Thursday 5 January 2012

ಕಲಾವಿದರ ಕಥಾನಕ' ಹೊತ್ತಿಗೆಯ ಲೋಕಾರ್ಪಣೆ


ಆತ್ಮೀಯ ಸ್ನೇಹಿತರೇ,

ನಮ್ಮ ಸಂಸ್ಥೆ ಅಂದರೆ `ಪಂಚಮಿ ಪಬ್ಲಿಕೇಷನ್ಸ್' ಕನ್ನಡ ಸಾಹಿತ್ಯ ಲೋಕಕ್ಕೆ ವಿಶಿಷ್ಟ, ಉತ್ಕ್ರುಷ್ಟ ಹಾಗೂ ಓದುಗ ಅಭಿರುಚಿಯ ಕೃತಿಗಳನ್ನು ಪಬ್ಲೀಷ್ ಮಾಡುವ ನಿಟ್ಟಿನಲ್ಲಿ ಈ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ. ಈಗಾಗಲೇ ನನ್ನ ಈ ಪ್ರಯತ್ನಕ್ಕೆ ನನ್ನ ಅಕ್ಕ, ಅಪಾರ ಸ್ನೇಹಿತರು ಎಲ್ಲ ರೀತಿಯಿಂದಲೂ ಕೈ ಜೋಡಿಸಿದ್ದಾರೆ. ಅವರೆಲ್ಲರ ಸಹಕಾರ, ಬೆಂಬಲದೊಂದಿಗೆ ಸಂಸ್ಥೆಯ ಮೊದಲ `ಹೊತ್ತಿಗೆ' ನಾಳೆ ಕನ್ನಡ ಪುಸ್ತಕ ಪ್ರಾಧಿಕಾರದ ಮೂಲಕ ನಡೆಯುತ್ತಿರುವ ಪುಸ್ತಕ ಮೇಳದಲ್ಲಿ ಬಿ...ಡುಗಡೆಗೊಳ್ಳುತ್ತಿದೆ. ಈ ಮೇರು ಕೃತಿಯನ್ನು ಬಿಡುಗಡೆಗೊಳಿಸುತ್ತಿರುವವರು ಡಾ.ಸಿದ್ದಲಿಂಗಯ್ಯ, ಸಾಹಿತಿ, ವಿಧಾನಪರಿಷತ್ ಸದಸ್ಯರು.
ಕೃತಿಯ ಬಗ್ಗೆ : `ಕಲಾವಿದರ ಕಥಾನಕ' ಹೆಸರಿನ ಈ ಪುಸ್ತಕವು ಈ ಹಿಂದೆ `ವಿಕ್ರಾಂತ ಕರ್ನಾಟಕ' ಪತ್ರಿಕೆಯಲ್ಲಿ
ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದ್ದ ಬಣ್ಣದ ನೆನಪು ಕಾಲಂನ ಸಮಗ್ರ ಸಂದರ್ಶನದ ಚಿತ್ರಣವು ಈ ಹೊತ್ತಿಗೆಯಲ್ಲಿ ಅಡಕವಾಗಿದೆ. 75 ವರ್ಷಗಳ ಕನ್ನಡ ಸಿನಿಮಾ ರಂಗದಲ್ಲಿ ದೈತ್ಯ ಪ್ರತಿಭೆಗಳಾಗಿ, ಕಲಾವಿದರಾಗಿ, ತಂತ್ರಜ್ಞರಾಗಿ ದುಡಿದ ಸುಮಾರು 60 ಜನ ಪ್ರತಿಭಾವಂತರ ಸಂದರ್ಶನ ಹಾಗೂ ಸಣ್ಣ ಜೀವನಚರಿತ್ರೆ ಇದೆ. ಆರ್ ಎನ್ ಜಯಗೋಪಾಲ್, ಬಿ.ಸರೋಜಾದೇವಿ, ಜಯಂತಿ, ಶ್ರೀನಿವಾಸಮೂರ್ತಿ, ರಾಮಕೃಷ್ಣ, ದುನಿಯಾ ವಿಜಿ, ಹಂಸಲೇಖ, ವಿನಯ್ಪ್ರಸಾದ್, ಜೂಲಿ ಲಕ್ಷ್ಮಿ, ಅಶ್ವಥ್, ಎಎಸ್ ಮೂರ್ತಿ , ಗಾಯತ್ರಿ ಅನಂತ್ನಾಗ್ , ಪಂಡೀರಿಬಾಯಿ,ಶಂಕರ್ನಾಗ್ ಹೀಗೆ ಸುಮಾರು 60 ಜನ ಕಲಾವಿದರು ಹಾಗೂ ತಂತ್ರಜ್ಞರ ಸಮಗ್ರ ಚಿತ್ರಣ ಈ `ಕಲಾವಿದರ ಕಥಾನಕ'ದಲ್ಲಿ ಕಟ್ಟಿಕೊಡಲಾಗಿದೆ. ಸುಮಾರು 576 ಪುಟಗಳ ಗ್ರಂಥವನ್ನು ಬರೆದವರು ನನ್ನ ಆತ್ಮೀಯರು, ಸಹೋದ್ಯೋಗಿಗಳಾದ ಹಿರಿಯ ಪತ್ರಕರ್ತ ಕಗ್ಗರೆ ಪ್ರಕಾಶ್.
ಲೇಖಕರ ಬಗ್ಗೆ: ಕಗ್ಗರೆ ಪ್ರಕಾಶ್ ಕಳೆದ 20 ವರ್ಷಗಳಿಂದ ಪತ್ರಿಕೊದ್ಯಮ ಹಾಗೂ ಸಾಹಿತ್ಯಕ ವಲಯದಲ್ಲಿ ತೊಡಗಿಸಿಕೊಂಡವರು. ಇದುವರೆಗೂ ಸುಮಾರು 16 ಕೃತಿಗಳನ್ನು ಕನ್ನಡ ಸಾಹಿತ್ಯವಲಯಕ್ಕೆ ನೀಡಿದ್ದಾರೆ. ಕಳೆದ ವರ್ಷ ಇವರು ರಚಿಸಿದ ನಟಿ ಶೃತಿಯ ಜೀವನಚರಿತ್ರೆ `ಶೃತಿ ಪ್ರೇಮಾಯಣ' ಅತ್ಯಂತ ಜನಪ್ರಿಯತೆಯನ್ನು ಪಡೆಯುವುದರ ಜೊತೆಗೆ ವಿಮರ್ಷಕರ ಮೆಚ್ಚುಗೆ ಗಳಿಸಿತ್ತು. ಈ ಬಾರಿ ಕಲಾವಿದರ ಕಥಾನಕ ಕೃತಿಯನ್ನು ಪ್ರಕಾಶನ ಮಾಡಲು ನನಗೆ ನೀಡಿದ್ದಾರೆ. ಹಾಗಾಗಿ ಪಂಚಮಿ ಪಬ್ಲಿಕೇಷನ್ಸ್ ಸಂಸ್ಥೆಯ ಮೂಲಕ ಈ ಕೃತಿ ಪ್ರಕಾಶನಗೊಳ್ಳುತ್ತಿದೆ.

ಈ `ಕಲಾವಿದರ ಕಥಾನಕ' ಅಪೂರ್ವಕೃತಿಯು ನಾಳೆ ಡಾ.ಸಿದ್ದಲಿಂಗಯ್ಯರ ಮೂಲಕ ಲೋಕಾರ್ಪಣೆಗೊಳ್ಳುತ್ತಿದೆ. ನಿಮ್ಮೆಲ್ಲರ ಪ್ರೀತಿಪೂರ್ವಕ ಸಹಕಾರ ಹಾಗೂ ಆಗಮನವನ್ನು ನಿರೀಕ್ಷಿಸುತ್ತಾ..

ಸ್ಥಳ: ರವಿಂದ್ರಕಲಾಕ್ಷೇತ್ರದ ಹಿಂಭಾಗ ಪುಸ್ತಕ ಮೇಳದಲ್ಲಿ
ಸಮಯ: ಮಧ್ಯಾಹ್ನ 3.30ಕ್ಕೆ

ಧನ್ಯವಾದಗಳು
ಪ್ರೀತಿಯಿಂದ
ಶ್ರೀಧರ್ ಜಿಸಿ ಬನವಾಸಿ
ಪ್ರಕಾಶಕ-ಪಂಚಮಿ ಪಬ್ಲಿಕೇಷನ್ಸ್, ಬೆಂಗಳೂರು

 

1 comment:

  1. ಶ್ರೀಧರ ನಮ್ಮೂರ ಹೆಮ್ಮೆಯ ಮಗ.ಸ್ನೇಹಶೀಲ,ಸಾಹಸಿ ವ್ಯಕ್ತಿ.ಜೀವನದಲ್ಲಿ ತುಂಬಾ ಕಷ್ಟಪಟ್ಟು ವಿದ್ಯಾ ಸಂಪಾದನೆ ಮಾಡಿದವರು.ಸದಾ ಕ್ರಿಯಾಶೀಲನಾಗಿದ್ದು ಒಂದಿಲ್ಲೊಂದು ಚಟುವಟಿಕೆಗಳಲ್ಲಿ ನಿರತನಾಗಿರುತ್ತಿದ್ದವರು.ಈಗ ಬೆಂಗಳೂರು ಸೇರಿ ಬದುಕನ್ನು ಸೃಜನಾತ್ಮಕ ಚಟುವಟಿಕೆಗಳಿಗೆ ಮುಡಿಪಾಗಿಸಿಕೊಂಡಿರುವರು.'ಪಂಚಮಿ ಪ್ರಕಾಶನ"ವೆಂಬ ನೂತನ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ಸಾಹಿತ್ಯ ಚಟುವಟಿಕೆಗಳಿಗೆ ತಮ್ಮನ್ನು ಅರ್ಪಿಸಿಕೊಂಡಿರುವುದನ್ನು ತಿಳಿದು ಅತ್ಯಾನಂದವಾಯಿತು.ಕಾರ್ಯಕ್ರಮ ಯಶಸ್ವಿಯಾಗಲಿ,ಪಂಚಮಿ ಪ್ರಕಾಶನ ಕನ್ನಡ ನಾಡಿನ ಮನೆಮಾತಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ.

    ReplyDelete