Sunday, 3 February 2013

ಸಿಐಡಿ ಧಾರಾವಾಹಿಯಲ್ಲಿ ದಯಾನಂದ ಶೆಟ್ಟಿ ಎಂಬ ಕನ್ನಡಿಗ


ಮೊದಲಿನಿಂದಲೂ ಮುಂಬೈನಲ್ಲಿ ದಕ್ಷಿಣ ಕನ್ನಡದವರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಹಿಡಿತವನ್ನು ಸಾಧಿಸುತ್ತಲೇ ಬಂದಿದ್ದಾರೆ. ಇದಕ್ಕೆ ನೂರಾರು ಉದಾಹರಣೆಗಳನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಹೆಸರಿಸಬಹುದು. ಹಿಂದಿ ಕಿರುತೆರೆ ಉದ್ಯಮದಲ್ಲಿ ನಟನಾಗಿ ಒಳ್ಳೆಯ ಹೆಸರು ಮಾಡಿರುವವರಲ್ಲಿ ದಯಾನಂದ ಶೆಟ್ಟಿ ಪ್ರಮುಖರಾಗಿ ನಿಲ್ಲುತ್ತಾರೆ. ಸೋನಿ ವಾಹಿನಿಯಲ್ಲಿ ಪ್ರದೀಪ್ ಉಪ್ಪೂರ್, ಬಿಪಿ ಸಿಂಗ್ ನಿರ್ಮಾಣ ಹಾಗೂ ನಿರ್ದೇಶನದ `ಸಿಐಡಿ' ಕಳೆದ 15 ವರ್ಷಗಳಿಂದ ನಡೆಯುತ್ತಾ ಬಂದಿದೆ. ಸಿಐಡಿ ಟೀಮ್ನಲ್ಲಿ ಸದಾ ಬಾಗಿಲುಗಳನ್ನು ಒಡೆಯುವ ಭೀಮನಂತೆ ಗುರುತಿಸಿಕೊಂಡಿರುವ ದಯಾನಂದ ಶೆಟ್ಟಿ, ಸೀರಿಯಲ್ನಲ್ಲಿ ದಯಾ ಹೆಸರಿನಿಂದಲೇ ಜನಪ್ರಿಯವಾಗಿದ್ದಾರೆ. ಸಿಐಡಿ ಸೀರಿಸ್ನ  ದಯಾ ಹೆಸರಿಗೂ ಮುಂಬೈ ಕ್ರೈಂ ಬ್ರಾಂಚ್ನಲ್ಲಿದ್ದ ಕನ್ನಡಿಗ ಎನ್ಕೌಂಟರ್ ದಯಾ ನಾಯಕ್ ಹೆಸರಿಗೂ ಬಹಳ ಸಾಮ್ಯತೆ ಇದೆ, ಜೊತೆಗೆ ಪಾತ್ರಕ್ಕೆ ಪ್ರೇರಣೆ ಕೂಡ ಹೌದು.

ದಯಾನಂದ ಚಂದ್ರಶೇಖರ್ ಶೆಟ್ಟಿ  ದಯಾನ ಪೂರ್ಣ ಹೆಸರು. ತುಳು ನಾಡಿನ ಬಂಟರ ಹುಡುಗ ಹುಟ್ಟಿದ್ದು ಡಿಸೆಂಬರ್ 11, 1969ರಲ್ಲಿ. ಕರ್ನಾಟಕದ ಉಡುಪಿ ಜಿಲ್ಲೆಯ ಕಟಪಾಡಿ ಎಂಬ ಹಳ್ಳಿಯಲ್ಲಿ. ತಂದೆ ಹೆಸರು ಚಂದ್ರಪ್ರಕಾಶ ಶೆಟ್ಟಿ, ತಾಯಿ ಉಮಾ ಶೆಟ್ಟಿ. ದಯಾನಂದ ಶೆಟ್ಟಿಗೆ ಇಬ್ಬರು ತಂಗಿಯರಿದ್ದಾರೆ. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ  ವಲಸೆ ಹೋದ ಇವರ ಕುಟುಂಬದವರು ಬದುಕಿಗಾಗಿ ನೆಲೆ ನಿಂತಿದ್ದು ಮಾತ್ರ ಮುಂಬೈನಲ್ಲೇ. ಹಾಗಾಗಿ ದಯಾನಂದ ಶೆಟ್ಟಿ ಬಾಂದ್ರಾದ ರಿಜ್ವಿ ಕಾಲೇಜ್ನಲ್ಲಿ ಬಿಕಾಂ ಡಿಗ್ರಿ ಓದಿದರು. ಕಾಲೇಜು ದಿನಗಳಲ್ಲಿ ಒಳ್ಳೆಯ ಎತ್ತರ, ಮೈಕಟ್ಟು ಹೊಂದಿದ್ದ ದಯಾ ಶೆಟ್ಟಿ  ಕ್ರೀಡೆಯಲ್ಲಿ ಉತ್ತಮ ಹೆಸರು ಮಾಡಿದ್ದವ. ಡಿಸ್ಕಸ್ ಥ್ರೋವರ್ ಹಾಗೂ ಶಾಟ್ಫುಟ್ನಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದು 1994 ಮಹಾರಾಷ್ಟ್ರ ರಾಜ್ಯದ ಡಿಸ್ಕಸ್ ಥ್ರೋನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ.
ಕ್ರೀಡೆಯಲ್ಲಿದ್ದಾಗ ಕಾಲಿಗೆ ಬಿದ್ದ ಪೆಟ್ಟು ಆತನ ಕ್ರೀಡಾ ಜೀವನಕ್ಕೆ ದೊಡ್ಡ ಏಟನ್ನೇ ನೀಡಿತ್ತು. ಕಾಲಿಗೆ ಆಗ ನೋವು ಮತ್ತೆ ಕ್ರೀಡೆ ಕಡೆಗೆ ಹೋಗದಂತೆ ಮಾಡಿತ್ತು. ಇದು ದಯಾನಂದ ಶೆಟ್ಟಿ ಆ್ಯಕ್ಟಿಂಗ್ ಕಡೆ ಬರಲಿಕ್ಕೆ ಕಾರಣವಾಯಿತು. ಕಾಲೇಜು ಓದುವಾಗಲೇ ರಂಗಭೂಮಿ ಕಲಾವಿದನಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರಿಂದ ಹಿಂದಿ ಕಿರುತೆರೆ ಉದ್ಯಮದಲ್ಲಿ ಅವಕಾಶಗಳನ್ನು ಪಡೆಯಲಿಕ್ಕೆ ಸುಲಭವಾಯಿತು. ಈತ ಅಭಿನಯಿಸಿದ್ದ ತುಳು ನಾಟಕ `ಸಿಕ್ರೇಟ್'ಗೆ ಅತ್ಯುತ್ತಮ ನಟ ಪ್ರಶಸ್ತಿ ಕೂಡ ಬಂದಿತ್ತು. ಸದ್ಯ ಹಿಂದಿ ಕಿರುತೆರೆ ಉದ್ಯಮದಲ್ಲಿ ಸಿಐಡಿ ಪಾತ್ರದ ಮೂಲಕ ದಯಾನಂದ ಶೆಟ್ಟಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾನೆ. ಸಿಐಡಿ ಟೀಮ್ಗೆ ಅನೇಕ ಬಂದರು ಹೋದರು. ಆದರೆ ದಯಾ ಸ್ಥಾನವನ್ನು ಯಾರಿಗೂ ಕಿತ್ತುಕೊಳ್ಳಲು ಆಗಲಿಲ್ಲ. ದಯಾ ಶೆಟ್ಟಿ ಪಾತ್ರಕ್ಕೆ ಅಪಾರ ವೀಕ್ಷಕ ಬಳಗ ಇದೆ. ಆತ ಯಾವಾಗಲೂ ಬಾಗಿಲು ಮುರಿಯುತ್ತಾನೆ ಅನ್ನುವುದರ ಮೇಲೆ ಅನೇಕ ಜೋಕ್ಸ್ಗಳನ್ನು ಹೇಳಲಾಗುತ್ತದೆ. ಸ್ಮಿತಾ ಶೆಟ್ಟಿಯನ್ನು ಮದುವೆಯಾಗಿರುವ ದಯಾಗೆ `ವಿವಾ' ಎಂಬ ಹೆಸರಿನ ಎಂಟು ವರ್ಷದ ಮಗಳಿದ್ದಾಳೆ. 2002ರಲ್ಲಿ ಬೆಸ್ಟ್ ಲುಕಿಂಗ್ ಆ್ಯಕ್ಟರ್ ಇನ್ ಇಂಡಿಯನ್ ಟೆಲಿವಿಷನ್ ಅನ್ನುವ ಪ್ರಶಸ್ತಿ ಕೂಡ ಬಂದಿತ್ತು. ಸಿಐಡಿಗೆ 15 ವರ್ಷ ತುಂಬಿದೆ. ಇಂದಿಗೂ ಜನ ನೋಡುತ್ತಿದ್ದಾರೆ. ಜನಪ್ರಿಯತೆಗೇನೂ ಕಡಿಮೆಯಾಗಿಲ್ಲ. ದಯಾ ಶೆಟ್ಟಿ ಎಂಬ ಕನ್ನಡಿಗ ನಟನ ಸಾಧನೆ ಹಾಗೆಯೆ ಬೆಳೆಯುತ್ತಲೇ ಇದೆ.

1 comment:

  1. ದಯಾರವರ ಪೂರ್ಣ ಪರಿಚಯ ನೀಡಿದಕ್ಕೆ ಧನ್ಯವಾದಗಳು.

    ReplyDelete