Monday, 9 February 2015

ಕದಂಬೋತ್ಸವ ನೆಪದಲ್ಲಾದರೂ ಬನವಾಸಿ ಉಳಿಸಿ...!!


ಪ್ರತಿವರ್ಷವೂ ಐತಿಹಾಸಿಕ ಸ್ಥಳವಾಗಿರುವ ಬನವಾಸಿಯಲ್ಲಿ ಹಮ್ಮಿಕೊಳ್ಳುವ ಕದಂಬೋತ್ಸವವೂ ಸಕರ್ಾರಕ್ಕೆ ಆಗಾಗ ಬಿಸಿತುಪ್ಪದಂತೆ ತೋರ್ಪಟ್ಟಿದೆ. ಸಾಹಿತ್ಯ ವಲಯ, ಚಿಂತಕರು ಮತ್ತು ಬನವಾಸಿಗರ ವಿರೋಧಗಳು, ಟೀಕೆಗಳಿಂದ ಹೇಗಾದರೂ ತಪ್ಪಿಸಿಕೊಳ್ಳಲೇಬೇಕು ಅನ್ನುವ ಯೋಚನೆಗಳನ್ನಿಟ್ಟುಕೊಂಡು ಉತ್ಸವವನ್ನು ಹಮ್ಮಿಕೊಳ್ಳುತ್ತಿರುವುದನ್ನು ಅನೇಕ ವರ್ಷಗಳಿಂದ ಕಾಣಬಹುದು. ಪ್ರತಿವರ್ಷದ ಕದಂಬೋತ್ಸವವೂ ಸರ್ಕಾರದ ಆಶ್ವಾಸನೆಗಳು ಮತ್ತು ಇನ್ನೀತರ ಸಾಧನೆಗಳ ತೋರ್ಪಡಿಕೆ, ಮನರಂಜನೆ, ಜಿಲ್ಲೆಯ ರಾಜಕೀಯ ಮುಖಂಡರು ಈ ನೆಪದಲ್ಲಾದರೂ ಬನವಾಸಿಗೆ ಬಂದುಹೋಗುವುದಕ್ಕೆ ಸೀಮಿತವಾಗಿಬಿಟ್ಟಿದೆ. ಇದು ಪಂಪನ ನಾಡು ಬನವಾಸಿಗೆ ಒದಗಿರುವ ದುರ್ಗತಿ ಅನ್ನಬೇಕೋ, ಸದವಕಾಶ ಅನ್ನಬೇಕೋ ಅಂತ ಹೇಳುವುದು ಸ್ವಲ್ಪ ಕಷ್ಟ.
ಕನ್ನಡಿಗರ ಮೊದಲ ರಾಜಧಾನಿ ಬನವಾಸಿಯನ್ನು ನೋಡಲು ಅತಿ ಉತ್ಸಾಹದಿಂದ ಅನೇಕ ಕಡೆಯಿಂದ ಜನರು, ಪ್ರವಾಸಿಗರು, ಸಂಶೋಧನಾ ವಿದ್ಯಾ ರ್ಥಿಗಳು ಬಂದುಹೋಗುತ್ತಾರೆ. ಹೀಗೆ ಒಮ್ಮೆ ಬನವಾಸಿಯನ್ನು ನೋಡಿಕೊಂಡು ಹೋದವರು ಮತ್ತೆ ಬರುವುದು ತುಂಬಾ ಕಡಿಮೆ, ಇದರಿಂದ ಇಲ್ಲಿನ ಪ್ರವಾಸೋದ್ಯಮದಲ್ಲೂ ಹೇಳಿಕೊಳ್ಳುವಂತಹ ಅಭಿವೃದ್ಧಿ ಇಲ್ಲ ಮತ್ತು ಮಧುಕೇಶ್ವರ ದೇವಸ್ಥಾನದ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾದಂತೆ ಕಂಡಿಲ್ಲ. ಈ ರೀತಿಯ ವಾತಾವರಣ ನಿರ್ಮಾಣವಾಗಲಿಕ್ಕೆ, ಮುಖ್ಯ ಕಾರಣವೇ, ಮೂಲಭೂತ ಸೌಲಭ್ಯಗಳ ಕೊರತೆ ಮತ್ತು ಬನವಾಸಿಯ ಇತಿಹಾಸದ ಮೂಲಬೇರುಗಳನ್ನು ಉಳಿಸಿಕೊಳ್ಳುವ ಯಾವುದೇ ಪ್ರಯತ್ನಗಳು ಇದುವರೆಗೂ ಆಗದೇ ಇರುವುದು. ಬನವಾಸಿಯಲ್ಲಿ ಶ್ರೀ ಮಧುಕೇಶ್ವರ ದೇವಸ್ಥಾನ ಬಿಟ್ಟರೆ, ಈ ನಾಡನ್ನು ಕಟ್ಟಿ ಬೆಳೆಸಿದ ಕದಂಬ ಮನೆತನಗಳು, ಸೋದೆ ಅರಸರು ಕುರಿತಾದ ಶಾಸನಗಳು, ಐತಿಹಾಸಿಕವಾಗಿ ದೊರೆಯುವಂತಹ ಯಾವುದೇ ಕುರುಹುಗಳನ್ನು ಉಳಿಸಿಕೊಳ್ಳುವ, ಬೆಳೆಸುವ ಯಾವುದೇ ಪ್ರಯತ್ನಗಳು ಕ್ಷೇತ್ರದಲ್ಲಿ ಕಾಣಸಿಗುವುದಿಲ್ಲ ಅನ್ನುವುದು ಎಲ್ಲರ ದೂರು. ಇದು ಬನವಾಸಿಯ ಮೇಲೆ ಅಭಿಮಾನವಿಟ್ಟುಕೊಂಡಂತಹ ಎಂತಹವರಿಗಾದರೂ ನಿರಾಸೆಯನ್ನು ಹುಟ್ಟಿಸುವಂತಹ ಸಂಗತಿಯಾಗಿದೆ. ಆದಿಕವಿ ಪಂಪ, ಅಲ್ಲಮ, ಹರ್ಡೆಕರ್ ಮಂಜಪ್ಪರಂತಹ ಮಹಾನ್ ತೇಜಸ್ವಿಗಳು ಬದುಕಿ ಬಾಳಿದ ಬನವಾಸಿಯಲ್ಲಿ, ಈ ವ್ಯಕ್ತಿಗಳು ಮಾಡಿರುವ ಸಾಧನೆ, ಅವರ ಗ್ರಂಥಗಳ ಸಂಗ್ರಹ ಮತ್ತು ಪೋಷಣೆ, ಇವರ ಕುರಿತಾದ ಸಂಶೋಧನಾ ಕೇಂದ್ರಗಳು, ಮ್ಯೂಸಿಯಂಗಳ ನಿರ್ಮಾಣ ಇಂತಹ ಯಾವ ಪ್ರಯತ್ನಗಳು ಇದುವರೆಗೂ ಆಗಿಲ್ಲ. ಈ ಹಿಂದೆ ಪುರಾತತ್ವ ಇಲಾಖೆಯವರು ಬನವಾಸಿ ಮತ್ತು ಅದರ ಸುತ್ತಮುತ್ತಲೂ ಉತ್ಕನನ ಮಾಡಿದಾಗ ಸಿಕ್ಕಿರುವ ಅನೇಕ ಶಾಸನಗಳು, ವಿಗ್ರಹಗಳು, ಭಗ್ನಗೊಂಡ ಜೈನ ತೀರ್ಥಂಕರರ ವಿಗ್ರಹಗಳು ದೇವಸ್ಥಾನದ ಒಂದು ಕೋಣೆಯಲ್ಲಿ ಧೂಳು ತಿನ್ನುತ್ತಿವೆ. ಬನವಾಸಿಯ ಇತಿಹಾಸವನ್ನು ಇನ್ನಷ್ಟು ತೆರೆದಿಡುವ ಇಂತಹ ಕುರುಹುಗಳು ಮೊದಲು ಹೇಗೆ ಭೂಮಿಯಲ್ಲಿ ಅಡಗಿದ್ದವೋ, ಅದೇ ರೀತಿ ಧೂಳು ತುಂಬಿಕೊಂಡು ಇಂದು ದೇವಸ್ಥಾನದಲ್ಲಿ ಅನಾಥವಾಗಿ ಮಲಗಿಕೊಂಡಿವೆ. ಅವುಗಳ ಬಗ್ಗೆ ಮಾಹಿತಿ ನೀಡುವವರು ಯಾರೂ ಇಲ್ಲ. ಸಂಶೋಧನೆ ಇಲ್ಲ. ಪ್ರವಾಸಿಗರಿಗೂ ಅಲ್ಲಿ ಪ್ರವೇಶವಿಲ್ಲ. ದೂರದಿಂದಲೇ ಅವುಗಳನ್ನು ನೋಡಿಕೊಂಡು ಕಣ್ಣೀರು ತುಂಬಿಕೊಂಡು ಬರಬೇಕಷ್ಟೇ. ಕನ್ನಡ ರಾಜಮನೆತನಗಳ ಬಗ್ಗೆ ಅಪಾರವಾದ ಸಂಶೋಧನೆ ಮಾಡಬೇಕೆನ್ನುವರಿಗೆ ಬನವಾಸಿಯೇ ಮೊದಲ ಸಾಕ್ಷಿಯಾಗುತ್ತದೆ. ಈಗ ಸಿಕ್ಕಿರುವ ಕುರುಹುಗಳು, ಶಾಸನಗಳು ಪ್ರಬಲವಾದ ಸಾಕ್ಷ್ಯವನ್ನು ನೀಡುತ್ತವೆ, ಈ ನಿಟ್ಟಿನಲ್ಲಿ ಪ್ರಾಮಾಣಿಕವಾದ ಆಳವಾದ ಸಂಶೋಧನೆ ಆಗಬೇಕಷ್ಟೇ. ಹೀಗೆ ಸಾಹಿತ್ಯಕವಾಗಿ ಮತ್ತು ಐತಿಹಾಸಿಕವಾಗಿ ಸಂಶೋಧನೆ ಮಾಡುವಂತಹ ಪ್ರಯತ್ನಗಳು ಬನವಾಸಿಯಲ್ಲಿ ಆಗದೇ ಇರುವ ದೂರುಗಳ ಜೊತೆಗೆ,  ಕರ್ನಾಟಕದ ಪ್ರಮುಖ ಪ್ರವಾಸೋದ್ಯಮದ ಕೇಂದ್ರವಾಗಿರುವ ಈ ನೆಲೆಯಲ್ಲಿ ಮೂಲಭೂತ ಸೌಲಭ್ಯಗಳು ಕೂಡ ಇಲ್ಲ. ಪ್ರವಾಸಿಗರು ಉಳಿದುಕೊಳ್ಳಲಿಕ್ಕೆ ಸರಿಯಾದ ವ್ಯವಸ್ಥೆಗಳಿಲ್ಲ, ಒಂದು ಅತಿಥಿ ಗೃಹ ಇದ್ದರೂ, ಅದು ಕೂಡ ಜನಸಾಮಾನ್ಯರಿಗೆ ದುಬಾರಿಯಾಗಿದೆ. ಖಾಸಗಿಯವರಿಗೆ ವಹಿಸಲಾಗಿದೆ. ಹೊರಗಡೆಯಿಂದ ಬರುವ ಪ್ರವಾಸಿಗರು, ಇತಿಹಾಸದ ವಿದ್ಯಾರ್ಥಿ ಗಳು, ಸಂಶೋಧಕರು ಉಳಿದುಕೊಳ್ಳಬೇಕಾದರೆ ಶಿರಸಿಗೆ ಹೋಗಬೇಕು. ಇದು ಇಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆಗಳಲ್ಲಿ ಪ್ರಮುಖವಾದುದು.

ಸೊರಬ ಮತ್ತು ಶಿರಸಿ ತಾಲೂಕಿನ ಮಧ್ಯದಲ್ಲಿರುವ ಬನವಾಸಿ, ಈ ಎರಡು ತಾಲೂಖುಗಳ ವಿಧಾನಸಭಾ ಕ್ಷೇತ್ರಗಳಿಗೆ ಸೇರಿಕೊಳ್ಳದೇ, ಕ್ಷೇತ್ರ ಮರುಗಣನೆ ಸಮಯದಲ್ಲಿ ಯಲ್ಲಾಪುರ ಕ್ಷೇತ್ರಕ್ಕೆ ಸೇರಿಕೊಂಡಿದೆ. ಯಲ್ಲಾಪುರ ಬನವಾಸಿಯಿಂದ ಸುಮಾರು 73  ಕಿಲೋಮೀಟರ್ ದೂರದಲ್ಲಿದೆ. ಇಲ್ಲಿನ ಸಮಸ್ಯೆಗಳು ಮತ್ತು ಕುಂದುಕೊರತೆಗಳಿಗೆ 20ಕಿಲೋಮೀಟರ್ ದೂರದಲ್ಲಿರುವ ಶಿರಸಿಗಿಂತ, 70 ಕಿಲೋಮೀಟರ್ ದೂರದ ಯಲ್ಲಾಪುರದಲ್ಲಿರುವ ಸ್ಥಳೀಯ ಎಮ್ಮೆಲ್ಲೆಗಳನ್ನು ಕಾಣಬೇಕು. ಇನ್ನೂ ಕ್ಷೇತ್ರದ ರಾಜಕೀಯ ಮುಖಂಡರುಗಳಿಗೆ ಬನವಾಸಿ ಎಂಬುದು, ಕದಂಬೋತ್ಸವ, ಮಧುಕೇಶ್ವರ ಜಾತ್ರೆ ಮತ್ತು ಚುನಾವಣೆ ಸಮಯದಲ್ಲಿ ಮಾತ್ರ ಭೇಟಿ ನೀಡಲಿಕ್ಕೆ ಕಾರಣವಾಗಿದೆ. ಶಾಸಕರ ಕುಂದುಕೊರತೆ ಕಛೇರಿ ಇದ್ದರೂ ಇಲ್ಲದಂತಿದೆ. ಇದು ಕೂಡ ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ರಾಜಕೀಯ ವ್ಯಕ್ತಿಗಳ ಇಚ್ಚಾಶಕ್ತಿಯ ಕೊರತೆಯನ್ನು ಎತ್ತಿ ಹಿಡಿಯುತ್ತದೆ. ಪ್ರತಿವರ್ಷ ಕದಂಬೋತ್ಸವ ನಡೆಯುವಾಗ ಬನವಾಸಿಯು `ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯದಂತೆ' ಸಿರಿ ಸಿಂಗಾರಗೊಂಡಿರುತ್ತದೆ. ರಸ್ತೆ ರಿಪೇರಿ, ಇನ್ನೀತರ ಅಭಿವೃದ್ದಿ ಕೆಲಸಗಳು ಕದಂಬೋತ್ಸವವೆಂಬ ನೆಪಕ್ಕೆ ಮಾತ್ರ ನಡೆಯುತ್ತವೆ. ಇದಾದ ಮೇಲೆ ಮುಂದಿನ ಕದಂಬೋತ್ಸವ ಬರುವವರೆಗೂ ಬೇರೆ ರೀತಿಯ ಅಭಿವೃದ್ಧಿಯ ಕೆಲಸಗಳು ಅಷ್ಟಕಷ್ಟೇ. ಹೀಗೆ ಪ್ರತಿವರ್ಷ ಕೋಟಿಗಟ್ಟಲೇ ಹಣ ಖರ್ಚು  ಮಾಡುವ ಕದಂಬೋತ್ಸವದಲ್ಲಿ ಸ್ವಲ್ಪ ಭಾಗವನ್ನಾದರೂ, ಕ್ಷೇತ್ರದ ಮೂಲ ಇತಿಹಾಸ, ಸಾಹಿತ್ಯ ಮತ್ತು ಮೂಲಭೂತ ಸಮಸ್ಯೆಗಳಿಗೆ ಮೀಸಲಿಟ್ಟರೆ, ಸರ್ಕಾರದ ಕದಂಬೋತ್ಸವಕ್ಕೆ ಹಿರಿಮೆ ಅನ್ನಬಹುದು. ಈ ಉತ್ಸವದ ನೆಪದಲ್ಲಿ ಕ್ಷೇತ್ರವನ್ನು ಆಳಿದ ರಾಜಮನೆತನಗಳ ಇತಿಹಾಸ, ಶಾಸನಗಳ ರಕ್ಷಣೆ, ಪರಿಚಯ, ಸಂಶೋಧನೆ ಆಗುವ ನಿಟ್ಟಿನಲ್ಲಿ ಮ್ಯೂಸಿಯಂಗಳು, ಸಂಶೋಧನಾ ಕೇಂದ್ರಗಳು ಸ್ಥಾಪನೆಯಾಗಬೇಕು. ಇದರ ಜೊತೆಗೆ ಆದಿಕವಿ ಪಂಪ, ವಚಕಕಾರ ಅಲ್ಲಮರ ತಾಳೆಗರಿಗಳು, 80ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿರುವ ಕರ್ನಾಟಕದ  ಗಾಂಧಿ ಹರ್ಡೆಕರ್  ಮಂಜಪ್ಪನವರ ಗ್ರಂಥಗಳ ಸಂರಕ್ಷಣೆ, ಪಂಪ, ಅಲ್ಲಮರ ಹಳಗನ್ನಡ ಸಾಹಿತ್ಯದ ಕುರಿತಾಗಿ ಸಂಶೋಧನೆ ಮಾಡುವವರಿಗೆ ಧನ ಪ್ರೋತ್ಸಾಹ, ಇವರು ರಚಿಸಿದ ಗ್ರಂಥಗಳ ಮರುಮುದ್ರಣ, ಭಾಷಾಂತರ, ಇಂಟರ್ನೆಟ್ ಮಾಧ್ಯಮಕ್ಕೆ ಅಳವಡಿಸುವುದು, ಹೀಗೆ  ಇತ್ಯಾದಿ ಇತ್ಯಾದಿ ಕೆಲಸಗಳನ್ನು ಕದಂಬೋತ್ಸವದ ನೆಪದಲ್ಲಾದರೂ, ಸರ್ಕಾರ ಖಂಡಿತ ಮಾಡಲಿಕ್ಕೆ ಸಾಧ್ಯವಿದೆ. ದಕ್ಷಿಣ ಭಾರತದಲ್ಲಿ ಜೈನ ಧರ್ಮದ ಪ್ರಮುಖ ಸ್ಥಳಗಳಾಗಿರುವ ಶ್ರವಣಬೆಳಗೊಳ, ದಕ್ಷಿಣ ಕನ್ನಡ ಜಿಲ್ಲೆಯಂತೆ ಪ್ರಾಚೀನ ಬನವಾಸಿಯಲ್ಲಿಯೂ ಕೂಡ ಜೈನ ಧರ್ಮ ಅತ್ಯಂತ ಉತ್ತುಂಗದಲ್ಲಿತ್ತು ಅನ್ನುವುದಕ್ಕೆ ಈಗಾಗಲೇ ಇರುವ ಬಸದಿ, ಸಿಕ್ಕಿರುವ  ಅನೇಕ ಶಾಸನಗಳು, ವಿಗ್ರಹಗಳು ಕ್ಷೇತ್ರದ ಜೈನಧರ್ಮದ ಅಸ್ತಿತ್ವವನ್ನು, ಪ್ರಾಚೀನತೆಯನ್ನು ಎತ್ತಿ ಹಿಡಿಯುತ್ತವೆ. ಆದಿಕವಿ ಪಂಪನೂ ಜೈನ ಧರ್ಮಕ್ಕೆ ಸೇರಿದವನಾಗಿರುವುದು, ಬನವಾಸಿಯಲ್ಲಿನ ಜೈನಪರಂಪರೆಯ ಇತಿಹಾಸಕ್ಕೆ ಇದು ಪೂರಕವಾಗಿದೆ. ಕರ್ನಾಟಕ ಜೈನಧರ್ಮದ ಇತಿಹಾಸದಲ್ಲಿ ಬನವಾಸಿಯ ಜೈನರ ಇತಿಹಾಸ ಸೇರಿಕೊಂಡಿಲ್ಲ ಮತ್ತು ಜೈನ ಇತಿಹಾಸಕಾರರು ಬನವಾಸಿಯನ್ನು ಕಡೆಗಣಿಸಿದ್ದು, ಸಂಶೋಧನೆಯನ್ನೂ ಕೂಡ ಮಾಡಿಲ್ಲ. ಹೀಗೆ ಬನವಾಸಿಯ ಮೂಲಬೇರುಗಳನ್ನು ಉಳಿಸುವಂತಹ, ಅನೇಕ ಕಾರ್ಯಕ್ರಮಗಳನ್ನು ಒಂದೇ ಹಂತದಲ್ಲಿ ಮಾಡಲಿಕ್ಕೆ ಸಾಧ್ಯವಾಗದಿದ್ದರೂ, ಪ್ರತಿವರ್ಷ ಕದಂಬೋತ್ಸವಕ್ಕೆ  ಸಿಗುವ ಅನುದಾನದಲ್ಲಿ ಈ ಯೋಜನೆಗಳನ್ನು ಪ್ರಾಚೀನ ಪುರಾತತ್ವ ಇಲಾಖೆಯ ಸಹಯೋಗದೊಂದಿಗೆ ಹಂತ ಹಂತವಾಗಿ ಮಾಡಬಹುದು. ಉತ್ಸವದಲ್ಲಿ ಲಕ್ಷ ಲಕ್ಷಗಟ್ಟಲೇ ಹಣಕೊಟ್ಟು ಪರಭಾಷಾ ಗಾಯಕರು, ಸಿನಿಮಾ ಸಂಗೀತ ನಿರ್ದೇಶಕರ  ಮನರಂಜನೆ ಕಾರ್ಯಕ್ರಮಗಳನ್ನು ಮಾಡುವುದು ಖಂಡಿತ ಬನವಾಸಿಗರಿಗೆ ಬೇಕಾಗಿಲ್ಲ. ಇಂತಹ ಮನರಂಜನಾ ಕಾರ್ಯಕ್ರಮಗಳು ಆದಿಕವಿ ಪಂಪನ ಈ ಉತ್ಸವಕ್ಕೆ ಭೂಷಣವೂ ಅಲ್ಲ, ಇದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ಇಲ್ಲಿನ ಇತಿಹಾಸವನ್ನು ಉಳಿಸುವ ಕಾರ್ಯದ ಮೂಲಕ ಉತ್ಸವ ಆಚರಿಸಿದರೆ, ಪಂಪಪ್ರಶಸ್ತಿಗೆ ಅರ್ಥ ಸಿಕ್ಕಹಾಗಾಗುತ್ತದೆ, ಇಲ್ಲವಾದರೆ ಪಂಪ ಪ್ರಶಸ್ತಿಯನ್ನು ಬನವಾಸಿಗೆ ಬಂದು ಪಡೆಯುವ ಹಿರಿಯ ಸಾಹಿತಿಗಳು ಕೂಡ ಸರ್ಕಾರಕ್ಕೆ  ಮನವಿ ಮಾಡಿಕೊಂಡರೆ, ಆ ಪ್ರಶಸ್ತಿಗೆ ಅವರು ನೀಡುವ ದೊಡ್ಡ ಗೌರವವಾಗುತ್ತದೆ.
ಪಂಪ ಪ್ರಶಸ್ತಿ ಕಾರ್ಯಕ್ರಮದ ಹೊರತಾಗಿ ಮನರಂಜನೆಗಂತಲೇ ಸುರಿಯುವ ಲಕ್ಷಗಟ್ಟಲೇ ಹಣದಲ್ಲಿ ಬನವಾಸಿಯ ಐತಿಹಾಸಿಕ ಮತ್ತು ಸಾಹಿತ್ಯಿಕ ನೆಲೆಗಳನ್ನು ಉಳಿಸುವ ಪ್ರಯತ್ನಗಳಾಗಬೇಕು. ಈಗಾಗಲೇ ಐತಿಹಾಸಿಕ ಕ್ಷೇತ್ರ ಹಂಪಿಯಲ್ಲಿ ಇಂತಹ ಕಾರ್ಯಗಳನ್ನು ಸಾಧಿಸಿರುವ ಸರ್ಕಾರಕ್ಕೆ ಬನವಾಸಿಯ ಮೂಲಬೇರುಗಳನ್ನು ಉಳಿಸುವುದು ಖಂಡಿತ ಕಷ್ಟವಾಗದು. ಉತ್ತರ ಕನ್ನಡ ಜಿಲ್ಲೆಯ ಐತಿಹಾಸಿಕ ಕುರುಹುಗಳು, ಶಾಸನಗಳ ಸಂಶೋಧನೆ ಮತ್ತು ಅದರ ಉಳಿವಿಗೆ ಬನವಾಸಿ ಅತ್ಯಂತ ಪ್ರಶಸ್ತವಾದ ಪ್ರಮುಖ ಕೇಂದ್ರವಾಗಿದೆ. `ನಮ್ಮ ಬನವಾಸಿ ಉಳಿಸಿ' ಅನ್ನುವ ಸಪ್ತಾಹಕ್ಕಿಂತ ಕನ್ನಡಿಗರ ಮೊದಲ ರಾಜಧಾನಿಯನ್ನು ಉಳಿಸಿ ಅಂತ ಹೇಳಿದರೆ ಉತ್ಪ್ರೇಕ್ಷೆಯಾಗದು. ಇದು ಪ್ರತಿಯೊಬ್ಬ ಬನವಾಸಿಗನ ಅಂತಃಕರಣದ ನಿವೇದನೆ ಕೂಡ ಹೌದು. ಈ ಬಾರಿಯ ಕದಂಬೋತ್ಸವ ಇಂತಹ ಯೋಜನೆಗಳಿಗೆ ಮುನ್ನುಡಿಯಾಗಲಿ...


No comments:

Post a Comment