Thursday, 18 April 2013

ಡಾ.ರಾಜ್ ಕುಮಾರ್ ಅವರು ಸಿಗರೇಟ್ ಸೇದೊದನ್ನ ಬಿಟ್ಟ ವಿಶಿಷ್ಟ ಕಥೆ


ಎಪ್ರೀಲ್-24. ರಾಜ ಸ್ಮರಣೆ

ಹೆಚ್ಚಿನವರಿಗೆ ಇಂದಿಗೂ ಡಾ.ರಾಜ್ ಕುಮಾರ್  ರವರು ಒಂದು ಕಾಲದಲ್ಲಿ ಸಿಗರೇಟು ಸೇದುತ್ತಿದ್ದರು ಅಂದರೆ ಖಂಡಿತ ನಂಬಲಾರರು. ಏಕೆಂದರೆ  ಅಣ್ಣಾವ್ರು  ಸಿಗರೇಟು ಸೇದುತ್ತಿದ್ದ ವಿಷಯ ಎಲ್ಲೂ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿಲ್ಲ. ತಮ್ಮ ಸಿನಿಮಾಗಳಲ್ಲಿ ಸಿಗರೇಟು, ಮದ್ಯ ಇವುಗಳನ್ನು ವಿರೋಧಿಸುತ್ತಲೇ ರಾಜ್ ಕುಮಾರ್  ರವರು ಸಿನಿಮಾ ಮಾಡಿದವರು. ಸಾಮಾನ್ಯವಾಗಿ ಎಲ್ಲ ದುರಂತ ನಾಯಕರುಗಳ ಕೈಯಲ್ಲಿ ಸಿಗರೇಟು, ವಿಸ್ಕಿ ಗ್ಲಾಸು ಕಾಣಿಸಿಕೊಂಡರೂ, ರಾಜ್ ಸಿನಿಮಾಗಳಲ್ಲಿ ಮಾತ್ರ ಇದ್ಯಾವುದು ಆಗಲೇ ಇಲ್ಲ.  1964ರಲ್ಲಿ ತೆರೆಕಂಡ `ಚಂದವಳ್ಳಿ ತೋಟ' ಸಿನಿಮಾದ ಒಂದು ಸನ್ನಿವೇಶದಲ್ಲಿ  ಮಾತ್ರ ರಾಜ್ ಅವರ ಬಾಯಲ್ಲಿ ಬೀಡಿ ಸೇದೊದನ್ನು ಕಾಣಬಹುದು. ಚಿತ್ರದ ಪಾತ್ರವೇ  ಬೀಡಿ ಸೇದೊದನ್ನ ಕೇಳಿರಬಹುದು. ಇದನ್ನು ಹೊರತಾಗಿ ಬಹಳಷ್ಟು ಸಿನಿಮಾಗಳಲ್ಲಿ ನಾಯಕನಿಗೆ ಅಂತಹ ಸಂದರ್ಭ ಬಂದಿದ್ದರೂ, ರಾಜ್ ಕುಮಾರ್  ರವರು ಮಾತ್ರ ಪಾತ್ರಧಾರಿಯಾಗಿ, ಸಿಗರೇಟು ಹಾಗೂ ಬಾಟಲುಗಳಿಂದ ದೂರವೇ ಇದ್ದಿದ್ದರು. ಇದು ಒಂದು ರೀತಿಯಲ್ಲಿ ಸಮಾಜಕ್ಕೆ ಒಂದು ಆದರ್ಶವನ್ನು  ತಮ್ಮ ಸಿನಿಮಾಗಳ ಮೂಲಕ ಬಿತ್ತುವ ಕೆಲಸವನ್ನು ಅಣ್ಣಾವ್ರು ಮಾಡಿದ್ದರು. ಅವರ ಸಿನಿಮಾಗಳೆಂದರೆ ಇಡೀ ಕುಟುಂಬದ ನೆಚ್ಚಿನ ಸಿನಿಮಾ ಅಂತ ಕರೆಸಿಕೊಳ್ಳುತ್ತಿದ್ದವು. ಇನ್ನು ಖಾಸಗಿಯಾಗಿ ಹೇಳಬಹುದಾದ ಮಾತೆಂದರೆಸಿನಿಮಾ ಅಥವಾ ಇನ್ಯಾವುದೋ ಉದ್ಯಮದ ಎಂತಹ ದೊಡ್ಡ ವ್ಯಕ್ತಿಯಾದರೂ ರಾಜ್ ಕುಮಾರ್  ಎದುರಿಗೆ ನಿಂತು ಸಿಗರೇಟು ಸೇದುವ ಧೈರ್ಯ ಮಾಡುತ್ತಿರಲಿಲ್ಲ. ಅವರ ಜೊತೆ ಇದ್ದಷ್ಟು ಸಮಯವೂ ತುಂಬಾ ಗೌರವದಿಂದ ನಡೆದುಕೊಳ್ಳುತ್ತಿದ್ದರು. ಅವರ ಶೂಟಿಂಗ್ ನಡೆಯುವಾಗಲೂ ಕೂಡ ಸೆಟ್ನಲ್ಲಿ ಇದಕ್ಕೆ ಅವಕಾಶವಿರಲಿಲ್ಲ. ಯಾರಿಗೂ ಕೇರ್ ಮಾಡದಂತಹ ಗುಣದ ರೆಬೆಲ್ ಸ್ಟಾರ್ ಅಂಬರೀಷ್ ಕೂಡ ರಾಜ್ ಕುಮಾರ್  ಎದುರಿಗೆ ಸಿಗರೇಟ್ ಸೇದಲಾಗದೇ ದೂರದಲ್ಲಿ ನಿಂತು ಅವರಿಗೆ ಕಾಣದೇ ಹೊಡೆಯುತ್ತಿದ್ದರು. ರಾಜ್ ಕುಮಾರ್  ರವರು ಸಿಗರೇಟ್ ಸೇದದೇ ಇರೋದರ ಹಿಂದೆ ಇಷ್ಟೆಲ್ಲಾ ಕಥೆಯಿದ್ದರೂ, ಒಂದು ಕಾಲದಲ್ಲಿ  ಅವರು ಸಿಗರೇಟ್ ಸೇದುತ್ತಿದ್ದ ಸಣ್ಣ ಕಥೆಯಿದೆ. ಯಾಕೋ ಅವರಿಗೆ ತಾವು ಸಿಗರೇಟು ಸೇದುವುದು ಸರಿಕಾಣಲಿಲ್ಲಸಿಗರೇಟು ಬಿಡುವುದಾಗಿ ಧೃಡ ನಿರ್ಧಾರ ಮಾಡಿಯೇ ಬಿಟ್ಟರು. ನಂತರ ಕೊಟ್ಯಂತರ ಅವರ ಅಭಿಮಾನಿಗಳಿಗೆ ಒಂದು ರೀತಿಯಲ್ಲಿ ಆದರ್ಶಪ್ರಾಯರಾದರು

ಈಗಿನವರಿಗೆ ಒಮ್ಮೆ ಆಶ್ಚರ್ಯವಾಗಬಹುದು. ರಾಜ್ ಕುಮಾರ್  ರವರ  ಕೈಯಲ್ಲಿ ಖಂಡಿತ ನಾವು ಸಿಗರೇಟನ್ನು ಕಲ್ಪನೆ ಮಾಡಿಕೊಳ್ಳಲಾಗುವುದಿಲ್ಲ. ಮಹಾತ್ಮಾ ಗಾಂಧೀಜಿ ಕೂಡ ಬೀಡಿ ಸೇದಿ ಅದನ್ನು ತಂದೆಯ ಹತ್ತಿರ ಒಪ್ಪಿಕೊಂಡು, ನಂತರ ಜೀವನದಲ್ಲಿ ಸತ್ಯಮಾರ್ಗದಲ್ಲಿ ನಡೆಯುತ್ತೇನೆ ಅಂತ ತಂದೆಗೆ ಹೇಳಿದ ಘಟನೆಯನ್ನು ನಾವೆಲ್ಲಾ ಪಠ್ಯದಲ್ಲಿ ಓದಿದ್ದೇವೆ. ಅದೇ ರೀತಿ ರಾಜ್ ಕುಮಾರ್  ರವರ  ಅವರ ಜೀವನದಲ್ಲಿ ಕೂಡ ಒಂದು ಘಟನೆ ನಡೆಯಿತು

ಅಣ್ಣಾವ್ರು ಚಿತ್ರರಂಗಕ್ಕೆ ಬಂದು ಸುಮಾರು ವರ್ಷಗಳಾಗಿದ್ದವು. ಆಗಲೇ ಒಳ್ಳೊಳ್ಳೆಯ ಸಿನಿಮಾಗಳಲ್ಲಿ ಕಾಣಿಸಿಕೊಂಡು ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಮೊದಲಿನಿಂದಲೂ ರಾಜ್ಕುಮಾರ್ ಅವರನ್ನು ಜನರು ದೇವರ ರೀತಿಯಲ್ಲಿ ಕಾಣುತ್ತಿದ್ದರುಆಗ ರಾಜ್ ಕುಮಾರ್  ರವರು ದಿನಕ್ಕೆ ಒಂದೋ ಎರಡೋ ಸಿಗರೇಟುಗಳನ್ನು ಸೇದುವ ಚಟವಿತ್ತು. ಅಕಸ್ಮಾತಾಗಿ ಅವರು ಸಿಗರೇಟು ಸೇದುವುದನ್ನು ಕಂಡಾಗ ಅವರ ಅಭಿಮಾನಿಗಳು `ಏನಣ್ಣಾ ನಿಮ್ಮ ಕೈಲಿ ಸಿಗರೇಟ್ ಚೆನ್ನಾಗಿ ಕಾಣಲ್ಲ... ದಯವಿಟ್ಟು ಇದು ಬೇಡಿ' ಅಂತ ಹೇಳಿದ್ದರು.  ಅಂದಿನಿಂದ ರಾಜ್ಕುಮಾರ್ ಯಾರಿಗೂ ಕಾಣದೇ ತಮ್ಮ ಗ್ರೀನ್ ರೂಮ್ನಲ್ಲೋ, ತಮ್ಮ ಖಾಸಗಿ ರೂಮ್ನಲ್ಲೋ ಅಪರೂಪಕ್ಕೆ ಸೇದುತ್ತಿದ್ದರು. ಹೀಗಿರುವಾಗ ಒಂದು ಘಟನೆ ನಡೆಯಿತುರಾಜ್ಕುಮಾರ್ ಅವರಿಗೆ ಸತ್ಯನಾರಾಯಣ ಅನ್ನುವ ಬಾಲ್ಯದ ಗೆಳೆಯರಿದ್ದರು. ಇವರು ರಾಜ್ ಕುಮಾರ್   ಸಿಗರೇಟು ಸೇದೊದನ್ನು ಒಮ್ಮೆ ನೋಡಿಬಿಟ್ಟರು. ಅವರಿಗೆ ತಮ್ಮ ಸ್ನೇಹಿತನ ಕೈಯಲ್ಲಿ ಸಿಗರೇಟ್ ಇದ್ದುದನ್ನು ಕಂಡು ಆಶ್ಚರ್ಯವಾಯಿತು. ತನ್ನ ಸ್ನೇಹಿತ ಮುತ್ತುರಾಜನ ಕೈಯಲ್ಲಿ ಸಿಗರೇಟು ಇದ್ದದ್ದನ್ನು ಕಲ್ಪನೆ ಕೂಡ ಮಾಡಿಕೊಳ್ಳಲಾಗದ ಸತ್ಯನಾರಾಯಣ, ಅಣ್ಣಾವ್ರ ಎದುರಿಗೆ ಬಂದು ಜಬರ್ದಸ್ತಾಗಿ ಒಂದು ಮಾತು ಹೇಳೇಬಿಟ್ಟರು. `ನಿಮ್ಮ ಅಪ್ಪಾಜಿ ಬದುಕಿದ್ರೆ ಸಿಗರೇಟು  ನೀನು  ಸೇದುತ್ತಿದ್ದೇಯಾ?' ಅಂತ ಕೇಳಿದಾಗ, ಅಣ್ಣಾವ್ರಿಗೆ ಸ್ನೇಹಿತನ ಮಾತು ವಿಪರೀತ ನೋವನ್ನುಂಟು ಮಾಡಿತು. ಅವರಿಗೆ ಅವರ ತಂದೆಯೇ ಬಂದು ಕಪಾಳಕ್ಕೆ ಹೊಡೆದ ಹಾಗೆ ಅನಿಸಿತ್ತು. ಸ್ನೇಹಿತನ ಮೂಲಕ ತಮ್ಮ ತಂದೆಯೇ ಮಾತನ್ನು ಹೇಳಿದ್ದಾರೆ ಅಂತ ಅಂದುಕೊಂಡರು. ಅವರಿಗೆ ಅಂದು  ಸತ್ಯದರ್ಶನವಾಯಿತು. ರಾಜ್ಕುಮಾರ್ ಅವ್ರಿಗೆ ಮೊದಲಿನಿಂದಲೂ ತಂದೆ ಪುಟ್ಟಸ್ವಾಮಯ್ಯರೆಂದರೆ ವಿಪರೀತ ಭಕ್ತಿ, ಭಯ ಅಷ್ಟೇ ದೊಡ್ಡ ಗೌರವವನ್ನಿಟ್ಟುಕೊಂಡಿದ್ದರು. ತಂದೆ ಮಾತನ್ನು ಯಾವುದೇ ಕಾರಣಕ್ಕೂ ಮೀರುತ್ತಿರಲಿಲ್ಲ. ಪುಟ್ಟಸ್ವಾಮಯ್ಯನವರು ತೀರಿಕೊಂಡಾಗ ರಾಜ್ ಕುಮಾರ್  ಗೆ   22 ವರ್ಷವಾಗಿತ್ತು. ಮನೆಯಲ್ಲಿ ವಿಪರೀತ ಬಡತನವಿತ್ತು. ಹೀಗಿದ್ದರೂ ತಂದೆ ಆಸೆಪಟ್ಟಂತೆ ಅಭಿನಯದಲ್ಲೇ ಮುಂದುವರೆದರು. ದೊಡ್ಡ ದೊಡ್ಡ ಸಂಬಂಧಗಳು ಬಂದಿದ್ದರೂ, ತಂದೆ ನೋಡಿ, ಅವಳೇ ನನ್ನ ಸೊಸೆ ಅಂತ ಹೇಳಿದ್ದ ಅಪ್ಪಾಜಿ ಗೌಡರ ಮಗಳಾದ ಪಾರ್ವತಿಯನ್ನೇ (ಪಾರ್ವತಮ್ಮ ರಾಜ್ಕುಮಾರ್) ಮದುವೆಯಾದರು. ಇದೆಲ್ಲಾ ತಂದೆಯ ಮೇಲೆ ಇಟ್ಟಿದ್ದ ಪ್ರೀತಿಗೆ ಉದಾಹರಣೆಗಳಾಗಿದ್ದವು.
ದಿನ ಸ್ನೇಹಿತ ಸತ್ಯನಾರಾಯಣ ಹೇಳಿದ ಮಾತು ರಾಜ್ ಕುಮಾರ್  ಅವರಿಗೆ ಎಷ್ಟು ಪ್ರಭಾವ ಬೀರಿತು ಅಂದರೆ, ಅಂದು ನೆಲಕ್ಕೆ ಹಾಕಿದ ಸಿಗರೇಟನ್ನು ರಾಜ್ ಕುಮಾರ್  ರವರು ಮತ್ತೇ ತಿರುಗಿ ನೋಡಲಿಲ್ಲ. ಅಪರೂಪಕ್ಕೆ ಸಿಗರೇಟು ಸೇದುತ್ತಿದ್ದ ಅವರು, ಸಂಪೂರ್ಣವಾಗಿ ಬಿಟ್ಟುಬಿಟ್ಟರು. ಅವರ ಸಿನಿಮಾಗಳಲ್ಲಿ ಕೂಡ ಸೇದಲಿಲ್ಲ. ಪಾತ್ರಕ್ಕೆ ಅವಶ್ಯಕತೆ ಇದ್ದರೂ ನಿರ್ದೇಶಕರು, ನಿರ್ಮಾಪಕರು ಅವರಿಗೆ ಬಲವಂತ ಮಾಡಲಿಲ್ಲ. ಅವರ ಜೊತೆ ಇದ್ದವರೂ, ಅವರಿಂದ ಪ್ರೇರಿತರಾದವರೂ ಕೂಡ ಸಿಗರೇಟು, ಮದ್ಯ ಮುಟ್ಟೋದನ್ನು ಬಿಟ್ಟರು. ಹಾಗಿತ್ತು ರಾಜ್ ಕುಮಾರ್  ರವರ  ವ್ಯಕ್ತಿತ್ವ. ಕರ್ನಾಟಕದ  ಬಹಳಷ್ಟು  ಕಡೆ ಕೆಲವು ಬೀಡಿ ಕಂಪನಿಗಳು ರಾಜ್ಕುಮಾರ್  ಬೀಡಿ ಸೇದುವುದನ್ನು  ಚಿತ್ರ ಬಿಡಿಸಿ ತಮ್ಮ ಮಾರುಕಟ್ಟೆಗೆ ಬಳಸಿಕೊಂಡಿದ್ದನ್ನು ಕಂಡು  ರಾಜ್ ಕುಮಾರ್ ತುಂಬಾ ನೊಂದಿದ್ದರು.

`ತಪ್ಪು ಮಾಡುವುದು ಸಹಜ, ಆದರೆ ತಪ್ಪನ್ನ  ತಿದ್ದಿಕೊಂಡು ನಡೆಯುವವನು ದೊಡ್ಡವನೆನಿಸಿಕೊಳ್ಳುತ್ತಾನೆ' ಉದಯಶಂಕರ್ ಬರೆದ ಸಂಭಾಷಣೆಯ ಸಾಲುಗಳು, ರಾಜ್ ಕುಮಾರ್  ರವರ  ಅನುಭವದ ಸೆಲೆಯಲ್ಲಿ ಅವರ ಬಾಯಿಯಿಂದ ಕೇಳುವುದೆಂದರೆ ಏನೋ ದೊಡ್ಡ ಖುಷಿ.