ಇತ್ತೀಚಿನ ಒಂದು ಸಂದರ್ಭವನ್ನು ಬನವಾಸಿಗರೊಂದಿಗೆ ಹಂಚಿಕೊಳ್ಳಬೇಕೆನಿಸಿತು.
ಕಳೆದ ವಾರ ನಮ್ಮ ಪುಸ್ತಕ ಬಿಡುಗಡೆಯ ಕಾರ್ಯಕ್ರಮದ ಅಧ್ಯಕ್ಷರಾಗಿ ಬನ್ನಿ ಅಂತ ಕನ್ನಡನಾಡಿನ ಹೆಸರಾಂತ ಹಿರಿಯ ಸಾಹಿತಿಗಳು, ಪಂಪ ಪ್ರಶಸ್ತಿ ಪುರಸ್ಕೃತರು ಆಗಿರುವ ನಾಡೋಜ ಡಾ. ದೇ. ಜವರೇಗೌಡರನ್ನು ಭೇಟಿ ಮಾಡಲು ಮೈಸೂರಿನ ಅವರ ಕುವೆಂಪು ಕುಟೀರಕ್ಕೆ ಹೋಗಿದ್ದೆ. ದೇಜಗೌ ಅವರಿಗೆ ಈಗಾಗಲೇ 94 ವರ್ಷವಾಗಿದೆ. ನಮ್ಮ ಹೈಸ್ಕೂಲ್ ನ ಪಠ್ಯಪುಸ್ತಕದಲ್ಲಿ ಅವರು ಬರೆದ ಒಂದು ಗದ್ಯ ವಿದೆ. ನೀವೆಲ್ಲ ದೇಜಗೌರ ಗದ್ಯವನ್ನು ಓದಿರುವಿರೆಂದು ನಂಬಿರುತ್ತೇನೆ. ರಾಷ್ಟ್ರಕವಿ ಕುವೆಂಪು ಅವರ
ನೆಚ್ಚಿನ ಶಿಷ್ಯರಾಗಿರುವ ದೇಜಗೌ, ತಮ್ಮ ಇಳಿ ವಯಸ್ಸಿನಲ್ಲೂ ಕುವೆಂಪು ಹೆಸರಿನಲ್ಲಿ ವಿದ್ಯಾಸಂಸ್ಥೆಯನ್ನು ನಡೆಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳು ಕೂಡ ಆಗಿದ್ದವರು. ಕುವೆಂಪು ಹೆಸರಿನಲ್ಲಿ ಪ್ರತಿವರ್ಷ ಅನೇಕ ಸಾಹಿತ್ಯಕ ಕೆಲಸಗಳನ್ನು ಮಾಡುತ್ತಾರೆ. ಕನ್ನಡ ನಾಡಿನ ಉನ್ನತ ಪ್ರಶಸ್ತಿಗಳನ್ನು
ಪಡೆದಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ದೇಜಗೌ ಅವರನ್ನು ರಾಜಕೀಯವಾಗಿ ಸ್ವಲ್ಪ ಪ್ರಭಾವಿ ಸಾಹಿತಿ ಅಂದರೂ ತಪ್ಪೇನಿಲ್ಲ. ದೇಜಗೌ ಯಾವುದಾದರೂ ಹೋರಾಟದಲ್ಲಿ ಭಾಗವಹಿಸುತ್ತಾರೆ ಅಂದರೆ, ಆ ಚಳುವಳಿಗೆ ಬೇರೆ ರೀತಿಯ ಶಕ್ತಿ ಸಿಗುತ್ತದೆ. ಹೀಗಾಗಿ ಅನೇಕ ಕನ್ನಡ ಪರ ಚಳುವಳಿಗಳಲ್ಲಿ ದೇಜಗೌ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ.
ದೇಜಗೌ ಅವರನ್ನು ಕುಟೀರದಲ್ಲಿ ಭೇಟಿ ಮಾಡಿ ನನ್ನ ಪರಿಚಯ ಮಾಡಿಕೊಂಡೆ. `ನಾನು ಬನವಾಸಿಯವ' ಅಂತ ಹೇಳಿದ ಕೂಡಲೇ ಅವರು ಹೇಳಿದ್ದು ಒಂದೇ ಮಾತು. `ಬನವಾಸಿಯಲ್ಲಿ ಹುಟ್ಟಿದ ನೀವೆಲ್ಲಾ ಪುಣ್ಯವಂತರು’ ಅಂತ. ಅವರ ಮಾತಿಗೆ, ನಾನು ಉತ್ತರ ಕೊಡಲಾಗಲಿಲ್ಲ. ಕೊನೆಗೆ `ಹೌದು ಸರ್… ನಿಜಕ್ಕೂ ನಾವೆಲ್ಲಾ ಪಂಪನ ನಾಡಿನಲ್ಲಿ ಹುಟ್ಟಿದ್ದೇವೆ, ಹಾಗಾಗಿ ಪುಣ್ಯವಂತರು, ನಿಮ್ಮ ಮಾತು ನಿಜ’ ಅಂತ ಹೇಳಿದೆ. 94 ವರ್ಷದ ದೇಜಗೌ ಮಂಡ್ಯ-ಮೈಸೂರು ಪ್ರಾಂತ್ಯದಲ್ಲಿ ಹುಟ್ಟಿದವರು, ಆಡಿದವರು, ಒಕ್ಕಲಿಗರ ಮನೆತನದಲ್ಲಿ ಹುಟ್ಟಿದರೂ, ತುಂಬಾ ಕಷ್ಟಪಟ್ಟು ವಿದ್ಯೆಯನ್ನು ಪಡೆದವರು. ಮೈಸೂರು ಅರಸರ ಆಳ್ವಿಕೆಯನ್ನು ನೋಡಿದವರು, ಕನ್ನಡದ ಹಳೆಯ
ಹಾಗೂ ಸಮಕಾಲೀನ ಸಾಹಿತಿಗಳನ್ನು ಬಲ್ಲವರು. ಮೈಸೂರು, ಬೆಂಗಳೂರು ಸಾಹಿತ್ಯದ ವಲಯದಲ್ಲಿ ಗುರುತಿಸಿಕೊಂಡರೂ, ಈಗ ಅಪ್ಪಟ ಮೈಸೂರಿಗರಾಗಿರುವ ದೇಜಗೌ ಬನವಾಸಿಯಲ್ಲಿ ಹುಟ್ಟಿದವರನ್ನು ಪುಣ್ಯವಂತರು ಅಂತ ಹೇಳಿರುವುದು ಬನವಾಸಿಗರಾದ ನಾವೆಲ್ಲ ಹೆಮ್ಮೆಪಡುವಂತಹ ವಿಷಯ…
ದೇಜಗೌ ನಮ್ಮ ಪುಸ್ತಕ ಕಾರ್ಯಕ್ರಮಕ್ಕೆ ಬರಲು ಒಪ್ಪಿದರು. ಜನವರಿ 6,2013ರಂದು ಮೈಸೂರಿನಲ್ಲಿ ನಡೆಯುವ ನಮ್ಮ ಕಾರ್ಯಕ್ರಮಕ್ಕೆ ಡಾ.ದೇಜಗೌ ಅಧ್ಯಕ್ಷರಾಗಿ ಆಗಮಿಸಲಿದ್ದಾರೆ.
No comments:
Post a Comment