`ವಿಶ್ವಕ್ರಿಕೆಟ್ ನಲ್ಲಿ ಕರ್ನಾಟಕದ ಆಟಗಾರರು’ ಪುಸ್ತಕ ಅನಾವರಣ
ನಮ್ಮ ಸಂಸ್ಥೆಯ ಹಿತೈಷಿಗಳು ಮತ್ತು ನನ್ನ ಆತ್ಮೀಯರು ಆಗಿರುವ ಚನ್ನಗಿರಿ ಕೇಶವಮೂರ್ತಿಯವರು ಕ್ರಿಕೆಟ್ ಅಂಕಿ ಅಂಶ ಕ್ಷೇತ್ರದಲ್ಲಿ ನಮ್ಮ ದೇಶದಲ್ಲೇ ಅತ್ಯಂತ ವಿಶಿಷ್ಟ ಸಾಧನೆಯನ್ನು ಮಾಡಿದವರು. ಇಂದಿಗೂ ಪ್ರತಿದಿನ ಸುಮಾರು 18 ಗಂಟೆಗಳ ಕಾಲ ಕ್ರಿಕೆಟ್ ಅಂಕಿ ಅಂಶಗಳ ಕುರಿತು ದಾಖಲೆಗಳ ಕ್ರೋಢಿಕರಣ, ಪತ್ರಿಕೆಗಳಿಗೆ ಅಂಕಿಅಂಶಗಳ ಕುರಿತು ಲೇಖನ, ಸಂಶೋಧನೆ ಮತ್ತು ಕ್ರಿಕೆಟ್ ಕುರಿತ ಗ್ರಂಥಗಳ ರಚನೆಯಲ್ಲಿ ಸದಾ ತೊಡಗಿಕೊಂಡಿದ್ದಾರೆ. 78ರ ಈ ಇಳಿವಯಸ್ಸಿನಲ್ಲೂ ಅವರ ಈ ಹುಮ್ಮಸ್ಸನ್ನು ಎಂತವರಾದರೂ ಮೆಚ್ಚುವಂತಹದ್ದು. ಹಾಗಾಗಿಯೇ ಇವರನ್ನು `ಕ್ರಿಕೆಟ್ ಅಂಕಿ ಅಂಶಗಳ ಲಿಟ್ಲ್ಮಾಸ್ಟರ್' ಮತ್ತು `ದೇಸಿ ಕ್ರಿಕೆಟ್ನ ಗೂಗಲ್' ಅಂತ ಗೌರವದಿಂದ ಕರೆಯುತ್ತಾರೆ. ಕ್ರೀಡಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಒಳ್ಳೆಯ ಮಾಹಿತಿಪೂರ್ಣ ಗ್ರಂಥವನ್ನು ಮಾಡಬೇಕೆಂಬುದು ನಮ್ಮ ಸಂಸ್ಥೆಯ ಅಭಿಲಾಷೆಯಾಗಿತ್ತು. ನಮ್ಮ ಈ ಆಸೆಯನ್ನು ಕೇಶವಮೂರ್ತಿಯವರ ಹತ್ತಿರ ಕೇಳಿಕೊಂಡಾಗ ಸತತ ಎರಡು ವರ್ಷಗಳ ಕಾಲ ಅಧ್ಯಯನ ಮಾಡಿ, ವಿಶ್ವಕ್ರಿಕೆಟ್ನಲ್ಲಿ ಮಿಂಚಿದ ಕರ್ನಾಟಕದ 29 ಪ್ರಸಿದ್ಧ ಶ್ರೇಷ್ಟ ಆಟಗಾರರ ಪರಿಚಯ ಮತ್ತು ಸಾಧನೆಯನ್ನು ಅಂಕಿಅಂಶಗಳ ಮೂಲಕ ರಚಿಸಿದ ಈ ಗ್ರಂಥವನ್ನು ಸಂಸ್ಥೆಯ ಪ್ರಕಾಶನಕ್ಕೆ ನೀಡಿದರು. ಇಂತಹ ಶ್ರೇಷ್ಟ ಕೃತಿಯನ್ನು ಪ್ರಕಾಶನ ಮಾಡಲು ಅನುಮತಿಯನ್ನು ನೀಡಿರುವುದು ನಮ್ಮ ಭಾಗ್ಯವೇ ಸರಿ.
ನಮ್ಮ ಸಂಸ್ಥೆ ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್ ಪ್ರಕಟಿಸಿರುವ `ವಿಶ್ವಕ್ರಿಕೆಟ್ನಲ್ಲಿ ಕರ್ನಾಟಕದ ಆಟಗಾರರು’ ಈ ಗ್ರಂಥವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿರುವ ಪಿ.ಆರ್ .ಅಶೋಕ್ ಆನಂದ್ ಅವರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅನಾವರಣ ಮಾಡಿದರು. ಉಳಿದಂತೆ ಕ್ರಿಕೇಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಬ್ರಿಜೇಶ್ ಪಟೇಲ್ ಅವರಿಗೆ ಮತ್ತು ಭಾರತೀಯ ಕ್ರಿಕೇಟ್ನ ಮಾಸ್ಟರ್ ಪೀಸ್ ಆಟಗಾರರಾಗಿರುವ ಬಿಎಸ್ ಚಂದ್ರಶೇಖರ್ ಅವರ ಮನೆಗೆ ಹೋಗಿ ಆಟಗಾರರ ಪರವಾಗಿ ಮೊದಲ ಕೃತಿಯನ್ನು ಗೌರವದಿಂದ ನೀಡಲಾಯಿತು.
`ವಿಶ್ವಕ್ರಿಕೆಟ್ ನಲ್ಲಿ ಕರ್ನಾಟಕದ ಆಟಗಾರರು' ಈ ಬೃಹತ್ಗ್ರಂಥ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಪಟ್ಟ ಮಹತ್ವಪೂರ್ಣ ಮತ್ತು ಸಂಗ್ರಹ ಯೋಗ್ಯ ಕೋಶವೆಂದರೆ ತಪ್ಪಾಗಲಾರದು. ಗ್ರಂಥದಲ್ಲಿರುವ ಜಗತ್ಪ್ರಸಿದ್ದ ಆಟಗಾರರಾಗಿರುವ ಜಿ ಆರ್ ವಿಶ್ವನಾಥ್, ಚಂದ್ರಶೇಖರ್, ಪ್ರಸನ್ನ, ಕುಂಬ್ಳೆ, ಶ್ರೀನಾಥ್, ದ್ರಾವಿಡ್ರಂತಹ ಕ್ರಿಕೆಟರ್ಗಳ ಜೀವನಚರಿತ್ರೆಯನ್ನು ಸಂಪೂರ್ಣವಾಗಿ ಓದಲಾಗದಿದ್ದವರು, ಈ ಗ್ರಂಥದ ಮೂಲಕ ತುಂಬಾ ಸರಳವಾಗಿರುವ ಅವರ ಜೀವನ ಮತ್ತು ಸಾಧನೆಯನ್ನು ತಿಳಿದುಕೊಳ್ಳಬಹುದಾಗಿದೆ. ಹಾಗಾಗಿಯೇ ಈ ಗ್ರಂಥ ಓದುಗರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಲೇಖಕರು ಈ ಗ್ರಂಥದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ 29 ಶ್ರೇಷ್ಟ ಆಟಗಾರರ ಸಂಪೂರ್ಣ ಪರಿಚಯ ಮತ್ತು ಸಾಧನೆಯನ್ನು ಹೇಳುವ ಮೂಲಕ, ಅವರಿಗೆ ಬಹುದೊಡ್ಡ ಗೌರವವನ್ನು ಸಲ್ಲಿಸಿದ್ದಾರೆ. ಈ ಗ್ರಂಥದ ರಚನೆಯನ್ನು ಒಂದು ತಪಸ್ಸಿನಂತೆ ಆಚರಿಸಿರುವ ಲೇಖಕರು ಆಟಗಾರರ ಸಾಧನೆಯ ಸಮಾನರಾಗಿ ನಮಗೆ ಕಾಣುತ್ತಾರೆ. ಕ್ರಿಕೇಟ್ ಪ್ರೇಮಿಗಳಿಗೆ ಓದುಗರಿಗೆ, ಇಂತಹ ಮಹತ್ವಪೂರ್ಣ ಕೃತಿಯನ್ನು ರಚಿಸಿಕೊಟ್ಟಿರುವ ಚನ್ನಗಿರಿ ಕೇಶವಮೂರ್ತಿಯವರಿಗೆ ಸಂಸ್ಥೆಯ ಅಭಿನಂದನೆಗಳು. ಈ ಕೃತಿಯ ಆರಂಭದಿಂದ ಇಂದಿನವರೆಗೆ ನನ್ನ ಜೊತೆ ಹೆಗಲು ಕೊಟ್ಟು ದುಡಿದಿರುವ ಸಹೋದ್ಯೋಗಿ, ಶ್ರೀ ಕಗ್ಗೆರೆ ಪ್ರಕಾಶ್ ಅವರಿಗೂ ಕೂಡ ವಂದನೆಗಳು. ಈ ಗ್ರಂಥಕ್ಕೆ ಮುಖಪುಟ ಡಿಸೈನ್ ಮಾಡಿದ ಪ್ರದೀಪ್ ಶಾನಭೋಗ್, ಒಳಪುಟಗಳನ್ನು ಅಂದವಾಗಿಸಿದ ಶ್ರೇಷಾದ್ರಿ ಧನಗುರು, ಸುಂದರವಾಗಿ ಪ್ರಿಂಟ್ ಮಾಡಿದ ಮುದ್ರಕರನ್ನು ಈ ಕ್ಷಣ ನೆನಪಿಸಿಕೊಳ್ಳುತ್ತೇನೆ. ಎಂದಿನಂತೆ ಓದುಗರ ಪ್ರೋತ್ಸಾಹವಿಲ್ಲದೆ ಇದ್ದರೆ, ಖಂಡಿತ ಈ ಗ್ರಂಥ ಯಶಸ್ವಿಯಾಗಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರು ಈ ಗ್ರಂಥವನ್ನು ಕೊಂಡು ಓದಬೇಕು, ಕ್ರಿಕೆಟ್ ಪ್ರೇಮಿಗಳ ಪ್ರತಿ ಮನೆಯಲ್ಲೂ ಈ ಅಪರೂಪದ ಗ್ರಂಥವಿದ್ದರೆ, ನಮ್ಮ ಈ ಶ್ರಮ ಸಾರ್ಥಕವೆಂದುಕೊಳ್ಳುವೆ.
ಓದುಗರ ಪ್ರೋತ್ಸಾಹ, ಕೊಂಡು ಓದುವ ಸಂಸ್ಕೃತಿ, ಪುಸ್ತಕ ಪ್ರೇಮ- ಕನ್ನಡ ಸಾಹಿತ್ಯವಲಯಕ್ಕೆ ಅವಶ್ಯಕವಿದ್ದು, ಇದರಿಂದ ಲೇಖಕರಿಗೆ ಮಾತ್ರವಲ್ಲದೇ ಪ್ರಕಾಶಕರ ಬೆಳವಣಿಗೆಗೂ ಇದು ಸಹಕಾರವಾಗಲಿ ಅಂತ ಆಶಿಸುತ್ತೇನೆ.
ಪ್ರತಿಗಳಿಗಾಗಿ ಸಂಪರ್ಕಿಸಿ ; 9242744854/9739561334
No comments:
Post a Comment