Thursday, 31 January 2013

ಸ್ಯಾಟಲೈಟ್ ರೈಟ್ಸ್ : ಸಿನಿಮಾ ಉದ್ಯಮಕ್ಕೆ ಟೀವಿ ನೀಡಿದ ಆಸರೆ



ಟೀವಿ ಆವಿಷ್ಕಾರದಿಂದ ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ ನಡೆಯಿತು ಅಂತ ಹೇಳಿದರೆ ತಪ್ಪಾಗಲಾರದು. ಮುಖ್ಯವಾಗಿ ಟೀವಿಯಿಂದ ಹೆಚ್ಚು ಲಾಭ ಪಡೆದುಕೊಂಡಿರುವುದು, ಒಳಿತಾಗಿರುವುದು ಸಿನಿಮಾ ಉದ್ಯಮಕ್ಕೆ ಅಂತ ವಿಶ್ಲೇಷಿಸಬಹುದು. ಸಿನಿಮಾ ಉದ್ಯಮಕ್ಕೆ ಒಂದು ರೀತಿಯಲ್ಲಿ ಲಾಭದ ಇನ್ನೊಂದು ಮುಖವನ್ನು ನೀಡಿದ್ದೇ ಟೀವಿ. ಇಂದು ಯಾವುದೇ ಸಿನಿಮಾ ಬಿಡುಗಡೆಯಾಗಲಿ, ಹಿಟ್ ಆಗಲಿ ಚಿತ್ರದ ಪಬ್ಲಿಸಿಟಿ ಟೀವಿಯಿಂದ ಆಗುತ್ತಿದೆ. ಹಾಗಾಗಿ ಸಿನಿಮಾ ಉದ್ಯಮದ ಬೆಳವಣಿಗೆಗೆ ಟೀವಿ ತುಂಬಾ ಪೂರಕವಾಗಿ ಕೆಲಸ ಮಾಡುತ್ತಿದೆ. ಸಿನಿಮಾ ಹಾಗೂ ಟೀವಿ ಉದ್ಯಮಗಳು ಒಂದಕ್ಕೊಂದು ಪೂರಕವಾಗಿ, ಒಟ್ಟೊಟ್ಟಿಗೆ ಇಂದು ಸಮಾನವಾಗಿ ಬೆಳೆಯುತ್ತಿವೆ.
ಮೊದಲೆಲ್ಲ ಸಿನಿಮಾ ಉದ್ಯಮಕ್ಕೆ ಆದಾಯದ ಮೂಲ ಅಂತ ಇದ್ದಿದ್ದೇ ಸಿನಿಮಾ ಥಿಯೇಟರ್ಗಳು, ಜೊತೆಗೆ ಬೆರಳೆಣಿಕೆಯ ಆಡಿಯೋ ಕಂಪನಿಗಳು. ಪ್ರೇಕ್ಷಕ ಕೊಳ್ಳುವ ಟಿಕೆಟ್ ಹಾಗೂ ಕ್ಯಾಸೆಟ್ನ ಮೇಲೆ ಇಡೀ ಚಿತ್ರದ ಮೇಲೆ ಲಾಭ ನಷ್ಟದ ಲೆಕ್ಕಾಚಾರ ಅಂದು ನಡೆಯುತ್ತಿತ್ತು. ಆದರೆ ಈಗ ಸಿನಿಮಾಗಳ ಆದಾಯದ ಮೂಲ ಹತ್ತು ದಾರಿಗಳಿಂದ ಹರಿದು ಬರುತ್ತಿದೆ. ಒಂದು ಕೈಕೊಟ್ಟರೆ, ಇನ್ನೊಂದರಲ್ಲಿ ಹಣ ಖಂಡಿತ ಬಂದೇ ಬರುತ್ತೆ, ಹಾಕಿದ ಹಣಕ್ಕೆ ಮೋಸವಿಲ್ಲ ಅನ್ನುವ ನಂಬಿಕೆ ಎಲ್ಲ ಸಿನಿಮಾ ನಿಮರ್ಾಪಕರಲ್ಲಿದೆ. ಥಿಯೇಟರ್ ಕಲೆಕ್ಷನ್, ಆಡಿಯೋ ರೈಟ್ಸ್, ಸ್ಯಾಟಲೈಟ್ ರೈಟ್ಸ್, ವಿಡಿಯೋ ರೈಟ್ಸ್, ಡಬ್ಬಿಂಗ್ ಮತ್ತು ರಿಮೇಕ್ ರೈಟ್ಸ್ ಹೀಗೆ ಹತ್ತು ಹಲವು ದಾರಿಗಳು ಸಿನಿಮಾ ನಿರ್ಮಾಣ  ಮಾಡುವ ನಿರ್ಮಾಪಕರನ್ನು ಒಂದೆಡೆ ಬದುಕುವಂತೆ ಮಾಡಿವೆ. ಇದರಲ್ಲಿ ಮುಖ್ಯವಾಗಿ ಇಂದಿನ ಹೆಚ್ಚಿನ ನಿರ್ಮಾಪಕರರು ಸ್ಯಾಟಲೈಟ್ ರೈಟ್ಸ್ ಸಿಗುವ ಧೈರ್ಯದ ಮೇಲೆಯೇ ಸಿನಿಮಾ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ಇದು ಸಿನಿಮಾಕ್ಕೆ ಟೀವಿ ನೀಡಿದ ಆರ್ಥಿಕ  ಬೆಂಬಲವೆಂದರೂ ಉತ್ಪ್ರೇಕ್ಷೆಯಲ್ಲ.

ನಮ್ಮ ದೇಶದಲ್ಲಿ ನೂರಕ್ಕೂ ಹೆಚ್ಚು ಮನರಂಜನಾ ವಾಹಿನಿಗಳಿವೆ. ಎಲ್ಲ ವರ್ಗದ, ಎಲ್ಲ ಸ್ತರದ ಜನರನ್ನು ತನ್ನೆಡೆಗೆ ಸೆಳೆದುಕೊಂಡು ತಮ್ಮ ಕಾರ್ಯಕ್ರಮಗಳನ್ನು ನೋಡುವಂತೆ ಮಾಡುವುದು ಪ್ರತಿ ವಾಹಿನಿಗಳಿಗೂ ದೊಡ್ಡ ಸವಾಲಾಗಿರುತ್ತದೆ. ಕೇವಲ ಧಾರಾವಾಹಿಗಳು, ಟೀವಿ ಕಾರ್ಯಕ್ರಮಗಳು, ರಿಯಾಲಿಟಿ ಶೋಸ್ಗಳ ಹೊರತಾಗಿ ಮುಖ್ಯವಾಗಿ ಸಿನಿಮಾಗಳು ವಾಹಿನಿಗಳ ಮುಖ್ಯ ಆಕರ್ಷಣೆಗಳಾಗಿವೆ. ದಿನದ 24 ಗಂಟೆಗಳು ಸಿನಿಮಾಗಳನ್ನು ಪ್ರಸಾರ ಮಾಡುವ ವಾಹಿನಿಗಳಿವೆ. ಥಿಯೇಟರ್ಗೆ ಹೋಗಿ ಸಿನಿಮಾ ನೋಡದವರು ಈಗ ಸುಲಭವಾಗಿ ಟೀವಿಯಲ್ಲಿ ಹೊಸಹೊಸ ಸಿನಿಮಾ, ಹಳೆಯ ಸಿನಿಮಾಗಳು, ಹಾಡುಗಳನ್ನು ನೋಡಬಹುದು. ವೀಕ್ಷಕರನ್ನು ತನ್ನೆಡೆಗೆ ಸೆಳೆದುಕೊಳ್ಳುವ ನಿಟ್ಟಿನಲ್ಲಿ ವಾಹಿನಿಗಳು ಸಿನಿಮಾಗಳನ್ನು ಖರೀದಿ ಮಾಡಿ ಟೀವಿಯಲ್ಲಿ ಪ್ರಸಾರ ಮಾಡುವ ಹಕ್ಕುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಒಂದೊಂದು ಚಿತ್ರಗಳನ್ನು ಕೋಟಿ ಕೋಟಿ ರೂಪಾಯಿಗಳಲ್ಲಿ ಖರೀದಿ ಮಾಡಲಾಗುತ್ತದೆ. ಸ್ಯಾಟಲೈಟ್ ರೈಟ್ಸ್ ಪಡೆಯುವ ವಾಹಿನಿಗಳ ನಡುವೆಯೂ ದೊಡ್ಡ ಪೈಪೋಟಿ ಇದೆ. ಏಕೆಂದರೆ ಒಳ್ಳೆಯ ಸಿನಿಮಾಗಳು ಚಾನೆಲ್ಗಳಿಗೆ ಹೆಚ್ಚಿನ ಲಾಭವನ್ನು ತಂದುಕೊಡುತ್ತವೆ. ಕನ್ನಡದ ಸಿನಿಮಾ ಮಾರುಕಟ್ಟೆಯನ್ನು ನೋಡಿದಾಗ ಪುನೀತ್ ರಾಜ್ಕುಮಾರ್, ದರ್ಶನ್, ಶಿವರಾಜ್ಕುಮಾರ್, ಸುದೀಪ್, ರವಿಚಂದ್ರನ್, ರಮೇಶ್ ಅರವಿಂದ್, ಉಪೇಂದ್ರ, ಅನಂತ್ನಾಗ್ ಇನ್ನು ಕೆಲವು ಸಿನಿಮಾ ನಟರುಗಳ ಸಿನಿಮಾಗಳಿಗೆ ಒಳ್ಳೆಯ ಸ್ಯಾಟಲೈಟ್ ರೈಟ್ಸ್ ಇದೆ. ಕನ್ನಡದಲ್ಲಿ ಉದಯ, ಸುವರ್ಣ ಹಾಗೂ ಝೀ ಕನ್ನಡ, ಕಸ್ತೂರಿ ವಾಹಿನಿಗಳು ಸಿನಿಮಾಗಳನ್ನು ಖರೀದಿ ಮಾಡುತ್ತಿವೆ. 4-5 ವರ್ಷಗಳ ಹಿಂದೆ ಶಿವರಾಜ್ಕುಮಾರ್ ಅಭಿನಯದ `ಜೋಗಿ' ಚಿತ್ರವನ್ನು ಒಂದು ಕೋಟಿಗೆ ಝೀ ಕನ್ನಡ ಖರೀದಿ ಮಾಡಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಅಂದು ಕನ್ನಡ ಚಿತ್ರಕ್ಕೆ ನೀಡಿದ ದೊಡ್ಡ ಮೊತ್ತವಾಗಿತ್ತು. ಈಗ ಅದೇ ಪುನೀತ್ ಅಭಿನಯದ 'ಅಣ್ಣಾ ಬಾಂಡ್' ಸಿನಿಮಾವನ್ನು ಸುವರ್ಣವಾಹಿನಿ ಮೂರು ಕೋಟಿಗೆ ಖರೀದಿ ಮಾಡಿದೆ ಅಂತ ಗಾಂಧಿನಗರದಲ್ಲಿ ಮಾತಿದೆ. ಪುನೀತ್ ರಾಜ್ಕುಮಾರ್ ಅಭಿನಯದ 'ಯಾರೇ ಕೂಗಾಡಲಿ', `ಹುಡುಗರು' ಸಿನಿಮಾಗಳು ಮೂರು ಕೋಟಿಯ ಮೇಲೆ ಹಕ್ಕುಗಳು ಮಾರಾಟವಾಗಿವೆ. ಶಿವಣ್ಣನ ನೂರನೇ ಸಿನಿಮಾ 'ಜೋಗಯ್ಯ' ಕೂಡ ಮೂರು ಕೋಟಿಗೆ ಉದಯ ವಾಹಿನಿಗೆ ಸ್ಯಾಟಲೈಟ್ಸ್ ರೈಟ್ಸ್ ಸಿಕ್ಕಿದೆ ಅಂತ ಹೇಳಲಾಗುತ್ತಿದೆ. ಇಂದು ಕನ್ನಡ ಚಿತ್ರಗಳು ಸ್ಯಾಟಲೈಟ್ಟ್ ರೈಟ್ಸ್ ಮೂಲಕ ಒಳ್ಳೆಯ ಹಣವನ್ನೆ ಪಡೆಯುತ್ತಿವೆ. ಮುಖ್ಯವಾಗಿ ಒಳ್ಳೆಯ ಗುಣಮಟ್ಟ ಹಾಗೂ ಜನಮೆಚ್ಚುವ ನಟ, ಒಳ್ಳೆಯ ನಿರ್ದೇಶಕ ಚಿತ್ರಕ್ಕಿರಬೇಕಷ್ಟೇ.

ಸ್ಯಾಟಲೈಟ್ ರೈಟ್ಸ್ ಅಂದರೇನು? ಅದು ಹೇಗೆ ಟೀವಿ ವಾಹಿನಿಗಳಿಗೆ ಸಹಾಯವಾಗುತ್ತದೆ ಅನ್ನುವ ಪ್ರಶ್ನೆ ಸಾಮಾನ್ಯರನ್ನು ಕಾಡಬಹುದು. ಸ್ಯಾಟಲೈಟ್ ರೈಟ್ಸ್ ಅಥವಾ ಉಪಗ್ರಹ ಹಕ್ಕು ಸರಳವಾಗಿ ಹೇಳುವುದಾದರೆ, `ಯಾವುದೇ ಒಂದು ಸಿನಿಮಾವನ್ನು ಟೀವಿಯಲ್ಲಿ ಪ್ರಸಾರ ಮಾಡಲು, ಆಯಾ ಸಿನಿಮಾ ನಿರ್ಮಾಪಕನಿಗೆ ನೀಡುವ ಮೊತ್ತ' ಅಂತ ಹೇಳಬಹುದು. ಉಪಗ್ರಹಗಳ ಸಹಕಾರದಿಂದ ನಡೆಯುವ ಆಯಾ ವಾಹಿನಿಗಳು ಸಿನಿಮಾಗಳನ್ನು ತಮ್ಮತಮ್ಮ ವಾಹಿನಿಗಳಲ್ಲಿ ಪ್ರಸಾರ ಮಾಡಲು ಸಂಪೂರ್ಣ ಹಕ್ಕುಗಳನ್ನು ಪಡೆದುಕೊಳ್ಳುತ್ತವೆ. ಹಕ್ಕುಗಳಿಗೆ ಅಂತ ಇಂತಿಷ್ಟು ಹಣವನ್ನು ಆಯಾ ಬ್ಯಾನರ್ಗಳಿಗೆ ನೀಡಲಾಗುತ್ತದೆ. ಕನ್ನಡದ ಸಿನಿಮಾ ಹಾಗೂ ಟೀವಿ ಮಾರುಕಟ್ಟೆ 1994 ನಂತರ ತುಂಬಾ ಪ್ರಬಲವಾಗಿ ಅಸ್ತಿತ್ವಕ್ಕೆ ಬಂದವು. ಚೆನ್ನೈ ಮೂಲಕ ಸನ್ ನೆಟ್ವಕರ್್ ಕನ್ನಡದಲ್ಲಿ ಉದಯ ವಾಹಿನಿಯನ್ನು ಪ್ರಾರಂಭಿಸಿದಾಗ, ಉದಯ ವಾಹಿನಿಗೆ ಕೋಟ್ಯಂತರ ವೀಕ್ಷಕರಿದ್ದರು. ಆರಂಭದಲ್ಲಿ ಒಂದಿದ್ದ ವಾಹಿನಿ 3-4 ವಾಹಿನಿಗಳಾಗಿ ವಿಭಾಗವಾಯಿತು. ಸಿನಿಮಾಕ್ಕಂತಲೇ ಉದಯ ಮೂವೀಸ್ ಪ್ರಾರಂಭವಾಯಿತು. ಸಮಯದಲ್ಲೇ  ಸ್ಯಾಟಲೈಟ್ ರೈಟ್ಸ್ಗೆ ಹೆಚ್ಚಿನ ಬೆಂಬಲ ವ್ಯಕ್ತವಾದದ್ದು. ಕನ್ನಡ ಚಿತ್ರರಂಗ ಪ್ರಾರಂಭವಾಗಿ 75 ವರ್ಷವಾದಾಗಿನಿಂದ ಅಲ್ಲಿಯವರೆಗಿನ ಎಲ್ಲ ಸಿನಿಮಾಗಳನ್ನು ಉದಯ ವಾಹಿನಿ ಖರೀದಿ ಮಾಡಲು ಪ್ರಾರಂಭವಾಯಿತು. ಹಳೆಯ ಸಿನಿಮಾಗಳಿಗೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತೆಜಾಹೀರಾತು ಹಣವೂ ಕೂಡ ಹರಿದು ಬರುತ್ತದೆ ಅನ್ನುವ ಮಾರುಕಟ್ಟೆಯ ಸಮೀಕ್ಷೆಯ ಆಧಾರದ ಮೇಲೆ ಸಿನಿಮಾಗಳ ಖರೀದಿ ಪ್ರಾರಂಭವಾಯಿತು. ಅಂದು ಹಳೆಯ ಕನ್ನಡ ಸಿನಿಮಾಗಳಿಗೆ, ವಿಶೇಷವಾಗಿ ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಸಿನಿಮಾಗಳಿಗೆ ಬಂಗಾರದಂತಹ ಬೆಲೆ ಬಂದಿತ್ತು. ಎಷ್ಟೋ ಹಳೆಯ ಸಿನಿಮಾಗಳನ್ನು ನಿಮರ್ಾಣ ಮಾಡಿದ್ದ ನಿರ್ಮಾಪಕರಿಗೆ ಸ್ಯಾಟಲೈಟ್ಸ್ ರೈಟ್ಸ್ಗೆ ಬೆಲೆ ಅರ್ಥವಾಗಿರಲಿಲ್ಲ. ಎಷ್ಟೋ ಒಳ್ಳೊಳ್ಳೆಯ ಸಿನಿಮಾಗಳನ್ನು ಕೇವಲ  ಹಲವು ಸಾವಿರ ಹಣಕ್ಕೆ ಹಕ್ಕುಗಳನ್ನು ಪಡೆದು, ಅದನ್ನು ಲಕ್ಷಾಂತರ ಹಣಕ್ಕೆ ಮಾರಾಟ ಮಾಡತೊಡಗಿದರು. ಮಧ್ಯವರ್ತಿ ಗಳ ಹಾವಳಿ ಪ್ರಬಲವಾಗಿತ್ತು. ಅನೇಕರು ಸ್ಯಾಟಲೈಟ್ಸ್ ರೈಟ್ಸ್ ವ್ಯವಹಾರದ ಮೂಲಕವೇ ನೂರಾರು ಕೋಟಿ ಹಣ ಸಂಪಾದನೆ ಮಾಡಿದರು. ಕಡಿಮೆ ಹಣಕ್ಕೆ ಹಕ್ಕುಗಳನ್ನು ಕೊಟ್ಟ ನಿರ್ಮಾಪಕರು, ಕೊನೆಗೆ ತಮ್ಮ ಸಿನಿಮಾಗಳು ಲಕ್ಷಾಂತರ ರೂಪಾಯಿಗಳಿಗೆ ಮಾರಾಟವಾಗಿದ್ದನ್ನು ಕಂಡು ಕೈಕೈ ಹಿಸುಕಿಕೊಂಡವರಿದ್ದಾರೆ
ಹಿರಿಯ ನಟನಿರ್ಮಾಪಕ ದಿವಂಗತ ಎಂ.ಪಿ. ಶಂಕರ್ ಕೂಡ ತಮ್ಮ ಒಳ್ಳೊಳ್ಳೆಯ ಸಿನಿಮಾಗಳನ್ನು ಕಡಿಮೆ ಹಣಕ್ಕೆ ಮಾರಾಟ ಮಾಡಿದ್ದರು. ಕೊನೆಗೆ ಸ್ಯಾಟಲೈಟ್ಸ್ ರೈಟ್ಸ್ ವ್ಯವಹಾರ ಅರ್ಥವಾದಾಗ ತುಂಬಾ ಮನನೊಂದಿದ್ದರು. ರೀತಿಯ ಅನೇಕ ಘಟನೆಗಳು ಕನ್ನಡ ಸಿನಿಮಾ ಹಾಗೂ ಟೀವಿ ಮಾರುಕಟ್ಟೆಯಲ್ಲಿ ಕಳೆದ 15 ವರ್ಷಗಳಲ್ಲಿ ನಡೆದಿವೆ
ಸ್ಯಾಟಲೈಟ್ಸ್ ರೈಟ್ಟ್ ಸಿಗುವ ಆಸೆಯಲ್ಲಿ ಎಷ್ಟೋ  ನಿರ್ಮಾಪಕಕರು ಅತಿಕಡಿಮೆ ಹಣದಲ್ಲಿ ಸಿನಿಮಾಗಳನ್ನು 
ನಿರ್ಮಾಣ ಮಾಡುತ್ತಾರೆ. ಬರೀ ಟೀವಿಗಂತಲೇ ಮಾರಾಟವಾದ ಇಂಥ ಕಳಪೆ ಚಿತ್ರಗಳು ಕೂಡ ಆಯಾ ವಾಹಿನಿಗಳ ಹೊಟ್ಟೇ ಸೇರಿವೆ. ಒಳ್ಳೊಳ್ಳೆಯ ಸಿನಿಮಾಗಳನ್ನು ಖರೀದಿ ಮಾಡಿದ್ದ ವಾಹಿನಿಗಳು ಅಂದಿನಿಂದ ಇಂದಿನವರೆಗೆ ಚಿತ್ರವನ್ನು ಪುನಃ ಪುನಃ ಪ್ರಸಾರ ಮಾಡಿ ಹಣ ಮಾಡಿಕೊಳ್ಳುತ್ತಿವೆ. ರಾಜ್ಕುಮಾರ್, ಶಂಕರನಾಗ್ ಸಿನಿಮಾಗಳನ್ನು ಎಷ್ಟು ಸಲ ಟೀವಿಯಲ್ಲಿ ಹಾಕಿದರೂ ನೋಡುವ ಜನರಿದ್ದಾರೆ. ಹಾಗಾಗಿ ಒಳ್ಳೆಯ ಸಿನಿಮಾಗಳಿಂದ ಮಿನಿಮಮ್ ಟಿಆರ್ಪಿ ಬರುವುದರಿಂದ ವಾಹಿನಿಗಳಿಗೆ ಸ್ಪಾನ್ಸರ್ಗಳು ಹಾಗೂ ಜಾಹೀರಾತು ಮೂಲದಿಂದ ಹಣವನ್ನು ಸಂಗ್ರಹಿಸಲು ಕಷ್ಟಸಾಧ್ಯವಾಗುತ್ತಿಲ್ಲ. ಈಗಿನ ಕೆಲವು ನಾಯಕರ ಸಿನಿಮಾಗಳಿಗೆ ಮಿನಿಮಮ್ ಟಿಆರ್ಪಿ ಬರುವುದರಿಂದ ವಾಹಿನಿಗಳು ಪುನೀತ್, ದರ್ಶನ್, ಉಪೇಂದ್ರ, ರಮೇಶ್, ರವಿಚಂದ್ರನ್, ಸುದೀಪ್ರ ಸಿನಿಮಾಗಳನ್ನು ಧೈರ್ಯವಾಗಿ ಖರೀದಿ ಮಾಡುತ್ತವೆ. ವಾಹಿನಿಗಳು ಮುಖ್ಯವಾಗಿ ಫ್ಯಾಮಿಲಿ ಆಡಿಯನ್ಸ್ ಇಷ್ಟಪಡುವ ನಾಯಕರಿಗೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಕನ್ನಡದಲ್ಲಿರುವ ಚಾಲ್ತಿಯಲ್ಲಿರುವ ಎಲ್ಲ ಹೀರೋಗಳ ಸಿನಿಮಾಗಳಿಗೆ ಇಂತಿಷ್ಟು ಹಣ ಅಂತ ಸ್ಯಾಟಲೈಟ್ ರೈಟ್ ಫಿಕ್ಸ್ ಆಗಿಬಿಟ್ಟಿದೆ. ಕೆಲವು ನಾಯಕರು ತಮ್ಮ ಸಿನಿಮಾಗಳಿಗೆ ಇಷ್ಟು ಹಣವನ್ನು ವಾಹಿನಿಗಳು ಕೊಡುತ್ತಾರೆ, ಹಾಗಾಗಿ ನಮ್ಮ ಸಂಭಾವನೆ ಇಷ್ಟು ಅಂತ ಖಡಾಖಂಡಿತವಾಗಿ ಹೇಳುವವರೂ ಕೂಡ ಇದ್ದಾರೆ. ಟೀವಿ ಉದ್ಯಮದ ಮೇಲೆ ಸ್ಪಾನ್ಸರ್ಗಳು ಹೂಡುತ್ತಿರುವ ಹಣದ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ.

ಹಿಂದಿ ಹಾಗೂ ತೆಲುಗು, ತಮಿಳಿನಲ್ಲಿ ಕೋಟಿಗಳಿಗೆ ಬೆಲೆಯೇ ಇಲ್ಲ

ಹಿಂದಿ ಹಾಗೂ ತಮಿಳು ಸಿನಿಮಾ ಉದ್ಯಮಗಳು ನಮಗಿಂತ ಹತ್ತು ಹೆಜ್ಜೆ ಮುಂದೆ ಹೋಗಿವೆ. ಅಲ್ಲಿ ಸ್ಯಾಟಲೈಟ್ಸ್ ರೈಟ್ಸ್ ಪಡೆಯಲು ನೀಡುವ ಹಣದಲ್ಲೇ ಸಿನಿಮಾಗಳನ್ನು ಆಯಾ ವಾಹಿನಿಯವರೇ ನಿರ್ಮಾಣ ಮಾಡುತ್ತಿದ್ದಾರೆ. ನಿಟ್ಟಿನಲ್ಲಿ ಸನ್ ನೆಟ್ವರ್ಕ್ `ಸನ್ ಪಿಕ್ಚರ್ಸ್' ಎಂಬ ಸಿನಿಮಾ ತಯಾರಿಕಾ ಸಂಸ್ಥೆಯನ್ನು ಪ್ರಾರಂಭಿಸಿದೆ. ತಮಿಳಿನ ಎಲ್ಲ ಜನಪ್ರಿಯ ನಟರುಗಳನ್ನು ಹಾಕಿಕೊಂಡು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಇತ್ತೀಚೆಗೆ ರಜನಿಕಾಂತ್ ಅವರನ್ನು ಹಾಕಿಕೊಂಡು `ಎಂಧೀರನ್' ಅನ್ನುವ ಸಿನಿಮಾವನ್ನು ಸನ್ ಪಿಕ್ಚರ್ಸ್ ತಯಾರು ಮಾಡಿತ್ತು. ಸ್ಟಾರ್ ಡೈರೆಕ್ಟರ್ ಶಂಕರ್ ನಿರ್ದೇಶನ ಮಾಡಿದ್ದ ಚಿತ್ರ ಸುಮಾರು 500ಕ್ಕೂ ಹೆಚ್ಚು ಕೋಟಿ ಹಣವನ್ನು ವಿಶ್ವದೆಲ್ಲಡೆ ಸಂಗ್ರಹ ಮಾಡಿತ್ತುಎಂಧೀರನ್ ಚಿತ್ರವು ಸನ್ಟೀವಿ, ಜೆಮಿನಿ ಟೀವಿಯಲ್ಲಿ ಅನೇಕ ಬಾರಿ ಪ್ರಸಾರವಾಗಿದೆ. ಇದರ ಆದಾಯವೇ ಸುಮಾರು 200 ಕೋಟಿ ಸನ್ಟೀವಿಗೆ ಬಂದಿದೆ ಅಂತ ವಿಶ್ಲೇಷಕರು ಅಂದಾಜು ಮಾಡಿದ್ದಾರೆ. ಕರುಣಾನಿಧಿಯ ಕುಟುಂಬದವರು `ಕಲೈನಗರ್ ಟೀವಿ' ಅನ್ನುವ ತಮ್ಮದೇ ವಾಹಿನಿಯನ್ನು ಹೊಂದಿದ್ದಾರೆ. `ರೆಡ್ ಜೆಯಂಟ್' ಅನ್ನುವ ಕಂಪನಿಯ ಮೂಲಕ ಸಿನಿಮಾಗಳನ್ನು ತಯಾರಿಸುತ್ತಿದ್ದಾರೆ. ಇತ್ತೀಚೆಗೆ ಸೂರ್ಯ ಅಭಿನಯದ '7ಎಎಮ್ ಅರಿವು' ಕೂಡ ಅವರ ಸಂಸ್ಥೆಯಲ್ಲಿ ನಿರ್ಮಾಣವಾಗಿವೆ. ತಮಿಳುನಾಡಿನಲ್ಲಿ ಸಿನಿಮಾಗಳ ಉಪಗ್ರಹ ಹಕ್ಕುಗಳನ್ನು ಪಡೆದುಕೊಳ್ಳಲು ದೊಡ್ಡ ಸ್ಪರ್ಧೆ ಯೆ ನಡೆಯುತ್ತಿದೆ. ಸಿನಿಮಾ ಕೊಳ್ಳುವಿಕೆಯಲ್ಲೂ ದೊಡ್ಡ ರಾಜಕೀಯ ಅಡಗಿದೆ. ಎಂಜಿಆರ್ ಹಾಗೂ ಜಯಲಲಿತಾ ಅಭಿನಯದ ಸಿನಿಮಾಗಳು ಸನ್ ಟೀವಿಯಲ್ಲಿ ಪ್ರಸಾರವಾಗುವುದೇ ಇಲ್ಲ. ಜಯ ಟೀವಿಯಲ್ಲಿ ಮಾತ್ರ ಎಂಜಿಆರ್ ಚಿತ್ರಗಳು ಹೆಚ್ಚಾಗಿ ಪ್ರಸಾರವಾಗುತ್ತವೆ. ಕರುಣಾನಿಧಿ ಚಿತ್ರಕಥೆ ಬರೆದ ಅನೇಕ ತಮಿಳು ಸಿನಿಮಾಗಳಿಗೆ ಜಯ ಟೀವಿಯಲ್ಲಿ ಅವಕಾಶವಿಲ್ಲ. ರೀತಿಯ ಸಣ್ಣ ಹೋರಾಟ ಅಲ್ಲಿ ಬಹಿರಂಗವಾಗಿಯೇ ನಡೆಯುತ್ತಿದೆ. ಐದಾರು ದಶಕಗಳಿಂದಲೂ ಅಲ್ಲಿರುವ ಎರಡು ಪಕ್ಷಗಳ ನಡುವಿನ ಸ್ಪರ್ಧೆ ನಡೆಯುತ್ತಲೆ ಇದೆ. ಎರಡು ಪಕ್ಷಗಳು ತಮ್ಮದೇ ಸ್ವಂತ ವಾಹಿನಿಗಳನ್ನು ಹೊಂದಿವೆ. ಸದ್ಯ ಮುಖ್ಯಮಂತ್ರಿ ಆಗಿರುವ ಜಯಲಲಿತಾ ಕೂಡ `ಜಯ ಟೀವಿ' ಎಂಬ ವಾಹಿನಿಯನ್ನು ಹೊಂದಿದ್ದಾರೆ. ಜಯಲಲಿತಾ ಒಡೆತನದ ಜಯ ಟೀವಿಯೂ ಕೂಡ ಸಿನಿಮಾಗಳನ್ನು ಕೊಳ್ಳುವಿಕೆಯಲ್ಲಿ ಸನ್ಟೀವಿಗೆ ದೊಡ್ಡ ಸ್ಪರ್ಧೆ ಯನ್ನು ನೀಡುತ್ತಿದೆ. ಮುಖ್ಯವಾಗಿ ಅಲ್ಲಿಯ ದೊಡ್ಡ ದೊಡ್ಡ ನಾಯಕರುಗಳೆಲ್ಲಾ ಆಯಾ ರಾಜಕೀಯ ಪಕ್ಷಗಳಿಗೆ ವಾಲಿಕೊಂಡಿರುವುದರಿಂದ, ನಾಯಕರು ತಮ್ಮ ಸಂಭಾವನೆ ಜೊತೆಗೆ ಸ್ಯಾಟಲೈಟ್ಸ್ ಹಕ್ಕನ್ನು ತಮಗೆ ಕೊಡಬೇಕು ಅನ್ನುವ ಡಿಮ್ಯಾಂಡ್ ಕೂಡ ಇದೆ. ಕನ್ನಡದಲ್ಲಿ ಸ್ಯಾಟಲೈಟ್ ರೈಟ್ಸ್ ತಮಗೆ ನೀಡಬೇಕು ಅನ್ನುವ ನಟರು ಕೇಳಿದ್ದು ಅಪರೂಪವಿರಬೇಕು. ತಮಿಳಿನ ವಿಜಯ ಟೀವಿ ಕೂಡ ಜಯ ಟೀವಿ, ಸನ್ ಟೀವಿ, ಝೀ ತಮಿಳು, ಕಲೈನಗರ್ ಟೀವಿಗೆ ಒಳ್ಳೆಯ ಸ್ಪರ್ಧೆ ಯನ್ನೇ ನೀಡುತ್ತಾ ಬಂದಿದೆ.

ಇತ್ತೀಚೆಗೆ ಬಿಡುಗಡೆಯಾದ ವಿಜಯ್ ಅಭಿನಯದ ತಮಿಳು ಚಿತ್ರ 'ತುಫಾಕಿ'ಯನ್ನು ಸುಮಾರು 9 ಕೋಟಿಗೆ ಸ್ಯಾಟಲೈಟ್ ಹಕ್ಕುಗಳನ್ನು ವಿಜಯ್ ಟೀವಿ ಕೊಂಡಿದೆವಿಜಯ್ ಟೀವಿ ಸ್ಟಾರ್ ಸಮೂಹಕ್ಕೆ ಸೇರಿದ ವಾಹಿನಿಯಾಗಿದೆ. ತುಫಾಕಿಗೆ ನೀಡಿದ ಉಪಗ್ರಹ ಹಕ್ಕಿಗೆ ನೀಡಿದ ಮೊತ್ತ  ತಮಿಳು ಚಿತ್ರೋದ್ಯಮಕ್ಕೆ ಟೀವಿ ಉದ್ಯಮದಿಂದ ನೀಡಿದ ದಾಖಲೆ ಹಣ. ವಿಜಯ ಟೀವಿ ಇತ್ತೀಚೆಗೆ ಶಂಕರ್ ನಿರ್ದೇಶನದ 'ನನ್ಬನ್' ಸಿನಿಮಾದ ಹಕ್ಕುಗಳನ್ನು ಪಡೆದುಕೊಂಡಿದೆ. ಸೂಪರ್ಸ್ಟಾರ್ ರಜನಿಕಾಂತ್ರ ಮುಂಬರುವ ಚಿತ್ರ `ಕೊಚ್ಚಾಡಿಯನ್' ಚಿತ್ರವನ್ನು ಜಯ ಟೀವಿ ಆರು ಕೋಟಿಗೆ ಪಡೆದುಕೊಂಡಿದೆ. ಅಜಿತ್ ಅಭಿನಯದ ಬಿಲ್ಲಾ-2 ಚಿತ್ರವನ್ನು ಸನ್ಟೀವಿ ಪಡೆದುಕೊಂಡಿದೆ. ತಮಿಳಿನಷ್ಟೇ ಮಾರುಕಟ್ಟೆಯನ್ನು ಹೊಂದಿರುವ ತೆಲುಗು ಉದ್ಯಮದಲ್ಲಿ ಅಲ್ಲಿಯೂ ಕೂಡ ಸ್ಟಾರ್ವಾರ್ ಇದ್ದೇ ಇದೆ. ಚಿರಂಜೀವಿ, ಪವನ್ಕಲ್ಯಾಣ್, ಜ್ಯೂ ಎನ್ಟಿಆರ್, ನಾಗಾರ್ಜುನ್, ಮಹೇಶ್ಬಾಬು, ಅಲ್ಲು ಅರವಿಂದ್, ವೆಂಕಟೇಶ್, ಬಾಲಕೃಷ್ಣ, ರಾಮಚರಣತೇಜಾ ಇನ್ನು ಹಲವಾರು ಜನಪ್ರಿಯ ನಾಯಕರುಗಳ ಸಿನಿಮಾಗಳನ್ನು ಕೋಟಿ ಕೋಟಿ ಲೆಕ್ಕದಲ್ಲಿ ಚಿತ್ರದ ಹಕ್ಕುಗಳನ್ನು ಅಲ್ಲಿಯ ವಾಹಿನಿಗಳು ಪಡೆದುಕೊಳ್ಳುತ್ತಿವೆ. ಇತ್ತೀಚೆಗೆ ಜ್ಯೂ. ಎನ್ಟಿಆರ್ ಸಿನಿಮಾವನ್ನು ಆರು ಕೋಟಿಗೆ ಸ್ಯಾಟಲೈಟ್ ಹಕ್ಕುಗಳನ್ನು ಪಡೆದುಕೊಳ್ಳಲಾಗಿತ್ತು. ತೆಲುಗಿನ ಸೂಪರ್ಸ್ಟಾರ್ಗಳಾದ ವಿಕ್ಟರಿ ವೆಂಕಟೇಶ್ ಹಾಗೂ ಮಹೇಶ್ಬಾಬು ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಸೀತಮ್ಮ ವೆಂಕಿಟ್ಲೋ ಸಿರಿಮಲ್ಲೇ ಚೆತ್ತೋ' ಚಿತ್ರದ ಟೀವಿ ಹಕ್ಕುಗಳನ್ನು 8.5 ಕೋಟಿಗೆ ಕೊಳ್ಳಲಾಗಿದೆ.

ಬಾಲಿವುಡ್ ಸ್ಯಾಟಲೈಟ್ ರೈಟ್ಸ್
ಹಿಂದಿ ಚಿತ್ರರಂಗ ಹಾಗೂ ಟೀವಿ ಉದ್ಯಮ, ತಮಿಳು, ತೆಲುಗು ಉದ್ಯಮಕ್ಕಿಂತ ನಾಲ್ಕು ಹೆಜ್ಜೆ ಮುಂದೆ ನಿಂತಿವೆ. ಅಲ್ಲಿ ಟೀವಿ ಚಾನೆಲ್ಗಳೇ ಸಿನಿಮಾಗಳನ್ನು ನಿರ್ಮಿಸುವುದರ ಜೊತೆಗೆ ಅಲ್ಲಿಯ ಬ್ಯಾನರ್ಗಳನ್ನೇ ಒಳ್ಳೆಯ ಸಿನಿಮಾಗಳಿಗಾಗಿ ಬುಕ್ ಮಾಡಿಕೊಳ್ಳುತ್ತವೆ. ಕರಣ್ಜೋಹರ್ನ `ಧರ್ಮಾ ಪ್ರೊಡಕ್ಷನ್' ಆದಿತ್ಯಾ ಛೋಪ್ರಾರ `ಯಶ್ರಾಜ್ ಫಿಲಂಸ್' ಶಾರುಕ್ಖಾನ್ನ `ರೆಡ್ಡಿ ಚಿಲ್ಲಿಸ್  ಎಂಟರ್ಟೇನ್ಮೆಂಟ್' ಅಮೀರ್ಖಾನ್ನ `ಆಮೀರ್ಖಾನ್ ಪ್ರೊಡಕ್ಷನ್', ರಾಮ್ ಗೋಪಾಲ್ ವರ್ಮಾ `ಆರ್ಜಿವಿ ಫಿಲಂ ಫ್ಯಾಕ್ಟರಿ' ಹೀಗೆ ಅನೇಕ ಬ್ಯಾನರ್ಗಳ ಸಿನಿಮಾಗಳನ್ನು ಟೀವಿ ವಾಹಿನಿಗಳು ಬುಕ್ ಮಾಡಿಕೊಳ್ಳುತ್ತವೆ. ಹಿಂದಿ ಸಿನಿಮಾಗಳು ಥಿಯೇಟರ್ನಲ್ಲಿ ಓಡುವ ಜಾಯಮಾನವನ್ನು ಎಂದೋ ಕಳೆದುಕೊಂಡಿವೆ. ಎರಡು ವಾರದ ಹಿಂದೆ ಬಿಡುಗಡೆಯಾದ ಚಿತ್ರ ಆಗಲೇ ಟೀವಿಯಲ್ಲಿ ಪ್ರಸಾರವಾಗುತ್ತಿರುತ್ತದೆ. ಬಾಲಿವುಡ್ ಸಿನಿಮಾಗಳು ಹೆಚ್ಚಿನ ಆದಾಯವನ್ನು ಟೀವಿ ಉದ್ಯಮದ ಮೂಲಕ ಪಡೆಯುತ್ತಿವೆ. ಹೃತಿಕ್ ರೋಷನ್, ಸಂಜಯ್ದತ್ ಅಭಿನಯಿಸಿದ್ದ `ಅಗ್ನಿಪಥ್' ಸಿನಿಮಾವನು 40 ಕೋಟಿಗೆ ಟೀವಿ ಹಕ್ಕುಗಳನ್ನು ಪಡೆಯಲಾಗಿದೆ. ಸಲ್ಮಾನ್ ಖಾನ್ ಅಭಿನಯದ `ಎಕ್ ಥಾ ಟೈಗರ್' ಸಿನಿಮಾವನ್ನು 75 ಕೋಟಿಗೆ ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿತ್ತು. ಅಜಯ್ದೇವಗನ್ನ ಸಿಂಗಂ-18 ಕೋಟಿ, ಕ್ರಿಶ್3-38 ಕೋಟಿ, ರಣಬೀರ್ ಕಪೂರ್, ಶಾಹೀದ್ ಕಪೂರ್ ನಂತಹ ಯುವ ನಟರುಗಳ ಸಿನಿಮಾಗಳಿಗೂ ಕೂಡ ಒಳ್ಳೆಯ ಸ್ಯಾಟಲೈಟ್ ರೈಟ್ಸ್ ಟೀವಿ ಮಾಧ್ಯಮದಿಂದ ಸಿಗುತ್ತಿದೆ.


No comments:

Post a Comment