Friday, 28 June 2013

ಒಂದು ಅನಿರೀಕ್ಷಿತ ಭೇಟಿ ಮತ್ತು ಮಾತುಕತೆ!


`ಮ್ಯಾನ್ ಬುಕರ್' ಅಂತರಾಷ್ಟ್ರೀಯ ಪ್ರಶಸ್ತಿಗೆ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ಭಾರತೀಯ ಲೇಖಕರು ಹಾಗೂ ಪ್ರತಿಷ್ಠಿತ ಜ್ಞಾನಪೀಠ ಪುರಸ್ಕೃತರು ಆದಂತಹ ಯು.ಆರ್. ಅನಂತಮೂರ್ತಿಯವರನ್ನು  ಭೇಟಿ ಮಾಡುತ್ತೇನೆ ಅನ್ನುವ ನಿರೀಕ್ಷೆ ಮಾತ್ರ ನನಗೆ ಇರಲಿಲ್ಲ. ಅನಿರೀಕ್ಷತೆಗೆ ಕಾರಣವಾದವರು ನನ್ನ ಆತ್ಮೀಯರಲ್ಲೊಬ್ಬರಾಗಿರುವ  ಚನ್ನಗಿರಿ ಕೇಶವಮೂರ್ತಿ ಎಂಬ ಹಿರಿಯ ಚೇತನ.

ಕನ್ನಡದ ಹಿರಿಯ ಕಾದಂಬರಿಕಾರ ಹಾಗೂ ಕ್ರಿಕೇಟ್ ಅಂಕಶಾಸ್ತ್ರಜ್ಞರಾಗಿರುವ ಸಿ.ಚನ್ನಗಿರಿ ಕೇಶವಮೂರ್ತಿಯವರು ಅನಂತ ಮೂರ್ತಿಯವರ ಶಿಷ್ಯರು. ಶಿವಮೊಗ್ಗದಲ್ಲಿ ಅನಂತಮೂರ್ತಿಯವರು ಪ್ರಾಧ್ಯಾಪಕರಾಗಿದ್ದಾಗ ಕೇಶವ ಮೂರ್ತಿ ಅವರ ಶಿಷ್ಯರಾಗಿದ್ದವರು. ಈಗ ಕೇಶವಮೂರ್ತಿಯವರಿಗೆ 75 ವರ್ಷ. ಕ್ರಿಕೇಟ್ ಅಂಕಿಅಂಶಗಳು ಹಾಗೂ ಸಾಹಿತ್ಯವಲಯದಲ್ಲಿ ಕೇಶವಮೂರ್ತಿಯವರದ್ದು ಕಣ್ಣಿಗೆ ಕಾಣದ ದೊಡ್ಡ ಸಾಧನೆ.

`ಅನಂತಮೂರ್ತಿಯವರ ಮನೆಗೆ ಹೋಗುತ್ತಿದ್ದೇನೆ  ಶ್ರೀಧರ್, ನೀವು ಬನ್ನಿ ಅವರ ಪರಿಚಯ ಮಾಡಿಸುತ್ತೇನೆ, ಹಾಗೆ ನೀವು ಬರೆದ ಪುಸ್ತಕವನ್ನು ಕೂಡ ಅವರಿಗೆ ನೀಡಬಹುದು, ಅವರ ಜೊತೆ ವೈಯಕ್ತಿಕವಾಗಿ ಮಾತನಾಡಬಹುದು' ಅಂತ ಫೋನ್ ಮಾಡಿದ್ದ ಕೇಶವಮೂರ್ತಿಯವರು, ಸಾಯಂಕಾಲ ಐದು ಗಂಟೆಗೆ ಅವರನ್ನು ಭೇಟಿ ಮಾಡುವ ಸಮಯ ಕೊಟ್ಟಿದ್ದಾರೆ ಅಂತ ಹೇಳಿದ್ದರು. ಅನಂತಮೂರ್ತಿಯವರನ್ನು ಭೇಟಿಮಾಡುವ, ಅವರ ಜೊತೆ ಮಾತನಾಡುವ ಅವಕಾಶ ಸಿಕ್ಕಿರುವುದು  ನನಗೆ ಸುದೈವ ಅಂತಂದುಕೊಂಡು, ದಿನದ ನನ್ನ ಎಲ್ಲ ಕೆಲಸಗಳನ್ನು ಕ್ಯಾನ್ಸೆಲ್ ಮಾಡಿಕೊಂಡು ಕೇಶವಮೂರ್ತಿಯವರ ಜೊತೆಗೆ ಡಾಲರ್ಸ್ ಕಾಲೋನಿಯಲ್ಲಿದ್ದ ಅವರ ಮನೆಗೆ ಹೋಗಿದ್ದೇವು ನಡುವೆ ಅನಾರೋಗ್ಯವು ನನ್ನನ್ನು ಕಾಡುತ್ತಿತ್ತು.

ದಿನಕ್ಕೆ ನಾಲ್ಕು ಬಾರಿ ಡಯಾಲಿಸೀಸ್ ಮಾಡಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಅವರಿಗಿದ್ದಿದುದರಿಂದ ನಾವು ಹೋದ ಸಮಯದಲ್ಲಿ, ಅವರ ಮನೆ `ಸುರಗಿಯಲ್ಲೇ  ಡಯಾಲಿಸೀಸ್ ನಡೆಯುತ್ತಿತ್ತು. ಮೊದಲು ನಮ್ಮನ್ನು ಬರಮಾಡಿಕೊಂಡ ಅನಂತಮೂರ್ತಿಯವರ ಶ್ರೀಮತಿ ಎಸ್ತರ್ ನಮ್ಮನ್ನು ಅವರ ಆಫೀಸ್ನಲ್ಲಿ ಕೂರಿಸಿದ್ದರು. ಡಯಾಲಿಸೀಸ್ ಮುಗಿದ ಮೇಲೆ ನಮ್ಮನ್ನು ಅವರಿದ್ದಲ್ಲಿಗೆ ಕರೆಸಿಕೊಂಡ ಮೂರ್ತಿಯವರು ತುಂಬ ಪ್ರೀತಿಪೂರ್ವಕವಾಗಿ ಬರಮಾಡಿಕೊಂಡರು. ಆಗಷ್ಟೇ ಡಯಾಲಿಸೀಸ್ ಮಾಡಿಸಿಕೊಂಡಿದ್ದರೂ, ಅವರಲ್ಲಿನ ಪ್ರೀತಿಪೂರ್ವಕವಾದಂತಹ ಮಾತುಗಳಿಗೇನು ಕಡಿಮೆ ಇರಲಿಲ್ಲ. ಅವರ ಜೊತೆ ಸುಮಾರು 10-15 ನಿಮಿಷ ಮಾತನಾಡಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯವೆನ್ನಬಹುದು. ನಮ್ಮ ಬಗ್ಗೆ, ನಾವು ಮಾಡುತ್ತಿರುವ ಕೆಲಸದ ಬಗ್ಗೆ, ಪ್ರಸ್ತುತ ಟೀವಿ ವಾಹಿನಿಗಳು ಸಾಗುತ್ತಿರುವ ಬಗ್ಗೆ ಅವರಲ್ಲಿನ ಅಸಮಾಧಾನವನ್ನು ನಮ್ಮುಂದೆ  ಹೇಳಿಕೊಂಡರು.
ನನಗೆ ಬಹಳ ದಿನಗಳಿಂದಲೂ ಬನವಾಸಿಯನಾದ ನನಗೆ ಕದಂಬೋತ್ಸವವನ್ನು ಕಾಟಾಚಾರದ ರೀತಿ ಮಾಡುತ್ತಿರುವ ಬಗ್ಗೆ ಅಸಮಾಧಾನವಿತ್ತು. ಅದನ್ನು ಅವರ ಮುಂದೆ ತೋಡಿಕೊಂಡೆಬನವಾಸಿಯಲ್ಲಿ ಕದಂಬೋತ್ಸವನ್ನು ಆಚರಿಸುವುದನ್ನೇ ಬಿಟ್ಟುಬಿಟ್ಟಿದ್ದಾರೆ ಅಂತ ನೋವನ್ನು ಹೇಳಿಕೊಂಡೆ.

ನನ್ನ ಪ್ರಶ್ನೆಗೆ ಅವರು ಕೊಟ್ಟ ಉತ್ತರ ಸರಳವಾಗಿತ್ತು. `ಮೊದಲೆಲ್ಲಾ ಪಂಪಪ್ರಶಸ್ತಿಯನ್ನು ಸಾಹಿತ್ಯವಲಯದಲ್ಲಿ ತುಂಬಾ ಜನಪ್ರಿಯರಾಗಿದ್ದ ಹಿರಿಯ ಸಾಹಿತಿಗಳಿಗೆ ಮಾತ್ರ ನೀಡಲಾಗುತ್ತಿತ್ತು. ಹಾಗಾಗಿ ತುಂಬಾ ವಿಜ್ರಂಭಣೆಯಿಂದ ಕದಂಬೋತ್ಸವವನ್ನು 3-4  ದಿನಗಳ ಮಾಡಲಾಗುತ್ತಿತ್ತು. ನಂತರ ಆಯ್ಕೆ ಮಾನದಂಡ ಸ್ವಲ್ಪ ಅಷ್ಟೊಂದು ಸರಿಯಾಗಿ ಸಾಗದೇ, ಹೇಗೋ ವರ್ಷಕ್ಕೆ ಒಬ್ಬರನ್ನು ಆಯ್ಕೆ ಮಾಡುವ ಪರಿಸ್ಥಿತಿಗೆ ಬಂದಿತು. ಇದು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಹೋಯಿತು. ಕದಂಬೋತ್ಸವದ ಆಚರಣೆಯಲ್ಲಿ ಮೊದಲಿದ್ದ ಉತ್ಸಾಹ ಕಡಿಮೆಯಾಗಿ ರೀತಿಯ ಪರಿಸ್ಥಿತಿಗೆ ಬಂದಿರಬಹುದು ಅನ್ನುವ ಉತ್ತರವನ್ನು ನೀಡಿದರು. ನನಗೆ ಅವರ ಉತ್ತರ ಸರಿ ಅನಿಸಿತು. ಕಳೆದ ವರ್ಷ ಪಂಪಪ್ರಶಸ್ತಿಗೆ ಆಯ್ಕೆಯಾಗಿದ್ದ ಹಿರಿಯ ವಿಮರ್ಶಕ ಜಿ.ಹೆಚ್.ನಾಯಕರವರು ಕೂಡ ಕೊನೆಯ ಕ್ಷಣದಲ್ಲಿ ತಮ್ಮನ್ನು ಕಾರ್ಯಕ್ರಮಕ್ಕೆ ಕರೆದಿದ್ದಕ್ಕೆ ಸಿಟ್ಟಾಗಿ ಪಂಪಪ್ರಶಸ್ತಿ ಪಡೆಯಲು ಹೋಗದೇ ಇರುವುದಾಗಿ ಹೇಳಿದ್ದನ್ನು ಈಗ ಸ್ಮರಿಸಬಹುದು. ಇದು ಕದಂಬೋತ್ಸವ ಆಚರಣೆಯ ಹಿಂದಿನ ತಾಂತ್ರಿಕ ತೊಂದರೆಗಳು.

ವೈಯಕ್ತಿಕವಾಗಿ ನಾನು ಅನಂತಮೂರ್ತಿಯವರ ಸಾಹಿತ್ಯದಷ್ಟೇ ಅವರ ಸಾಮಾಜಿಕ ಚಿಂತನೆಗಳು, ವಿಮರ್ಷೆಗಳನ್ನು ತುಂಬಾ ಇಷ್ಟಪಟ್ಟು ಓದುತ್ತೇನೆ. ಅವರ ರಾಜಕೀಯ ನಿಲುವುಗಳ ಮೇಲೆ ನನಗೆ ಅಷ್ಟೋಂದು ನಂಬಿಕೆ ಇಲ್ಲ. ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ಓದಿದ್ದ 50 ವರ್ಷದ ಹಿಂದಿನ ಅವರ 'ಸಂಸ್ಕಾರ' ಕೃತಿ ಇಂದಿಗೂ ಪ್ರಸ್ತುತವಾಗಿದೆ. ಏಷ್ಟು ಸಲ ಓದಿದರೂ, ಇನ್ನೊಮ್ಮೆ ಓದಿಸಿಕೊಂಡು ಹೋಗುತ್ತದೆ. ಇದೇ ಕೃತಿ ಅವರನ್ನು ಮ್ಯಾನ್ ಬುಕರ್ ಅಂತರಾಷ್ಟ್ರೀಯ ಪ್ರಶಸ್ತಿಯ ಅಂತಿಮ ಸುತ್ತಿಗೆ ಕರೆದುಕೊಂಡು ಹೋಗಿತ್ತು
ಸಾಹಿತ್ಯಕ್ಷೇತ್ರದಲ್ಲಿ ಅನಂತಮೂರ್ತಿಯವರದ್ದು ಅವರದ್ದು ಅದ್ಭುತ ಸಾಧನೆ. ಅವರಿಗಿರುವ ಹೆಸರು, ವರ್ಚಸ್ಸು, ಗೌರವ ಅದು ಅವರಿಗೆ ಮಾತ್ರ.

ಇನ್ನೊಮ್ಮೆ ಖಂಡಿತ ಬನ್ನಿ, ಸಿಗೋಣ, ಮಾತನಾಡುವ ಅಂತ ಹೇಳಿ ಅವರ ಆಶೀರ್ವಾದದ ಪಡೆದು ಮನೆಯಿಂದ ಹೊರಬಂದೆವು. ಮುಂದಿನ ಅವರ ಭೇಟಿಗಾಗಿ ಎದುರುನೋಡುತ್ತಿರುವೆ.

No comments:

Post a Comment