್ವಕ ಮಾತುಗಳು ನಮ್ಮನ್ನು ಕಟ್ಟಿಹಾಕಿಬಿಟ್ಟಿದ್ದವು. ನಮ್ಮ ಸಂಸ್ಥೆಯ ಮೊದಲ ಪುಸ್ತಕ `ಕಲಾವಿದರ ಕಥಾನಕ' ಸಂಪೂರ್ಣ ಓದಿ ತಮ್ಮ ಅಭಿಪ್ರಾಯಗಳನ್ನು ಬರೆದುಕೊಟ್ಟಿರುವ ಅವರ ಹಸ್ತಾಕ್ಷರದ ಕೃತಿ ನಮ್ಮ ಜೊತೆ ನೆನಪಾಗಿ ಉಳಿದಿದೆ
ಎರಡನೆ ಭೇಟಿಯಲ್ಲೂ ಕೂಡ ಅದೇ ಆತ್ಮೀಯತೆ ವಿಶ್ವಾಸ. 'ನನ್ನ ಮೊದಲ ಕಥಾ ಸಂಕಲನಕ್ಕೆ ನಿಮ್ಮ ಮುನ್ನುಡಿ ಮಾತುಗಳನ್ನು ಬರೆಯಬೇಕು' ಎಂದು ಕೇಳಿಕೊಂಡಾಗ ವೀರಭದ್ರರು ಪ್ರೀತಿಯಿಂದ ಒಪ್ಪಿಕೊಂಡರು. ಇಂಥ ಸಂತಸದ ಕ್ಷಣದ ನಡುವೆ ನಮಗೆ ಸಿಕ್ಕಿದ್ದೇ ಇನ್ನೊಂದು ಚಿನ್ನದ ಗಣಿ. ಅದುವೇ `ಮಂಕು ಮಡೆಯನ ಕೊಂಕು ನುಡಿಗಳು'. 'ಅದನ್ನು ನಮಗೆ ನೀಡಬೇಕು, ನಾವೇ ಪ್ರಕಾಶನ ಮಾಡುತ್ತೇವೆ' ಅಂತ ಹೇಳಿದಾಗ ಅದಕ್ಕೂ ಕೂಡ ಅವರು ಇಲ್ಲವೆನ್ನಲಿಲ್ಲ. ಇದಕ್ಕಿಂತ ದೊಡ್ಡ ಪುಣ್ಯ ಇನ್ನೊಂದು ಇದೆಯೇ? ಖಂಡಿತ ಎಲ್ಲವೂ ನಮ್ಮ ಸೌಭಾಗ್ಯ ಅಂದುಕೊಂಡಿದ್ದೇನೆ. 'ಮಂಕು ಮಡೆಯನ ಕೊಂಕು ನುಡಿಗಳು' ಕನ್ನಡ ಕಾವ್ಯ ಪ್ರಪಂಚದಲ್ಲಿ ಸಾರ್ವಕಾಲಿಕವಾಗಿ ವಿಭಿನ್ನವಾಗಿ ಉಳಿಯುವಂತಹ ಕವನ ಸಂಕಲನ. ಬದುಕಿನ ಅರ್ಥ ಹಾಗೂ ಅನುಭವವನ್ನು  ನಾಲ್ಕೈದು ಸಾಲುಗಳಲ್ಲಿ ಹೇಳುವ ಪರಿ ನಿಜಕ್ಕೂ ಗ್ರೇಟ್! ಇದೊಂಥರ ಸಮುದ್ರವನ್ನು ಅಂಗೈನ ಬೊಗಸೆಯಲ್ಲಿ ಹಿಡಿಯುವ ಪ್ರಯತ್ನವನ್ನು ವೀರಭದ್ರರು ಮಾಡಿದ್ದಾರೆ. ಇದಕ್ಕೆ ಅವರ ಆರು ದಶಕಗಳ ಸಾಹಿತ್ಯಕ ಸೇವೆ, ಅನುಭವ ಹಾಗೂ ವಾಗ್ದೇವಿ ನೀಡಿದ ಪ್ರಚೋದನೆ ಇದ್ದರೂ ಇರಬಹುದು. ಅಪ್ರತಿಮ ಕಥನಗಾರಿಕೆ ನಡುವೆ ವೀರಭದ್ರ ಅವರಿಂದ ಅರಳಿದ ಕವನಗಳು, ಮುಂದೊಂದು ದಿನಗಳಲ್ಲಿ ಶರಣರ ನುಡಿಗಳಂತೆ, ವಚನಗಳಂತೆ, ಮಂಕುತಿಮ್ಮನ ಕಗ್ಗದಂತೆ, ಎಲ್ಲ ಜನರ ಬಾಯಿಯಲ್ಲಿ ನುಲಿಯುವ ದಿನಗಳು ಬರುತ್ತವೆ ಎಂಬುದು ನನ್ನ ನಂಬಿಕೆ. ಇಲ್ಲಿನ ಕವನಗಳನ್ನು ಓದಿದವರಿಗೆ ಮಂಕು ಮಡೆಯ ನಿಮ್ಮನ್ನು ಕಾಡಿಬಿಡುತ್ತಾನೆ, ನಿಮ್ಮೊಳಗೆ ಹೊಕ್ಕು ಅಡಗಿ ಕುಳಿತುಬಿಡುತ್ತಾನೆ. ಇಂಥ 'ಮಂಕು ಮಡೆಯನ ಕೊಂಕು ನುಡಿಗಳು' ಕವನ ಸಂಕಲನವನ್ನು ಪ್ರಕಾಶಿಸಲು ನೀಡಿದ ಶ್ರೀ ವೀರಭದ್ರ ಅವರಿಗೆ ಪಂಚಮಿ ಮೀಡಿಯಾ ಪಬ್ಲಿಕೇಷನ್ಜ್ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಮುಖ್ಯವಾಗಿ ಶ್ರೀ ವೀರಭದ್ರರ ಧರ್ಮಪತ್ನಿ ಶ್ರೀಮತಿ ಇಂದಿರಾ ಹಾಗೂ ಅವರ ಕುಟುಂಬದವರು ನೀಡಿದ ಸಂಪೂರ್ಣ ಸಹಕಾರವನ್ನು ಮೂಲಕ ನೆನಪಿಸಿಕೊಳ್ಳುತ್ತೇನೆ. ಪುಸ್ತಕಕ್ಕೆ ನನ್ನ ಜೊತೆ ಕೈಜೋಡಿಸಿದ ನಮ್ಮ ಅಂತರಂಗದ ಆತ್ಮೀಯರಾಗಿರುವ ಕಗ್ಗೆರೆ ಪ್ರಕಾಶ್ ಹಾಗೂ ಅವರ ಕುಟುಂಬ ವರ್ಗಕ್ಕೆ ಧನ್ಯವಾದಗಳು. ಸಾಹಿತ್ಯಕ ಕೆಲಸಕ್ಕೆ ಬೆನ್ನುಲುಬಾಗಿರುವ ನನ್ನ ಕುಟುಂಬ ವರ್ಗ, ಗುರು ವಲಯ, ಸ್ನೇಹಿತ ವಲಯ ಹಾಗೂ ಹಿತೈಷಿಗಳಿಗೆ ನಾನು ಸದಾ ಚಿರಋಣಿ.

ಮಂಕು ಮಡೆಯನ ಕೊಂಕು ನುಡಿಗಳು ಕೃತಿಯ ಬಗೆಗಿನ ನನ್ನ ಅನಿಸಿಕೆಗಳು


ಕನ್ನಡ ಸಾಹಿತ್ಯ ಲೋಕದ ಖ್ಯಾತ ಕಥೆಗಾರರಾಗಿರುವ ವೀರಭದ್ರ ಅವರ ಕವನ ಸಂಕಲನ ಅನೇಕ ವರ್ಷಗಳ ನಂತರ ಬರುತ್ತಿರುವುದು ಸಾಹಿತ್ಯಾಸಕ್ತರಾಗಿರುವ ನಮ್ಮಂಥ ಓದುಗರಿಗೆ ನಿಜಕ್ಕೂ ಸಂತಸದ ವಿಚಾರ. ಕಥೆಗಾರರಾಗಿ ಸುಮಾರು 5 ದಶಕಗಳಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಸೇವೆಯನ್ನು ನೀಡಿರುವ ಪ್ರೋ.ವೀರಭದ್ರ ಅವರ ಸಾಧನೆ ಅವಿಸ್ಮರಣಿಯ. ಇವರನ್ನು ಸಾಹಿತ್ಯಲೋಕದ  ಅಜಾತಶತ್ರುವೆಂದು ಕರೆಯುವುದು ಅವರ ಸಜ್ಜನಿಕೆ ಹಾಗೂ ವಿನಯವಂತಿಕೆಯನ್ನು ತೋರಿಸುತ್ತದೆ. ಮಂಕು ಮಡೆಯ ಕವನಗಳ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡು, ಅವುಗಳ ಬಗ್ಗೆ ನನ್ನ ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನಷ್ಟೇ.
ಇಡೀ ಕವನಸಂಕಲನವನ್ನು ನಾನು ಓದಿದಾಗ ನನಗೆ ಇಷ್ಟವಾಗಿದ್ದೇ, 'ಮಂಕುಮಡೆಯ' ಅನ್ನುವ ಪಾತ್ರದ ಕಲ್ಪನೆ. ಆರಂಭದ `ಭಕ್ತಿ ಪ್ರಣತಿ' ಕವನದಲ್ಲಿ ಆತನ ವ್ಯಕ್ತಿತ್ವ ಹಾಗೂ ಬಾಹ್ಯ ಲಕ್ಷಣಗಳನ್ನು ಕವಿಗಳು ರೀತಿ ವರ್ಣಿಸುತ್ತಾರೆ. `ನಾನಂತೂ ಹುಡುಗ, ಆದರೂ ತೊಟ್ಟಿರುವೆ ದೊಡ್ಡವರ ಅಂಗಿ, ರುಮಾಲು, ಹೊದ್ದಿರುವೆ ಶಾಲುಹಿಡಿದಿರುವೆ ಕೋಲು, ನುಡಿಯುತಿಹೆ ನಟಿಸುತಿಹೆ ಅಂಥವರ ಭಾವಭಂಗಿ' ಸಾಲಿನ ಮೂಲಕ ಮಂಕುಮಡೆಯನನ್ನು ಮನಸ್ಸಿನ ತುಂಬ ತುಂಬಿಕೊಂಡು, ಸಂಕಲನದ ಕವನಗಳನ್ನು ಓದುತ್ತಾ ಹೋದ ಮೇಲೆ ಒಂದೊಂದು ಕವನಗಳ ಮೂಲಕ ಅಚ್ಚರಿಯನ್ನು ವ್ಯಕ್ತಪಡಿಸುತ್ತಾ, ಹೊರಜಗತ್ತಿನ ಒಳಗಣ್ಣನ್ನು ತನ್ನ ಪದಬಂಧಗಳ ಮೂಲಕ ವರ್ಣಿಸುತ್ತಾ ಹೋಗುವ ಪರಿ ಸಂಕಲನದ ಶಕ್ತಿಯ ಆಳವನ್ನು ಪರಿಚಯಿಸುತ್ತದೆ. ಇಲ್ಲಿ ಮಂಕು ಮಡೆಯ ಎಲ್ಲ ವಿಷಯಗಳ ಬಗ್ಗೆಯೂ ಮಾತನಾಡಿದ್ದಾನೆ. ಸಮಾಜದ ಎಲ್ಲ ವಿಷಯಗಳಲ್ಲೂ ತನ್ನ ದೃಷ್ಟಿಕೋನವನ್ನು ಹರಿಸಿದ್ದಾನೆ. ಆತನ ಬಗ್ಗೆಯೂ ಎರಡು ಸಾಲುಗಳು ಸದಾ ಕಾಡುತ್ತವೆ. `ನಾನು ಕವಿಯಲ್ಲ, ಆದರೂ, ನಾನು ಸಂತಕವಿಗಳಲ್ಲಿ ಸಂತೆಕವಿ!,  ಸಂತೆಕವಿಗಳಲ್ಲಿ ನಾನು ಸಂತ ಕವಿ, ಎಂದನಾ ಮಂಕು ಮಡೆಯ' ಸಾಲುಗಳ ಮೂಲಕ ನಾನು ಮನಗಂಡಿದ್ದೇನಂದರೆ, ಮಂಕುಮಡೆಯನಿಗೆ ತನ್ನನ್ನು ನಿರ್ದಿಷ್ಟವಾದ ಗುಂಪಿನಲ್ಲಿ ಸೇರಿಕೊಳ್ಳಲು, ರೀತಿ ಕರೆಸಿಕೊಳ್ಳಲು ಇಷ್ಟವಿಲ್ಲದಂತೆ ಕಾಣುತ್ತದೆ. ತನ್ನನ್ನು ಅನುಕರಿಸುವ, ತನ್ನಂತೆ ಇರುವ, ಬದುಕುವ ಪ್ರಯತ್ನವನ್ನು ಮಾಡುವುದು ನೀವು ಕಷ್ಟ ಅಂತ ಆತ ಹೇಳುತ್ತಿರಬಹುದು. ಜೀವನದಲ್ಲಿ ಅರಿವಿಲ್ಲದೆಯೋ, ಗೊತ್ತಿದ್ದು ಅನೇಕ ತಪ್ಪುಗಳನ್ನು ನಾವು ಮಾಡುತ್ತಲೇ ಇರುತ್ತೇವೆ. ಹಾಗಂತ ಅವುಗಳ ಚಿಂತನೆಯಲ್ಲೇ ನಮ್ಮ ಜೀವನವನ್ನು ಕಳೆಯುವುದು ಅಷ್ಟ ಸರಿಯಲ್ಲ, ಜೀವನವನ್ನು ಪ್ರೀತಿಸಬೇಕು, ಗೆಲ್ಲಬೇಕು ಅನ್ನುವ `ಮೋಡದ ನೆರಳು' ಕವನದ ಸಾಲುಗಳು ರೀತಿಯಾಗಿವೆ. `ಬದುಕೆಂಬುದು ಬಿಸಿಲು ಮಳೆಗಳ ಖೋ ಖೋ, ಇಲ್ಲಾರೂ ಇಲ್ಲ ಸದಾ ಸುಖಿ, ನೆರಳಕಪ್ಪೆಯನು ಬಿಸಿಲ ಹೆಬ್ಬಾವು ನುಂಗಿ ನೊಣೆವುದ ಕಾಣು, ಸುಖವೆಂಬುದು ಬೇಸಗೆಯ ಕೊನೆಯಲಿ ಸುಳಿವ ಮೋಡದ ನೆರಳಿ ಎಂದನಾ ಮಂಕು ಮಡೆಯ' ಇನ್ನೊಂದು ಕವನದಲ್ಲಿ ದಾನಧರ್ಮವ ಮಾಡಿ ದೊಡ್ಡವನೆಂದು, ದಾನಶೂರನೆಂದು ಕರೆಸಿಕೊಳ್ಳುವುದಕ್ಕಿಂತ ದಾನವನ್ನು ಪಡೆದುಕೊಳ್ಳದೇ ಇರುವ ಸಮಾಜವನ್ನು ರೂಪಿಸುವ ಪ್ರಯತ್ನವನ್ನು ಮಾಡಬೇಕು ಅಂತ ಮಂಕು ಮಡೆಯ ಹೇಳುತ್ತಾನೆ. ನಿಜಕ್ಕೂ ಅದ್ಭುತ ಮಾತು, ಇಂದಿನ ಸಮಾಜಕ್ಕೆ. ಬಡತನ, ಹಸಿವು, ನಿರುದ್ಯೋಗ, ಇನ್ನು ಹಲವು ಸಾಮಾಜಿಕ ನೋವುಗಳನ್ನು ಇಲ್ಲದಂತೆ ಮಾಡಬೇಕು ಅನ್ನುವ ಆಶಯವನ್ನು ವೀರಭದ್ರರು ಮಂಕುಮಡೆಯನ ಮೂಲಕ ಇಂದಿನ ರಾಜಕೀಯ ವ್ಯಕ್ತಿಗಳಿಗೆ ಹೇಳುವ ಪ್ರಯತ್ನ ಮಾಡಿದ್ದಾರೆ.
ಇನ್ನೊಂದು ಕವನದಲ್ಲಿ ವೀರಭದ್ರರು ಒಂದು ಲೋಕಸತ್ಯದ ಒಳಗುಟ್ಟನ್ನು ಹೇಳಿದ್ದಾರೆ. `ನಿರಾಯಾಸವಾದರೂ ಅಡ್ಡದಾರಿಯ ಗೊಡವೆ ಬೇಡ, ಸಿರಿವಂತರ ಕೂಡೆ ಸ್ನೇಹವೆಂದಿಗೂ ಬೇಡ, ಕರುಳ ಬಳ್ಳಿಯವನಾದರೂ ಜಂಟಿ ವ್ಯಾಪಾರವೇ ಬೇಡ, ಕರುಬುವವರೊಡನಾಟ ಬೇಡವೇ ಬೇಡ ಕಂಡ್ಯಾ ಎಂದನಾ ಮಂಕು ಮಡೆಯ' ಸಾಲುಗಳು ಬಸವಣ್ಣನವರ 'ಕಾಯಕವೇ ಕೈಲಾಸ' ಹಗೂ ಸರ್ವಜ್ಞನ `ಬಲ್ಲವರ ಹಾವಸೆಯ | ಕಲ್ಲತಾ ಮೆಟ್ಟುವರೆ?| ಬಲ್ಲಿದರ ಒಡನೆ ಸೆಣೆಸಿ ಮಾತಾಡಿದರೆ| ಅಲ್ಲಿಯೆ ಕೇಡು ಸರ್ವಜ್ಞ||' ಉಕ್ತಿಗಳಿಗೆ ಇನ್ನಷ್ಟು ಪುಷ್ಠಿಯನ್ನು ನೀಡುತ್ತದೆ. `ಪಕ್ಷಪಾತಿ' ಕವನದಲ್ಲಿ ಇಂದಿನ ಸಮಾಜದಲ್ಲಿ ಕುಳ್ಳರನ್ನು ಕಂಡರೆ ಅನೇಕರಿಗೆ ಹಂಗಿಸುವ, ಕೊಂಕು ಮಾತನಾಡುವರೇ ಹೆಚ್ಚು. ಹಾಗಾಗಿ ತಾವು ಕುಳ್ಳರೆಂದು ಕರೆಸಿಕೊಳ್ಳಲು, ಸಮಾಜದಲ್ಲಿ ತಮ್ಮನ್ನು ಹೆಚ್ಚು ಗುರುತಿಸಿಕೊಳ್ಳುವಂತೆ ಮಾಡಲು ಕುಬ್ಜರು ಪ್ರಯತ್ನಮಾಡುವುದಿಲ್ಲ. ಏಕೆಂದರೆ ಅವರ ಮಾನಸಿಕ ಶಕ್ತಿಯನ್ನು ಅನೇಕರು ಅವರನ್ನು ಕುಳ್ಳ' ಅಂತ ಹಂಗಿಸುವ ಮೂಲಕ ಕಿತ್ತುಕೊಂಡಿರುತ್ತಾರೆ. ಇಂತವರ ನಡುವೆಯೂ ಅನೇಕರು ಸಾಧನೆ ಮಾಡಿದವರಿದ್ದಾರೆ. ಇದನ್ನೇ ಕವಿಗಳು' ವಿಷ್ಣುವಿನ ಅವತಾರಗಳಲ್ಲೊಂದಾದ ವಾಮನನನ್ನು ಉದಾಹರಿಸಿ ಹೇಳುತ್ತಾರೆ. ಬಲಿ ಚಕ್ರವರ್ತಿಗೆ ಮೂರು ಹೆಜ್ಜೆ ಕೇಳಿದ ಕುಬ್ಜ ಆಕಾರದ ವಾಮನಮೂರ್ತಿಯನ್ನು ನೀವೆಲ್ಲಾ ಮೆಚ್ಚುತ್ತೀರಿ, ಆದರೆ ನಿಮ್ಮ ಸುತ್ತಲಿನ ವಾಮನಮೂರ್ತಿಯಂತಿರುವ ಕುಳ್ಳರನ್ನು ಕಂಡರೆ ನಿಮಗ್ಯಾಕೆ ಕೊಂಕು? ಏಕೆ ಅವಹೇಳನ ಮಾತುಗಳು? ಅಂತ ಕೇಳಿದ್ದಾರೆ. ಇದು ನಿಜಕ್ಕೂ ಅದ್ಭುತ ಹೋಲಿಕೆಯ ಮಾತುಗಳು.
'ಮಂಕು ಮಡೆಯನ ಕೊಂಕು ನುಡಿಗಳು' ಸಂಕಲನದ ಎಲ್ಲ ಕವನಗಳು ನಮ್ಮನ್ನು ಒಂದು ಸಣ್ಣ ಚಿಂತನೆಗೆ ಈಡುಮಾಡುತ್ತವೆ. ನಮ್ಮ ಬಗ್ಗೆ ನಾವು ಸರಿಯೋ? ತಪ್ಪು ದಾರಿಯಲ್ಲಿ ಸಾಗುತ್ತಿರುವೆಯೇ? ಅಂತ ನಮ್ಮನ್ನು ನಾವೇ ಕೇಳುವಂತೆ ಮಾಡುತ್ತವೆ. ಕವನದ ಸಾಲುಗಳು ಬೆರಳಣಿಕೆಯಷ್ಟಾದರೂ, ಅವುಗಳು ಹೇಳುವ ಅರ್ಥದ ಆಳವನ್ನು ಅಳೆಯುವುದು ತುಂಬಾ ಕಷ್ಟ. ಪ್ರತಿ ಕವನಗಳು, ಒಬ್ಬೊಬ್ಬರಿಗೂ ಒಂದೊಂದು ರೀತಿಯಲ್ಲಿ ಅಥೈಸಿಕೊಳ್ಳಬಹುದು. ಸರ್ವಜ್ಞನ ತ್ರಿಪದಿಗಳು, ಮಂಕುತಿಮ್ಮನ ಕಗ್ಗದ ಸಾಲುಗಳು ಇಂದಿಗೂ ಹೊಸ ಹೊಸ ತಾತ್ಪರ್ಯವನ್ನು ಪಡೆದುಕೊಳ್ಳುತ್ತಿವೆ. ಕಥೆಗಾರ ಶ್ರೀವೀರಭದ್ರರ ಸೃಷ್ಟಿಸಿದ ಮಂಕು ಮಡೆಯನ ಪಾತ್ರ ನಿಜಕ್ಕೂ ನನಗೆ ವೈಯಕ್ತಿಕವಾಗಿ ತುಂಬಾ ಇಷ್ಟವಾಯಿತು. ಎಲ್ಲ ಕವನಗಳನ್ನು ತುಂಬಾ ಇಷ್ಟಪಟ್ಟು ಓದಿದೆ. ಕನ್ನಡ ಸಾಹಿತ್ಯದಲ್ಲಿ ಮಂಕುಮಡೆಯನಿಗೆ ಖಂಡಿತ ಒಳ್ಳೆಯ ಸ್ಥಾನ ಸಿಗಲಿದೆ